ಮೇ ೨೨ ಹಾಗೂ ಜೂನ್ ೫ ರ ನಡುವೆ: ಅಖಿಲೇಶ್ ಚಿಪ್ಪಳಿ

ಮೇ ೨೨ ಜೀವಿ ವೈವಿಧ್ಯ ದಿನ. ಮೇ ತಿಂಗಳು ಕಳೆದ ನಂತರ ಜೂನ್ ಮೊದಲ ವಾರದಲ್ಲೇ ಅಂದರೆ ಜೂನ್ ೫ ರಂದು ವಿಶ್ವ ಪರಿಸರ ದಿನಾಚರಣೆ. ಈ ಪರಿಸರದಲ್ಲಿ ಎನೆಲ್ಲಾ ವೈವಿಧ್ಯಗಳಿವೆ ಎಂಬುದನ್ನು ಸಂಪೂರ್ಣವಾಗಿ ಅರಿಯಲು ಇನ್ನೂ ಸಾಧ್ಯವಾಗಿಲ್ಲ. ಪ್ರತಿವರ್ಷ ಹೊಸ ಸಸ್ಯವೈವಿಧ್ಯ ಹಾಗೂ ಜೀವಿಗಳು ಪತ್ತೆಯಾಗುತ್ತಿರುತ್ತವೆ. ನಿಸರ್ಗ ಅದ್ಯಾವುದೋ ಲೆಕ್ಕಾಚಾರ ಹಾಕಿಯೇ ಜೀವಿಗಳನ್ನು ಸೃಷ್ಟಿ ಮಾಡುತ್ತಿರುತ್ತದೆ. ನಮ್ಮ ಗ್ರಹಿಕೆ ಬರುವ ಮೊದಲೇ ಹಲವು ಜೀವಿಗಳು ನಾಮಾವಶೇಷವಾಗುತ್ತವೆ. ಪ್ರಕೃತಿಯ ಅಗಾಧ ಅಚ್ಚರಿಗಳ ಎದುರು ನಾವು ಹುಲುಮಾವನರಷ್ಟೆ ಸೈ. ಆದರೂ ಈ ಹುಲುಮಾನವನ ಕಿತಾಪತಿಯಿಂದಾಗಿ ಧರೆಗೆ ಸಂಕಟ ಬಂದಿದೆ. ಪರಿಸರ ಸಂರಕ್ಷಣೆ, ಜೀವಿ ವೈವಿಧ್ಯ ರಕ್ಷಣೆ, ಹವಾಮಾನ ವೈಪರೀತ್ಯ ಇತ್ಯಾದಿ ಇತ್ಯಾದಿಗಳ ಜೊತೆ ಏಗುವಾಗ ವೈಯಕ್ತಿಕವಾದ ಶಕ್ತಿ ಸಾಲುವುದಿಲ್ಲ. ಇದಕ್ಕೆ ಜನ ಬೆಂಬಲ ಬೇಕು. ರಾಜಕೀಯ ಇಚ್ಚಾಶಕ್ತಿ ಬೇಕು. ಸರ್ಕಾರಗಳವತಿಯಿಂದಾಗುವ ಪರಿಸರ ಸಂರಕ್ಷಣೆ ಬಗ್ಗೆ ಹೇಳುವುದಾದಲ್ಲಿ, ಪಾಸು ಮಾರ್ಕ್ಸು ಕೊಡುವುದು ಕಷ್ಟ. ಗ್ರೇಸ್ ಮಾರ್ಕು ಕೊಟ್ಟು ಪಾಸು ಮಾಡುವುದು ಸಾಧ್ಯವಿಲ್ಲ. ಅಂದರೆ, ಪರಿಸರದಿಂದ ಪಡೆಯುವ ಲಾಭದ ಕಿಂಚಿತ್ ಭಾಗವನ್ನಾದರೂ ಪರಿಸರ ಬೆಳೆಸಲು ನಿಗದಿ ಮಾಡಿಟ್ಟರೆ, ನಮ್ಮಲ್ಲಿ ಈ ಪರಿಯ ವೈಪರೀತ್ಯಗಳು ಸಂಭವಿಸುತ್ತಿರಲಿಲ್ಲ. ಯೋಜನೆಗಳೇನೋ ಜಾರಿಯಾಗುತ್ತವೆ. ಕಳೆದಿಪ್ಪತ್ತು ವರ್ಷಗಳಿಂದ ನೆಟ್ಟ ಗಿಡಗಳನ್ನು ಲೆಕ್ಕ ಹಾಕಿದರೆ ಕೋಟಿಗಳ ಸಂಖ್ಯೆ ದಾಟುತ್ತದೆ. ಆದರೆ ಬದುಕಿದ ಗಿಡಗಳೆಷ್ಟು? ಗಿಡ ಬೆಳೆಸಲು ಎಷ್ಟು ಖರ್ಚುಮಾಡಲಾಗಿದೆ ಎಂಬ ಲೆಕ್ಕಾಚಾರದ ಎದುರು ಬದುಕಿದ ಅಥವಾ ಬದುಕಿಸಿದ ಗಿಡಗಳು ನಗಣ್ಯವಾಗುತ್ತವೆ. 

