ಮೆಟ್ಟು ಹೇಳಿದ ಕಥಾ ಪ್ರಸಂಗ ಒಂದು ನೀಳ್ಗಾವ್ಯ (ಭಾಗ 67): ಎಂ. ಜವರಾಜ್

-೬೭-
ಆ ಮಾರ ಕಡ್ಡಿಗೀರಿ
ಮೋಟು ಬೀಡಿ ಹಸ್ಸಿ ಬಾಯ್ಗಿಟ್ಗಂಡು
ಅದೆ ಕಡ್ಡಿಲಿ ಲಾಟೀನ್ ಕೀಲೆತ್ತಿ
ಲಾಟೀನ್ ಗಳಸೊಳ್ಗಿರ ಬತ್ತಿಗ ಇಟ್ಮೇಲ
ಮೊದುಲ್ಗ ಲಾಟೀನ್ ಬತ್ತಿ ದಗ್ಗಂತ ಹತ್ಕಂಡು
ಆಮೇಲಮೇಲ ಆ ಲಾಟೀನಲಿ
ಸೀಮೆಣ್ಣ ಇಲ್ದೆ ಇರವತ್ಗೇನೋ
ಅದು ಕವುರ್ತ ಕವುರ್ತ
ಬೆಳ್ಕು ಸಣ್ಣುಕ್ಕ ಪಿಣುಗುಡ್ತಿತ್ತು

ಆ ಪಿಣ್ಗುಡ ಬೆಳುಕ್ಲಿ
ಆ ಮಾರುನ್ ಹೆಡ್ತಿ
ಹೊಸೂರ್ ಬೀದಿಯಿಂದ
ಹೆಡ್ಗಲಿ ಹೊತ್ಗ ಬಂದಿರ
ಬಾಡು ಬಳ್ಳ ತಿಂದು ತೇಗಿ
ಅಂಗುಳ್ಗಂಟ ಕುಡ್ದು
ಬಿದ್ದು ಪೇಚಾಡ್ತ ಇರದು ಕಾಣ್ತು

ಆ ಮಾರನೂ ಅಂಗುಳ್ಗಂಟ ತಿಂದು ಕುಡ್ದು
ಆ ಅಂಗುಳ್ಳೇ ತೇಗ್ತ
ಹಳ ಬಕೀಟೊಳಗ ಇರ
ಕೊಳ ನೀರ್ಲಿ ಮುಳುಗ್ಸಿ
ಉನಿಯಾಕಿದ್ದ ನನ್ನ ಎತ್ತಿ ಕೆಳಗಿಟ್ಟು
ಬಾಯ್ಗಿಟ್ಟಿದ್ದ ಬೀಡಿನ ಎಡಗೈಲಿ ತಗ್ದು
ಹೊಗ ಬುಟ್ಟು
ಗೋಣಿ ತಾಟ ಹಾಸ್ಗಂಡು ಕುಂತ್ಕಂಡ್ನ

ಆ ನೆರಕ ಬಾಗ್ಲು ತಗ್ದದು ತಗ್ದಂಗೆ ಇತ್ತು
ಆ ಮಾರ ನನ್ನೆತ್ತಿ ಕೊಳ ಬಟ್ಟಲಿ ಸೀಟಿ
ರಂಪಿ ತಕಂಡು ಕಿತ್ತೊಗಿರ ನನ್ ಮೈಮಾರನ
ಕೂದುಕೂದು ಒಂದದ್ಕ ತಕ್ಕತಿದ್ನ..

ಆ ಮಾರ ಒಂದದ್ಕ ತಕ್ಕಳಕ ಕುಯ್ತಿದ್ರ
ಆ ನನ್ ಒಡಿಯನೇ
ಆ ನನ್ ಕಾಲ, ಕಾಲಯ್ನೆ ಕೂದಗಾಯ್ತಿತ್ತು

ಆ ಹಸ ಕಲ್ಲಲಿ ಮಡಿಕಂಡು ಗುದ್ದಲ್ಲಿ ಗುದ್ದುತಿದ್ರ
ಆ ನನ್ ಒಡಿಯನೇ
ಆ ನನ್ ಕಾಲ, ಕಾಲಯ್ನೆ ಗುದ್ದಗಾಯ್ತಿತ್ತು

