ಮೇರು ವಿಮರ್ಶಕ- ರಾಷ್ಟ್ರಕವಿ ಕುವೆಂಪು ಮತ್ತು ಅವರ ವಿಮರ್ಶಾ ವೈಶಿಷ್ಟ್ಯತೆ: ಡಾ. ಹನಿಯೂರು ಚಂದ್ರೇಗೌಡ

haniyur chandregouda
ರಾಷ್ಟ್ರಕವಿ ಕುವೆಂಪು ಅವರ ವ್ಯಕ್ತಿತ್ವದಲ್ಲಿ ಭಾರತೀಯ ಸಂಸ್ಕøತಿಯ ಬಗ್ಗೆ ಅಭಿಮಾನ, ಅಧ್ಯಾತ್ಮ ಜ್ಯೋತಿಯ ವಿಷಯದಲ್ಲಿ ಅಚಲಶ್ರದ್ಧೆ, ವಿಭೂತಿಪೂಜೆಯಲ್ಲಿ ನಿಷ್ಠೆ, ಸಾಹಿತ್ಯದ ಪರಮಪ್ರಯೋಜನದಲ್ಲಿ ಪೂರ್ಣವಿಶ್ವಾಸ, ಪ್ರಕೃತಿಯ ಬಹುಮುಖ ವಿನ್ಯಾಸದಲ್ಲಿ ಒಂದು ಆತ್ಮೀಯತೆ, ಭವ್ಯತೆಯ ಅನುಭವದಲ್ಲಿ ಭಕ್ತಿ, ಜೀವನದಲ್ಲಿ ಧರ್ಮದ ಮೂಲಭೂತ ಅಗತ್ಯವನ್ನು ಒಪ್ಪುವ ಮನೋಧರ್ಮ, ಜನತೆಯ ಉದ್ಧಾರಕ್ಕಾಗಿ ಹಂಬಲಿಸುವ ಚೇತನ, ಆತ್ಮಸಾಕ್ಷಾತ್ಕಾರದ ಲಕ್ಷ್ಯ-ಇವೆಲ್ಲವೂ ಒಂದು ಸುಂದರ ಪಾಕದಲ್ಲಿ ಸಮರಸವಾಗಿ ಏಕತ್ರಗೊಂಡಿವೆ. ರಾಮಕೃಷ್ಣ ಪರಮಹಂಸ, ಸ್ವಾಮಿ ವಿವೇಕಾನಂದ, ಟ್ಯಾಗೋರ್, ಶ್ರೀಅರವಿಂದ, ರಮಣಮಹರ್ಷಿ, ಗಾಂಧೀಜಿ-ಇನ್ನಿತರೆ ಭಾರತೀಯ ಮಹಾತ್ಮರ ವಿಚಾರಗಳಿಂದ ಭಾವಿತವೂ ಪ್ರಭಾವಿತವೂ ಆದ ಈ ಪ್ರಫುಲ್ಲ ವ್ಯಕ್ತಿತ್ವದಲ್ಲಿ ಕೇವಲ ಸಂಪ್ರದಾಯಜಡರ ಅಂಧಶ್ರದ್ಧೆ, ಸಂಕುಚಿತ ಅಭಿಮಾನಗಳಿಗೆ ಆಸ್ಪದವಿಲ್ಲದಂತಾಗಿದೆ. ಆಧ್ಯಾತ್ಮಿಕ ಅನುಭವಕ್ಕಾಗಿ ಉಕ್ತವಾಗಿರುವ ವಿವಿಧ ಯೋಗಮಾರ್ಗಗಳಲ್ಲಿ ಕುವೆಂಪು ಅವರಿಗೆ ಅಪರಿಚಿತವಾದುದು ಯಾವುದೂ ಇಲ್ಲ. ತಮ್ಮದೇ ಆದ ರೀತಿಯಿಂದ ಇವುಗಳಲ್ಲಿ ಸಮನ್ವಯವನ್ನು ಕಂಡುಕೊಂಡ ಮೇಲೆ, ‘ಕಾವ್ಯದರ್ಶನ’ಕ್ಕೂ ‘ಆತ್ಮದರ್ಶನ’ಕ್ಕೂ ಇರುವ ಸಾಮೀಪ್ಯ-ಸ್ವಾಮ್ಯತೆಯನ್ನು ಮನಗಂಡು, ತಮ್ಮ ಕವಿ ಸಹಜ ವಾಣಿಯಿಂದಲೇ ‘ಕವಿನಿರ್ಮಿತಿ’, ‘ರಸ’, ‘ಅಲಂಕಾರ’, ‘ಭವ್ಯತೆ’, ‘ಪ್ರಕೃತಿಸೌಂದರ್ಯ’ ಮುಂತಾದವುಗಳ ಆಳದಲ್ಲಿ ಅಡಗಿರುವ ತತ್ವಗಳನ್ನು ಹೊಸ ರೀತಿಯಿಂದ ವಿವರಿಸಿರುವ ಯಶಸ್ಸು ರಸಋಷಿ ಕುವೆಂಪು ಅವರಿಗೆ ಸಲ್ಲುತ್ತದೆ.

