ಮೊದಲ ಸೂರ್ಯೋದಯ: ಪ್ರಜ್ವಲ್ ಕುಮಾರ್

 

ವಾರದ ಕೊನೆ ಬಂತು ಅಂದ್ರೆ ಫ್ರೆಂಡ್ಸ್ ಎಲ್ಲಾ ಒಟ್ಟಾಗಿ ಸೇರಿ ಟ್ರಿಪ್ ಹೋಗೋದು ಕಾಮನ್ ಆಗಿದೆ. ಅದೇ ರೀತಿ ನಮ್ಮ ಗುಂಪೊಂದು ರಾತ್ರಿ ಟ್ರೆಕ್ಕಿಂಗಿಗೆ ಹೊರಟು ನಿಂತ್ವಿ. ಈ ಸಲ ಹೋಗೋಣಾ ಅನ್ಕೊಂಡಿದ್ದು ಚಂದಗಿರಿ ಅನ್ನುವ ಜಾಗಕ್ಕೆ. ಹಾಸನಕ್ಕೆ ಹೋಗುವ ದಾರಿಯಲ್ಲಿರುವ ಈ ಜಾಗವನ್ನು ನಮ್ಮ ಗುಂಪಲ್ಲಿ ಒಬ್ಬನನ್ನು ಬಿಟ್ಟರೆ ಬೇರೆ ಯಾರೂ ನೋಡಿರ್ಲಿಲ್ಲ. ಚಂದಗಿರಿಯ ತುದಿಯಲ್ಲಿ ಸೂರ್ಯೋದಯ ತುಂಬಾ ಚೆನ್ನಾಗಿ ಕಾಣುತ್ತೆ ಅನ್ನೋದನ್ನ ಕೇಳಿದ್ದ ನಾವು ಈ ಸಲ ಆ ಸೂರ್ಯೋದಯಕ್ಕೆ ಸಾಕ್ಷಿಯಾಗಲಿದ್ದೆವು. ಸೂರ್ಯ ಕೆಂಪಗೆ ಸೇಬು ಹಣ್ಣಿನ ಹಾಗೆ ಕಾಣುತ್ತಾನೆ ಅಂತೆಲ್ಲಾ ಹೇಳೋದು ಕೇಳಿದ್ದೆ. ಇದು ಬಹಳ ಸೋಮಾರಿಯಾದ ನಾನು ನೋಡುವ ಮೊದಲ ಸೂರ್ಯೋದಯವಾದ್ದರಿಂದ ನನ್ನ ಎಕ್ಸೈಟ್ಮೆಂಟ್ ಜಾಸ್ತೀನೇ ಇತ್ತು!
 
