ಮೊದಲ ಸಲಾ: ಅನಿತಾ ನರೇಶ್ ಮಂಚಿ

 ಏನೇ ಹೇಳಿ.. ಜೀವನದಲ್ಲಿ  ಮೊದಲ ಸಲ ಎನ್ನುವುದು ಪ್ರತಿಯೊಬ್ಬನ ಮನಸ್ಸಿನಲ್ಲಿಯೂ ವಿಶೇಷವಾಗಿಯೇ ನೆನಪಿರುತ್ತದೆ. ಮೊದಲ ಸಲ ಶಾಲೆಯ ಮೆಟ್ಟಿಲು ಹತ್ತಿದ್ದು, ಮೊದಲ ಸಲ ತಪ್ಪು ಮಾಡಿ ಶಿಕ್ಷೆ ಅನುಭವಿಸಿದ್ದು, ಮೊದಲ ಸಲ ಯಾರಿಗೂ ಕಾಣದಂತೆ ಅಮ್ಮನ ಸೀರೆ ಉಟ್ಟದ್ದು, ಹುಡುಗರಾದರೆ ಸೊಂಟದಿಂದ ಜಾರುವ ಭಯವಿದ್ದರೂ ಅಪ್ಪನ ಪಂಚೆಯನ್ನುಟ್ಟು ದೊಡ್ಡವನಾದಂತೆ ಮೆರೆದದ್ದು, ಇಷ್ಟೇ ಏಕೆ ಮೊದಲ ಸಲ ಯಾರೊಡನೆಯೋ ಕಣ್ಣೋಟ ಕೂಡಿದ್ದು, ಕನಸಾಗಿ ಕಾಡಿದ್ದು.. ಯಾವುದನ್ನೇ ಹೇಳಲಿ ಮೊದಲ ಸಲ ಎನ್ನುವುದು ನಮಗೆ ನೆನಪಾದಂತೆ ಮನಸ್ಸಿಗೆ ಮುದ ನೀಡುವುದಂತೂ ಸತ್ಯ.

ಅದರಲ್ಲೂ ರಾಜಕೀಯ ಎಂದರೆ ಏನು ಎಂದೇ ಗೊತ್ತಿಲ್ಲದ ಕಾಲದಲ್ಲಿ ಮೊದಲ  ಸಲ ಪಾರ್ಟಿ ಭಾಷಣ  ಕೇಳಿದ್ದಂತೂ ಎಂದೂ ಮರೆಯದ ನೆನಪು. 

