ಮೈಸೂರು ದಸರಾ. ಎಷ್ಟೊಂದು ಸುಂದರ.. ಎಂಬ ಹಾಡನ್ನು ಕೇಳಿದ್ನೇ ಹೊರತು ಅದ್ನ ಕಣ್ಣಾರೆ ನೋಡೋ ಭಾಗ್ಯ ಇತ್ತೀಚೆಗಿನವರೆಗೂ ಸಿಕ್ಕಿರಲಿಲ್ಲ. ತೀರಾ ಸಣ್ಣವನಿದ್ದಾಗ ನನ್ನಪ್ಪ, ನನ್ನ ಮುತ್ತಜ್ಜ(ಅಜ್ಜಿಯ ಅಪ್ಪ) ಮೈಸೂರು ದಸರಾಕ್ಕೆ ಹೋದ ಕತೆ, ಅಲ್ಲಿ ನನ್ನ ಮುತ್ತಜ್ಜನ ಒಳಜೇಬನ್ನೇ ಕತ್ತರಿಸಿದ ಕಳ್ಳರ ಕಥೆ , ಮೈಸೂರಿಗೆ ದಸರಾ ಸಮಯದಲ್ಲಿ ಹೋದ್ರೆ ಕಾಲಿಡೋಕೂ ಆಗಲ್ಲ ದಸರಾನಾ ರಸ್ತೆ ಮೇಲೆ ನೋಡೋದು ಹೋಗ್ಲಿ ಮನೆ ಮಹಡಿ ಮೇಲೆ ನಿತ್ತು ನೋಡೋದಕ್ಕೂ ಕಷ್ಟಪಡ್ಬೇಕು ಎಂಬ ಮಾತುಗಳೇ ದಸರಾಕ್ಕೆ ಹೋಗದಂತೆ ತಡೀತಿದ್ವಾ ಅಥವಾ ಕಣ್ಣಾರೆ ನೋಡಿದ್ದಕ್ಕಿಂತಲೂ ಹೆಚ್ಚಿಗೆ ತುಂಬಿಹೋಗಿದ್ದ ಊಹಾಪೋಹಗಳೇ ತಡೀತಿದ್ವಾ ಗೊತ್ತಿಲ್ಲ. ದಸರಾ ಎಂದರೆ ಮುಂಚೆ ಮಹಾರಾಜರು ಆನೆಯ ಮೇಲೆ ಕುಳಿತು ನಡೆಸುತ್ತಿದ್ದ ಮೆರವಣಿಗೆ ಆಮೇಲೆ ಅದರ ಬದಲು ದೇವಿ ಚಾಮುಂಡೇಶ್ವರಿಯ ಮೆರವಣಿಗೆ ನಡಿಯುವಂತಹ ವಿಜಯದಶಮಿಯ ದಿನ ಸಿಕ್ಕಾಪಟ್ಟೆ ರಷ್ಷಿರುತ್ತೆ. ಬೇರೆ ಸಂದರ್ಭದಲ್ಲೂ ಇರತ್ತೆ ಆದ್ರೆ ನೋಡ್ಬೋದು ಕಣ್ರೋ . ಬೆಂಗ್ಳೂರಲ್ಲೇ ಇದ್ದು ಮೈಸೂರು ದಸರಾ ನೋಡಕಾಗ್ಲಿಲ್ಲ ಅಂದ್ರೆ ಹೆಂಗೆ ಅಂದ ಗೆಳೆಯರ ಮಾತಿಗೆ ಒಪ್ಪಿ ನಮ್ಮ ಗ್ಯಾಂಗು ಕೊನೆಗೂ ಮೈಸೂರಿಗೆ ಹೊರಟಿತು. ಮತ್ತೊಂದು ದಸರಾ ಬರ್ತಿರೋ ಈ ಸಂದರ್ಭದಲ್ಲಿ ಆ ಅರಮನೆ ದೀಪಾಲಂಕಾರ, ಕೆಆರೆಸ್ಸು, ಚಾಮುಂಡಿ ಬೆಟ್ಟಗಳ ಸುಂದರ ನೆನಪುಗಳದೇ ಅಂಬಾರಿ.. ಹಾಗಾಗಿ ಅವೇ ನೆನಪುಗಳ್ನ ದಾಟಿಸೋ ಪ್ರಯತ್ನ ಈ ಬಾರಿ.
