ಮೇರಿ ಕೋಮ್‌ಳ ಹಾದಿಯಲ್ಲಿ: ಗಿರಿಜಾಶಾಸ್ತ್ರಿ, ಮುಂಬಯಿ

ಹೆಣ್ಣುಮಕ್ಕಳು ತಮ್ಮ ಪರ್ಸುಗಳಲ್ಲಿ ಪೆಪ್ಪರ್- ಸ್ಪ್ರೇ ಗಳನ್ನೋ ಖಾರದ ಪುಡಿಗಳನ್ನೋ ಸದಾ ಇಟ್ಟುಕೊಂಡು ಓಡಾಡಬೇಕು ಎಂದು ಮಹಾರಾಷ್ಟ್ರದ ಮಂತ್ರಿಯೊಬ್ಬರು ಸಲಹೆಯಿತ್ತಿದ್ದರು. ಗಾಂಧೀಜಿಯವರೂ ಕೂಡ ರಾಷ್ಟ್ರೀಯ ಆಂದೋಳನದ ಸಮಯದಲ್ಲಿ ಹೆಣ್ಣುಮಕ್ಕಳನ್ನು ಉದ್ದೇಶಿಸಿ, ನಿಮಗೆ ದೇವರು ಹಲ್ಲು ಮತ್ತು ಉಗುರುಗಳನ್ನು ಕೊಟ್ಟಿಲ್ಲವೇ? ನಿಮ್ಮ ಮರ್ಯಾದೆಗೆ ಸಂಚಕಾರ ಒದಗಿ ಬರುವ ಸಂದರ್ಭದಲ್ಲಿ ನೀವು ಅಹಿಂಸಾ ತತ್ವವನ್ನು ಪಾಲಿಸಬೇಕಾದ ಅಗತ್ಯವಿಲ್ಲ ಎಂದು ಖಡಾಖಂಡಿತವಾಗಿ ಅಭಿಪ್ರಾಯಪಟ್ಟಿದ್ದರು. ಇತ್ತೀಚೆಗೆ ಮರಾಠಿಗರಲ್ಲಿ ಬಹಳ ಜನಪ್ರಿಯರಾದ, ಕನ್ನಡದ ಬಹುದೊಡ್ಡ ಕಾದಂಬರಿಕಾರರೊಬ್ಬರು, ಮುಂಬಯಿ ವಿಶ್ವವಿದ್ಯಾಲಯ ಆಯೋಜಿಸಿದ ವಿಚಾರ ಸಂಕಿರಣವೊಂದರಲ್ಲಿ ’ಗಂಡಸು ಆಕ್ರಮಣಶೀಲನಾಗಬೇಕು. ಹಾಗೆ ಆಗದಿದ್ದರೆ ಸೃಷ್ಟಿಕ್ರಿಯೆ ಸಾಧ್ಯವಿಲ್ಲ’ ಎಂಬ ಹುಕುಂನ್ನು ಹರಡಿಸಿದ್ದರು. ಅನೇಕ ಹೌದಪ್ಪಗಳು ಜೋರಾದ ಚಪ್ಪಾಳೆ ತಟ್ಟಿದ್ದರು.

ಮೇಲಿನ ಎಲ್ಲಾ ಹೇಳಿಕೆಗಳನ್ನು ಗಮನಿಸಿದರೆ ಹೆಣ್ಣಿಗೆ ಬೇಕಾಗಿರುವುದು ಏನು? ರಕ್ಷಣೆಯೋ, ಸ್ವಾತಂತ್ರ್ಯವೋ?  ಸ್ವಾತಂತ್ರ್ಯವನ್ನು ಬಲಿಕೊಟ್ಟು ಸುರಕ್ಷೆಯ ಗೂಡಲ್ಲಿ ಬೆಚ್ಚಗೆ ಇರಬೇಕೆ? ಇಲ್ಲ, ಸ್ವಾತಂತ್ರ್ಯದ ರಿಸ್ಕ್ ತೆಗೆದುಕೊಂಡು ರಕ್ಷಣೆಯನ್ನು ಬಲಿಕೊಡಬೇಕೇ? ಹಾಗೆ ನೋಡಿದರೆ ಎರಡೂ ಕೂಡ ರಿಸ್ಕಿ ಯಾದದ್ದೇ-  ಎರಡೂ ಬೇಕು ಎಂದರೆ ಅದಕ್ಕೆ ಮಹಿಳೆಯರು ಬಳಿಸಿಕೊಳ್ಳಬೇಕಾದ ಉಪಾಯಗಳು ಯಾವುವು? ಎಂಬೆಲ್ಲಾ ಆಲೋಚನೆಗಳು ಬರುತ್ತವೆ. 

ದೈಹಿಕವಾಗಿ ಯಾವುದು ಪ್ರಬಲವಾದುದೋ ಅದು ಉಳಿದುಕೊಳ್ಳುತ್ತದೆ. ಇದು ಡಾರ್ವಿನ್ ನಿಯಮ. ಆದರೆ ಅವನದೇ ಇನ್ನೊಂದು ನಿಯಮವೂ ಇದೆ. ಯಾವುದು ಕಾಲದ / ಪ್ರಕೃತಿಯ ಬದಲಾವಣೆಗಳಿಗೆ ತಕ್ಕಂತೆ ಹೊಂದಿಕೊಳ್ಳುತ್ತದೋ ಅದು ಮಾತ್ರ ಉಳಿದುಕೊಳ್ಳುತ್ತದೆ.  ಒಂದು ಗುಂಪಿನ ಸಿಂಹವನ್ನು ಕೊಂದು ಅಥವಾ ಸೋಲಿಸಿ ನಾಯಕತ್ವವನ್ನು ವಹಿಸಿಕೊಳ್ಳುವ ಇನ್ನೊಂದು ಸಿಂಹ, ಆ ಗುಂಪಿನ ಸಿಂಹಿಣಿ ಮತ್ತು ಹೆಣ್ಣು ಮರಿಗಳನ್ನು ಬಿಟ್ಟು ಉಳಿದ ಎಲ್ಲಾ ಗಂಡು ಮರಿಗಳನ್ನೂ ಕೊಲ್ಲುತ್ತದಂತೆ.  ಈ ಆಕ್ರಮಣ ಎನ್ನುವುದು ನಿಸರ್ಗದ ವಿಧಿ. ಜಂಗಲ್ ಕಾನೂನು. 