 ಸ್ವಲ್ಪ ದಿನಗಳ ಮೊದಲೇ ಶುರು ಆಗಿತ್ತು ಯುದ್ಧ ತಯಾರಿ.. ಅವರ ವಿರುದ್ಧ ಇವರು ಕತ್ತಿ ಮಸೆಯುವುದು , ಇವರ ವಿರುದ್ಧ ಅವರು ಏನೋ ಹೇಳುವುದು.. ಇದೆಲ್ಲ ಐದು ವರ್ಷಕ್ಕೊಮ್ಮೆ ಮಾಮೂಲಿಯಾಗಿ ಬರುವ ಓಟಿನ ಬೇಟೆಯ ಕಾದಾಟ ಎಂದು ನನಗೂ ತಿಳಿದಿತ್ತು. ಯಾಕೆಂದರೆ ಆಗಷ್ಟೇ ಚುನಾವಣೆಯ ದಿನ ಹೊರ ಬಿದ್ದಿತ್ತು.  ಭಾಷಣಗಳು ಹತ್ತಿರ ಹತ್ತಿರದ ಊರುಗಳಲ್ಲಿ ಏರ್ಪಾಡಾಗುತ್ತಿದ್ದವು. ಇಲ್ಲಿ ಭಾಷಣ ಕೇಳಿದವರನ್ನೇ ಅಲ್ಲಿಗೂ ಒಯ್ಯಬೇಕಾಗಿರುವುದರಿಂದ ಅದಕ್ಕೆಂದೇ ಕೆಲವು  ಬಾಡಿಗೆ ಲಾರಿಗಳು ಇದ್ದವು.ನಾವೇನು ಲಾರಿಗಳಲ್ಲಿ ಊರಿಂದೂರಿಗೆ ಯಾತ್ರೆ ಮಾಡುತ್ತಿರಲಿಲ್ಲವಾದರೂ ನಮ್ಮ ಮೆಸ್ಸಿನ ಆಂಟಿಯ ದೆಸೆಯಿಂದ ಅನಿವಾರ್ಯವಾಗಿ ಕೆಲವು ಭಾಷಣಗಳನ್ನು ನಮ್ಮ ಮೆಸ್ಸಿನ ಹುಡುಗಿಯರು ಕೇಳಲೇ ಬೇಕಾಗಿತ್ತು.ಆಂಟಿಗೆ ಈ ಚುನಾವಣಾ ಭಾಷಣಗಳನ್ನು ಕೇಳುವುದೆಂದರೆ ಎಲ್ಲಿಲ್ಲದ ಉತ್ಸಾಹ.  ಆ ದಿನ ಅವರ ಭಾಷಣ ಮೇಟ್ ಹುಡುಗಿ ಊರಿಗೆ ಹೋಗಿದ್ದಳು. ಉಳಿದವರೆಲ್ಲಾ ಒಂದೊಂದು ಕಾರಣ ಹೇಳಿ ತಪ್ಪಿಸಿಕೊಂಡರು. ನಾನು ಕಾರಣಗಳನ್ನು ಹುಡುಕುವ ಮೊದಲೇ ಆಂಟಿ ’ಇವ್ಳು ಒಳ್ಳೇ ಹುಡುಗಿ. ನಾನು ಹೇಳಿದ ಹಾಗೇ ಕೇಳ್ತಾಳೆ’ ಅಂತ ಸರ್ಟಿಫಿಕೇಟ್ ಕೊಟ್ಟು ನನ್ನನ್ನು ಹೊರಡಿಸಿಯೇ ಬಿಟ್ಟರು. ’ಕಿವಿಗೆ ಹತ್ತಿ ತುರುಕಿಕೊಳ್ಳೇ’ ಎಂದು ನನ್ನ ಆತ್ಮೀಯ ಗೆಳತಿ  ಗುಟ್ಟಾಗಿ ಕೊಟ್ಟ ಸಲಹೆಯನ್ನು ತಿರಸ್ಕರಿಸಿ ರಾಜಾರೋಷವಾಗಿ ಹೊರಟೇ ಬಿಟ್ಟೆ. ಆದರೂ ಒಳಗೊಳಗೆ ಭಾಷಣ ಸಭೆಗಳಲ್ಲಿ ಆಗುವ ಮಾರಾಮಾರಿಯನ್ನು ಕೇಳಿ ತಿಳಿದಿದ್ದರಿಂದ ಓಡಲು ಅನುಕೂಲವಾಗುವಂತಹಾ ಚಪ್ಪಲಿಗಳನ್ನು ಯಾರ ಸಲಹೆಯಿಲ್ಲದೇ ನಾನೇ ನಾನಾಗಿ ಧರಿಸಿಕೊಂಡಿದ್ದೆ. 

