-೬-
“ಏಯ್, ಎದ್ರು ಮ್ಯಾಕ್ಕೆ..”
ನಾನು ದಿಗ್ಗನೆದ್ದು ಅತ್ತಿತ್ತ ನೋಡ್ದಾಗ
ಮಿಂಚು ಫಳಾರ್ ಅಂತ ಹೊಳಿತಲ್ಲಾ..
ಗಾಳಿ ಜೋರಾಗಿ ಬೀಸಿತಲ್ಲಾ..
ಕೂಗಿದ್ಯಾರಾ..
ಅಂತ ಅತ್ತಿತ್ತ ನೋಡ್ತ
ಕಣ್ಕಣ್ಣು ಬಿಡೊ ಹೊತ್ತಲಿ
“ಏಯ್ ಏನ ಕಣ್ಕಣ್ ಬುಡದು
ಮಿಂಚು ಹೊಳಿತಿಲ್ವ
ಗಾಳಿ ಬೀಸ್ತಿಲ್ವ
ಗಡುಗುಡುಗುಡನೆ ಗುಡುಗು
ಸದ್ದಾಗದು ಕೇಳ್ತಿಲ್ವ..
ಬಿರ್ಗಾಳಿನೇ ಬರ್ಬೊದು ನೋಡಾ..”
ನಾ ಆ ಕಡೆ ದಿಗಿಲಿಂದ ನೋಡ್ತ
“ಇಲ್ಲ ಇಲ್ಲ ಹಂಗೇನಿಲ್ಲ..
ಅಂತಂತ ಹಂಗೇ ಕುಂತರು
ಬಿಡದ ಆ ಮೆಟ್ಟು
ಬೆಂಕಿ ಕೆಂಡದಡೆತರ ಬೆಳಗಿ
ಹಾಗೆ ದಗ್ಗನೆ ಉರಿದುರಿದು
ಮೇಲೆದ್ದು ಭಗಭಗನೆ ಕಾವೇರಿ
ಆ ಕಾವು ನಂಗೂ ತಾಕಿ
ಆ ನಡು ರಾತ್ರಿಯ
ಕತ್ತಲ ಸಾಮ್ರಾಜ್ಯದೊಳಗೆ
ನಡುಗೋ ಚಳಿಗೂ
ಮೈ ಬೆವರಿದಂತಾಯ್ತಲ್ಲಾ…
” ಏಯ್, ಗೊತ್ತಾಯ್ತ ಈಗ ನಿಂಗಾ..
ಗಾಳಿ ಬೀಸ್ತಾ ಅದಾ
ಮಿಂಚು ಹೊಳಿತಾ ಅದ
ಗುಡುಗಾ ಗುಡುಗ್ಗ
ಕಿವಿ ತಮಟ ಹೊಡ್ದೊಯ್ತ ಅದ
ನಿಂಗೊಂಚೂರೂ ಗ್ಯಾನ ಬ್ಯಾಡ್ವ..”
ಇದೊಳ್ಳೆ ಫಜೀತಿ ಆಯ್ತಲ್ಲಾ..
ಅದರ ಕಾಟ ಜಾಸ್ತಿ ಆಯ್ತಲ್ಲಾ..
ಈ ಮೆಟ್ಗು ನಂಗು ವ್ಯಾಜ್ಯ ಯಾಕೆ..
ಸಡನ್ ಮೇಲೆದ್ದು ನಿಂತು
ಒಳ ಹೋಗಲು
ಬಾಗಿಲ ಚಿಲಕಕ್ಕೆ ಕೈ ಹಾಕ್ದೆನಲ್ಲೊ…
ಆಗ ಒಂದೇ ಸಮನೆ
ಗುಕ್ಕಗುಕ್ಕನೆ ಕೆಮ್ಮೊ ಕೆಮ್ಮು..
ನಾ ಥಟ್ಟಂತ ನಿಂತು ತಿರುಗಿದೆನಲ್ಲೊ..
“ಏಯ್, ಯಾಕ್ ನಿಂತ ಹೋಗು
ನೀ ಹೋದ್ರ ನನ್ನ ಸ್ಯಾಟ ಹೋಗಲೋ..
ಆದ್ರಾ ಕೂಸೇ..
ನಿನ್ ವಂಶದ ಕರಾಮತ್ಗ
ಬ್ಯಲ ಕಕ್ಬೇಕು..
ಕಕ್ಲೇಬೇಕು ತಿಳ್ಕ..
ಯ್ಯಾ ಥೂ…”
ಕ್ಯಾಕರಿಸಿ ಉಗಿತಲ್ಲೊ..
ಆ ಉಗಿದ ಉಗುಳು ಹಾರಿ
ಆ ಹಾರಿದ ಉಗುಳಾ
ಒರೆಸಿಕೊಳ್ತಾಕೊಳ್ತಾ
ಚಿಲಕ ತೆಗಿಯೊ ಮನಸಾಗದೆ
ತಿರು ತಿರುಗಿ ಬಂದು
ಅದೆ ಅದೆ ಕಂಬ ಒರಗಿ
ಕುಂತೆನಲ್ಲೊ…..
“ಏಯ್, ಯಾಕ್ ಬಂದಾ..
ಬ್ಯಾಡ ಬುಡು ಕೂಸೇ ನಿಂಗೇಳದ
ಇಡೀ ಊರ್ಗೇಳ್ತಿನಿ
ಇಡೀ ದೇಶುಕ್ಕೇಳ್ತಿನಿ
ಇಡೀ ಪ್ರಪಂಚುಕ್ಕೇಳ್ತಿನಿ
ಇಡೀ ಭೂ ಮಂಡಲಕ್ಕೇಳ್ತಿನಿ
ಇಡೀ ದೇವ್ಲೋಕ್ಕೇಳ್ತಿನಿ…”
ಅಂತಂತ ಬಡಬಡಾಂತ
ಮಾತಾಡ್ತ ಆಡ್ತ
“ಆದ್ರು ನನ್ಮಾತ್ಗ ಬೆಚ್ಚಿ ಬೆರಗಾಗಿ
ತಿರಿಕ ಬಂದಿರ ನಿನ್ ನಿಯತ್ಗ
ಹೇಳ್ತಿನಿ ಕೇಳ್ಕ…”
ಅಂತಂತ ಚುಚ್ಚಿ ಚುಚ್ಚಿ ಮಾತಾಡ್ತಲ್ಲೊ..
-ಎಂ.ಜವರಾಜ್
ಮುಂದುವರಿಯುವುದು…..