-೫೯-
ರಾತ್ರ ಹತ್ತಾಗಿತ್ತೇನೋ
ಊರಲ್ಲಿ ಎದ್ದಿರ ಗಲಾಟಿ
ಈ ಅಯ್ನೋರ್ ಗಮನುಕ್ಕ ಬಂತು
ಈ ಗಲಾಟಿ ಯಾಕ ಅನ್ತ
ಅಯ್ನೋರ್ ತಲ ಕೊರಿತಿತ್ತೇನಾ
ಅಸ್ಟೊತ್ಗ ಕುಲೊಸ್ತರು ಬಂದ್ರು
ಈ ಅಯ್ನೋರು ಜಗುಲಿ ಅಂಚ್ಗ ಕುಂತಿದ್ರು
‘ಅಯ್ನೋಅ ನೀವು ಚೇರ್ಮನ್ ಆದ್ರಿ
ಆದ್ರ ಊರ್ಲಿ ಪುಂಡೈಕ ಹೆಚ್ಚವ
ಊರ್ಲಿ ಚನೈನಬ್ಬ ಮಾಡ್ದಾಗ
ಇದ್ದ ಒಗ್ಗಟ್ಟು ಹೊಂದಾವಣಿ
ಈಗ ಕಾಣ್ದು
ಒಂದಲ್ಲ ಒಂದು ಗಲಾಟಿ
ಕುಲ ಸೇರ್ಸಿ
ಏನಾರ ಬಿಗಿ ಭದ್ರ ಮಾಡ್ಬೇಕಲ್ಲಾ..’
ಅನ್ತ ಕುಲೊಸ್ತರು ವರದಿ ಒಪ್ಸುದ್ರು
ಈ ಅಯ್ನೋರು
‘ಸುಮ್ ಸುಮ್ನೆ ಈ ಗಲಾಟಿ ಯಾಕ..
ಏನನ್ತ ಕುಲ ಮಾಡ್ದರಿ
ಯಾರ್ ಮ್ಯಾಲ ಅನ್ತ ಹೇಳ್ದರಿ’ ಅನ್ತ ಕೇಳುದ್ರು
‘ಅಯ್ನೋರಾ ಕಾಲುನ್ ಮನ್ಗ ಬಿಂಕಿ ಬಿದ್ಮೇಲ
ಆ ಕಾಲ್ನು ಆ ಕಾಲ್ನೆಡ್ತಿನು ಸತ್ಮೇಲ ಇದೆಲ್ಲ..
ಊರ್ಲಿ ಕೆಳಗಲ ಕೇರಿ ಮೇಗುಲ್ ಕೇರಿ
ನೆಮ್ದಿ ಕಳ್ಕಂಡು ಜೀವ ಕೈಲಿಡ್ಕಂಡು ಅವ..
ರಾತ್ರನಾಗ ಮನ್ಗ ಕಲ್ಬೀಳದು
ಹೊಲ್ಕೋದ್ರ ಮರ ಅಳ್ಳಾಡದು
ಒಪ್ಪತ್ತು ಒಬ್ರೆ ಇಬ್ರೆ ತಿರ್ಗಾಡಗಿಲ್ಲ
ಈ ಪೋಲೀಸ್ರಂತು ಊರ್ಗ ಎಡ್ತಾಕ್ತ ಅವ್ರ…’
ಅನ್ತ
ಕುಲೊಸ್ತರು ಅಳುಕ್ತಾ ಅಳುಕ್ತಾ ಹೇಳುದ್ರು.
ಈ ಅಯ್ನೋರು,
‘ಗಾಳಿ ಗಾಚಾರ ಏನಾರ ಆಗಿದ್ದಾ
ಕಂಡಾಯ ಗಿಂಡಾಯ ಎತ್ಸಿ
ಊರ್ಲಿ ಒಂದ್ ಸ್ಯಾವ ಮಾಡ್ಸಂವ
ಖರ್ಚು ಪರ್ಚು ನಾ ನೋಡ್ತಿನಿ..’
ಅಂದ್ರು.
ಈ ಕುಲೊಸ್ತರು ಅಯ್ನೋರ್ ಮಾತ್ಗ ಒಪ್ಪಿ
ವಾರ ಒಪ್ಪತ್ತು ಲೆಕ್ಕಚಾರ ಹಾಕ್ತ ಕುಂತ್ರು.
ಸೂರ್ಯ ಮೂಡಿ
ಈ ಅಯ್ನೋರು ತ್ವಾಟುಕ್ಕ ