ಮೆಟ್ಟು ಹೇಳಿದ ಕಥಾ ಪ್ರಸಂಗ ಒಂದು ನೀಳ್ಗಾವ್ಯ (ಭಾಗ 68): ಎಂ. ಜವರಾಜ್

-೬೮-
ತ್ವಾಟ ಒಣ್ಗಿ ದಳ್ಳಿಡ್ದಿತ್ತು
ಬಿದ್ದಿರದು ಬಿದ್ದಿರತವೇ ಇತ್ತು
ಇದ ನಂಬದ ಬುಡದ ಅನ್ನಗಾಯ್ತು
ಕಪಲ ಬಾವಿಲಿ ಜೊಂಡು ಬೆಳ್ದು
ಬಾವಿ ಇದ್ದದ ಇಲ್ವ ಅನ್ನಗಿತ್ತು
ಮೋಟ್ರು ಸದ್ದಾಯ್ತ ಇರದು ಕೇಳ್ತ
ನೀರು ಚೊಳಚೊಳ ಚೊಳ್ಗುಟ್ತ
ದಿಕ್ಕಾಪಾಲು ಹರಿತಿತ್ತು
ತಿಗುನ್ ಮರಗಳು ಬೆಳ್ದು
ಚೊಕ್ವಿಲ್ದೆ ಗರಿಗಳು ಒಣಿಕಂಡು
ಅಲ್ಲಲ್ಲೆ ನ್ಯಾತಾಡ್ತ ಗಾಳಿಗ ಅಳ್ಳಾಡ್ತ
ಮ್ಯಾಲ ತಾರ್ಗಟ್ಲ ಕಾಯಿ ಒಣ್ಗಿ ಉದ್ರತರ ಕಾಣ್ತಿದ್ದು

ಈ ಅಯ್ನೋರು ನನ್ನ ಮೆಟ್ದೆ
ಈ ತ್ವಾಟ ನೋಡ್ದೆ
ಬಲು ಜಿನ್ವಾಗಿತ್ತು
ಆ ಆಳುವ ಆ ಆಳ್ನೆಡ್ತುವ
ಮಣುಮಾತ ಆಡ್ಕಂಡು
ಅಯ್ನೋರ್ ತಿಕುದ್ ಸಂದಿಲೆ ಒಸುಗ್ತ
ತ್ವಾಟನ ಬರುದು ಮಾಡಿರದು ನಂಗೇನು ಗೊತ್ತು..
ಈ ಅಯ್ನೋರು ಕೇಳ್ದೆ ಸುಮ್ನ ಯಾಕಿದ್ದರು..

ಅಲಲಲಾ.. ಬಿಸ್ಲು ರವ್ಗುಟ್ತಿತ್ತು
ಈ ಅಯ್ನೋರು ರೋಡ್ದಿಕ್ಕ ನೋಡ್ತ ನೋಡ್ತ
ಬೀಡಿ ಮ್ಯಾಲ ಬೀಡಿನ ಸೇಯ್ತನೇ ಅವ್ರ
ಸೇಯ್ತ ಸೇಯ್ತ ಕೆಮ್ತನೆ ಅವ್ರ
ಹಾಳ್ ಬೀಡಿ ಈ ಸಲೀರ್ಗಿಂತ ಹೆಚ್ಚಾ..
ಸುಮ್ನ ಸೇಯ್ತ ಕೆಮ್ತ ಸೇಯ್ತ ಕೆಮ್ತ
ಹಂಗೆ ದಿಡೀರಂತ ಮ್ಯಾಲುಕ್ಕೆದ್ದು
‘ಏಯ್ ಬಂಚೊತ್’ ಅಂದಂಗಾಯ್ತು
ನಂಗ ದಿಗಿಲಾಗಿ ರೋಡ್ದಿಕ್ಕ ನೋಡುದ್ಮೇಲ
ಆ ಮಾರ ಟವಲ್ಲ ಕೈಲಿಡ್ದು
ತೆವರಿ ಮ್ಯಾಲ ಓಡ್ಬತ್ತ
‘ಕವ್ಲಿದಿಕ್ಕ ಹೋಗಿದ್ದಿ ಅಳಿ ನೀರ್ಕಡ
ಇದ ಬಂದಿ ಅಳಿ
ಸುಮ್ನಿರಿ ಅಳಿ ಕ್ಯಾಣಾಡ್ಬೇಡಿ’
ಅಂತಂತ ಕೈಕಟ್ಕಂಡು ನಿಂತಿರದು ಕಾಣ್ತು