ಅಂತಹ ಕುವೆಂಪು ಅವರ ಕಾಲಘಟ್ಟದಲ್ಲಿ, ‘ಜನಮುಖಿ ಸಾಹಿತ್ಯ’ ಎನಿಸಿದ ನವೋದಯ ಸಾಹಿತ್ಯವು ವಸಾಹತುಪೂರ್ವ ಸಂದರ್ಭದಲ್ಲಿ ಕನಾಟಕ ಸಂಸ್ಕøತಿಯನ್ನು ವಸಾಹತುಶಾಹಿಯ ಎದುರಿನಲ್ಲಿ ಬಹಳ ವಿಶಿಷ್ಟವಾಗಿ ಕಟ್ಟಲು ಪ್ರಯತ್ನಿಸಿತು. ಈ ಕಾರಣಕ್ಕಾಗಿ ಅದು ಸಾಹಿತ್ಯವನ್ನು ಆಯುಧವಾಗಿ ಬಳಸಿಕೊಂಡಿತು. ಆದುದರಿಂದ ನವೋದಯ ಕಾಲದ ಎಲ್ಲ ಸಾಹಿತ್ಯ ಪ್ರಕಾರಗಳಲ್ಲಿ ಬದುಕಿನ ಬಗೆಗೆ ಆಶಾವಾದ, ಪ್ರೀತಿ; ಪ್ರಾಚೀನ ಸಾಹಿತ್ಯ ಪರಂಪರೆಗಳ  ಬಗೆಗೆ ಗೌರವಾದರ ಕಂಡುಬರುತ್ತದೆ. ಈ ದಿಸೆಯಲ್ಲಿ ಕುವೆಂಪು ಅವರ ಸಾಹಿತ್ಯವೂ ಕನ್ನಡ ಸಂಸ್ಕøತಿಯ ಕಟ್ಟಿಬೆಳಸುವಿಕೆಯಲ್ಲಿ ಕ್ರಿಯಾಶೀಲವಾಗಿರುವುದನ್ನು ಗುರುತಿಸಬಹುದಾಗಿದೆ. ಇದಕ್ಕೆ ಕಾರಣವಾಗಿ, ನವೋದಯ ಕಾಲಘಟ್ಟದ ಲೇಖಕರು ಕೇವಲ ಸಾಹಿತ್ಯ ಚಿಂತಕರಲ್ಲದೆ, ಸಂಸ್ಕøತಿ ಚಿಂತಕರೂ ಆಗಿರುವುದನ್ನು ನೀಡಬಹುದು. ಆದ್ದರಿಂದಲೇ ನವೋದಯ ಬರವಣಿಗೆಗೆ ವಿಶಿಷ್ಟವಾದ ಸಾಂಸ್ಕøತಿಕ ಆಯಾಮ, ಮಹತ್ತು ಲಭಿಸಿರುವುದು. 

ಕುವೆಂಪು ಅವರ ರಸನಿಷ್ಠೆ ವಿಮರ್ಶೆಯು ನಿರ್ಣಯಾತ್ಮಕವಾದುದಾಗದೆ, ವಿವರಣಾತ್ಮಕವಾದುದಾಗಿದೆ. ಆದ್ದರಿಂದ ಇದರ ವ್ಯಾಪ್ತಿ-ವಿಸ್ತಾರ ಬಲುದೊಡ್ಡದಾಗಿದೆ. ಅಲ್ಲದೆ, ಅವರ ವಿಮರ್ಶೆಯು ಸಾಹಿತ್ಯೇತರ ನೆಲೆಯಲ್ಲಿಯೂ ತುಡಿಯುತ್ತದೆ. ಪಂಡಿತರನ್ನು ಮಾತ್ರ ಲೆಕ್ಕಿಸದೆ ಪಾಮರರಲ್ಲಿಯೂ ಸಾಹಿತ್ಯದ ಕುರಿತು ಆದರಭಾವವನ್ನುಂಟು ಮಾಡುವಂತೆ ಪ್ರೇರೇಪಿಸುತ್ತದೆ. ಅದಕ್ಕಾಗಿ ಅವರು ಸೂಕ್ತ ಮತ್ತು ರಸನಿಷ್ಠವೆನಿಸಿದ ಭಾಷೆಯನ್ನು ದುಡಿಸಿಕೊಳ್ಳುತ್ತಾರೆ. ಇಂತಹ ಭಾಷೆಯ ಕಾವ್ಯವೊಂದನ್ನು ಕುರಿತು ಮಾತಾಡುವಾಗ ತನ್ನಷ್ಟಕ್ಕೆ ತಾನೇ ಪ್ರತ್ಯೇಕವಾದ ಕಾವ್ಯವೂ ಆಗಿಬಿಡುತ್ತದೆ. ಇಂತಹ ಭ್ರಮಾತ್ಮಕ ಭಾವನೆಯನ್ನು ಕುವೆಂಪು ವಿಮರ್ಶೆಯಲ್ಲಿನ ಸಹೃದಯತೆಯಲ್ಲಿ ಕಾಣಬಹುದು. ಇದಕ್ಕೆ ಸೋದಾಹರಣೆಯಾಗಿ ಅವರ ಯಾವುದೇ ವಿಮರ್ಶಾಲೇಖನಗಳನ್ನು ತೆಗೆದುಕೊಳ್ಳಬಹುದು. ಪ್ರಾತಿನಿಧಿಕÀವಾಗಿ ‘ಮಹಾಶ್ವೇತೆಯ ತಪಸ್ಸು’, ‘ಸರೋವರದ ಸಿರಿಗನ್ನಡಿಯಲ್ಲಿ’ ಮತ್ತಿತ್ಯಾದಿ ಲೇಖನಗಳನ್ನು ಲೆಕ್ಕಿಸಬಹುದು.
