ಮೈ ಫಿರ್ ಭೀ ತುಮ್ ಕೋ ಚಾಹುಂಗಾ…: ಬೀರೇಶ್ ಎನ್ ಗುಂಡೂರ್


ಕಗ್ಗತ್ತಲ ರಾತ್ರಿಗೂ ಒಂದು ಕೊನೆಯುಂಟು. ಅಲ್ಲಿ ಹೊಸ ಬೆಳಕಿನ ಹೊಸ ಚಿಗುರಿನ ಆಶಯ ಉಂಟು. ಕಪ್ಪುಗಟ್ಟಿ ಆರ್ಭಟಿಸಿ ಸುರಿಯುವ ಮಳೆಯು ಕೂಡ ಒಂದರೆ ಕ್ಷಣ ಯೋಚಿಸಿ ರಂಗುರಂಗಿನ ಕಾಮನಬಿಲ್ಲಿನ ಅಂದವನಿಕ್ಕುತ್ತದೆ. ಆದರೆ ಆ ನಿನ್ನ ಓರೆನೋಟದ ಬಿಸುಪು ಮಾತ್ರ ಇನ್ನೂ ಕರುಣೆ ತೋರುತ್ತಿಲ್ಲ ನೋಡು. ದಿನವೂ ಖಾಲಿ ಮಾಡಿಕೊಳ್ಳುವ ಚಂದಿರನ ಕಾಂತಿಗೂ ಹೊಟ್ಟೆ ಕಿಚ್ಚುಪಡುವಷ್ಟು ಕಾಂತಿಯನ್ನು ಕಣ್ಣಲ್ಲೇ ಕಾಪಿಟ್ಟುಕೊಂಡಿದ್ದೀಯಾ. ನನ್ನ ಕೆಣಕಲೆಂದೆ ಆ ನೀಳ ಹುಬ್ಬುಗಳ ಸಂಗ ಬೆಳೆಸಿದ್ದೀಯ. ಮುಂಗುರುಳ ಸರಿಸಿ ಸರಿಸಿ ಆ ಮೂಗುತಿಗೆ ಅಷ್ಟು ಸೊಗಸನಿಟ್ಟಿದ್ದು ನೀನೇ ಎಂದು ಅನೌಪಚಾರಿಕ ಸನ್ನೆ ಮಾಡುತ್ತೀಯ. ಆ ಗುಲಾಬಿಯೂ ಕೂಡ ನಿನ್ನ ತುಟಿಯ ರಂಗನ್ನು ಕದ್ದು ತಂದಿರಬೇಕು. ಎಲ್ಲಕ್ಕಿಂತ ಹೆಚ್ಚಾಗಿ ನನ್ನ ಸದಾ ಕಾಡುವುದು ಅಲ್ಲೇ ತುಟಿಯಂಚಿನ ಎಡಕ್ಕೆ ಜಾರಿ ಬಿದ್ದ ಆ ಕಡುಗಪ್ಪು ಮಚ್ಚೆ. ಎಂದಿನಿಂತೆ ಸಹಜ ಸೀನನ್ನಣ ಅಂಗಡಿಯಲ್ಲಿ ಚಹಾ ಕುಡಿಯುವಾಗ ನೀನು ಬೇಕಂತಲೆ ಆ ಓಣಿಯಲ್ಲಿ ನಡೆದು ಬರುತ್ತಿದ್ದೆ. ನನ್ನ ಕಡೆ ವಾರೆಗಣ್ಣಿನಿಂದ ಎದೆ ಮೇಲಿದ್ದ ಜಡೆಯನ್ನು ಬಿರುಸಾಗಿ ಬೆನ್ನಿಗೆ ಬಿಸಾಕಿ ನಡೆಯುತ್ತಿದ್ದೆ.

