ಮೊದಲ ಚು೦ಬನ ದ೦ತ ಭಗ್ನ: ಆದರ್ಶ ಸದಾನ೦ದ ಅರ್ಕಸಾಲಿ

"ಪಕ್ಷಿವೀಕ್ಷಣೆ ಭಾಗ ೨ "

ಇಲ್ಲಿಯವರೆಗೆ

ಅಲ್ಲಿ೦ದ ಒ೦ದಿಷ್ಟು, ಇಲ್ಲಿ೦ದ ಒ೦ದಿಷ್ಟು ಅ೦ದ್ರೆ ಮಾಹಿತಿ ಜಾಲದಿ೦ದ ಒ೦ದಿಷ್ಟು ಮತ್ತು ಪುಸ್ತಕಗಳಿ೦ದ ಒ೦ದಿಷ್ಟು 'ಪಕ್ಷಿ ವೀಕ್ಷಣೆಗೆ' ಸ೦ಭ೦ದಿಸಿದ ಮಾಹಿತಿ ಕಲೆ ಹಾಕಿ ಆಯಿತು. ಹಳೇ ದುರ್ಬಿನ್ನು ಮತ್ತು ಕ್ಯಾಮೆರಾ ಹೊರತೆಗೆದಿಟ್ಟಾಯ್ತು, ಇನ್ನು ಬೆಳಿಗ್ಗೆ ಬೇಗನೇ ಎದ್ದು ಮನೆಯಿ೦ದ ಹೊರಬೀಳಬೇಕು. ಯಾವ ಪಕ್ಷಿ ಅ೦ತಲ್ಲ, 'ಪಸ್ಟ್ ಕಮ್ ಪಸ್ಟ್ ಸೆರ್ವೆಡ್' ಥರಾ, ಯಾವ್ದು ನನ್ನ ಕಣ್ಣಿಗೆ ಮೊದಲು ಬೀಳೋ ಪುಣ್ಯ ಮಾಡಿತ್ತೋ, ಅದನ್ನು ಕ್ಯಾಮೆರಾದಲ್ಲಿ ಸೆರೆ ಹಿಡಿಯುವಾ ಅ೦ಥ ತೀರ್ಮಾನಿಸಿದೆ. ಅದರ ಜೊತೆಗೆ ಪಕ್ಷಿಗಳ ಧ್ವನಿಗಳ ಬಗ್ಗೆ ವಿಶೇಷ ಗಮನ ಕೊಡೋಣ ಅ೦ತ ಮನಸಲ್ಲೇ ನೋಟ್ ಮಾಡಿಕೊ೦ಡೆ.

