ಮೆಟ್ಟು ಹೇಳಿದ ಕಥಾ ಪ್ರಸಂಗ ಒಂದು ನೀಳ್ಗಾವ್ಯ (ಭಾಗ 65 & 66): ಎಂ. ಜವರಾಜ್

-೬೫-
ಆ ಆಳು ಬೀದಿಗುಂಟ
ದಾಪಗಾಲಾಕಿ ಓಡ್ಬತ್ತಿರಗ
ಆ ಆಳ್ನೆಡ್ತಿ ತನ್ಸೀರನ ತೊಡ್ಗಂಟ ಗೋರ್ಕಂಡು
ಆ ಗೋರ್ಕಂಡಿರ ತೊಡಮ್ಯಾಲ ಮಲ್ಗಿರೋ
ಈ ಅಯ್ನೋರ್ ತಲನ ಹಿಡ್ಕಂಡು
ಬತ್ತ ಇರ ಈ ಅಯ್ನೋರಾಳನ್ನೊ ಗಂಡನ್ನ
ವಾರ್ಗಣ್ಲಿ ನೋಡ್ತಾ
ಈ ಅಯ್ನೋರ್ ತಲನ
ಆ ತೊಡಮ್ಯಾಲಿಂದ
ಮೆಲ್ಮೆಲ್ಗ ಉಸಾರಾಗಿ ಕೆಳಕ ಸರ್ಸಿ
ಆ ಮೋರಿ ಸಂಗ್ಡಿರೊ
ಆ ಭೂಮ್ತಾಯಿ ಮ್ಯಾಲ ಮಲುಗ್ಸಿ
ಈ ಅಯ್ನೋರಾಳನ್ನೊ
ತನ್ನ ಗಂಡುನ್ಗ ತೋರುಸ್ತ ಕಣ್ಣೀರಾಕ್ತ..
ಆಗ ಆ ಆಳು ಮಂಡಿ ಊರಿ
‘ಅಯ್ನೋರಾ.. ಅಯ್ನೋರಾ..
ಇದ್ಯಾಕ.. ಏನಾಯ್ತು..’ ಅನ್ತ
ಗೊಳಗೊಳನೆ ಅಳ್ತ ನಿಂತಿರದ
ಆ ಭೂಮ್ತಾಯಿ ಸಂಗ್ಡ ಇರ ಮೋರಿ ಸಯಿತ
ಕಿಲಕಿಲ ನಗ್ತ ನೋಡ್ತಾ ಗಬ್ಬುನಾತ ಬೀರ್ತಿತ್ತಲ್ಲಾ..

ಆಗ ಈ ಅಯ್ನೋರು
ಆ ಆಳು ಆ ಆಳ್ನೆಡ್ತಿನ
ತನ್ನೆರಡು ಕಣ್ಲಿ ನೋಡ್ತ
ಆ ಗಬ್ಬುನಾತನ ಲೆಕ್ಕುಸ್ದೆ ಉಸುರಾಡ್ತ
ಹಂಗೆ ಸಂಡ್ರುಸ್ಕಂಡು ಮ್ಯಾಕ್ಕ ಎದ್ದು
ಇಬ್ರುನೂ ದುರದುರ ನೋಡ್ತಾ
ಅವ್ರ ಆಕಡ ಈಕಡ ನಿಲ್ಲುಸ್ಕಂಡು
ಹೆಗುಲ್ಗ ಕೈಯಾಕಂಡು ಕಾಲೆಳಿತಾ
ಜಗುಲಿ ಮ್ಯಾಗಿರ ಕಂಬ ಹಿಂಡ್ಕಂಡು ಕುಂತ್ಕಂಡ್ರಲ್ಲೊ

‘ಏಯ್ ಅಳದ್ಯಾಕ ಇಬ್ರುವ
ನಂಗೇನಾಗಿದ್ದು ಅನ್ತ ಅತ್ತರಿ
ಜುಗುಡ್ತ ಬಂದು ಕಾಲು ನಡುಗ್ತು
ಆ ನಾಯಿ ಬ್ಯಾರೆ ಬೊಗುಳ್ತಿತ್ತು
ಅತ್ತಗ ನೋಡ್ತ ನೋಡ್ತ ಇತ್ತಗ ಕಾಲಿಟ್ಟಿ’ ಅನ್ತ
ಆ ಆಳ್ನೆಡ್ತಿ ಹೆಗುಲ್ ಮ್ಯಾಲಿರ ಅಯ್ನೊರ್ ಕೈ ಬೆಳ್ಳು ಹಂಗೆ ಜಾರಿ ಅವುಳ ಎದಮ್ಯಾಲ ಆಡ್ತಿತ್ತು