    
ಹೀಗೆ ಸುದೀರ್ಘವಾಗಿ ಹರಿಯುವ ರಸನಿಷ್ಠ ಭಾಷೆಯು ಕಾವ್ಯದ ಅನೇಕ ಸೂಕ್ಷ್ಮಗಳನ್ನು, ಸಂವೇದನೆಗಳನ್ನು ಕೊನೆಗೆ ಕವಿಯೂ ಕಾಣದಿದ್ದ ಹಲವು ದರ್ಶನಗಳನ್ನೂ ದರ್ಶಿಸುವಂತಾಗಿಸುತ್ತದೆ. ಇದರಿಂದ ಕಾವ್ಯಕ್ಕೆ ನ್ಯಾಯ ದೊರೆಯುವುದಲ್ಲದೆ, ಅದರ ಇತಿಮಿತಿಯನ್ನು ಮೀರಿ ನಿಲ್ಲುತ್ತದೆಯೆನಿಸುತ್ತದೆ. ಈ ನೆಲೆಯಲ್ಲಿ ‘ಕವಿ ಕಾಣದ್ದನ್ನು ವಿಮರ್ಶಕ ಕಂಡ’ ಎಂಬ ಮಾತನ್ನು ಸ್ಮರಣೆಯ ರೂಪದಲ್ಲಿ ಎಡತಾಕುತ್ತದೆ. 
    
ಕವಿ ಕೃತಿಯ ಅನೇಕ ಭಾಗಗಳಲ್ಲಿ ಬಹಳ ವಿರಾಮವಾಗಿ ವಿಹರಿಸುವ ವಿಮರ್ಶಕ ಕುವೆಂಪು ಅವರು ಎಲ್ಲಿಯೂ ದಾರಿ ತಪ್ಪುವುದಿಲ್ಲ. ಇಂತಹ ನೈಜ ಚಲನೆ ಕಾವ್ಯದ ಸೂಕ್ಷ್ಮಭಾಗಗಳೆಡೆಗೂ ಸಾಗಿ ಹೊಸದಾದ ದರ್ಶನಗಳನ್ನು ಎತ್ತಿ ಕೊಡುತ್ತದೆ. ಈ ಕಾರ್ಯದಲ್ಲಿ ಆತುರÀತೆಯನ್ನು ತೋರದಿರುವುದು ಕುವೆಂಪು ಅವರ ಪ್ರಮುಖ ಲಕ್ಷ್ಮಣವಾಗಿ ಕಾಣಬರುತ್ತದೆ. ಇಂತಹ ರಸನಿಷ್ಠಪ್ರಜ್ಞೆಯನ್ನುಳ್ಳ ಕುವೆಂಪು ಅವರ ವಿಮರ್ಶಾ ಬರವಣಿಗೆಯಲ್ಲಿ ಕಾಣುವ ಪ್ರಧಾನಗುಣ ಪ್ರಾಚೀನ(ವಸಾಹತುಪೂರ್ವ) ಸಾಹಿತ್ಯದೊಡನೆ ಸ್ಥಾಪಿಸುವ ಆದರವಾಗಿದೆ. ವಸಾಹತುಶಾಹಿತ್ವಕ್ಕೆ ಪ್ರತಿರೋಧವೊಡ್ಡುವ ನಿಟ್ಟಿನಲ್ಲಿ ಜಾಗೃತವಾದ ಉಪರಾಷ್ಟ್ರೀಯತೆಗೆ ರಕ್ತ-ಮಾಂಸವನ್ನು ಭರ್ತಿಮಾಡುವ ರೀತಿಯಲ್ಲಿ ಪ್ರಾಚೀನ ಸಾಹಿತ್ಯ-ಸಂಸ್ಕøತಿಗಳು ಇಲ್ಲಿ ಮರುಪ್ರತಿಷ್ಟಾಪನೆಗೊಳ್ಳುತ್ತವೆ. ಇಂತಹ ಸಾಂಸ್ಕøತಿಕ ಸಂದರ್ಭದಲ್ಲಿ ಸಹಜವಾಗಿಯೇ ಪ್ರಾಚೀನ ಪರಂಪರೆಯ ಬಗೆಗೆ ಜನರಲ್ಲಿ ಒಲವು ಮೂಡಿಸುವ ಪ್ರಯತ್ನ ಮಾಡಬೇಕಾಗಿರುವುದು ಈ ಕಾಲಘಟ್ಟದ ಚಿಂತಕರ ಹೊಣೆಗಾರಿಕೆಯಾಗಿತ್ತು. ಆದ್ದರಿಂದ ಪ್ರಾಚೀನ ಸಾಹಿತ್ಯದಲ್ಲಿ ಋಣಾತ್ಮಕ ಸಂಗತಿಗಳನ್ನು ಗೌಣ ಮಾಡಿ, ಅದರ ಗುಣಾತ್ಮಕ-ಧನಾತ್ಮಕ ಸಂಗತಿಗಳನ್ನೇ ಮೇಲೆ ಹಿಡಿದದ್ದು