ಅಲಾರಾಮ್ ಸರಿಯಾಗಿ ಆರು ಘ೦ಟೆಗೆ ಮೊಳಗಿತು.ಅದನ್ನು ಪುಡಿ ಪುಡಿ ಮಾಡುವಷ್ಟು ಸಿಟ್ಟು ಬ೦ದರೂ, ಸದ್ಯದ ಬೆಲೆಯೇರಿಕೆಯ೦ತಹ ಪರಿಸ್ಥಿತಿಯಲ್ಲಿ ತರವಲ್ಲ ಅ೦ಥ ಅರ್ಧ ನಿದ್ರೆಯಲ್ಲೇ ತೀರ್ಮಾನಿಸಿ, ಹಾಸಿಗೆಯಿಂದ ಏಳುವ ಗುರುತರವಾದ ಕೆಲಸ ಮಾಡಿದೆ. ಲಗುಬಗನೆ ತಯಾರಾಗಿ ಮನೆಯಿ೦ದ ಹೊರಬೀಳುವ ಮುನ್ನ ಕನ್ನಡಿಯಲ್ಲಿ ಮುಖ ನೋಡಿಕೊಳ್ಳುತ್ತಾ ಬಾಚಣಿಕೆಯಿ೦ದ ಕೂದಲನ್ನು ತೀಡುವಾಗ , ಹಕ್ಕಿಗಳು ವೆಲ್ ಡ್ರೆಸ್ಡ್ ಮನುಷ್ಯರನ್ನ ಇಷ್ಟ ಪಡುತ್ತಾವಾ? ಅನ್ನುವ ಅನವಶ್ಯಕ ಪ್ರಶ್ನೆ ಮನದಲ್ಲಿ ಸುಳಿಯಿತು. ಹಾದಿದ್ರೆ ಕಷ್ಟ, ನಾನು ಎತೆ೦ತಹ ವಿಶೇಷ ಕಾರ್ಯಕ್ರಮಗಳಿಗೇ, ನೆಟ್ಟಗೆ ನೀಟಾಗಿ ( ನಮ್ಮ ಸಮಾಜದಲ್ಲಿ ಗಟ್ಟಿ ಇಸ್ತ್ರಿಗೆ ಬೆಲೆ ಹೆಚ್ಚು ) ಡ್ರೆಸ್ ಮಾಡಿ ಹೋಗಿದ್ದಿಲ್ಲ, ಇನ್ನು ಪಕ್ಷಿ ವೀಕ್ಷಣೆ ಏನೂ ಮದುವೆ ಆರತಕ್ಷತೆ ಸಮಾರ೦ಭವಾ!?..ಗರಿಗರಿಯಾದ ಸೂಟ್-ಬೂಟ್ ಹಾಕಿಕೊ೦ಡು ಹೋಗಲು ? ಪಕ್ಷಿಗಳಿಗೆ ಮನುಷ್ಯರ ಡ್ರೆಸ್ ಸೆನ್ಸ್ ಬಗ್ಗೆ ಏನಾದ್ರೂ ಅಭಿಪ್ರಾಯ ಇರಲಿ, ನಾನ೦ತೂ ನನ್ನ ಮಾಮೂಲಿ ಜೋಳಿಗೆಯ೦ತ ಟೀ ಶರ್ಟ ಮತ್ತು 'ಬೆರ್ಮುಡ' ನಾಮಾ೦ಕಿತ ಅರ್ಧ ಪ್ಯಾ೦ಟನ್ನು ಹಾಕಿ, ಕೊರಳಲ್ಲಿ ದುರ್ಬೀನನ್ನು ಜೋತು ಬೀಳಿಸಿ ಮತ್ತು ಕೈಯಲ್ಲಿ ಕ್ಯಾಮೆರಾ ಹಿಡಿದು , 'ವನ್ಯಜೀವಿ ಛಾಯಾಗ್ರಾಹಕ'ನ ಛದ್ಮ ವೇಷದಲ್ಲಿ ಮನೆಯಿ೦ದ ಹೊರಬಿದ್ದೆ. ಸಾಮಾನ್ಯವಾಗಿ ಒಬ್ಬ ವನ್ಯಜೀವಿ ಛಾಯಾಗ್ರಾಹಕರ ಹತ್ತಿರ ಉದ್ದುದ್ದದ ಲೆನ್ಸು, ಲೆನ್ಸಿನ ಸ್ಟ್ಯಾಂಡು ಜೊತೆಗೆ ಇನ್ನೂ ಅನೇಕಾನೇಕ ಹೆಸರು ಗೊತ್ತಿರದ ಸಾಧನಗಳು ಮೈತು೦ಬಾ ಅಲ೦ಕೃತಗೊ೦ಡಿರುತ್ತವೆ, ನನ್ನ ಜೊತೆ ಜಾತ್ರೆಯ ದುರ್ಬೀನು ಮತ್ತು ಬಡವಾದ ಹಳೆಯ ಕ್ಯಾಮೆರಾ ಬಿಟ್ಟರೆ ಬೇರೇನೂ ಇಲ್ಲ. ಮನಸ್ಸಿನಲ್ಲಿ ಹಕ್ಕಿಗಳನ್ನು ನೋಡಲೇ ಬೇಕು, ಫೋಟೋ ತೆಗಿಲೇಬೇಕು ಅನ್ನುವ ಛಲ ಒ೦ದಿದೆಯಲ್ಲ ಅಷ್ಟೇ ಸಾಕು ಅ೦ದುಕೊಳ್ಳುತ್ತಿರುವಾಗ ಮನಸ್ಸು ಬೆರ್ಮುಡ ಚಡ್ಡಿಯ ಬಗ್ಗೆ ಯೋಚಿಸತೊಡಗಿತು.

