-೫-
ಅಯ್ಯೋ ದೇವ್ರೇ ಯಾಕಪ್ಪ
ಈ ಕ್ವಾಟ್ಲ ಕೊಟ್ಟ ನಂಗ
ಈ ಅಯ್ನೋರು ಒಳಗ ಹೋದೋರು
ಇನ್ನುವ ಅದೇನ್ಮಾಡ್ತಿದ್ದರೋ..
ಈ ಅಯ್ನೋರ್ ದೆಸೆಯಿಂದ
ಈ ಕತ್ಲೊಳ್ಗ ನಾ ಒಬ್ನೆ ಆದ್ನಲ್ಲೊ..
ಒಳಗೆ ಅದೇನೋ ಸದ್ದು
ನಾ ನೋಡವ ಅಂದ್ರ ಬಾಗಿಲು ಮುಚ್ಚಿತ್ತು
“ನೋಡು ಅವತ್ತು ಬಂದಾಗ ಏನಂದೆ ನೀನು
ಬಂದು ಬಂದು ಹೋದ್ರ ನಾ ಬುಟ್ಟಿನಾ
ತಂದು ಕೊಡಗಂಟ ನನ್ನ ಮುಟ್ಟಂಗಿಲ್ಲ”
ಮಾತು ಬಾಗಿಲು ಸೀಳಿ ಬಂದದ್ದು ಗೊತ್ತು.
ಈ ನಾಯಿ ಬಡ್ಡೆತದು
ಈ ಕತ್ತಲ ಸಾಮ್ರಾಜ್ಯದಲಿ
ಒಂದಾಗಕು ಬುಡ್ದೆ
ನನ್ನ ಅತ್ತಗ ಇತ್ತಗ ಮಾಡಿ
ಬೀದಿಪಾಲು ಮಾಡ್ತಲ್ಲ
ಅಲ್ನೋಡ್ತ ನೋಡ್ತ ಆ ನಾಯಿ
ಗಳ್ಳಾಕಂಡು ಕೂಗ್ತ ಇತ್ತಗೆ ಬರಂಗಿತ್ತು
ಅಷ್ಟೊತ್ಗ ಬಾಗಿಲು ಕಿರ್ ಕಿರ್ ಅಂತ
ನನ್ನ ದಿಗಿಲು ಅತ್ತಗೋಗಿ ನೋಡ್ತಲ್ಲ
ಆ ಕತ್ತಲ ಸಾಮ್ರಾಜ್ಯದಲಿ
ಅಯ್ನೋರ್ ಮುಖ ಕಾಣ್ದೆ ಇದ್ದಾಗ
ನನ್ನ ತಡಿಕಂಡು ಬಂದಗಿರತರ
ಕಾಲ್ನ ಸವರುತ್ತ
ನಾ ಇರ ಜಾಗದಲ್ಲೆ ಜಗುಲಿಲಿ
ಕುಕ್ಕರ ಬಡಿದು ಬೀಡಿ ತಗುದು
ಕಡ್ಡಿ ಗೀರಿ ಹಸ್ಸಿ ದಮ್ಮು ಎಳೆದು
ಬುಸ್ಸ ಬುಸ್ಸನೆ ಹೊಗೆ ಬಿಟ್ಟರಲ್ಲೊ..
ಒಂದೊಂದು ದಮ್ಮಿಗೂ ಬೀಡಿ ಅಂಚು
ಕೆಂಡದುಂಡೆತರ ಆಗಿ ಮಿಣುಕು ಬೆಳಕಲಿ
ನನ್ನ ಹುಡುಕಿ ಮೆಟ್ಟಿ ಕುಂತರಲ್ಲೋ..
ಆ ಕಜ್ಜಿ ನಾಯಿ ಓಡೋಡಿ ಬಂದು
ಅಯ್ನೋರ್ ಪಂಚ ಎಳಿತಾ ಎಳಿತಾ
ಕುಂಯ್ಞೀ ಕುಂಯ್ಞೀ ಅಂತ
ಬಾಲ ಅಲ್ಲಾಡಿಸುತ್ತ
ಅದರ ಆನಂದಕೆ ಅದು ನುಲಿತಾ ನಲಿತಾ
ಎಗರಿ ಎಗರಿ ಬೀಳ್ತಾ
ಅಯ್ನೋರ್ ನನ್ನ ಮೆಟ್ಟಿದ ಕಾಲಲಿ
ಜಾಡಿಸಿ ಒದ್ದು ಬುಸ್ ಅಂತ ಇನ್ನೊಂದು
ದಮ್ಮು ಎಳೆದು ಬಿಟ್ಟರಲ್ಲೋ…
ಆ ಕಜ್ಜಿ ನಾಯಿ ಅವರ ಒದ್ದ ರಭಸಕೆ
ಕಂಯ್ಞ್ ಕಂಯ್ಞ್ ಕಂಯ್ಞ್ ಕಂಯ್ಞುಟ್ಟಿ
ಗಬ್ಬುನಾತ ಹೊಡಿತ ಇರೋ ಮೋರಿಲಿ
ಬಿದ್ದು ಒದ್ದಾಡ್ತ ಇರ ಸದ್ದು
ನನ್ನ ಎದೆಗೆ ತಾಕ್ತಲ್ಲೊ…
“ಏಯ್ ಇನ್ನು ಯಾಕ ಕೂತಿದ್ದಯ್”
ಬಾಗಿಲ ಹೊಸಿಲೊಳಗಿಂದ
ಓಡಿ ಬಂದ ಅವಳ ಕ್ಯಾತೆಗೆ
ಅಯ್ನೋರ್ ಬಾಯಿ ಕಟ್ಟಿತಲ್ಲೊ..
