ಅನಿ ಹನಿ

ಮೊದಲು ಮಾನವನಾಗು: ಅನಿತಾ ನರೇಶ್ ಮಂಚಿ

ಶಾಲೆಯಿಂದ ಫೋನ್ ಬಂದಿತ್ತು. ಇವತ್ತು ಶಾಲಾವಾಹನ ಹಾಳಾದ ಕಾರಣ ಸರ್ವಿಸ್ ಬಸ್ಸಿನಲ್ಲೇ ಮಕ್ಕಳನ್ನು ಕಳಿಸ್ತಾ ಇದ್ದೀವಿ.. ಟಕ್ಕನೆ ಫೋನ್ ಕಟ್ಟಾಯಿತು. 
ಅಯ್ಯೋ.. ಪಾಪ ಸಣ್ಣವನು.. ಸರ್ವಿಸ್ ಬಸ್ಸಿನಲ್ಲಿ ಹೇಗೆ ಬರ್ತಾನೆ ಎಂಬ ಆತಂಕ ನನ್ನದು. ನಾನೇ ಹೋಗಿ ಕರೆತರಬಹುದು ಆದರೆ ಅಷ್ಟರಲ್ಲೇ ಅವನು ಬೇರೆ ಬಸ್ಸಿನಲ್ಲಿ ಹೊರಟು ಬಿಟ್ಟಿದ್ದರೆ.. 
ಶಾಲೆಗೆ ಫೋನ್ ಮಾಡಿ ವಿಚಾರಿಸೋಣ ಅಂತ ಡಯಲ್ ಮಾಡಿದರೆ ಅದು ಎಂಗೇಜ್ ಸ್ವರ ಬರುತ್ತಿತ್ತು. ಎಲ್ಲಾ ಮಕ್ಕಳ ಮನೆಗಳಿಗೂ ಸುದ್ದಿ ಮುಟ್ಟಿಸುವ ಅವಸರದಲ್ಲಿ ಅವರಿದ್ದರೇನೋ.. 
ಮನೆಯಿಂದ ಶಾಲೆಗೆ ಇದ್ದುದು ಏಳು ಕಿಲೋ ಮೀಟರ್.. ಛೇ , ಬಸ್ಸಿನಲ್ಲಿ ಮಗನಿಗೆ ಕೂರಲಂತೂ ಸೀಟ್ ಸಿಕ್ಕಲಾರದು. ಆ ಹೊತ್ತಿಗೆ ಶಾಲಾ ವಾಹನದಲ್ಲಿ ಬಾರದ ಮಕ್ಕಳೂ ಬಸ್ಸಿನಲ್ಲಿ ತುಂಬಿರುತ್ತಾರೆ.  ಬೆನ್ನಿನಲ್ಲಿ ಬ್ಯಾಗು, ಕೈಯಲ್ಲೊಂದು ಊಟದ ಚೀಲ.. ಹಿಂದೆ ಮುಂದೆ ತಳ್ಳುವ ಜನರ ಗುಂಪು.. ಇಳಿಯುವ ಜಾಗ ಬಂದಾಗ  ಇಳಿಯಲಾದರೂ ಗೊತ್ತಾಗುತ್ತದೋ ಇಲ್ಲವೋ.. ನನಗಂತೂ ಆತಂಕದಲ್ಲಿ ಕೈ ಕಾಲು ಆಡುತ್ತಿರಲಿಲ್ಲ.ಕೂಡಲೆ  ರಸ್ತೆ ಬದಿಗೆ ಹೋಗಿ ನಿಂತೆ. ಎಲ್ಲಾ ವಾಹನದ ಸದ್ದುಗಳೂ ನನಗೆ ಬಸ್ಸಿನ ಸದ್ದಿನಂತೆಯೇ ಕೇಳತೊಡಗಿತು. 