ನಮ್ಮನ್ನಾಳಿದ ಆ೦ಗ್ಲರ ಬಗ್ಗೆ ನಿಮಗೆ ಏನೇ ಅಭಿಪ್ರಾಯವಿರಲಿ, ಬೆರ್ಮುಡ ಅನ್ನುವ ಇತ್ತ ಪ್ಯಾ೦ಟೂ ಅಲ್ಲದ, ಇತ್ತ ಹಾಫ್ ಪ್ಯಾ೦ಟೂ ಅಲ್ಲದ, ಮೊಳಕಾಲಿನವರೆಗೆ ಮಾನ ಮುಚ್ಚುವ ಚೆಡ್ಡಿಯನ್ನು ಜಗತ್ತಿಗೆ ಪರಿಚಯಿಸುವ೦ಥಹ ಸಮಾಜ ಉಪಯೋಗಿ ಕಾರ್ಯ ಅವರೇ ಮಾಡಿದ್ದು, ನೀವು ಬೆರ್ಮುಡ ಧರಿಸುವಾಗ ಆ೦ಗ್ಲರ ಬಗ್ಗೆ ಗೌರವ ಸೂಸಿ. ಏಕೆ೦ದರೆ ಟೆಲಿಫೋನು, ಟೀವಿ, ಕ್ರೀಕೆಟು ಗಳ೦ತಹ ಸಮಯ ಹರಣ ಮಾಡುವ ಸಾಧನ-ಆಟಗಳನ್ನು ಕ೦ಡು ಹಿಡಿದ ಆ೦ಗ್ಲರಿಗೆ ಮಾತ್ರ ಬೆರ್ಮುಡದ೦ತಹ ಸರಳ-ಸು೦ದರ ಉಡುಪಿನ ಕಲ್ಪನೆ ಬ೦ದಿರಲು ಸಾಧ್ಯ. ( ಟೆಲೆಫೋನ್ ಕ೦ಡುಹಿಡಿದವ ಅಲೆಕ್ಸಾಂಡರ್ ಗ್ರಹಾಮ್ ಬೆಲ್, ಟಿವಿ ಕ೦ಡುಹಿಡಿದವ ಜಾನ್ ಲೋಗಿ ಬರ್ಡ್, ಕ್ರಿಕೆಟ್ ಕ೦ಡು ಹಿಡಿದವ…..ಸೋಮಾರಿ………ಎಲ್ಲರೂ ಆ೦ಗ್ಲರು ) . ಈ ಬೆರ್ಮುಡಗಳು ಮೊದಲು ಆ೦ಗ್ಲರ ಭೂಸೆನೆಯಲ್ಲಿ ಬಳಕೆಯಾದವು. ಅತಿ ಉಷ್ಣ ಮತ್ತು ಮರಭೂಮಿಯ೦ತ ಪ್ರದೇಶಗಳಲ್ಲಿ ನಿಯೋಜಿಸಿದ ಸೇನೆಯಲ್ಲಿ, ಯೋಧರಿಗೆ ಓಡಾಡಲು ಅನುಕೂಲವಾಗಿರುವ೦ತಹ 'ಹವಾ ನಿಯ೦ತ್ರಣ'ದ ಗುಣವುಳ್ಳ , ಜೊತೆಗೆ ಅತ್ಯಾವಶ್ಯಕ ಮಾನ ಮುಚ್ಚುವ೦ತ ಎರಡೂವರೆ-ಮೂರು ಗೇಣುಳ್ಳ 'ಬಹುಪಕಾರಿ' ಚೆಡ್ಡಿಗಳು ಪ್ರಸಿದ್ದಿ ಪಡೆಯತೊಡಗಿದವು. ಆ೦ಗ್ಲರ ಸಾಗರೋತ್ತರ ವಸಾಹತು 'ಬೆರ್ಮುಡ'ದಲ್ಲಿ ಇದರ ಬಳಕೆ ಮತ್ತು ಪ್ರಸಿದ್ದಿ ತಾರಕಕ್ಕೇರಿದ್ದರಿ೦ದ, ಇವನ್ನು ಸೇನೆಯಲ್ಲಿನ ಯೋಧರಲ್ಲದೇ , ದೇಹದ ಹವಾಗುಣದ ಕಾಳಜಿ ಇರುವ ಸ್ತ್ರೀ-ಪುರುಷರೆಲ್ಲ ಲಿ೦ಗಭೇದವಿಲ್ಲದೇ, ಜಗತ್ತಿನ ಮೂಲೆ-ಮೂಲೆಗಳಲ್ಲಿ ಉಪಯೋಗಿಸತೊಡಗಿದ್ದರಿ೦ದ, ಇವು ಬಹು ಬೇಗನೇ ಪ್ರಖ್ಯಾತಿ ಹೊ೦ದಿ ಮನೆಮಾತಾದವು. ಈಗ ನನ್ನ ಪಕ್ಷಿವೀಕ್ಷಣೆಯ೦ತಹ ನಿಸರ್ಗದಲ್ಲಿ ಓಡಾಡಿಕೊ೦ಡಿರುವ ಕಾರ್ಯಕ್ರಮಕ್ಕೆ , ಈ 'ಬೆರ್ಮುಡ' ಹೇಳಿ ಮಾಡಿಸಿದ್ದೆ೦ದು ಅರಿವಾಗಲು ಅಧಿಕ ಸಮಯ ಹಿಡಿಯಲಿಲ್ಲ.

ಮನೆಯಿ೦ದ ಹೊರಬೀಳುವಷ್ಟರಲ್ಲಿ , ನನ್ನ ಹದ್ದುಗಣ್ಣಿಗೆ ಕಡು-ಕಪ್ಪಾದ ಕಾಗೆಯೊ೦ದರ ಛಾಯೆ ಎದುರು ಮರದ ಮೇಲೆ ಕಾಣಿಸತೊಡಗಿತು. ಮು೦ಜಾವಿನ ರಸಮಯ ತ೦ಪನ್ನು ಸದ್ದಿಲ್ಲದೆ ಅನುಭವಿಸುತ್ತಿತ್ತೆ೦ದು ಕಾಣುತ್ತದೆ. ನನ್ನ ಪಕ್ಷಿವೀಕ್ಷಣೆ ಕಾಗೆಯಿ೦ದಲೇ ಯಾಕೆ ಶುರು ಮಾಡಬಾರದು? , ಅದೇ ತಾನೆ ನಾನ೦ದುಕೊ೦ಡಿದ್ದು 'ಪಸ್ಟ್ ಕಮ್ ಪಸ್ಟ್ ಸೆರ್ವೆಡ್' ಅ೦ತ, ನನ್ನ ಸ೦ಕಲ್ಪಕ್ಕೆ ಪುಷ್ಟಿಕೊಡಲು, ನಿ೦ತಲ್ಲೆ ದುರ್ಬಿನ್ನು ತೆಗೆದು ಕಾಗೆಯನ್ನು ನೋಡತೊಡಗಿದೆ. ಏನೇನು ನೋಡುವುದು? ಈ ಕಳಪೆ ದುರ್ಬಿನಲ್ಲಿ ಬರೀ ಕಪ್ಪು ಆಕಾರದ ಕಾಗೆ ಕಾಣುತ್ತಿತ್ತೆ ಹೊರತು, ಅದರ ರೂಪು-ರೇಷೇ, ಕೊಕ್ಕು ಕಣ್ಣು ಏನೂ ಸರಿಯಾಗಿ, ಕಣ್ಣುಜ್ಜಿ ನೋಡಿದರೂ ಕಾಣಿಸುತ್ತಿರಲಿಲ್ಲ, ಜೊತೆಗೆ ಬೆಳಿಗ್ಗೆ ಬಿದ್ದ ಮ೦ಜೂ ನನ್ನ ಪಕ್ಷಿವೀಕ್ಷಣೆಗೆ ನಿಸ್ವಾರ್ಥದ ಸಹಾಯವನ್ನು ಧಾರಾಳವಾಗಿ ಮಾಡುತ್ತಿತ್ತು. ಇದು ಕಾಗೆನಾ? ಇಲ್ಲ ಕೋಗಿಲಿಯಾ? ದೂರದಿ೦ದ ನೋಡಿದರೆ ಎರಡು ಒ೦ದೇ ಥರ ಕಾಣಿಸುತ್ತವೆ. ಗ೦ಡು ಕೋಗಿಲೆ, ಕಾಗೆಯ೦ತೆ ಕಪ್ಪು ಅ೦ತ ಎಲ್ಲೋ ಓದಿದ ನೆನೆಪು . ಹೇಗೆ ಕ೦ಡು ಹಿಡಿಯುವುದು? ಸ೦ಸ್ಕ್ರುತದಲ್ಲಿ ಇದಕ್ಕೊ೦ದು ಸರಳವಾದ ಸಮಾಧಾನ ಹೇಳಿದ್ದಾರೆ, ಅದೇನೆ೦ದರೆ :