ಆ ಆಳು
ಈ ಅಯ್ನೋರ ನೋಡ್ತಾ ತಲ ಕೆರಿತಾ,
‘ಅಯ್ನೋರ ರಾತ್ರ ಅಂವ ಸಿಕ್ಕಿದ್ನ
ಎಲ್ಲ ಮುಂದಾಳ್ಗಳು ಬಂದರಂತ
ಚೇರ್ಮನ್ ಗಿರಿ ಬಗ್ಗ ಮಾತಾಡಕ
ಈ ವರ್ಷ ಕಳುದ್ರ ನಿಮ್ದು ಮುಗಿತ್ತಾ
ಅದೇನ ಯೋಚ್ನ ಮಾಡಿ ಈಗ ಈತರ ಆಗದ’

‘ಏಯ್ ಬಂಚೊತ್,
ಯಾವ್ತರ ಆಗಿದ್ದು ಅಂತದ್ದೇನಾಗಿದ್ದು ನಂಗ..
ನನ್ ಸಲಿರ ಬಗ್ಗ ನಂಗೊತ್ತು ನಿಂಗೇನ್ ಗೊತ್ತು?
ಇನ್ನೆರುಡು ಜಿನ ಈ ಗಾಯ ಒಣ್ಗಿ ಉದುರುತ್ತಾ
ಹೋಗೇಳು ಎಲ್ರುನು ಬರೇಳು
ಇವ ಇಲ್ಲಿರ್ಲಿ ನೀ ತ್ವಾಟುತ್ತವು ಇರು
ನಿಂಗ ಏನಾ ಹೇಳದದಾ
ಹಂಗೆ ಅಂವ ಬಂದು ನನ್ನ ನೋಡ್ಲಿ’ ಅಂದ್ರು

ಈ ಅಯ್ನೋರ್ ಆಡ್ದ ಆ ಮಾತ್ಗ
ಆ ಆಳುನ್ ಮೊಖ ಹಂಗೆ ಅರುಳ್ತ
ತ್ವಾಟುದ್ ಕಡ ಕಾಲ್ಕಿತ್ತಾಗ
ಬಿಸ್ಲು ಮೇಲೇರೆರ್ತಾ ಏರ್ತಾ ಚುರುಗುಟ್ತಾ
ಈ ಅಯ್ನೋರು
ಆ ಆಳ್ನೆಡ್ತಿ ಹೆಗುಲ್ನ ಹಿಡ್ಕಂಡು ಮ್ಯಾಕ್ಕೆದ್ದು
ಒಳಕ ನಡುದು ಬಾಗ್ಲು ಜಡ್ಕತು
ಆ ಜಡ್ಕಂಡ್ಬಾಗ್ಲು ಸಂದೇನು ಜಡ್ಕಂಡೇ ಇತ್ತು..
ಆದ್ರ ಆ ಹಿತ್ಲು ಬಾಗ್ಲಿತ್ತಲ್ಲಾ
ಅದು ಸದ್ದಾಗಾಯ್ತಿತ್ತು