ಕುವೆಂಪು ಅವರ ಬಹುದೊಡ್ಡ ಗುಣ. ಇಂತಹ ಸಾಹಿತ್ಯಕ-ಸಾಂಸ್ಕøತಿಕ ಕ್ರಿಯಾಶೀಲತೆಯಿಂದಲೇ ಪ್ರಾಚೀನ ಸಾಹಿತ್ಯ ಮತ್ತು ವರ್ತಮಾನದ ಬದುಕು- ಈ ಎರಡರ ನಡುವೆ ಅನುಸಂಧಾನವೊಂದು ಏರ್ಪಡುತ್ತದೆ. ಆದುದರಿಂದಲೇ ಪ್ರಾಚೀನ ಕವಿಗಳು ಮತ್ತೆ ಮತ್ತೆ ಅನೇಕ ನವೋದಯ ವಿಮರ್ಶಕರ ಲೇಖನಿಗಳಿಗೀಡಾಗುವುದು ಮತ್ತು ಭಾಷಣಗಳಿಗೆ ಬಾಯಿಯಾಗುವುದು!.
    
ಪ್ರಾಚೀನ ಕಾಲದ ಕಾವ್ಯ, ಪುರಾಣ, ಚರಿತ್ರೆ ಮತ್ತಿತರೆ ಪರಂಪರೆಗಳು ನವೋದಯದವರೊಂದಿಗೆ ಆಪ್ತತೆಯನ್ನು ಸಾಧಿಸಿ, ಕರ್ನಾಟಕದ ಮನೋಲೋಕದಲ್ಲಿ ವಿಜೃಂಭಿಸಿಬಿಡುತ್ತವೆ. ಒಂದು ರೀತಿಯಲ್ಲಿ ಭಾವುಕತೆಯೂ ಇಲ್ಲಿ ಬೆರೆತು ಸಾಹಿತ್ಯಾಸಕ್ತರ ಆರಾಧನೆಗೂ ಈಡಾಗುತ್ತವೆ. ಈ ಹೆನ್ನೆಲೆಯಲ್ಲಿ ಕುವೆಂಪು ಅವರ ವಿಮರ್ಶೆ ಹೆಚ್ಚಾಗಿ ಪ್ರಾಚೀನ ಸಾಹಿತ್ಯಮುಖಿಯಾಗಿರುವುದನ್ನು ಗುರುತಿಸಿ, ದಾಖಲಿಸಬಹುದು. ಕುವೆಂಪು ಅವರ ವಿಮರ್ಶೆ ಹೆಚ್ಚಾಗಿ ಪ್ರಾಚೀನ ಸಾಹಿತ್ಯವನ್ನು ಕುರಿತು ಮಾತಾಡಿರುವುದು ನಿಜವೇ ಆದರೂ ಇಲ್ಲಿರುವ ಸೂಕ್ಷ್ಮ ಸತ್ಯವೇನೆಂದರೆ ಅದರಲ್ಲೂ ಮಾರ್ಗ ಸಾಹಿತ್ಯವನ್ನು ಕುರಿತೇ ಹೆಚ್ಚು ಮಾತಾಡಿದ್ದಾರೆ. ಇದಕ್ಕೆ ತಮ್ಮ ವೈಯಕ್ತಿಕ ಕಾರಣಗಳಿದ್ದು, ಏಕಕಾಲಕ್ಕೆ ಕುವೆಂಪು ಅವರ ನಡೆ ಈ ದೇಶದ ಸಾಂಸ್ಕøತಿಕ, ಸಾಮಾಜಿಕ ಮತ್ತು ಚಾರಿತ್ರಿಕ ಹಿನ್ನೆಲೆಯ ಮಹತ್ತನ್ನು ಪಡೆದುಬಿಡುತ್ತದೆ. ಅವುಗಳ ಬಗೆಗೆ ಇಲ್ಲಿ ಚರ್ಚಿಸುವುದಾದಲ್ಲಿ, ಕುವೆಂಪು ಅವರು ಶೂದ್ರ ನೆಲೆಯಿಂದ ಬಂದವರು. ಈ ಕುರಿತ ಕೀಳರಿಮೆ ಸಂಸ್ಕøತದ ಪಾಂಡಿತ್ಯವನ್ನು ಅಪೇಕ್ಷಿಸಿತು-ಕೊನೆಗೂ ಅದು ದಕ್ಕಿತು. ಇಂಗ್ಲಿಷ್ ಶಿಕ್ಷಣದ ಮೂಲಕ ಪಾಶ್ಚಾತ್ಯ ಸಾಹಿತ್ಯವನ್ನು ದರ್ಶಿಸಿದ್ದರಿಂದ ಅಲ್ಲಿಯ ಮಾರ್ಗ ಕಾವ್ಯವೂ ತಮ್ಮ ಮೂಲವನ್ನು ಕೆಣಕಿತು. ಹೀಗಾಗಿ ಕನ್ನಡ, ಸಂಸ್ಕøತ ಮತ್ತು ಪಾಶ್ಚಾತ್ಯ ಜಗತ್ತಿನಲ್ಲಿಯ ಮಾರ್ಗ ಕಾವ್ಯಗಳ ಬಗೆಗೆ ಮತ್ತೆಮತ್ತೆ ಉದ್ಗಾರಗಳನ್ನು ಎತ್ತುತ್ತಾರೆ. ಈ ಉದ್ಗಾರವು ವಿಮರ್ಶೆಯಾಗಿ ನಿಂತಿದೆಯೆಂಬುದು ಇಲ್ಲಿಯ ಅರ್ಥ(ವಿವಕ್ಷೆ).
    