ಸಮಕಾಲೀನ ಸ್ಥಿತಿ ಗತಿಗಳನ್ನು ನೋಡಿದರೆ, ನಮ್ಮ ಸಮಾಜದ ಗಂಡು ಹೆಣ್ಣಿನ ಸಂಬಂಧದ ವಿಷಯದಲ್ಲಿಯೂ ಇನ್ನೂ ಈ ಜಂಗಲ್ ಕಾನೂನೇ ಚಾಲ್ತಿಯಲ್ಲಿದೆ,  ಇಂತಹ ಆದಿಮ ಪ್ರಜ್ಞೆಯೇ ಇಂದಿಗೂ ಆಡಳಿತ ನಡೆಸುತ್ತಿದೆ, ಎಂದು ಭಾಸವಾಗುತ್ತದೆ. ಈ ದಿಸೆಯಲ್ಲಿ ನಮ್ಮ ಸಂಸ್ಕೃತಿಯ ವಿಚಾರಗಳೆಲ್ಲಾ ಎಷ್ಟು ಹುಸಿಯಾದವು ಎಂಬುದನ್ನು ಯೋಚಿಸಿದಾಗ ಅಥವಾ ಅಂತಹ ಸಂಸ್ಕೃತಿಯ ವ್ಯಾಖ್ಯೆಯನ್ನು ಮಾಡುವುದೂ ಕೂಡ ಕೇವಲ ಮಾಂಸಲವಾಗಿ ಪ್ರಬಲವಾದ ವ್ಯವಸ್ಥೆಯೇ ಎಂದು ಯೋಚಿಸಿದಾಗ ವಿಷಾದವಾಗುತ್ತದೆ. ಹಾಗೆ ಪ್ರಬಲ ಮತ್ತು ದುರ್ಬಲ ಎಂಬ ನಿರ್ವಚನಗಳೂ ಆ ವ್ಯಾಖ್ಯೆಗೆ ತಕ್ಕಂತೆಯೇ ಇರುತ್ತವೆ ಎಂಬುದು ಇನ್ನೂ ಚಿಂತಾಜನಕವಾದದ್ದು. 

   

ಹುಸಿ ರಕ್ಷಾಕವಚ

 ಈ ವಿಷಯದಲ್ಲಿ, ವಿಖ್ಯಾತ ಬಾಂವ್ರ್ರಿದೇವಿ vs ಸ್ಟೇಟ್ ಆಫ್ ರಾಜಸ್ಥಾನ್ ಮೊಕದ್ದಮೆಯ (೧೯೯೭) ಬಗ್ಗೆ ಸುಪ್ರೀಮ್ ಕೋರ್ಟು ನೀಡಿದ ಪ್ರಸಿದ್ಧ ಐತಿಹಾಸಿಕ ತೀರ್ಪಿನ ಕಾಲದಿಂದ ಇಲ್ಲಿಯವರೆಗೆ ಅನೇಕ ಸಂವಿಧಾನಾತ್ಮಕ ಬದಲಾವಣೆಗಳು ಉಂಟಾಗಿದ್ದರೂ, ನಾವು ಇಂದಿಗೂ ಕೇಳುತ್ತಿರುವ ಪ್ರಶ್ನೆ ಯಾವುದೆಂದರೆ ಇಂದು ಹೆಣ್ಣು ಎಷ್ಟು ಸುರಕ್ಷಿತಳು? ಎಂಬುದೇ ಆಗಿದೆ. ಎಲ್ಲಿಯವರೆಗೆ ಗಂಡಸರು ಇರುತ್ತಾರೋ ಅಲ್ಲಿಯವರೆಗೆ ಹೆಣ್ಣುಮಕ್ಕಳು ಸುರಕ್ಷಿತರಾಗಿರುವುದಿಲ್ಲ, ಎನ್ನುವ ಮೋಜಿನ ಉತ್ತರವನ್ನು ವಿಚಾರ ಸಂಕಿರಣಗಳಲ್ಲಿ ಅಧ್ಯಕ್ಷರುಗಳು ಕೊಡುತ್ತಾ ಹೆಣ್ಣಿನ ಸುರಕ್ಷತೆಯ ಸಾಧ್ಯತೆಯನ್ನೇ ಅಲ್ಲಗಳೆಯುತ್ತಾರೆ. 