 
ನಾವು ಒಟ್ಟು ಹನ್ನೊಂದು ಜನ ಇದ್ದಿದ್ರಿಂದ ಒಂದು ಟಿ.ಟಿ. (ಟೆಂಪೋ ಟ್ರಾವೆಲ್ಲರ್) ಬಾಡಿಗೆಗೆ ತಗೊಂಡು ಅದರ ಡ್ರೈವರ್ ಜೊತೆ ರಾತ್ರಿ ಹನ್ನೊಂದು ಘಂಟೆಗೆ ಬೆಂಗಳೂರು ಬಿಟ್ವಿ. ಬೆಳಗ್ಗಿನಿಂದ ಆಫೀಸಿನಲ್ಲಿ ಕೆಲಸ ಮಾಡಿ ಸುಸ್ತಾಗಿದ್ದಕ್ಕೋ ಏನೋ ನಾಲ್ಕೈದು ಜನರನ್ನು ಬಿಟ್ಟು ಉಳಿದೆಲ್ಲರೂ ನಿದ್ದೆಗೆ ಜಾರಿದ್ವಿ.
ನನಗಂತೂ ಮತ್ತೆ ಎಚ್ಚರವಾಗಿದ್ದು ಚಂದಗಿರಿ ಬಂತು ಅಂತ ಪಕ್ಕದಲ್ಲಿದ್ದ ನರೇಂದ್ರ ನನ್ನ ಎಬ್ಬಿಸಿದಾಗಲೇ. ಬೆಟ್ಟದ ಬುಡದವರೆಗೆ ಹೋಗಲು ದಾರಿ ಇಲ್ಲವಾದ್ದರಿಂದ ಟಿ.ಟಿ.ಯನ್ನು ಬೆಟ್ಟದಿಂದ ಎರಡು ಕಿ.ಮೀ. ದೂರದಲ್ಲೇ ನಿಲ್ಸಿದ್ರು. ಅಲ್ಲಿಂದ ಬೆಟ್ಟದ ತನಕ ನಡ್ಕೊಂಡೇ ಹೊರಟ್ವಿ. ರಾತ್ರಿ ಆಗಿದ್ರಿಂದ ಟಾರ್ಚ್ ಇಲ್ಲದೇ ದಾರಿ ಕಾಣುತ್ತಿರಲಿಲ್ಲ. ನಮ್ಮ ಹನ್ನೊಂದು ಜನಕ್ಕೆ ಇದ್ದ ಟಾರ್ಚ್ ಐದೇ! ಟಾರ್ಚ್ ತರದೇ ಇರುವವರಿಗೆ "ನಿಮಗೆ ನಾವು ಟಾರ್ಚ್ ಹಿಡಿಯೋದಿಲ್ಲ" ಅಂತ ಆಟ ಆಡಿಸ್ತಾ ಬೆಟ್ಟದ ಕಡೆಗೆ ನಮ್ಮ ತಂಡ ಸಾಗಿತ್ತು.
ಇದ್ದಕ್ಕಿದ್ದಂತೆ ಕಣ್ಣು ಕೋರೈಸುವ ಬೆಳಕು. ಜೊತೆಗೇ ಜೋರಾಗಿ ಗುಡುಗಿದಂತೆ ಶಬ್ದ.ಅಲ್ಲಿಯವರೆಗೂ ಗಮನಿಸಿಯೇ ಇರದ ಆಕಾಶವನ್ನು ಈಗ ಎಲ್ಲರೂ ಒಟ್ಟಿಗೇ ನೋಡಿದ್ವಿ. ಒಂದು ನಕ್ಷತ್ರವೂ ಕಾಣದಂತೆ ಆಕಾಶವನ್ನು ಮುಚ್ಚಿರುವ ಮೋಡ. ಇದೆಂಥಾ ಟೈಮಲ್ಲಿ ಟ್ರೆಕ್ಕಿಂಗಿಗೆ ಬಂದ್ವಪ್ಪ ಅನ್ಕೊಂಡೆ. ವಾಪಸ್ ಹೋಗಿಬಿಡೋಣ ಅಂತ ನನ್ನನ್ನೂ ಸೇರಿ ನಾಲ್ಕೈದು ಜನ ಹೇಳಿದ್ವಿ. ಆದ್ರೆ ಈ ಟ್ರೆಕ್ಕಿಂಗ್ ಅರೇಂಜ್ ಮಾಡಿದ್ದ ನವೀನ್ ಗೆ ಯಾಕೋ ಮನ್ಸಿರ್ಲಿಲ್ಲ.
"ಇಲ್ಲೀವರೆಗೂ ಬಂದು ವಾಪಸ್ ಹೋಗ್ಬೇಕಾ? ಬನ್ರೋ ಬೆಟ್ಟ ಹತ್ತೋಣ. ಏನೂ ಆಗಲ್ಲ" ಅಂದ. ಮಳೆ ಬಂದರೆ ಬೆಟ್ಟದಲ್ಲಿ ನಡೆಯಲು ಜಾರಬಹುದೇನೋ ಅನ್ನೋ ಯೋಚನೆ ಬಂತು. ಆದ್ರೆ ವಾಪಸ್ ಹೋಗೋಣ ಅನ್ನೋವ್ರ ಸಂಖ್ಯೆ ಕಡಿಮೆಯಾಗಿ ಬೆಟ್ಟದ ಕಡೆಗೆ ಮುಂದುವರಿದೆವು.