ಒಂದು ಬಸ್ಸು ಬಂದರೂ ಅದು ನಿಲ್ಲಿಸದೇ ಹೋಗಿಬಿಟ್ಟಿತು..
ಈಗಂತೂ ನನ್ನ ಅವಸ್ಥೆ ಯಾರಿಗೂ ಬೇಡ.. ಕಣ್ಣಲ್ಲಿ ಗಂಗಾ ಯಮುನೆಗಳು ಇನ್ನೇನು ಧುಮ್ಮಿಕ್ಕಲು ಸಿದ್ದವಾಗಿ ನಿಂತಿದ್ದವು. ಆಗಲೇ ಇನ್ನೊಂದು ಬಸ್ಸು ನಿಂತು ನನ್ನ ಪುಟ್ಟ ಮಗನನ್ನು ಪುಳುಕ್ಕನೆ ಉದುರಿಸಿ ಹೋಯಿತು. ಅವನ ಬಾಡಿದ ಮೋರೆಯನ್ನು ನಿರೀಕ್ಷಿಸಿ ಸಾಂತ್ವನದ ಮಾತನ್ನಾಡಲು ಶಬ್ಧಗಳನ್ನು ಜೋಡಿಸುತ್ತಾ ಅವನ ಕಡೆ ನೋಡಿದರೆ ಅವನು ಕುಶಿಯಿಂದ ದೊಡ್ಡ ಕಣ್ಣು ಬಿಟ್ಟುಕೊಂಡು ನನಗೆ ಏನನ್ನೋ ಹೇಳುವ ಉತ್ಸಾಹದಲ್ಲಿದ್ದ.

ಅಮ್ಮಾ.. ಈ ಬಸ್ಸು ಸೂಪರ್.. ಎಷ್ಟು ಸ್ಪೀಡ್ ಬಂತು ಗೊತ್ತಾ.. ನಮ್ಮ ಶಾಲೆ ವ್ಯಾನ್ ಲಟಾರಿ.. ನಾನಿನ್ನು ಬಸ್ಸಲ್ಲೇ ಹೋಗ್ತೀನಿ.. 
ಶಾಲಾವಾಹನಕ್ಕೆ ಇಡೀ ವರ್ಷಕ್ಕೆ ದುಡ್ಡು ಕಟ್ಟಿ ಆದ ಕಾರಣ ಮಗನ ಆಸೆ ಆ ವರ್ಷ ಪೂರೈಸದಿದ್ದರೂ, ಮತ್ತಿನ ವರ್ಷ ನಾನು ಬಸ್ಸಲ್ಲಿ ಹೋಗೋದು ಎಂದು  ಸ್ವಯಂ ಘೋಷಿಸಿಕೊಂಡಿದ್ದ. 
ಬಸ್ಸಿನ ಪ್ರಯಾಣದ ಕಥೆಗಳು ದಿನಕ್ಕೊಂದರಂತೆ ಪ್ರತಿದಿನವೂ ಹುಟ್ಟಿಕೊಳ್ಳುತ್ತಿದ್ದವು. 
ಅಮ್ಮಾ.. ಇವತ್ತು ಶಾಲೆಯಲ್ಲಿ ದೊಡ್ಡವರಾದ ಮೇಲೆ ಏನಾಗ್ತೀರಿ ಅಂತ ಕೇಳಿದರು
ಹೌದಾ ಪುಟ್ಟಾ.. ನೀನು ಏನು ಹೇಳಿದೆ.. ಲಾಯರ್ ಆಗ್ತೀಯೋ, ಡಾಕ್ಟರ್ರೋ, ಇಂಜೀನೀಯರ್ರೋ..
ಶಾಲೆಯಲ್ಲಿ ಎಲ್ಲರೂ ಡಾಕ್ಟ್ರೇ ಹೇಳಿದ್ದು.. ನಾನೂ ಕೂಡಾ.. ಆದರೆ ನಾನು ದೊಡ್ಡವನಾದ ಮೇಲೆ ಬಸ್ಸು ಕ್ಲೀನರ್ ಆಗ್ತೀನಮ್ಮ.. ನಮ್ಮ ಬಸ್ಸಿನವ ಎಷ್ಟು ಉಷಾರಿ ಇದ್ದಾನೆ ಗೊತ್ತುಂಟಾ.. ಎದುರಿನ ಬದಿಯಲ್ಲಿ ಬಸ್ಸಿಳಿಯುವವರನ್ನು ಇಳಿಸಿ ಮಾರ್ಗದಲ್ಲೇ ನಿಂತು ರೈಟ್ ಅಂತ ವಿಸಿಲ್ ಊದುತ್ತಾನೆ.. ಬಸ್ಸು ಮುಂದೆ ಹೋಗುವಾಗ ಹಿಂದಿನ ಬಾಗಿಲಿನಲ್ಲಿ ಓಡಿ ಹತ್ತಿಕೊಳ್ಳುತ್ತಾನೆ.. ಒಳ್ಳೇ ಸೂಪರ್ ಮ್ಯಾನ್ ಅವನು..
ಒಂದೆರಡು ದಿನ ಮನೆಯೊಳಗೆ ಅತ್ತಿತ್ತ ನಡೆದಾಡುವಾಗಲೂ ವಿಸಿಲ್ ಸದ್ದು 