ದೇಶದ ರಾಜಕೀಯದಲ್ಲಿ ಬದಲಾವಣೆಯ ಗಾಳಿ ಬೀಸಿದೆ. ನಿಯೋಜಿತ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿಯವರಿಗೆ ಗುಜರಾತ್‌ನಲ್ಲಿ ಮುಖ್ಯಮಂತ್ರಿಯಾಗಿ ಆಡಳಿತ ನಡೆಸಿದ ಅನುಭವ ಇದೆ. ಅವರು ಮುಖ್ಯಮಂತ್ರಿಯಾಗಿದ್ದ ಕಾಲದಲ್ಲಿ ವಿದ್ಯುತ್ ಮತ್ತು ನೀರಿನ ವಿಷಯದಲ್ಲಿ ಸ್ವಾವಲಂಬನೆ ಸಾಧಿಸಿದ್ದು ಎಲ್ಲಾ ಪತ್ರಿಕೆಗಳಲ್ಲೂ ವರದಿಯಾಗಿತ್ತು. ಅಲ್ಲದೆ ಹವಾಮಾನ ವೈಪರೀತ್ಯ ನಿಯಂತ್ರಿಸಲು ರಾಜ್ಯ ಸಚಿವ ದರ್ಜೆಯ ಮಂತ್ರಿಯನ್ನು ನಿಯೋಜಿಸಲಾಗಿತ್ತು. ಸ್ವತ: ಮೋದಿಯವರು ತನ್ನನ್ನು ತಾನು ಹವಾಮಾನ ಕಾರ್ಯಕರ್ತ ಎಂದು ಬಿಂಬಿಸಿಕೊಂಡು ಒಂದು ಪುಸ್ತಕವನ್ನು ರಚಿಸಿದ್ದರು. ೨೦೧೦ರಲ್ಲಿ ಬಿಡುಗಡೆಗೊಂಡ ಆ ಪುಸ್ತಕದ ಹೆಸರು ಕನ್‌ವೀನಿಯಂಟ್ ಆಕ್ಷನ್. ಆದರೆ ಹವಾಮಾನ ವೈಪರೀತ್ಯ ತಡೆಯಲು ರಚಿಸಿದ ಸಚಿವಾಲಯ ನಿರೀಕ್ಷಿತವಾಗಿ ಕೆಲಸ ಮಾಡುತ್ತಿಲ್ಲ ಎಂಬುದನ್ನು ಇಂಡಿಯನ್ ಪ್ರೆಸ್ ವರದಿ ಮಾಡಿದೆ. 