ಆ ಮ್ಯಾಣ ಮೆತ್ತಿದ್ ದಾರನ
ಆ ಮೊನಗಾಕಂಡು ಚುಚ್ಚಿಚುಚ್ಚಿ ಹೊಲಿತಿದ್ರ
ಆ ನನ್ ಒಡಿಯನೇ
ಆ ನನ್ ಕಾಲ, ಕಾಲಯ್ನೆ ಚುಚ್ಚಿ ಹೊಲ್ದಗಾಯ್ತಿತ್ತು

ಆ ಮಾರ ಬಕ್ಕಂಡು ಕಣ್ಣ ಬುಟ್ಕಂಡು
ಆ ಬೆವರ ಸುರಿಸ್ಕಂಡು ಮೋಟು ಬೀಡಿ ಸೇದ್ಕಂಡು
ಈ ನನ್ನ ಮೈಮಾರನೆಲ್ಲ ಉರುಗ್ಸಿ ತಿರುಗ್ಸಿ ನೋಡ್ತಿದ್ರ
ಆ ನನ್ ಒಡಿಯನೇ
ಆ ನನ್ ಕಾಲ, ಕಾಲಯ್ನೆ
ಉರುಗ್ಸಿ ತಿರುಗ್ಸಿ ನೋಡ್ದಗಾಯ್ತಿತ್ತು

ಅಯ್ಯೊ ಶಿವ್ನೆ
ಅಯ್ಯೊ ಕಾಲ್ವೆ
ಅಯ್ಯೊ ನನ್ ಒಡಿಯ ಕಾಲ, ಕಾಲಯ್ನೆ
ನಿನಗ್ಯಾಕ ಹಿಂಗಾಯ್ತೊ
ನಿನ ವಂಶವ್ಯಾಕೊ ಹಿಂಗಾಯ್ತೊ
ನನ್ನ ರೂಪ್ಸಿ ಜಗತ್ಗ ಕೊಟ್ಟು
ನೀನು ಸುಟ್ಟು ಬೂದಿಯಾದೆಲ್ಲೊ
ನಿನ್ ವಂಶ ಬೂದಿಯಾದಂಗೆ
ಅವ್ರ್ ವಂಶುವು ಬೂದಿಯಾಗ್ಲೊ
ಅದ ಈ ಕಣ್ಲಿ ನೋಡಿ
ಈ ನನ್ ಕಿಚ್ಚ ಆರುಸ್ಕಬೇಕಲ್ಲೊ
ನಾನೂ ಇದ
ಈ ಅಯ್ನೋರ್ ಕಾಲ್ಸಂದಿಲೆ ಕಿರ್ಗಣ್ಣ ಬುಟ್ಟು
ಆ ಜಿನುಕ್ಕ ಕಾಯ್ತ ಅವ್ನೆಲ್ಲೊ
ಈ ಅಯ್ನೋರ್ ನಡನುಡಿ ನೋಡ್ತ ಇದ್ರ
ಅವ್ರ್ ಕಾಲ್ಸಂದಿರ ನನ್ನೇ ಆಗಾಗ
ಚುಚ್ತಾ ಚುಚ್ತಾ ಗಾಯ ಮಾಡ್ತ
ಗಾಸಿ ಮಾಡ್ತ ಇರದು
ಈಗೀಗ ಕಣ್ಮುಂದ ಬಂದೋಗತರ
ಅರುವಾಗಿ ಕುಣ್ದಗಾಯ್ತದಲ್ಲೊ..

‘ಏಯ್ ನಾಯಿ ಬಿದ್ಕ ಬಾರೊ ಮಗನೆ
ಅದೇನ್ ಕೊಸಿತ ಇರದು ಕತ್ಲಲಿ..
ಕೊಸಿಬಾರೊ ಇಲ್ಲಿ ಬೋಳಿ ಮಗನೇ.. ‘

ಆ ಮಾರನ ಹೆಡ್ತಿ ಕೂಕ್ಕಂಡಗಾಯ್ತು.
ಆಗ ಆ ಮಾರ
ನನ್ನ ಲಾಟೀನ್ ಬೆಳುಕ್ಕ ಹಿಡ್ದು ನೋಡ್ತ
‘ಏ ಅಯ್ನೋರ್ ಮೆಟ್ಟಮ್ಮೊ ಮೊಬ್ಗೆ ಬತ್ತರಮ್ಮೊ’
ಬೀಡಿ ಮೋಟ ಎಡಗೈಲಿ ಎಸ್ದು ನಕ್ದ

