ಒಂದು ನೀಳ್ಗಥನ ಕಾವ್ಯ
-೨-
“ಏ ಕಾಲ ಬಲ ಇಲ್ಲಿ..”
ಸೋಮಾರ ಸಂತಲಿ ಅಯ್ನೋರ್ ಕೂಗಿಗೆ
ಒಡಿಯ ನನ್ ಕಾಲಯ್ಯ ಎದ್ದೊ ಬಿದ್ದೊ ಓಡ್ತಾ..
ಅರರೆ ಇದೇನ ಈ ಸಂತ ಸಾಮ್ರಾಜ್ಯಲಿ
ನನ್ ಒಡೀನೆ ಕಂಡ್ನಾ ಅಯ್ನೋರ್ಗೆ?
ನಾನು ನನ್ಜೊತೆಗಾರರು ಮಿಣ ಮಿಣ ಕಣ್ಬುಟ್ಟು
ನೋಡ್ತಾ ನೋಡ್ತಾ
ಅಯ್ನೋರ್ ಸುದ್ದಿನ ತುಂಬ್ಕೊಂಡು ಕುಂತ್ಕಂಡು.
“ಏನ್ ಕಾಲೊ ನಿನ್ ನಸೀಪು..”
ಟೀ ಕ್ಯಾಂಟೀನ್ ಸುಬ್ಬಕ್ಕನ ಗೇಲಿಗೆ
ನನ್ ಒಡಿಯ ತಲೆ ಕೆರಿತಾ ಬೀಡಿ ಕಚ್ತಾ
ಮುಖದ ತುಂಬ ನಗು ತುಂಬ್ಕ ಬಂದಾ ನೋಡು..
ಕುಂತವನು ಕಚ್ಚಿದ ಬೀಡಿಯ ಬುಸುಕ್ ಬುಸುಕ್ಕನೆ
ಒಂದೆರಡು ಧಮ್ ಎಳೆದು ಎಸೆದು
ಹಸೆಕಲ್ಲು ಸರಿಸಿ ರಂಪಿಯನು ಚೊಯ್ಯ ಚೊಯ್ಯ
ಅಂತ ಒಂದೆರಡು ಸಲ ಮಸೆದು
ನಾವಿದ್ದ ಮೂಲೆಗೆ ಕೈ ನೀಡಿ ನನ್ನೆಳೆದು ಕೆಳ ಬಡಿದು
ಎಡಗಾಲ ಹೆಬ್ಬೆರಳಲಿ ಮೆಟ್ಟಿ ರಂಪಿಯಲಿ ಕೊರೆದು
ಓರೆ ಕೋರೆ ಸರಿಸಿ ನೀರು ಚಿಮುಕಿಸಿ ನೆನೆಸಿ ಬನಿಸಿ
ಹದಕ್ಕೆ ಇಟ್ಟು ಕಾಯ್ತಾ ಆಚೀಚೆ ನೋಡ್ತಾ ನೋಡ್ತಾ..
ಸಂತಲಿ ಸೇರಿರ ಒಂದಿಬ್ಬರು ಮೂರು ಜನಾನು
ಅವ್ರ ಕಿತ್ತೋದ ಮೆಟ್ಟ ಹೊಲಿಸ್ಕಂಡು ಹೋದ್ರಲ್ಲಾ..
“ಅಯ್ಯೊ ಅಯ್ಯೊ ಹೋದೆಲ್ಲೊ ..
ಅಯ್ನೋರ್ ಪಾದ ಸೇರ್ದೆಲ್ಲೊ..”
ನನ್ ಜೊತೆಗಾರರಿಗೆ ನಾ ಅಯ್ನೋರ್ ಪಾದ
ಸೇರೋದು ನೋಡಿ ಉರಿತಾ ಮುಕ್ಕರಿತಾ..
ನನ್ ಒಡಿಯ ನನ್ನ ಮೇಲೆತ್ತಿ ಮ್ಯಾಣ ಮೆರೆದು
ನನ್ ಮೈ ಮಾರನೆಲ್ಲ ಗುದ್ದು ಕಲ್ಲಲಿ
ಗುದ್ದಿ ಗುದ್ದಿ ಗುದ್ದಿ…
ಅಯ್ಯಯ್ಯೊ ಅಯ್ಯಯ್ಯೊ ಅಂದರು ಬಿಡದೆ
ದಾರ ಪೋಣಿಸಿದ ಚೂಪಿನಲಿ ಚುಚ್ಚಿ ಚುಚ್ಚಿ ಚುಚ್ಚಿ
ಮ್ಯಾಣದ ದಾರವ ಮೈ ಮಾರಕ್ಕೆ ಸೇರಿಸಿ
ಪುನ ಪುನ ಗುದ್ದು ಕಲ್ಲಿನಲಿ ಗುದ್ದಿ ಗುದ್ದಿ
ಹದ ಮಾಡಿ ತಾ ಮೆಟ್ಟಿ ಗಿರಕ್ ಗಿರಕ್ ಅನ್ನಿಸಿ
ಸೊಗಸಾಗಿಸಿ ಸಂತಲಿರ ಜನುಕ್ಕ
ಕಣ್ಣು ಕುಕ್ಕತರ ಕಾಣ ಜಾಗದಲಿ ತೆಗೆದಿಟ್ಟನಲ್ಲೊ..
“ಏ ಕಾಲ ಆಯ್ತಲ ಮೆಟ್ಟು..”
ಸಂಜೆಯ ಕೆಂಪಿಗೆ ಅಯ್ನೋರ್ ದನಿಗೆ
ನನ್ ಒಡಿಯ ಕಾಲಯ್ಯ ನನ್ನ ಜೋಪಾನದಲಿ
ಅಯ್ನೋರು ಪಾದಕೆ ಮೆಟ್ಟಿಸಿ ನಗ್ತಾ ನಿಂತನಲ್ಲೊ..
“ಏ ಸಖತ್ ಕಲ ಕಾಲ ಸಖತ್..”
ಅಯ್ನೋರ್ ಜೋಬಿಂದ ಸಿಕ್ಕ ಪುಡಿಗಾಸು
ನನ್ ಒಡಿಯನ ಕೈಗೆ ಮೇಲಿಂದ ಬೀಳ್ತಲ್ಲೊ..
ನಾ ಅಯ್ನೋರ್ ಪಾದದಲಿ ಸೇರಿ
ಗಿರಿಕ್ಕು ಗಿರಿಕ್ಕು ಎನುತಾ
ಆ ಸಂತ ಸಾಮ್ರಾಜ್ಯವ ಬುಟ್ಟು ದಾರಿ ಸವೆಸಿ
ಅಯ್ನೋರ್ ಸಂಗಡ ಹೋದ್ನಲ್ಲೋ…
– ಎಂ. ಜವರಾಜ್
ಮುಂದುವರೆಯುವುದು…
[…] ಇಲ್ಲಿಯವರೆಗೆ […]