ಮೆಟ್ಟು ಹೇಳಿದ ಕಥಾ ಪ್ರಸಂಗ ಒಂದು ನೀಳ್ಗಾವ್ಯ (ಭಾಗ 69 & 70): ಎಂ. ಜವರಾಜ್

-೬೯-
ಮೊಕ್ಕತ್ಲು ಕವಿಕಂಡು ಕಣ್ಣು ಕತಿ ಕಾಣ್ದು
ಏನ್ಮಾಡಗಿದ್ದದು
ನಾ ತೇಲ್ತನೇ ಇದ್ದಿ..

ಮೋಟ್ರು ಸದ್ದಾಯ್ತನೆ ಇತ್ತು
ಅದ ಆಪ್ಮಾಡ್ದೆ
ನೀರು ತುಂಬಿ ತುಳುಕ್ತ
ತೆವ್ರಿ ಮ್ಯಾಲ ಏರಿ ಹರಿತಿತ್ತು
ನಾನು ಆ ಹರಿಯ ನೀರ್ಲಿ ತೆವ್ರಿ ಸುತ್ತ
ದೋಣಿತರ ತೇಲ್ತ ಸುತ್ತ ಬರದೇ ಆಯ್ತು..

ಆಗ ತೆವ್ರಿ ಮ್ಯಾಲ
ಅದೇನ ಬುಸುಗುಟ್ಟ ಸದ್ದಾಯ್ತು
ನಂಗ ಗಾಬ್ರಿಯಾಗಿ ತಿರುಗ್ದಿ
ಆ ಬುಸಗುಟ್ಟ ಜಾಗದ ಮ್ಯಾಲ
ಪಣುಕ್ನುಳ್ಗಳ ಹಿಂಡೆ ಹಾರಾಡ್ತ
ಆ ಪಣುಕ್ನುಳ್ಗಳ ಬೆಳುಕ್ಲಿ
ದಪ್ದು ಕರಿ ನಾಗ್ರಾವು ಕಾಣ್ತು..
ಅದು ಬುಸುಗುಡ್ತ ತೆವ್ರಿ ಮ್ಯಾಲ
ನೀರ ಸರಿಸ್ತಾ ಹರಿತಾ ಹೋಯ್ತಿತ್ತು

ಅದೆ ಗಳುಗ್ಗ ಅತ್ತಿಂದ ಯಾರೊ
ಓಡ್ಬತ್ತಿರ ಸದ್ದಾಯ್ತು
ನಂಗ ಅತ್ತಗ ದಿಗಿಲಾಗಿ ನೋಡ್ದಿ
ಆಗ ಹಾರಾಡ್ತ ಮಿನುಗ್ತಿದ್ದ
ಆ ಪಣುಕ್ನುಳ್ಗಳು ಚೆಲ್ಕಂಡು
ಉದ್ದುಕ್ಕು ಲೈನ್ ಕಂಡಾಗಿ ಮಾಡ್ಕಂಡು
ಅವು ಹೋದೋದ್ದಿಕ್ಕ ಆ ಬೆಳ್ಕು ಚೆಲ್ಕತಾ
ಆ ಚೆಲ್ಲುದ್ ಬೆಳುಕ್ಲಿ ದಪ್ಪುಕ್ಕು ಉದ್ದುಕ್ಕು
ನ್ಯಾತಾಡ ಗಡ್ಡ ಬುಟ್ಕಂಡಿರ ಮೊಖ ಕಾಣ್ತು
ಆ ಮೊಖದಂವ ಓಡ್ಬತ್ತಿರದ ನೋಡ್ತ ನೋಡ್ತ
ಆ ಹಾವೂ ಗಾಬ್ರಿತರ ಆಗೇನೊ
ಒಂದೆ ಸಮ್ಕ ಬುಸುಬುಸ್ನ ಬುಸುಗುಡ್ತ
ಸರಗುಟ್ಕಂಡು ದಿಕ್ಕಾಪಾಲು ಹರಿತಾ ಹರಿತಾ
ಕಣ್ಮುಚ್ಚಿ ಬುಡದ್ರಲ್ಲಿ ಮಂಗ್ರ ಮಾಯ್ವಾಯ್ತು
ಅಯ್ಯೊ ದ್ಯಾವ್ರೆ ಅದೆತ್ತಗೊಯ್ತಪ್ಪಾ..
ಅಯ್ಯೊ ಅಯ್ಯೊ ಅಯ್ಯಯ್ಯೊ ಅಯ್ಯಯ್ಯಪ್ಪಾ
ಅದ್ಯಾರಪ್ಪಾ ಓಡ್ಬರದು ಈ ಕತ್ಲೊಳಗ
ಆ ನಾಗ್ರಾವ ತುಳ್ದುದ್ರ ಅದು ಬುಟ್ಟಿದಾ..
ಆ ಪಣ್ಗುಡ ಪಣುಕ್ನುಳ ಚೆಲ್ಕಂಡು
ಆ ಪಣ್ಗುಡ ಬೆಳ್ಕು ಮಾಯ್ವಾಗಿ
ಕತ್ಲು ಕವುಸ್ಕಂಡು ಏನೂ ಕಾಣ್ದಗಾಗಿ
ಓಡ್ಬಂದಂವ ನನ್ನು ತುಳ್ಕಂಡು ಹೋದಂಗಾಯ್ತಲ್ಲಾ..
ಆ ಹೆಜ್ಜ ಗುರ್ತ ಅನ್ಸರ್ಸಿ ಹಂಗೆ ಕಣ್ಣಾಡುಸ್ದಿ
ಆ ಹೆಜ್ಜ ಸದ್ದು ತ್ವಾಟದ ಮನತವು ನಿಂತ್ಕತು

ಆಗ ಆ ಹೆಜ್ಜ ನಿಂತ ಜಾಗ್ದಲ್ಲೆ
“ಏಯ್ ಯಾಕ್ ಬಂದ ಈಗ್ಲೆ..”
ಅನ್ನದು ಕೇಳ್ತು

ಇದ್ಯಾರಪ್ಪ ಈತರ ಅನ್ನದು
ಈ ದನಿಯ ಎಲ್ಯಾ ಕೇಳ್ದಗದಲ ಅನ್ನುಸ್ತು
ಗೆಪ್ತಿ ಮಾಡ್ಕಂಡು ಎಲ್ಲ ದನಿನು ಸೋಸ್ದಿ
ಸೋಸ್ತ ಸೋಸ್ತ ಅದು ಆ ಮಾರುನ್ ದನಿನಾ..
ಗೆಪ್ತಿಲಿ ಅಂದಾಜ್ಗ ಸಿಗ್ದೆ ಒದ್ದಾಡ್ದಿ

ಆಮೇಲ
“ಆ ಅಯ್ನೋರ ತಿಥಿ ಮಾಡಗಂಟ ಬುಡಲ್ಲ”
ಆ ದನಿಗ ಜಾಡ್ಸಿ ಇನ್ನೊಂದು ದನಿ ಗಡ್ಸಾಗಿ ಹೇಳ್ತು

“ಮೊದುಲ್ಗ ಸವ್ವಿ ಎಲ್ಯಾ ಅನ್ನದು..ಆಮ್ಯಾಲ ತಿಥಿ..
ಈಗ ನಿನ್ಮೇಲ ಚೆಂಗುಲಿ ಸಾಯ್ಸಿರ ಮಾತದ..
ನಿನ್ನು ಸತ್ತೊಗನ ಅನ್ನ ಮಾತು ರಿಕಾಡಾಗದ..
ಚೆಂಗುಲಿ ಸತ್ತದು ಹೆಂಗ್ಯಾ..
ನಿನ್ ಮನ್ಗ ಬೆಂಕಿ ಎಟ್ಟಿ
ನಿಮ್ಮವ್ವ ಅಪ್ಪ ಬೆಂದು ಬೂದಿ ಆಗರ
ನೀ ಬಚಾವಾದದು ಬ್ಯಾರೆ ಆದ್ರ
ನಿನ್ನ ಕೊಲ ಮಾಡಿರದ್ಯಾಕ…”
ಅಂತ ಮಾರುದ್ದದ ಮಾತು ಕೇಳ್ತ ಕೇಳ್ತ
ಇದು ಮಾರುನ್ ದನಿನೆ ಅಂತ ಗೆಪ್ತಿ ದಿಟುವಾಯ್ತು
ಆ ಓಡ್ಬಂದಂವ ಆ ಪರ್ಶುನೆ ಅಂತ ದಿಟುವಾಯ್ತು

