೯-
ಅಯ್ಯಯ್ಯೋ ಬನ್ರಪ್ಪ
ಅಯ್ಯಯ್ಯೋ ಬನ್ರವ್ವ
ಅಯ್ಯಯ್ಯೋ ಬನ್ರಣ್ಣ
ಅಯ್ಯಯ್ಯೋ ಬನ್ರಕ್ಕ
ಅಯ್ಯಯ್ಯೋ ಯಾರ್ಯಾರ ಬನ್ನಿ
ಈ ಅಯ್ನೋರು
ಆ ನೀಲವ್ವನ
ನನ್ನ ಮೆಟ್ದ ಮೆಟ್ಲಿ ತುಳ್ದು ತುಳ್ದು
ಜೀವ ತಗಿತಾವ್ನ ಬನ್ನಿ ಬನ್ಬಿ..
ಅಂತಂತ ನಾನ್ ಕೂಗದು ಕೇಳ್ನಿಲ್ವಲ್ಲೊ..
ಆಗ ಜನ ಜಗನ್ ಜಾತ್ರಾಗಿ
ಆ ನೀಲವ್ವ
ಅಯ್ಯೋ ಉಸ್ಸೋ ಅನ್ಕಂಡನ್ಕಂಡು ಸುದಾರುಸ್ಕಂಡು ಮೇಲೆದ್ದು
ನಿಂತ ಜನ ನೋಡ್ತ ನೋಡ್ತ
ಮೋರಿ ದಾಟಿ ಜಗುಲಿ ಅಂಚಿಗೆ ಕುಂತು
ಗೋಳಾಡ್ತ ಗೋಳಾಡ್ತ
ಜಗುಲಿ ಕಂಬ ಒರಗಿದಳಲ್ಲೋ…
‘ಅಯ್ನೋರಾ..
ಇದೇನ ನೀವ್ ಮಾಡ್ತಿರದು..’
ಬೀದಿ ಜನರ ಮಾತು ತೂರಿ ಬಂತಂತಾಗಿ
ಅಯ್ನೋರು ಆ ಮಾತ ಅತ್ತಗೆ ತೂದಿ ಎಸ್ದು
ಆ ಎಸುದಿಕ್ಕ ಕೆಕ್ಕಳಿಸಿ ನೋಡ್ತ..
‘ಏಯ್ ನಿಮಗೇನ್ ಗೊತ್ತು
ಈ ಲೌಡಿ ಆಟ…’ ಅಂತಂತ
ಅಂದವರ ಮುಖಕ್ಕೆ ತಮ್ಮಾತ್ನೂ ಎಸ್ದು
ಕಂಬ ಒರಗಿ ಕುಂತ ನೀಲವ್ವನ ಎಕ್ಕತ್ತಿಗೆ
ಜಾಡಿಸಿ ಒದ್ದು
ಮೋರಿ ಪಾಲು ಮಾಡುದ್ರಲ್ಲೊ..
ಅಯ್ಯೊ ಕಾಲಯ್ಯೋ
ನನ್ಯಾಕಪ್ಪ ಈ ನರಕುಕ್ಕು ಸಿಕ್ಕುಸ್ದ
ಈ ಕಣ್ಲಿ ನೋಡತರ ಮಾಡ್ದಾ
ಈ ಅಯ್ನೋರ್ ಕ್ವಾಟ್ಲ ನೋಡಕಾಯ್ತಿಲ್ಲ
ನೀ ಯಾಕಾರು
ನನ್ನ ಈ ಅಯ್ನೋರ್ಗ ಕೊಟ್ಟ..
ಅಯ್ಯೋ ಕಾಲಯ್ಯೋ
ನಾನೀಗ ಏನ್ಮಾಡ್ಲೋ ನನ್ ಕಾಲಯ್ಯೋ..
‘ಟ್ರಿಣ್ ಟ್ರಿಣ್ ಟ್ರಿಣ್ ಟ್ರಿಣ್..’
ಸೈಕಲ್ ಬೆಲ್ ಸದ್ದೊಂದು
ಬೀದಿ ಗುಂಪಾ ದಂಗು ಬಡಿಸಿ
ಸೈಕಲ್ ಪೆಡಲ್ ಒದ್ದು
ಬರ್ರಂತ ಆ ಸೈಕಲ್ಲ ತಳ್ಳಿ
ತಳ್ಳಿದ ರಭಸಕೆ
ಅದು ಮಾರ್ದೂರ ಹೋಗಿ
ಹಾಗೋದ ಸ್ಪೀಡಿಗೆ
ಹಿಂದಲ ಚಕ್ರ ಬಿದ್ದಲ್ಲೆ
ರಿವ್ವನೆ ಗರಗರನೆ ತಿರುತಿರುಗಿ
ಧೂಳೆಬ್ಬಿಸುತಿತ್ತಲ್ಲೋ..
‘ಶಂಕ್ರ.. ಏಯ್ ಶಂಕ್ರ…’
ಈ ಅಯ್ನೋರ್ ಮಾತ ಬೀದಿದಿಕ್ಕ ಬಿಸಾಡಿ
ಆ ಮೋರಿಲಿ ಬಿದ್ದು ಒದ್ದಾಡ್ತ ಇರ
ಆ ನೀಲವ್ವನ ಮೇಲೆತ್ತಿ
ಅವಳ ಮೈಮಾರನೆಲ್ಲ ಹೊತ್ತಕೊಂಡಿದ್ದ
ಮೋರಿ ಬದಿನೆಲ್ಲ ಬಾಚಿ ಬಳಿದು
‘ಏನವ್ವ ಏನವ್ವ ಇದು..
ನೀ ಯಾಕವ್ವ ಮೋರಿಲಿ ಬಿದ್ದಾ..
ಇದ್ಯಾಕವ್ವ ಬೀದಿಲಿ ಇಷ್ಟ್ ಜನ..
ಅಂತಂತ ಶಂಕರಪ್ಪ ಗೋಳಾಡ್ತ
ಆ ನೀಲವ್ವನ ಜಗುಲಿ ಮೇಲೆ
ಕೂರಿಸಿ
‘ನೀ ಯಾಕ ಇಂಗಾಡಿಯೇ..’
ಅಂತ ಈ ಅಯ್ನೋರ
ಎದುರಾ ಬದುರಾ ಕೇಳುದ್ನಲ್ಲೋ…
‘ಏಯ್ ಶಂಕ್ರ..
ನಿನ್ ಪಾಡ್ಗ ನೀ ಹೋಗಲೇ..
ಲೌಡೆ ಬಂಚೊತ್..
ನಿಂಗು ಅವ್ವಿರ್ಲಿ ಅಂತಲ್ವಲಾ..
ನೀ ತಬ್ಲಿ ಕೂಸಾಗ್ದೆ ಇರ್ಲಿ ಅಂತಲ್ವಲಾ..
-ಎಂ.ಜವರಾಜ್
ಮುಂದುವರೆಯುವುದು….