ನಿನ್ನೂರಿಂದ ನನ್ನೂರ ನಡುವೆ ಹೊತ್ತಿಗೆ ಅವನೂರಲೆರಡು ಹೆಜ್ಜೆಯೂರುವ ಮನಸಾದಾಗ ಮುಸ್ಸಂಜೆಯಿನ್ನೂ ಹುಟ್ಟುತ್ತಿತ್ತು.
ಹಸಿರುದಿಬ್ಬ ಬಳಸಿ ಮೇಲೇರುತಿದ್ದ ಕೆಮ್ಮಣ್ಣ ಸಣ್ಣ ಕಾಲ್ದಾರಿಯೊಂದು ಹೊಂಬಣ್ಣದಲಿ ಮುಳುಗೆದ್ದು ಥೇಟ್ ಅವನ ಮುಳುಮುಳು ನಗುವಲಿ ಮಿಂದ ಪರಮದ ಚರಮಕೊಯ್ಯುವ ಕಾಲದೊಂದು ಮಾಯಕದ ತುಂಡಿನಂತೆ ಕಾಣಿಸುತಿತ್ತು.ಆವರೆಗೆ ಪಚ್ಚೆಯೆಂಬುದು ಗೊತ್ತಿತ್ತು; ಸುಮ್ಮನೆ ತೃಪ್ತಿಯುತ್ತುಂಗದಲಿ ಮೈ ಚಾಚಿದವಳ ಹಾಗಿನ, ಎಂಥವರನ್ನೂ ಸೆಳೆದು ಆಮಿಷವೊಡ್ಡುವ ಸುಖದ ಹಸಿಚಿತ್ರದ ಹಾಗಿನ ಅಚ್ಚಪಚ್ಚೆ ಅಲ್ಲೇ ಹಾದಿಯಿಕ್ಕೆಲದಲ್ಲಿ ಕಂಡದ್ದು.
ಹೇಳಿಕೇಳಿ ಬೆಟ್ಟಕಣಿವೆಗಳ ಊರದು, ಅದೇ ಹಾದಿ ತುದಿಯಲಿದ್ದಿರಬಹದಾದ ಗುಡಿಯ ಗಂಟೆ ನುಡಿಯುತಿತ್ತು. ಸಾವದೇವನಿಗೊಂದು ಗುಡಿಯಿದ್ದೀತೇ? ಅದು ಇದೇ ಇದ್ದೀತೇ? ಅಂಥದೊಂದು ಗುಡಿಯ ಕಲ್ಪನೆ ತಟ್ಟನೆ ಕಣ್ತುಂಬಿತ್ತು. ಶಂಖದ ಓಂಕಾರ ಅನುರಣಿಸುತಿತ್ತು. ಮಳೆಯಲಿ ಮಿಂದ ಊರಿನ ಮೌನ ಮತ್ತದರ ಚಿಲಿಪಿಲಿ ನಗುವೆರಡರದೂ ಛಾಯೆಯೆಲ್ಲೆಡೆ ಭಾಸವಾಗುತಿತ್ತು. ಗರುಡಗಂಬದ ತುದಿಗೇರಿದ್ದ ಪಟದ ಚಂದ ಚಿತ್ರವೊಂದು ತನ್ನ ಕತೆ ಹೇಳಿಕೊಂಡಂತನಿಸುತಿತ್ತು. ತುಂಬ ಮೋಹಕವಾದದ್ದೇನೋ ಅಲ್ಲಿದೆಯೆಂದೂ “ನೀನೂ ಬಂದೇ ಬಾ” ಅಂತ ಕರೆದಂತೆಯೂ ಅನಿಸುತಿತ್ತು. ಹಾಗೇ ಕಾಣದೆಯೂ ಕಂಡದ್ದೆಲ್ಲ ಮನದುಂಬಿಕೊಳುತಾ ಕಣ್ಮುಚ್ಚಿದ್ದಷ್ಟೇ. ನಿನ್ನೆಗಳೊಳಗೆ ಇಳಿದ ಮನಸಲ್ಲಿ ಕನಸಿನಂಥ ಮೆಲುಕು. ಅಲ್ಲೊಂದು ಕಾಮನಬಿಲ್ಲು. ನಿನ್ನೆಗಳಂಥ ಪುಟ್ಟಪುಟಾಣಿ ಹತ್ತಿಸುವ ಮೆಟ್ಟಿಲುಳ್ಳದ್ದು, ಆರಕೇರದ ಮೂರಕಿಳಿಯದ ಇಂದಿನಂಥ ಒಂದಿಷ್ಟುದ್ದ ಮಟ್ಟಸ ಮೇಲ್ಮೈ, ಜತೆಗೆ ನಾಳೆಯ ಅನಿಶ್ಚಿತತೆಯಂಥ ಆ ಇನ್ನೊಂದು ಇಳಿಜಾರುಳ್ಳದ್ದು. ಬಿಸಿಲಿನೆಳೆ ಎಲ್ಲಿತ್ತೋ, ನೀರಹನಿಯೆಲ್ಲಿತ್ತೋ ಎರಡರ ಸಂಗಮದಲಿಣುಕಿ ಅಣಕಿಸುವ, ಆಶೆಪಟ್ಟು ಹಿಡಿವೆನೆಂಬ ಕೈ ಬಿಟ್ಟೋಡುವ ಆ ರೋಮಾಂಚ ವಿಸ್ಮಯ! ಮತ್ತೇರಿಸುವ ನೇರಳೆ, ಹುಚ್ಚಾಗಿಸುವ ನೀಲಿ, ಕೆರಳಿಸುವ ಕೆಂಪು, ಅರಳಿಸುವ ಪಚ್ಚೆ, ಹುರುಪೆಬ್ಬಿಸುವ ಹಳದಿ, ಮತ್ತೆಲ್ಲ ಮಬ್ಬಾಗಿಸುವ ಬೂದು ಹೀಗೆ ಅನೂಹ್ಯ ಬಣ್ಣರಾಶಿ. ಪುಟಾಣಿ ಕಣ್ಣು ನಿನವೆಂದು ಎಲ್ಲರೂ ಅಣಕಿಸುತಿದ್ದ ಈ ಕಣ್ಣು ಅನುಭವವವೊಂದು ಅನುಭೂತಿಯಾಗುವ ರಸಕ್ಷಣ ಹೊಕ್ಕಿ ಕಮಲದಳವೇ ಆಗಿಹೋಗಿದ್ದವು. ಹೆಜ್ಜೇಹೆಜ್ಜೇ… ಅಂತ ಗೆಜ್ಜೆಯೂ ಸದ್ದು ಮಾಡದಷ್ಟು ಮೆತ್ತಗೆ ನಡೆಯುತ್ತಾ ಆ ಬೆರಗಿನ ಬೆನ್ನುಹತ್ತಿ ಹೋಗಿದ್ದೆ. ಕ್ಷಣಕ್ಷಣವೂ ಹತ್ತಿರಾಗುತಲೇ ಹೋದ ಅದ್ಭುತವದರ ಕಾಲಬಳಿ ಕೂತು “ನನ್ನನೊಳಗೊಳ್ಳುವೆಯಾ?” ಅಂತ ಕೇಳುವಾಗ ನಾನು ನನ್ನೊಳಗೆ ಇದ್ದೇ ಇರಲಿಲ್ಲವೇನೋ. “ಹತ್ತು ಹತ್ತು, ನೀನಲ್ಲದೆ ಇನ್ನಾರು?” ಅಂತ ಒಂದೊಂದೇ ಮೆಟ್ಟಿಲು ಹತ್ತಿಸಿತ್ತು, ಹತ್ತಿಸಿಕೊಂಡಿತ್ತು.