ಹೆಣ್ಣು ಸದಾ ರಕ್ಷಣೆಯಲ್ಲಿ ಇರಬೇಕು, ಅವಳ ಬಾಲ್ಯದಲ್ಲಿ, ಯೌವ್ವನದಲ್ಲಿ ಹಾಗೂ ವೃದ್ಧಾಪ್ಯದಲ್ಲಿ ಕ್ರಮವಾಗಿ ತಂದೆ, ಗಂಡ ಹಾಗೂ ಮಗ ಅವಳನ್ನು ರಕ್ಷಿಸುತ್ತಾನೆ, ರಕ್ಷಿಸಬೇಕು ಎಂಬುದು ನಮ್ಮ ಸನಾತನ ನಂಬಿಕೆ. ಅಂದರೆ ಹೆಣ್ಣಿಗೆ ಬೇಕಾಗಿರುವುದು ರಕ್ಷಣೆಯೇ ಹೊರತು ಸ್ವಾತಂತ್ರ್ಯವಲ್ಲ. ಆದರೆ ದುರಂತವೆಂದರೆ, ಈ ರಕ್ಷಣೆಯ ಪರಿಕಲ್ಪನೆಯೂ ಎಷ್ಟು ಹುಸಿಯಾದುದು ಎಂಬುದಕ್ಕೆ ನಮ್ಮಲ್ಲಿ ಅನೇಕ ಕತೆ, ಕಾವ್ಯಗಳು ಹುಟ್ಟಿಕೊಂಡಿವೆ. ವಡ್ಡಾರಾಧನೆಯಲ್ಲಿ ಬರುವ ಕಾರ್ತೀಕ ಮುನಿಯ ಕಥೆಯಾಗಲೀ, ಯಮ-ಯಮಿಯರ ಹಾಗೂ ಈಡಿಪಸ್‌ನ ಕಥೆಗಳಾಗಲೀ ಇದಕ್ಕೆ ಸಾಕ್ಷಿಯಾಗಿವೆ. ಅಲ್ಲದೇ, ನಮ್ಮ ಆಡುಮಾತಿನ ಜೊತೆಗೆ ಬೆರೆತು ಹೋಗಿರುವ, ಹೆಣ್ಣನ್ನು ಗುರಿಯಾಗಿಸಿಕೊಂಡಿರುವ, ಗಂಡಸರ ಎಲ್ಲಾ ಬೈಗುಳಗಳೂ ಇದನ್ನು ಸಾಬೀತು ಪಡಿಸುತ್ತವೆ. ಇಂದಿನ ಪತ್ರಿಕೆಗಳಲ್ಲಿ ಹೆಣ್ಣಿನ ಮೇಲಿನ ಅತ್ಯಾಚಾರದ ಬಗೆಗೆ ನಾವು ಕಾಣುತ್ತಿರುವುದು, ಸಂಸ್ಕೃತಿಯ ಹೆಸರಿನಲ್ಲಿ  ಮುಂದುವರಿಸಿಕೊಂಡು ಬರುತ್ತಿರುವ ಅಂದಿನ ಜಂಗಲ್ ಕಾನೂನೇ ಆಗಿದೆ.

ಇಂದು ಮಹಿಳೆ ಕೇವಲ ಗೃಹದೊಳಗೆ ಕುಳಿತಿಲ್ಲ. ಹೊರಗಿನ ಓಡುವ ಪ್ರಪಂಚದೊಳಗೆ ದಾಪುಗಾಲು ಹಾಕಲು ಸಾಧ್ಯವಿಲ್ಲದಿದ್ದರೂ ಪುಟ್ಟ ಹೆಜ್ಜೆಗಳನ್ನಾದರೂ ಇಡಲು ಪ್ರಾರಂಭಿಸಿದ್ದಾಳೆ. ಈಗ ಅವಳಿಗೆ ರಕ್ಷಣೆಯನ್ನು ಯಾರು ಕೊಡಬೇಕು? ಯಾರೋ ಹೊರಗಿನಿಂದ ರಕ್ಷಣೆಗೆ ಧಾವಿಸಿ ಬರುತ್ತಾರೆ, ತನ್ನನ್ನು ಬಿಡುಗಡೆಗೊಳಿಸುತ್ತಾರೆ ಎಂಬ ನಂಬಿಕೆ ಅವಳ ಕನಸು. ಇದು ಅಸಹಾಯಕತೆಯಿಂದ ಹುಟ್ಟಿದ ಕನಸು. ಹೆಣ್ಣಿನ ಬಂಧನ ಮತ್ತು ಬಿಡುಗಡೆಯ ಅಂತಹ ಕನಸುಗಳು, ಭ್ರಮೆಗಳು ನಮ್ಮ ಮಹಾಕಾವ್ಯ, ಪುರಾಣಗಳಲ್ಲಿ ಹೇರಳವಾಗಿ ದಾಖಲುಗೊಂಡಿವೆ. ಇಂತಹ ಕನಸುಗಳೇ ಅವಳ ವಾಸ್ತವದ ಸ್ಥಿತಿಯ ಬಗೆಗಿನ ವೈರುಧ್ಯಗಳನ್ನು ಬಯಲಾಗಿಸುತ್ತವೆ. ಇಂತಹ ವೈರುಧ್ಯಗಳನ್ನು ಸಮತೋಲನಗೊಳಿಸುವ ಸಲುವಾಗಿಯೇ ನಮ್ಮಲ್ಲಿ ನವದುರ್ಗೆ, ದೇವಿಯರು ಹುಟ್ಟಿಕೊಂಡಿರಬೇಕು.