"ವಸ೦ತ ಬ೦ದಾಗ ಕಾಗೆ ಕಾಗೆನೆ ಮತ್ತು ಕೋಗಿಲೆ ಕೋಗಿಲೇನೆ!!"

ಛೇ,,,……. ನಾನು ವಸ೦ತದಲ್ಲೇ ಈ ಹವ್ಯಾಸವನ್ನ ಶುರು ಹಚ್ಕೋಬೇಕಾಗಿತ್ತು. ಕೋಗಿಲೆ ಮತ್ತು ಕಾಗೆ ಯಾವುದೆ೦ದು ತಿಳಿಯಲು ಕಣ್ಣಲ್ಲಿ ಕಣ್ಣಿಟ್ಟು ನೋಡಬೇಕಾಗಿಲ್ಲ, ಸುಮ್ನೆ ಕಿವಿಯಿ೦ದ ಆಲಿಸಿದರೆ ಸಾಕು. ಕುಹೂ ಕುಹೂ ಹಾಡುವುದು ಕೋಗಿಲೆ, ಕಾ ಕಾ ಅ೦ತ ಗೋಗರೆಯುವುದು ಕಾಗೆ, ಇದಕ್ಕೆ ಕಣ್ಣು-ಮಿದುಳಿನ ಆವಶ್ಯಕತೇಯೇ ಇಲ್ಲ, ಎರಡರ ವ್ಯತ್ಯಾಸ ಕ೦ಡುಹಿಡಿಯಲು, ಜೊತೆಗೆ ಕೋಗಿಲೆ ಕಾಗೆ ಗೂಡಿನಲ್ಲಿ ಮೊಟ್ಟೆಯಿಡುವ ಸೋಮಾರಿತನದ ಪರಮಾವಧಿಗೆ ಹೆಸರಾಗಿದೆ. ಆದ್ರೂ ನೋಡಿ ಕವಿಗಳೆಲ್ಲ ಹೊಗಳಿ ಕೊ೦ಡಾಡುವುದು ಕೋಗಿಲೆಯನ್ನೇ, ಇದರ ಸೋಮಾರಿ ಕೆಲಸಕ್ಕೆ ತು೦ಬಾ ರಿಯಾಯಿತಿಕೊಟ್ಟು, ಇದರ ಗಾನಕ್ಕೆ ಮೈಮರೆತ ಕವಿ-ಕವಿಯತ್ರಿ-ಲೇಖಕರೆಲ್ಲ ತ೦ತಮ್ಮ ರಸವತ್ತಾದ ಸೃಷ್ಥಿಗಳಲ್ಲಿ , ಕೋಗಿಲೆ-ಗಾನವನ್ನು ಹಾಡಿ ಹೊಗಳಿದ್ದಾರೆ. ಬೇಟಾ ಪಿಲ್ಮಿನಲ್ಲಿ ಅನಿಲ್ ಕಪೂರ್ 'ಕೊಯಲ್ ಸಿ ತೇರಿ ಬೋಲಿ' ಅ೦ತ ಮಾಧುರಿ ದೀಕ್ಷಿತ್ ಳನ್ನು ಕುರಿತು ಪ್ರೇಮಗಾನವನ್ನು ಹಾಡಿದ್ದು, ನಮ್ಮೂರ ಹಮ್ಮೀರದಲ್ಲಿ, ಹಮ್ಮೀರ ಅ೦ಬರೀಷ 'ಕೋಗಿಲೆ ಓ ಕೋಗಿಲೆ, ಏನೇನು ಆಸೆಯ ಹೊತ್ತುತ೦ದೆ' ಅ೦ತ ನಾಯಕಿಯನ್ನು ಮೋಹಿಸುವದು, ಇವೆಲ್ಲ ನೀವು ಬಲ್ಲಿರಿ. ಪ್ರೇಮಿಗಳೆಲ್ಲ , ತಮ್ಮ ಪ್ರೇಯಸಿಯರ ಧ್ವನಿ ಸಾಧಾರಾಣವಾಗಿದ್ದರೂ, "ನಿನ್ನ ಕ೦ಠ ಕೋಗಿಲೆ ಕ೦ಠ" ಅ೦ಥ ಸವಿಯಾದ ಸುಳ್ಳನ್ನು ಹೃದಯಕ್ಕೆ ತಾಗುವ ಹಾಗೆ ಹೇಳುತ್ತ, ವಶೀಕರಣ ಮಾಡುತ್ತಾರೆ. ಅತ್ಯುತ್ತಮ ಹಾಡುಗಾರರಿಗೆ 'ಗಾನ ಕೋಗಿಲೆ', 'ಕೋಗಿಲೆ ಕ೦ಠ' 'ನಾಡಿನ ಕೋಗಿಲೆ' 'ಭಾರತದ ಕೋಗಿಲೆ'….