"ಏ..ಏ…" ನಾನು ಕೂಗುತ್ತಲೇ ಇದ್ದೆ! ನನ್ನ ಮಾತಿಗೆ ಕ್ಯಾರೇ ಅನ್ನದೆ, ಹಿಂದಿನ ಮನೆಯ ಕಾಂಪೌಂಡಿನಿಂದ ಕಸ ತುಂಬಿದ ಪ್ಲಾಸ್ಟಿಕ್ ಕವರು ದೊಪ್ಪನೆ ಖಾಲಿ ಸೈಟಿಗೆ ಬಿತ್ತು! ಅದರಿಂದ ನಿಮಗೇನು ತೊಂದರೆ? ಎನ್ನುತ್ತೀರಾ? ಆ ಖಾಲಿ ಸೈಟು ಪಕ್ಕದ್ದೇ ನನ್ನ ಮನೆ! ಹಿಂದಿನ ಮನೆಯವರು ಪ್ರತಿ ದಿನ ಹೀಗೆ ಫಾಸ್ಟ್ ಬೌಲರುಗಳತೆ ದಿನವೂ ಎಸೆಯುತ್ತಿದ್ದ ಕಸ ರಾಶಿಯಾಗಿತ್ತು! ಅದು ಹರಡಿದ್ದ ಸೈಟಿನಲ್ಲ್ಲಿ ತಿಪ್ಪೆ ಸೃಷ್ಟಿಯಾಗಿತ್ತು! ದುರಾದೃಷ್ಟಕ್ಕೆ ನನ್ನ ಮನೆಯ ಎರಡು ಪಕ್ಕದ ಸೈಟುಗಳು ಖಾಲಿಯೇ! ಎಡ ಪಕ್ಕದ ಖಾಲಿ ಸೈಟಿನಾಚೆ ಉಳ್ಳವರು ಒಂದು ಷಾಪಿಂಗ್ ಕಾಂಪ್ಲೆಕ್ಸ್ ಕಟ್ಟಿಸಿದ್ದಾರೆ. ಅದು ಎರಡು ಮಹಡಿಯ ಕಾಂಪ್ಲೆಕ್ಸ್. ನೆಲ ಅಂತಸ್ತಿನಲ್ಲಿ ಓರ್ವ ಉತ್ತರ ಭಾರತೀಯನ ಹಾರ್ಡ್‍ವೇರ್ ಶಾಪು. ಆ ಪುಣ್ಯಾತ್ಮ ತನ್ನ ಅಂಗಡಿಗೆ ಬಂದ ಸರಕಿನ ಪ್ಯಾಕಿಂಗ್‍ನ್ನು ಪಕ್ಕದ ಖಾಲಿ ಸೈಟಿಗೂ, ಮೋರಿಗೂ ಯತಾಶಕ್ತಿ ತುಂಬುತ್ತಾನೆ! ಇನ್ನು ಕಾಂಪ್ಲೆಕ್ಸಿನ ಮಹಡಿಯ ಮೇಲಿನ ಆಫೀಸಿನ ಉದ್ಯೋಗಿಗಳು ತಾವು ಕುಡಿದ ಕಾಫಿಯ ಪೇಪರ್ ಕಪ್ಪು, ಸಿಗರೇಟು ತುಂಡು ಮತ್ತು ಖಾಲಿ ಪ್ಯಾಕುಗಳು, ತಿಂಡಿ ಕಟ್ಟಿಸಿಕೊಂಡು ಬಂದ ಪ್ಲಾಸ್ಟಿಕ್ ಚೀಲಗಳು, ಹಳೆಯ ಚಪ್ಪಲಿಗಳು-ಇನ್ನೂ ಮುಂತಾದ ವೈವಿಧ್ಯಮಯ ತ್ಯಾಜ್ಯಗಳನ್ನು ಖಾಲಿ ಸೈಟಿಗೆ ಎಸೆಯುತ್ತಿರುತ್ತಾರೆ.
