-೮-
ಸೂರ್ಯ ಮೂಡೊ ಹೊತ್ತು
‘ಕಾ..ಕಾ.. ಕಾ..’ ಕಾಗೆ ಸದ್ದು
ಮೈಮುರಿತಾ ಕಣ್ಬುಟ್ಟು ನೋಡ್ದಿ
ಅವಳು ಕಸಬಳ್ಳು ತಗಂಡು
ಮೂಲ್ ಮೂಲೆನು ಗುಡಿಸೋಳು
ಆ ಕಸಬಳ್ಳು
ನನಗಂಟು ಬಂದು ಗೂಡುಸ್ತು
ಆ ಕಸಬಳ್ಳು ಗೂಡ್ಸ ದೆಸೆಗೆ
ನಾನು ಮಾರ್ದೂರ ಬಿದ್ದು
ಬೀದೀಲಿ ಒದ್ದಾಡ್ತಿದ್ದಂಗೆ
ಸೂರ್ಯ ಕೆಂಪೇರ್ಕಂಡು ಮೇಲೆದ್ದು
ನಂಗ ತಾಕಿ
ನನ್ ಮೈ ಮುಖ ನೊಚ್ಚಗಾದಂಗಾಯ್ತು.
ಆ ಕಸಬಳ್ಳು ಅಲ್ಲಿಗೂ ಬಂದು
ನನ್ನ ಇನ್ನಷ್ಟು ದೂರ ತಳ್ತ ತಳ್ತ
ಮೋರಿ ಅಂಚಿಗೆ ಬಂದು ನೋಡ್ತಿದ್ದಂಗೆ
‘ಏ.. ನೀಲ ಅದೇನ ಮಾಡ್ತ ಇರದು
ಲೌಡಿ.. ಲೌಡಿ.. ಲೌಡಿಮುಂಡೆ
ಇದೇನ್ ಅನ್ಕಂಡ..
ಕತ್ತಲೌಡಿ.. ಹೊಸ್ದು ಇದು ಗೊತ್ತಾ…
ಹೊಸ್ಮೆಟ್ಟ ಗುಡ್ಸಿ ಗುಂಡಾಂತರ ಮಾಡ್ದೆಲ್ಲ
ಒದ್ರ ಕೆಳೊಟ್ಟ ಮಾತಾಡ್ಬೇಕು…’
ಅಂತಂತ ನನ್ನ ಮೆಟ್ಟಿ
ಬಚ್ಚಲಿಗೋಗಿ ನೀರಾಕಿ
ಮೆಟ್ದ ಕಾಲಲೆ ಗಸಗಸನೆ ಉಜ್ಜಿ ಉಜ್ಜಿ
ಭವಾನಿ ಬಾರ್ಸೋಪಾಕಿ ಇನ್ನೊಸಿ ಉಜ್ಜಿ
ಕೊಳದಪ್ಲ ತುಂಬ ತುಂಬಿ
ನೀರೂದು ಕೊಳ ತಗ್ದು
ಫಳಫಳ ಅನ್ನಿಸಿ ಬಿಸಿಲಿಗೆ ತಂದಿಟ್ನಲ್ಲೊ..
ಆ ನೀಲವ್ವ
ನನ್ನೇ ದುರದುರನೆ ನೋಡ್ತ
ಮುಖ ಸಿಂಡುರ್ಸ್ತ ಇರಾಗ
ಈ ಅಯ್ನೋರು
ಈ ಹಸಿ ಮೈಲಿರ ನನ್ನ ಮೆಟ್ಟಿ
‘ಆ ಕಾಲಯ್ಯ ಮಾಡ್ಕೊಟ್ಟಿರದು
ಇದು ಗೊತ್ತಾ..
ಎಮ್ಮ ಚರ್ಮುದ್ದು ಗಟ್ ಮುಟ್ಟಿ
ಗಿರ್ಕಿ ಸದ್ದು ಮಾಡುತ್ತ ಗೊತ್ತಾ..
ಆ ಕಾಲಯ್ಯ ನಂಗೇ ಅಂತ ಮಾಡಿರದು..
ಈ ಸೀಮೇಲಿ ಅವನಂಗ
ಗಿರ್ಕಿ ಮೆಟ್ಟ ಮಾಡೋರಿಲ್ಲ ಗೊತ್ತಾ..
ನೀ ಇಂಗ ಗುಡ್ಸಿ ಗುಂಡಾಂತರ ಮಾಡಿ
ನನ್ ತಲ್ಗ ನೀರ್ ಬುಡಬೇಕಂತ ಮಾಡಿದಯ..’
ಈ ಅಯ್ನೋರ್ ಮಾತ್ಗ
ಆ ನೀಲವ್ವ ಕೆಮ್ಮಿ ಕ್ಯಾಕರಿಸಿ
ಕಸಬಳ್ಳ ಎಸ್ದು ಮೋರಿ ದಾಟವತ್ಲಿ
ಈ ಅಯ್ನೊರು
ಆ ನೀಲವ್ವನ ಮುಂದಲ ಹಿಡ್ದು ಬಡ್ದು
ಬೀದೀಲಿ ಎಳೆದಾಡಿದನಲ್ಲೊ..
ಅವಳು ಬೀದೀಲಿ ಬಿದ್ದ ರಭಸಕೆ
ಕಿಳ್ಳನೆ ಕಿರುಚ್ಕೊಡ್ಲಲ್ಲೊ….
ಅವಳ ಕಿರುಚಿಕೊಂಡ ಕಿಚ್ಚಿಗೆ
ಬೀದೀಲಿ ಬಿಸಿಲಿಗೆ ಮೈಯೊಡ್ಡಿ ಮಲಗಿದ್ದ
ನಾಯ್ಗಳು ದಿಕ್ಕಾಪಾಲಾಗಿ ನಿಗುರಿ ನಿಂತು
ಗಳ್ಳಾಕ್ತ ಬೊಗುಳ್ತ ಓಡಾಡ್ತಾ
ಆ ಗಳ್ಳಾಕ ಸದ್ಗ ಜನ ತುಂಬ್ಕತಾ
ಈ ಅಯ್ನೋರು
ಆ ನೀಲವ್ವನ
ಮುಂದಲ ಬುಡ್ದೆ ಎಳೆದಾಡ್ತ
ನನ್ನ ಮೆಟ್ಗಂಡ ಕಾಲ್ಲೇ ಜಾಡ್ಸಿ ಜಾಡ್ಸಿ
ಆ ನೀಲವ್ವನ ಕೆಳೊಟ್ಗ ಒದ್ದರಲ್ಲೊ…
-ಎಂ.ಜವರಾಜ್
ಮುಂದುವರಿಯುವುದು….