ಮೈಸೂರು ಅರಮನೇನ ನೋಡ್ಬೇಕು. ಸರಿ, ಅದ್ರಲ್ಲಿ ಏನು ನೋಡ್ಬೇಕು ? ಅರೆ, ಇದೊಳ್ಳೆ ಪ್ರಶ್ನೆ ಆಯ್ತಲ್ಲ ಅಂದ್ಕೊಂಡ್ರಾ ? ಇದು ದಸರಾ ಸಮಯ ಸ್ವಾಮಿ. ಹಾಗಾಗಿ ಕೇಳ್ಬೇಕಾದ ಪ್ರಶ್ನೆನೆ. ದೀಪಾಲಂಕಾರ ನೋಡ್ಬೇಕು ಅಂದ್ರೆ ಸಂಜೆ /ರಾತ್ರಿ ಬರ್ಬೇಕು. ಅರಮನೆ ಒಳಗಡೆ ನೋಡ್ಬೇಕು ಅಂದ್ರೆ ಬೆಳಗ್ಗೆ ಹೊತ್ತು ಬರ್ಬೇಕು. ಅರಮನೇನ ಯಾವಾಗಾದ್ರೂ ನೋಡ್ಬೋದು. ಆದ್ರೆ ದೀಪಾಲಂಕಾರ ನೋಡ್ಲೇಬೇಕು ಅಂತ ಎಲ್ರೂ ಮಾತಾಡ್ಕೊಂಡ್ವಿ. ಸರಿ ಬೆಳಗ್ಗೆ ಏನ್ಮಾಡೋದು ಅಂತ ಮಾತಾಡ್ತಿರೋವಾಗ್ಲೇ ಮೈಸೂರು ಬರೋದಕ್ಕೂ ಚಾಮುಂಡಿ ಬೆಟ್ಟ ಸ್ವಾಗತ ಕೋರ್ತಿರೋ ತರಾ ಕಾಣೋದಕ್ಕೂ ಸರಿ ಹೋಯ್ತು . ಮೈಸೂರು ಮುಟ್ಟಿ ಒಂದು ಹಂತದ ತಿಂಡಿ ಮುಗ್ಸೋ ಹೊತ್ತಿಗೆ ಮೊದ್ಲು ಚಾಮುಂಡಿ ಬೆಟ್ಟ ನೋಡೋದಂತ್ಲೂ ಆಮೇಲೆ ಸಂಜೆಗೆ ದೀಪಾಲಂಕಾರ ನೋಡೋಂದಂತ್ಲೂ ಪ್ಲಾನ್ ಮಾಡಿದ್ವಿ. ಆದ್ರೆ ಬೆಂಗ್ಳೂರಿಂದ ಬಂದ ಎಲ್ಲ ಗೆಳೆಯರ ಕೈಲೂ ಬ್ಯಾಗುಗಳು. ಬ್ಯಾಗು ಹೊತ್ಕೊಂಡು ತಿರುಗೋದೇಗೆ ? ಮೈಸೂರಿನ ನಂಬನಿ(ನಂದಿ ಬಸ್ ನಿಲ್ದಾಣ)ದಲ್ಲಿ ವಿಚಾರಿಸಿದ್ರೆ ಅಲ್ಲೆಲ್ಲೂ ಇಲ್ಲ ಅಂತದ್ರೂ. ನಾವು ಇಳಿದ ರೈಲ್ವೇ ಸ್ಟೇಷನ್ನಿನಲ್ಲೇ ಕೇಳಿದ್ರೆ ಅಲ್ಲೇ ಇಡ್ಬೋದಿತ್ತೇನೋ. ಆದ್ರೆ ಮೈಸೂರು ತಿರ್ಗೋ ಹುಮ್ಮಸ್ಸಲ್ಲಿ ಸೀದಾ ನಂಬನಿಗೆ ಬಂದು ಬಿಟ್ಟಿದ್ವಲ್ಲ. ವಾಪಾಸು ಹೋಗೋ ಮನಸ್ಸಿಲ್ಲದೇ ಗೆಳೆಯನ ನೆಂಟರ ಮನೆಗೆ ಹೊರಟ್ವಿ. ಅಲ್ಲಿ ಬ್ಯಾಗಿಟ್ಟು ಮತ್ತೆ ವಾಪಾಸ್ಸು ಬರೋ ಹೊತ್ತಿಗೆ ಸಾಕಷ್ಟು ಸಮಯ ಹಾಳಾಗಿತ್ತಾದ್ರೂ ನಮ್ಮ ಹುಮ್ಮಸ್ಸು ಕಿಂಚಿತ್ತೂ ಕಮ್ಮಿಯಾಗಿರ್ಲಿಲ್ಲ.
ಚಾಮುಂಡಿಬೆಟ್ಟಕ್ಕೆ ಹವಾನಿಯಂತ್ರಿತ ಬಸ್ಸುಗಳೂ, ಸೀದಾ ಬಸ್ಸುಗಳು ಇವೆ ಅಂತ ನಾನು ಬರ್ಯೋಕೆ ಹೋದ್ರೆ ನಿಮ್ಮಲ್ಲಿ ಅನೇಕರೆಲ್ಲಾ ಸೇರಿ ನನಗೆ ಹೊಡ್ಯೋಕೆ ಬರ್ಬೋದು!! ಅದು ಎಲ್ಲರಿಗೂ ಗೊತ್ತಿರೋ ವಿಷಯನೇ ಹೊಸದೇನಿದ್ರೂ ಇದ್ರೆ ಹೇಳು ಅಂತ ಕೇಳೋ ಮೊದ್ಲೆ ಹೇಳ್ಬಿಡ್ತೇನೆ. ಚಾಮುಂಡಿಬೆಟ್ಟಕ್ಕೆ ಬಸ್ಸಲ್ಲಿ ಹೋಗೋಕಿಂತಲೂ ನಡ್ಕೊಂಡೋ,ಸ್ವಂತ ವಾಹನವೇನಾದ್ರೂ ಇದ್ರೆ ಅದ್ರಲ್ಲಿ ಹೋಗೋದು ಒಳ್ಳೇದು ಅನ್ಸತ್ತೆ. ಯಾಕಂದ್ರೆ ಆ ರಸ್ತೆಯಲ್ಲಿ ಸಿಗೋ ಅಸಂಖ್ಯ ಹಳದಿ, ಕೆಂಪು, ನೀಲಿ ಹೂಗಳು, ಸುಂದರ ದೃಶ್ಯಾವಳಿ ಕ್ಯಾಮೆರಾ ಹೊತ್ತು ತಂತಿದ್ದ ನನ್ನ ಸ್ನೇಹಿತರು ಕರಬುವಂತೆ ಮಾಡ್ತಿದ್ವು. ಚಲಿಸೋ ಬಸ್ಸಿನಲ್ಲಿ ಆ ದೃಶ್ಯಗಳ ಸೆರೆ ಹಿಡಿಯಲಾರದೇ,ಅ ದೃಶ್ಯಗಳು ಮಿಸ್ಸಾಗುವುದನ್ನೂ ಬಿಡಲೂ ಆಗದೇ ಅವರು ಪರದಾಡುತ್ತಿದ್ದರೆ ಕ್ಯಾಮೆರಾಗಳಿಲ್ಲದ ನಮ್ಮಂತವರು ನಿರ್ಲಿಪ್ತರಾಗಿ ಪ್ರಕೃತಿಯನ್ನು ಆನಂದಿಸಲೂ ಆಗದೇ, ಬಾಲ್ಯ ಸ್ನೇಹಿತರನ್ನು ಬೈದು ಸುಮ್ಮನಿರಿಸಲೂ ಆಗದಂತಹ ದ್ವಂದ್ವದಲ್ಲಿ ಸಿಕ್ಕಿದ್ದೆವು. ಬರೋ ಹೊತ್ತಿಗಾದ್ರೂ ನಡೆದೇ ಬರ್ಬೇಕು ಅಂತ ನಿಶ್ಚಯಿಸಿದ್ವಿ. ಪ್ರಧಾನ ದೇಗುಲದ ಹೊರಗೆ ಜಿನುಗುತ್ತಿದ್ದ ಮಳೆಯಲ್ಲಿ ಅರ್ಧಘಂಟೆ ನೆನೆಯುತ್ತಲೇ ದೇವರ ದರ್ಶನ ಪಡೆದು ಮಹಿಷಾಸುರನೆದ್ರು ನಿಂತು ಫೋಟೋ ತೆಗೆಸಿ ನಂದಿಯನ್ನು ನೋಡಲು ಹೊರಟೆವು.
ಚಾಮುಂಡಿ ಬೆಟ್ಟಕ್ಕೆ ಕೆಳಗಿನಿಂದ ಹತ್ತಿದ್ರೆ ಸುಮಾರು ಸಾವಿರ ಮೆಟ್ಟಿಲು. ಅದರ ಸುಮಾರು ಮುಕ್ಕಾಲು ಭಾಗ ಅಂದ್ರೆ ಏಳು ನೂರು ಐವತ್ತು ಹತ್ತಿದ್ರೆ ಸಿಕ್ಕೋದು ನಂದಿ. ನಾವು ಚಾಮುಂಡಿಬೆಟ್ಟದಿಂದ ಕೆಳಗೆ ಅವೇ ಇನ್ನೂರ ಐವತ್ತು ಮೆಟ್ಟಿಲಿಳಿದು ನಂದಿ ನೋಡೋಕೆ ಹೊರಟ್ವಿ. ಕಡುಗಪ್ಪು ನಂದಿ ನೋಡೋಕೆ ದಸರಾ ಇರ್ಲಿ ಇಲ್ಲದಿರಲಿ ಜನಜಂಗಳಿಯೆ. ಇಷ್ಟು ದೊಡ್ಡವನಿರೋ ನಾನೇ ತಣ್ಣಗೆ ಕೂತಿದ್ದೇನೆ , ನನ್ನ ಕಾಲು ಭಾಗವೂ ಇಲ್ಲದ ಹುಲುಮಾನವ ನೀನು. ಎಷ್ಟು ಹಾರಾಡ್ತೀಯಪ್ಪ ನೀನು ಅಂತ ನಂದಿ ಮಾತಾಡ್ತಿದೆಯೋ ಅನಿಸಿತೊಮ್ಮೆ ! ನಂದಿಗೆ ನಮಸ್ಕರಿಸಿದ ನಮಗೆ ಎರಡು ಆಯ್ಕೆ. ಒಂದು ವಾಪಾಸು ಮೇಲೆ ಹತ್ತೋದು. ಇಲ್ಲಾ ಚಾಮುಂಡಿಬೆಟ್ಟದ ಕೆಳಗಿನವರೆಗೆ ನಡೆದುಹೋಗೋದು. ಆದ್ರೆ ಮುಂಚೆ ಬೆಟ್ಟಕ್ಕೆ ಬಸ್ಸಲ್ಲಿ ಹೋಗ್ತಾ ಕಂಡಿದ್ದ ವೀಕ್ಷಣಾಗೋಪುರವೊಂದು ನೆನಪಾಗಿ ಅಲ್ಲಿವರೆಗಾದ್ರೂ ನಡೆದುಹೋಗ್ಬೇಕು. ಅಲ್ಲಿಂದ ಹೇಗೂ ಬರ್ತಿರೋ ಬಸ್ಸುಗಳು ಸಿಕ್ಕುತ್ತೆ. ಇಲ್ಲಾ ಆಂದ್ರೆ ವಾಪಾಸು ಹತ್ತಿಬರೋದು ಅಂತ ಅಂದ್ಕೊಂಡ್ವಿ. ಸರಿ ಅಂತ ರಸ್ತೇಲೇ ನಡೀತಾ ಸಾಗಿದ ನಮಗೆ ಮತ್ತೆ ಕೆಳಗಿಳಿಯೋ ಮೆಟ್ಟಿಲುಗಳು ಕಂಡವು. ರಸ್ತೆಯಾಚೆಯ ಮೇಲೆ ಹತ್ತೋ ಮೆಟ್ಟಿಲುಗಳಲ್ಲೇ ಬಂದಿದ್ರೆ ಇನ್ನೂ ಬೇಗ ಆ ತಿರುವಿಗೆ ಬರ್ಬಹುದಿತ್ತು ಅಂತ ಅವಾಗ ಅನಿಸಿತು.