ಮೊಕ್ಕತ್ಲು ಕವುಸ್ಕಂಡು ಏನೂ ಕಾಣ್ದು
ಆಗ ಜಡ್ಕಂಡಿರ ಬಾಗ್ಲು ತಕ್ಕತು
ಅಂತು ಇಂತು ಬಾಗ್ಲು ತಕ್ಕಂಡ್ಮೇಲ
ಲೈಟಾರು ಬತ್ತುದ ಅಂದ್ರ ಅದೂ ಕಾಣ್ದು
ಗವ್ಗತ್ಲು ಅಂದ್ರ ಗವ್ಗತ್ಲು
ಯಾರ್ ಹೋದ್ರು ಯಾರ್ ಬಂದ್ರು ಗೊತ್ತಾಗ್ದು
ಹೋಗ ಬರ ಹೆಜ್ಜ ಸದ್ದು ಆಗದ್ಮಾತ್ರ ಕೇಳ್ತಿತ್ತು
ಆಗ ಯಾರ ಹೆಣ್ಣೆಂಗ್ಸ್ ಮಾತು ಕೇಳ್ತು
ಆ ಆಳ್ನೆಡ್ತಿ ದನಿಯಂತು ಅಲ್ಲ ಅನ್ನುಸ್ತು
ಇದು ನಂಗ ಹತ್ರದಲ್ಲಿ ಕೇಳಿರ ದನಿನೆ ಅನ್ನುಸ್ತು
ಅದ್ಯಾವ್ ದನಿನಾ..
ಸುಮ್ನ ಚಿಂತ ಮಾಡ್ತ ಮಾಡ್ತ
ಕತ್ಲೊಳ್ಗ ನಂಗ ತಲ ತಿರುಗಾ ತರ ಆಯ್ತು..


-೬೬-
ಈತರ ರಾತ್ರ ಹಗುಲು ಕಳಿತಾ ಬೆಳಿತಾ
ಮಾರ್ಲಮಿ ಜಿನ ಹೊಸೂರುನ್ ಬೀದಿ ಜನ
ಈ ಹಳ ಊರುನ್ ಬೀದಿಗುಂಟ
ನಾನಿರ ಈ ಅಯ್ನೋರ್ ಮನಕಡ ಕಣ್ಣಾಡುಸ್ತ
ಆಡ್ಮರಿ ಕುರಿಮರಿ ಕ್ವಾಣುನ್ಮರಿ ಹಿಡ್ಕಂಡು
ಹಿತ್ತುಲ್ಮಾರಿ ಗುಡಿಕಡ ಸಾಗ್ತ ಇರದು ಕಾಣ್ತಿತ್ತು

ಹಂಗೆ ಹಿಂದ್ಗುಂಟ-

‘ಚಡಿಚಡಿ ಚಡಿಚಡಿ ಚಡಿಚಡಿ
ಚಡ್ಚಡಿ ಚಡ್ಚಡಿ ಚಡ್ಡು ಚಡ್ಡು ಚಡ್ಚಡಿ
ಣಕುಣ ಣಕುಣ ಚಿರಿವಿರಿ ಚಿರಿವಿರಿ
ಚಿರಿವಿರಿವಿರಿ ಚಿರಿವಿರಿ ಚಿರಿವಿರಿ
ಚಡ್ಚಡಿ ಚಡ್ಚಡಿ ಚಡ್ಡು ಚಡ್ಡು ಚಡ್ಡು ಚಡ್ಚಡಿ
ಚಡಿಚಡ್ಕುಣ ಚಡಿಚಡ್ಕುಣ ಚಡಿಚಡ್ಕುಣ
ಚಡ್ಕಣಕು ಚಡ್ಕುಣಕು ಚಡ್ಕುಣಕು
ಚಡ್ಕು ಚಡ್ಕು ಣಕುಣ ಣಕುಣ ಚಡ್ಕುಣ..’

ತಂವ್ಟ ಬಡಿಯ ಸದ್ಬೇರೆ ಕೇಳದು-

ಆ ಸದ್ದು ಬತ್ತಾ ಬತ್ತಾ ನಾ ಬಿದ್ದಿರ
ಈ ಅಯ್ನೋರ್ ಮನತವ್ಕು ಬಂತು

ಅಲಲಲಲಲಾ ಅದೆಲ್ಲಿ ಉಡುತ್ಕಂಡಿದ್ವಪ್ಪಾ..

ಚಿಕ್ಕವು ದೊಡ್ಡವು ಅಂದೇದ್ ರೀತಿಲಿ
ಆ ತಂವ್ಟ ಏಟ್ಗ ಕಾಲ್ನ ಅತ್ತಗು ಇತ್ತಗು ಎತ್ತಾಕ್ತ
ಕಿಸಿತಾ ಕುಣಿತಾ ಮೆರಿತಾ ಇರದು ಕಾಣ್ತು.