ಮೊದಲ ಸಲ ಶಾಲೆಯಿಂದ ಮಕ್ಕಳನ್ನು ಕಾರ್ಕಳದ ಗೋಮಟ ಬೆಟ್ಟಕ್ಕೆ ಕರೆದೊಯ್ದಿದ್ದರು. ಎಲ್ಲಾ ಮಕ್ಕಳು ಕಡ್ಡಾಯವಾಗಿ ಯೂನಿಫಾರ್ಮಿನಲ್ಲೇ ಬರಬೇಕೆಂದು ತಾಕೀತಾಗಿತ್ತು. 
ಮನೆಗೆ ಬಂದು ಸ್ನಾನ ಮುಗಿಸಿ ತಿಂಡಿ ತಿನ್ನುವಾಗ ನಾನು ದೊಡ್ಡವನಾದ ಮೇಲೆ ಗೋಮಟ ಚಾಮಿ ಆಗ್ತೀನಿ.. ಎಂದಿದ್ದ 
ಅಬ್ಬಾ ಒಂದು ದಿನಕ್ಕೆ ಇಷ್ಟು ಪುಟ್ಟ ಮಗುವಿನ ಬಾಯಲ್ಲಿ ಅಧ್ಯಾತ್ಮವೇ.. ಅಚ್ಚರಿಗೊಳ್ಳುವ ಸರದಿ ನನ್ನದು
ಅಂಗಿ ಚಡ್ಡಿ ಬೇಡ ಅಲ್ವಾ.. ಈ  ಯೂನಿಫಾರ್ಮು, ಟೈ ಹಾಕಬೇಕಂತೇನೂ ಇಲ್ಲ ಆಗ.. ಹೊಸ ಅನ್ವೇಷಣೆಗೆ ತಲೆದೂಗಿದೆ.
ಮತ್ತಿನ ವರ್ಷ ಕ್ಲೀನರ್ ಆಗುವ ಬದಲು ಬಸ್ಸಿನಲ್ಲಿ ಹೇಗೆ ಬೇಕಾದರೂ ಹಾಗೆ ಬ್ಯಾಲೆನ್ಸ್ ಮಾಡುವ ಕಂಡೆಕ್ಟರ್ ಆಗುವ ಆಸೆಗೆ ಭಡ್ತಿ ಹೊಂದಿದ್ದ.
ಯಾವಾಗ ಒಂದು ಪುಟ್ಟ ಸೈಕಲ್ ಅವನದಾಯಿತೋ ಅಲ್ಲಿಂದ ಅವನು ಪೂರ್ಣಾವಧಿ ಡ್ರೈವರ್ ಆಗಿ ರೂಪುಗೊಂಡ..

ಮನೆಯಲ್ಲಿನ  ಅಂಬಾಸಿಡರ್ ಕಾರು ಹಳೆಯದಾಗಿ ಆಗಾಗ ಮೆಕ್ಯಾನಿಕ್ಕಿನ ಭೇಟಿ ಮಾಡಿಸುತ್ತಿತ್ತು. ರಜೆ ಇದ್ದಾಗಲೆಲ್ಲಾ  ಸಹ ಸವಾರನಾಗಿ ಮಗನನ್ನು ಕರೆದೊಯ್ಯುತ್ತಿದ್ದರು. ಒಮ್ಮೊಮ್ಮೆ ಅರ್ಧ ದಾರಿಯವರೆಗೆ ಮಾತ್ರ ಹೋಗುತ್ತಿದ್ದ ಕಾರಿಗೆ ಮುಂದೆ ಹೋಗಲು ಮೆಕ್ಯಾನಿಕ್ ಅಲ್ಲಿಗೇ ಬರಬೇಕಿತ್ತು. ಆಗೆಲ್ಲಾ ಅವನು ಬಾನೆಟ್ ತೆಗೆದು.. ನಾಲ್ಕು ಸ್ಕ್ರೂ ಸಡಿಲಿಸಿ, ಮತ್ತೆರಡು ಟೈಟ್ ಮಾಡಿ.. ಕಾರನ್ನು ಸ್ಟಾರ್ಟ್ ಮಾಡುವುದನ್ನು ನೋಡುತ್ತಿದ್ದಂತೇ ಬೆಕ್ಕಸವಾಗುತ್ತಿದ್ದ ಮಗನಿಗೆ ಮೆಕ್ಯಾನಿಕ್ ಕೆಲಸವೇ ಬೆಸ್ಟು ಅನ್ನಿಸಿತ್ತು. 
ಮಳೆಗಾಲ ಇನ್ನೇನು ಪ್ರಾರಂಭವಾಗಿತ್ತು. ತೋಟದ ಕೆಲಸದವರೆಲ್ಲಾ ಪುಟ್ಟ ಪುಟ್ಟ ಪ್ಲಾಸ್ಟಿಕ್ ತೊಟ್ಟೆಗೆ ಮಣ್ಣು ತುಂಬಿಸಿ ಬೀಜ ಊರಲು ಸಿದ್ಧತೆ ಮಾಡುತ್ತಿದ್ದರು. ಅವರೊಂದಿಗೇ ಮಣ್ಣಲ್ಲಿ ಆಡುತ್ತಾ ತನ್ನ ದಿನ ಕಳೆದ ಮಗ ಆ ದಿನ ರಾತ್ರೆ ಹೇಳಿದ್ದು ಅಮ್ಮಾ ನಾನು ದೊಡ್ಡವನಾದ ಮೇಲೆ ಕೆಲಸದವನಾಗ್ತೇನೆ.. ಇಡೀ ದಿನ ಗಮ್ಮತ್ತು
ಅದ್ಯಾವಾಗ ಟಿ ವಿಯಲ್ಲಿ ಖಡಕ್ ಪೋಲೀಸ್ ಆಫೀಸರ್ ಒಬ್ಬನ ಸಿನಿಮಾ ನೋಡಿದನೋ ಅಂದಿನಿಂದ  ಕೆಲಸದವನ ಬಳಿ ಸಣ್ಣ ಕೋಲೊಂದನ್ನು ಪಿಸ್ತೂಲಿನಂತೆ ಕೆತ್ತಿಸಿಕೊಂಡು ಚಡ್ಡಿಯ ಬೆಲ್ಟಿನ ಹೊರಗೆ ಕಾಣುವಂತೆ ಸಿಕ್ಕಿಸಿ ಫುಲ್ ಟೈಮ್ ಡ್ಯೂಟಿ ಮಾಡುವ ಆಫೀಸರ್ ಆದ. ಶಾಲೆಯಿಂದ ಮನೆಗೆ ಬರುತ್ತಲೇ ಚಡ್ಡಿಯೇರುತ್ತಿದ್ದ ಅದನ್ನು ಮತ್ತೆ ತೆಗೆದಿಡಲು ನಿದ್ದೆಯೇ ಬಂದಾಗಬೇಕಿತ್ತು.
ಇಂತಹ ಹಲವು ಅವತಾರಗಳನ್ನೆತ್ತುತ್ತಲೇ ಬೆಳೆದ.

 ಮತ್ತೇನು ಮಕ್ಕಳು ಹಾಗೇ ಇದ್ದು ಬಿಡುತ್ತಾರಾ.. ಬೆಳೆಯುವುದು ಸಹಜವಲ್ಲವೇ..
 ಸಂಜೆ ಅವನನ್ನು ಕಾಯುತ್ತಿದ್ದಾಗ  ಇವತ್ತು ಬರುವಾಗ ತಡ ಆಗುತ್ತೆ ಕಾಯಬೇಡ.. ಬಂದು ವಿಷಯ ಹೇಳ್ತೀನಿ ಅಂತ  ಅವನ ಫೋನ್.. 
ಬರುವಾಗ ಗಂಟೆ ಹತ್ತರ ಮೇಲಾಗಿತ್ತು. ಸ್ನಾನ ಮಾಡಿ ಗಿಡ್ಡ ಕೈ ಬನಿಯನ್ ಹಾಕಿ ಬಂದವನ ಕೈಯಲ್ಲಿ ಪುಟ್ಟ ಬ್ಯಾಂಡೇಡ್..
ಊಟ ಮಾಡುತ್ತಾ ಕಥೆ ಪ್ರಾರಂಭವಾಯಿತು. 
ಬೈಕಲ್ಲಿ ಬರ್ತಾ ಇದ್ನಾ.. 

ಅಯ್ಯೋ.. ಬಿದ್ಯಾ.. ಎಲ್ಲೆಲ್ಲಾ ಗಾಯವಾಯಿತು.. ನಾನು ದಿಗ್ಗನೆದ್ದು ನೋಡತೊಡಗಿದೆ. 
ಇಲ್ಲಾ ಅಮ್ಮಾ.. ಕೂತ್ಕೊಂಡು ಕೇಳು .. ನನ್ನ ಎದುರು ಒಂದು ಆಟೋ ಇತ್ತು.. ಅದು ಸ್ಪೀಡ್ ಆಗಿ ಹೋಗ್ತಾ ಇತ್ತು.. 
ಅಂದ್ರೆ ಅದನ್ನು ಓವರ್ ಟೇಕ್ ಮಾಡ್ಲಿಕ್ಕೆ ಹೋಗಿ ಇನ್ಯಾವುದಕ್ಕಾದರೂ ತಾಗಿದೆಯಾ.. ಹೇಳಿದೆ ನಾನು ಅಪ್ಪ ಮಗ ಇಬ್ಬರಿಗೂ .. ಬೇಡ ಬೈಕ್ ಅಂತ ನೀವೆಲ್ಲಿ ಕೇಳ್ತೀರಿ.. 
ಸ್ವಲ್ಪ ಸುಮ್ಮನಿರ್ತೀಯಾ.. ಅವ್ನು ಹೇಳೋದಾದ್ರೂ ಪೂರ್ತಿಯಾಗಲಿ.. ಇವರ ಕಂಠ ಎಚ್ಚರಿಸಿತು.
ರಸ್ತೆ ಬದಿಯ ಅಂಗಡಿಯಲ್ಲಿ ಚೌ ಚೌ ಕಟ್ಟಿಸಿಕೊಂಡ ಸಣ್ಣ ಹುಡುಗಿಯೊಂದು ಪಕ್ಕನೆ ಓಡಿಕೊಂಡು ರಸ್ತೆಗಿಳಿದಳು.  ಡಬ್ ಅಂತ ರಿಕ್ಷಕ್ಕೆ ತಾಗಿ ಬಿದ್ದಳು. ರಿಕ್ಷಾ ಡ್ರೈವರಿನದ್ದು ಏನೂ ತಪ್ಪಿರಲಿಲ್ಲ.. ಅವ್ನು ಪಕ್ಕನೆ ಬ್ರೇಕ್ ಹಾಕಿಲ್ಲ ಅಂದಿದ್ರೆ ಇವಳು ಅದರಡಿಗೇ ಬೀಳಬೇಕಿತ್ತು.. ರಿಕ್ಷಾ ಡ್ರೈವರ್ ಗಾಬರಿಗೊಂಡಿದ್ದರೆ ಅಲ್ಲಿದ್ದ ಜನಗಳೆಲ್ಲಾ ಸೇರಿ ಆ ಹುಡುಗಿಗೆ ಸರೀ ಬಯ್ದರು. 
ಅವ್ಳಿಗೆ ಕಾಲಿನ ಚರ್ಮ ಕಿತ್ತು ಹೋಗಿ ತುಂಬಾ ರಕ್ತ ಬರ್ತಿತ್ತು.. ತಲೇಗೂ ಸ್ವಲ್ಪ ಗಾಯ ಆಗಿತ್ತು. ಅವ್ಳ ಕೈಯಲ್ಲಿದ್ದ ಚೌ ಚೌ ಪ್ಯಾಕೆಟ್  ಬಿಚ್ಚಿ ಅದರೊಳಗಿದ್ದ ಅರ್ಧದಷ್ಟು  ರಸ್ತೆಯೆಲ್ಲಾ ಚೆಲ್ಲಾಡಿತ್ತು. ಆ ಹುಡುಗಿ ನೋವಿನಲ್ಲೂ ಉಳಿದರ್ಧ ಪ್ಯಾಕೆಟನ್ನು ಗಟ್ಟಿ ಹಿಡಿದುಕೊಂಡು ಏನಾಗಿಲ್ಲ ಏನಾಗಿಲ್ಲ ಅಂತ ಎದ್ದಳು. 
ರಿಕ್ಷಾದವ ಹೋದ.. ಜನಗಳೂ ಹೋದರು.. ಹುಡುಗಿ ಕಷ್ಟಪಟ್ಟು ಎರಡು ಹೆಜ್ಜೆ ಇಟ್ಟು ಮತ್ತೆ ಕುಸಿದಳು..