ಆ ದಾರಿಯ ತಿರುವಿನಲ್ಲಿ ನೀ ಬೀಸುತಿದ್ದ ವಾರೆನೋಟದ ಫೋಕಸ್ಸು ಮಾತ್ರ ನನ್ನ ಕಣ್ಣಿಗೆ ಹಾಕಿದ ಬಲೆ. ಆವತ್ತು, ಸಂಜೆಗೆಂಪು ಸೂರ್ಯ ಧೈರ್ಯ ನೀಡಿದ್ದ…ಬೆಟ್ಟದ ಹಾದಿಯಲ್ಲಿ ನಿನ್ನ ತಡೆದು ನಿಲ್ಲಿಸಿ, ‘ಸದಾ ನಿನ್ನ ನೋಡುವಾಸೆ. ಈ ಎದೆಯಲ್ಲಿ ನಿನ್ನ ಹೆಸರು ಬರೆದುಕೊಂಡಿದ್ದೇನೆ. ನಿನ್ನ ಸಹಿ ಹಾಕು ಸಾಕು. ಈ ಜನ್ಮಕ್ಕೆ ನೀನೇ… ಎಂದು ಒಂದೇ ಉಸಿರಿನಲ್ಲಿ ಹೇಳಿಬಿಟ್ಟೆ’. ಮರುದಿನ ಅದೇ ದಾರಿಯಲ್ಲಿ ನಿನ್ನ ಮುಗುಳುನಗೆ ನನಗೆ ಸನ್ನೆ ಮಾಡಿ ಹೇಳಿತು. ಇನ್ನೂ ತಡಮಾಡಬೇಡ, ನನಗೂ ನೀನೇ ಅಂದಂತಿತ್ತು. ಅಂದಿನಿಂದ ಇಬ್ಬರೂ ದಿನಗಳಲ್ಲಿ ಬೆರೆತುಕೊಂಡೆವು. ನಿನ್ನ ಕಣ್ಣುಗಳೇ ನನಗೆ ಮೇಘಭಾಷೆ. ಎಲ್ಲವನ್ನೂ ಆ ಕಣ್ಣುಗಳೇ ಮಾತಾಡುತಿದ್ದವು. ಮೌನಕ್ಕೂ ಅಷ್ಟು ಶಕ್ತಿ ಇದ್ದದ್ದು ನನಗೆ ಆಗಲೇ ಗೊತ್ತಾಗಿದ್ದು. ನನ್ನ ಕಣ್ಣು ಸನ್ನೆ ಮಾಡಿತೆಂದು ನೀನು ಆ ದಿನ ಊರ ಜಾತ್ರೆಗೆ ಮೊದಲ ಸಲ ಸೀರೆಯುಟ್ಟು ಬಂದದ್ದು, ನನ್ನ ತಲೆಗೂದಲಿನಲ್ಲಿ ನಿನ್ನ ಬೆರಳಾಡಿಸಿ ಹಣೆಗೊಂದು ಹೂ ಮುತ್ತನಿಕ್ಕಿದ್ದು ಇನ್ನೂ ಈ ಕಣ್ಣಲ್ಲಿ ನಿಗಿ ನಿಗಿ. ಎಷ್ಟೊಂದು ನೆನಪುಗಳನ್ನು ಜತನ ಮಾಡಿಟ್ಟಿದ್ದೇನೆ ಈ ಹೃದಯದ ಕಪಾಟಿನಲ್ಲಿ.

