-೭-
ಈ ಅಯ್ನೋರು
ಆ ಅವಳೂ
ಕುಂತ ಜಾಗ್ದಲ್ಲೆ ಮುಸುಡಿ ಎಟ್ಗಂಡು
ಈ ಅಯ್ನೋರ್ ಮೈ ಇನ್ನಷ್ಟು ಕಾಯ್ತಾ
ನನ್ ಮೈಯೂ ಕಾದು ಕರಕಲಾಗುತ್ತಾ
ಹೊತ್ತು ಮೀರ್ತಾ ಮೀರ್ತಾ
ಆ ಅವಳು ಎದ್ದೋಗಿ
ಈ ಅಯ್ನೋರೂ ಮೇಲೆದ್ದು
ನನ್ನ ಭದ್ರವಾಗಿ ಮೆಟ್ಟಿ
ನೆಲಕ್ಕೆ ಎರಡೆರಡು ಸಲ ಕುಟ್ಟಿ
ಅವಳೆಡೆ ಇನ್ನೊಂದು ನೋಟ ಬೀರಿ
ಮೆಲ್ಲನೆ ತಿರುಗಿ ಮೋರಿ ದಾಟಿ
ಕಿರು ಓಣಿ ತರದ ಬೀದೀಲಿ
ಗಿರಿಕ್ಕು ಗಿರಿಕ್ಕು ಅಂತನ್ನಿಸಿಕೊಂಡು
ಬಿರಬಿರನೆ ನಡೆದರಲ್ಲೋ…
ಆ ಅವಳ ನೋಟಕ್ಕೆ
ಈ ಅಯ್ನೋರು ಅವ್ರ ಹುಮ್ಮಸ್ಸಿಗೆ
ನನ್ನ ನೆಲಕ್ಕೆ ಕುಟ್ಟಿದ ರಭಸಕ್ಕೆ
ಈಗ ನನ್ನ ಮೈ ಬಿರಿತಾ
ಮೂಲ್ ಮೂಲೇಲಿ ಕೊರಿತಾ
ಅಯ್ನೋರ್ ಪಾದದ ಬೆವರು
ಗಬ್ಬು ನಾತ ಬೀರ್ತಾ ಬೀರ್ತಾ
ಆ ಬೀದಿ ದೂಳೂ ತುಂಬ್ತಾ
ಆ ಬೆವರೊಂದಿಗೆ ಬೆರಿತಾ ಬೆರಿತಾ
ನನ್ ಕಣ್ಣು ನೋಡ ತರ ಆಯ್ತಲ್ಲೋ..
ಹೀಗೀಗಿರೊ ತರದಲ್ಲೆ
ನನ್ಗೂ ಸುಸ್ತಾಗಿ
ಈ ಅಯ್ನೋರ್ಗು ಸುಸ್ತಾಗಿ
ಅದ್ಯಾವ್ ಬೀದಿಯೋ
ಅದ್ಯಾವ್ ಓಣಿಯೋ
ಅದ್ಯಾವ್ ಟೈಮೋ
ಅದ್ಯಾವ್ದೂ ತಿಳಿದೆ
ಕಣ್ಣು ಕತ್ತಲಿಡಿದ ಹೊತ್ತಲ್ಲಿ
ಅಯ್ನೋರು ಬಾಗಿಲು ತಟ್ಟಿದರಲ್ಲೊ..
ಆಗ ನನ್ಗು ಬೆಚ್ಚತರ ಆಗಿ
ಕಣ್ಬುಟ್ಟು ನೋಡ್ದಾಗ
ಬಾಗಿಲು ತೆರಕೊಂಡು
“ಬನ್ನಿ ಇದೇನ ಇಸ್ಟೊತ್ತು..”
ಅನ್ನೊ ಅವ್ವೊರ್ ದನಿ ಕೇಳ್ತಲ್ಲ
ಆ ಅವ್ವೊರ ದನಿಗೆ
ಈ ಅಯ್ನೋರು
ನನ್ನ ಮೂಲೆಗೆ ಬುಟ್ಟು
“ಕೆಲ್ಸ ಬುಟ್ಟು ನಿನ್ ಮುಂದುಕ್ಕ
ಬರಕಾದ್ದ ನಡಿ ನಡಿ ದಿನಾ ಇದೇ ಕತ..”
ಅಂತಂತ ಒಳ ನಡೆದು
ದಬಾರನೆ ಬಾಗಿಲು ಮುಚ್ಚಿದರಲ್ಲೊ..
ನಾನು ಮೂಲೇಲಿ ಸೇರಿ
ಈ ಅಯ್ನೋರ್ ಬೆವರೂ
ಆ ಬೀದಿ ಧೂಳೂ
ನನ್ ಮೈಗ ಮೆರಕೊಂಡು
ಒಂದಕ್ಕೊಂದು ಬುಡದೆ
ಅಂಟಂಟಾಗೇ ಅಂಟ್ಗಂಡು
ಬಾಳಾಟ ಮಾಡತರ ಕಾಣ್ತ
ನಾ ಪರದೇಶಿ ತರ ಆಗಿ
ಮೈ ಕೈ ಮುರಿತಾ ಮುಕ್ಕರಿತಾ
ನನ್ ಕಣ್ಣೂ ಎಳಿತ ತೂಗುಡುಸ್ತ
ನಿದ್ರೆ ಬಂದೊತ್ತು ಗೊತ್ತಾಗ್ನಿಲ್ವಲ್ಲೊ..
-ಎಂ.ಜವರಾಜ್
ಮುಂದುವರೆಯುವುದು…