ಭಾಷಣದ ಸ್ಥಳದಲ್ಲಿ ಇನ್ನೂ ಸ್ಟೇಜಿನ ವ್ಯವಸ್ಥೆ ಆಗುತ್ತಾ ಇತ್ತಷ್ಟೇ. ಬಂದವರು ಎದ್ದು ಹೋಗದೇ ಇರಲಿ ಎಂದು ಮೈಕ್‌ನಲ್ಲಿ ’ಕಾರ್ಯಕ್ರಮ ಮುಗಿದ ಬಳಿಕ ಪಾನಕದ ವ್ಯವಸ್ಥೆ ಇದೆ. ಎಲ್ಲರೂ ಸ್ವೀಕರಿಸಿಯೇ ಹೋಗಬೇಕಾಗಿ ವಿನಂತಿ’ ಎಂದು ರೆಕಾರ್ಡರಿನಲ್ಲಿ ಪ್ಲೇ ಆಗುತ್ತಿದ್ದ ಸಿನಿಮಾ ಹಾಡುಗಳನ್ನು ನಡು ನಡುವೆ ನಿಲ್ಲಿಸಿ  ಜೋರಾಗಿ ಹೇಳುತ್ತಿದ್ದರು. ಆಂಟಿಯ ಮುಖ ಎದುರಿನ ಸೀಟ್ ಖಾಲಿ ಇರುವುದಕ್ಕಾಗಿ ಅರಳಿದರೆ, ನಾನು ಗಲಾಟೆ ನಡೆದರೆ ಹೊರಗೋಡುವ ಜಾಗವನ್ನು ಹುಡುಕುತ್ತಾ ಇದ್ದೆ.ಆದರೆ ಸದ್ಯಕ್ಕೆ ಗಲಾಟೆ ಮಾಡಬೇಕಿದ್ದರೆ ನಾನು ಮತ್ತು ಆಂಟಿಯೇ ಮಾಡಬೇಕಿತ್ತು. ನಮ್ಮಿಬ್ಬರ ಹೊರತು ಕುರ್ಚಿ ಅಲಂಕರಿಸಿದವರು ಯಾರೂ ಅಲ್ಲಿರಲಿಲ್ಲ. 

ಅಂತೂ ರೆಕಾರ್ಡರಿನಲ್ಲಿದ್ದ ಸಿನೆಮಾ ಹಾಡುಗಳೆಲ್ಲಾ ನಾಲ್ಕು ನಾಲ್ಕು ಸಲ ಕೇಳಿ ಬಾಯಿಪಾಠ ಆಗುವ ಹೊತ್ತಿನಲ್ಲಿ ದೂರದಲ್ಲೇ ಜೈಕಾರವೂ, ದೂಳು ಹಾರಿಸಿಕೊಂಡು ಬರುತ್ತಿರುವ ಒಂದು ಜೀಪು, ಅದರ ಹಿಂದಿನಿಂದ ಕನ್ನಡಿಯಲ್ಲಿ ಡ್ರೈವರಿಗೆ ಮಾತ್ರ ಮಾರ್ಗ ಕಾಣುವಷ್ಟು ಜಾಗ ಬಿಟ್ಟು ಸುತ್ತೆಲ್ಲ ಪೋಸ್ಟರ್ ಹಚ್ಚಿದ ಲಾರಿಯೂ  ಕಾಣಿಸಿದವು. ಅಂತೂ ಇಂತೂ ಮತ್ತರ್ಧ ಗಂಟೆಯಲ್ಲಿ ನಾಲ್ಕು ಮತ್ತೊಂದು ಹೀಗೆ ಐದು ಜನ  ವೇದಿಕೆಯನ್ನಲಂಕರಿಸಿದರು. 

ನನಗೆ ಇವರಲ್ಲಿ ಓಟು ಹಾಕಬೇಕಾಗಿದು ಯಾರಿಗೆ ಎಂದು ಅರ್ಥವಾಗಿರಲಿಲ್ಲ. ಹೊರಗಡೆ ಎರಡು ಕೈಗಳನ್ನು ಜೋಡಿಸಿ ನಿಂದ  ಯುವಕನಾದ ಅಭ್ಯರ್ಥಿಯ ದೊಡ್ಡದೊಂದು ಫೊಟೋ ಹಾಕಿದ್ದರೂ ಸ್ಟೇಜಿನ ಮೇಲಿರುವ ಯಾವ ಮುಖಕ್ಕೂ ಆ ಹೋಲಿಕೆ ಕಾಣಲಿಲ್ಲ. ಅದನ್ನೆ ಆಂಟಿಯಲ್ಲಿ ಕೇಳುವ ಎಂದು ಅವರ ಕಡೆಗೆ ಬಗ್ಗಿದರೆ ಅವರಾಗಲೇ ಹೊರ ಪ್ರಪಂಚ ಮರೆತು ಸ್ಟೇಜಿನ ಕಡೆಗೆ ಕಣ್ಣು ನೆಟ್ಟು ಅಲ್ಲಿಂದ ಕೇಳುವ ಧ್ವನಿಗಾಗಿ ಕಾಯುತ್ತಿದ್ದರು.

