ಮೊನಾರ್ಕ್ ಚಿಟ್ಟೆ ಹಾಗೂ ಮಿಂಚುಳ: ಅಖಿಲೇಶ್ ಚಿಪ್ಪಳಿ

Akhilesh chippali column1
ಮಲೆನಾಡಿನಲ್ಲಿ ಸತತ ಮೂರನೇ ವರ್ಷದ ಬರಗಾಲ ಧಾಂಗುಡಿಯಿಡುತ್ತಿದೆ. ನಿಜಕ್ಕೂ ಇದಕ್ಕೆ ಮರಗಾಲವೆಂದೇ ಕರೆಯಬೇಕು. ಪಶ್ಚಿಮಘಟ್ಟದ ಕಾಲಬುಡದಲ್ಲಿರುವ ನಮಗೆ ವಾಸ್ತವಿಕವಾಗಿ ಬರವೆಂಬ ಶಬ್ಧದ ಅರಿವೇ ಇರಬಾರದು. ಆದರೂ ಅದರ ಅರಿವಾಗುತ್ತಿದೆ, ನಿಧಾನಕ್ಕೆ ಇಲ್ಲಿಯ ಜನರ ಬದುಕನ್ನು ನುಂಗಲು ಹೊರಟಿರುವ ಈ ಮರದ ಅಭಾವದಿಂದಾಗುತ್ತಿರುವ ಈ ಪರಿಸ್ಥಿತಿಗೆ ಮರಗಾಲವೆಂದೇ ಹೇಳಬಹುದು. ಪಕ್ಕದ ಹೊಸನಗರದಲ್ಲಿ, ತೀರ್ಥಹಳ್ಳಿಯಲ್ಲಿ ಮಳೆಯಾದರೆ, ರಾಜ್ಯಕ್ಕೆ ವಿದ್ಯುತ್ ನೀಡುವ ಲಿಂಗನಮಕ್ಕಿ ಜಲಾಶಯ ತುಂಬುತ್ತದೆ. ಜೋಗದ ಸಿರಿ ಹೆಚ್ಚುತ್ತದೆ. ಆ ಎರಡೂ ತಾಲ್ಲೂಕುಗಳಲ್ಲೂ ಮಳೆಯಿಲ್ಲ. ಜೋಗದಲ್ಲಿ ನೀರಿಲ್ಲದ ಹೊತ್ತಿನಲ್ಲೇ ಜೋಗದ ಜಲಪಾತವನ್ನು ಸರ್ವಋತು ಆಕರ್ಷಣೆಯಾಗಿ ಮಾಡಲು 20 ಸಾವಿರ ಹೆಚ್.ಪಿ.ಸಾಮಥ್ರ್ಯದ ಪಂಪ್ ಅಳವಡಿಸಲು ಹಾಗೂ ಸೀತಾ ಕಟ್ಟೆಯಲ್ಲಿ ಸಂತುಲನ ಡ್ಯಾಂ ಕಟ್ಟಲು ಕೋಟಿಗಳ ಯೋಜನೆಗಳು ಜೋಗದ ಐಬಿಯಲ್ಲಿ ತಯಾರಾಗುತ್ತಿರುವ ಸಂದಂರ್ಭದಲ್ಲೇ ಅತ್ತ ಮೆಕ್ಸಿಕೋದ ಕಾಡುನಾಶದಿಂದ ಅವನತಿಸುತ್ತಿರುವ ಮೊನಾರ್ಕ್ ಚಿಟ್ಟೆಗಳ ದಾರುಣ ಕತೆಯನ್ನು ನೋಡಬೇಕು. 