ಗುಜರಾತ್ ರಾಜ್ಯವು ದೇಶದಲ್ಲೇ ನಂಬರ್ ವನ್ ಆಗಿ ಹೊರಹೊಮ್ಮಿದೆ ಎಂಬುದನ್ನು ಬಿಜೆಪಿಯವರು, ಗುಜರಾತ್‌ನಲ್ಲಿ ಏನೇನು ಪ್ರಗತಿಯಾಗಿಲ್ಲ ಎಲ್ಲಾ ಬೊಗಳೆ ಎಂದು ಕಾಂಗ್ರೇಸ್‌ನವರು ಹೇಳುತ್ತಾರೆ. ರಾಜಕೀಯ ಕೆಸರಾಟಗಳೇನೆ ಇರಲಿ, ಪ್ರಧಾನ ಮಂತ್ರಿಯಾಗಲಿರುವ ಮೋದಿಗೆ ಹಲವು ಸವಾಲುಗಳಿವೆ. ೨೦೦೩ರಿಂದ ೨೦೧೩ರವರೆಗಿನ ಅಲ್ಲಿನ ಆಡಳಿತದಲ್ಲಿ ಪರಿಸರಕ್ಕೆ ಸಂಬಂಧಿಸಿದಂತೆ ಕೆಲವು ಮಹತ್ತರ ಬದಲಾವಣೆಗಳಾಗಿವೆ. ಉದಾಹರಣೆಯಾಗಿ ನಿರ್ಮರ (ಅರಣ್ಯರಹಿತ) ಪ್ರದೇಶಗಳಲ್ಲಿ ಅರಣ್ಯ ಬೆಳೆಸಲಾಗಿದ್ದು ಸುಮಾರು ೮ ಜಿಲ್ಲೆಗಳಲ್ಲಿ ಅರಣ್ಯೀಕರಣ ಕೆಲಸಗಳಾಗಿವೆ. ಪ್ರತಿ ಹೆಕ್ಟೇರ್‌ಗೆ ೩೦ ಮರಗಳು ಇರುವ ಪ್ರದೇಶಗಳಲ್ಲಿ ೨೦೧೩ ಮರಗಣತಿಯಂತೆ ೬೬ ಮರಗಳಿವೆ. ಅತಿ ಹೆಚ್ಚು ಪ್ರಗತಿ ಸಾಧಿಸಿದ ಜಿಲ್ಲೆ ಆನಂದ್ ಆಗಿದೆ. ತಪಿ ಮತ್ತು ಗಾಂಧಿನಗರಗಲ್ಲಿ ಈ ಸಂಖ್ಯೆ ಹೆಕ್ಟೇರ್‌ಗೆ ೬೩ಕ್ಕೆ ಏರಿದೆ. ಸುಮಾರು ೩೦ ಕೋಟಿ ಖರ್ಚು ಮಾಡಿ ಈ ಪ್ರಗತಿಯನ್ನು ಸಾಧಿಸಲಾಗಿದೆ ಎಂದು ಅಲ್ಲಿನ ಅರಣ್ಯ ಇಲಾಖೆಯ ಅಧಿಕೃತ ಪ್ರಕಟಣೆ ತಿಳಿಸಿದೆ. 

ಬಹುದೊಡ್ಡ ಸವಾಲು ಎಂದರೆ ವಿದ್ಯುಚ್ಚಕ್ತಿಯ ಸ್ವಾವಲಂಬನೆ. ಗುಜರಾತ್ ರಾಜ್ಯದಲ್ಲಿ ೬೦೦ ಮೆ.ವ್ಯಾ. ಸಾಮರ್ಥ್ಯದ ಸೌರ ವಿದ್ಯುತ್ ಉತ್ಪಾದಿಸಲಾಗುತ್ತಿದೆ. ಕಾರ್ಪೊರೇಟ್ ವಲಯಗಳು ಹೆಚ್ಚು ಲಾಭ ತರುವ ತೈಲ ಉತ್ಪನ್ನಗಳ ಉದ್ಯಮಕ್ಕೆ ಹೆಚ್ಚಿನ ಒತ್ತು ನೀಡುತ್ತಾರೆ. ಕಲ್ಲಿದ್ದಲು ಅಥವಾ ಅಣು ವಿದ್ಯುತ್‌ಗೆ ಬದಲಾಗಿ ಮರುಬಳಕೆಯ ಇಂಧನಗಳ ಬಗ್ಗೆ ಹೇಗೆ ಒತ್ತು ನೀಡುತ್ತಾರೆ ಎಂಬುದನ್ನು ಗಮನಿಸಬೇಕಾಗುತ್ತದೆ. ೩೦ಕ್ಕಿಂತ ಹೆಚ್ಚು ರಾಜ್ಯಗಳನ್ನು ಹೊಂದಿದ ಭಾರತದಲ್ಲಿ ಏಕಾಏಕಿ ಬದಲಾವಣೆ ತರುವುದು ಕಷ್ಟಸಾಧ್ಯ. ಕೆಲವೇ ಜನ ಶ್ರೀಮಂತರ ಮುಷ್ಟಿಯಲ್ಲಿರುವ ತೈಲ ಉದ್ಯಮ ಸ್ವಾಭಾವಿಕವಾಗಿ ನೂತನ ಪ್ರಧಾನಿಯ ಮೇಲೆ ಒತ್ತಡ ತರುತ್ತದೆ. ಈ ವ್ಯಾವಹಾರಿಕ ಒತ್ತಡವನ್ನು ಹೇಗೆ ನಿಭಾಯಿಸುತ್ತಾರೆ ಎಂಬುದರ ಮೇಲೆ ಅವರ ಕ್ಷಮತೆ ನಿರ್ಧರಿತವಾಗುತ್ತದೆ. 