ಈ ಅಯ್ನೋರು ಆ ಮಾರನ ಮಾತ್ಗ
ದಿಗುಲು ಕೊಡ್ದೆ
‘ಏನಲೆ ಬಂಚೊತ್ ನಿನ್ನೆಡ್ತಿ ಆಡ ಮಾತು…
ಎಲ್ಲಿದ್ದನಲ ಆ ಪರ್ಶು..
ಸವ್ವಿ ಬಗ್ಗ ಏನ್ಲ ಗೊತ್ತು…
ಚೆಂಗುಲಿ ಇಚಾರ ಈಗ್ಯಾಕ್ಲ ಆಡಿಳು..
ನನ್ ಮಗಿ ಬಗ್ಗ ಏನ್ಲ ಗೊತ್ತು..
ನನ್ ಚಂದ್ರಿ ಬಗ್ಗ ಏನ್ಲ ಗೊತ್ತು…
ಎಕ್ಡಾ.. ಎಕ್ಡಲೆ ಹೊಡಿತಿನಿ ಸೂಳಮಕ್ಳ..’
ಅಂತ ಬೀಡಿ ಕಚ್ಕಂಡದ ನೋಡ್ತ
ಆ ಮಾರ ಬೆಚ್ಚಿ ಬೆರಗಾಗಿ ಮೊಖ ಸಿಂಡ್ರುಸ್ತ
‘ಅಳಿ ಹಂಗ್ಯಾಕಂದರಿ
ನಾವೇನ್ ಸೂಳಮಕ್ಳ…
ಏನಾ ಗೊತ್ತಿಲ್ದೆ ಅಂದಳ ಬುಡಿ ಹೇಳ್ತಿನಿ
ಬತ್ತಿನಿ ಅಳಿ ದೊಡ್ಡವ್ರು ಅಂತ ಬರದು ಅಳಿ
ಅಂತಂತ ಮಾರ ಪುರಪುರನೆ ಹೋಗ್ತ
ತೆವರಿಮ್ಯಾಲುಕ್ಕ ಹತ್ತಿ ನಿಂತ್ಕಂಡ್ನಲ್ಲಾ..

ಈ ಅಯ್ನೋರು ಬೀಡಿನ ಎಸ್ದು
‘ಬಲ ಇಲ್ಲಿ ಕ್ಯಾಣುಕ್ಕ ಏನ ಅಂದಿ
ಬಡ್ಡಿ ಮಕ್ಳ ನಿಮ್ ಮ್ಯಾಲ ಸಲ್ಗ ಕಲ ಸಲ್ಗ
ಸಲುಗ್ಗ ಆಗುನ್ಸುತ್ತ ಅದ್ಕ ಆಗಂದಿ
ನಿನ್ನಂದೆ ಆ ಬೀದಿಲಿ ಹೋಗ ಬರೊರ ಅನ್ನಕಾದ್ದ..
ತಿನ್ನಕ ಇಲ್ದೆ ಇದ್ರು ಕ್ಯಾಣ ಮಾಡ್ಕತಿದ್ದರಿ
ನನ್ತವೆ ಬರ್ಬೇಕು ಎಲ್ಲೆ ಹೋದ್ರುವಾ ತಿಳ್ಕಳಿ’
ಅಂದೇಟ್ಗೆ ಆ ಮಾರ ತಲ ಕೆರಿತಾ
ನಿಧಾನುಕ್ಕ ಕೆಳಗಿಳಿಗಿ ಮ್ಯಾಕ್ಕ ಹತ್ತಿ ನಿಂತ
ಅರೆ ತಿಗುನ್ ಮರ ಸಂದಿಲಿ
ಅದೇನ ನೊರಗುಟ್ಟ ಸದ್ದಾದಗಾಯ್ತು..
ಅದೆಂಥ ಸದ್ದಾ ಎದ ಹೊಡ್ಕಳ ಸದ್ದು
ಬಿಸ್ಲು ಅನ್ನದು ರವ್ಗುಟ್ತ ಚುರುಗುಟ್ಟದು
ಆ ರವ್ಗುಟ್ಟ ಬಿಸ್ಲು ಕಣ್ಗ ರಾಚ್ತ
ಈ ಅಯ್ನೋರು
ಆ ರವ್ಗುಟ್ಟ ಬಿಸುಲ್ಲಿ ಕಣ್ಣ ಅಗುಲ್ಸಿ
ಕಾಲ ಹಂಗೆ ತಿರುಗ್ಸಿ
ಮಾರುನ್ ರಟ್ಟನ ಹಿಡ್ದು ಎಳ್ದು ಓಡವತ್ಲಿ
ನನ್ನ ಕಂಕ್ಳು ಕಿತ್ತು ದಿಕ್ಕಾಪಾಲಾಗಿ
ಈ ಅಯ್ನೋರ್ ಕಾಲಿಂದ ಬೇರಾದ್ನಲ್ಲೊ…
ನನ್ಗ ಕಣ್ಣು ಕತಿ ಕಾಣ್ದಗಾಗಿ ದಂಗಿಡ್ದು
ಇಕ್ಲಿಲಿ ಹರಿತಿರ ನೀರಲ್ಲಿ ತೇಲ್ತಿದ್ನಲ್ಲೊ…