( ನಂದಿಯ ಹತ್ರ ಮೆಟ್ಟಿಲುಗಳ್ನ ಬಿಟ್ಟು ರಸ್ತೆ ಹಿಡಿದಿದ್ವಲ್ಲ). ನಡೀಬೇಕು ಅಂತ ಮುಂಚೆಯೇ ನಿಶ್ಚಯ ಮಾಡಿದ್ವಲ್ಲ. ಹಾಗಾಗಿ ಏಳು ನೂರು ಮೆಟ್ಟಿಲು ಇಳಿಯೋಕೆ ಹೊರಟೇ ಬಿಟ್ವಿ. ಚಾಮುಂಡಿಬೆಟ್ಟ ಚಾರಣ ಅಂತ ಬರೋರು ಮತ್ತೆ ಹರಕೆ ಹೊತ್ತ ಭಕ್ತರನ್ನು ಬಿಟ್ರೆ ಬೇರ್ಯಾರು ಆ ದಾರಿಯಲ್ಲಿ ಬರೋ ತರ ಕಾಣಲಿಲ್ಲ. ನಾವು ಇಳಿಯುವಾಗೆಂತೂ ಒಂದು ಪ್ರೇಮಿ ಜೋಡಿ ಬಿಟ್ರೆ ದಾರಿಯುದ್ದಕ್ಕೂ ನಮ್ಮ ಗೆಳೆಯರ ಗ್ಯಾಂಗೊಂದೇ.
ಚಾಮುಂಡಿಬೆಟ್ಟದ ಬುಡದಲ್ಲಿ ರಾಜರ ಕಾಲದಲ್ಲೋ ನಂತರವೋ ಕಟ್ಟಿಸಿದ ಹಲವು ತಂಗುದಾಣದಂತಹ ರಚನೆಗಳಿವೆ. ದೂರದಿಂದ ನೋಡಿದ ನಾವು ದೇವಸ್ಥಾನ ಅಂದ್ಕೊಂಡ್ರೂ ಹತ್ತಿರ ಹೋಗಿ ನೋಡಿದಾಗ ತಂಗುದಾಣ ಅಂತ ಗೊತ್ತಾಯ್ತು. ನಂದಿಬೆಟ್ಟಕ್ಕೆ ಬರೋ ಕುಟುಂಬಗಳು ಅಡಿಗೆ, ಊಟ ಮಾಡೋಕೆ, ರಾತ್ರೆಯಾದ್ರೆ ಅಲ್ಲೇ ಮಲಗೋಕೆ ಅನುವಾಗುವಂತೆ ಉದಾರ ಹೃದಯದಿಂದ ಕಟ್ಟಿಸಿದ ಆ ತಾಣಗಳು ಈಗ ಜನರೇ ಇಲ್ಲದೇ ಖಾಲಿ ಬಿದ್ದಿರೋದು ನೋಡಿ ಒಮ್ಮೆ ಹೃದಯ ಕಲಕಿತು. ಅಲ್ಲೇ ಮೂಲೆಯಲ್ಲೊಂದಿಷ್ಟು ತುಳಸಿ ಗಿಡಗಳು, ಸಮಾಧಿಗಳು. ಆ ಕಾಲದ ಶಿಲ್ಪಿಗಳದೋ ಮಂತ್ರಿಗಳದೋ ಇರಬಹುದು. ಹೆಚ್ಚಿನ ಮಾಹಿತಿಯಿಲ್ಲದೇ ಖಾಲಿ ಬಿದ್ದಿದ್ವು. ಹಂಗೇ ಕೆಳಗೆ ಬಂದಾಗ ಯಾವುದೋ ಪ್ರೆಸ್ ಎಂಬ ಕಾರಿನಲ್ಲಿ ಬಂದಿಳಿದ ವಿದೇಶಿಗಳು ಚಾಮುಂಡಿ ಬೆಟ್ಟನ ನಾವಿಳಿದು ಬಂದ ಮೆಟ್ಟಿಲುಗಳಲ್ಲೇ ಹತ್ತೋಕೆ ಹೊರಟಿದ್ದು ಕಾಣಿಸ್ತು !! ಅದ್ರ ಬಗ್ಗೆ ನೋ ಕಾಮೆಂಟ್ಸ್. ಕೆಳಗಿಳಿದ ನಮಗೆ ಕಾಯ್ತಾ ಇದ್ದ ಎರಡು ಆಟೋಗಳು ಕಂಡವು. ಅಂದ್ರೆ ಅಪರೂಪಕ್ಕಾದ್ರೂ ಇಲ್ಲಿ ಜನ ಬರ್ತಾರೆ ಅಂತ ಆಯ್ತು. ಅಬ್ಬಾ ಸದ್ಯ ! ಅದೇ ಆಟೋ ಹತ್ತಿ ಚಾಮುಂಡಿಬೆಟ್ಟಕ್ಕೆ ಹೋಗೋ ದಾರಿಯಲ್ಲೇ ಸ್ವಲ್ಪ ಆ ಕಡೆ ಸಿಗೋ ಮೇಣದ ಮ್ಯೂಸಿಯಂಗೆ ಹೋದೆವು.