ಮೊದಲೇ ಹೇಳಿದಂತೆ ಮೇ ೨೨ ಜೀವಿ ವೈವಿಧ್ಯ ದಿನ. ಕರ್ನಾಟಕ ರಾಜ್ಯದಲ್ಲಿ ಈ ಜೀವಿ ವೈವಿಧ್ಯ ದಿನವನ್ನು ಒಂದೆರೆಡು ಕಡೆ ಮಾತ್ರ ಆಚರಿಸಲಾಯಿತು ಎಂದು ಪತ್ರಿಕೆಗಳ ವರದಿ ಹೇಳುತ್ತವೆ. ಈ ತರಹದ ಕಾರ್ಯಕ್ರಮಗಳನ್ನು ಆಯೋಜಿಸಲು ಅರಣ್ಯ ಇಲಾಖೆಗೆ ಪುರುಸೊತ್ತಿಲ್ಲ ಅಥವಾ ಅವರಿಗೆ ಇಂತದೊಂದು ದಿನವನ್ನು ಆಚರಿಸುತ್ತಾರೆ ಎಂಬ ಅರಿವೂ ಇದ್ದಂತಿಲ್ಲ. ಸಾಗರದ ಅರಣ್ಯ ಇಲಾಖೆಯ ವ್ಯಾಪ್ತಿಯಲ್ಲಿ ಬರುವ ಇಕ್ಕೇರಿ ರಸ್ತೆಯ ಗ್ರೇಸ್ ಫ್ಯೂಯಲ್ಸ್ ಎದುರಿನ ಹಲಸಿನ ಮರವನ್ನು ಕಡಿದದ್ದನ್ನು ಈ ಅಂಕಣದಲ್ಲಿ ಪ್ರಸ್ತಾಪಿಸಲಾಗಿತ್ತು. ಅಗಾಧ ದಪ್ಪವಿದ್ದ ಆ ಹಲಸಿನ ಮರದ ಬುಡವನ್ನು ಇದೇ ದುಷ್ಕರ್ಮಿಗಳು ಜೀವಿ ವೈವಿಧ್ಯ ದಿನದ ರಾತ್ರಿಯೇ  ಕಿತ್ತು ಹಾಕುವುದರ ಮೂಲಕ ಪೈಶಾಚಿಕತೆಯನ್ನು ಮೆರೆದಿದ್ದಾರೆ.

ನಮ್ಮಲ್ಲೊಂದು ಭ್ರಮೆಯಿದೆ. ಪ್ರಪಂಚದಲ್ಲಿ ಅತ್ಯಂತ ಮುಂದುವರೆದ ರಾಷ್ಟ್ರ ಅಮೆರಿಕಾ. ನಾವು ಅವರಂತೆ ಆಗಬೇಕು, ಜಗತ್ತಿನ ದೊಡ್ಡಣ್ಣನಾಗಬೇಕು. ಅಮೆರಿಕಾ ದೇಶಕ್ಕೆ ಸಡ್ಡು ಹೊಡೆದು ಮೇಲೆ ಬರಬೇಕು ಎಂಬ ತುಡಿತ ಭಾರತ ಹಾಗೂ ಚೀನಾ ದೇಶಕ್ಕಿದೆ. ಅಮೆರಿಕಾದ ಕೆಲವಷ್ಟು ವ್ಯವಸ್ಥೆಗಳು ವ್ಯವಸ್ಥಿತವಾಗಿರಬಹುದಾದರೂ ನ್ಯೂನ್ಯತೆಗಳು ಸಾಕಷ್ಟಿವೆ. ನಾವು ಅವರಂತೆ ಆಗಬಾರದು ಎಂಬುದನ್ನು ಕೆಲವು ಉದಾಹರಣೆಗಳ ಸಹಿತ ನೋಡಬೇಕು.

