ಜವರಾಜ್‌ ಎಂ ನೀಳ್ಗಾವ್ಯ

ಮೆಟ್ಟು ಹೇಳಿದ ಕಥಾ ಪ್ರಸಂಗ (ಒಂದು ನೀಳ್ಗಾವ್ಯ): ಎಂ.ಜವರಾಜ್

 

-೧-
‘ನನ್ನ ಏನಂತ ಅನ್ಕಂಡೆ..’
ಆ ಕಗ್ಗತ್ತಲ ಸರಿ ರಾತ್ರಿಯಲಿ
ನನ್ನ ಮೈ ರೋಮ ರೋಮಗಳು ನಿಗುರಿ ನಿಂತವು.
ಬೆಕ್ಕಸ ಬೆರಗಿನಲಿ ನಿಂತಲ್ಲೆ ನಿಂತು ಕಣ್ಗಗಲಿಸಿ
ಅತ್ತಿತ್ತ ಕಾಲ ಹೆಜ್ಜೆಯ ಸರಿಸಿ ತಿರುಗಿ ಉರುಗಿ ನೋಡಿದೆ
ಆ ಕತ್ತಲ ಸಾಮ್ರಾಜ್ಯದಲಿ ಜೀವ ಅಳುಕಿತು.

‘ನಿಂಗ ಏನೂ ಕಾಣೊಲ್ದು..’
ಮತ್ತೆ ಎತ್ತರಿಸಿದ ದನಿ.
ದನಿ ಬಂದ ಕಡೆ ನೋಡಿದೆ.
ಜೀವ ಇನ್ನಷ್ಟು ಅದುರಿತು.
ಸರಕ್ಕನೆ ನಿಂತಲ್ಲೆ ಕುಂತೆ.

‘ಎದ್ರು ಮ್ಯಾಕ್ಕೆ..’
ಸಡನ್ ಎದ್ದವನು ಮತ್ತೆ ಮತ್ತೆ ತಿರುಗಿ ಉರುಗಿ
ನೋಡ ನೋಡುತ್ತಿದ್ದಂಗೆ ನಾ ನಿಂತ ನನ್ನ ಮನೆಯ
ಹೊರ ಬಾಗಿಲ ಜಗುಲಿ ಮೂಲೆಯ ನೆಲದಲಿ
ಕಣ್ಣು ಕುಕ್ಕುವ ಬೆಳಕೊಂದು ಸರ್ರನೆ ಬಂದು
ಮಿಂಚಿ ಮಾಯವಾಯ್ತಲ್ಲ..

‘ಗೊತ್ತಾಯ್ತ ನಾ ಯಾರಂತಾ..’
ಮಿಂಚಿ ಮಾಯವಾದ ಆ ಬೆಳಕಿನ ನೆಲದ
ಮೂಲೆಯಿಂದ ಮತ್ತೆ ಮಾತಾಯ್ತಲ್ಲ..
ಇದೇನು ದೇವರಾ ದೆವ್ವನಾ
ಇದೇನು ಕನಸಾ ನನಸಾ
ಈ ಫೋರ್ಜಿ ಫೈಜಿ ನೆಟ್ಟು ಇಂಟರ್ನೆಟ್ಟು ಕಾಲದಲಿ
ಇದೆಂತ ಪವಾಡ ಶಿವನೇ ಅನ್ನಿಸಿ ಮೈ ಕೊಡವಿದೆ
ಅರೆ, ನಂಗೊಂಚೂರು ಜೀವ ಬಂದಂಗಾಯ್ತಲ್ಲ..

‘ಏನ ಮಾಡ್ತಿರದು ಕತ್ಲೊಳ್ಗ ನಿಂತ್ಕಂಡು
ನನ್ ಮಾತ್ಗ ಬ್ಯಲ ಕೊಟ್ಟು ಮಾತಾಡು..’
ಅಂದಿತು ಅದೆ ಮೂಲೆಲಿ.
ಜೀವ ಬಂದಂಗಾದ್ರು ತುಟಿ ತಟತಟನೆ ಅದುರಿದಂಗಾಯ್ತು.
ಮಾತು ಬರದ ಹೊತ್ತು.
ತಿಸ್ಸನೆ ಗಾಳಿ ಬೀಸಿತು. ಆ ಗಾಳಿ ಎಂತ ಗಾಳಿ ಅಂದರೆ
ನನ್ನನ್ನು ಎತ್ತಿ ಆ ಬೆಳಕಿನ ಮೂಲೆಗೆ ಎಸೆಯುವಷ್ಟು.

‘ಬಿದ್ಯಾ ಬೀಳು..
ಅಂತು ನಂಗೆ ಶರಣಾದೆ ಬುಡು
ಇದ್ಯಾ ಅಲ್ವ ಕಾಲ ಅನ್ನದು..
ನೀನು ನಿನ್ನೋರು ನನ್ನ ಮೆಟ್ಟಿ ಮೆಟ್ಟಿ ಸಾಯ್ಸಿದಲ್ಲ
ಅದ್ಕ ಶರಣಾದೆ ಬುಡು..