ನನ್ನ ಶ್ರೀಮತಿಗೋ ಕಸವೆಂದರೆ ವ್ಯಸನ. ಆ ಕಸ ನೋಡಿದರೆ ಅವಳಿಗೆ ನಿದ್ರೆ ಹತ್ತುವುದಿಲ್ಲ್ಲ. ಅವಳ ನೆಮ್ಮದಿಯ ದೃಷ್ಟಿಯಿಂದ ಆ ಖಾಲಿ ಸೈಟುಗಳಲ್ಲಿ ನಿರಂತರವಾಗಿ ತುಂಬುವ ಕಸವನ್ನು ಹಣ ಕೊಟ್ಟು ನಾನು ಸ್ವಚ್ಛ ಮಾಡಿಸುತ್ತಿದ್ದೇನೆ. ಇದು ಮೂರು ತಿಂಗಳಿಗೊಮ್ಮೆ ತಪ್ಪದೆ ನಡೆಯುವ ಸ್ವಚ್ಛತಾ ಯಜ್ಞ. ಇದರಿಂದ ನಮ್ಮ ಪಕ್ಕದ ಕಾಂಪ್ಲೆಕ್ಸಿನ ವಾಸಿಗರಾಗಲೀ ಇಲ್ಲವೇ ಹಿಂದಿನ ಮನೆಯ ಕಾಂಪೌಂಡಿನ ಹಿಂದೆ ನಿಂತು ಗೂಗ್ಲಿ ಕಸ ಎಸೆಯುವವರಿಗಾಗಲೀ ಕಿಂಚಿತ್ತೂ ತಪ್ಪು ಮಾಡಿದ ಭಾವನೆ ಬರುತ್ತಿಲ್ಲ. ಈ ಉಸಾಬರಿ ನಿಮಗೇಕೆ..? ಕಾರ್ಪೊರೇಷನ್ನಿನವರು ಈ ಕೆಲಸ ಮಾಡಬೇಕು! ಎನ್ನುವಿರಾ..? ಅವರು ಮಾಡುತ್ತಾರೆಂದು ನಂಬಿ ಕೊಟ್ಟ ಅರ್ಜಿಯ ಸ್ವೀಕೃತಿ ಪತ್ರ ಮೂರು ವರ್ಷದಿಂದ ನನ್ನ ಬಳಿಯೇ ಇದೆ! ಹಲವಾರು ಸಲ ನನ್ನ ಅರ್ಜಿಯ ಬಗೆಗೆ ವಿಚಾರಿಸಿದಾಗ "ಯಾವಾಗ ಕೊಟ್ಟಿದ್ದು..? ಇನ್ನೊಂದು ಪ್ರತಿ ಇದ್ದರೆ ಕೊಡಿ, ಕ್ರಮ ಕೈಗೊಳ್ಳೋಣ" ಎನ್ನುತ್ತಿದ್ದರೇ ಹೊರತು ಅದನ್ನು ಈವರೆಗೆ ಕಾರ್ಯಗತಗೊಳಿಸಿಲ್ಲ! ಮುಂದೆ ಮಾಡುವ ಭರವಸೆ ನನಗಂತೂ ಇಲ್ಲ!
ನನ್ನದು ಅದೃಷ್ಟವೋ ದುರಾದೃಷ್ಟವೋ ಗೊತ್ತಿಲ್ಲ. ಇಡೀ ಜೀವನದಲ್ಲಿ ನನಗೆ ಒದಗಿದ ಒಂದೇಒಂದು ಅದೃಷ್ಟವೆಂದರೆ ಸರ್ಕಾರೀ ಸೈಟು ಸಿಕ್ಕಿದ್ದು! ಅದೂ ಮೈನ್ ರೋಡಿನಲ್ಲಿ! ಮೊದಲಿಗೆ ಅದು ಮೈನ್ ರೋಡು ಅಂತ ಗೊತ್ತಿರಲೇ ಇಲ್ಲ. ಆ ಬಡಾವಣೆ ರೂಪುಗೊಂಡಾಗ ರಸ್ತೆಗಳು ತಮ್ಮ ಸ್ವರೂಪವನ್ನೇ ಪಡೆದಿರಲಿಲ್ಲ. ಇಡೀ ಬಡಾವಣೆ ಖಾಲಿ ಹೊಡೆಯುತ್ತಿತ್ತು. ನಾನಲ್ಲಿ ಮನೆ ಕಟ್ಟಿಸಲು ನಿರ್ಧರಿಸಿದಾಗ ಅದು ಮುಖ್ಯ ರಸ್ತೆಯಾಗುವ ಯಾವ ಸೂಚನೆಯೂ ಇರಲಿಲ್ಲ. ಅದು ಎಲ್ಲ ರಸ್ತೆಗಳಂತೆ ಜಲ್ಲಿ ತುಂಬಿದ ರಸ್ತೆಯಾಗಿತ್ತು.