ಆಧುನಿಕ ದುರ್ಗೆ ಮೇರಿ ಕೋಮ್

ಇಂತಹ ನವದುರ್ಗೆಯ ಒಂದು ಪ್ರತೀಕ ’ಮೇರಿ ಕೋಮ್’. ಮಾಂಗ್ಟೆ ಚುಂಗನಿ ಯಾಂಗ್ ಮೇರಿ ಕೋಮ್ ಅವಳ ಹೆಸರು. ಆರು ಬಾರಿ ವಿಶ್ವದ ಬಾಕ್ಸಿಂಗ್ ಛಾಂಪಿಯನ್ ಸ್ಪರ್ಧೆಗಳಲ್ಲಿ ಐದು ಬಾರಿ ಪದಕ ಗೆದ್ದ ಭಾರತದ ಏಕೈಕ ಮಹಿಳೆ. ಅನ್‌ಬ್ರೇಕಬಲ್ ಎಂಬ ಅವಳ ಆತ್ಮಚರಿತ್ರೆಯನ್ನು ಆಧರಿಸಿ, ಇತ್ತೀಚೆಗೆ ಬಿಡುಗಡೆಯಾಗಿರುವ ಚಲನ ಚಿತ್ರ ಮೇರಿ ಕೋಮ್. ಇದು ಎಲ್ಲ ಹೆಣ್ಣು ಮಕ್ಕಳ ಆಶಾದೀಪವಾಗಿದೆ. ಇಂದಿನ ಸಮಾಜದಲ್ಲಿ ಹೆಣ್ಣು ತನ್ನನ್ನು ವಜ್ರಕಾಯಳನ್ನಾಗಿ ಮಾಡಿಕೊಳ್ಳುವ ಆವಶ್ಯಕತೆಯಿದೆ. ಕೋಮಲತೆ ಮತ್ತು ಕಾಠಿಣ್ಯ ಎರಡೂ ಒಂದೇ ವ್ಯಕ್ತಿತ್ವದಲ್ಲಿ ನೆಲೆಸಲು ಸಾಧ್ಯ ಎನ್ನುವ ನಂಬಿಕೆಯನ್ನು ಬಲಪಡಿಸುವ ಹೆಣ್ಣು ಮೇರಿ ಕೋಮ್,  ಮಹಿಳಾ ಬಾಕ್ಸಿಂಗ್ (ಮುಷ್ಠಿ ಕಾಳಗ) ಚರಿತ್ರೆಯಲ್ಲೇ ಪ್ರಪಂಚದ ದಾಖಲೆ ಮುರಿದ ಭಾರತದ ಬಾಕ್ಸಿಂಗ್ ಪಟು. 

ಮೇರಿ ಬಾಕ್ಸಿಂಗ್ ಕ್ಷೇತ್ರಕ್ಕೆ ಕಾಲಿಡುವವರೆಗೆ, ಜಗತ್ತು ಕೇವಲ ಮಹಮದಾಲಿಯ ಕಡೆಗೆ ನೋಡುತ್ತಿತ್ತು. ಇಂತಹ ಒಂದು ಗಂಡು ಕ್ಷೇತ್ರವನ್ನು ತನ್ನದಾಗಿಸಿಕೊಂಡು ಅಪ್ರತಿಮ ಸಾಧನೆ ಮೆರೆದ ಭಾರತದ ಮೊದಲ ಮಹಿಳೆ ಮೇರಿಕೋಮ್. ಮನೆಯಲ್ಲಿನ ಬಡತನ, ತಂದೆಯ ವಿರೋಧ, ಹೆಣ್ಣೊಬ್ಬಳು ಗಂಡು ಕ್ಷೇತ್ರಕ್ಕೆ ಕಾಲಿರಿಸುವುದರ ಬಗ್ಗೆ ಸಾಮಾಜಿಕ ಅಸಹನೆ, ಬಾಕ್ಸಿಂಗ್ ಕ್ಷೇತ್ರಕ್ಕೆ ಕಾಲಿರಿಸಿದ ಅನಂತರದ ಬ್ಯೂರೋಕ್ರೆಟಿಕ್ ಅಡೆತಡೆಗಳು ಮುಂತಾದ ಎಲ್ಲ ಅಡ್ಡಿ ಅತಂಕಗಳನ್ನೂ ಎದುರಿಸಿ, ಅದನ್ನು ಮೀರಿ ಬೆಳೆಯುತ್ತಾಳೆ. ಮದುವೆ ಎನ್ನುವುದು ಹೆಣ್ಣಿಗೆ ಬಂಧನ, ಅದರೊಳಗೆ ಹೊಕ್ಕ ನಂತರ ಹೆಣ್ಣು ತನ್ನ ಸಾಧನೆಗಳನ್ನು ಕೈಬಿಡಬೇಕಾಗುತ್ತದೆ ಎಂಬ ನಂಬಿಕೆಗಳನ್ನೂ ಹುಸಿಮಾಡುತ್ತಾಳೆ. ಹೆರಿಗೆಯ ಆನಂತರ ಹೆಣ್ಣಿನ ದೇಹದಲ್ಲಿ ಕೆಲವು ಶಾರೀರಿಕ ಹಾಗೂ ಮಾನಸಿಕ ಬದಲಾವಣೆಗಳಾಗುತ್ತವೆ ನಿಜ, ಆದರೆ ಆ ಬದಲಾವಣೆಗಳನ್ನೇ ಗೆಲುವಿನ ಸಾಧ್ಯತೆಗಳನ್ನಾಗಿ ಪರಿವರ್ತನೆ ಮಾಡಿಕೊಳ್ಳುವ ಮೇರಿಯ ಧಾರ್ಷ್ಟ್ಯ, ಅದನ್ನು ನಿಭಾಯಿಸುವ ಪರಿ, ತನ್ನ ಸಾಧನೆಯಲ್ಲಿ ಎಗ್ಗಿಲ್ಲದೇ ನುಗ್ಗುವ ರೀತಿ ಮಾತ್ರ  ಅನನ್ಯವಾದುದು. ಕೌಟುಂಬಿಕ ವೃತ್ತಿ ಮತ್ತು ಪ್ರವೃತ್ತಿಗಳನ್ನು ಏಕಕಾಲಕ್ಕೆ ಸಮಾನವಾಗಿ ಸಾಧಿಸಿದ ಮೇರಿಯ ಯಶೋಗಾಥೆ ಆಧುನಿಕ ಮಹಿಳೆಯರಿಗೆ ಪ್ರೇರಕವಾದುದು.  