ಮೊದಲನೆಯದಾಗಿ ಅಲ್ಲಿನ ಮುಖ್ಯ ಸಮಸ್ಯೆಯೆಂದರೆ ಬೊಜ್ಜು. ಎಲ್ಲಿ ನೋಡಿದರೂ ಫಾಸ್ಟ್ ಫುಡ್ ರೆಸ್ಟೋರೆಂಟ್‌ಗಳು ಕಾಣಸಿಗುತ್ತವೆ. ಎಲ್ಲಿ ಬೇಡಿಕೆಯಿದೆಯೋ ಅಲ್ಲಿ ಪೂರೈಕೆಯೂ ಇರುತ್ತದೆ. ಅಲ್ಲಿನ ಜನ ವಿಪರೀತ ತಿನ್ನುತ್ತಾರೆ. ಬೊಜ್ಜು ಅಲ್ಲಿ ರಾಷ್ಟ್ರೀಯ ಸಮಸ್ಯೆಯಾಗಿ ಪರಿಣಮಿಸಿದೆ. ಅತ್ಯಂತ ಹೆಚ್ಚು ಬೊಜ್ಜು ಜನರನ್ನು ಹೊಂದಿದ ದೇಶ ಅಮೆರಿಕ. ದೊಡ್ಡವರಲ್ಲಿ ಶೇಕಡಾ ೩೫% ಜನ ಬೊಜ್ಜಿನ ಸಮಸ್ಯೆಯಿಂದ ಬಳಲಿದರೆ, ಚಿಕ್ಕವರಲ್ಲಿ ಈ ಪ್ರಮಾಣ ಶೇಕಡಾ ೧೭%. ಬೊಜ್ಜಿಗೆ ಕಾರಣ ಫಾಸ್ಟ್ ಫುಡ್. ಭಯದ ಅಂಶವೆಂದರೆ ನಮ್ಮ ದೇಶದ ನಗರಗಳಲ್ಲೂ ಈ ಚಾಳಿ ಹೆಚ್ಚುತ್ತಿದೆ. ಎಲ್ಲೆಂದರಲ್ಲಿ ಬೇಕರಿಗಳು ತಲೆಯೆತ್ತಿವೆ. ಈ ಬೇಕರಿ ಉತ್ಪನ್ನಗಳೇ ಬೊಜ್ಜನ್ನು ಹೆಚ್ಚು ಮಾಡುತ್ತವೆ.

ಬೊಜ್ಜಿನ ಸಮಸ್ಯೆಯಿಂದ ಆರೋಗ್ಯ ಸಮಸ್ಯೆಗಳು ಹುಟ್ಟಿಕೊಳ್ಳುತ್ತವೆ. ಆರೋಗ್ಯ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲು ಹಣ ತೆರುವುದು ಅನಿವಾರ್ಯ. ಅಮೆರಿಕಾದ ತಲಾವಾರು ಖರ್ಚು ೫,೩೦೦ ಡಾಲರ್‌ಗಳು. ಸ್ವಿಟ್ಜರ್‌ಲ್ಯಾಂಡಿನಲ್ಲಿ ತಲಾವಾರು ಖರ್ಚು ೩,೫೦೦ ಡಾಲರ್‌ಗಳಾದರೆ, ಜಪಾನ್‌ನಲ್ಲಿ ೨೦೦೦ ಡಾಲರ್‌ಗಳಷ್ಟಿದೆ. ಟರ್ಕಿಯ ತಲಾವಾರು ಖರ್ಚು ಬರೀ ೪೪೬ ಡಾಲರ್‌ಗಳು.

ಆರೋಗ್ಯದ ಸಮಸ್ಯೆಯ ಕತೆ ಹೀಗಾದರೆ, ಅಲ್ಲಿ ಮಕ್ಕಳನ್ನು ಹೆರುವುದೂ ಬಲು ದುಬಾರಿ. ಇತ್ತೀಚಿನ ನ್ಯೂಯಾರ್ಕ್ ಟೈಮ್ಸ್ ವರದಿಯ ಪ್ರಕಾರ ಒಂದು ಮಗುವನ್ನು ಹೆರಲು ಆಗುವ ಸರಾಸರಿ ಖರ್ಚು ೩೭,೩೪೧ ಡಾಲರ್‌ಗಳು. ಇಷ್ಟೆಲ್ಲಾ ಖರ್ಚು ಮಾಡಿದರೂ ಅಲ್ಲಿನ ಸೇವೆ ಬಹು ಉತ್ತಮವಾಗಿರುತ್ತದೆ ಎಂದು ಮೇಲ್ನೋಟಕ್ಕೆ ಅನಿಸಬಹುದು. ಆದರೆ ವಾಸ್ತವ ಬೇರೆಯದೇ ಆಗಿದೆ. ಶಿಶು ಮರಣ ಹಾಗು ಬಾಣಂತಿ ಮರಣ ಪ್ರಮಾಣವೂ ಅಮೆರಿಕಾದಲ್ಲಿ ಅತಿ ಹೆಚ್ಚು.