’ಪ್ರೀತಿಯ ಅಣ್ಣ ತಮ್ಮಂದಿರೇ, ಅಕ್ಕ ತಂಗಿಯರೇ,ಬಂಧು ಬಾಂಧವರೇ, ಸ್ನೇಹಿತರೇ,’ ಎಂದು ನಿಲ್ಲಿಸಿ ಮತ್ತೆ ನೆನಪಿಸಿಕೊಳ್ಳುತ್ತಾ ’ತಂದೆ ತಾಯಂದಿರೇ.. ನಾನೀಗ ಏನು ಹೇಳಲಿಕ್ಕೆ ಇಲ್ಲಿ ಬಂದು ನಿಂತಿದ್ದೀನಿ ಅನ್ನೋದು ನಿಮಗೆಲ್ಲಾ ಸ್ಪಷ್ಟವಾಗಿ ತಿಳಿದಿದೆ. ಅದನ್ನು ಮತ್ತೆ ಮತ್ತೆ ಹೇಳಿ ನಿಮ್ಮ ಸಮಯ ಹಾಳು ಮಾಡುವುದಿಲ್ಲ. ಆದರೂ ನಿಮ್ಮ ಸಮಾಧಾನಕ್ಕೆ ನಾನೊಂದೆರಡು ಮಾತು ಹೇಳಲೇಬೇಕಿದೆ’ ಎಂದು ಆ ಒಂದೆರಡು ಮಾತನ್ನು ಆಡಲು ಮುಕ್ಕಾಲು ಗಂಟೆ ವ್ಯಯಿಸಿದರು. 