ಅಯ್ಯೋ.. ಮತ್ತೇ ..
ಮತ್ತೆಂತದು.. ಅವ್ಳ ಅಮ್ಮನಿಗೆ ಯಾರೋ ಹೇಳಿ ಸುದ್ದಿ ಗೊತ್ತಾಗಿ  ಅಲ್ಲಿಗೆ ಅಳ್ತಾ ಬಂದರು. ಅವರ ಸಮೇತ ಅವಳನ್ನು ಆಸ್ಪತ್ರೆಗೆ ಕರ್ಕೊಂಡು ಹೋಗಿ ಬ್ಯಾಂಡೇಜ್ ಮಾಡ್ಸಿದೆ. ಡಾಕ್ಟ್ರು ರಕ್ತ ಹೋಗಿದೆ ತುಂಬಾ ಒಂದು ಬಾಟಲ್ ರಕ್ತ ಬೇಕು. ಯಾರಾದ್ರು ಒಂದು ಬಾಟಲ್ ರಕ್ತ  ಕೊಡೋ ಹಾಗಿದ್ರೆ ಫ್ರೀ ಯಾಗಿ ಇಲ್ಲಿಂದ ಈಗ ಕೊಡ್ತೀವಿ ಅಂದ್ರು. ನಾನು ರಕ್ತ ಕೊಡದೇ ಆರು ತಿಂಗಳ ಮೇಲಾಗಿತ್ತಲ್ವಾ.. ಕೊಟ್ಟೆ.. ಆ ಹುಡುಗಿಯನ್ನು ಅವ್ಳ ಅಮ್ಮನನ್ನು  ಮನೆಗೆ ಬಿಟ್ಟು ಬಂದೆ..
ನನ್ನ ಬಾಯಿ ಬಂದ್ ಆಗಿತ್ತು.

ಇವತ್ತು ಆಸ್ಪತ್ರೆಯಲ್ಲಿ ಬ್ಲಡ್ ಕೊಟ್ಟಾದ ಮೇಲೆ  ಕೊಟ್ಟಿದ್ದ ಫ್ರೂಟ್ ಜ್ಯೂಸ್ ಏನೂ ಒಳ್ಳೇದಿರ್ಲಿಲ್ಲ.. ನಾನು ಸ್ವಲ್ಪ ದೊಡ್ಡವನಾದ ಮೇಲೆ ಆಸ್ಪತ್ರೆಯ ಹೊರಗೆ ಒಂದು ಜ್ಯೂಸಿನಂಗಡಿ ಇಟ್ರೆ ಒಳ್ಳೇದಾ ಅಂತ ಆಲೋಚನೆ ಮಾಡ್ತಾ ಇದ್ದೇನೆ.. ಒಳ್ಳೇ ವ್ಯಾಪಾರ ಆದೀತು..   
ನಾನು ಅವನ ತಲೆಗೆ ಮೊಟಕಿ ಹೋಗಿ ಮಲಗು ಬೇಗ ಅಂದೆ.
-ಅನಿತಾ ನರೇಶ್ ಮಂಚಿ

*****

ಕನ್ನಡದ ಬರಹಗಳನ್ನು ಹಂಚಿ ಹರಡಿ

3 thoughts on “ಮೊದಲು ಮಾನವನಾಗು: ಅನಿತಾ ನರೇಶ್ ಮಂಚಿ

  1. ತುಂಬಾ ಚೆನ್ನಾಗಿದೆ…. ಚಿಕ್ಕವನಿದ್ದಾಗ ನನಗೂ ಶಾಲೆಯಲ್ಲಿ "ಏನಾಗ್ತಿ?"ಎಂದು ಕೇಳಿದರೆ ಎದ್ದು ನಿಂತು ಏನೂ ಹೇಳ್ದೆ ಸುಮ್ಮನೆ ಕುಳಿತಿದ್ದೆ… ಏನಾಗಬೇಕು ಅಂತಾನೇ ಗೊತ್ತಿಲ್ಲಾ. ಏನ್ ಹೇಳಬೇಕಂತಾನೂ ತಿಳಿತಿದ್ದಿಲ್ಲ. ಈಗ ಅದೆಲ್ಲಾ ನೆನಪಾಯ್ತು….ಮೇಡಂ.

  2. ಬಾಲ್ಯದ ಮುಂದೆ ಪ್ರಪಂಚದ ಯಾವುದೂ ಸಾಟಿಯಲ್ಲ.
    ಹೃದಯಸ್ಪರ್ಶಿ ಲೇಖನ. ಧನ್ಯವಾದಗಳು ಮಂಚಿ ಮೇಡಂ.

Leave a Reply

Your email address will not be published. Required fields are marked *