ಈ ಸಂದಿಲಿ ಗಾಳಿ ಬೀಸಕ ಶುರು ಮಾಡ್ಕತು
ಈ ಗಾಳಿ ಅಂತಿಂತ ಗಾಳಿನಲ್ಲ ಬಿರುಗಾಳಿ ತರ
ಈ ಬಿರುಗಾಳಿ ಬೀಸ ರಬುಸುಕ್ಕ
ಅವ್ರು ಅದೇನ್ ಮಾತಾಡಿರು ಅನ್ನದು ಕೇಳ್ದಗಾಯ್ತು
ಆಮೇಲಾಮೇಲ ಯಾರ ಸದ್ದೂ ಇಲ್ದಗಾಯ್ತು
ಸಳಿ ಅಂದ್ರ ಸಳಿ
ಊರೊಳಗ ನಾಯಿ ಗಳ್ಳಾಕದು ಕೇಳ್ತಿತ್ತು
ನಂಗ ದಿಕ್ಕು ತೋಚ್ದಗಾಗಿ
ಈ ನೀರ್ಗು ಈ ಗಾಳಿಗು ಸಿಕ್ಕಿ
ಮೊರಗುಟ್ಟ ಮಳ ಬಂದು ಸುರಿತಾ
ಆ ಮಳ ನೀರು ಪಾತಿ ಒಳಗ ತುಂಬಿ
ತೆವ್ರಿ ಪಾತಿ ಯಾವ್ದು ಅನ್ನದು ಅಂದಾಜ್ಗ ಸಿಗ್ದೆ
ನಾನು ಪಾತಿ ಪಾತಿಗು ತೇಲ್ತ ತೇಲ್ತ
ಗಿರಗಿರ ಗಿರುಗುಟ್ಗಂಡು ಸುತ್ತಿಸುತ್ತಿ
ತಿರುಗ್ತ ಹೋಗ್ತ
ತಿರುಗ್ತ ಹೋಗ್ತ
ಈ ಅಯ್ನೋರು ಬೆಳುಗ್ಗ ಯಾವಾಗ್ಲು
ಎಳ ಬಿಸುಲು ಕಾಯಕ
ಕಾಲ್ನೀಡ್ಕಂಡು ಕುಂತ್ಕತಿದ್ರಲ್ಲ ಕಲ್ಬಂಡ..
ಆ ಕಲ್ಬಂಡ ಪೊಟ್ರ ಒಳ್ಗ ಕಚ್ಕಂಡು ಬೆಳ್ದಿದ್ದ ಕಾರಬಳ್ಳಿಗ ರಪ್ಪಂತ ಕಚ್ಚಿಡ್ಕಂಡಿ..


-೭೦-

ಯಾರ ನನ್ನ ಹಿಡ್ದು ಎಳ್ದಗಾಯ್ತು
ಹಂಗೆಳಿತಿರ ರಬುಸುಕ್ಕ
ನನ್ ಕಿಬ್ರಿ ಕಿತ್ತೋಗತರ ಆಯ್ತಿತ್ತು

ನಿದ್ದ ಮಂಪ್ರು,
ಆ ನಿದ್ದ ಮಂಪುರ್ಲಿ
ನಂಗ ಹೆಂಗೆಗೇ ಆಗದು

ನಂಗ ನಿದ್ದ ಸಾಲ್ದೆ ಕಣ್ಣು ಎಳಿತಾ
ಹಂಗೇ ನಿಧಾನುಕ್ಕ ಕಣ್ಣ ಬುಟ್ಟು
ಆ ಮಂಪುರ್ಲೆ ಸುತ್ತಾ ಕಣ್ಣಾಡುಸ್ದಿ