ಹಾಗೇ ಹತ್ತು ನಿಮಿಷ ನಡೆದಿರಬಹುದಷ್ಟೇ. ಬೆಟ್ಟದವರೆಗಿನ ದಾರಿ ಮುಗಿದಿತ್ತು. ಇನ್ನೇನಿದ್ದರೂ ಪೊದೆ/ಬಂಡೆಗಳ ಮಧ್ಯೆ ಸಾಗಿ ಬೆಟ್ಟದ ತುದಿ ತಲುಪುವ, ಒಮ್ಮೆ ಒಬ್ಬರು ಮಾತ್ರ ಹೋಗಬಹುದಾದ ಕಾಲುದಾರಿ.  ನಾವ್ಯಾರೂ ಆ ಕಾಲುದಾರಿಯಲ್ಲಿ ಮೂವತ್ತು ಹೆಜ್ಜೆಯೂ ಇಟ್ಟಿರಲಿಲ್ಲ ಸಣ್ಣ ಮಳೆ ಹನಿಗಳು ತಲೆಯ ಮೇಲೆ ಬೀಳಲಾರಂಭಿಸಿತು.
"ಈ ಮಳೇಲಿ ಬೆಟ್ಟ ಹತ್ತೋದ್ರಲ್ಲೂ ಒಂಥರಾ ಮಜಾ ಬರುತ್ತೆ ಕಣ್ರೋ" ಅಂದ ನನ್ನ ಮುಂದೆ ಇದ್ದ ಯಾರೋ ಒಬ್ಬ!
ಹಾಗೇ ಅದೇ ಮಳೇಲಿ ಆ ಬೆಟ್ಟಾನ ಒಂದು ಕಿ.ಮೀ. ಅಷ್ಟು ಹತ್ತಿದ್ದೆವೇನೋ, ನಮ್ಮ ಎದುರಿನಲ್ಲಿದ್ದವನು ಯಾರೋ  "ಅಯ್ಯೋ..! ಬಿದ್ದೇ…" ಅಂತ ಕೂಗಿದಂತಾಯಿತು. ಯಾರಿಗೋ ಏನೋ ಆಯ್ತು ಅಂತ ನಾನು ಅಲ್ಲೇ ನಿಂತೆ. ನಾನು ಹಾಗೆ ನಿಂತಿದ್ದೇ ತಪ್ಪಾಯಿತೇನೋ! ನಾನು ಹಾಗೆ ನಿಲ್ಲುವುದಕ್ಕೂ ನನ್ನ ಮುಂದಿದ್ದವ್ನು ಆಯತಪ್ಪಿ ನನ್ನ ಮೇಲೆ ಬೀಳುವುದಕ್ಕೂ ಸರಿಯಾಯಿತು. ಸುತ್ತಲೂ ಹಿಡ್ಕೊಳ್ಳೋಕೆ ಏನೂ ಇಲ್ದೇ ನನಗೂ ನಿಲ್ಲೋಕೆ ಆಗ್ಲಿಲ್ಲ. ನಾನು ಬಿದ್ದವನೇ ಕಾಲುದಾರಿಯ ಎಡಬದಿಗಿದ್ದ ಇಳಿಜಾರಿನಲ್ಲಿ ಡ್ರಮ್ಮಿನ ಹಾಗೆ ಉರುಳಿ ಹೋದೆ. ಹಾಗೇ ಅದೆಷ್ಟು ದೂರ ಉರುಳಿದೆನೋ? ತಲೆಗೆ ಕಲ್ಲೋ, ಮರವೋ ಜೋರಾಗಿ ತಾಗಿತು. "ಅಮ್ಮಾ…" ಅಂತ ಜೋರಾಗಿ ಕೂಗಿದೆ. ಕಣ್ಣು ಬಿಟ್ಟು ನೋಡಿದ್ರೆ ಟಿ.ಟಿ. ಇನ್ನೂ ಹೋಗ್ತಾನೇ ಇದೆ! ನಾನಿನ್ನೂ ಟಿ.ಟಿ.ಯಲ್ಲೇ ಕೂತಿದ್ದೆ.
ಇಷ್ಟು ಹೊತ್ತೂ ನಾ ಕಂಡಿದ್ದು ಕನಸು ಅಂತ ಗೊತ್ತಾಯ್ತು. ನನ್ನ ಕನಸನ್ನು ಕೇಳಿದ್ರೆ ಎಲ್ರೂ ನಗ್ತಾರೆ ಅನ್ಕೋತಾ ಪಕ್ಕದಲ್ಲಿದ್ದ ನರೇಂದ್ರನನ್ನ ನೋಡಿದೆ. ಅವನ ಮುಖಭಾವ ಯಾಕೋ ವಿಚಿತ್ರವಾಗಿತ್ತು!
"ತಲೆ ತುಂಬಾ ನೋವಾಗ್ತಾ ಇದ್ಯನೋ? ನೀರೇನಾದ್ರೂ ಕುಡಿತೀಯಾ?" ಅಂತ ಅವನ ಕೈಯಲ್ಲಿದ್ದ ನೀರಿನ ಬಾಟ್ಲಿ ಕೊಟ್ಟ.
"ಬೇಡ" ಅಂತಷ್ಟೇ ಹೇಳಿ ನನ್ನ ಹಣೆ ಮುಟ್ಟಿ ಕೈ ನೋಡಿಕೊಂಡೆ.
ಅಂತೂ ನಾನು ಚಂದಗಿರಿ ಬೆಟ್ಟಕ್ಕೆ ಹೋಗಿ ಸೂರ್ಯೋದಯದ ಕೆಂಪು ಬಣ್ಣವನ್ನ ನೋಡಿದ್ದೆ.
ನನ್ನ ಕೈಗಂಟಿರುವ ರಕ್ತದ ರೂಪದಲ್ಲಿ!
ನಿಮ್ಮವ
ಪ್ರಜ್ವಲ್ ಕುಮಾರ್
 
ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

6 Comments
Oldest
Newest Most Voted
Inline Feedbacks
View all comments
gaviswamy
11 years ago

ಸಾಹಸಮಯ ಸ್ವಪ್ನ!
sunrise ಫೋಟೋ super!

Prajwal Kumar
11 years ago
Reply to  gaviswamy

Thank you 🙂

Prajwal Kumar
11 years ago

 
"ಈ ಕಥೆಯಲ್ಲಿ ಬರುವ ಎಲ್ಲಾ ಪಾತ್ರ, ಸನ್ನಿವೇಷಗಳು ಮತ್ತು ಜಾಗಗಳು ಕೇವಲ ಕಾಲ್ಪನಿಕ" ಅಂತ ಹಾಕಬೇಕಿತ್ತು!
ಮರೆತುಬಿಟ್ಟೆ!
ಮತ್ತು ಕೊನೆಯಲ್ಲಿ ನಡೆದಿದ್ದೆಲ್ಲಾ ಕನಸಲ್ಲ, ನಿಜ ಅನ್ನೋದನ್ನ ಇನ್ನೂ ಸ್ಪಷ್ಟವಾಗಿ ಹೇಳಬಹುದಿತ್ತೇನೋ ಅಂತ ಈಗ ಅನ್ನಿಸ್ತಿದೆ! 
ಓದಿದವರಿಗೆಲ್ಲಾ ಧನ್ಯವಾದಗಳು 🙂

trackback

[…] ಮೊದಲ ಸೂರ್ಯೋದಯ May 10, 2013June 19, 2015Prajwal Kumar Leave a comment ಏಪ್ರಿಲ್  ತಿಂಗಳ ಪಂಜು ಸಂಚಿಕೆಯಲ್ಲಿ ಪ್ರಕಟವಾದ ನನ್ನ ಕಾಲ್ಪನಿಕ ಕಥೆ https://www.panjumagazine.com/?p=2100 […]

trackback

[…] ಮೊದಲ ಸೂರ್ಯೋದಯ Posted on May 10, 2013March 9, 2016 by admin ಏಪ್ರಿಲ್  ತಿಂಗಳ ಪಂಜು ಸಂಚಿಕೆಯಲ್ಲಿ ಪ್ರಕಟವಾದ ನನ್ನ ಕಾಲ್ಪನಿಕ ಕಥೆ https://www.panjumagazine.com/?p=2100 […]

trackback

[…] ಮೊದಲ ಸೂರ್ಯೋದಯ Posted by ಪ್ರಜ್ವಲ್ ಕುಮಾರ್ | Friday, 10 May, 2013 | No Comments ಏಪ್ರಿಲ್  ತಿಂಗಳ ಪಂಜು ಸಂಚಿಕೆಯಲ್ಲಿ ಪ್ರಕಟವಾದ ನನ್ನ ಕಾಲ್ಪನಿಕ ಕಥೆ https://www.panjumagazine.com/?p=2100 […]

6
0
Would love your thoughts, please comment.x
()
x