ವಲಸೆ ಹೋಗುವ ಚಿಟ್ಟೆಗಳಲ್ಲಿ ಮುಖ್ಯವಾದದು ಮೊನಾರ್ಕ್ ಚಿಟ್ಟೆಗಳು ಪ್ರತಿವರ್ಷ ಇವು ಕೆನಡಾ ಹಾಗೂ ಅಮೆರಿಕಾದಿಂದ ಕ್ಯಾಲಿಫೋರ್ನಿಯಾ ಹಾಗೂ ಮೆಕ್ಸಿಕೋಗಳಿಗೆ ವಲಸೆ ಹೋಗುತ್ತವೆ. ಸಾವಿರಾರು ಸಂಖ್ಯೆಯ ಬಣ್ಣದ ಚಿಟ್ಟೆಗಳು ಒಟ್ಟು ಕ್ರಮಿಸುವ ದೂರ ಸುಮಾರು 6000 ಕಿ.ಮಿ. ಹಾಗಂತ ಹೊರಟ ಚಿಟ್ಟೆಯೇ ಗಮ್ಯವನ್ನು ತಲುಪುತ್ತದೆ ಎಂದು ತಿಳಿಯಬಾರದು, ಇವು ದಾರಿಯುದ್ದಕ್ಕು ಮೊಟ್ಟೆಯಿಡುತ್ತಾ ಸಾಗುತ್ತವೆ. ಇದೇ ಮೊಟ್ಟೆಗಳೇ ಕಂಬಳಿಹುಳುಗಳಾಗುತ್ತಾ, ರೆಕ್ಕೆ ಬಿಚ್ಚಿ ಅಪ್ಪ-ಅಮ್ಮನ ಜಾಡು ಹಿಡಿದು ಗಮ್ಯ ತಲುಪುತ್ತವೆ. ಮಧ್ಯದಲ್ಲಿ ಅಪಾರ ಪ್ರಮಾಣದ ಪರಾಗಸ್ಪರ್ಶವೂ ಆಗುತ್ತದೆ. ಬಹಳ ಸೂಕ್ಷ್ಮತರದ ದೇಹ ರಚನೆಯನ್ನು ಹೊಂದಿರುವ ಚಿಟ್ಟೆಗಳನ್ನು ಸೂತಕ-ಸೂಚಕ ಜೀವಿಗಳೆಂದು ಅನ್ನುತ್ತಾರೆ. ಅಂದರೆ ವಾತಾವರಣದಲ್ಲಿ ಏರುಪೇರಾದರೆ ಅದರ ಪರಿಣಾಮ ಮೊದಲು ಇಂತಹ ಸೂತಕ-ಸೂಚಕ ಜೀವಿಗಳ ಮೇಲೆ ಆಗುತ್ತದೆ.

ಈ ವರ್ಷ ಆಗಿದ್ದು ಇದೇ. ಮೊನಾರ್ಕ್ ಚಿಟ್ಟೆಗಳಿಗೆ ಮೆಕ್ಸಿಕೊದ ದಕ್ಷಿಣ ಭಾಗದಲ್ಲಿ ಫಿರ್ ಮರಗಳಿರುವ ಅರಣ್ಯ ಪ್ರದೇಶ ಬೆಚ್ಚಗಿನ ವಾತಾವರಣವನ್ನು ನೀಡಿ, ಅಲ್ಲಿ ಸಂತಾನೋತ್ಪತ್ತಿಗೆ ಅವಕಾಶ ನೀಡುವ ಅಪರೂಪದ ಸ್ಥಳವಾಗಿದೆ. ಅಕ್ರಮವಾಗಿ ಕಡಿತಲೆಯಾಗುತ್ತಿರುವ ಈ ಫಿರ್ ಮರಗಳಿರುವ ಅರಣ್ಯ ಪ್ರದೇಶದಲ್ಲೀಗ ಚಿಟ್ಟೆಗಳಿಗೆ ಆವಾಸ್ಥಾನದ ಕೊರತೆಯಾಗಿದೆ ಅಲ್ಲದೇ ಚಳಿಯಿಂದ ರಕ್ಷಣೆ ಪಡೆಯಲು ಸಾಧ್ಯವಿಲ್ಲದಂತಹ ಪರಿಸ್ಥಿತಿ ಏರ್ಪಟ್ಟಿದೆ. ಜೊತೆಗೆ ಗಾಯದ ಮೇಲೆ ಬರೆಯೆಂಬಂತೆ ಹವಾಮಾನ ವೈಪರೀತ್ಯದ ಕಾರಣಕ್ಕಾಗಿ ಬೀಸಿದ ಚಂಡಮಾರುತ ಸಾವಿರಾರು ಎಕರೆ ಅರಣ್ಯ ಪ್ರದೇಶವನ್ನು ನುಂಗಿ ಹಾಕಿದೆ. ಈ ಹೊತ್ತಿನಲ್ಲೇ ಆ ಪ್ರದೇಶವನ್ನು ಪ್ರವೇಶಿಸಿದ ಸುಮಾರು 65 ಲಕ್ಷ ಚಿಟ್ಟೆಗಳು ಆವಾಸಸ್ಥಾನದ ಕೊರತೆಯಿಂದ ಅಸುನೀಗಿವೆ ಎಂದು ಗಾರ್ಡಿಯನ್ ವರದಿ ಮಾಡಿದೆ. ಈ ಚಿಟ್ಟೆಯ ಮತ್ತೊಂದು ವಿಶೇಷವೆಂದರೆ ಇದು ಮೊಟ್ಟೆಯಿಡುವುದು “ಮಿಲ್ಕ್ ವೀಡ್” ಎಂದು ಕರೆಯಲಾಗುವ ಪೊದೆಯ ಎಲೆಗಳಲ್ಲಿ ಮಾತ್ರ. ಮೊನಾರ್ಕ್ ಮೊಟ್ಟೆಗಳಿಂದ ಹೊರಬರುವ ಮರಿಗಳು ಅಥವಾ ಕಂಬಳಿಹುಳುಗಳು ಇದರ ಎಲೆಯನ್ನೇ ತಿಂದು ಜೀವಿಸುತ್ತವೆ. ಮನುಜಾತಿಗೆ ಈ ಹಾಲುಕಳೆಯೆಂಬುದು ಕೃಷಿ ಹಾಗೂ ತೋಟಗಾರಿಕೆ ಕ್ರಿಯೆಗಳಿಗೆ ಅಡ್ಡಿಯಾಗುವ ಕಳೆಗಿಡಗಳಷ್ಟೇ ಆಗಿವೆ. ಅಮೆರಿಕಾದಲ್ಲಿ ಮಾಂಸಕ್ಕಾಗಿ ಸಾಕುವ ಹಸುಗಳಿಗೆ ತಿನ್ನಿಸಲು ಕುಲಾಂತರಿ ಜೋಳ ಹಾಗೂ ಸೋಯಾವನ್ನು ಹೇರಳವಾಗಿ ಬೆಳೆಯಲಾಗುತ್ತದೆ. ಕಳೆಗಳನ್ನು ಹತೋಟಿಯಲ್ಲಿಡಲು ವ್ಯಾಪಕವಾಗಿ ಮಾನ್ಸಂಟೋ ಕಂಪನಿ ತಯಾರಿಸಿದ ರೌಂಡ್ ಅಪ್ ಎಂಬ ಕಳೆನಾಶಕವನ್ನು ಅಲ್ಲಿನ ರೈತರು ಹೇರಳವಾಗಿ ಬಳಸುತ್ತಾರೆ. ಇದರಿಂದ ಮೊನಾರ್ಕ್ ಚಿಟ್ಟೆಗಳ ಮೊಟ್ಟೆಗಳು ಮರಿಯಾಗುವ ಮೊದಲೇ ಸತ್ತು ಹೋಗುತ್ತವೆ, ಒಂದೊಮ್ಮೆ ಮರಿಯಾದರೂ ಅದಕ್ಕೆ ತಿನ್ನಲು ಬೇಕಾದ ಎಲೆಗಳೇ ಇರುವುದಿಲ್ಲ. ಹೀಗೆ ಕೀಟನಾಶಕ, ಹವಾಮಾನ ವೈಪರೀತ್ಯ, ಅಕ್ರಮ ಕಡಿತಲೆಯಿಂದಾಗಿ ಅತ್ಯಂತ ಸುಂದರವಾದ ಹಾರುವ ಪಚ್ಚೆರತ್ನದ ಬಣ್ಣ-ಬಣ್ಣದ ಮೋಹಕ ಚಿಟ್ಟೆಗಳು ಅವಸಾನದಂಚಿಗೆ ಬಂದು ನಿಂತಿವೆ.