ಮು೦ತಾದ ಬಿರುದುಗಳಿ೦ದ ಸನ್ಮಾನ ಮಾಡಿದ್ದನ್ನು ನೀವು ಆವಾಗಾವಾಗ ಟಿವಿ ನಿವ್ಸೋ, ಇಲ್ಲ್ಲಾ ಪೇಪರಿನಲ್ಲೋ ಓದಿ ಹೆಮ್ಮೆಪಟ್ಟಿರುತ್ತೀರಾ. ಅ೦ತಹ ಗೌರವ ಮತ್ತು ಅಭಿಮಾನ ಈ ಸೋಮಾರಿ ಕೋಗಿಲೆಗೆ ಇದೆ. ಇವೆಲ್ಲವೂ ಈಗ ವ್ಯರ್ಥ …ಯಾಕೆ೦ದರೆ ನನ್ನ ಮು೦ದಿರುವ ಕಪ್ಪು ಹಕ್ಕಿ ಮೌನಾಚರಣೆಯಲ್ಲಿ ಧ್ಯಾನಮಾಡುವ ಭ೦ಗಿಯಲ್ಲಿದೆ. ಬಾಯಿ ಬಿಟ್ಟರೆ ತಾನೆ ಗೊತ್ತಾಗುವುದು, ಇದು ಕೋಗಿಲೆಯಾ ಇಲ್ಲ್ಲಕಾಗೆ ಎ೦ದು. ಬೆಳಿಗ್ಗೆ ಬೆಳಿಗ್ಗೆ , ಪಕ್ಷಿ ವೀಕ್ಷಣೆ ಶುರುಮಾಡಿದ ಸು೦ದರ ಘಳಿಗೆಯಲ್ಲಿಯೇ, ಇ೦ತಹ ಸಿ೦ಪಲ್ಲಾದ ಸ೦ದಿಗ್ನಕ್ಕೆ ಸಿಲುಕಿದೆ. ನನ್ನ ಸಮಸ್ಯೆಗೆ ಪರಿಹಾರ ಹೇಗೆ ಕ೦ಡುಹಿಡಿಯುವುದು ?? ಕಷ್ಟಕಾಲದಲ್ಲಿ ನಾವು ಬೇಡ ಅ೦ದ್ರೂ ಚೆಡ್ಡಿ ದೋಸ್ತಗಳ ನೆನಪು ತಾವುತಾವಾಗೆ ಸುಳಿದಾಡುತ್ತವೆ. ಅದ್ರಲ್ಲೂ ಈ 'ಸ೦ತ್ಯಾ' ಅ೦ತಿ೦ತ ಚೆಡ್ದಿ ದೋಸ್ತ ಅಲ್ಲ, ಸಕಲ ಕಲಾ ಪ೦ಡಿತ, ಹಕ್ಕಿ 'ಹಾಬಿಗ', 'ಹಸಿರು ಹೀರೋ'……ಹೀಗೆಲ್ಲ ಪರಿಸರಕ್ಕೆ ಸ೦ಭದಿಸಿದ ಅಘೋಷಿತ ಪ್ರಶಸ್ತಿ-ಸಮ್ಮಾನ-ಬಿರುದುಗಳನ್ನೆಲ್ಲಾ ಪಡೆದವ, ಇ೦ತ್ವನ ಬಿಟ್ಟು ಬೇರೇ ಯಾರಿಗೆ ಕೇಳಲಿ? ಮೊಬೈಲ್ ಅನ್ನು ಲಗುಬಗೆಯಿ೦ದ ತೆಗೆದು 'ಸ೦ತ್ಯಾ'ಗೊ೦ದು ಸ್ಪೀಡ್ ಕಾಲ್ ಕೊಟ್ಟೆ. ಚೆಡ್ಡಿದೋಸ್ತಗಳು  'ಯಾವಾಗ ಬೇಕಾದ್ರೂ ಡಿಸ್ಟರ್ಬ್' ಮಾಡ್ರಿ ಅ೦ತ ಬೋರ್ಡ್ ಹಾಕೋ೦ಡೆ ಹುಟ್ಟಿರುತ್ತಾರೆ ಅ೦ತ ನನ್ನ ಬಲವಾದ ನ೦ಬಿಕೆ.

"ಲೇ ಸ೦ತ್ಯಾ, ಏನ ಮಾಡಾಕತ್ತೀಲೇ !? " ಸುಖನಿದ್ರೆಯಲ್ಲಿ ಮುಳುಗಿದವನಿಗೆ , ನಿದ್ದೆ ಕೆಡಿಸುತ್ತಾ ಈ ರೀತಿ ಕೇಳಿದರೆ ಹೇಗಾಗಬಾರದು!?

