ಪ್ರಶಸ್ತಿ ಅಂಕಣ

ಮೊಬೈಲ್ ಫ್ಯಾಷನ್ನೋ ಕಾಡೋ ರೇಡಿಯೇಷನ್ನೋ ?: ಪ್ರಶಸ್ತಿ

 

ಏ ಈ ಮೊಬೈಲ್ ತಗಳನ ಕಣೋ. ೨ ಜಿಬಿ ರ್ಯಾಮು,೮ ಎಂ.ಪಿ ಕ್ಯಾಮು, ಆಂಡ್ರಾಯ್ಡು ಇದೆ. ಇನ್ನೇನ್ ಬೇಕು ? ಹತ್ತು ಸಾವ್ರದ ಒಳಗೆ ಇಷ್ಟೆಲ್ಲಾ ದಕ್ಕೋವಾಗ ಬಿಡೋದ್ಯಾಕೆ ಅಂತ ತಗಂಡವನಿಗೆ ಈಗ ವಾರ ಕಳೆಯೋದ್ರೊಳಗೆ ಫುಲ್ ತಲೆ ನೋವು. ಯಾವಾಗ ನೋಡಿದ್ರೂ ಕಣ್ಣೆಲ್ಲಾ ಕೆಂಪಾಗಿಸಿಕೊಂಡು , ಹಾಸಿ ಕೊಟ್ರೆ ಇಲ್ಲೇ ಮಲಗಿಬಿಡೋಷ್ಟು ಸುಸ್ತಾದವನಂತೆ ಕಾಣ್ತಿದ್ದವನಿಗೆ ಏನಾಯ್ತಪ್ಪ ಅಂದ್ರೆ ಎಲ್ಲಾ ಮೊಬೈಲ್ ಮಾಯೆ. ಮೊಬೈಲ ಹೊರಗಣ ನೋಟಕ್ಕೆ ಮನಸೋತಿದ್ದ ಅವ ಅದರಿಂದಾಗೋ ರೇಡಿಯೇಷನ್ನಿನ ಬಗ್ಗೆ ನೋಡೋಕೆ ಮರ್ತೇ ಹೋಗಿದ್ದ. ರಾತ್ರೆ ಮಲಗೋ ಮೊದಲಿನ ಹೆಚ್ಚು ಮೊಬೈಲ್ ಬಳಕೆ ಮತ್ತದರ ಅತಿಯಾದ ರೇಡಿಯೇಷನ್ನು ಅವನ ನಿದ್ರೆ, ನೆಮ್ಮದಿಗಳನ್ನೊದ್ದು ಓಡಿಸಿಬಿಟ್ಟಿತ್ತು. 

ಮೊಬೈಲ್ ರೇಡಿಯೇಷನ್ನಾ ? ಏನದು?
ಪ್ರತೀ ಮೊಬೈಲೂ ತನ್ನ ಟವರ್ ಜೊತೆ ಸಂಪರ್ಕಿಸಲು ತರಂಗಾಂತರಗಳನ್ನು ಬಳಸುತ್ತೆ ಅನ್ನೋದು ನಮಗೆ ತಿಳಿದ ವಿಷಯವೇ. ಪ್ರತೀ ಮೊಬೈಲಿಂದ ಹೊರಹೊಮ್ಮುವ ತರಂಗಾಂತರಗಳ ಪ್ರಭಾವ ಅದನ್ನು ಬಳಸೋ ಮನುಷ್ಯನ ಮೇಲೆ ಆಗುತ್ತೆ.ಅದನ್ನು ಅಳೆಯೋ ಒಂದು ಅಳತೆಗೋಲೇ SAR(Specific absorption Rate) ಅಂದ್ರೆ ಒಂದು ಫೋನನ್ನು ಬಳಸುವಾಗ ಮಾನವ ದೇಹ ಹೀರಲ್ಪಡೋ ವಿಕಿರಣಗಳ ಪ್ರಮಾಣ.FCC(Federal Communication Commission)ಅವರು ನಿಗದಿ ಪಡಿಸಿದಂತೆ ಮೊಬೈಲೊಂದರ SAR ಪ್ರಮಾಣ ೧.೬ ವ್ಯಾಟ್/ಕೆಜಿ ಗಿಂತ ಕಮ್ಮಿಯಿರಬೇಕು

ನನ್ನ ಮೊಬೈಲಿನ SAR ಪ್ರಮಾಣ ಎಷ್ಟಿದೆ ಅಂತ ಪರೀಕ್ಷಿಸೋದು ಹೇಗೆ ?
ನಿಮ್ಮ ಮೊಬೈಲಿನ ಕರೆ ಎಂಬ ಆಯ್ಕೆಗೆ ಹೋಗಿ *#07# ಎಂದು ಟೈಪ್ ಮಾಡಿ ಕರೆಮಾಡಿದ್ರೆ ಆ ಮೊಬೈಲಿನ SAR ಮಟ್ಟ ತಿಳಿಯುತ್ತೆ.