ನಾನು ದೂರದೂರಿಗೆ ಓದಲು ಹೋಗಬೇಕಾಗಿ ಬಂತು. ಈ ಎರಡು ವರುಷ ಹೇಗಾದರೂ ಸಹಿಸಿಕೋ ಮುಗಿಸಿಕೊಂಡೇ ಬರುತ್ತೇನೆ. ಒಂದೊಳ್ಳೆ ಕೆಲಸವೂ ಜೊತೆಗಿರುತ್ತದೆ. ಆಮೇಲೆ ನಮ್ಮ ಗೂಡೊಂದನ್ನು ಕಟ್ಟಿಕೊಳ್ಳೋಣ, ಇದೆಲ್ಲಾ ನಿನಗಾಗಿ. ನಿನ್ನ ಕೈ ಮೇಲೆ ಕೈಯಿಟ್ಟು ಈ ಜೀವನ ಕಟ್ಟುವುದಕ್ಕಾಗಿ ಅಂದಿದ್ದೆ. ನಿನ್ನ ಕಣ್ಣುಗಳು ಬಿಡಲೊಲ್ಲವು. ಆ ಕ್ಷಣ ನಿನ್ನ ಅದರಕ್ಕೊಂದು ಸಿಹಿಮುತ್ತನಿತ್ತು ಬ್ಯಾಗ್ ಹೆಗಲಿಗೇರಿಸಿಕೊಂಡಿದ್ದೆ. ಅಂದು ನಿನ್ನ ಕಣ್ಣುಗಳು ಸಾರಿ ಹೇಳುತಿದ್ದವು…ಮರೀಬೇಡ…ಈ ಜೀವ ಕಾಯುತ್ತಿರುತ್ತದೆ.

ನೀನೊಂದು ಅಗಾಧ ಮೌನ. ಆ ಮೌನವನ್ನು ಈ ಕ್ಷಣಕ್ಕೂ ಧ್ಯಾನಿಸುತಿದ್ದೇನೆ. ನಿನಗೆ ನಾ ಮರಳಿರುವ ಸುದ್ದಿ ಮುಟ್ಟಿ ಇಲ್ಲಿಗೆ ಅರ್ಧ ಮಾಸವಾಯಿತು. ನಿನ್ನ ಕಣ್ಣಲ್ಲಿ ಕಣ್ಣಿಡಬೇಕು. ಇಷ್ಟು ದಿನ ಜತನ ಮಾಡಿರುವ ಅಷ್ಟನ್ನೂ ನಿನ್ನ ಕಿವಿಯಲ್ಲಿ ಪಿಸುಗುಟ್ಟಬೇಕು. ನನ್ನ ಮೊದಲ ಸಂಬಳ ನಿನ್ನ ಕೈಯಲ್ಲಿಡಬೇಕು. ನಿನ್ನಿಂದಲೇ ನಮ್ಮನೆ ದೇವರ ದೀಪ ಹಚ್ಚಿಸಬೇಕು. ನಿನ್ನ ಮಡಿಲಿನಾಸರೆ ಬಯಸಬೇಕು. ನಿನ್ನ ಕಂಗಳಲ್ಲಿ ನಾವು ಗೆದ್ದ ಖುಷಿ ಕಾಣಬೇಕು. ನೀನು ಉಸಿರಾಡುವ ಗಾಳಿಯಷ್ಟು ನನ್ನಲ್ಲಿ ಬೆರೆತು ಹೋಗಿದ್ದೀಯಾ ಅಂತ ಒತ್ತಿ ಹೇಳಬೇಕು. ನಿನಗೂ ಅಷ್ಟೇ ಅಲ್ಲವಾ… ಈ ಪ್ರೀತಿ ಬುತ್ತಿಯ ಕೈ ತುತ್ತನ್ನು ನಿನ್ನ ಕೈಯಾರೆ ಬಡಿಸು ಬಾ ಎಂದು ಹಪಹಪಿಸತ್ತಿರುವುದು ಕೇಳುತ್ತಿಲ್ಲವೇ? ಮಾಡಿದ ಎಲ್ಲಾ ಪ್ರಯತ್ನಗಳಿಗೆ ನಿನ್ನಿಂದ ಒಂದಾದರೂ ಸಬೂಬು ಬಂದಿಲ್ಲ. ಯಾರೋ ಹೇಳಿದರು ನಿನಗೆ ಗಟ್ಟಿ ಕುಟುಂಬದಿಂದ ಸಂಬಂಧವೊಂದು ಬಂದಿದೆಯಂತೆ. ನಾಲ್ಕು ತಿಂಗಳ ಹಿಂದೆಯಷ್ಟೆ ಬಹಳ ಅದ್ಧೂರಿಯಾಗಿ ನಿನ್ನ ಜೊತೆ ಅಂಗೀಕಾರ ಮಾಡಿಕೊಂಡರಂತೆ. ಅದಕ್ಕಾಗಿ ನಿನಗೆ ನನ್ನ ನೆನಪಿಲ್ಲವಂತೆ.