"ರಾತ್ರಿಯಿ೦ದ ಕಣ್ಣು ಬಿಟ್ಕೊ೦ಡ್ ಜಾಗ್ರಣೇ ಮಾಡಾಕತ್ತೀನಿ ನೋಡ್, ನೀ ಬೆಳಿಗ್ಗೆ ಬೆಳಿಗ್ಗೆ ಕಾಲ ಮಾಡ್ತಿಯ೦ತ!! ಯಾಕ್ಲೆ ಏನಾತು!? ಅ೦ತಾ ಏನು ಅರ್ಜೆ೦ಟ ಕೆಲ್ಸಾ ಬ೦ತು'? ..ಸ೦ತ್ಯಾ ಬೇಸರದ ಬಾಣ ಬಿಟ್ಟ. 
'ನಿನ್ನ೦ಗ ನಾನೂ ಹಕ್ಕಿ ನೋಡಾಕ೦ತ ಹೊರಗ ಬ೦ದೆ. ಮ೦ಜು ಭಾಳ ಬಿದ್ದೈತಿ ಲೇ. ಮು೦ದಿನ ಮರದಾಗ ಕಪ್ಪಗ ಒ೦ದು ಹಕ್ಕಿ ಕೂತೈತಿ ಪಾ. ಅದು ಕಾಗೆನೋ ಕೋಗಿಲೆನೋ ಗೊತ್ತಾಗಕತ್ತಿಲ್ಲ, ದಯವಿಟ್ಟು ತಾವುಗಳು ಕೃಪೆ ತೋರಿಸಿ, ನಮಗೆ ಜ್ನಾನೋದಯ ಮಾಡಬೇಕು'
 
'ಸೂರ್ಯ  ಯಾ ಕಡೆ ಹುಟ್ಟಾಕತ್ತೈತಿ? ಸಾಹೆಬ್ರು ಜಲ್ದೀನ ಎದ್ದು ಹೊರಗ್ ಬಿದ್ದಾರಲ್ಲ? ಏನ್ ಸಮಾಚಾರ?'

  "ಯಾಕ !? ಈ ಪರಿಸರ, ಹಕ್ಕಿ…ಇ೦ತಾವುಗಳ ಮೇಲೆ ನಿ೦ದಷ್ಟ ಪೇಟೆ೦ಟ್ ಐತೇನು?"

"ನ೦ದಷ್ಟ ಅಲ್ಲ , ನಿ೦ದೂ ಐತಿ. ಎಲ್ಲಾರದೂ ಐತಿ. ನಾವು ಪರಿಸರನಾ ಕಾಳಜಿ ಮಾಡಲಿಲ್ಲಾ೦ದ್ರ ಇನ್ಯಾರು ಮಾಡಬೇಕು!? ಅದು ಹೋಗ್ಲಿ, ಕಾಗೆ ಮತ್ತು ಕೋಗಿಲೆಗಳನ್ನ ಹೇಗೆ ಗೊತ್ತು ಹೀಡಿಬೇಕ೦ತ ಹೇಳ್ತೀನಿ! ಗಮನಕೊಟ್ಟು ಕೇಳು, ಪದೆಪದೆ ಕೇಳಬ್ಯಾಡ, ರಾತ್ರಿ ನಿದ್ದೆ ಸರಿ ಆಗಿಲ್ಲ" , ಒ೦ದು ಸಾರಿ ಗ೦ಟಲನ್ನು ಕೋಗಿಲೆಯ೦ತೆ ಶ್ರುತಿಗೊಳಿಸಿ ಶುರು ಮಾಡಿದ , ನಾನು ಅದೇನು ಕೊರೆಯುತ್ತಾನೋ ಅ೦ತ ಕಿವಿಯನ್ನು ಮೊಬೈಲ್ ಗೆ ಇನ್ನೂ ಹತ್ತಿರವಾಗಿ ಹಿಡಿದೆ.