‘ಏಯ್ ಸೂಳಮಗನೆ ಯಾವಯ್ನೋರೊ
ಯಾವ್ ಸೀಮ ಅಯ್ನೋರೊ
ಅವ್ನ್ ಮೀಸ್ಗ ನನ್ನುಚ್ಚ ಉಯ್ಯಾ..
ಆ ದೇವಮ್ಮೋರು
ಆ ನೀಲವ್ವೋರು
ಆ ಸುನಿತವ್ವೋರು
ನನ್ಕಣ್ಮುಂದ ಈಗ್ಲು ಇದ್ದಂಗವ್ರ..’
ಅನ್ತ ಉಗಿತಾ ಮಗ್ಗುಲು ಬದುಲುಸ್ತಿದ್ರ
ಆ ಮಾರ ನನ್ನ ಕೆಳಕ ಮಡ್ಗಿ
ನೆರಕ ಎಳ್ದು ಅವುಳ್ಗ ಜಾಡ್ಸಿ
ತಿಕ್ಕ ಒದ್ದ ನೋಡು..
ಆ ಒದ್ದ ಕ್ಯಾಣುಕ್ಕ ಅವ್ಳು
‘ಅಯ್ಯೊ ಅಯ್ಯಯ್ಯಪ್ಪಾ
ನಿನ್ ನರ ಕಿತ್ತು ಬೀಳಾ ಸೂಳ ಮಗನೇ’
ಅನ್ತ ಕಿರುಚ್ತ ಉಳ್ಳಾಡ್ತಿದ್ರ
ಆ ಮಾರ ಅದೇ ತಿಕುದ್ ಕುಂಡಿಗ
ಇನ್ನೊಂದು ಒದ್ದೇಟ್ಗೆ ಮುಕ್ಕರಿತಾ ಮುಲುಕ್ತಾ
ಕೊಚಕೊಚ ಮಾತಾಡ್ತ
ರಪ್ಪರಪ್ನ ಇಬ್ರೂ ಬಡ್ದಾಡ್ತ
ಅವ ಹೊದ್ಕಂಡಿರ ರಗ್ಗೊಳಕ
ಇವ್ನೂ ಸೇರ್ಕಂಡು ಮೊಸ್ಗರಿತ
ಉಳ್ಳಾಡದು ಕಾಣ್ತು

ಅವ್ರು ಅಲ್ಲಿ ಉಳ್ಳಾಡ್ತಿದ್ರ
ಸೂರ್ಲಿ ನ್ಯಾತಾಡ್ತ ಪಿಣ್ಗುಡ್ತ
ಕವುರ್ತಿದ್ದ ಲಾಟೀನು
ನೋಡಗಂಡ ನೋಡಿ ಅದೂ
ತೂಕುಡುಸ್ತ ತೂಕುಡುಸ್ತ ಮನಿಕಂಡ್ಮೇಲ

ನೆರಕ ಮನ ಒಳ್ಗ ಕತ್ಲು ಕವುಸ್ಕತು.

ಕಾಗ ಕಾಕಾ ಅನ್ತ ಕೂಗ್ದಗಾಯ್ತು
ಆ ಕಾಗ ಸದ್ದಾಗವತ್ಲಿ
ಆ ನೆರಕ ಬಾಗ್ಲೂ ಜರುಗ್ದಗಾಯ್ತು
ಆಗ
‘ಮಾರ.. ಏಯ್, ಎದ್ದಿದಯಲ’
ಅನ್ತ ಕೂಗುದ್ದು ಕೇಳ್ತು
ಇದು ಅಯ್ನೋರ್ ಸದ್ದಲ್ವ ಅನ್ನುಸ್ತು