ಮೇಣದ ಮ್ಯೂಸಿಯಂ ಅಂದ್ರೆ ಲಂಡನ್ ನ ಮೇಡಂ ಟ್ಯುಸಾಡ್ ಮ್ಯೂಸಿಯಂ ನೆನಪಾಗಬಹುದು ಕೆಲವರಿಗೆ. ಅಮಿತಾಬ್ ಬಚ್ಚನ್, ಐಶ್ವರ್ಯ ರೈ ಹೀಗೆ ಸಿನಿತಾರೆಗಳು ಅವ್ರ ಮೇಣದ ಪ್ರತಿಕೃತಿಗಳೊಂದಿಗೆ ಕೊಟ್ಟ ಪೋಸಿನ ಫೋಟೋಗಳು ಪೇಪರಲ್ಲಿ ಬಂದಿದ್ದು ನೋಡಿರಬಹುದು ನೀವು. ಇದು ಅಷ್ಟು ಚೆನ್ನಾಗಿದೆ ಅಂತ ಹೇಳಲಾಗದಿದ್ದರೂ ಇಲ್ಲಿನವರ ಶ್ರಮಕ್ಕೆ ಒಮ್ಮೆ ಶಭಾಷ್ ಅನ್ನದೇ ಇರೋಕೆ ಸಾಧ್ಯನೇ ಇಲ್ಲ. ಹಲತರದ ವಾದ್ಯಗಳು, ವಾದ್ಯತಂಡಗಳು, ಟೆಲಿಫೋನ್ಗಳು , ಪಂಜಾಬಿ, ಆದಿವಾಸಿ ಹೀಗೆ ಹಲವು ಸಂಸ್ಕೃತಿಗಳು.. ಕೆಲವಂತೂ ನಮ್ಮೆದುರೇ ಜನ ಕೂತಿದ್ದಾರೆನೋ ಅನಿಸುವಂತಿತ್ತು. ಅದನ್ನು ಹೇಳೋದಕ್ಕಿಂತಲೂ ಅಲ್ಲಿ ನೋಡಿಯೇ ಅನುಭವಿಸಬೇಕು.
ಸರಿ, ಅದನ್ನು ನೋಡಿ ಮತ್ತೆ ಮೈಸೂರಿಗೆ ವಾಪಾಸ್ಸು ಬಂದ್ವಿ. ಸಂಜೆಯಾಗುತ್ತಾ ಬಂದಿತ್ತು. ಅರಮನೆಯ ದೀಪಾಲಂಕಾರ ಶುರುವಾಗೋಕೆ ಇನ್ನೂ ಸಮಯ ಇತ್ತು. ಹಾಗಾಗಿ ಜಗನ್ಮೋಹನ ಅರಮನೆ ಅಥವಾ ಜಗನ್ಮೋಹನ ಚಿತ್ರಶಾಲೆಗೆ ಹೋಗೋಣ ಅಂತ ತೀರ್ಮಾನಿಸಿದ್ವಿ. ಜಗನ್ಮೋಹನ ಚಿತ್ರಶಾಲೆ ಅಂದ ತಕ್ಷಣ ಅಲ್ಲಿರೋ ಗಡಿಯಾರ, ರಾಜರ ಕಾಲದ ಚಿತ್ರಗಳು, ದೀಪದ ಮಹಿಳೆ ಹೀಗೆ ಹಲವು ಚಿತ್ರಗಳು ನೆನಪಾಗುತ್ತೆ. ಅಲ್ಲೆಲ್ಲೂ ಕ್ಯಾಮೆರಾ, ಮೊಬೈಲಲ್ಲಿ ಫೋಟೋ ತೆಗೆಯೋಕೆ ಅನುಮತಿ ಇಲ್ದೇ ಇರೋದ್ರಿಂದ ಆ ಚಿತ್ರ ಹಾಕೋಕೆ ಆಗ್ತಾ ಇಲ್ಲ .. ಪ್ರತಿ ಸೆಕೆಂಡ್ ತೋರಿಸೋ ಸೈನಿಕ, ಇಪ್ಪತ್ತು ನಿಮಿಷಕ್ಕೆ ಆಗೋ ಚಲನೆ, ಪ್ರತಿ ಒಂದು ಘಂಟೆಗಾಗುವ ಸೈನಿಕರ ಮೆರವಣಿಗೆ.. ಹೀಗೆ ಆಗಿನ ಕಾಲದಲ್ಲೇ ಮುಂದುವರಿದ ತಂತ್ರಾಂಶ ನೋಡಿ ಖುಷಿಯಾಯ್ತು. ಅದು ಭಾರತದಲ್ಲ, ನಮ್ಮವರಿಗೆ ಅಂತ ತಲೆಯೆಲ್ಲಿ ಎಂಬ ಕುಹಕವೂ ನಮ್ಮವರು ಅದಕ್ಕಿಂತ ಎಷ್ಟೋ ಮುಂದುವರಿದಿದ್ರೂ ವಿದೇಶಿಯರ ನಿರಂತರ ದಾಳಿಯಲ್ಲಿ ಅವೆಲ್ಲಾ ನಶಿಸಿದೆವು ಎಂಬ ಸ್ವಾಭಿಮಾನದ ಮಾತುಗಳೂ ಒಟ್ಟಿಗೇ ನೆನಪಾದವು.