ನಾನೋ ಹೊಸದೊಂದು ಲೋಕ ಕಟ್ಟಿಕೊಂಡಂತೆ ಇದ್ದುದೆಲ್ಲವ ಮರೆತು ಇರದುದೊಂದರ ಭ್ರಮಾತೀತವಾದ ಸುಖವನ್ನ ಮನಸಾರೆ ಉಂಡೆ, ಉಸಿರಾಡಿದೆ, ಬದುಕಿಬಿಟ್ಟೆ! ಹತ್ತುವುದು ಮುಗಿದ ಕ್ಷಣ, ತಲುಪಿದ ತುರೀಯದಿಂದ ಬೀಳ್ಗೊಳುವ ಹೊತ್ತು, ಬಾಗುಬಿಲ್ಲಿನಲ್ಲೂ ಸೂಕ್ಷಕಷ್ಟೇ ಕಾಣುವ ಮಟ್ಟಸ ಭಾಗವೊಂದರಲ್ಲಿ ಬಣ್ಣಗಳೆಲ್ಲ ಸೇರಿ ಕಲಸುಮೇಲೋಗರವಾದ ಹಾಗೆ, ಒಮ್ಮೆ ಸೇರಿಯೆಲ್ಲ ಇರುವುದೊಂದೇ ಒಂದು ಬಿಳಿ, ಅಂತನಿಸಿದ ಹಾಗೆ, ಒಮ್ಮೆ ಬಿಡುಬಿಡುವಾಗಿ, ತೀರ ವಿರಳ, ಇಲ್ಲವೇ ಇಲ್ಲವೇನೋ ಅನಿಸಿದ ಹಾಗೆ… ನಾನಾಗ ಈವತ್ತು, ಈ ಕ್ಷಣವೆಂಬ ವಾಸ್ತವದ ಹಿಡಿಯಲ್ಲಿದ್ದೆ. “ಸರಿ ಮುಂದಡಿಯಿಡು ನೀನಿನ್ನು” ಅಂದಿತ್ತು ಕಾಲಡಿಯ ನೆಲೆ. “ಬದುಕುವುದೆಂದರೆ ಮುನ್ನಡೆಯುವುದೆಂದು ನೀನೇ ಹೇಳಿದ್ದು ತಾನೇ? ನಡೆ, ನಿಲ್ಲದೆ ನಡೆ ಮುಂದೆ ಮುಂದೆ.” ಅಂದಿದ್ದವು ಬಣ್ಣಗಳೆಲ್ಲ ಒಕ್ಕೊರಲಲ್ಲಿ. ಕಣ್ಣಮುಂದಿತ್ತು ಬಣ್ಣದ ಜಾರುಬಂಡಿ, ಹಿಂದೆ ಬಾಗಿಕೊಂಡೇ ಕೈ ಕಟ್ಟಿಕೊಂಡು ನಿಂತಿತ್ತು ಕಾಮನಬಿಲ್ಲು, ಕಣ್ಣು ಕೂಡಿಸಿಯೂ ಕೂಡಿಸದಂತೆ, ಎಲ್ಲ ಹೇಳಿಯೂ ಹೇಳದಂತೆ… ಜಾರುಬಂಡಿಯ ಕೊನೆಯಲ್ಲಿ ಕಾಮನಬಿಲ್ಲಿನದೂ ಕೊನೆಯಿತ್ತು.
ಇಳಿಯುವಂತಿರಲಿಲ್ಲ; ಬಣ್ಣದಿಂದಾವೃತವಲ್ಲದೊಂದು ಗುರುತುಳಿದಿರಲಿಲ್ಲ ಆಗ ನನಗೆ. ಉಳಿಯುವಂತಿರಲಿಲ್ಲ ಅಲ್ಲೇ; ಇನ್ನೂ ಬದುಕುವುದಿತ್ತು ನನಗೆ.
ಹೀಗೆ ತ್ರಿಶಂಕುವಾಗಿದ್ದಾಗಲೇ ನಸುಗತ್ತಲಾಗಿತ್ತು. ನನ್ನೂರು ಕರೆದು ಎಚ್ಚರಿಸಿತ್ತು. ನನ್ನೂರಿನಾಗಸದ ಎಷ್ಟೋಬಾರಿ ಸುರಿಸುರಿದು ತಂಪಾಗಿಸಿ ಖುಷಿಯಲ್ಲಿ ತೋಯಿಸಿದ ಮೆತ್ತನೆಯ ಫಲವತ್ತು ಕಾರ್ಮೋಡ, ಉಯ್ಯಾಲೆಯಾಡಿಸಿದ ತುಂಡುಚಂದ್ರ, ನೋಟ ಮೊನಚೆನಿಸಿದರೂ ಮಿನುಮಿನುಗಿ ಸೆಳೆದು ಮುದವಿತ್ತ ತಾರೆ- ಇವೆಲ್ಲ ಟೊಂಕಕಟ್ಟಿ ನಿಂತಿದ್ದವು ಕೆಳಗಿಳಿಸಲು, ಇಳಿಸಿಕೊಳ್ಳಲು, ಇಳಿಸಿ ಎತ್ತಿಕೊಳ್ಳಲು. ಹಸುಗೂಸೆಂಬಂತೆ ಎತ್ತಿಕೊಂಡು ನಡೆದಿದ್ದವು ನನ್ನೂರಿನ ತೆಕ್ಕೆಯೊಳಕ್ಕೆ.