ಆ ಕಗ್ಗತ್ತಲ ಸರಿ ರಾತ್ರಿಯಲಿ ತಿಸ್ಸನೆ ಬೀಸಿದ
ಗಾಳಿಯ ರಭಸಕೆ ತೂರಿ ಬಿದ್ದಾಗ
ನನ್ನ ಕೈಗೆ ಸಿಕ್ಕಿದ್ದಲ್ಲವೇ ಇದು..
ಇಷ್ಟೊತ್ತು ಮಾತಾಡಿದ್ದು ಇದಾ..
ಅಯ್ಯೋ ಅಂತ ಅದನ್ನ ತೂರಿದೆ
ಅದು ಎಲ್ಲಿ ಬಿತ್ತು?
ಕತ್ತಲು ನನ್ನ ಕಣ್ಣನ್ನು ಅದುಮಿಡಿದು
ಬಿಟ್ಟಂಗಾಯ್ತಲ್ಲ…

‘ಏ.. ಬೀದಿಗೆಸ್ತಯಾ ನನ್ನ..
ನೀ ಬೀದಿ ಪಾಲಾಗ ಕಾಲ ಬಂದುದಾ..
ನಾನು ಕಾಲ..
ಕಾಲ ಕಾಲಕು ಕಾಲನೆ..
ಈ ಕಾಲಯ್ಯನೇ..
ನಿನ್ ಮನ ಮಟ ಎಲ್ಲನು ಸುತ್ತಿರಂವ
ಇಂಚಿಂಚು ಗೊತ್ತದಾ ನಿನ್ ವಂಶದ ಕರಾಮತ್ತು.

ಈ ಸರಿ ರಾತ್ರಿಲಿ ಇದೆಂತ ಪಜೀತಿ
ನನ್ನ ವಂಶದಿಂದ ಅದೇನ್ ಕರಾಮತ್ತು?
ಮೆಟ್ಟು ಮಾತಾಡೋದು ಅಂದ್ರೇನು?
ಮೆಟ್ಟು ಮಾತಾಡ್ತು ಅಂದ್ರ ಜನ ನಗೊಲ್ವ
ಅಂತನ್ನಿಸಿ ಬೀದಿಗೆ ಮುಖ ಮಾಡಿದೆ
ಮತ್ತೆ ಬೆಳಕು. ಕಣ್ಣು ಕುಕ್ಕುವ ಬೆಳಕು.
ನನ್ನ ಅಪ್ಪ ಅವರಪ್ಪ ಅವರಪ್ಪನಪ್ಪ
ಕಂಡುಂಡ ಬೆಳಕು.

‘ಕಂಡ್ಯಾ ನನ್ ರೂಪನಾ..’
ಈಗ ಅದರ ದನಿಯಲಿ ಏನೋ ಇತ್ತಂತ್ತಿತ್ತು
ಅದರ ದನಿ ನನ್ನ ಎದೆಗೆ ಒದ್ದಂತಾಯ್ತಲ್ಲ..
ಅದರ ಒದೆತದ ರಭಸಕ್ಕೆ ನಿಧಾನಕೆ ಮೇಲೆದ್ದು
ಜಗುಲಿ ಇಳಿದು ಅಂಚಿನಲಿ ನಿಂತೆ
ಬೆಳಕು ಇನ್ನಷ್ಟು ಬೆಳಗಿತು.

‘ಇದು ಬೆಳ್ಕಲ್ಲ ಬೆಂಕಿ. ನನ್ ಎದ ಸುಡ ಬೆಂಕಿ.
ಕಾಲ್ದಿಂದ್ಲು ಸುಡ್ತಾ ಇರ ಬೆಂಕಿ.
ಕಾಲ ಕಾಲಕು ಆರ್ದೆ ಇರ ಬೆಂಕಿ.
ನನ್ ಮನ ಮಟನೆಲ್ಲ ಸುಟ್ಟ ಬೆಂಕಿ.’

ಅರೆ, ಗವ್ವೆನ್ನುವ ಆ ಕಗ್ಗತ್ತಲ ರಾತ್ರಿಯಲಿ
ತಿಸ್ಸನೆ ಬೀಸುವ ಗಾಳಿ ನಿಂತಂತಾಯ್ತಲ್ಲ..
ನೀರವ ಮೌನದ ಆ ಗಳಿಗೆಯಲಿ ಬಿಸಾಡಿ
ಬೀದೀಲಿ ಬಿದ್ದ ಆ ಮೆಟ್ಟು ಗಳಗಳನೆ ಅಳುತ್ತ
ಗತ ಪುರಾಣ ಬಿಚ್ಚಿಡ್ತಾ..
ಆ ಬಿಚ್ಚಿಟ್ಟ ಗತ ಪುರಾಣವ
ಆ ಕತ್ತಲ ಸಾಮ್ರಾಜ್ಯ ಬೆರಗಿನಲಿ ಕೇಳ್ತ
ಜಗುಲಿ ಅಂಚಿನಲಿ ಕುಂತಿತಲ್ಲಾ..

-ಎಂ.ಜವರಾಜ್


ಮುಂದುವರಿಯುವುದು…

ಕನ್ನಡದ ಬರಹಗಳನ್ನು ಹಂಚಿ ಹರಡಿ

One thought on “ಮೆಟ್ಟು ಹೇಳಿದ ಕಥಾ ಪ್ರಸಂಗ (ಒಂದು ನೀಳ್ಗಾವ್ಯ): ಎಂ.ಜವರಾಜ್

Leave a Reply

Your email address will not be published. Required fields are marked *