ನನ್ನ ಫೋನ್ ದುಬಾರಿಯದಾದ ಕಾರಣ SAR ಪ್ರಮಾಣ ಕಮ್ಮಿನೇ ಇರತ್ತಲ್ವಾ ?
ಹಂಗೇನಿಲ್ಲ.ಏಳು ಸಾವಿರದ ಸ್ಯಾಮ್ಸಂಗ್ ಎಸ್ ಡ್ಯುಯೋಸ್ ೨ನಲ್ಲಿ ೧.೦೨,ಹದಿನೆಂಟು ಸಾವಿರದ ಸಾಮ್ಸಂಗ್ ಎಸ್ ೪ ನಲ್ಲಿ ೦.೫೯  ಇರೋ SAR ಐಫೋನ್ -೬ ರಲ್ಲಿ  ೧.೫೯ ರಷ್ಟಿದೆ ! ಹಂಗಾಗಿ ಫೋನ್ ಬೆಲೆ ನೋಡಿ ಅದ್ರ SAR ಮಟ್ಟ ಕಮ್ಮಿಯಿರಬಹುದೆಂಬ ಊಹೆಗೆ ಬೀಳಬೇಡಿ !

SAR ಪ್ರಮಾಣ ಕಮ್ಮಿಯಿರೋ ಫೋನನ್ನು ಎಲ್ಲಿ ಬಳಸಿದ್ರೂ ಅದ್ರ ವಿಕಿರಣಗಳ ಪ್ರಮಾಣ ಕಡಿಮೆಯೇ ಇರುತ್ತಾ ?
ಲಿಫ್ಟಿನ ಒಳಗೆ, ಕಾರು, ಬಸ್ಸುಗಳ ಒಳಗೆ, ನೆಟ್ವರ್ಕು ಸರಿಯಿಲ್ಲದ ಕಡೆ ಅಂದ್ರೆ ನೆಟ್ವರ್ಕಿನ ಕಡ್ಡಿಗಳು ಒಂದೋ, ಎರಡೋ ಇರೋ ಕಡೆ ಹೆಚ್ಚು ಮೊಬೈಲ್ ಬಳಸಿದ್ರೆ ಕಮ್ಮಿ SAR ಇರೋ ಮೊಬೈಲ್ಗಳಿಂದಲೂ ಹೆಚ್ಚೆಚ್ಚು ವಿಕಿರಣಗಳು ಹೊರಸೂಸುತ್ತೆ ! ಅದು ದೇಹಕ್ಕೆ ಹತ್ತಿರವಿದ್ದಷ್ಟೂ ಅದರಿಂದಾಗೋ ತೊಂದ್ರೆ ಹೆಚ್ಚು.ಹಾಗಾಗಿ ಗಂಟೆಗಟ್ಲೆ ಉದ್ದದ ಸಂಭಾಷಣೆಗಳಿಗೆ ಸ್ಥಿರವಾಣಿ(ಲ್ಯಾಂಡ್ಲೈನ್) ಬಳಸಿ, ಸಾಧ್ಯವಿಲ್ಲದಿದ್ದರೆ ವೈರಿರೋ ಹೆಡ್ ಸೆಟ್ಗಳನ್ನ ಬಳಸಿ(ನಿಸ್ತಂತು ಅಥವಾ ಬ್ಲೂಟೂತ್ ಅಲ್ಲ) ಅಂತಾರೆ,ಅದೂ ಸಾಧ್ಯವಿಲ್ಲದಿದ್ರೆ ಫೋನನ್ನು ಕಿವಿಯಿಂದ ಸಾಧ್ಯವಾದಷ್ಟು ದೂರ ಇಟ್ಟು ಇಲ್ಲಾ ಮೊಬೈಲಿನ ಧ್ವನಿವರ್ಧಕ ಬಳಸಿ ಮಾತಾಡಿ ಅಂತಾರೆ ತಜ್ಞರು.   