ಇದ್ದಕ್ಕಿದ್ದಂಗಿ ಈ ಬಿಸ್ಲೊತ್ಲಿ
ನೊರ ನೊರ ಸದ್ದಾದ್ದು ಏನಾ..
ಆ ನೊರ ನೊರ ಸದ್ದ ಕೇಳ್ತಿದ್ದಂಗೆ
ಈ ಅಯ್ನೋರು ಗಾಬ್ರಿ ಬಿದ್ದವ್ರಂಗ ಆ ಮಾರನ್ನ
ಯಾಕಾದ್ರು ಎಳ್ಕಂಡೋದ್ರು..
ಆ ಮಾರ ಈ ಅಯ್ನೋರ್ ಎಳ್ದ ಗಾಬ್ರಿಗ
ತಾನೂ ಗಾಬ್ರಿಗ ಬಿದ್ದವ್ರಂಗ ತಪ್ರಸಾಡ್ತ
ಹೋಗದ ನೋಡ್ತ ನೋಡ್ತ
ನನ್ನ ಒಡಿಯ ಕಾಲಯ್ಯ ಗೆಪ್ತಿಗ ಬಂದ್ನಲ್ಲೊ..
ಈ ಇಕ್ಲಿ ಒಳ್ಗ ಚೊಳಚೊಳ್ನ ಹರಿತಿರ ನೀರ್ಲಿ
ತೇಲ್ತ ಮುಳುಗ್ತ ದಿಕ್ಕುದೆಸ ಕಾಣ್ದೆ ಇರ
ನನ್ನೀಗ ದಡ ಮುಟ್ಸೊರು ಯಾರೋ..

ಕಾಲೊ..
ನನ್ ಒಡಿಯಾ ಕಾಲಯ್ಯೊ…
ನಾನೀಗ ಏನು ಮಾಡಲೋ..
ಆ ಮಾರುನ್ ರೂಪ್ದಲ್ಲಿ ಬಂದ್ಯಂತ ತಿಳುದ್ನಲ್ಲೊ..
ಮೂಲ ಸೇರಿ ಬಿದ್ದಿರ ನನ್ನ ಕೂದು ಕೊರುದು
ತಡ್ವಿ ಶುದ್ದ ಮಾಡ್ದಂಗಿತ್ತಲ್ಲೊ..
ಕಾಲೊ..
ನನ್ ಒಡಿಯ ಕಾಲಯ್ಯೋ..
ನಾನೀಗ ಏನು ಮಾಡಲೋ..
ಅಯ್ಯೊ ಮಾರೋ..
ನನ್ನ ಬಂದು ನೋಡೋ..
ತೇಲ್ತ ತೇಲ್ತ ಇಕ್ಲಿ ಒಳ್ಗೆ ತೆವ್ರಿ ಮೂಲ್ಗ ಸೇರಿ
ಮಣ್ಣಿಡ್ದು ಗೆಜ್ಲು ಸೇರಿ ಹುತ್ತ ಬೆಳ್ದು
ಸ್ಯತ್ತ ಸಿದುಕ್ಲು ಹರಿತಾ ಮೂಸ್ತ
ನನ್ನೇ ಕಾರಸ್ತಾನ ಮಾಡ್ಕಂಡ್ರ
ಮುಂದುಕ್ಕ ನನ್ ಗತಿ ಏನೋ..

-ಎಂ.ಜವರಾಜ್


ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x