monorch

ಅಂಕಿ-ಅಂಶಗಳ ಪ್ರಕಾರ 15 ವರ್ಷಗಳ ಹಿಂದೆ 1 ಕೋಟಿ ಚಿಟ್ಟೆಗಳು ವಲಸೆ ಹೋಗುವ ಪ್ರಕ್ರಿಯೆಯಲ್ಲಿ ತೊಡಗುತ್ತಿದ್ದವು. ಲಕ್ಷಾಂತರ ಎಕರೆ ಕಾಡು ನಾಶದಿಂದಾಗಿ ಇದೀಗ ಇವುಗಳ ಸಂಖ್ಯೆ 15 ರಿಂದ 20 ಲಕ್ಷಕ್ಕೆ ಬಂದು ನಿಂತಿದೆ. ಹಾಗಂತ ಅಲ್ಲಿನ ಪರಿಸರ ಸಂರಕ್ಷಕರು ಮೊನಾರ್ಕ್ ಚಿಟ್ಟೆಗಳನ್ನು ಉಳಿಸಲು ಹಲವು ತರಹದ ಪ್ರಯತ್ನಗಳನ್ನು ನಡೆಸಿದ್ದಾರೆ. ಅಲ್ಲಿನ ಪೈನ್ ಹಾಗೂ ಫಿರ್ ಮರಗಳ ಕಾಡುಗಳನ್ನು ಉಳಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಿದ್ದಾರೆ. ಅಲ್ಲಿನ ಸರ್ಕಾರವೂ ಅಕ್ರಮ ಮರ ಕಡಿತಲೆಯ ವಿರುದ್ಧ ಪ್ರತ್ಯೇಕ ಪೋಲೀಸ್ ದಳವನ್ನು ನಿಯೋಜನೆ ಮಾಡುವುದಾಗಿ ಭರವಸೆ ನೀಡಿದೆ. ಪ್ರಕೃತಿ ಸಂರಕ್ಷಕರು ಹಳ್ಳಿಗೆ ಹಳ್ಳಿಗೆ ಹೋಗಿ ಇಲ್ಲಿನ ವೃಕ್ಷ ಸಂಪತ್ತಿನಿಂದಲೇ ನಿಮ್ಮ ಭವಿಷ್ಯ ಅಡಗಿದೆ. ಈ ಚಿಟ್ಟೆಗಳ ಸಮೂಹವೇ ನಿಮಗೆ ಹೆಚ್ಚಿನ ಆದಾಯ ತರಬಲ್ಲದು. ಆದ್ದರಿಂದ ಮರಗಳನ್ನು ಕಡಿಯುವ ಬದಲಾಗಿ ಉಳಿಸಿಕೊಳ್ಳುವ ಪ್ರಯತ್ನ ಮಾಡಿ ಎಂದು ಜನ-ಜಾಗೃತಿ ಮಾಡುತ್ತಿದ್ದಾರೆ. 

ಚಿಕ್ಕವರಿದ್ದಾಗ ಮಳೆಗಾಲ ಶುರುವಾಯಿತು ಅಂದರೆ, ಮನೆಯ ಸುತ್ತ-ಮುತ್ತ ಸಂಜೆಯ ಗಾಡಂಧಕಾರದಲ್ಲಿ ಮಿಣುಕು ಹುಳುಗಳು ಹಾರುತ್ತಿದ್ದವು. ಸಾವಿರಾರು ಸಂಖ್ಯೆಯಲ್ಲಿ ಹಾರುತ್ತಿದ್ದ ಇವು ಮಿಣುಕುವ ನಕ್ಷತ್ರಗಳೇ ಧರೆಗಿಳಿದು ಬಂದಂತೆ ತೋರುತ್ತಿದ್ದವು. ನೂರಾರು ಕೀಟಸಂತತಿಗಳ ವಿವಿಧ ತರಹದ ವಾದ್ಯಮೇಳಕ್ಕೆ ತಕ್ಕಂತೆ ತಾಳ ಹಾಕುತ್ತಾ ಕುಣಿಯುತ್ತಿವೆಯೇನೋ ಎಂಬಂತೆ ತಮ್ಮ ದೇಹದ ಹಿಂಭಾಗದಿಂದ ಬೆಳಕನ್ನು ಹೊರಡಿಸುತ್ತಾ ಹಾರುತ್ತಿದ್ದವು. ಅದನ್ನೇ ದಿಟ್ಟಿಸುತ್ತಿದ್ದರೆ, ಸಮ್ಮೋಹನಕ್ಕೆ ಒಳಗಾದಂತೆ ಅನಿಸುತ್ತಿತ್ತು. ಚಿಮಣೆ ಬುಡ್ಡಿಯ ದೀಪ ಗಾಳಿಗೆ ಹೊಯ್ದಾಡುತ್ತಾ ಇರುವಾಗ ನಡು ಬಗ್ಗಿಸಿ ನೆಲಕ್ಕೆ ಕೈಕೊಟ್ಟು ಹೋಂ ವರ್ಕ್ ಮಾಡುವ ಮಧ್ಯದಲ್ಲಿ ಈ ಮಿಣುಕು ಹುಳುಗಳು ಆಕರ್ಷಣೆ ಮನಕ್ಕೆ ಮುದ ನೀಡುತ್ತಿದ್ದದ್ದು ಸುಳ್ಳಲ್ಲ. ಅಪ್ಪಿ-ತಪ್ಪಿ ಮನೆಯ ಒಳಗೂ ಮಿಣುಕು ಹುಳುಗಳ ಪ್ರವೇಶ ಆಗುತ್ತಿತ್ತು. ಆಗೆಲ್ಲ ಅದನ್ನು ಹಿಡಿದು ಬೆಂಕಿ ಪೊಟ್ಟಣದೊಳಗೆ ತುಂಬಿಡುತ್ತಿದ್ದ ನೆನಪು ಇನ್ನೂ ಇದೆ. ರಾತ್ರಿಯ ಕತ್ತಲನ್ನು ಓಡಿಸಲು, ಗದ್ದೆಗೆ ಹೋಗಲು ಇತ್ಯಾದಿಗಳಿಗಾಗಿ ನಮ್ಮಲ್ಲೊಂದು ಟಾರ್ಚ್ ಇತ್ತು. ಮೂರು ಸೆಲ್ಲಿನ ಆ ಟಾರ್ಚ್ ಹಾಕುವ ಸೆಲ್‍ಗಳು ತಿಂಗಳಲ್ಲೇ ಸೊರಗಿ, ದೀಪ ಮಬ್ಬಾಗುತ್ತಿತ್ತು. ಪ್ರತಿ ಬಾರಿ ಸೆಲ್ ಕೊಂಡು ತಂದಾಗಲೂ ಅದರ ಬೆಲೆ ಏರುತ್ತಲೇ ಇರುತ್ತಿತ್ತು. ಇದಕ್ಕೊಂದು ಉಪಾಯ ಮಾಡಿದರೆ ಹೇಗೆ, ಮಿಣುಕು ಹುಳುಗಳು ಪುಕ್ಕಟೆಯಾಗಿ ಬೆಳಕು ನೀಡುತ್ತವೆ. ಇವುಗಳನ್ನೇ ಒಂದು ಬಾಟಲಿಯಲ್ಲಿ ತುಂಬಿಸಿಟ್ಟರೆ ಆಯಿತು. ಬ್ಯಾಟರಿ ಸೆಲ್‍ಗೆ ಹಣ ಹಾಕುವುದು ತಪ್ಪುತ್ತಲ್ಲ ಎಂದು ಕಾರ್ಯಪ್ರವೃತ್ತನಾಗಿದ್ದೇ ಬಂತು. ಹುಡುಕಿದಾಗ ಸಿಕ್ಕಿದ್ದು ಖಾಲಿಯಾದ ಬ್ರಿಲ್ ಇಂಕಿನ ಬಾಟಲ್. ಬಾಟಲನ್ನು ಹಿಡಿದುಕೊಂಡು ಮಿಂಚು ಹುಳಕ್ಕಾಗಿ ಹೊಂಚು ಹಾಕಿ ಕುಳಿತಾಯಿತು. ಅದೃಷ್ಟಕ್ಕೆಂಬಂತೆ ಒಂದು ಹುಳ ಮನೆಯೊಳಗೆ ಬಂತು. ಅದನ್ನು ಹಿಡಿದು ಬ್ರಿಲ್ ಇಂಕಿನ ಬಾಟಲಿಯೊಳಗೆ ತುಂಬಿದ್ದಾಯಿತು. ಬಾಟಲಿಯೊಳಗೆ ಮಿಣುಕುತ್ತಿದ್ದ ಹುಳದ ಬೆಳಕು ಅದೇಕೋ ಕಡಿಮೆಯಾದಂತೆ ಎನಿಸಿತು. ಬಾಟಲಿಯಲ್ಲಿ ತುಂಬಿದ್ದರಿಂದ ಅದಕ್ಕೆ ಆಮ್ಲಜನಕದ ಕೊರತೆಯಾಯಿತೋ ಅಥವಾ ಬಾಟಲಿಯು ದಪ್ಪವಾಗಿದ್ದರಿಂದ ಬೆಳಕು ಕಡಿಮೆಯಾದಂತೆ ಅನಿಸಿತೋ ಅಂತೂ ಇನ್ನೊಂದು ಹುಳು ಬರಲಿಲ್ಲ. ಅಲ್ಲಿಗೆ ನಮ್ಮ ನೈಸರ್ಗಿಕ ಟಾರ್ಚಿನ ಪ್ರಯತ್ನ ಅಷ್ಟಕ್ಕೆ ನಿಂತು ಹೋಯಿತು. ಸಿಕ್ಕ ಒಂದು ಮಿಂಚುಹುಳುವನ್ನು ಹೊರಗೆ ಬಿಟ್ಟಾಯಿತು. ಅದೇಕೋ ನಮ್ಮಲ್ಲೂ ಈಗ ಮಿಂಚುಹುಳುಗಳ ಸಂಖ್ಯೆ ಗಮನಾರ್ಹವಾಗಿ ಕಡಿಮೆಯಾಗಿದೆ. ಇತರೆ ಕೀಟಗಳನ್ನು ನಾಶ ಮಾಡಿದಂತೆ, ಮಿಂಚುಹುಳುಗಳು ಕೃಷಿಯಲ್ಲಿ ಬಳಸುವ ರಾಸಾಯನಿಕಗಳಿಂದಾಗಿ ನಾಶವಾದವೇ? ಇದೇ ಮಿಂಚು ಹುಳುಗಳು ಮೆಕ್ಸಿಕೋ ದೇಶದ ಒಂದು ಪ್ರದೇಶದ ಕಾಡನ್ನು ಉಳಿಸಲು ಕಾರಣವಾಗುತ್ತಿವೆ. ಅದು ಹೇಗೆಂದು ಕೊಂಚ ನೋಡೋಣ.

ನಾನಕ್ಯಾಮಿಪ್ಲಾ ಎಂಬುದೊಂದು ಅಲ್ಲಿಯ ಹಳ್ಳಿಯ ಹೆಸರು. ಈ ಹಳ್ಳಿಯಲ್ಲಿ ಸರ್ಕಾರಕ್ಕೆ ಸೇರಿದ ಒಂದು ಪಾರ್ಕ್ ಇದೆ. ನಮ್ಮಲ್ಲಿ ಹೋಂ ಸ್ಟೇ ತರಹದ ತಂಗುಕೋಣೆಗಳು ಅಲ್ಲಿವೆ. ಸರ್ಕಾರ ಹಾಗೂ ಹಳ್ಳಿಯ ಮಧ್ಯೆ ಆಗಿರುವ ಒಡಂಬಡಿಕೆಯಂತೆ ಸಹಕಾರಿ ತತ್ವದಲ್ಲಿ ಅಲ್ಲಿನ ಈ ಪಾರ್ಕ್‍ನ ಮೇಲ್ವಿಚಾರಣೆ ನಡೆಯುತ್ತದೆ. ಬಂದ ಪಾಲಿನಲ್ಲಿ ಈ ಹಳ್ಳಿಗರಿಗೂ ಪಾಲುಂಟು. ಇಂತಹ ಹಳ್ಳಿಗೆ,  ಪಟ್ಟಣ ಒತ್ತಡದ ಜೀವನದಿಂದ ಪಾರಾಗಲು ವಾರದ ಕೊನೆಯಲ್ಲಿ ಇಲ್ಲಿಗೆ ಬಹಳಷ್ಟು ಪ್ರವಾಸಿಗರು ಬರುತ್ತಾರೆ. ಆದರೆ, ಅರಣ್ಯವನ್ನು ಆಸ್ವಾದಿಸಲು ಬರುವ ಪ್ರವಾಸಿಗರಿಗೆ ಎದುರಾಗುತ್ತಿದ್ದದು ಮರಗಳ ಮಾರಣ ಹೋಮ.  42 ಕುಟುಂಬಗಳನ್ನು ಹೊಂದಿದ ಚಿಕ್ಕ ಹಳ್ಳಿಯ ಜನರ ಮುಖ್ಯ ಕಸುಬು ನಾಟ ಕಡಿಯುವುದು. ಕಡಿದ ನಾಟವನ್ನು ಸೈಜಿಗೆ ತಕ್ಕನಾಗಿ ಕತ್ತರಿಸಲು ಅಲ್ಲೊಂದು