SAR ಅನ್ನು ಯಾವುದೋ ಪರಿಸ್ಥಿತಿಯಲ್ಲಿ ಪರೀಕ್ಷಿಸಿರ್ತಾರೆ ಕಂಪನಿಯವ್ರು. ನಾನು ಮಾತಾಡೋ ಜಾಗದಲ್ಲಿ ಅದೆಷ್ಟಿದೆ ಅಂತ ತಿಳಿಯೋದು ಹೇಗೆ ?
tawkon ಅಂತ ಒಂದು ಆಂಡ್ರಾಯ್ಡ್ ಆಪ್ ಇದೆ. ಗೂಗಲ್ ಪ್ಲೇಸ್ಟೋರಿನಲ್ಲಿ ಉಚಿತವಾಗಿ ಮೊಬೈಲಿಗೆ ಇಳಿಸಿಕೊಳ್ಳಬಹುದಾದ ಅದರಿಂದ ನಿಮ್ಮ ಮೇಲೆ ಮೊಬೈಲ್ ವಿಕಿರಣಗಳ ಪ್ರಭಾವವನ್ನು ತಿಳಿಯಬಹುದು ಅಂತಾರೆ ತಂತ್ರಜ್ಞಾನ ಅಭಿವೃದ್ಧಿಪಡಿಸಿದೋರು. ನೇರವಾಗಿ, ಇಯರ್ ಫೋನಿನಿಂದ, ಧ್ವನಿವರ್ಧಕದ ಮೂಲಕ ನೀವು ಮಾತಾಡಿದ್ದೆಷ್ಟು ಎಂಬುದರ ಲೆಕ್ಕ ಇಡೋ ಈ ಆಪ್ ನಂತರ ನಿಮ್ಮ ಮೇಲಾದ ವಿಕಿರಣಗಳ ಪ್ರಭಾವ ತಿಳಿಸೋ ಆಯ್ಕೆ ಇದೆ. ಮೊಬೈಲಿನ ಜಿ.ಪಿ.ಎಸ್ ಮತ್ತು ಆಕ್ಸೆಲೋಮೀಟರ್ ಸೆನ್ಸಾರ್ಗಳಿಂದ ಫೋನ್ ನಿಮ್ಮ ದೇಹಕ್ಕೆ ಎಷ್ಟು ಹತ್ತಿರದಲ್ಲಿದೆ, ಯಾವ ವಾತಾವರಣದಲ್ಲಿದೀರ ಅಂತ ಅಳೆಯೋ ಇದು ತನ್ನಲ್ಲಿನ ಲೆಕ್ಕಾಚಾರಗಳಿಂದ ನಿಮ್ಮ ಮೇಲಾಗೋ ವಿಕಿರಣಗಳ ತಿಳಿಸುತ್ತೆ ಅನ್ನೋದು ಅಭಿವೃದ್ಧಿಪಡಿಸಿದೋರ ಅಂಬೋಣ. ೧೭ ಎಂಬಿಯ ಈ ತಂತ್ರಾಂಶ ಹೇಗೆ ಫೋನಲ್ಲಿ ಮಾತಾಡಿದರ ಅವಧಿಯನ್ನು ಲೆಕ್ಕವಿಡುತ್ತದೆ ಮತ್ತು ಹೆಚ್ಚು ವಿಕಿರಣಮಟ್ಟ ಇರುವ ಕಡೆ ಹೇಗೆ ಎಚ್ಚರಿಸುತ್ತದೆ ಎಂಬುದನ್ನು ಕೆಳಗಿನ ಚಿತ್ರಗಳಿಂದ ನೋಡಬಹುದು. ಆಪಿನ ಕೆಳಗಿರುವ i ಐಕಾನಿನ ಮೇಲೆ ಕ್ಲಿಕ್ ಮಾಡಿದರೆ ನಾವು ಏನು ಮಾಡಿದರೆ ನಮ್ಮ ದೇಹದ ಮೇಲಾಗೋ SAR ದುಷ್ಪರಿಣಾಮ ಕಮ್ಮಿಯಾಗುತ್ತದೆ ಎಂದು ಆಪ್ ತಿಳಿಸುತ್ತದೆ

ಮೊಬೈಲ್ ವಿಕಿರಣಗಳು ನಿಜಕ್ಕೂ ಅಪಾಯಕಾರಿಯೇ ಇಲ್ವೇ ಅನ್ನೋ ಚರ್ಚೆ ಇನ್ನೂ ನಡೆಯುತ್ತಿದೆ. ಅದೇನಾದ್ರೂ ಇರ್ಲಿ ಹುಷಾರಾಗಿರಲು ಒಂದಿಷ್ಟು ಕ್ರಮಗಳನ್ನು ಬಳಸೋದ್ರಲ್ಲಿ ತಪ್ಪಿಲ್ಲ. ಉದಾಹರಣೆಗೆ ಮಲಗುವಾಗ ಮೊಬೈಲನ್ನು ತಲೆಯ ಪಕ್ಕ ಇಡೋ ಬದಲು ಆದಷ್ಟು ದೂರ ಇಡೋದು, ಮನೆಯಲ್ಲಿ, ಆಫೀಸಲ್ಲಿದ್ದಾಗ್ಲೂ ಮೊಬೈಲನ್ನು ಜೇಬಲ್ಲೇ ಇಟ್ಟು ತಿರುಗೋ ಬದ್ಲು ದೇಹದಿಂದ ದೂರಕ್ಕೆ ಎಲ್ಲಾದ್ರೂ ಇಡೋದು…ಇತ್ಯಾದಿ. ಏನೇ ಅನ್ನಿ. ಒಂದಂತೂ ಸತ್ಯ. ಅತಿಯಾದ್ರೆ ಅಮೃತವೂ ವಿಷ ಅನ್ನುವಂತೆ ಬಳಕೆ ಹೆಚ್ಚಾದ್ರೆ ಬೆಸ್ಟ್ ಫೋನೂ ಮಾರಿ.ಹಾಗಾಗಿ ಹುಷಾರಾಗಿ ಬಳಸಿ, ರೋಗಗಳಿಂದ ಬಾಧೆಪಡದಂತೆ ಹುಷಾರಾಗಿ ಇರುವಂತೆ ಬಳಸಿ 🙂

*****

ಕನ್ನಡದ ಬರಹಗಳನ್ನು ಹಂಚಿ ಹರಡಿ

Leave a Reply

Your email address will not be published. Required fields are marked *