ಲೇಖನ

ಮೊಬೈಲ್ ಸೆಲ್ ಫೋನ್ ಗಳ ಅತಿಯಾದ ಬಳಕೆಯಿಂದಾಗುವ ದುಷ್ಪರಿಣಾಮಗಳು: ಚಂದ್ರಿಕಾ ಆರ್ ಬಾಯಿರಿ


” ಒಂದು ಚಿತ್ರ ಸಾವಿರ ಪದಗಳಿಗಿಂತಲೂ ಮಿಗಿಲು”. ಆನೆಯ ಬಗ್ಗೆ ಸಾವಿರ ಪದಗಳಲ್ಲಿ ಬಣ್ಣಿಸುವುದಕ್ಕಿಂತಲೂ ಆನೆಯ ಒಂದು ಚಿತ್ರವನ್ನು ತೋರಿಸುವುದು ಉತ್ತಮ ಎಂದು ಹೇಳುವುದುಂಟು. ಚಿಕ್ಕ ಮಕ್ಕಳಿಗೆ ಪಾಠ ಮಾಡುವಾಗ ಕೇವಲ ವಿವರಣೆ ನೀಡುವುದಕ್ಕಿಂತಲೂ ಚಾರ್ಟ್ ಗಳನ್ನು ತೋರಿಸಿ ಬೋಧಿಸಿದರೆ ಹೆಚ್ಚು ಪರಿಣಾಮಕಾರಿಯಾಗಿರುತ್ತದೆ. ಈಗಿನ ಕಂಪ್ಯೂಟರ್ ಯುಗದಲ್ಲಿ ಪಾಠಕ್ಕೆ ಸಂಬಂಧಿಸಿದ ವೀಡಿಯೋಗಳನ್ನು ತೋರಿಸುವುದರಿಂದ ಪಾಠವು ನೈಜ ಅನುಭವವನ್ನು ನೀಡುತ್ತದೆ. ಇನ್ನು ಹಿಂದಿನ ಕಾಲದಲ್ಲಿ ಮನೆಮನೆಗಳಲ್ಲಿ ರೇಡಿಯೋಗಳಿತ್ತು. ಜನರು ವಾರ್ತೆಗಳನ್ನು, ಚಿತ್ರಗೀತೆಗಳನ್ನು ಕೇಳುತ್ತಲೇ ದಿನದ ಕೆಲಸಗಳನ್ನು ಲವಲವಿಕೆಯಿಂದ ಮಾಡು ಮುಗಿಸುತ್ತಿದ್ದರು. ಹಾಡುಗಳನ್ನು ಗುನುಗುತ್ತಲೇ ತಮ್ಮ ನೋವುಗಳನ್ನು ಮರೆಯುತ್ತಿದ್ದರು. ನಂತರ ಬಂದಿದ್ದೆ ಈ ದೂರದರ್ಶನ. ದೂರದರ್ಶನವನ್ನು ನೋಡಿ ಕಣ್ಣುಗಳು ಬೆರಗಾದವು. ದೂರದ ಊರಿನಲ್ಲಿ, ವಿದೇಶದಲ್ಲಿ ಎಲ್ಲೋ ನಡೆಯುವ ಘಟನೆಗಳನ್ನು, ಕ್ರೀಡೆಗಳನ್ನು ಮನೆಯಲ್ಲಿಯೇ ಕುಳಿತು ನೋಡುವಾಗ ಎಲ್ಲಿಲ್ಲದ ಅಚ್ಚರಿ ಆನಂದವಾಗುತ್ತದೆ. ಹಾಗೆಯೇ ಹುಡುಗ ಹುಡುಗಿಯರು ಕೈ ಕೈ ಹಿಡಿದುಕೊಂಡು ಕುಣಿಯುವಾಗ ಅದರ ದೃಶ್ಯಾವಳಿಗಳನ್ನು ನೋಡುವಾಗ ಮನದಲ್ಲಿ ಭಾವನೆಗಳು ಚಿಗುರುತ್ತವೆ. ಕನಸುಗಳು ಗರಿಬಿಚ್ಚಿ ಕುಣಿಯಲಾರಂಭಿಸುತ್ತವೆ. ಇವೆಲ್ಲವೂ ಸಹಜ ಕೂಡ.