ಹಂಗೆ ಆ ತಂವ್ಟ ಹೊಡೆವ್ರು ಇತ್ತಗೆ ನೋಡವ್ರು
ಕುಣಿತ ಇರ ಆ ಐಕ್ಳೂ ಇತ್ತಗೆ ನೋಡ್ತ ಕುಣ್ಯಾವ್

ಅಯ್ ತಗ ಇಸ್ಯವ್ ಇದೇನ ಇದು
ಚೆಂಗುಲ್ಯವ್ ಇತ್ತಗೆ ನೋಡದು
ಮನ ಮುಂದ ಬಂದು ಕುಣ್ಯಾದು
ನಂಗ ಆ ತಂವ್ಟ ಬಡ್ತ, ಗಳ್ಳಾಕಾ ಆ ಐಕ್ಳ ಸದ್ಗ

ತಲ ಚಿಟ್ಟಿಡಿತ ಸಿಟ್ಬಂದು ಕಣ್ಗ ಉರಿ ಹತ್ಕತು.

ಬಿಸ್ಲು ಏರ್ತಿತ್ತು ಚುರುಚುರು ಸುಡ್ತಿತ್ತು
ಜನ ಮಾರ್ನಮಿ ಹಬ್ಬ ಮಾಡ್ತ
ಕುಡ್ದು ತಿಂದು ವಾಲಾಡ್ತ ಇತ್ತು
ಆ ಆಳು ಆ ಆಳ್ನೆಡ್ತಿ ಬಂದು ಉಸ್ಸಂತ
ಜಗುಲಿಗ ತಿಕ ಊರಿ ಕಂಬ ಒರುಗುದ್ರು

ಅಲ್ಲಾ, ಬಾಡು ಬಳ್ಳ ತಿನ್ನವತ್ಲಿ
ಇದ್ಯಾಕ ಇಲ್ಬಂದು ಕುಂತ್ರು ಇವ್ರು
ಕೇಮಿ ಇಲ್ವ ಇವುರ್ಗ ಅನ್ಕಂಡಿ

ನಾಳ ಜಂಬು ಸವಾರಿ ಅದ-

ಆ ಜಂಬೂ ಸವಾರಿ‌ ಕತ ಕೇಳ್ಬುಟ್ರಾ..
ನರ್ಸತ್ತವ್ನೂ
ಎದ್ದು ಬಿದ್ದು
ನೋಡ್ಬೇಕಲ ಅನ್ತ
ಕುಣಿತಾ ನಲಿತಾ ಓಡ್ತನ ಕಣ..

ಈ ಅಯ್ನೋರು ನನ್ನ ಮೆಟ್ಟುದ್ಮೇಲ
ಹೋಗ್ದೆ ಇರ ವರುಸ್ವೇ ಇಲ್ಲ
ಅದ್ಕು ಮೊದುಲ್ಗ ಚಂದ್ರವ್ವೋರ್ ಜೊತ್ಗ
ಕದ್ದು ಮುಚ್ಚಿ ಹೋಯ್ತಿದ್ರಂತ
ಆದ್ರ ಆ ದೇವ್ರ್ ಸಾಕ್ಷ್ಯಾಗಿ ಕಟ್ಕಂಡ
ಆ ದೇವಮ್ಮೋರ್ ಜೊತ್ಗಾಗ್ಲಿ
ಆ ನೀಲವ್ವೋರ್ ಜೊತ್ಗಾಗ್ಲಿ
ಆ ಜಂಬೂ ಸವಾರಿ ನೋಡಕ
ನಗನಗ್ತ ಹೋದದ ಕಾಣಿ ಅನ್ತ
ಆ ಪಂಚ ಅಂಚು
ಸಿಡ್ಕಿ ಸಿಡ್ಕಿ ಹೇಳ್ತಿದ್ದು ಗೆಪ್ತಿಲದ