ಅಲ್ಲೇ ಪಕ್ಕದಲ್ಲಿನ ಅಕ್ಕಿಕಾಳಿನ ಮೇಲಿನ ದಶಾವತಾರ ಮುಂತಾದ ಕೆತ್ತನೆಗಳೂ ಮನಸೂರೆಗೊಂಡವು. ರವಿವರ್ಮನ ಜಟಾಯುವಿನ ರೆಕ್ಕೆ ಕಡಿಯುತ್ತಿರುವ ರಾವಣನ ಚಿತ್ರ, ನಳ ದಮಯಂತಿ ಹೀಗೆ ಪ್ರಸಿದ್ದ ಚಿತ್ರಗಳಿಂದ ಹಲವು ಇತ್ತೀಚಿಗಿನ ಪ್ರಸಿದ್ದ ಚಿತ್ರಕಾರರ ಚಿತ್ರಗಳು ನೆಲಮಹಡಿಯಲ್ಲಿವೆ. ಮೇಲ್ಮಡಿಗಳನ್ನು ಹತ್ತುತ್ತಾ ಹತ್ತುತ್ತಾ ಆಗಿನ ಕಾಲದ ವಾದ್ಯಗಳು, ಪಗಡೆಯಂತಹ ಆಟಗಳು, ಜಾಗಟೆಯಂತಹ ವಾದ್ಯಗಳು, ತಬಲಾ.. ಹೀಗೆ ಹಲವು ನಶಿಸುತ್ತಿರುವ ಸಂಸ್ಕೃತಿಗಳಿಗೆ ವೇದಿಕೆಯಂತಿದೆ. ಅಲ್ಲಿನ ಚಿತ್ರಗಳಲ್ಲಿ ಇನ್ನೊಂದು ಮರೆಯಲೇಬಾರದಂತಹ ಚಿತ್ರ ದೀಪದ ಮಹಿಳೆ. ಆ ಚಿತ್ರವನ್ನು ಕತ್ತಲೆಯಲ್ಲಿ ನೋಡಿದರೆ ನಿಜವಾಗಲೂ ಒಬ್ಬ ಮಹಿಳೆ ದೀಪ ಹೊತ್ತು ನಿಂತಂತೆಯೂ ದೀಪದ ಪ್ರಭಾವಳಿ , ನೆರಳುಗಳನ್ನು ನೋಡಿದಂತೆಯೇ ಭಾಸವಾಗುತ್ತೆ! ಅದನ್ನು ನೋಡಿ ಕೆಳಗಿಳಿದಾಗ ಮತ್ತೊಂದು ಕೋಣೆ. ಅಲ್ಲಿ ಐದು , ಹತ್ತನೇ ಶತಮಾನದ ಉತ್ಖತನದ ಕುರುಹಗಳನ್ನು ನೋಡಿ ಒಮ್ಮೆ ಮೈ ಜುಮ್ಮೆಂದಿತು.
ಅಲ್ಲೇ ಮೇಲ್ಗಡೆ ಮೈಸೂರಿನ ಮಹಾರಾಜರು ಮತ್ತು ಅವರ ಆಳ್ವಿಕೆಯ ಇಸವಿಗಳಿರೋ ಚಿತ್ರಗಳೂ ಇವೆ. ಅವರಲ್ಲಿ ಹೆಚ್ಚಿನವರನ್ನು ಗುಲಾಬಿ ಹೂಗಳನ್ನು ಹಿಡಿದಂತೆಯೂ ಕೆಲವರನ್ನು ವಿಭಿನ್ನವಾಗಿಯೂ ಚಿತ್ರಿಸಲಾಗಿದೆ. ಅದೇಕೆಂದು ಅಲ್ಲಿನ ಮೇಲ್ವಿಚಾರಕರಲ್ಲಿ ಪ್ರಶ್ನಿಸಿದಾಗ ಸೂಕ್ತ ಉತ್ತರ ಸಿಗಲಿಲ್ಲ. ನಿಮ್ಮಲ್ಯಾರಾದ್ರೂ ಇತಿಹಾಸಜ್ನ ಮಿತ್ರರಿದ್ದರೆ ಆ ಬಗೆಗಿನ ಮಾಹಿತಿ ಹಂಚಿಕೊಳ್ಳಬಹುದು. ಅಲ್ಲಿನ ಮತ್ತೊಂದು ಮನಸೂರೆಗೊಳ್ಳುವ ಅಂಶ ಅರವತ್ತು ಸಂವತ್ಸರಗಳ ಬಗೆಗಿನ ಸ್ತೋತ್ರಗಳು ಮತ್ತು ಸಂವತ್ಸರದ ಬಗೆಗಿನ ಚಿತ್ರಗಳು. ಇದರಲ್ಲಿ ಕೆಲವು ಸಂವತ್ಸರಗಳು ಕಾಣೆಯಾಗಿದ್ದವೆನ್ನೋದು ಮತ್ತೊಂದು ಬೇಸರದ ಸಂಗತಿ. ಇಲ್ಲಿ ಎಲ್ಲವನ್ನೂ ಹಾಕಲು ಜಾಗವಿಲ್ಲದೇ ಬೇರೆಡೆ ಸ್ಥಳಾಂತರಿಸಲಾಗಿದೆ ಎಂಬ ಮಾತು ಕೇಳಿಬಂದರೂ ಅದು "ಎಲ್ಲಿ" ಎಂಬ ಖಚಿತ ಮಾಹಿತಿ ಸಿಗಲಿಲ್ಲ. ಮೈಸೂರು ಪ್ರಧಾನ ಅರಮನೆ ಎಂದು ಕೆಲವರು ಹೇಳುತ್ತಾರಾದ್ರೂ ಅರಮನೆ ನೋಡೋಕೆ ಆಮೇಲೆ ಹೋದ್ರೂ ಅಲ್ಲಿ ಅವು ಕಾಣಲಿಲ್ಲ. ಇನ್ನೆಲ್ಲಾದ್ರೂ ನೋಡಿದ್ರೆ, ನೀವು ಆ ಮಾಹಿತಿ ಹಂಚಿಕೋಬೋದು.