ಈ ರೀತಿಯ ಶೂದ್ರ ಮೂಲ ಪ್ರಜ್ಞೆ ಮತ್ತು ಸಂಸ್ಕøತ-ಪಾಶ್ಚಾತ್ಯ ಶಿಕ್ಷಣಗಳೇ ಪ್ರಧಾನವಾಗಿ ಕುವೆಂಪು ಅವರ ವಿಮರ್ಶೆಯ ಬೇರುಗಳನ್ನು ಮಾರ್ಗ ಕಾವ್ಯದಲ್ಲಿರಿಸುವಂತಾಗಿ ಮಾಡಿದ್ದು. ಈ ದಿಸೆಯಲ್ಲಿ ಪಂಪ, ರನ್ನ, ಕುಮಾರವ್ಯಾಸ  ಮೊದಲಾದ ಕನ್ನಡ ಕವಿಗಳೂ ವ್ಯಾಸ, ವಾಲ್ಮೀಕಿ, ಕಾಳಿದಾಸನಂತಹ ಸಂಸ್ಕøತ ಕವಿಗಳೂ ಹೋಮರ್, ಡಾಂಟೆಯಂತಹ ಪಾಶ್ಚಾತ್ಯ ಕವಿಗಳೂ ಇಲ್ಲಿ ಮತ್ತೆ ಮತ್ತೆ ಕಾಣಿಸಿಕೊಳ್ಳುತ್ತಾರೆ. ಇವರಿಗೆ ಪರ್ಯಾಯವಾಗಿ ನಿಲ್ಲಬಲ್ಲಂತಹ ದೇಸಿ ವಕ್ತಾರರಾದ ವಚನಕಾರರು, ಕೀರ್ತನಕಾರರು, ತತ್ವಪದಕಾರರು ಹೆಚ್ಚು ಗೌಣವಾಗುತ್ತಾರೆ. ಈ ವಿಷಯದಲ್ಲಿ ಬೇಂದ್ರೆ ವಿಮರ್ಶೆಯು ಹೆಚ್ಚು ಗರಿಗೆದರುತ್ತದೆ ಎನ್ನುವುದು ಇಲ್ಲಿ ಅತಿ ಮುಖ್ಯವಾಗುವ ಸಂಗತಿ. ಈ ಹಿನ್ನೆಲೆಯಲ್ಲಿ ಮಾರ್ಗ ಸಾಹಿತ್ಯದಲ್ಲಿ ಬೇರು ಬಿಟ್ಟಿರುವ ಕುವೆಂಪು ಅವರ ವಿಮರ್ಶೆಯು ಸಮುದ್ರ ಗಾಂಭೀರ್ಯತೆಯನ್ನು ಪ್ರಕಟಪಡಿಸುತ್ತದೆ. ಈ ಭಾಷಾಶೈಲಿಯಲ್ಲಿ ಸಂಸ್ಕøತ ಭೂಯಿಷ್ಟತೆ ಮತ್ತು ಕಾವ್ಯಾತ್ಮಕತೆಗಳು ಏಕತ್ರಗೊಂಡು ಬೆರೆಯುತ್ತವೆ. ಹೀಗೆ ಬೆರೆಬೆರೆಯುತ್ತಲೇ ಅಲ್ಲಿ ‘ಕುವೆಂಪು ಶೈಲಿ’ಯನ್ನು ಪ್ರತಿಷ್ಟಾಪಿಸುತ್ತವೆ. ಈ ದಿಸೆಯಲ್ಲಿ ‘ತಪೋನಂದನ’ದಲ್ಲಿನ ಎಂಟು ವಿಮರ್ಶಾಲೇಖನಗಳಲ್ಲಿ ಆರು ಲೇಖನಗಳು ಮಾರ್ಗಕಾವ್ಯವನ್ನೇ ಕುರಿತದ್ದಾಗಿದೆ ಎಂಬುದು ಗಮನಾರ್ಹ ಸಂಗತಿ. ಉಳಿದೆಲ್ಲವೂ ದೇಸಿ ಸಾಹಿತ್ಯವನ್ನು ಕುರಿತದ್ದಾಗಿರದೆ ಕಾವ್ಯ ಮೀಮಾಂಸೆಯನ್ನು ಕುರಿತದ್ದಾಗಿರುತ್ತದೆ-ಕುರಿತದ್ದೂ ಸಹ ಹೌದು.