ನೀರಿನೊಳಗೆ ಧುಮುಕಿ, ಬೆಟ್ಟವೇರಿ, ಬಂಡೆಕಲ್ಲಿಗೆ ತನ್ನನ್ನು ಗುದ್ದಿಕೊಂಡು ಅಸಾಧ್ಯದ ಕಸರತ್ತು ಮಾಡಿ ದೇಹವನ್ನು ತಾನು ಹೇಳಿದಂತೆ ಕೇಳುವ ಹಾಗೆ ಒಲಿಸಿಕೊಂಡು ವಜ್ರಕಾಯದವಳಾಗುತ್ತಾಳೆ ಮೇರಿ ಕೋಮ್. ಅದರ ಜೊತೆಗೆ ಆತ್ಮಶಕ್ತಿಯನ್ನೂ ಬೆಳೆಸಿಕೊಳ್ಳುತ್ತಾಳೆ. ಆಗ ಅವಳ ಎದುರಿಗೆ ನಿಲ್ಲುವುದು ಶತ್ರುವಲ್ಲ. ತನ್ನ ಗುರಿ ಸಾಧನೆ ಮಾತ್ರ. ಮೇರಿ ಕೋಮ್ ಗಂಡಸಿನಂತೆ ಗಡುಸಾಗುತ್ತಾಳೆ ಎಂದ ಮಾತ್ರಕ್ಕೆ ಅವಳು ಕೋಮಲತೆಯನ್ನು ಕಳೆದುಕೊಳ್ಳುವುದಿಲ್ಲ. ಮಣಿಪುರದ ಸುಂದರ ಬೆಟ್ಟಗುಡ್ಡ ಬಂಡೆಕಲ್ಲುಗಳು, ಕೊರಕಲುಗಳು ಹಳೆಯ ಮನೆಗಳು ಅವಳು ಎದುರಿಸಿದ ಕಷ್ಟಗಳಿಗೆ, ಅವಳು ಬೆಳೆಸಿಕೊಂಡ ಕಾಠಿಣ್ಯಕ್ಕೆ, ಗಳಿಸಿದ ಸಾಧನೆಗಳಿಗೆ ಪ್ರತೀಕವಾಗಿ ನಿಂತರೆ, ಅಲ್ಲಿನ ಮನೋಹರ ನದಿ, ಹಸಿರು ಸಸ್ಯ ಸಂಪತ್ತು ಅವಳು ಅಪ್ಪಿಕೊಂಡ ಸಮೃದ್ಧ ಕೋಮಲತೆಗೆ ಸಾಕ್ಷಿಯಾಗಿವೆ. ಎರಡು ಮಕ್ಕಳ ತಾಯಿಯಾದ ಅವಳು ಬಾಕ್ಸಿಂಗ್ ಸ್ಪರ್ಧೆಗೆಂದು ಚೀನಾ ದೇಶಕ್ಕೆ ಹೋದಾಗ, ಗುರ್‍ಗಾಂವ್ ನಲ್ಲಿ ಅವಳ ಮಗುವಿಗೆ ಹೃದಯದ ಚಿಕಿತ್ಸೆ ನಡೆಯುತ್ತಿರುತ್ತದೆ. ಮೇರಿ, ಒಳಗಿನ ಹಾಗೂ ಹೊರಗಿನ ಹೋರಾಟಗಳಿಂದ ತತ್ತರಿಸಿ ಹೋದರೂ ಧೈರ್ಯ ಕಳೆದುಕೊಳ್ಳುವುದಿಲ್ಲ. ಅವಳ ಮಗುವಿನ ಮೇಲಿನ ಮಮತೆಯೇ ಅವಳಿಗೆ ಹೋರಾಡುವ ಶಕ್ತಿಯನ್ನೂ ಕೊಡುತ್ತದೆ. ಹೆಣ್ಣಿಗೆ ತಾಯ್ತನ ಎನ್ನುವುದು ಅಸಾಧ್ಯ ಶಕ್ತಿಯನ್ನು ದಯಪಾಲಿಸುತ್ತದೆ ಎಂದು ಅವಳ ಬಾಕ್ಸಿಂಗ್  ಗುರು ಹೇಳಿರುತ್ತಾನೆ. ಇದು ನಿಸರ್ಗವೇ ದಯಪಾಲಿಸಿದ ಶಕ್ತಿ. ಅದನ್ನು ಮೇರಿ ನಿಜಮಾಡಿ ತೋರಿಸುತ್ತಾಳೆ. ತನ್ನ ಸತತ ಪರಿಶ್ರಮ, ಆತ್ಮವಿಶ್ವಾಸ ಹಾಗೂ ಧ್ಯಾನಶೀಲತೆಯಿಂದ ಗೆದ್ದು ಬರುತ್ತಾಳೆ. ಅನೇಕ ಚಿನ್ನದ ಪದಕಗಳು, ಪದ್ಮಶ್ರೀ, ಪದ್ಮಭೂಷಣ್, ಅರ್ಜುನ ಪ್ರಶಸ್ತಿ ಅವಳ ಬಗಲಿಗೆ ಬಂದು ಬೀಳುತ್ತವೆ ಮ್ಯಾಗ್ನಿಫಸಂಟ್ ಮೇರಿ ಎನ್ನುವ ಬಿರುದಿಗೆ ಪಾತ್ರಳಾಗುತ್ತಾಳೆ.. ತನ್ನನ್ನು ಹಣಿಯಲು ಬಂದವರಿಗೆ ಅವಳು ಸಿಂಹಸ್ವಪ್ನವಾಗುತ್ತಾಳೆ. ಮಹಿಳಾ ಸಬಲೀಕರಣದ ಚರಿತ್ರೆ ಬರೆಯುತ್ತಾಳೆ. ಹೀಗೆ ಮಾಡುವಲ್ಲಿ ಮೇರಿಯ ಗಂಡ ಓನ್ಲರ್ ಕೋಮ್‌ನ  ದೇಣಿಗೆಯೂ ಅಪ್ರತಿಮವಾದುದು. ಅವನು ಮೇರಿಯನ್ನು ಸ್ಪರ್ಧೆಯಲ್ಲಿ ಪಾಲುಗೊಳ್ಳಲು ವಿದೇಶಕ್ಕೆ ಕಳುಹಿಸಿ, ಸಣ್ಣ ಅವಳಿ ಮಕ್ಕಳನ್ನು ಪಾಲಿಸುವ ಜವಾಬ್ದಾರಿಯನ್ನು ತೆಗೆದುಕೊಳ್ಳುವುದರ ಮೂಲಕ ತಾಯಿಯಾಗುತ್ತಾನೆ. ಆ ಸಣ್ಣ ಕೂಸಿಗೆ ಹೃದಯದಲ್ಲಿ ತೂತೊಂದು ಕಾಣಿಸಿಕೊಂಡಾಗ, ಅವಳ ಅನುಪಸ್ಥಿತಿಯಲ್ಲಿ ಅದನ್ನು ಶಸ್ತ್ರಚಿಕಿತ್ಸೆ ಮಾಡಿಸುವ ಸಂಪೂರ್ಣ ಜವಾಬ್ದಾರಿಯನ್ನು ಹೊತ್ತುಕೊಳ್ಳುತ್ತಾನೆ. ಇದು,  ಹೆಣ್ಣಿನ ಶತ್ರು ಗಂಡಲ್ಲ. ಆಕ್ರಮಣಶೀಲತೆ ಅವಳ  ಶತ್ರು, ಹೆಣ್ಣ್ಣು ಗಂಡು ಕೂಡಿಯೇ ಇದನ್ನು ಸದೆಬಡಿಯಬೇಕಾಗಿದೆ. ಬಗೆಹರಿಸಿಕೊಳ್ಳಬೇಕಾಗಿದೆ, ಎಂಬುದನ್ನು ಪರಿಣಾಮಕಾರಿಯಾಗಿ ತೋರಿಸುತ್ತದೆ. 

