ಹಂಗೆ ಬಸ್ ಸ್ಟಾಪಲ್ಲಿ ಕಾಯ್ತಾ ಇದ್ದೆ (ಬಸ್ಸಿಗೆ)…!! ಪಕ್ಕದಲ್ಲಿ ಮೂವರು ಬುದ್ಧಿಜೀವಿಗಳು (ಬಿಳಿ ಗಡ್ಡ ಇದ್ದಿದ್ರಿಂದ ಹಂಗಂದುಕೊಂಡೆ) ಮಾತಾಡ್ತಾ ನಿಂತಿದ್ರು…!! ಅಷ್ಟರಲ್ಲಿ ಅಲ್ಲೇ ಇದ್ದ ಬಸ್ಸಿನಿಂದ ಇಳಿದುಬಂದ ಸುಂದರ ಯುವತಿಯೊಬ್ಬಳು ನನ್ನತ್ರ ಅಡ್ರೆಸ್ಸ್ ತೆಲುಗಲ್ಲಿ ಕೇಳಿದ್ಳು..! ಕನ್ನಡ ಬರಲ್ಲ ಅಂತ ತೆಲುಗಲ್ಲೇ ಹೇಳಿದಳು ಕೂಡಾ.. ನಾನೂ ಒಬ್ಬ ಕನ್ನಡಿಗನಾದ್ದರಿಂದ ಅವಳ ವಿಳಾಸಾನ ತೆಲುಗಲ್ಲೇ ಹೇಳಿದೆ..!!
ಇದು ನಮ್ಮ ಕನ್ನಡ ಬುದ್ಧಿಜೀವಿಗಳಿಗೆ ಸ್ವಲ್ಪ ರೇಗಿಸಿತು ಅನ್ಸತ್ತೆ..! “ತಮ್ಮಾ ಬಾ” ಅಂದ್ರು. ಹತ್ತಿರ ಹೋದೆ. “ನೀನ್ ಯಾವೂರು? ನಿನ್ ಭಾಷೆ ಯಾವ್ದು??” ಅಂದ್ರು. “ಸರ್ ನಾನು ಇರೋದು ಇದೇ ಏರಿಯಾದಲ್ಲಿ. ನಾನೂ ಒಬ್ಬ ಕನ್ನಡಿಗ” ಅಂತಂದೆ..! “ಮತ್ಯಾಕೆ ಅವಳಿಗೆ ತೆಲುಗಲ್ಲಿ ಉತ್ತರ ಕೊಟ್ಟೆ? ಬೇರೆ ಭಾಷೆಯವರಿಗೆ ಅವರ ಭಾಷೆಯ ಬಗ್ಗೆ ಎಷ್ಟು ಹೆಮ್ಮೆ ಗೌರವ ಇರತ್ತೆ…, ನೀವೂ ಇದಿರಾ..! ನಿಮ್ಮಂಥವರಿಂದಾನೆ ನಮ್ ಕನ್ನಡಕ್ಕೆ ಇಂಥಾ ಸ್ಥಿತಿ” ಅಂದ್ರು..!
ನನಗೆ ಉರಿದೋಯ್ತು.. ಆದ್ರೆ ಏನ್ ಮಾಡೋದು ಬುದ್ಧಿಜೀವಿಗಳು, ಮೇಲಾಗಿ ಹಿರಿಯರು..! ಏನೂ ಹೆಚ್ಚು ಕಮ್ಮಿ ಮಾತಾಡೋ ಹಾಗಿಲ್ಲ.
“ಸಾರ್, ಕ್ಷಮಿಸಿ.. ಗೊತ್ತಾಗಿಲ್ಲ. ಆದ್ರೆ ನನಗೊಂದು ಸಂದೇಹ…! ಕನ್ನಡದಲ್ಲಿ ಮಾತಾಡ್ಬೇಕು ಅಂದ್ರಲ್ಲ, ಯಾವ್ ಕನ್ನಡದಲ್ಲಿ ಸಾರ್?? ನನಗಂತೂ ಇದು ತುಂಬಾ ಗಲಿಬಿಲಿಯ ವಿಷಯಾ..!!” ಅಂದೆ.
“ಏನಯ್ಯಾ ಹೀಗಂತಿಯಾ? ಇರೋದೊಂದೇ ಕನ್ನಡ… ಅದರಲ್ಲೇ ಮಾತಾಡು..!” ಅಂದ್ರು ದನಿ ಏರಿಸಿಕೊಂಡು.