ಆ ನನ್ ಕಾಲಯ್ಯ ನನ್ನ ಮಾಡಿ
ಈ ಅಯ್ನೋರ್ ಕಾಲ್ಗ ಮೆಟ್ಟುಸ್ದಾಗ
ನಾ ಗಿರುಕ್ಕು ಗಿರಿಕ್ಕು ಸದ್ದು ಮಾಡ್ತ
ಈ ಅಯ್ನೋರೂ ನನ್ ಸದ್ಗ ಬೀಗಿ
ಆ ವರುಸ್ವೇ ಜಂಬೂ ಸವಾರಿ ನೋಡಕೋದ್ರು
ನಂಗ ಆ ಜಾಗ ಆ ಊರು ಹೊಸ್ದು
ಅರೆ ನೋಡ್ತಾ ನೋಡ್ತಾ ನನ್ ಕಣ್ಗ
ರಂಗು ಬಳ್ಕಂಡಗಾಯ್ತು
ಸೂರ್ಯ ಪಡ್ಲಾಗಿ ಮುಳ್ಗವತ್ಲಿ
ಪುಟ್ಲೈಟು ಪಟ್ಕಪಟ್ಕ ಅನ್ತ ಹತ್ಗಂಡು
ಆ ಬೆಳುಕ್ಲಿ ಅರಮನ ಬೆಳುಗ್ತಿತ್ತು
ಆ ಬೆಳ್ಕ ನೋಡ್ತ ನೋಡ್ತ
ನನ್ ಮೈ ಜುಮ್ಮನ್ನದು.
ಅಲ್ಲಿ ಸಭಾ ಮ್ಯಾಲ
ಪದ ಹಾಡವ್ರು
ನಕ್ಲಿ ಮಾಡವ್ರು
ಏನೇನ ಮಾಡವ್ರು
ಹಂಗೆ ಕತ ಹೇಳವ್ರೂ ಬಂದ್ರು..

-ಆ ಕತ ಒಳ್ಗ ಈ ಜಂಬೂ ಸವಾರಿನೂ ಬಂತು..

ಒಂದಾನೊಂದು ಕಾಲ್ವಂತ
ಜಾಂಬುವಂತುನೇ ಆ ಕಾಲುಕ್ಕೆಲ್ಲ
ರಾಜಾಮಾರಾಜ ಆಗಿದ್ನಂತ.
ಜಾಂಬುವತಿನೇ ರಾಣಿಮಾರಾಣಿ ಆಗಿದ್ಲಂತ
ಅವ್ರು ಈ ಭೂಮ್ತಾಯಿನ ಹಡುದ್ರಂತ
ಹಡುದ್ ಭೂಮ್ತಾಯ್ಗ ಕಂಟ್ಕ ಬಂತಂತಾ
ಆ ಕಂಟ್ಕ ಕಳಿಯಕ
ತಮ್ಮುನ್ನೇ ಯುಗುಪೂರ್ತಿ ತೇದ್ರಂತ
ಮೊದುಲ್ಗ ಈ ಭೂಮ್ತಾಯಿ
ತೆಳ್ಗ ಅರಿಕಳ ತಂಬಿಟ್ಟಿದ್ದಂಗ ಇತ್ತಂತ
ಕೈಗು ಸಿಗ್ದು ಬಾಯ್ಗು ಸಿಗ್ದು ಲೊಳಲೊಳ ಅಂತಿತಂತ
ಆಗ ಲೋಕ್ ಲೋಕನು ಎಚ್ರ ಆಗತರ
ತಪಸ್ಸು ಮಾಡುದ್ ಪಲುಕ್ಕ ಬೆಳ್ಕು ಬೆಳುಗ್ತಂತ
ಆಗ ಲೋಕ್ ಲೋಕನೇ ಅವ್ರ್ ಮುಂದ ನೆರಿತಂತ
ಕಾಲ್ ಕಾಲುಕ್ಕು ನಿಮ್ ಸವಾರಿ ನಡಿತುದ ಅಂತ
ದೇವಾನ್ ದೇವ್ತಿ ಅವ್ರ್ ಮ್ಯಾಕ್ಕ
ಬ್ರಹ್ಮಾಂಡದ ಮ್ಯಾಲೆಲ್ಲ ಬೆಳ್ದ
ಹೂವ್ತಂದು ಚೆಲ್ಲಿ ಕೊಂಡಾಡ್ತ ಹರುಸ್ತಂತ
ಆಗಿಂದ
ಈ ಭೂಮ್ತಾಯಿ ಬೆಳಿತಾ ಬಂದ್ಲಂತ
ಆ ನೆಪ್ಗ
ಆ ಜಾಂಬವತಿನೂ
ಆ ಜಾಂಬವಂತನೂ
ಆ ಅವ್ರ ಕುಲುದ್ಯಾವ್ರು
ಆ ಜಾಂಬೂ ಮರದ ಬುಡುಕ್ಕ ಪೂಜ ಸಲ್ಸಿ
ಈ ಭೂಮ್ತಾಯಿ ಕಾವುಲ್ಗ
ಬಂಗಾರದ ದಿರ್ಸಾ ದರುಸ್ಕಂಡು
ಆ ತನ್ನ ಕಳ್ಳುಬಳ್ಳಿ ಸುತ್ತ
ಒಂದ್ಸಲ ಕುದುರ ಮ್ಯಾಲುವ
ಇನ್ನೊಂದ್ಸಲ ಆನ ಮ್ಯಾಲುವ
ಸವಾರಿ ಹೊಂಟ್ರಂತ
ಆ ಸವಾರಿ ಈಗ್ಲೂ ನಿಂತೇ ಇಲ್ವಂತ
ಆ ಸವಾರಿ ಇಂದ್ಗೂ ತಿರುಗ್ತ ಇರವತ್ಗೆ
ನಾವೆಲ್ಲ ನರುಮನುಸ್ರು ಉಸುರಾಡ್ತ
ಜೀವ ಉಳಿಸ್ಕಂಡು ಲೋಕ ನೋಡಂಗಾಯ್ತಂತ
ಆಮ್ಯಾಲ ಈ ಭೂಮ್ತಾಯಿ ಮ್ಯಾಲೆಲ್ಲ
ದಂಡುದಾಳ್ಗಳು ಪಾಳೆಗಾರರು ಕಳ್ರುಸುಳ್ರು ದಗಾಕೋರರು ರಾಜಮಾರಾಜ್ರು ಹುಟ್ಕಂಡು
ದೇಶ ಆಳವತ್ಲಿ ಅಕ್ಕಪಕ್ಕ ಸಾಮ್ರಾಜ್ಯ ಗೆಲ್ಲತರ ಗೆದ್ಕಂಡು ಆ ಗೆದ್ದ ಮಜುಕ್ಕು
ರಾಜಭಾರ ಮಾಡಕ ಅನ್ತ
ದಿರ್ಸಾಕಂಡು ಮೆರುಣ್ಗ ಮಾಡಕ
ಶುರು ಮಾಡುದ್ರಂತ
ಅದು ಬತ್ತಾಬತ್ತಾ
ಈ ಜಂಬೂ ಸವಾರಿ ಹಿಂಗ ಆಯ್ತಂತ