ಈಗಂತೂ ಕಂಪ್ಯೂಟರ್, ಮೊಬೈಲ್‌ ಗಳ ಯುಗ. ಚಿಕ್ಕ ಮಕ್ಕಳಿಂದ ಹಿಡಿದು ಮುದುಕರವರೆಗೆ ಪ್ರತಿಯೊಬ್ಬರೂ ಮೊಬೈಲ್ ಗಳಿಗೆ ದಾಸರಾಗಿದ್ದಾರೆ. ಇನ್ನು ಯುವಕ ಯುವತಿಯರ ಕಥೆಯಂತೂ ಕೇಳುವುದೇ ಬೇಡ. ಬೆಳಿಗ್ಗೆ ಎದ್ದಾಗ ಗುಡ್ ಮಾರ್ನಿಂಗ್, ರಾತ್ರಿ ಮಲಗುವಾಗ ಗುಡ್ ನೈಟ್, ಇನ್ನು ಊಟ ಆಯಿತಾ ?ತಿಂಡಿ ಆಯಿತಾ? ಹೀಗೆ ಹತ್ತು ಹಲವು ಸಂದೇಶಗಳು ಕ್ಷಣಮಾತ್ರದಲ್ಲಿ ಬೇರೆಯವರನ್ನು ತಲುಪಿ ಅವರಿಂದ ಪ್ರತಿ ಉತ್ತರ ಸಿಗುತ್ತದೆ. ಬಹುಷಃ ಮನುಷ್ಯನ ಮನಸ್ಸಿಗಿಂತಲೂ ವೇಗವಾಗಿ ಈ ಸಂದೇಶಗಳು ರವಾನೆಯಾಗುತ್ತವೆ. ಇನ್ನು ಕೆಲವು ಸಂಕೇತ ರೂಪದಲ್ಲಿರುವ ಸಂದೇಶಗಳಂತೂ ಹೃದಯಸ್ಪರ್ಶಿಗಳಾಗಿವೆ. ಮನಸ್ಸನ್ನು ಪುಳಕಿತಗೊಳಿಸುತ್ತವೆ. ಹಾಗಾಗಿ ಈಗಿನ ಯುವಜನತೆ ರಾತ್ರಿ 12 ಗಂಟೆಯಾದರೂ ಚಾಟಿಂಗ್, ಡೇಟಿಂಗ್ ಗಳೆಂದು ಕಾಲಹರಣ ಮಾಡುತ್ತಿರುವುದು. ಹಾಗೆಯೇ ಆನ್ಲೈನ್ ಗೇಮ್ ಗಳನ್ನು ಆಡುವುದರಿಂದ ತಮ್ಮ ಜೀವನದ ಅಮೂಲ್ಯವಾದ ರಸಮಯ ಸಮಯವನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ಯುವಕರು ಓದುವ, ದುಡಿಯುವ ಆಸಕ್ತಿಯನ್ನು ಕಳೆದುಕೊಳ್ಳುತ್ತಿದ್ದಾರೆ. ಜವಾಬ್ದಾರಿ ಹೀನರಾಗಿ ರೂಪುಗೊಳ್ಳುತ್ತಿದ್ದಾರೆ. ದೇಶದ ಕೀರ್ತಿಯನ್ನು ಎತ್ತರಕ್ಕೆ ಕೊಂಡೊಯ್ಯಬೇಕಾದ ಯುವಜನತೆಯೇ ಸೆಲ್ ಫೋನ್ ಹಿಡಿದು ಮೂಲೆಯಲ್ಲಿ ಕುಳಿತುಕೊಂಡಿರುವುದು ದುರಂತವೇ ಸರಿ. ಪ್ರೀತಿ, ಪ್ರೇಮದ ಬಲೆಯಲ್ಲಿ ಸಿಲುಕುವುದು, ಬ್ಲೂಫಿಲಂಗಳನ್ನು ನೋಡಿ ಆನಂದಿಸುವುದು, ಸಿಗರೇಟ್, ಮಾದಕ ವಸ್ತುಗಳ ಸೇವನೆ, ಕುಡಿತದ ಚಟ ಹೀಗೆ ನಾನಾ ರೀತಿಯಲ್ಲಿ ಇಂದಿನ ಯುವಜನತೆ ದಾರಿ ತಪ್ಪುತ್ತಿದೆ. ಇದಕ್ಕೆಲ್ಲ ಮುಖ್ಯ ಕಾರಣ ಸೆಲ್ ಫೋನ್ ಇಂಟರ್ನೆಟ್ ನ ಅತಿಯಾದ ಬಳಕೆ ಎಂದರೆ ತಪ್ಪಾಗಲಾರದು. “ಮುಂದೆ ಗುರಿ ಇಲ್ಲ, ಹಿಂದೆ ಗುರು ಇಲ್ಲ. “ಎಂದಾಗಿದೆ ನಮ್ಮ ಯುವಕರ ಪಾಡು.