ಇದಿಷ್ಟು ಆರೋಗ್ಯದ ಸಮಸ್ಯೆಗಳಾದರೆ, ಅಮೆರಿಕಾದ ಇನ್ನೊಂದು ದೊಡ್ಡ ಸಮಸ್ಯೆಯೆಂದರೆ, ಅತಿಯಾದ ಶಕ್ತಿಯ ಬಳಕೆ. ಜಗತ್ತಿನ ಒಟ್ಟು ಪ್ರಮಾಣದ ಶಕ್ತಿಯ ಉತ್ಪಾದನೆಯ ಶೇಕಡಾ ೧೯%ರಷ್ಟು ಸಿಂಹಪಾಲು ಅಮೆರಿಕ ದೇಶ ಬಳಸುತ್ತದೆ. ಅದರಲ್ಲೂ ಪೆಟ್ರೋಲ್, ವಿದ್ಯುತ್ ಬಳಸುವ ಪ್ರಮಾಣದಲ್ಲಿ ಅಮೆರಿಕಾ ನಂಬರ್ ೧ ಸ್ಥಾನದಲ್ಲಿದೆ. ಕಲ್ಲಿದ್ದಲ್ಲನ್ನು ಬಳಸುವಲ್ಲಿ ಇನ್ನೊಂದು ದೈತ್ಯ ರಾಷ್ಟ್ರ ಚೀನ ಮೊದಲ ಸ್ಥಾನದಲ್ಲಿದೆ.

ಜಗತ್ತಿಗೆ ದೊಡ್ಡಣ್ಣನಾಗಿ ಮೆರೆಯುವುದೆಂದರೆ ಸುಲಭದ ಮಾತಲ್ಲ. ಇದಕ್ಕಾಗಿ ರಕ್ಷಣಾ ಸಾಮಾಗ್ರಿಗಳಿಗೆ ಅತಿಹೆಚ್ಚು ಹಣವನ್ನು ವ್ಯಯಿಸಬೇಕಾಗುತ್ತದೆ. ೨೦೦೧ರಲ್ಲಿ ೨೮೭ ಬಿಲಿಯನ್ ಡಾಲರ್‌ಗಳಷ್ಟಿದ್ದ ರಕ್ಷಣಾ ಮೊತ್ತ ೨೦೧೩ರಲ್ಲಿ ೫೩೦ ಬಿಲಿಯನ್ ಡಾಲರ್‌ಗಳಿಗೆ ಏರಿದೆ. ದೇಶದ ರಕ್ಷಣೆಗಾಗಿ ಮಾಡುವ ಖರ್ಚಿನ ಬರೀ ೨% ಹಣವನ್ನು ವಿದ್ಯಾಭ್ಯಾಸಕ್ಕೆ ಖರ್ಚು ಮಾಡುತ್ತಾರೆ ಎಂಬುದು ಅಲ್ಲಿನ ಪರಮ ವಿಪರ್‍ಯಾಸವಾಗಿದೆ. 

ಹಾಗಾಗಿ ನಾವು ನಾವಾಗಿರೋಣ, ನಾವು ಅಮೆರಿಕವನ್ನೋ ಅಥವಾ ಇನ್ಯಾವುದೋ ಮುಂದುವರೆದ ರಾಷ್ಟ್ರವನ್ನು ಅನುಸರಿಸುವುದಕ್ಕಿಂತ, ನಮ್ಮದೇ ದೇಶಿ ಸಂಸ್ಕ್ರತಿಯನ್ನು ಎತ್ತಿ ಹಿಡಿಯುವ ಕಾಯಕವನ್ನು ಮಾಡೋಣ. ಮಿತವ್ಯಯಿಗಳಾಗಿ ಬದುಕೋಣ ಹಾಗೂ ಹೀಗೆ ಬದುಕುವುದರ ಮೂಲಕ ನಮ್ಮ ದೇಶದ ಹಿರಿಮೆಯನ್ನು ಎತ್ತಿ ಹಿಡಿಯೋಣ. ನಮ್ಮ ತಲಾವಾರು ಖರ್ಚುಗಳನ್ನು ಮಿತಗೊಳಿಸುವುದರ ಮೂಲಕ ಜಗತ್ತಿಗೆ ದೊಡ್ಡಣ್ಣರಾಗೋಣ. 

*****

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x