    
ಕುವೆಂಪು ಅವರು ವಿಮರ್ಶೆಯನ್ನು ಬರೆಯಲಾರಂಭಿಸಿದಾಗ ಆಗಿನ್ನೂ ಕನ್ನಡದಲ್ಲಿ ಕಾವ್ಯಮೀಮಾಂಸೆ ಬೆಳೆದಿರಲಿಲ್ಲ. ಆಗ ಮೀಮಾಮಸೆಯ ಪರಿಕರಗಳನ್ನು ಕಾವ್ಯಕ್ಕೆ ಆರೋಪಿಸಿಯೋ ಇಲ್ಲ ಆ ಕಾವ್ಯದಲ್ಲಿ ಗುರುತಿಸಿಯೋ ನಿರ್ವಚನೆ ಮಾಡುವಾಗ ಅವನ್ನು ಕುರಿತ ವಿವರಣೆಯೂ ಅಗತ್ಯವಾಗುತ್ತಿತ್ತು. ಆದುದರಿಂದ ಮೊದಲು ಮೀಮಾಂಸೆಯ ಪರಿಕರಗಳ ಸ್ವರೂಪದ ಬಗೆಗೆ ಮಾತನಾಡಿ, ಆನಂತರ ಅವನ್ನು ಕಾವ್ಯಕ್ಕೆ ಆರೋಪಿಸಿ ನೋಡುವ ಕ್ರಮ ಅನಿವಾರ್ಯವಾಗುತ್ತಿತ್ತು. ಹಾಗಾಗಿ ನವೋದಯ ಚಿಂತಕರು ಕಾವ್ಯದ ವಿಮರ್ಶೆಯನ್ನು ಬರೆಯುವಾಗ ಮೀಮಾಂಸೆಯನ್ನು ಬರೆಯುವುದು ಸಹ ಅನಿವಾರ್ಯವಾಗಿತ್ತು. ಈ ಕೆಲಸ ಕೆಲವೊಮ್ಮೆ ಪ್ರತ್ಯೇಕ ಲೇಖನಗಳಲ್ಲಿ ಮೂಡಿದರೆ, ಮತ್ತೂ ಕೆಲವೊಮ್ಮೆ ಇವೆರಡೂ ಒಂದೇ ಲೇಖನದಲ್ಲಿ ಮೂಡಿಬಂದಿರುವುದು ಹೌದು. ‘ಪ್ರತಿಮಾ ಮತ್ತು ಪ್ರತಿಕೃತಿ’, ‘ಮಹೋಪಮೆ’ ಎಂಬುವು ಅಂತಹ ಲೇಖನಗಳಿಗೆ ಉದಾಹರಣೆ. ಉಳಿದಂತೆ ‘ಪಂಪನಲ್ಲಿ ಭವ್ಯತೆ, ಮತ್ತು ‘ಕಾವ್ಯ ವಿಮರ್ಶೆಯಲ್ಲಿ ಪೂರ್ಣದೃಷ್ಟಿ’ ಅಂತಹ ಲೇಖನಗಳು ಏಕಕಾಲದಲ್ಲಿ ಮೀಮಾಂಸೆ ಮತ್ತು ವಿಮರ್ಶೆ-ಎರಡನ್ನೂ ಒಳಗೊಂಡಿರುವಂತಹವು.