ಹಂಗೆ ಕಣ್ಣಾಡುಸ್ತ ಕಣ್ಣಾಡುಸ್ತ
ರಾತ್ರ ಆದ್ದು ಒಂದೆ ಸಮ್ಕ ಗೆಪ್ತಿಗ ಬಂತು

ಆ ಗೆಪ್ತಿ ಒಳಗ
ರಾತ್ರ ಓಡ್ತಿದ್ದ ಮೋಟ್ರು ಸದ್ದ ಮಾಡ್ದೆ
ಈಗ ನಿಂತೋದಗಿತ್ತು

ಆ ಗೆಪ್ತಿ ಒಳಗ
ರಾತ್ರ ಸುರಿತಿದ್ದ ಮಳ ನಿಂತು
ಈಗ ಮ್ಯಾಲ ತಿಳಿಯಾದಂಗಿತ್ತು

ಆ ಗೆಪ್ತಿ ಒಳಗ
ರಾತ್ರ ಪಾತಿ ಪಾತಿ ತುಂಬಿ
ತೆವ್ರಿ ಏರಿಏರಿ ಹರಿತಾ ಇದ್ದ ನೀರು
ಈಗ ಅಲ್ಲಲ್ಲೆ ಇಂಗಿ ಇಂಗಿ ಬರದಾಗಿ
ಪಾತ್ಪಾತಿಲಿ ಮಣ್ಣುನ್ ಬದಿನೇ ಚಾಚ್ಕಂಡು
ಅಂಬ್ಲಿ ತರ ನಿಂತಿತ್ತು

ರಾತ್ರ ಆ ನೀರಿಂಗಿ
ಬದಿ ತುಂಬಿರ
ಈ ಪಾತಿ ಒಳಗ
ಈಗ
ಆ ಮಾರನು ಇರ್ನಿಲ್ಲ
ಆ ಪರ್ಶುನು ಇರ್ನಿಲ್ಲ

ಈ ಅಯ್ನೋರು ಪಂಚನ ಎತ್ತಿ ಕಟ್ಗಂಡು
ಕುಂತ್ಕಳ ಬಂಡ ಕಲ್ಲ ಬುಟ್ಬುಟ್ಟು
ಮುಕ್ಕರಿತಾ ಒಂದೆ ಸಮ್ಕ
ನನ್ನ ಎಡಗೈಲಿ ಹಿಡ್ಕಂಡು ಎಳಿತಾ
ಹಂಗೆಳಿತಿರ ಅಯ್ನೋರ್ ಹಿಂದ ಮುಂದ
ಕಾರಮುಳ್ಳುನ್ ಕುತರ ಇತ್ತಲ್ಲೊ..

ಕಾಲೋ ನನ್ ಒಡಿಯಾ ಕಾಲಯ್ಯೋ
ನಾನೀಗ ಏನು ಮಾಡಲೋ
ನನ್ನ ಮೈಮಾರ
ಕಿತ್ತು ತುಂಡಾದ್ರು ನನ್ನ ಬುಡ್ತಿಲ್ವಲ್ಲೊ

ನೀ ಕೂದು ಕೊರುದು ನನ್ನ ರೂಪುಸ್ದೆಲ್ಲೊ
ನೀ ರೂಪ್ಸುದ್ ಈ ರೂಪನ ಬುಟ್ಟೂ ಬುಡ್ದೆ
ಅದೇನು ಮಂತ್ರ ಮೋಡಿ ಮಾಡ್ಸಿದ್ದೊ
ಈ ಅಯ್ನೋರ್ ಕಾಲ್ಗ ನಾನೇ
ಕಾಲ್ ಕಾಲುಕ್ಕು ಇರಂಗಿ ಕಾಣ್ತದಲ್ಲೊ
ನನ್ ಒಡಿಯಾ ಕಾಲಯ್ಯೋ…

ಈ ಅಯ್ನೋರು ಎಳಿತಾ ಎಳಿತಾ
ಹಂಗೆಳುದ್ ರಬುಸುಕ್ಕ
ನನ್ ಸಯಿತಾ ಕಾಲು ಕಪ್ಪುಡ್ಸಿ ರುಪ್ನೆ
ಕಾರಮುಳ್ಳುನ್ ಕುತರ ಒಳಕ ಬಿದ್ರಲ್ಲೋ..

‘ಅಯ್ಯೊ ಅಯ್ಯೋ ಅಯ್ಯಯ್ಯಪ್ಪಾ
ಕಾರಮುಳ್ಳು ತಿಕ್ಕ ಚುಚ್ತಲ್ಲೊ
ಅಯ್ಯೋ ಯಾರಿದ್ದರಿ ಬಂದ್ರ್ಯಪ್ಪಾ ..’

ಅಂತಂತ,
ಈ ಅಯ್ನೋರು ಎದ್ದೇಳಕಾಗ್ದೆ ಒದ್ದಾಡ್ತ..

ಆಗ ಆ ಮಾರ ಯಾವ್ ಮಾಯ್ದಲ್ಲಿ
ಬೇಲಿ ನ್ಯಕ್ಕಂಡು ಬಂದ್ನೋ..

ಬಂದಂವ,
‘ಅಯ್ನೋರಾ ಅಯ್ನೋರಾ
ಇದೇನಳಿ ಯಾಕಳಿ
ಇದೇನ ಕತ ನಿಮ್ದು
ಯಾಕ ಕಾರಮುಳ್ಗ ತಿಕ ಕೊಟ್ರಿ
ಅಯ್ಯೊ ಅಯ್ಯೋ ಬನ್ನಿ ಬನ್ನಿ’

ಅಂತಂತ,
ಆ ಮಾರ ಈ ಅಯ್ನೋರ್ ಕೈ ಹಿಡ್ದು ಎತ್ತಿ
ತಿಕುದ್ ಕುಂಡಿಲಿ ಚುಚ್ಚಿರ ಮುಳ್ಳ
ಒಂದೊಂದಾಗಿ ಕಿತ್ತಾಕಿ
ಆ ಕಿತ್ತಾಕುದ್ ಜಾಗ್ಜಾಗ್ದಲ್ಲು ರಕ್ತ ಸೋರ್ತಾ
ಆ ಸೋರ್ತಿದ್ ಜಾಗ್ಜಾಗುಕ್ಕು
ಗೊಂಡ ಸೊಪ್ಪ ತಂದು ರಸವ ಹಿಂಡಿ
ಗಾಳಿಗ ಒಡ್ಡಿ ಮಲುಗ್ಸಿ
ಪೇಟ ಬಿಚ್ಚಿ ಟವಲ್ಲಿ ಸೆಕ ಬಿಸ್ತಾ
ಹಂಗ ಸೆಕ ಬೀಸ ಆ ಮಾಯ್ಕಾರ ಮಾರುನ್ನ
ಈ ಅಯ್ನೋರು ಒಂದೇ ಸಮ್ಕ ನೋಡ್ತ
ಕೈಯ ಹಿಡ್ದು
ಮುಂದುಕ್ ಎಳ್ದು ಮೈತಡುವುದ್ರಲ್ಲಾ…

ಆ ಮಾರ,
ಈ ಅಯ್ನೋರ್ ಮೈತಡ್ವ ರೀತಿಗ
‘ಅಯ್ನೋರಾ,
ನೆನ್ನ ಆದ್ದು ಗೆಪ್ತಿಲಿದ್ದಾ..
ಯಾಕ ಇಸ್ಟೊತ್ಗೆ ಬರಕೋದ್ರಿ..
ಇಲ್ಲಿ ಅದೇನ್ ಕಡ್ದ್ ಕಟ್ಟಾಕ ಕೆಲ್ಸ ಇತ್ತೂ..’

‘ರಾತ್ರ ಸರೊತ್ಲಿ ನನ್ನೆಕ್ಡ ಗೆಪ್ತಿಗ್ಬಂತು ಕಲ
ನೆನ್ನ ಆದ ಗಾಬ್ರಿಗ ದಂಗಿಡ್ದು
ಮನ ಸೇರಕು ಮಳ ಉಯ್ಯಕು ಸಮಾಯ್ತು
ಇದ, ಅದೆಲ್ ಕಳ್ದಿ ಅನ್ನದೇ ಗೆಪ್ತಿಲಿಲ್ದೆ
ಕಡ್ಗಾ ಗೆಪ್ತಿಗ ಬಂತು ಕಲ
ಆಗ ನನ್ನುಸ್ರು ಬಂದಗಾಯ್ತು ಕಲ
ಬೆಳ್ಕರಿತಿದ್ದಂಗೆ ಓಡ್ಬಂದಿ ಕಲ..’
ಅಂತ ಹಂಗೆ ಮಗ್ಗುಲು ಬದಲಾಯ್ಸಿ
ಮುಕ್ಕರಿತಾ ತಿಕುದ್ ಕುಂಡಿ ಸವುರಿಕೊಂಡ್ರು.