ನಾನಂದೆ “ಸರ್, ನಾನೀಗ ಹೋಗೋ ಬಸ್ ಕಂಡಕ್ಟರ್ ಹಾಸನದವ್ರು. ‘ಎಲ್ಲಾ ಬೇಗಾ ಅತ್ಗಳಿ, ಹಿಂದಕ್ಕೆ ಓಗಿ’ ಅನ್ನೋ ಅವರದ್ದು ಕನ್ನಡ… ಅಲ್ಲಿಂದ ಮಂಡ್ಯಕ್ಕೆ ಹೋಗ್ಬೇಕು. ಅಲ್ಲಿ ‘ಬಾರೋ, ಸಂದಾಕಿದೀಯಾ ಮಗಾ? ಬಾರ್ಲಾ ಮುದ್ದೆ ಉಣ್ಣು’ ಅಂತಾರೆ, ಅದೂ ಕನ್ನಡ… ನೆಕ್ಸ್ಟ್ ಮೈಸೂರಿಗೆ ಹೋದ್ರೆ ಅಲ್ಲಿ ನಯ ನಾಜೂಕಿನ ಕನ್ನಡ… ಸರೀ ಅಂತಂದು ಮುಂದೆ ಮಂಗಳೂರಿಗೆ ಹೋದ್ರೆ, “ಹೋಯ್ ಇದು ನಮ್ಮ ಕುಡ್ಲ, ತುಂಬಾ ಚಂದ ಉಂಟು ಮಾರಾಯಾ, ಬನ್ನಿ ಸುತ್ತುವ’ ಅನ್ನೋ ಅಲ್ಲಿಯದೂ ಕನ್ನಡ… ವಾಕೆ ಅಂತ ಹುಬ್ಬಳ್ಳಿಗೆ ಹೋದ್ರೆ ‘ಅಲಾಲಾಲಾಲಾ.. ಏನ್ ಕಲರ್ ಆಗೀಯೋ ತಮಾ, ಬೆಂಗ್ಳೂರ್ ಹವಾ ಭೇಷ್ ಆಗಿ ಒಗ್ಗಯ್ತಿ ಬಿಡಪಾ.. ಬಾ ಸುತ್ತಾಕ’ ಅಂತಾರೆ, ಅದೂ ಕನ್ನಡ.. ಬೆಳಗಾವಿಗೆ ಹೋದ್ರೆ ಮರಾಠಿ ಮಿಕ್ಸ್ ಕನ್ನಡ… ಬಳ್ಳಾರಿಲಿ ಅದಿರುವಂತಾ ಕನ್ನಡ… ಕಲಬುರ್ಗಿ, ರಾಯಚೂರ್ ಗಂಗಾವತಿ ಕಡೆ ಖಡಕ್ ಕನ್ನಡ…. ಬೀದರ್ ಬಿಜಾಪುರದಲ್ಲಿ ಬಹಮನೀ ಸುಲ್ತಾನರ ಕನ್ನಡ… ಇನ್ನು ದುರ್ಗಾಕ್ಕೆ ಹೋದ್ರೆ ಓಬವ್ವಳ ವೀರಾವೇಶದ ಬಂಡೆಗಾತ್ರದ ಕನ್ನಡ… ದಾವಣಗೆರೆಯಲ್ಲಿ ಬೆಣ್ಣೆ ದೋಸೆ ಕನ್ನಡ… ಕೋಲಾರದಲ್ಲಿ ತೆಲುಗು ತಟಕಿಟ ಕನ್ನಡ… ಕೊಳ್ಳೆಗಾಲದಲ್ಲಿ ತಮಿಳು ಪುಳಿಯೋಗರೆ ಕನ್ನಡ… ಯಾವ್ದೂ ಬೇಡಪ್ಪಾ ಅಂತ ಶಿರಸಿಲಿರೋ ನಮ್ಮನೆಗೆ ಹೋದ್ರೆ ‘ತಮಾ ಈಗ ಬಂದ್ಯಾ? ಬಾ ಆಸರಿ ಕುಡಿಲಕ್ಕು.. ಲೇಟ್ ಎಂತಕ್ಕಾತು? ಕೈ ಕಾಲ್ ತೊಳ್ಕಂಡ್ ಬಾ., ಮಗೇಕಾಯಿ ದೋಸೆ ಮಾಡ್ತಿ ತಿನ್ಲಕ್ಕು.. ಮತ್ತೆಂಥ ವಿಶೇಷಾ? ತಿರುಗಾಟ ಎಲ್ಲಾ ಹೆಂಗಾತು??’ ಅನ್ನೋ ಭಾಷೆಯೂ ಕನ್ನಡವಲ್ಲದೇ ಬೇರೆಯಲ್ಲ… ಯಾವ್ದೂ ಬೇಡಾ ಅಂತ ಮತ್ತೆ ಬೆಂಗಳ್ರರಿಗೆ ಬಂದ್ರೆ ಇಲ್ಲಿದೋ ಕುಳಿಗನ್ನಡ. ಯಾಕಂದ್ರೆ ಇಲ್ಲಿ ಯಾರ ಬಾಯಲ್ಲೂ ಸರಿಯಾಗಿ ಒಂದು ಕಡೆ ಕೂರಲ್ಲ.. ನಿಲ್ಲಲ್ಲಾ..!!