    
ಈ ರೀತಿಯಾಗಿ ‘ಮಹೋಪಮೆ’ಯಂತಹ ಕಲ್ಪನೆ ಲಕ್ಷ್ಯ ಸಾಹಿತ್ಯದಲ್ಲಿ ಇರುವುದನ್ನು ಗುರುತಿಸುತ್ತಲೇ ಅದಕ್ಕೆ ಅಲ್ಲಿಯವರೆಗೂ ಲಭ್ಯವಾಗದಿದ್ದ ಶಾಸ್ತ್ರೀಯ ಚೌಕಟ್ಟನ್ನು ದೊರಕಿಸಿ, ಆ ಮೂಲಕ ಕಾವ್ಯ ಮೀಮಾಮಸೆಯ ಕ್ಷಿತಿಜವನ್ನು ವಿಸ್ತರಿಸುತ್ತಾರೆ. ಹೀಗೆ ಕಾವ್ಯ ಮೀಮಾಂಸೆ ಮತ್ತು ಕಾವ್ಯ ವಿಮರ್ಶೆ- ಈ ಎರಡೂ ಕೆಲಸಗಳು ಅವರಲ್ಲಿ ಒಟ್ಟೊಟ್ಟಿಗೆ ಸಾಗುವುದು ಅಂದಿನ ಸಾಹಿತ್ಯಕ-ಸಾಂಸ್ಕøತಿಕ ಸಂದರ್ಭದ ಅನಿವಾರ್ಯವಾಗಿತ್ತು. ಈ ಹಿನ್ನೆಲೆಯಲ್ಲಿ ಕುವೆಂಪು ಅವರಂತಹ ಚಿಂತಕರು, ಕಾವ್ಯ ಮೀಮಾಂಸಕರಾಗಿ, ವಿಮರ್ಶಕರಾಗಿ ಅಷ್ಟೇ ಅಲ್ಲದೆ ಅಂತಿಮವಾಗಿ ಸಂಸ್ಕøತಿ ನಿರ್ಮಾಪಕರಾಗಿ ಕ್ರಿಯಾಶೀಲಗೊಂಡು, ಸಾಹಿತ್ಯದ ಬಹುತೇಕ ಪ್ರಕಾರಗಳಲ್ಲಿ ತಾವು ಪ್ರಕಟವಾಗುವುದು. ಸಂಸ್ಕøತ ಮತ್ತು ಪಾಶ್ಚಾತ್ಯ ಕಾವ್ಯ ಮೀಮಾಂಸೆಯ ಪ್ರಭಾವಕ್ಕೆ ಕುವೆಂಪು ಅವರು ಒಳಗಾಗಿದ್ದರಿಂದಲೇ ಇಲ್ಲಿನ ಅಲಂಕಾರಗಳು, ಧ್ವನಿ, ರಸ ಮತ್ತಿತ್ಯಾದಿ ಭಾಷಾ ಪರಿಕರಗಳು ಹಾಗೂ ಪಾಶ್ಚಾತ್ಯ ಲೋಕದ ದುರಂತ ಪ್ರಜ್ಞೆ ಮುಂತಾದವು ಕುವೆಂಪು ಅವರ ವಿಮರ್ಶೆಯನ್ನು ಮತ್ತೆ ಮತ್ತೆ ಉದ್ದೀಪಿಸುತ್ತವೆ. ಆದುದರಿಂದಲೇ ‘ರಸೋ ವೈ ಸಃ’ ದಂತಹ ಕೃತಿಗಳು ಹುಟ್ಟಿಕೊಳ್ಳುವುದು. ಇವುಗಳಿಗೆ ಹೊರತಾದ ಕನ್ನಡ ಕಾವ್ಯ ಮೀಮಾಂಸೆ ಏನಾದರೂ ಇವರನ್ನು ಅತಿಯಾಗಿ ಕಾಡಿಬಿಟ್ಟಿದ್ದಲ್ಲಿ ಇವರ ವಿಮರ್ಶೆ ವಚನ, ಕೀರ್ತನೆ, ರಗಳೆ, ತತ್ವಪದ, ಜಾನಪದ ಸಾಹಿತ್ಯ- ಇವೆಲ್ಲವುಗಳಿಗೆ ಮುಖಾಮುಖಿಯಾಗಿಯೂ ಚಲಿಸಿಬಿಡುತ್ತಿತ್ತು; ಆದರೆ ಹಾಗಾಗಲಿಲ್ಲ. ಹೀಗೆ ವಿಶ್ವವಿದ್ಯಾಲಯದ ಪ್ರೊಫೆಸರ್ ಆಗಿದ್ದ ಕುವೆಂಪು ಅವರು ಉನ್ನತ ಶಿಕ್ಷಣವನ್ನು ವಿದ್ಯಾರ್ಥಿಗಳಿಗೆ ನೀಡುವಾಗ ಸಹಜವಾಗಿಯೇ ಮಾರ್ಗಕಾವ್ಯದ ಬಗೆಗೆ ಹೆಚ್ಚು ಅಧ್ಯಯನ ಮತ್ತು ಚಿಂತನೆ ನಡೆಸಿದ್ದಾರೆ. ಅದರೊಡನೆ ಸಂಸ್ಕøತ ಮತ್ತು ಪಾಶ್ಚಾತ್ಯ ಕಾವ್ಯದೊಂದಿಗಿನ ತೌಲನಿಕ ಪ್ರಜ್ಞೆಯನ್ನು ಸಹ ಇಟ್ಟುಕೊಂಡಿದ್ದಾರೆ. ಆದುದರಿಂದ ವೃತ್ತಿಮೂಲದ ಒತ್ತಾಸೆಯೂ ಮಾರ್ಗಕಾವ್ಯ ಮುಖಿಯಾದ ದೊಡ್ಡ ವಿಮರ್ಶೆಗೆ ದಾರಿಯಾಗಿದೆ ಎನ್ನುವುದು ಅತ್ಯಂತ ಗಮನಾರ್ಹ ಎನಿಸುತ್ತದೆ.