ಇಂತಾ ಖಾಲಿ ಬಡಾವಣೆಯಲ್ಲಿ, ರಾತ್ರಿ ಇರಲಿ, ಹಗಲೇ ದರೋಡೆ ಮಾಡಿದರೂ ಯಾರೂ ಕೇಳದಂತ ಜಾಗದಲ್ಲಿ ಭಂಡ ಧೈರ್ಯ ಮಾಡಿ ಮನೆ ಕಟ್ಟಿಸಿಯೇ ಬಿಟ್ಟೆ! ವಾಸ ಮಾಡಲೂ ಶುರು ಮಾಡಿಬಿಟ್ಟೆ!! ಮನೆಯ ಸ್ವಚ್ಛತೆಯ ಬಗ್ಗೆ ಅತೀವ ಕಾಳಜಿ ಇರುವ ನನ್ನವಳಿಗೆ ಬಾಡಿಗೆ ಮನೆಗಳನ್ನು ತಿಕ್ಕಿತೀಡಿ ಸ್ವಚ್ಫಮಾಡಿ ಸಾಕಾಗಿತ್ತು! ನಾನೇನೂ ಅವಳಿಗೆ ಇದುವರೆಗೂ ಇದ್ದ ಬಾಡಿಗೆ ಮನೆಗಳನ್ನು ಆ ಮಟ್ಟಕ್ಕೆ ಸ್ವಚ್ಫಮಾಡು ಎಂದು ಖಂಡಿತಾ ಹೇಳಿರಲಿಲ್ಲ. ಪ್ರತಿ ಬಾಡಿಗೆ ಮನೆಗೆ ಹೋದಾಗಲೂ, ಹಿಂದಿನ ಬಾಡಿಗೆದಾರರು ಮಾಡಿದ ಹೊಲಸನ್ನು ತಿಕ್ಕುವ ಕೆಲಸವನ್ನು ಅತ್ಯಂತ ಶ್ರದ್ಧೆಯಿಂದ ನನ್ನವಳು ಮಾಡುತ್ತಿದ್ದಳು. ಈಗ ಆ ಉಸಾಬರಿ ತಪ್ಪಿದೆ. ನಾವು ನಮ್ಮ ಸ್ವಂತ ಮನೆಯಲ್ಲೇ ಇದ್ದೇವೆ! ಆದರೆ ಎರಡೂ ಪಕ್ಕದಲ್ಲಿನ ಖಾಲಿ ಸೈಟುಗಳು ನಮಗೆ ತಲೆನೋವಾಗಿವೆ. ಅಲ್ಲಿಗೆ ನಮ್ಮ ನಾಗರೀಕರು ಸುರಿಯುವ ಕಸ ನಮ್ಮ ಅಂಗಳದಲ್ಲೇ ಬಿದ್ದಿದೆ ಎನ್ನುವಂತೆ ನನ್ನ ಶ್ರೀಮತಿ ಪೇಚಾಡುತ್ತಾಳೆ. ಅದನ್ನು ಸ್ವಚ್ಛ ಮಾಡಲು ನಮ್ಮ ಮನೆಯಲ್ಲಿ ಕೆಲಸ ಮಾಡುವ ಮುನಿಯಮ್ಮನ ಮರ್ಜಿ ಕಾಯುತ್ತಾಳೆ. ಒಂದೇ ಸಮ ಮುನಿಯಮ್ಮನÀ ಬೆನ್ನು ಬಿದ್ದರೆ ಯಾವಾಗಲೋ ಒಮ್ಮೆ ಮನಸ್ಸು ಮಾಡಿ ಖಾಲಿ ಸೈಟನ್ನು ಕ್ಲೀನ್ ಮಾಡುವ ಕೆಲಸಕ್ಕೆ ತೊಡಗುತ್ತಾಳೆ. ಅದು ಅವಳಿಗೆ ಇದು ಹೆಚ್ಚುವರಿ ಕೆಲಸ ಹಾಗೂ ಮಾಮೂಲಿ ಕೆಲಸಕ್ಕಿಂತ ಭಿನ್ನವಾದ ಕೆಲಸ. ಹೀಗಾಗಿ ಸೈಟ್ ಕ್ಲೀನಿಂಗ ಕೆಲಸಕ್ಕೆ ಅವಳು ಗಂಡನನ್ನೂ ಕರೆದುಕೊಂಡು ಬರುತ್ತಾಳೆ. ಈ ಹೆಚ್ಚುವರಿ ಕೆಲಸಕ್ಕಾಗಿ ಇವರಿಬ್ಬರಿಗೂ ವಿಶೇಷ ಸಂಭಾವನೆ ನೀಡಲೇಬೇಕಾಗುತ್ತದೆ. ಈ ಖಾಲಿ ಸೈಟುಗಳ ಸ್ವಚ್ಛತೆಗೆ ನಾನೆಷ್ಟು ಖರ್ಚು ಮಾಡಿದ್ದೇನೆ ಎಂದು ಲೆಕ್ಕ ಇಟ್ಟಿಲ್ಲ. ಕಳೆದ ಇಪ್ಪತ್ತು ವರ್ಷ ಇದಕ್ಕಾಗಿ ಮಾಡಿದ ಖರ್ಚು ಲೆಕ್ಕ ಹಾಕಿದರೆ ಅದರ ಮೊತ್ತಕ್ಕೆ ಎದೆಯೊಡೆಯುವುದು ಖಂಡಿತಾ! ಇಪ್ಪತ್ತು ವರ್ಷಗಳಿಂದಲೂ ಈ ಎರಡೂ ಸೈಟುಗಳು ಖಾಲಿಯಾಗೇ ಬಿದ್ದಿವೆ! ಇದರ ವಾರಸುದಾರರು ಈವರೆಗೆ ಪತ್ತೆಯಾಗಿಲ್ಲ! ಕಾರ್ಪೊರೇಷನ್ನಿನ ಆಫೀಸಿನಲ್ಲಿ ಅವುಗಳ ಯಜಮಾನರು ಯಾರೆಂದು ತಿಳಿಯಬಹುದಾದರೂ ಅದರಿಂದ ಏನು ಪ್ರಯೋಜನ? ಹೋಗಲಿ ಇಂತಾ ಮಾಹಿತಿ ಕಾರ್ಪೊರೇಷನ್ನಿನವರು ಕೈಬೆಚ್ಚಗೆ ಮಾಡದೆ ನೀಡಿಯಾರೆ..? ಒಂದು ವೇಳೆ ವಾರಸುದಾರರ ಹೆಸರು ಸಿಕ್ಕರೆ ನಾನೇನು ಮಾಡಬಲ್ಲೆ..? ಇದೆಲ್ಲಾ ಯೋಚಿಸಿ ಕೊನೆಗೆ ನನ್ನ ಆರೋಗ್ಯ ಮತ್ತು ಸುತ್ತಮುತ್ತ ಸ್ವಚ್ಛತೆಯಿರಬೇಕೆನ್ನುವ ಇರಾದೆಯಿಂದ, ನನ್ನ ಶ್ರೀಮತಿಯ ನಿದ್ರೆಯ ದೃಷ್ಟಿಯಿಂದ ನಾನೇ ಅವುಗಳನ್ನು ಸ್ವಚ್ಛ ಮಾಡಿಸುತ್ತಿದ್ದೇನೆ.
ಸೈಟಿನ ಆಚೆ ಬದಿಯ ಮನೆಯವರಿಗೆ ಈ ಬಗ್ಗೆ ಕಾಳಜಿಯಿಲ್ಲವೆ..? ನಿಮಗೊಬ್ಬರಿಗೇ ಈ ತಲೆನೋವೇಕೆ? ಎಂಬ ನಿಮ್ಮ ಪ್ರಶ್ನೆ ನನಗಾಗಲೇ ಗೋಚರಿಸಿತು. ಅವರಿಗೂ ಮೊದಲು ಮನೆ ಕಟ್ಟಿಸಿಕೊಂಡು ವಾಸಿಸುತ್ತಾ, ಹೆರವರ ಖಾಲಿ ಸೈಟು ಕ್ಲೀನ್ ಮಾಡುಸುತ್ತಿರುವ ನಮ್ಮನ್ನು ನೋಡಿ ಅವರು ಹೊಗಳಿದ್ದೇ ನಮಗೆ ಸಿಕ್ಕ ಸಾಂತ್ವನ!
"ಬೆಟ್ಟದಾ ಮೇಲೊಂದು ಮನೆಯ ಮಾಡಿ ಮೃಗಗಳಿಗಂಜಿದೊಡೆಂತಯ್ಯಾ" ಎಂದು 12ನೆ ಶತಮಾನದ ಶರಣೆ ಅಕ್ಕಮಹಾದೇವಿಯಕ್ಕ ಹೇಳಿದರೆ "ಮೈನ್ ರೋಡಿನಲ್ಲಿ ಮನೆಯ ಮಾಡಿ ಕಸಕ್ಕೆ, ಧೂಳಿಗೆ, ಶಬ್ದಕ್ಕೆ, ಬೆದರಿದರೆಂತಯ್ಯಾ?" ಎಂದು 21ನೆ ಶತಮಾನದ ನಾನು ಹೇಳುತ್ತಿದ್ದೇನೆ.