ಅವಳು ಬಾಕ್ಸಿಂಗ್ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲು ಚೀನಾದೇಶಕ್ಕೆ ಹೋದಾಗ, ಚೀನಾದಲ್ಲಿ ಬಹಳ ಸುಂದರ ಹುಡುಗಿಯರೂ ಇದ್ದಾರಂತೆ ಎಂದು ಫೋನಿನಲ್ಲಿ ಅವಳ ಗಂಡ ಕೇಳುವ ಚೇಷ್ಟೆಯ ಪ್ರಶ್ನೆಗೆ, ಹೌದು, ಹಾಗೆಯೇ, ಪ್ರತಿಯೊಬ್ಬರೂ ಅಲ್ಲಿ ಕರಾಟೆ ಕಲಿತಿರುತ್ತಾರೆ ಎಂದು ಉತ್ತರಿಸುತ್ತಾಳೆ. ಚೀನಾ ದೇಶದಲ್ಲಿ ಹೆಣ್ಣು ಮಕ್ಕಳ ಮೇಲೆ ಅತ್ಯಾಚಾರದ ಪ್ರಕರಣಗಳು ಇಲ್ಲದಿರುವುದಕ್ಕೆ ಕಾರಣ ಅಲ್ಲಿ ವೇಶ್ಯಾವೃತ್ತಿ ಕಾನೂನು ಬದ್ಧವಾಗಿರುವುದು ಮಾತ್ರವಲ್ಲ, ಅವರು ಕರಾಟೆಯ ಪಟುಗಳಾಗಿರುವುದೂ ಕಾರಣ ಎನ್ನವುದನ್ನು ಇದು ಎತ್ತಿ ಹೇಳುತ್ತದೆ.

ಇಲ್ಲಿ ಮೇರಿಯ ಬಾಕ್ಸಿಂಗ್ ಚೌಕಟ್ಟಿನಲ್ಲಿ ಎದುರಾಳಿಯ ಮೇಲೆ ಮಾಡುವ ಆಕ್ರಮಣ ಕೇವಲ ಆಕ್ರಮಣಕ್ಕ್ಕಾಗಿ ಅಲ್ಲ. ತನ್ನ ರಕ್ಷಣೆಗಾಗಿ, ಬದಲಾಗುತ್ತಿರುವ ಸಂದರ್ಭಗಳಿಗೆ ಹೊಂದಿಕೊಳ್ಳುವ ಸಲುವಾಗಿ, ಈ ಜೀವ ಜಾಲದಲ್ಲಿ ಉಳಿದುಕೊಳ್ಳುವ ಸಲುವಾಗಿ ಹೆಣ್ಣು ಆಕ್ರಮಣಕ್ಕೆ ಸಿದ್ಧಳಾಗಬೇಕಾಗಿದೆ ಎನ್ನುವುದನ್ನು ಇದು ಧ್ವನಿಸುತ್ತದೆ. ಹೆಣ್ಣು ಹಾಗೆ ಸಿದ್ಧಳಾದಾಗ ಅದು ಆಕ್ರ್ರಮಿಸುವವನ ಎದೆಯಲ್ಲಿ ಭಯವನ್ನುಂಟುಮಾಡುತ್ತದೆ. ಕೇವಲ ಭಯವನ್ನು ಉಂಟುಮಾಡುವುದು ಅವಳ ಗುರಿಯಾಗಬೇಕಿಲ್ಲ. ಅವಳು ಬೆಂಕಿಯಂತೆ.  ಒಲಿಸಿಕೊಳ್ಳಲು ಸಾದ್ಯವಿರುವವರಿಗೆ ದೇಹದೊಳಗಿನ ಬೆಚ್ಚಗಿನ ಅಗ್ನಿಯಾಗಬಲ್ಲಳು. ಇಲ್ಲದಿದ್ದರೆ ಭಸ್ಮಮಾಡಬಲ್ಲಳು. ಈ ಎರಡನ್ನೂ ಮೇರಿ ಕೋಮ್ ಮಾಡಿ ತೋರಿಸುತ್ತಾಳೆ. ನಮ್ಮ ದೇವಿಯರ ಪರಿಕಲ್ಪನೆಯ  ಹಿಂದಿರುವ ನಂಬಿಕೆಯೂ ಇದೇ ಆಗಿದೆ. ಮೇರಿ ಕೋಮ್ ಆಧುನಿಕ ದೇವಿಯಂತೆ ಕಂಗೊಳಿಸುತ್ತಾಳೆ. 