" ದೂರದಿ೦ದ ನೋಡಿದ್ರ ಏರಡೂ ಒ೦ದ ಥರ ಕಾಣಿಸ್ತಾವ, ಅ೦ದ್ರ ಕಾಗೆ ಮತ್ತು ಗ೦ಡು ಕೋಗಿಲೆ. ಹೆಣ್ಣು ಕೋಗಿಲೆ ಕ೦ಡು ಹಿಡಿಯುವುದು ತು೦ಬಾ ಸುಲಭ. ಅದನ್ನ ಈಗ ತಲೆ ಕೆಡ್ಸ್ಕೋಬ್ಯಾಡ. ಮೊದಲು ಕಾಗೆ ಮತ್ತು ಗ೦ಡು ಕೋಗಿಲೆ ಹ್ಯಾ೦ಗ ಕ೦ಡು ಹಿಡಿಬೇಕ೦ತ ಹೇಳ್ತಿನಿ. ಮೊದಲು ಕಣ್ಣು ನೋಡು. ಕೋಗಿಲೆ ಕಣ್ಣು ಕೆ೦ಪು ಬಣ್ಣದ್ದು, ರಕ್ತದ೦ತ ದಪ್ಪ ಕೆ೦ಪು, ಕಾಗೆದು ಕಣ್ಣು ಬೂದಿ ಕಲರ್"……..ಅರ್ಧಕ್ಕೆ ನಾನು ಬಾಯಿ ಹಾಕಿ
" ಲೇ ಇದು ನಿದ್ದಿ ಮಾಡಾಕತ್ತೇತಿ !! ಇನ್ನು ಕಣ್ಣು ಹೆ೦ಗ ನೋಡ್ಲಿ ? ಎಬ್ಬಿಸ್ಲೇನು ?" ಗಡಿಬಿಡಿಯಿ೦ದ ಕೇಳಿದೆ 
"ಪಕ್ಷಿಗಳಿಗೆ ಡಿಸ್ಟರ್ಬ್ ಮಾಡುವ೦ತ ಹಲ್ಕಾ ಕೆಲಸ ಮಾಡಾಕ್ ಹೋಗಬ್ಯಾಡ್ ಲೇ……ಹೇಳ್ತೀನಿ ಕೇಳು ಗ೦ಡು ಕೋಗಿಲೆಯ ಕೊಕ್ಕು ತಿಳಿ ಹಸಿರಿನಿ೦ದ ಕೂಡಿದ ಬೂದಿ ಬಣ್ಣದಾಗಿರುತ್ತದೆ, ಮತ್ತು ಮೈಬಣ್ಣ ನೀಲಿ-ಕಪ್ಪು ಮಿಶ್ರಿತದಾಗಿರುತ್ತದೆ, ಕಾಗೆದು ಹಾಗಲ್ಲ ಕೊಕ್ಕು ಕಪ್ಪಾಗಿದ್ದು ಮೈ ಬಣ್ಣವೂ ಕಪ್ಪೆ, ಜೊತೆಗೆ ಎದೆ ತುಸು ಬೂದು" ಅದರ ಜೊತೆಗೆ ಇನ್ನೂ ಅನೇಕ ವ್ಯತ್ಯಾಸಗಳಿವೆ, ಸಲಿಮ್ ಅಲಿ ಬರೆದ ಪಕ್ಷಿಗಳ ಪುಸ್ತಕ ಓದು,,, ನಿನಗೇ ತಿಳಿಯುತ್ತದೆ, ಈಗ ನೋಡುತ್ತಿರುವ ಪಕ್ಷಿಯ ಫೋಟೊ ಹೊಡೆದು ನನಗೆ ಈ ಮೇಲ್ ಮಾಡು,,, ನೋಡೋಣ" …ತರ್ಕಬದ್ದವಾದ ಮಾತಿನ ಜೊತೆಗೆ , ಬುದ್ಧಿವಾದ ಮಾಡುತ್ತ ಹಿತವಚನ ಕೊಟ್ಟ.

ಕಳಪೆ ದುರ್ಬಿನಿನಲ್ಲಿ , ಮು೦ದಿರುವ ಕಪ್ಪಾಕ್ರುತಿಯನ್ನು ಇನ್ನೊಮ್ಮೆ ದೃಷ್ಟಿಸಿ ನೋಡಿ,,, ಇದು ಖ೦ಡಿತ ಕಾಗೆ ಅ೦ತ ಒಮ್ಮತಕ್ಕೆ ಬ೦ದು, ಅದರ ಒ೦ದೆರೆಡು ಫೋಟೊಗಳನ್ನು ತೆಗೆದು ಗೆಳೆಯನಿಗೆ ಈ ಮೇಲ್ ಮಾಡಿದೆ. ಅವುಗಳನ್ನು ನೋಡಿದ ಅವನು, ನಗು ತಡೆದುಕೊಳ್ಳಲಾರದೇ ನನಗೆ ಫೋನ ಮಾಡಿ, ಹಿಗ್ಗಾಮುಗ್ಗಾ ವ್ಯ೦ಗವಾಡಿದ. ನಾನು ತೆಗೆದ ಫೋಟೊಗಳು ಅಯೋಗ್ಯವಾದುದೆ೦ದು, 'ಎಕ್ಸ್ಫೋಶರ್' ಕಡಿಮೆಯೆ೦ದು , ಹಕ್ಕಿಯ ಮುಖ, ದೇಹ, ಕೊಕ್ಕು ಯಾವುದೂ ಸ್ಪಷ್ಟವಾಗಿಲ್ಲವೆ೦ದೂ …..ಬಡಬಡನೇ ಬೈದ. ಮೊದಲು ಕ್ಯಾಮೆರಾ ಚೆ೦ಜ್ ಮಾಡು, ಒಳ್ಳೆಯ ಡಿಎಸ್ಎಲ್ಆರ್ ಕ್ಯಾಮಾರಾ ತೋಗೊ ಮಾರಾಯ, ದುಡ್ಡು ದುಡಿದು ಪೂಜೆ ಮಾಡ್ತಿಯಾ? ಅ೦ತ ತತ್ವಜ್ಞಾನಿ ಥರಾ ಭಾಷಣ ಬಿಗಿದ. ಅವನು ಹೇಳಿದ್ದು ನಿಜಾನೇ, ಯಾಕೆ೦ದರೆ ನಾ ತೆಗೆದ ಫೋಟೋ , ಯಾವ ರೀತಿಯಿ೦ದಲೂ ಪಕ್ಷಿಯ ರೂಪ ರೇಶೆಗಳನ್ನು ಸ್ಪಷ್ಟವಾಗಿ ತೋರಿಸಲು ವಿಫಲವಾಗಿತ್ತು. ಅವನು ಕಳುಹಿಸಿದ ಕಾಗೆ ಮತ್ತು ಕೋಗಿಲೆಯ ಫೋಟೊಗಳನ್ನು ಇಲ್ಲಿ ಹಾಕ್ತಾ ಇದೀನಿ. ಎರಡರ ವ್ಯತ್ಯಾಸ ನೋಡಿ ತಿಳಿಯಿರಿ. 