ಈ ಎಲ್ಲಾ ಇರುಸುಮುರುಸುಗಳ ನಡುವೆ ನನ್ನ ಮನೆಯ ಹಿಂದಿರುವ ಮಂಗಳೂರು ಮಂದಿ ಇನ್ನೊಂದು ರೀತಿಯ ಕಷ್ಟಕ್ಕೆ ನಮ್ಮನ್ನು ಒಡ್ಡಿದ್ದಾರೆ. ಮೈನ್ ರೋಡಿನ ನನ್ನ ಮನೆ ತಗ್ಗಿನಲ್ಲಿದೆ. ಹಿಂದಿನ ಮನೆ ಎತ್ತರದಲ್ಲಿದೆ. ನನ್ನದು ಸ್ವಲ್ಪ ದೊಡ್ಡ ಸೈಟು. ಮೊದಲೇ ಮನೆ ಕಟ್ಟಿಸಿದ್ದರಿಂದ ರಕ್ಷಣೆಗಾಗಿ ಕಾಂಪೌಂಡು ಕಟ್ಟಿಸಿಕ್ಕೊಂಡಿದ್ದೀನಿ. ಹಿಂದಿನ ಮನೆಯವರು ಬೇರೆ ಕಾಂಪೌಂಡ ಕಟ್ಟಿಸಿಲ್ಲ. ನನ್ನ ಕಾಂಪೌಂಡನ್ನೇ ತಮ್ಮದೆಂದು ತಿಳಿದಿದ್ದಾರೆ!! ಅವರ ಸಣ್ಣ ಸೈಟಿನಲ್ಲಿ ಬಾಳೆ ತೋಟವನ್ನೇ ಮಾಡಿಕೊಂಡಿದ್ದಾರೆ! ಇರುವ ಐದಡಿ ಜಾಗದಲ್ಲಿ ಬೆಳೆದಿರುವ ಬಾಳೆ ಮರಗಳು ಅಲ್ಲಿ ಜಾಗವಿಲ್ಲದೆ ನನ್ನ ಮನೆಯ ಹಿತ್ತಿಲ ಹತ್ತಡಿ ಜಾಗಕ್ಕೆ ಹಾತೊರೆಯುತ್ತವೆ. ಅದರ ಕಸ ಕಡ್ಡಿ ನಮ್ಮ ಮನೆಗೆ, ಬಾಳೆ ಹಣ್ಣುಗಳು ಅವರ ಮನೆಗೆ! ಹೇಗಿದೆ ನೋಡಿ! ನಮ್ಮ ಮನೆಯ ಹಿತ್ತಿಲ ಜಾಗಕ್ಕೆ ಹಾತೊರೆದು ಬಾಗುವ ಬಾಳೆ ಮರದಲ್ಲಿ ಗೊನೆ ಹಣ್ಣಾಗುವ ಸಮಯಕ್ಕೆ ಮಂಗಳೂರು ಮಂದಿ ಮೆಲ್ಲಗೆ, ಯಾವುದೋ ಸಮಯದಲ್ಲಿ ಸದ್ದಿಲ್ಲದೆ ಬಾಳೆಯ ಮರವನ್ನು ತಮ್ಮ ಮನೆ ಕಡೆಗೆ ಬಾಗಿಸಿ ರಕ್ಷಿಸಿ ಸೂಕ್ತ ಸಮಯದಲ್ಲಿ ಬಾಳೆ ಗೊನೆ ಕತ್ತರಿಸುತ್ತಾರೆ!!
ಆ ಬಾಳೆಯ ಮರಗಳು ನಮಗೆ ಯತೇಚ್ಛ ಕಸ ಕಡ್ಡಿ, ಇರುವೆ, ಗೊದ್ದ ಮುಂತಾದುವನ್ನು ದಯಪಾಲಿಸಿವೆ. ಈ ಬಗ್ಗೆ ಅವರ ಬಳಿ ಆಕ್ಷೇಪಿಸಿದಾಗ, ಅವರು ಹುಳ್ಳಗೆ ನಗುವುದನ್ನು ಬಿಟ್ಟರೆ ಇನ್ನೇನನ್ನೂ ಮಾಡುತ್ತಿಲ್ಲ!