ನನಗೆ ಗೊತ್ತು. ನೀನು ಈ ನಮ್ಮ ಬೆಸುಗೆಯ ಕೊಂಡಿಯನ್ನು ಅಷ್ಟು ಸುಲಭವಾಗಿ ಕಳಚಿಕೊಳ್ಳುವವಳಲ್ಲ. ನನ್ನ ಕಿರುಬೆರಳಿಗೆ ಮೋಸಮಾಡುವುದಿಲ್ಲ. ಯಾವುದೋ ಮುಲಾಜಿಗೆ ಕೈಯೊಡ್ಡಿರಬಹುದು. ಇನ್ನೂ ತಡಮಾಡಬೇಡ. ನನ್ನ ಕಾಯಿಸಬೇಡ. ಬಾ ಎಂದಿನಂತೆ ನನ್ನ ಕಣ್ಣಲ್ಲಿ ಕಣ್ಣಿಡು. ನಾನೇ ನಿನ್ನ ಓದಿಕೊಳ್ಳುತ್ತೇನೆ. ನಿನ್ನ ಎದೆಗೂಡಿನ ಕನ್ನಡಿಯಲ್ಲಿ ನನ್ನ ನೋಡಿಕೊಳ್ಳುತ್ತೇನೆ. ಆ ಒಲವಿನ ಕನ್ನಡಿ ಎಂದೂ ನನಗೆ ಮೋಸ ಮಾಡುವುದಿಲ್ಲ. ಕೇಡು ಬಗೆಯುವುದಿಲ್ಲ. ನನ್ನ ಹೆಸರು ಅಲ್ಲಿ ಹಚ್ಚೊತ್ತಿರುತ್ತದೆ. ನನ್ನ ಸನಿಹಕಾಗಿ ಕಾದ ನಿನ್ನ ತುಟಿಗಳು ಕರೆಯುತ್ತವೆ. ಎಲ್ಲಾ ದುಗುಡಗಳಿಗೆ ಬಿಗಿಯಾದ ಅಪ್ಪುಗೆಯೊಂದು ಸಾಕ್ಷಿಯಾಗುತ್ತದೆ. ನನ್ನ ಬಿಡಬೇಡ ಎನ್ನುವ ನಿನ್ನೊಡಲ ದನಿಯ ಪಿಸುಮಾತಿಗೆ ನಿನ್ನ ಕೈ ಹಿಡಿದು ಸಪ್ತಪದಿ ತುಳಿಯುತ್ತೇನೆ. ಎಂದೆಂದೂ ನಿನ್ನ ಜೊತೆಗಾರನಾಗುತ್ತೇನೆ. ನೀನೇ ನನ್ನ ಎದೆಗೂಡಿನ ಗೌಡತಿ ಎಂದು ಈ ಜಗತ್ತಿಗೆ ಕೂಗಿ ಹೇಳುತ್ತೇನೆ. ಮತ್ತೆ ಮತ್ತೆ ನಿನ್ನೊಡಲಲ್ಲಿ ಮಗುವಾಗುತ್ತೇನೆ. ನಿನ್ನ ಕೊಟ್ಟ ಈ ಜಿಂದಗಿಗಿಷ್ಟು ಸಲಾಮು ಹೇಳುತ್ತೇನೆ.
ಬೀರೇಶ್ ಎನ್ ಗುಂಡೂರ್


ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Oldest
Newest Most Voted
Inline Feedbacks
View all comments
0
Would love your thoughts, please comment.x
()
x