ಮೇರಿ ಕೋಮ್‌ಳ ಚರಿತ್ರೆ, ಹೆಣ್ಣುಮಕ್ಕಳು ತಮ್ಮನ್ನು ತಾವೇ ರಕ್ಷಿಸಿಕೊಳ್ಳಬೇಕಾಗಿದೆ, ಸದಾ ಕಾಲ ಯಾರಾದರೂ ಅವರಿಗೆ ಕಾವಲಿರಲು ಸಾಧ್ಯವಿಲ್ಲ, ಎಂಬುದನ್ನು ಸಾರಿ ಹೇಳುತ್ತದೆ. ಮಹಾರಾಷ್ಟ್ರದ ಮಂತ್ರಿಯೊಬ್ಬರು ಪೋಲಿಸರನ್ನು ಎಲ್ಲೆಲ್ಲಿ ಕಾವಲಿಡಲು ಸಾಧ್ಯ? ಎಂದು ಹೇಳಿದರು. ಹೌದು ಅದು ನಿಜ, ಯಾಕೆಂದರೆ, ಯಾರು, ಯಾವ ಸಮಯದಲ್ಲಿ, ಯಾವ ಪ್ರದೇಶದಲ್ಲಿ ಅತ್ಯಾಚಾರ ಮಾಡುತ್ತಾರೆ, ಅತ್ಯಾಚಾರಿ ಎಲ್ಲಿ ಅಡಗಿ ಕುಳಿತಿರುತ್ತಾನೆ ಎಂದು ಹೇಳಲು ಸಾಧ್ಯವಿಲ್ಲ.  ಆದ್ದರಿಂದ ಸರ್ಕಾರ ಪೋಲಿಸರನ್ನು ನೇಮಿಸಲೂ ಸಾಧ್ಯವಿಲ್ಲ. ಅಲ್ಲದೇ ಬೇಲಿಯೇ ಹೊಲ ಮೇಯುವ ನಮ್ಮ ಸಂಸ್ಕೃತಿಯಲ್ಲಿ ಹೊರಗಿನ ಶಕ್ತಿಯ ಮೇಲೆ ಮಹಿಳೆ ಅವಲಂಬಿಸುವುದೂ, ಅದನ್ನು ನಂಬುವುದೂ ಹಾಸ್ಯಾಸ್ಪದ ಸಂಗತಿ. ನಮ್ಮ ಹೆಣ್ಣು ಮಕ್ಕಳು ಮೇರಿ ಕೋಮ್ ನ ಹಾದಿಯಲ್ಲಿ ನಡೆದರೆ, ಅವಳಂತೆ ದೇಹ ಧಾರ್ಡ್ಯ ಮತ್ತು ಆತ್ಮಶಕ್ತಿಯನ್ನು ಬೆಳೆಸಿಕೊಂಡರೆ ’ನಮ್ಮನ್ನು ರಕ್ಷಿಸಿ, ನಮಗೆ ಸ್ವಾತಂತ್ರ್ಯ ಕೊಡಿ’ ಎಂದು ಯಾರಿಗೂ ಗೋಳಾಡಿ ಬೇಡಿಕೊಳ್ಳುವ ಪರಿಸ್ಥಿತಿ ಬರುವುದಿಲ್ಲ. ಈ ನಿಟ್ಟಿನಲ್ಲಿ ದೇಹದಾರ್ಢ್ಯ ಮತ್ತು ಆತ್ಮ ಶಕ್ತಿಗಳನ್ನು ಏಕಕಾಲಕ್ಕೆ ಬೆಳೆಸುವಂತಹ ಶಿಕ್ಷಣವನ್ನು ನಮ್ಮ ಬಾಲಕಿಯರಿಗೆ ಕೊಡಬೇಕಾಗಿದೆ. ಈ ದಿಸೆಯಲ್ಲಿ ಸ್ವತಃ ಮೇರಿ ಕೋಮ್ ಅತ್ಯಾಚಾರದ ವಿರುದ್ಧ ಹೋರಾಡುವ ಸಾಧನವಾಗಿ ಇಂಫಾಲ್ ನಲ್ಲಿ ಹುಡುಗಿಯರಿಗಾಗಿ ಫೈಟ್ ಕ್ಲಬ್ ಒಂದನ್ನು ಪ್ರಾರಂಭಿಸಿದ್ದಾಳೆ. ಇಂತಹ ಗರಡಿ ಕೇಂದ್ರಗಳು ದೇಶದಲ್ಲೆಡೆ ಹುಟ್ಟಿಕೊಳ್ಳಬೇಕಾಗಿದೆ. ಅದಕ್ಕೆ ಎಲ್ಲಾ ಸಮಾನ ಆಸಕ್ತರೂ ಕೈಜೋಡಿಸಬೇಕಾಗಿದೆ. ಸರ್ಕಾರವೊಂದರಿಂದಲೇ ಎಲ್ಲವನ್ನೂ ನಿರೀಕ್ಷಿಸುವುದು ಸಾಧ್ಯವಿಲ್ಲ, ಅದು ಸಾಧುವೂ ಅಲ್ಲ. 