ಅಯ್ನೋರುಟ್ಟ ಪಂಚೆ ಅಂಚು
ನನ್ನ ತಿವುದು ತಿವುದು ಬೆಂಟಿ ಆಡ್ಸಿ
ಲಕಲಕಾಂತ ಒಂದೇ ಸಮ ನಗಾಡ್ತಲ್ಲೊ..
“ಇದೇನ ನಿ ನಗದು ಉಗಿಸ್ಗಳ ಹೊತ್ಲಿ”
ಅಂತಂದ ನನ್ನ ಮಾತು ಬೀದಿ ಬಿತ್ತಲ್ಲಾ
ಪಂಚೆ ಅಂಚು,
ಅಯ್ಯೊ ಮೆಟ್ಟೇ ಈ ಅಯ್ನೋರು
ಅದೇನೊ ಬಳ ಮಾಡುಸ್ಕೊಡ್ತಿನಿ
ಅಂದಿದ್ರಂತ
ಅವ ನಿ ಬಳ ಕೊಡು ಆಗ್ ನನ್ ಮುಟ್ಟು
ಅಂತನ್ಬುಟ್ಟು ಮುಖ ತಿರಿಕ ಕುಂತ್ಕಂಡ
ಈ ಅಯ್ನೋರು ಅವಳ ಮಾತ ಲೆಕ್ಕಕ್ಕಿಡ್ದೆ
ನನ್ನ ಬಿಚ್ಚಿ ತೂದು ಎಸ್ದು ಹುಲಿ ತರ ಬಿದ್ರು
ಅವ ಸುಮ್ಮನಾಗ್ದೆ ಜಾಡ್ಸಿ ಒದ್ದು ಕೆಳಕ ತಳ್ದ
ನಂಗ ನಗ ತಡಿಯಕಾಗ್ದೆ ಬಿದ್ದು ಬಿದ್ದು ನಕ್ದಿ
ಅಯ್ನೋರು ಮೀಸೆ ಮಣ್ಣಾಗ್ನಲ್ಲ ಅಂತಾರಲ್ಲ
ಚಡ್ಡಿನು ಬಿಚ್ಚಾಗ್ದ ನೋಡು
ನಂಗ ನೋಡಕಾಗ್ದೆ ತಿರಿಕಂಡಾಗ
ಇನ್ನೊಂದು ದಪ ಒದ್ದ ನೋಡು
ನನ್ನ ಎತ್ಕಂಡು ಸುತ್ಕಂಡು ಗ್ವಾಡ ಒರಿಕಂಡ.
ನಾ ಅವ್ಳ ಇಂಚಿಂಚು ನೋಡಿನಿ
ಚೆಂದುಳ್ಳಿ ಚೆಲುವೆ ಮೆಟ್ಟೇ
ನಿಂಗ ಆ ಯೋಗ ಎಲ್ಬಂತು
ನೀ ಯಾವತ್ತು ಹೊಸಿಲೀಚೆನೆ
ಅಯ್ನೋರು ಒಂದ್ಜೊತ ಬಳ ಕೊಟ್ಟಿದ್ರ
ನಾನು ಸ್ವರ್ಗ ನೋಡ್ತಿದ್ದಿ
ಅಂತಂತ ಮಾತಾಡ್ತ ಇರೋ ಹೊತ್ತಲ್ಲಿ
ಅವಳು ಹೊಸಿಲು ದಾಟಿ ದಾಪುಗಾಲಾಕಿ
ಅವನತ್ತಿರ ಕುಂತು ಮುಸುಡಿ ತಿವುದು
ನಾಳನಾರು ಬಾ ಅಂದೇಟಿಗೆ
ಅಯ್ನೋರ್ ಮೈಮಾರ
ಕೆಂಡದುಂಡೆತರ ಆಗಿ
ಕಾದು ಬೆವರಿಳಿದು
ನನ್ನ ಮೈಮಾರನೆಲ್ಲ ಸುಟ್ಟಿತಲ್ಲೊ..
ಮುಂದುವರೆಯುವುದು….