ನನ್ನ ಮನೆಯ ಬಲ ಪಕ್ಕದ ಖಾಲಿ ಸೈಟಿನ ಹಿಂದೆ ಒಬ್ಬ ಮಹಾತ್ಮರು ಮನೆ ಕಟ್ಟಿಸಿಕೊಂಡರು! ಆಗ ನಾವು ಅನುಭವಿಸಿದ ತಾಪತ್ರಯ ಹೇಳ ತೀರದು! ಹಿಂದಿನ ಬೀದಿ ತೀರಾ ಚಿಕ್ಕದು. ಇಪ್ಪತ್ತು ಅಡಿ ಅಗಲ ಇದ್ದರೆ ಹೆಚ್ಚು. ಅಲ್ಲಿ ಇಟ್ಟಿಗೆ ಮರಳು ಹಾಕಲು ಜಾಗ ಸಾಲದು. ಅದಕ್ಕೇ ಈ ಖಾಲಿ ಸೈಟನ್ನು ಉಪಯೋಗಿಸಿಕ್ಕೊಳ್ಳುವ ಚಾಣಾಕ್ಷತನ ಮಾಡಿದರು ಆ ಪುಣ್ಯಾತ್ಮ. ಆದರೆ ಸೈಟಿನ ಮುಂದೆ ಮಳೆ ನೀರಿನ ಚರಂಡಿಯಿತ್ತು. ಅದನ್ನು ಮುಚ್ಚದೆ ಲಾರಿ ಖಾಲಿ ಸೈಟಿನಲ್ಲಿ ಮರಳು, ಇಟ್ಟಿಗೆ, ಜಲ್ಲಿ ಸುರಿಯಲು ಸಾಧ್ಯವಿಲ್ಲ! ಅದಕ್ಕೆ ಅವರೊಂದು ಉಪಾಯ ಮಾಡಿದರು. ಚರಂಡಿಯನ್ನೇ ಮಣ್ಣು ತುಂಬಿ ಮುಚ್ಚಿಬಿಟ್ಟರು! ಆ ಸಮಯಕ್ಕೇ ಮಳೆ ಬರಬೇಕೆ..? ಬಂದರೆ ಅವರಿಗೇನೂ ತೊಂದರೆಯಾಗಲಿಲ್ಲ! ಬದಲಿಗೆ ತೊಂದರೆಯಾಗಿದ್ದು ನನಗೇ! ಚರಂಡಿ ಮುಚ್ಚಿದ್ದರಿಂದ, ಮಳೆ ನೀರು ಚರಂಡಿಯಲ್ಲಿ ತುಂಬಿ ನನ್ನ ಮನೆಯ ಅಂಗಳಕ್ಕೆ ನುಗ್ಗಿ ರಾಡಿ ಮಾಡಿತು!! ಆ ಕೆಸರನ್ನು ತೊಳೆಯಲು ಮೂರು ದಿನ ಬೇಕಾಯಿತು! ಮುನಿಯಮ್ಮನಿಗೂ ಅವಳ ಗಂಡನಿಗೂ ವಿಶೇಷ ಪುರಸ್ಕಾರ ನೀಡಬೇಕಾಯಿತು!! ಅವರಿಗೆ ಆಕ್ಷೇಪಣೆ ಸಲ್ಲಿಸಿದ್ದಕ್ಕೆ ಹುಳ್ಳಗೆ ನಕ್ಕು ಮಾತು ಮರೆಸುವ ಪ್ರಯತ್ನ ಮಾಡಿದರು. ನಾನು ಪದೇಪದೇ ಈ ವಿಷಯ ನೆನೆಪು ಮಾಡಿದ್ದಕ್ಕೆ ಕೊನೆಗೆ ಒಂದು ದೊಡ್ಡ ಸಿಮೆಂಟ್ ಪೈಪನ್ನು ಚರಂಡಿಯಲ್ಲಿ ಇಳಿಸಿ ಅದರ ಮೂಲಕ ಚರಂಡಿಯ ನೀರು ಮುಂದಕ್ಕೆ ಹರಿದು ಹೋಗುವಂತ ವ್ಯವಸ್ಥೆ ಮಾಡಿದರು! ಆ ಸಿಮೆಂಟು ಪೈಪಿನ ಮೇಲೆ ಮಣ್ಣು ತುಂಬಿ, ಲಾರಿ ಚಲಿಸಲು ಅನುವು ಮಾಡಿಕೊಂಡರು. ಅವರ ಮನೆಯೇನೋ ಮುಗಿಯಿತು. ಆದರೆ ಸಿಮೆಂಟು ಪೈಪು ಅಲ್ಲಿಯೇ ಉಳಿಯಿತು! ಅದನ್ನು ತೆಗೆಸುವವರು ಯಾರು? ಇಷ್ಟೆಲ್ಲಾ ರಾದ್ಧಾಂತ ನಡೆದರೂ ಕಾಪೆರ್Çರೇಶನ್ ಸಿಬ್ಬಂದಿ ಅದರತ್ತ ತಿರುಗಿಯೂ ನೋಡಲಿಲ್ಲ! ನೋಡಿಯೂ ಇಲ್ಲ! ಎಂದಿನಂತೆ ನನ್ನ ಶ್ರೀಮತಿ ಆ ಪೈಪನ್ನು ತೆಗೆಸಲು ನನ್ನ ತಲೆ ಬಿಸಿ ಮಾಡತೊಡಗಿದಳು. ನಾನು ನಮ್ಮ ಬೀದಿಗೆ ಬಂದ ಎಲ್ಲ ಕಾಪೆರ್Çರೇಶನ್ ಸಿಬ್ಬಂದಿಯನ್ನೂ ಕೇಳಿದ್ದೇನೆ. ಆದರೆ ಯಾರೊಬ್ಬರೂ ಆ ಪೈಪನ್ನು ಚರಂಡಿಯಿಂದ ಮೇಲಕ್ಕೆ ಎತ್ತಿ ಹಾಕಿಲ್ಲ!!
ನಾವು ಈ ಮನೆಯಲ್ಲಿ ವಾಸ ಮಾಡಲು ಶುರುಮಾಡಿ ಇಪ್ಪತ್ತು ವರ್ಷಗಳು ಕಳೆದಿವೆ. ಈಗ ಬಡಾವಣೆ ತ್ವರಿತಗತಿಯ ಬೆಳವಣಿಗೆ ಕಂಡಿದೆ! ನಾಲ್ಕೈದು ಸಾಫ್ಟ್‍ವೇರ್ ಕಂಪೆನಿಗಳು ನಮ್ಮ ಬಡಾವಣೆಗೆ ಹತ್ತಿರವಾಗಿವೆ. ಸಾಫ್ಟ್‍ವೇರ್ ಉದ್ಯಮ ಅಂದರೆ ಕೇಳಬೇಕೆ..? ವಿವಿಧ ರಾಜ್ಯಗಳ ಯುವಕ, ಯುವತಿಯರು ಈ ಕೆಂಪೆನಿಗಳಲ್ಲಿ ಕೆಲಸ ಮಾಡುತ್ತಾರೆ. ಜೊತೆಗೇ ಕಾಲ್‍ಸೆಂಟರ್, ಕೈಸೆಂಟರುಗಳ ಉದ್ಯಮಗಳೂ ಇಲ್ಲಿ ಬೇರಿಳಿಸಿವೆ. ಬಹುತೇಕ ಅವಿವಾಹಿತರ ಹಸಿವು ತಣಿಸಲು ಫಾಸ್ಟ್‍ಫುಡ್ ಸಂಚಾರಿ ಹೊಟೆಲುಗಳು ಯದ್ವಾತದ್ವಾ ಹುಟ್ಟಿಕೊಂಡಿವೆ! ದಕ್ಷಿಣ, ಉತ್ತರ, ಪೂರ್ವ, ಪಶ್ಚಿಮ ರಾಜ್ಯಗಳಿಂದ ಬಂದಿರುವ ಯುವ ಪೀಳಿಗೆ ಇಲ್ಲಿ ಬೀಡುಬಿಟ್ಟು ಮೂಲ ವಾಸಿಗರಿಗೆ ದಿಗ್ಭ್ರಮೆ ಮೂಡಿಸಿದ್ದಾರೆ! ಹಿಗ್ಗಾಮುಗ್ಗಾ ತಲೆಯೆತ್ತಿರುವ ಪಿಜಿಗಳು ರೇಜಿಗೆ ಸೃಷ್ಟಿಸಿವೆ! ಇವರಲ್ಲಿ ಕೆಲವರು ಪಿಜಿಯ ರೇಜಿಗೆಗೆ ಹೋಗದೆ ಜೊತೆಗೇ ನಾಲ್ಕೈದು ಜನ ಸೇರಿ ಒದು ಮನೆಯನ್ನೂ ಬಾಡಿಗೆ ಪಡೆಯುತ್ತಾರೆ. ಅಲ್ಲಿ ಅವರೇ ಆಹಾರ ತಯಾರಿಸಿಕ್ಕೊಳ್ಳುತ್ತಾರೆ ಇಲ್ಲವೇ ಅಡಿಗೆ ಕೆಲಸಕ್ಕೆ ಸ್ಥಳಿಯರನ್ನು ಗೊತ್ತು ಮಾಡಿಕೊಳ್ಳುತ್ತಾರೆ. ಅವರ ಆಹಾರ, ಆಚಾರ-ವಿಚಾರಳಿಗನುಗುಣವಾಗಿ ಸ್ಥಳೀಯ ವ್ಯಾಪಾರ ವಹಿವಾಟುಗಳೂ ಬದಲಾಗಿವೆ. ಸಂಜೆ ತರಕಾರಿಗೆಂದು ಹೋದರೆ ನಮ್ಮ ಸ್ಥಳೀಯ ವ್ಯಾಪಾರಿಗಳು ಹಿಂದಿಯಲ್ಲಿ ಮಾತಾಡುತ್ತಾರೆ. ಗೋಬಿ, ಪಾನಿಪೂರಿ, ಸಮೋಸಾ ಮುಂತಾದ ಶಾಖಾಹಾರೀ ಆಹಾರ, ವೈವಿಧ್ಯಮಯ ಮಾಂಸಾಹಾರೀ ಫಾಸ್ಟ್‍ಫುಡ್ ಸೆಂಟರುಗಳು ತಲೆಯೆತ್ತಿವೆ; ನಮ್ಮ ತಲೆ ತಗ್ಗಿಸುವಂತೆ ಮಾಡಿವೆ!
ಈ ಯುವಕ ಯುವತಿಯರು ದಾರಿಯಲ್ಲಿ ಆಹಾರವನ್ನು ಭಕ್ಷಿಸುತ್ತಲೇ ಖಾಲಿ ಕವರುಗಳನ್ನು ಗಾಳಿಗೆ ಬಿಡುತ್ತಾರೆ! ಅವೆಲ್ಲಾ ನಮ್ಮ ಮನೆಯ ಮುಂದೆ ಸಂಗ್ರಹವಾಗಿ ನಮ್ಮ ರಕ್ತದೊತ್ತಡ ಹೆಚ್ಚಿಸುತ್ತವೆ. ಕನ್ನಡವೊಂದನ್ನು ಬಿಟ್ಟು ಉಳಿದೆಲ್ಲಾ ಬಾಷೆಗಳೂ ನಮಗಿಲ್ಲಿ ಕೇಳಿಸುತ್ತವೆ. ಇವರ ಅಬ್ಬರದ ಮಾತಿನ ಮುಂದೆ ಕನ್ನಡಿಗರು 'ಟುಸ್' ಪಟಾಕಿಗಳಾಗಿದ್ದಾರೆ! ಮಾತು ಬೆಳ್ಳಿ ಮೌನ ಬಂಗಾರ ಎನ್ನುವ ಜಾಣ್ನುಡಿಯನ್ನಾಡುತ್ತಾರೆ!!
ರಸ್ತೆಯಲ್ಲಿ ವಾಹನ ದಟ್ಟಣೆ ಹೆಚ್ಚಿ, ಶಬ್ಧ ಮಾಲಿನ್ಯ ಮಿತಿ ಮೀರಿದೆ! ಮನೆಯಲ್ಲಿ ಮಾತಾಡುವವರೂ ಕೂಗಿ ಮಾತಾಡಬೇಕಾಗಿದೆ. ಟಿವಿಯಂತೂ ಬಿಡಿ, ಗರಿಷ್ಠ ವಾಲ್ಯೂಮಿಗೆ ತಿರುಗಿಸಿದರೆ ಮಾತ್ರ ಏನಾದರೂ ಮಾತು ಕೇಳುವುದು!! ಮೈನ್ ರೋಡ್ ಮನೆಯ ಸುಖ ನೋಡಲು 'ಎರಡು ಕಣ್ಣು ಸಾಲವು!', ಕೇಳಲು 'ಎರಡು ಕಿವಿಗಳೂ ಸಾಲವು!!' ನನ್ನ ಮಾತು ನಂಬುವುದಿಲ್ಲವೆ..? ಬೇಕಾದರೆ ಬಂದು ನೋಡಿ!
****
ಉತ್ತಮವಾದ ಲೇಖನ