ಆಗ ಆ ಮಾರ,
‘ಅದೇನಿದ್ದು ಅಳಿ ಈ ಎಕ್ಡದಲಿ..
ಇದ್ಕಿಂತ ಐನಾತಿ ಎಕ್ಡನ ಮಾಡ್ಕೊಡನಿ
ಬುಡಿ ಅದ ಈ ಕಿತ್ತೋದ್ ಎಕ್ಡನಾ..’
ಅಂತಂದ.

ಈ ಅಯ್ನೋರು ನನ್ನ ಹಿಡ್ದು ಎಳ್ಕಂಡು
ಮಗ್ಗುಲ್ಗ ಮಡಿಕಂಡು
ಆ ಮಾರುನ್ ಮೊಖ ನೋಡುದ್ರು
ಆ ಮಾರ ಈ ಅಯ್ನೋರ್ ಮೊಖ ನೋಡ್ದ
ನೋಡ್ತ ನೋಡ್ತ ಕಣ್ಣೀರ ಕಚ್ಕಂಡು,
‘ಏನಳಿ ಯಾಕಳಿ
ಅಯ್ನೋರಾ, ಯಾಕ ಕಣ್ಲಿ ನೀರ ತುಂಬ್ಕಂಡಿದ್ದರಿ..
ನಾ ಏನಾರ ತಪ್ಪಿ ಆಡುದ್ನ ಅಳಿ..
ಯಾಕ ಈ ಎಕ್ಡನ
ಮಗ್ಲುಗ ಮಡಿಕಂಡು ಅಳ್ತ ಇದ್ದರಿ..’
ಅಂತಂತ ಗಳಗಳ ಅಳ್ತ
ಅಯ್ನೋರ್ ಪಾದ್ಗ ಎರುಗುದ್ನಲ್ಲೊ…

ಕಾಲೋ ನನ್ ಒಡಿಯಾ ಕಾಲಯ್ಯೋ
ಈ ಅಯ್ನೋರು,
ನನ್ನ ಯಾಕ ಮಗ್ಲುಗ ಮಡಿಕಂಡು
ಹಿಂಗ ಗಳಗಳ ಅಳ್ತ ಇದ್ದಾರೋ..
ಈ ಮರ್ಮದ ಹಿಂದ ಏನಿದ್ದೊ..
ಈ ಮರ್ಮ ನಿಂಗೇನಾರ ಗೊತ್ತಿತ್ತೋ..
ಅಯ್ಯೋ ನನ್ನ ಕಾಲಯ್ಯೋ…

ಬಿಸ್ಲು ಚುರುಗುಟ್ತ ಮೇಲೇರ್ತಾ
ಆ ಮಾರುನ್ ಭುಜ್ಕ ಕೈಯಾಕಿ
ನನ್ನ ಬುಡ್ದೆ ಎಡಗೈಲಿ ಹಿಂಡ್ಕಂಡು
ಬಲಗೈ ಮಾರುನ್ ಹೆಗುಲ್ಗ ಹೆಗುಲ್ ಕೊಟ್ಟು
ಕುಂಟ್ತ ಕುಂಟ್ತ
ತ್ವಾಟುದ್ ಮನ ಗ್ವಾಡವತ್ಗಂಟ ಬಂದು
ಹಂಗೆ ನಿಧಾನುಕ್ಕ ಕುಂತು
ಕಣ್ಲಿ ನೀರ ತುಂಬ್ಕಂಡು

‘ನನ್ ಚಂದ್ರಿ..
ನನ್ ಚಂದ್ರಿ ಕಾಣ್ಕ ಕಲ ಇದು….
ಇದು ಬರಿ ಎಕ್ಡ ಅಲ್ಲ ಕಲ..
ನನ್ ಬಾಗುದ್ ದೇವ್ತಿ ಕಲ..

-ಎಂ.ಜವರಾಜ್


ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x