ಆ ಮಾರ ಇನ್ನು ಬಿದ್ದೇ ಇದ್ನ
ಆ ಮಾರನ ಹೆಡ್ತಿ ದಡಕ್ಕನೆ ಎದ್ದು
ನೆರಕ ತಗ್ದು ಇಣ್ಕಿ
‘ಅಳೀ..’ ಅಂದ್ಲು
ನಂಗ ನೆರಕ ಸಂದಿಲಿ ಅಯ್ನೋರ್ ಮೊಖ ಕಾಣ್ತು
ಆ ಅಯ್ನೋರು ಜಗುಲಿ ಅಂಚ್ಗ ತಿಕ ಊರಿದ್ರು
‘ಎಲ್ಯಮ್ಮಿ ಆ ಬಂಚೊತ್. ಮನ್ಗಿದನಾ’
‘ಮನ್ಗನ ಅಳಿ ಇರಿ ಏಳುಸ್ತಿನಿ’ ಅನ್ತ
ಒಳಕ್ಬಂದು ಮಾರುನ್ ತಿಕ್ಕ ಒದ್ಲು
ಆ ಮಾರ ರಗ್ಗೊಳ್ಗೆ
‘ಏ ನಿಮ್ಮೊವ್ನ್ ‘ ಅಂದ್ಮೇಲ
ಅವ್ಳು
‘ಏ ಕುಲ್ಗೆಟ್ಟವ್ನೆ ಅಯ್ನೊರ್ ಬಂದರ’ ಅಂದ್ಲು.
ಆ ಮಾರ ಈ ಅಯ್ನೋರ್ ಸುದ್ದಿ ಕೇಳ್ಬುಟ್ಟು
ರಗ್ಗ ಗೋರಿ ಎಸುದ್ಬುಟ್ಟು ನೆರಕ ಬಾಗ್ಲ ತಳ್ಕಂಡು
ಅಯ್ನೋರ್ ಎದುರ್ಗ ನಿಂತು
‘ಬಂದ್ರ್ಯಾ ಅಳೀ ನಾನೆ ಬತ್ತಿದ್ದಿ ತಕ್ಕಂಡು
ರಾತ್ರ ಸರೊತ್ಗಂಟ ಮಾಡ್ದಿ’
ಅನ್ತ ಒಂದಾಪ್ಗ ಒಳಕ್ಬಂದು ನನ್ನ ಜೋಪಾನ್ವಾಗಿ
ಕೊಳ ಬಟ್ಟಲಿ ಸೀಟಿ ಅಂಗೈಲಿಟ್ಗಂಡು
ಅದೆ ಒಂದಾಪ್ಗ ಅಯ್ನೊರ್ ಮುಂದ
ಮಂಡಿಯೂರಿ ಅವ್ರ್ ಪಾದುಕ್ಕ
ನನ್ನ ಜೋಪಾನ್ವಾಗಿ ಹಾಕಿ ಹಲ್ಕಿರ್ದ

ಆ ಮಾರನ ಹೆಡ್ತಿ ಅಯ್ನೋರ ನೋಡ್ತ
‘ಅಲ್ಲ ಅಳಿ ನಂದೊಂದ್ಮಾತದ
ಇದ್ಯಾನ ನಿಮ್ದು..
ಆಯ್ತು ಹೋಯ್ತು
ಎಲ್ಲ ಅಳಿತು
ಆ ಚಂದ್ರವ್ವೊರ್ ಕೂಸ್ನಾದ್ರು ಹುಡಿಕಳಿ
ವಂಶ ಬೆಳಿಯಕಾದ್ರು ಇರ್ಲಿ’ ಅಂದ್ಲು