ಅಲ್ಲಿನ ಸೊಗವನ್ನೆಲ್ಲ ಬಾಚಿ ಮೊಗೆದುಕೊಂಡು ಮುಗಿಯುತಲೇ ನಿನ್ನ ನೆನಪು ಧಾವಿಸಿಬಂದಿತ್ತು. ಹಿಂತಿರುಗುವ ಮಾತೆದುರು ಇಟ್ಟಿತ್ತು. ನಾನು ನಿಂತ ಕಾಲಲ್ಲಿ ಹೊರಟಿದ್ದೆ. ಇದೋ ವಾಪಾಸು ಹೊರಟಿದ್ದೇನೆಂದಾಗಲೂ ನಿನ್ನದದೇ ಕಳಿಸಿಕೊಡುವಾಗಿನದೇ ದಟ್ಟರಹಸ್ಯ ನಗು!
ಬಂದ ಹಾದಿಯಲ್ಲೇ ವಾಪಾಸು ತಿರುಗಿ ನಾಕಾರು ಹಜ್ಜೆ ನಿನ್ನತ್ತ ಇಟ್ಟಿದ್ದೆನಷ್ಟೇ, ಆಗೆದುರಾಗಿದೆ ಮತ್ತದೇ ಕೆಮ್ಮಣ್ಣ ದಾರಿಯ ಮೋಹಕತೆ! ವಶೀಕರಣವೋ ಎಂಬಂತೆ ನಾನೇ ಹಾದಿಯನ್ನೊಳಗೊಂಡದ್ದೋ, ಆ ಹಾದಿ ನನ್ನನೊಳಗೊಂಡದ್ದೋ ಗೊತ್ತಿಲ್ಲ; ನಡೆಯಲಾರಂಭಿಸಿದ್ದೇನೆ ಅದರುದ್ದಕ್ಕೂ. ಥೇಟ್ ಆ ಕಾಮನಬಿಲ್ಲ ಹತ್ತಿದ ಅದೇ ಹುಮ್ಮಸ್ಸಿನಲ್ಲಿ ಅದೇ ಕಾತರ-ಆತುರಗಳಲ್ಲಿ.
ಬೇಕಿತ್ತೋ ಬೇಕಿರಲಿಲ್ಲವೋ ಗೊತ್ತಿಲ್ಲ, ನೆನಪುಗಳಂತೂ ಮುತ್ತಿ ಮುತ್ತಿ ಕೆಲವು ಕಚಗುಳಿಯಿಟ್ಟರೆ ಕೆಲವು ಚುಚ್ಚಿದ್ದವು. ಜರ್ರನೆ ಜಾರಿ ಬಿದ್ದಾಗಿನ ನೆನಪಂತೂ… ಮೈಯ್ಯೆಲ್ಲ ಗುದ್ದಿಟ್ಟ ಹಾಗೆ, ಅಮ್ಮಾ… ಈಗಷ್ಟೇ ಬಿದ್ದೆನೋ ಎಂಬಂತೆ ಬೆಚ್ಚಿಬೀಳಿಸಿತ್ತು, ಮೈ ಬೆವರಿ ತೊಪ್ಪೆಯಾಗಿತ್ತು. ಬಹುಶಃ ಆ ಮೂಕಗಾಯ, ಅದರ ನೋವು ಗುಣವಾಗಿರಲೇ ಇಲ್ಲವೇನೋ! ಟುಸ್ಸೆಂದಿತ್ತು ಮತ್ತೆ ಮಾಯಕದ ಬೆನ್ನು ಹತ್ತುವೆನೆಂದು ಉಬ್ಬಿ ತಯಾರಾಗಿದ್ದ ಎದೆಗೂಡು.
ಸಾಗುವುದೇನಿದ್ದರೂ ಸಾವದೇವನ ಕಡೆಗೇ ಹೌದು. ಎದ್ದೆದ್ದು ಬಿದ್ದು ಮತ್ತೆದ್ದು ಬೀಳುತೇಳುತಲೇ ಇರುವ ರೋಚಕವೆನಿಸುವ, ಹೆಜ್ಜೆಹೆಜ್ಜೆಗೂ ಹೊಸತೆನಿಸುವ ಹಾದಿಗೂ, ಸುಮ್ಮನೆ ಉಸಿರಿದ್ದವರೆಗೂ ಹೆಸರೆಂಬ ಹೆಸರಿನ ದೊಂದಿಗಳು ತೋರಿದ ದಿಕ್ಕಲ್ಲಿ ಮುನ್ನಡೆವ ಅತಿಪರಿಚಿತ ಹಾದಿಗೂ ನಡು ಆಯ್ಕೆ ಯಾವುದಿರಲಿ?!- ಹೆಜ್ಜೆ ನಿಂತವು; ಯುಗದಂತನಿಸಿದ ಆ ಒಂದು ಕ್ಷಣದ ಗೊಂದಲದ ನಂತರ ಸಾವಕಾಶ ಹಿಂದಿರುಗತೊಡಗಿದ್ದೇನೆ. ಮತ್ತೆ ಮುಸ್ಸಂಜೆಯಾವರಿಸಿಕೊಳ್ಳುತ್ತಿದೆ.
ಅಂಥ ಸದ್ದುಗದ್ದಲವಿಲ್ಲದ, ಮಹಾ ಏರುತಗ್ಗಿರದ, ಸದಾ ಹಸಿರರಳಿಸಿ ಹಾಸಿ ನನಗಾಗಿಯಷ್ಟೇ ಕಾಯುವ ಅದೇ ಆ ಹಾದಿಯಾದೀತು ಅಂದುಕೊಳ್ಳುತ್ತ ಮತ್ತೆ ಬಸ್ಸಿನ ಕಿಟಕಿಯಾಚೆಗೆ ಕಣ್ಣು ಹಾಯಿಸಿದರೆ… ಅರೆ! ಇನ್ನೊಂದು ಕೆಮ್ಮಣ್ಣ ಹಾದಿ, ಅದರ ಇಕ್ಕೆಲದ ಪಚ್ಚೆ, ಬೇಲಿಯ ತರತರದ ಹೂ, ಗಾಳಿಯ ಲಯಕ್ಕೆ ಕುಣಿಯುತ್ತಾ ಉದುರುತ್ತಿದ್ದ ಒಣಗೆಲೆ ಎಲ್ಲವನ್ನೂ ನಿಧಾನ ಆವರಿಸಿಕೊಳ್ಳುತ್ತಿರುವ ಕತ್ತಲೆ! ಕಣ್ಣು ಮಾರ್ಗವಾಗಿ ಅದು ನನ್ನೊಳಗೂ ಇಳಿಯತೊಡಗಿದಂತೆ, ವಾತ್ಸಲ್ಯಮಯವೋ ಕ್ರೂರವೋ ಅರ್ಥಕ್ಕೇ ಸಿಲುಕದ ಒಂದು ಶಾಂತಿ ಇದ್ದಬದ್ದ ಜಾಗವನ್ನೆಲ್ಲ ತುಂಬತೊಡಗಿದೆ! ಕಣ್ಣು ತಂತಾನೇ ಮುಚ್ಚಿಕೊಂಡಿವೆ. ಇಯರ್ ಫೋನ್ ಕಿವಿಗೆ ಹಚ್ಚಿಕೊಂಡಿದ್ದೇನೆ, ಮೊಬೈಲ್ ಹಾಡತೊಡಗಿದೆ,
“ ಮೆರಾ ಕುಚ್ ಸಾಮಾನ್ ತುಮ್ಹಾರೇ ಪಾಸ್ ಪಡಾ ಹೈ
ಹೋ… ಸಾವನ್ ಕಿ ಕುಚ್ ಭೀಗೇ ಭೀಗೇಸೆ ರಖೇ ಹೈ
ಓ… ಔರ್ ಮೆರೇ ಎಕ್ ಖತ್ ಮೆ ಲಿಪಟೀ ಮೆರಾ ಏಕ್ ರಾತ್ ಪಡಾ ಹೈ
ವೊ ರಾತ್ ಬುಝಾದೋ ಮೇರಾ ವೊ ಸಾಮಾನ್ ಲೌಟಾದೋ….”