ಇವರ ಭಾಷಣ ಮುಗಿದದ್ದೇ ಮತ್ತೊಬ್ಬ ವಯಸ್ಸಾದ ವ್ಯಕ್ತಿ ಕುಳಿತಲ್ಲಿಂದ ಏಳಲೇ ಸ್ವಲ್ಪ ಸಮಯ ತೆಗೆದುಕೊಂಡರು. ಸಹಾಯಕರ ಸಹಾಯದಿಂದ ಹೇಗೋ ಅವರು  ಮೇಲಕ್ಕೆದ್ದಂತೆ ಜೋರಾಗಿ ಜಯಕಾರವೂ, ಹೂಗುಚ್ಚ ಮಾಲೆಗಳ ಅರ್ಪಣೆಯೂ ನಡೆಯಿತು. ನನ್ನ ಇನ್ನೊಂದು ಪಕ್ಕದಲ್ಲಿ ಕುಳಿತ ಮಹಿಳೆಯೋರ್ವಳ ಪಕ್ಕೆಗೆ ತಿವಿದು ’ಇವರು ಯಾರು ?’ ಎಂದು ಕೇಳಿದೆ. ಆಕೆ ನನ್ನಂತಹ ಮೂರ್ಖಳನ್ನು ಮೊದ ಬಾರಿ ನೋಡುತ್ತಿರುವ ಮುಖಭಾವ ತೋರಿ ’ ಅಷ್ಟೂ ಗೊತ್ತಿಲ್ವಾ.. ಇವರೇ ನಮ್ಮ ಅಭ್ಯರ್ಥಿ.. ಏನು ಮಕ್ಕಳೋ ಏನೋ? ಕಾಲೇಜಿಗೆ ಹೋಗೋದು ದಂಡಕ್ಕೆ’ ಅಂತೆಲ್ಲ ಗೊಣ ಗೊಣ ಹಚ್ಚಿಕೊಂಡರು. ನನಗೂ ಸಿಟ್ಟು ಬಂತು.  ’ಮತ್ತೆಂತ ಕರ್ಮಕ್ಕೆ ಹೊರಗೆ ಅವರ ಮೊಮ್ಮಗನಂತಿರುವವರ  ಫೊಟೋ ಹಾಕಿದ್ದು’ ಅಂತ ದಬಾಯಿಸಿದೆ. ’ಅದು ಅವರ ಲಕ್ಕಿ ಫೊಟೋ ಅಂತೆ. ಇಷ್ಟು ವರ್ಷದಿಂದ ಅದೇ ಫೊಟೋವನ್ನೆ ಅವರು ನೀಡುತ್ತಾ ಬಂದಿದ್ದರಂತೆ.. ಈ ಸಲ ಅವರು ಕೊನೆಯದಾಗಿ ಓಟಿಗೆ ನಿಲ್ಲುವುದು ಅಂತ ಮೊದಲೇ ಪ್ರತಿಜ್ಞೆ ಮಾಡಿದ್ದಾರೆ ಗೊತ್ತಾ’ ಎಂದು ನನ್ನನ್ನೇ ಕೇಳಿದರು. ’ಹೌದಾ ಹಾಗಿದ್ರೆ ಇವರು ಎಷ್ಟು ಸಲ ಗೆದ್ದಿದ್ದಾರೆ’ ಎಂದೆ. ಆಕೆ ಸ್ವಲ್ಪ ಸಣ್ಣ ಸ್ವರದಲ್ಲಿ ’ಒಂದು ಸಲವೂ ಗೆಲ್ಲಲಿಲ್ಲ.. ಆದ್ರೆ ಈ ಸಲ ಗೆದ್ದೇ ಗೆಲ್ತಾರೆ.. ಯಾಕೆಂದ್ರೆ ನಿಮ್ಮಂತ ಯೂತ್ ಅವ್ರಿಗೆ ಸಪೋರ್ಟ್ ಮಾಡ್ತೀರಲ್ವಾ’ ಅಂದರು. ಎದ್ದು ನಿಲ್ಲಲೇ ಕಷ್ಟ ಪಡುವ ಇವರು ಗೆದ್ದು ಮಾಡುವುದೇನು ಎಂದೇ ಅರ್ಥ ಆಗಲಿಲ್ಲ. ಆದರೂ ಅವರ ಕಟ್ಟಾ ಅಭಿಮಾನಿಯಾದ ಆ ಮಹಿಳೆಯ ಹತ್ತಿರ ಹೆಚ್ಚು ಮಾತನಾಡಲು ಭಯವಾಯಿತು. ಜೊತೆಗೆ ಪಕ್ಕದಲ್ಲಿ ಕುಳಿತ ಆಂಟೀ ಬೇರೆ ಶಾಲೆಯ ಟೀಚರ್ ಗಳಂತೆ ಗಲಾಟೆ ಮಾಡ್ಬೇಡ. ಸುಮ್ನೆ ಕೂತುಕೋ ಇವರ ಭಾಷಣ ತುಂಬಾ ಚೆನ್ನಾಗಿರುತ್ತೆ ಗಮನವಿಟ್ಟು ಕೇಳು ಅಂತಾ ಕಣ್ಣು ದೊಡ್ಡದು ಮಾಡಿ ಹೇಳಿದರು. 