ಸಾಮಿಲ್ ಕೂಡಾ ಇದೆ. ಸಹಕಾರ ಸಂಘದ ಮಾದರಿಯಲ್ಲಿ ನಡೆಯುವ ಈ ಸಾಮಿಲ್ ಮ್ಯಾನೇಜರ್ ಹೆಸರು ಸಲ್ವಡಾರ್ ಮೊರಾಲೆ. ಈ ಹಳ್ಳಿಯ ಜನರ ಮುಖ್ಯ ಕಸುಬೇ ಅರಣ್ಯವನ್ನು ಕಡಿದು ಮಾರಾಟ ಮಾಡುವುದು. ಪ್ರತಿನಿತ್ಯ ಇಲ್ಲಿನ ಪೈನ್ ಮತ್ತು ಫಿರ್ ಮರಗಳು ಹಳ್ಳಿಗರ ಕೊಡಲಿಗೆ ಬಲಿಯಾಗಿ ನೆಲಕಚ್ಚಿ, ಸಾಮಿಲ್ ಮೂಲಕ ಪೇಟೆ ಪಟ್ಟಣ ಸೇರುತ್ತಿದ್ದವು. ಹಾಗಂತ ಇಲ್ಲಿನ ಜನರ ಬದುಕು ಮರ ಕಡಿತಲೆಯಿಂದ ಬಹಳ ಉನ್ನತಮಟ್ಟವನ್ನೇನು ಕಾಣಲಿಲ್ಲ. ಪ್ರತಿವರ್ಷ ಜೋರು ಮಳೆಗಾಲದ ಜೂನ್‍ನಿಂದ ಆಗಸ್ಟ್ ತಿಂಗಳವರೆಗೆ ಮರಕಡಿತಲೆಗೆ ತಾತ್ಕಾಲಿಕ ವಿರಾಮ ನೀಡಲಾಗುತ್ತಿತ್ತು. ಈ ಸಮಯದಲ್ಲಿ ಅಲ್ಲಿನ ಜನರಿಗೆ ಹೆಚ್ಚಿನ ಕೆಲಸವಿಲ್ಲ. ಇದೇ ಸಮಯದಲ್ಲಿ ಆ ಕಾಡಿನಲ್ಲಿ ರಾತ್ರಿಯ ವಾತಾವರಣ ರಮ್ಯಮನೋಹರವಾಗಿ ತೋರುತ್ತಿತ್ತು. ಲಕ್ಷಾಂತರ ಸಂಖ್ಯೆಯಲ್ಲಿ ಮಿಣುಕುವ ಮಿಂಚುಹುಳುಗಳು ಇಡೀ ಪ್ರದೇಶಕ್ಕೆ ಒಂದು ತರಹದ ರಮಣೀಯತೆಯನ್ನು ತಂದು ಕೊಡುತ್ತಿದ್ದವು. ಹಾಗೂ ಮರಕಡಿತಲೆಯಿಂದಾಗಿ ವರ್ಷದಿಂದ ವರ್ಷಕ್ಕೆ ಇವುಗಳ ಸಂಖ್ಯೆ ಕಡಿಮೆಯಾಗುತ್ತಿದ್ದನ್ನು ಆ ಹಳ್ಳಿಯ ಮುಖ್ಯಸ್ಥ ಗಮನಿಸುತ್ತಲೇ ಇದ್ದ. ತನ್ಮಧ್ಯೆ ಮಿಂಚುಹುಳುಗಳ ಮ್ಯೂಸಿಕಲ್ ಕಾರಂಜಿ ಪಟ್ಟಣಿಗರ ಮನ ಸೆಳೆದಿತ್ತು. ಈ ತಿಂಗಳಲ್ಲಿ ಮಿಂಚುಹುಳುಗಳ ದೀಪದಾಲಂಕಾರವನ್ನು ನೋಡಲು ಬರುವವರ ಸಂಖ್ಯೆಯು ಹೆಚ್ಚುತ್ತಿತ್ತು. 2011ರಲ್ಲಿ ಮುಖ್ಯಸ್ಥನ ತಲೆಗೊಂದು ಯೋಚನೆ ಬಂತು. ಮರಕಡಿಯುವುದರಿಂದ ನಮ್ಮ ಬದುಕೇನೋ ಹಸನಾಗಲಿಲ್ಲ. ಈ ಮಿಂಚುಹುಳುಗಳಿಂದಾದರೂ ನಮ್ಮ ಬದುಕು ಹಸನಾದೀತೇ ಎಂಬುದಷ್ಟೇ ಯೋಚನೆ ಹಾಗೂ ಯೋಜನೆಯ ಬೀಜ. 