ಆಷ್ಟೊತ್ತಿಗೆ ಸಂಜೆಯಾಗುತ್ತಾ ಬಂದಿದ್ರೂ ಅರಮನೆಯಲ್ಲಿ ಇನ್ನೂ ದೀಪಾಲಂಕಾರ ಶುರುವಾಗಿರಲ್ಲ ಅನ್ನೋ ಮಾತು ಕೇಳಿಬಂತು. ಸರಿ, ಸೇಂಟ್ ಫಿಲೋಮಿನಾ ಚರ್ಚ್ ನೋಡ್ಕೊಂಡು ಬರೋಣ ಅಂತ ಅಲ್ಲಿಗೆ ಹೊರಟ್ವಿ. ದಾರಿಯಲ್ಲಿ ನೋಡಿದ ಮೈಸೂರಿನ ಪ್ರಸಿದ್ದ ಗಡಿಯಾರದ ಗೋಪುರ, ಸೇಂಟ್ ಫಿಲೋಮಿನಾ ಚರ್ಚು, ಅಲ್ಲಿಗೆ ಹೋಗೋ ದಾರಿಯಲ್ಲೆಲ್ಲಾ ಕಂಡ ಲೈಟುಗಳ ಸೌಂದರ್ಯವನ್ನು ಹೇಳೋದಕ್ಕಿಂತ ಅಲ್ಲಿ ಹೊಗಿ ಸವಿಯೋದೇ ಮೇಲು. ಕೊನೆಗೂ ಅರಮನೆಗೆ ಬಂದೆವು. ಅಬ್ಬಾ ಎಂತಹಾ ದೀಪಾಲಂಕಾರ.. ಸೂಪರ್ರಪ್ಪ.. ಜಗಮಗಿಸುತ್ತಿದ್ದ ಅರಮನೆಯ ಬಗ್ಗೆ ಹೇಳೋದಕ್ಕಿಂತ ಆ ಸೌಂದರ್ಯದ ಕೆಲ ಚಿತ್ರಗಳನ್ನು ಹಾಕೋದೇ ಮೇಲು.. ಆ ರಾತ್ರೆಯಲ್ಲಿ ಅಲ್ಲಿ ನಡೆಯುವ ಸಂಗೀತಗೋಷ್ಟಿಗಳ ಸಂಗೀತ ಸುಧೆಯ ಮಧ್ಯೆ ಆ ಬೆಳಕಿನ ಸವಿ ಸವಿಯೋದೆ ಒಂದು ಸ್ವರ್ಗ ಸಮ ಭಾವ.
ಅರಮನೆಯ ದೀಪಾಲಂಕಾರ ನೋಡುತ್ತಿದ್ದ ನಮಗೆ ಹೊರಬರಲೇ ಮನಸ್ಸಿಲ್ಲ. ಆದ್ರೆ ಏನು ಮಾಡೋದು. ಬರಲೇಬೇಕಲ್ಲ, ಒಲ್ಲದ ಮನಸ್ಸಿಂದ ಹೊರಬಂದು ಸ್ನೇಹಿತನ ನೆಂಟರ ಮನೆ ಸೇರಿದೆವು.
ಮಾರನೆಯ ದಿನ ಬೆಳಗಾಯಿತು. ಅರಮನೆಯನ್ನು ರಾತ್ರೆ ನೋಡಿದ್ದ ನಾವು ಹಗಲು ಅದರ ಒಳಗೆ ನೋಡೋಕೆ ಹೊರಟೆವು.. ದಸರಾ ಅಂದ್ರೆ ಹಗಲೂ ರಾತ್ರಿ ಪ್ರತಿದಿನ ಸಂಗೀತ ಗೋಷ್ಟಿ ನಡೆಯುತ್ತೆ ಅರಮನೆ ಪ್ರಾಂಗಣದಲ್ಲಿ. ನಾವು ಹೋಗಿದ್ದ ದಿನ ಹಲವು ಕಲಾವಿದರ(ನೂರು ಎಂದು ನೆನಪು) ತಬಲಾವಾದನ ಕಾರ್ಯಕ್ರಮ ನಡೀತಿತ್ತು. ಅಂಬಾರಿ, ದರ್ಬಾರ್ ಹಾಲ್, ಹೀಗೆ ನೂರೆಂಟು ಸೌಂದರ್ಯದ ಖನಿ ಅರಮನೆಯ ಸೌಂದರ್ಯವನ್ನು ಕಣ್ಣುಗಳಲ್ಲಿ ತುಂಬಿಕೊಳ್ಳಲಾಗದಿದ್ದರೂ ತುಂಬಿಕೊಳ್ಳೋ ಪ್ರಯತ್ನದಲ್ಲಿ ಹೊರಬಂದೆವು. ಆಮೇಲೆ ಅಲ್ಲೇ ಪಕ್ಕದಲ್ಲಿದ್ದ ದೇಗುಲವನ್ನೂ ಪಕ್ಕದಲ್ಲಿದ್ದ ಫಲಪುಷ್ಪ ಪ್ರದರ್ಶನವನ್ನೂ ನೋಡಿದೆವು. ಮೈಸೂರಿನ ಟಾಂಗಾಗಾಡಿಗಳು, ಮೈಸೂರು ಮೃಗಾಲಯಗಳು, ಕೆ ಆರೆಸ್ಸು ಅಲ್ಲೇ ಪಕ್ಕದ ನಂಜನಗೂಡು ಹೀಗೆ ಸುಮಾರಷ್ಟು ನೋಡುವಂತಹ ಸ್ಥಳಗಳಿದ್ರೂ ಆ ದಿನವೇ ಬೆಂಗಳೂರಿಗೆ ಮರಳೋ ಅನಿವಾರ್ಯತೆ ಇದ್ದಿದ್ರಿಂದ ಒಲ್ಲದ ಮನಸ್ಸಿಂದ ಬಸ್ಸು ಹತ್ತಿದ್ವಿ. ಹಿಂದೊಮ್ಮೆ ಇವುಗಳಿಗೆಲ್ಲಾ ಹೋಗಿದ್ರೂ ಮತ್ತೆ ಮತ್ತೆ ಹೋಗೋ ಮನಸ್ಸಿಂದ.. ಮತ್ತೊಮ್ಮೆ ದಸರಾ ಸವಿ ಸವಿಯೋ ನಿರೀಕ್ಷೆಯಿಂದ…
ನಿಮ್ಮ ಪ್ರಶಸ್ತಿ.
ನಿಮ್ಮ ಬರಹ ಸೂಪರ್ ಸಾರ್ .. ಹಲವು ಮಾಹಿತಿ ತಿಳಿದವು .. ಮೇಣದ ಮ್ಯುಜಿಯಂ ಇತ್ಯಾದಿ ..!!
ನಾವೂ ಮೊನ್ನೆ ಮೈಸೂರಿಗೆ ಹೋಗಿದ್ದೆವು..
ಪ್ರತಿ ವರ್ಷನೂ ಹೋಗಬೇಕು -ಹೋಗಬೇಕು ಅಂತ ಯೋಚಿಸಿದ್ದೆ ಆಗಿತ್ತು , ಈ ಸಾರಿ ಅದ್ಕೆ ಕಾಲ ಕೂಡಿ ಬಂತು ..!!
ಬೀದರ್ ಜಿಲ್ಲೆಯ ಸ್ತಬ್ಧ ಚಿತ್ರ ಬರುವವರೆಗೆ ಕಾದಿದ್ದ -ಆ ಬಿಸಿಲಲ್ಲಿ ಬಸವಳಿದ ನಾ -ನೀರು ಕುಡಿಯಲು ಹೊರ ಹೋಗಿ ಬರುವುದರೊಳಗೆ -ಅಂಬಾರಿ- ಕಣ್ಣಿಂದ ಮರೆಯಾಗಿ -ಏನು ನೋಡಬೇಕಿತ್ತೋ ಅದೇ ನೋಡಲು ಆಗ್ಲಿಲ್ಲ… :(((
ಆದರೂ ಸಂಜೆ ಜಗಮಗಿಸುವ ಅರಮನೆ -ಅಲ್ಲಿ ಹಾಕಿದ್ದ ವೀ ಐ ಪಿ ಸೀಟುಗಳ ಮೇಲೆ ಕೂತು ಫೋಟೋ ತೆಗೆದು ಖುಷಿ ಪಟ್ಟೆವು ..!!
ಹಾಗೆಯೇ ರೆಡ್ ಕಾರ್ಪೆಟ್ ಮೇಲೆ ಅಡ್ಡಾಡಿದೆವು .!!!
ವಸ್ತು ಪ್ರದರ್ಶನ ನೋಡಿ -ಪುಸ್ತಕ ಖರೀದಿಸಿ (ನವ ಕರ್ನಾಟಕ ಪಬ್ಲಿಕೇಷನ್ಸ್ ),ಉಯ್ಯಾಲೆಯಲ್ಲಿ ಕೂತು , ಖುಷಿ ಪಟ್ಟೆವು ..
ಚಾಮುಂಡಿ ಬೆಟ್ಟ, ಜೂ , ಕೆ ಆರ್ ಎಸ್ನೋ ರಾತ್ರಿಯಲ್ಲಿ ನೋಡಲು ಆಗದೆ ವ್ಯಥೆ ಆಯ್ತು ..!!
ಕೊನೆಗೂ ಮಧ್ಯ ರಾತ್ರಿ ಕಳೆದು ಸುಮಾರು ೩ ಕ್ಕೆ ಬೆಂಗಳೂರಿಗೆ ಹೊರಟೆವು ..
ಪ್ರವಾಸ ಸೂಪರ್ ಆಗಿತ್ತು .
ಈ ಕರುನಾಡಲ್ಲಿ ಹುಟ್ಟಿದ ನಾವೇ ಧನ್ಯರು ನಿಜ .. ಮತ್ತೆ ಮತ್ತೆ ನಾವ್ ಇಲ್ಲಿಯೇ ಹುಟ್ಟಬೇಕು ..
ಶುಭವಾಗಲಿ
\।/
ವೆಂಕಟೇಶ ಮಡಿವಾಳ ಬೆಂಗಳೂರು