    
ಒಟ್ಟಿನಲ್ಲಿ, ನವೋದಯ ಕಾಲಘಟ್ಟದ ಅನೇಕ ವಿಮರ್ಶಕರಲ್ಲಿ ಪ್ರಮುಖರಾದ ಎ.ಆರ್. ಕೃಷ್ಣರಾವ್, ಟಿ.ಎಸ್.ವೆಂಕಣ್ಣಯ್ಯ, ಎಸ್.ವಿ.ರಂಗಣ್ಣ, ಬಿ.ಎಂ.ಶ್ರೀ, ಮಾಸ್ತಿ, ಬೇಂದ್ರೆ, ಡಿ.ವಿ.ಜಿ., ತೀ.ನಂ.ಶ್ರೀ, ಡಿ.ಎಲ್.ಎನ್ ಅವರ ಸಾಲಿಗೆ ಕುವೆಂಪು ಅವರು ಸೇರಿ, ನಿಲ್ಲುತ್ತಾರೆ. ಅದಕ್ಕೆ ಅನೇಕ ಸಾಮ್ಯತೆಯ ಅಂಶಗಳು ಕಾರಣವಾಗಿವೆ. ಆ ಅಂಶಗಳಲ್ಲಿ ರಸನಿಷ್ಠತೆ, ಪ್ರಾಚೀನ ಸಾಹಿತ್ಯದೊಂದಿಗಿನ ಗೌರವ-ಆದರ, ಭಾಷೆಯಲ್ಲಿನ ವಿವರಣಾತ್ಮಕತೆ ಮೊದಲಾದ ತಾತ್ವಿಕ ನೆಲೆಗಳಿಲ್ಲ ಗಮನಾರ್ಹವೂ ಮುಖ್ಯವೂ ಆಗುತ್ತವೆ. ಇವಿಷ್ಟನ್ನು ಹೊರತುಪಡಿಸಿದರೆ ಇವರೆಲ್ಲರಿಗೂ ಒಂದೇ ಸಾಂಸ್ಕøತಿಕ ಸಂದರ್ಭವು ಹಿನ್ನೆಲೆಯಾಗಿತ್ತು ಎಂಬುದಿಲ್ಲಿ ಸಾಮಾನ್ಯಾತಿ ಸಾಮಾನ್ಯ ಸಂಗತಿ. ಆದರೂ ಕುವೆಂಪು ಅವರಿಗೆ ಅನೇಕ ಮೂಲಗಳ ಸಂಸ್ಕಾರಗಳು ಹಿನ್ನೆಲೆ-ಮುನ್ನೆಲೆಗಳಾಗಿದ್ದರಿಂದ ಸಹಜವಾಗಿಯೇ ‘‘ಆನೆ ನಡೆದದ್ದೇ ಹಾದಿ ಎಂಬಂತೆ’’ ಕುವೆಂಪು ಅವರ ವಿಮರ್ಶೆಯು ಭಿನ್ನವೂ ವಿಶಿಷ್ಟಪೂರ್ಣವೂ ಆಯಿತು; ಆಗಿದೆ.
    
ಅಂತಿಮವಾಗಿ, ನೈಜತೆ-ಪ್ರಾಮಾಣಿಕತೆಯು ವಿಮರ್ಶೆಯ ಗುಣವಾದರೆ, ಅದರಲ್ಲಿಯೇ ನಿಲ್ಲದೆ ಅನಂತದ ಅರಿವಿನ ಆವಿಷ್ಕಾರವೂ ಸತ್ಯದ ಸಾಕ್ಷಾತ್ಕಾರವೂ ಆಗಬಲ್ಲುದೆಂಬ ಭಾರತೀಯರ ಸಿದ್ಧಾಂತ ಸ್ಥಾಪನೆಗೆ ಕುವೆಂಪು ಅವರ ವಿಮರ್ಶೆಯು ಅದ್ವಿತೀಯ ಕೊಡುಗೆಯಾಗಿದೆ.

-ಡಾ. ಹನಿಯೂರು ಚಂದ್ರೇಗೌಡ

*****

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x