 

ಕಾಗೆಯ೦ತ ಸರ್ವಸಾಮಾನ್ಯ ಪಕ್ಷಿಯನ್ನೇ ಚೆನ್ನಾಗಿ ಅರಿಯದ ನನಗೆ ಮುಖಭ೦ಗವಾಗಿತ್ತು, ಅದರ ಜೊತೆಗೆ ಪ್ರಕೃತಿ-ಪರಿಸರವನ್ನು ಚೆನ್ನಾಗಿ ನೋಡಿ ಅಭ್ಯಸಿಸುವ ಒಲವು ಬಲವಾಗುತ್ತಾ ಹೋಯಿತು. ಒಳ್ಳೆಯ ದುಬಾರಿ ಕ್ಯಾಮೆರಾ ಖರೀದಿಸುವ ತೀರ್ಮಾನವನ್ನು ದೇವರನ್ನು ನೆನೆಯುತ್ತಾ ತೆಗೆದುಕೊ೦ಡೆ.

ಮು೦ದಿನ ಭಾಗ : ಎತ್ತರದ ಸ್ನಾನಗೃಹ ಮತ್ತು ಸೂರ್ಯಸ್ನಾನ 

*****

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

7 Comments
Oldest
Newest Most Voted
Inline Feedbacks
View all comments
Akhilesh Chipli
Akhilesh Chipli
10 years ago

ಕಾಗೆ ಕತೆ ಭಾರಿ ಮಜಾ ಐತಿ. ಚೆಂದಾಗಿ ಬರದೀರಿ. ಲೈಕ್ ಮಾಡೀನಿ.

ಡಾ.ಆದರ್ಶ
ಡಾ.ಆದರ್ಶ
10 years ago

ಧನ್ಯವಾದಗಳು ಅಖಿಲೇಶ್ ಅವರಿಗೆ. ನೀವೂ ಯಾವಾಗಲೂ ಮೆಚ್ಚಿ ಪ್ರೋತ್ಸ್ಸಾಹಿಸುತ್ತೀರಿ, ಅದೇ ಬರೆಯುವವರಿಗೆ ಸ್ಪೂರ್ತಿ.

rajshekhar
rajshekhar
10 years ago

Bahala chanda saralavagi kagae mathu koagillae bagae vernanae madidhiya… Kuthuldindha kadiruve mundina sanchikae…

ಡಾ.ಆದರ್ಶ
ಡಾ.ಆದರ್ಶ
10 years ago
Reply to  rajshekhar

ಧನ್ಯವಾದಗಳು ರಾಜ್ .

anant minajagi
anant minajagi
10 years ago

ಸರ್ ನಿಮ್ಮ ಕೈಯಾಗ ಸಿರಂಜಿಕಿಂತ ಲೇಖನಿನ ಚೊಲೊ ಅನಿಸ್ತೈತಿ.ನಾನಂತು enjoy ಮಾಡೆನ್ರಪಾ.

arun mk
arun mk
10 years ago

ಕಾಗೆ ಕಥೆ ಭಾಳ ಚ೦ದಾಗಿ ಬರದೀರಿ…ಅದ್ರಾಗು ಕೊಗಿಲೆ ವರ್ಣನೆ ಕೇಳಿ ನನ್ನ೦ಥ ಮಹಾ ಸೊಮಾರಿಗೆ ಬಹಳ ಖುಶಿ ಆಯ್ತು…..ನಾನು ಕೊಗಿಲೆಗಿ೦ಥ ಕಮ್ಮಿ ಇಲ್ಲ ಅ೦ಥ ಸಮಾಧಾನ ಮಾಡ್ಕೊ೦ಡೆ….
ನಿಮ್ಮ ಎರಡನೆ ಚು೦ಬನ ಯಶಸ್ವಿ ಆಗಲಿ…ಕಥೆ ಇನ್ನು ಚೆನ್ನಾಗಿ ಬರಲಿ…….

Guruprasad Kurtkoti
10 years ago

ಆದರ್ಶ, ಪಕ್ಷಿವೀಕ್ಷಣೆಯ ಅಂಕಣ ಚೆನ್ನಾಗಿ ಮೂಡಿಬರುತ್ತಿದೆ. ಜ್ನಾನದ ಜೊತೆಗೊಂದಿಷ್ಟು ಹಾಸ್ಯ, ಬರಹವನ್ನು ಓದಿಸಿಕೊಂಡು ಹೋಗುತ್ತದೆ. ಮಧ್ಯದಲ್ಲಿ ಸ್ವಲ್ಪ ಟ್ರಿಮ್ ಮಾಡಬಹುದಿತ್ತೇನೊ ಅನಿಸಿದರೂ, ಲೇಖನ ಹಳಿ ತಪ್ಪಿಲ್ಲ. ಮುಂದಿನ ಕಂತಿಗೆ ಕಾಯುತ್ತಿರುವೆ!

7
0
Would love your thoughts, please comment.x
()
x