ಅಲ್ಲದೇ ಬಹಳ ಚಿಕ್ಕ ವಯಸ್ಸಿನಿಂದಲೇ ಮಕ್ಕಳ ಕೈಗೈ ಮೊಬೈಲ್ ಕೊಟ್ಟು ಪೋಷಕರೇ ತಮ್ಮ ಮಕ್ಕಳನ್ನು ಹಾಳುಮಾಡುತ್ತಾರೆ. ಮಕ್ಕಳ ಕೈಗೆ ಮೊಬೈಲ್ ಕೊಟ್ಟು ಊಟ ಮಾಡಿಸುವುದು. ಗೇಮ್ ಗಳನ್ನು ಡೌನ್ ದೃಶಮಾಡಿಕೊಂಡು ಆಡುತ್ತಿದ್ದರೂ ನೋಡಿಕೊಂಡು ಸುಮ್ಮನೇ ಇರುವುದು. ಏಕೆಂದರೆ ಫೇಸ್ಬುಕ್, ವಾಟ್ಸ್ ಆಪ್, ಶೇರ್ ಚಾಟ್, ಟ್ವಿಟರ್, ಮೆಸೆಂಜರ್, ಟಿಕ್ ಟಾಕ್, ಗಳಿಂದಾಗಿ ಕೇವಲ ಯುವಜನತೆಯಷ್ಟೇ ಅಲ್ಲ, ಮಧ್ಯಮ ವಯಸ್ಕರೂ ಕೂಡಾ ಹಾಳಾಗುತ್ತಿದ್ದಾರೆ. ಅವರು ಮಕ್ಕಳಿಗೆ ಬುದ್ಧಿ ಹೇಳುವ ನೈತಿಕ ಹಕ್ಕನ್ನು ಕಳೆದೆಕೊಂಡಿರುತ್ತಾರೆ. ತಮ್ಮ ಕಛೇರಿ ಕೆಲಸದ ಅವಧಿಯಲ್ಲಿಯೂ ಕೂಡ ಮೊಬೈಲ್ ಬಳಸುವುದು ಇತ್ತೀಚಿನ ದಿನಗಳಲ್ಲಿ ಸರ್ವೇಸಾಮಾನ್ಯವಾಗಿದೆ. ನಾವು ನಮ್ಮ ಅಗತ್ಯ ಕೆಲಸಗಳಿಗೆ ಮೊಬೈಲ್ ಬಳಸುವುದು ತಪ್ಪಲ್ಲ. ಆದರೆ ಕೆಲಸಕಾರ್ಯಗಳನ್ನು, ತಮ್ಮ ಕರ್ತವ್ಯವನ್ನು ಮರೆತು ಸಾಮಾಜಿಕ ಜಾಲತಾಣಗಳಲ್ಲಿ ಅತಿಯಾಗಿ ತೊಡಗಿಸಿಕೊಳ್ಳುವುದು ಖಂಡಿತಾ ತಪ್ಪಾಗುತ್ತದೆ. ಇದರಿಂದ ಮನುಷ್ಯರು ಮಾನಸಿಕ ಸ್ವಾಸ್ಥ್ಯ ಕಳೆದುಕೊಳ್ಳುವ ಸಾಧ್ಯತೆಗಳಿವೆ. ಹಾಗೆಯೇ ಕಣ್ಣಿನ ಸಮಸ್ಯೆ, ಕೂದಲು ಉದುರುವುದು ಮುಂತಾದ ಗಂಭೀರ ಸಮಸ್ಯೆಗಳು ಕಾಣಿಸಿಕೊಳ್ಳುತ್ತದೆ. ಮೊಬೈಲ್ ನಿಂದ ಹೊರಬರುವಂತಹ ಎಲೆಕ್ಟ್ರೋ ಮಾಗ್ನೆಟಿಕ್ ವಿಕಿರಣಗಳು ಮನುಷ್ಯರಲ್ಲಿ ಕ್ಯಾನ್ಸರ್ ನಂತಹ ಮಾರಕ ರೋಗಗಳನ್ನು ತರುತ್ತದೆ. ಸ್ನೇಹಿತರೇ ಇನ್ನಾದರೂ ಎಚ್ಚೆತ್ತುಕೊಳ್ಳೋಣ. ಮನುಷ್ಯ ತನ್ನ ಮನರಂಜನೆಗಾಗಿ ರೇಡಿಯೋ, ದೂರದರ್ಶನ, ಮೊಬೈಲ್ ಗಳನ್ನು ಬಳಸುವುದು ತಪ್ಪಲ್ಲ. ಆದರೆ ಮನರಂಜನೆಯೇ ಬದುಕಾಗಬಾರದು. ಎಲ್ಲವೂ ಹಿತಮಿತದಲ್ಲಿದ್ದರೆ ಉತ್ತಮ. ಇವುಗಳ ಬದಲಾಗಿ ವೃತ್ತ ಪತ್ರಿಕೆಗಳನ್ನು ಓದೋಣ. ಕಥೆ ಕಾದಂಬರಿಗಳನ್ನು ಓದುವ ಹವ್ಯಾಸ ಬೆಳೆಸಿಕೊಳ್ಳೋಣ. “ಒಂದು ಉತ್ತಮ ಪುಸ್ತಕ ನೂರು ಉತ್ತಮ ಗೆಳೆಯರಿಗೆ ಸಮ. ಹಾಗೆಯೇ ಒಬ್ಬ ಉತ್ತಮ ಗೆಳೆಯ ಒಂದು ಗ್ರಂಥಾಲಯವಿದ್ದಂತೆ ಎಂದು ಎ. ಪಿ. ಜೆ ಅಬ್ದುಲ್ ಕಲಾಂ ಅವರು ಹೇಳಿಲ್ಲವೇ?
ಚಂದ್ರಿಕಾ ಆರ್ ಬಾಯಿರಿ


ಕನ್ನಡದ ಬರಹಗಳನ್ನು ಹಂಚಿ ಹರಡಿ

Leave a Reply

Your email address will not be published. Required fields are marked *