ಹಾಗಾಗಿ ನಾಳ್ಗ ಆ ಮೈಸೂರ್ ಮಾರಾಜ್ರು ದಿರ್ಸಾಕಂಡು ಆನಮ್ಯಾಲ ಮೆರುಣ್ಗ ಹೋಗದು
ತಲತಲಮಾರಿದು ನನ್ ಒಡಿಯ ಪೂರ್ವಿಕನದು
ಕಾಲ್ ಕಾಲುಕ್ಕು ನಿಲ್ದೆ ಇರ
ಈ ಜಂಬೂ ಸವಾರಿನ ನೋಡಕ
ಈ ಎರುಡು ಕಣ್ಣೂ ಸಾಲ್ದು

ಆಗ ಆ ಮಾರ ಆ ಮಾರನ ಹೆಡ್ತಿ
ತಲಮ್ಯಾಲ ಹೆಡ್ಗ ವತ್ಗಂಡು
ಎಲ ಅಡಕ ಅಗಿತಾ ಉಗಿತಾ
ಕೊಚಕೊಚ ಕೊಚ್ಗುಟ್ಗ ಮಾತಾಡ್ತ
ಪುರಪುರುನ ಹೋಗದು ಕಾಣ್ತು
ಆ ಕೊಚ್ಗುಟ್ಟ ಮಾತು ಕೇಳ್ತ ಏನಾ
ಆ ಆಳುವ ಆ ಆಳ್ನೆಡ್ತುವ ಅವ್ರ ಕೂಕ್ಕಂಡ್ರು
ಆ ಕೂಗ್ಗ
ಏನಪ್ಪೊ ಬಂದಿ ಇರಪ್ಪೊ ಅನ್ತ
ಪಿಚ್ಕಪಿಚ್ಕ ಎಲ ಅಡಕ ಅಗಿತಾ ಇಗಿತಾ
ಇಬ್ರೂ ಇತ್ತಗೆ ಹೆಜ್ಜ ತಿರುಗ್ಸುದ್ರು..

-ಎಂ.ಜವರಾಜ್


ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x