(ಇಂತಹ ಸ್ಪರ್ಧೆಗಳಿಗೆ ತಯಾರು ಮಾಡುವುದರ ಮೂಲಕ ಆಯಾ ದೇಶಗಳು ಇಲ್ಲದ ಶತ್ರುಗಳನ್ನು ಸೃಷ್ಟಿಸಿ ಅವರನ್ನು ಸದೆ ಬಡಿಯಲು ತಮ್ಮ ದೇಶದ ಪ್ರತಿಭಾವಂತರನ್ನು ದಾಳಗಳನ್ನಾಗಿ ಮಾಡಿಕೊಂಡು ಅವರ ಶಕ್ತಿ ಸಾಮರ್ಥ್ಯಗಳನ್ನು ನೇತ್ಯಾತ್ಮಕವಾಗಿ ಬಳೆಸಿಕೊಳ್ಳುತ್ತಿವೆ.  ಅಲ್ಲದೆ ಗೆದ್ದವರಲ್ಲಿ ಮೇಲರಿಮೆಯನ್ನೂ ಸೋತವರಲ್ಲಿ ಕೀಳರಿಮೆಯನ್ನೂ ಬೆಳೆಸುವ ಅಪಾಯಕಾರಿ ಬೆಳವಣಿಗೆಗೂ ಅದು ಕಾರಣವಾಗಬಹುದು.ಆದರೆ ಅದೇ ಶಕ್ತಿಯನ್ನು ಆತ್ಮರಕ್ಷಣೆ ಹಾಗೂ ದೇಶರಕ್ಷಣೆಗೆ ಬಳಸಿದರೆ ಅದು ಇತ್ಯಾತ್ಮಕ ವಿಕಾಸಕ್ಕೆ ಕಾರಣವಾಗಬಹುದು. ಶಕ್ತಿಯನ್ನು ಬಳಸುವುದೂ ಕೂಡ ಅದನ್ನು ಬೆಳೆಸುವುದಷ್ಟೇ ಮಹತ್ವವಾದುದು, ಎಂಬ ಒಟ್ಟಾರೆಯಾಗಿ ಈ ಸ್ಪರ್ಧೆಗಳಿಗಿರುವ ಇನ್ನೊಂದು ಆಯಾಮವನ್ನು ಗಮನದಲ್ಲಿಟ್ಟುಕೊಂಡೇ ಈ ಲೇಖನವನ್ನು ಗಮನಿಸಬೇಕಾಗಿದೆ).

******

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

4 Comments
Oldest
Newest Most Voted
Inline Feedbacks
View all comments
amardeep.p.s.
amardeep.p.s.
10 years ago

ಸ್ಪೂರ್ತಿ ತುಂಬುವ ಬರಹ…..

Akhilesh Chipli
Akhilesh Chipli
10 years ago

ಪ್ರಾಥಮಿಕ ಹಂತದಲ್ಲಿ ಶಾಲೆಗಳಲ್ಲೆ ಕರಾಟೆಯಂತಹ
ಆತ್ಮರಕ್ಷಣೆಯ ಪಟ್ಟುಗಳನ್ನು ಕಲಿಸಬೇಕು.

ವಿಭಾವರಿ ಭಟ್
ವಿಭಾವರಿ ಭಟ್
10 years ago

ತುಂಬಾ ವಿಚಾರಪೂರ್ಣ ಲೇಖನ. ವಿಚಾರಾರ್ಹವೂ ಹೌದು. 

ಜಯಲಕ್ಷ್ಮೀ ಪಾಟೀಲ್
ಜಯಲಕ್ಷ್ಮೀ ಪಾಟೀಲ್
10 years ago

 ಎಂದಿನಂತೆ ಇದೂ ಸಹ ಪಕ್ಕಾ ಗಿರಿಜಾ ಬರಹ, ಅಂದರೆ ವಿಚಾರಪೂರ್ಣ ಪ್ರಭುದ್ದ ಲೇಖನ. 

ದಯವಿಟ್ಟು ಪಂಜು ಮ್ಯಾಗಜಿನ್ ಅವರು ಈ ಲೇಖನದಲ್ಲಿರುವ ಕಾಗುಣಿತ ದೋಷಗಳನ್ನು ಸರಿಪಡಿಸಬೇಕಾಗಿ ವಿನಂತಿ. ಹೊ, ಹೋ ಇರಬೇಕಾದಲ್ಲೆಲ್ಲ ಹೆ ಎಂದಾಗಿದೆ. ಒಂದೊಳ್ಳೆ ಲೇಖನ ಓದುವಾಗ ಇದು ಪದೆ ಪದೆ ಓದಿಗೆ ಅಡ್ಡಿ ಬರುವಷ್ಟಿದೆಯಾದ್ದರಿಂದ ಹೇಳುತ್ತಿರುವೆ. ಅನ್ಯಥಾ ಭಾವಿಸದಿರಿ.

4
0
Would love your thoughts, please comment.x
()
x