ನಮ್ಮ ರಾಜ್ಯದ ಪ್ರತೀ 20 ಕಿಲೋಮೀಟರ್‍ಗೆ ಭಾಷೆ, ಪರಿಸರ, ಜನರ ಮನಸ್ಥಿತಿ, ವೇಷಭೂಷಣ ಎಲ್ಲಾ ಬದಲಾಗತ್ತಂತೆ…!! ಅದೇನೋ ಗೊತ್ತಿಲ್ಲ, ಈ ದೋಸೆ… ಥೂ..ಸಾರಿ ದೋಸೆ ಅಲ್ಲ.. ಬಾಷೆ.. ಭಾಷೆ.., ಈ ಭಾಷೆ ಮಾತ್ರ ಚೇಂಜ್ ಆಗ್ತಾನೆ ಇದೆ. ನೆಲಮಂಗಲದ ರಕ್ತಸಿಕ್ತ ಕನ್ನಡದಿಂದ ಮೆಜೆಸ್ಟಿಕ್‍ನ ಮಿಕ್ಸಡ್ ಮಸಾಲಾ ಕನ್ನಡ… ಶಿವಾಜಿನಗರದ ‘ನಮ್ದುಕೆ ಕನ್ನಡ ನಿಮ್ದುಕೆ ಮಾಲೂಮು’ ಇಂದ, ಎಂ.ಜಿ. ರೋಡಿನ ಅಲ್ಪಸಂಖ್ಯಾತ ಭಾಷೆ ಅಷ್ಟೇ ಅಲ್ಲದೇ ರಿಂಗ್ ರೋಡಿನ ರಂಗುರಂಗು ಭಾಷೆ ಕೂಡಾ ಕನ್ನಡಾನೇ..!!
ಸರ್, ಈಗ ಹೇಳಿ ನಾನು ಯಾವ ಕನ್ನಡದಲ್ಲಿ ಭಾಷೆ ಬರದವರಿಗೆ ಉತ್ತರಿಸಬೇಕು ಅಂತಾ??”
ಮುಂದೇನಾಯ್ತು ಎಲ್ಲಾ ಇಲ್ಲಿ ಬೇಡಾ… ಯಾಕಂದ್ರೆ ಸದ್ಯಕ್ಕೆ ನಾನೂ… ನಮ್ಮ್ ಹಿರಿಯರೂ.. ತುಂಬಾ ಗೊಂದಲದಲ್ಲಿದ್ದೇವೆ…!!
ಎಲ್ರೂ ನಿಮ್ ನಿಮ್ ಕೆಲಸ ನೋಡ್ಕಳಿ.. ಹೆಂಗಿದ್ರೂ ಮತ್ತೆ ಬಂದಿದೆ ಕನ್ನಡಮಾಸ. ನಮಗಂತೂ ತಿಂಗಳಾನು ಗಟ್ಟಲೆ ಉತ್ಸವ ಮಾಡೋದಿದೆ.
ಕನ್ನಡಮ್ಮ ಶರಣು ತಾಯೇ..! ಇಂಗ್ಲೀಷಮ್ಮ, ಹಿಂದಿಯಮ್ಮ ಎಲ್ರೂ ನಮ್ ಕನ್ನಡಮ್ಮನ್ನ ಜೋಪಾನವಾಗಿ ನೋಡ್ಕೊಳ್ರಮ್ಮಾ..!!
*****
ನಿನ್ನ ಲೇಖನ ಬೊ ಪಸಂದಾಗೈತೆ ಸಚಿನಾ 🙂
nice
chennagidhe!
Yanna kannadappa……..!!!
ಕನ್ನಡದ ಕಾಲವಲ್ಲಾ…….
ನಿಮ್ಮ ಕನ್ನಡ ದಲ್ಲಿ ಬೆಂಗಳೂರಿನ ತ್ಮಿಳ್ ಕನ್ನಡ, ತೆಲುಗು ಕನ್ನಡ,ಮಲಯಲ್ಮ್ ಕನ್ನಡ,ಉರ್ದು ಕನ್ನಡ ಮಿಸ್ ಆಗಿದೆ.ಏನೇ ಆದರೂ ನಿಮ್ಮ ಕನ್ನಡಕ್ಕೆ ಆಂಗ್ಲ ಬಾಷೆಯಲ್ಲಿ ಸೂಪರ್ ಅನ್ನಾಬಹ್ದು. ಓಕೇ ನಾ