ಈ ಅಯ್ನೋರು ಎಡಗಾಲ ಎತ್ತಿ ಕುಟ್ಟಿ
‘ಏಯ್ ಏಯ್ ಮಾನ್ಗೆಟ್ಟವ್ಳ ಬಂಚೊತ್..’
ಅನ್ತ ಕೈ ತೋರುತ್ತಾ
‘ಏಯ್ ಮಾರ ಏನಲೆ ಬಂಚೊತ್
ಹೇಲ್ ಗೋರ ನಾಯ್ಗಳ ನನ್ನೆದುರ್ಗ ನಿಂತು ಮಸತಾಡಗಾದ್ರ್ಯ.. ‘ ಅನ್ತ ಬುಸುಗುಟ್ಟುದ್ರು
ಆ ಮಾರ ನಡುಗ್ತ ಬೆಚ್ತ
ಅಯ್ನೋರ್ ಕಾಲ ಮುಟ್ಟೋತರ ಬಗ್ಗಿ ಎದ್ದು
ಅವ್ನೆಡ್ತಿ ಕಡ ತಿರುಗಿ
‘ಏಯ್ ನಿಮ್ಮೊವ್ವುನ್’ ಅನ್ತ
ಬಿದ್ದಿರ ಎಕ್ಕಡ ಎತ್ತುದ
ಆಗ ಅವ್ಳು ಪಣ್ಣಂತ ಬೀದಿದಿಕ್ಕ ನೆಗುದು
ಅಗಿತಿರ ಎಲಡ್ಕನ ಪಚುಕ್ಕಂತ ಉಗಿತಾ
‘ನಾನೇನ್ ಮಾಡ್ದೆ ನಾಯಿ
ವಂಶುಕ್ಕಿಲ್ಲ ಅನ್ತ ಹೇಳ್ದಿ
ಆ ಚಂದ್ರವ್ವೊರು
ಈ ಅಯ್ನೋರ್ ಕಪಲ ಬಾವಿಗ
ಬಿದ್ಸತ್ತುದ್ದು ಗುಟ್ಟಾ
ಆ ಚಂದ್ರವ್ವೊರ್ ಸಾಯವತ್ಲಿ
ಮಗಿ ಅಳ್ತಿದ್ದು ಗುಟ್ಟಾ
ಆ ಮಗಿ ಹುಡುಕಳಿ ಅಂದ್ರೇನು ತಪ್ಪಾ..
ಆಯ್ತು ಬುಡಳೀ..ಆಯ್ತು ಬುಡಿ
ಬತ್ತನ ಆ ಕಾಲುನ್ ಮಗ ಬತ್ತನ
ಇವತ್ತಲ್ಲ ನಾಳ ಬತ್ತನ
ಅವ್ಳೂ ಬತ್ತಳ ಸವ್ವಿ
ಚೆಂಗುಲಿ ಜೊತ್ಗ ಹೋದ್ಲಲ್ಲ
ಸವ್ವಿ ಬತ್ತಳ ಬಂದೇ ಬತ್ತಳ
ಆ ಸವ್ವಿ ಬರ್ನಿಲ್ಲ ಅಂದ್ರು
ಅದ್ರ ಕುಡಿನಾದ್ರು ಬತ್ತುದ
ನಂಗೆಲ್ಲ ಗೊತ್ತು ಕಣ ಅಂವ ಸಿಕ್ಕಿದ್ನ ಕಣ’
ಅನ್ತ ಕ್ಯಾಕುರ್ಸಿ ಉಗಿತಾ
ಬೇಲಿ ಸಂದಿಗ ಉಕ್ಕಂಡ್ಲಲ್ಲಾ..

ಈ ಅಯ್ನೋರು ಆ ಮಾರುನ್ ಕೈಗ
ಜೋಬಿಂದ ತಗ್ದ
ರೂಪಾಯಿ ಬಂದ್ವ ಉದುರ್ಸಿ
‘ಬಾ ವಸಿ ತ್ವಾಟುತವ್ಕ’ ಅನ್ತ
ಕಾಲ್ನ ತಿರುಗುಸ್ತ ನಡಿತಿದ್ರ
ನನ್ ಮೈಮಾರ ಮೊದುಲ್ಗ ಇದ್ದಂಗೆ ಆಗಿ
ಗಿರಿಕ್ಕು ಗಿರಿಕ್ಕು ಸದ್ದಾಯ್ತ
ಆ ಸದ್ದು ಆ ಬೀದ್ಗುಂಟ ಕೇಳ್ತ
ಆ ಸದ್ಗ ನಿಂತವ್ರು ಕುಂತವ್ರು
ಅಯ್ನೋರ್ ನೋಡ್ತ ಕೈ ಮುಗಿತಿದ್ರಾ
ಈ ಅಯ್ನೋರ್ ಗ್ಯಾನ
ಅವ್ರ್ ಕಡ ಇದ್ದಂಗಿಲ್ದೆ
ಒಂದೆ ದಿಕ್ಕ ನೋಡ್ತ
ಆ ಬೀದಿ ಕೊನ್ಗುಂಟ ನಡಿತಾ
ತ್ವಾಟುದ್ ಕಡ ತಿರುಗ್ತು..

-ಎಂ. ಜವರಾಜ್


ಮುಂದುವರೆಯುವುದು..

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Oldest
Newest Most Voted
Inline Feedbacks
View all comments
0
Would love your thoughts, please comment.x
()
x