ಹಾಗೂ 2011ರಲ್ಲೆ ಈ ಯೋಜನೆ ಜಾರಿಗೆ ಬಂತು. ವರ್ಷಕ್ಕೆ 50 ಸಾವಿರ ಮರಗಳನ್ನು ಕಡಿಯುತ್ತಿದ್ದ ಹಳ್ಳಿಯಲ್ಲೀಗ 50 ಸಾವಿರ ಗಿಡಗಳನ್ನು ನೆಡುವ ಪರಿಪಾಠ ಪ್ರಾರಂಭವಾಗಿದೆ. 1530 ಎಕರೆಯ ಸಮೃದ್ಧ ಅರಣ್ಯವನ್ನು ಕಾಯ್ದಿಟ್ಟುಕೊಂಡ ಆ ಹಳ್ಳಿಯೀಗ ಆರ್ಥಿಕವಾಗಿ ಸಬಲವಾಗುತ್ತಿದೆ. ಬೆಳೆಯುವ ಬೆಳೆಗಳಿಗೆ ಅಲ್ಲಿ ಯಾರೂ ರಾಸಾಯನಿಕವನ್ನು ಸಿಂಪರಣೆ ಮಾಡುತ್ತಿಲ್ಲ. ಮರಕಡಿತಲೆಯ ಪ್ರಮಾಣ ಶೇ.70ರಷ್ಟು ಕಡಿಮೆಯಾಗಿದೆ. ಮಿಂಚುಹುಳದ ವೈವಿಧ್ಯಮಯ ನೃತ್ಯನೋಡಲು ಜನ ಮುಗಿ ಬೀಳುತ್ತಿದ್ದಾರೆ. ಪಾರ್ಕ್‍ನ ಎಲ್ಲಾ ಕೋಣೆಗಳು 4-5 ತಿಂಗಳು ಮುಂಚಿತವಾಗಿಯೇ ಕಾದಿರಿಸಲ್ಪಟ್ಟಿರುತ್ತವೆ. ಆ ಹಳ್ಳಿಯ ಎಲ್ಲಾ 42 ಕುಟುಂಬಗಳಿಗೂ ಮರ ಕಡಿಯುವುದಕ್ಕಿಂತ ಮರಗಳನ್ನು ಉಳಿಸಿ-ಬೆಳೆಸುವು ಕಾಯಕವೇ ಲಾಭದಾಯಕ ಎಂಬುದರ ಅರಿವಾಗಿದೆ. ಹಾಗಂತ ವ್ಯವಹಾರವನ್ನು ಬಾಚಿಕೊಂಡು ಚಿನ್ನದ ಮೊಟ್ಟೆಯಿಡುವ ಕೋಳಿಯ ಕತೆಯಾಗಲು ಅವರು ತಯಾರಿಲ್ಲ. ಒಂದು ರಾತ್ರಿಗೆ 250ಕ್ಕಿಂತ ಹೆಚ್ಚು ಜನರನ್ನು ಒಳಕ್ಕೆ ಬಿಡುವುದಿಲ್ಲ. ಹೆಚ್ಚು-ಹೆಚ್ಚು ಪ್ರವಾಸಿಗರಿಂದ ಅತ್ಯುತ್ತಮ ಲಾಭವೇನೋ ಬರಬಹುದು. ಹಾಗಂತ ಇದೇ ಪ್ರವಾಸಿಗರ ಕಾರಣದಿಂದ ಮಿಂಚುಹುಳುಗಳಿಗೇನಾದರೂ ತೊಂದರೆಯಾದರೆ. ಹಾಗಾಗಿ ಕಟ್ಟುನಿಟ್ಟಿನ ನಿಯಮಗಳನ್ನು ರೂಪಿಸಿ, ಪ್ರವಾಸಿಗರ ಮನತಣಿಸುವಲ್ಲಿ ಅಲ್ಲಿನ ಸಹಕಾರಿ ಸಂಘ ಯಶಸ್ವಿಯಾಗಿದೆ. 

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x