ಆಗಲೇ ಸಮಸ್ತ ಜನರನ್ನೂ ಸಂಭೋದಿಸಿ, ನಮಸ್ಕಾರ ಹೇಳಿ ಎಂದಿನಂತೇ  ಎದುರು ಪಾರ್ಟಿಯವರನ್ನು ಬಯ್ಯಲು ಶುರು ಆಗಿತ್ತು. ಬಂಧುಗಳೇ ನೋಡಿ .. ನಾವಿಲ್ಲಿ ಈ ವೇದಿಕೆಯ ಮೇಲೆ ಐವರಿದ್ದೇವೆ. ಅವರ ವೇದಿಕೆಯಲ್ಲಿ ಜನ ನೂರು ಇರಬಹುದು. ಆದರೆ ನಾವು ರಾಮಾಯಣದ ಪಾಂಡವರ ಹಾಗೇ ಆ ನೂರು ಕೌರವರನ್ನು ಸೋಲಿಸಿ ಮಣ್ಣು ಮುಕ್ಕಿಸಬಲ್ಲೆವು ಎಂದರು. ನಾನು ರಾಮಾಯಣದಲ್ಲಿ ಬಂದ ಪಾಂಡವ ಕೌರವರ ಬಗ್ಗೆ ಚಿಂತೆ ಮಾಡುತ್ತಿರುವಾಗ ಲಾರಿಯಲ್ಲಿ ಅವರು ಕರೆತಂದ ಜನಗಳು ಈ ಮಾತನ್ನು ಕೇಳಿ ವಿಸಿಲ್ ಹೊಡೆದು ಚಪ್ಪಾಳೆ ತಟ್ಟಿ ಹರ್ಷೋದ್ಗಾರ ಮಾಡಿದರು. ಅವರು ಮಾತು ಮುಂದುವರಿಸುತ್ತಾ  ಇಷ್ಟರವರೆಗೆ ಅವರ ಸರ್ಕಾರ ನೋಡಿದ್ದೀರಿ ತಾನೇ.. ಹೆಂಗಸರಿಗೆ ಭಯವಿಲ್ಲದ ಬದುಕೆಂಬುದುಂಟಾ ಇಲ್ಲಿ.. ಯಾವಾಗ ನೋಡಿದರು ಈ ರಾವಣರು ದ್ರೌಪದಿಯ ಸೀರೆಯನ್ನು ಸೆಳೆಯುತ್ತಲೇ ಇರುತ್ತಾರೆ. ಇವರ ತೊಡೆ ಮುರಿಯುವ ರಾಮ ನಾನು ಎಂದರು. ಮತ್ತೊಮ್ಮೆ ಹರ್ಷದ ಕೂಗೆದ್ದಿತು. ನಾನು ಆಂಟಿಯ ಕಡೆ ನೋಡಿದರೆ ಅವರು ಮುಖ ತಗ್ಗಿಸುತ್ತಾ  ಇವರ ಕರ್ಮ.. ಪ್ರಾಯ ಆಗಿ ಎಂತೆಂತದೋ ಮಾತಾಡ್ತಾರೆ ಮಾರಾಯ್ತಿ ನಾವು ಹೋಗುವ.. ಸಾಕು ಈ ಕರ್ಮದ ಭಾಷಣ.. ಎಂದು ನನ್ನನ್ನು ಏಳಲು ಸನ್ನೆ ಮಾಡಿದರು. ನಾನೋ ಈ ಹಾಸ್ಯ ಭಾಷಣವನ್ನು ಚೆನ್ನಾಗಿ ಎಂಜಾಯ್ ಮಾಡುತ್ತಾ ಇದ್ದುದರಿಂದ ’ಕೂತ್ಕೊಳ್ಳಿ ಆಂಟೀ .. ಇದು  ಮುಗೀಲಿ ಚೆನ್ನಾಗಿದೆ   ಅಂದೆ. ಆಂಟೀ ನನ್ನ ಕಡೆ ಸಿಟ್ಟಿನಿಂದ ನೋಡಿ ಏನೂ ಬೇಡ.. ಹೋಗುವ ನಡಿ.. ನಾಳೆ ಬೇರೆ ನಿಂಗೆ ಕ್ಲಾಸ್ ಇಲ್ವಾ.. ಏನಾದ್ರು ಕಾಲೇಜಿನ ಕೆಲಸ ಆದ್ರೂ ಮಾಡು.. ಸಾಕು ಈ ಅಪದ್ಧ ಕೇಳಿದ್ದು.. ಎಂದು ನನ್ನ ಕೈ ಹಿಡಿದೆಳೆದು ಹೊರಟೇ ಬಿಟ್ಟರು. ನಿಮಗೂ ಈಗ ನಿಮ್ಮ ಮೊದಲ ಸಲದ ಇಂತಹ ಹಲವಾರು  ಅನುಭವಗಳು ನೆನಪಾಗಿ ಮೊಗದಲ್ಲಿ ಮಂದಹಾಸ ಮೂಡುವಂತಾದರೆ ಆ ನೆನಪುಗಳಿಗೆಲ್ಲಾ ಸಲಾಂ.

******

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

1 Comment
Oldest
Newest Most Voted
Inline Feedbacks
View all comments
Utham Danihalliw
10 years ago

Nanagu e anubavavagidhe nimma lekana odhi nenapaythu estavaythu lekana

1
0
Would love your thoughts, please comment.x
()
x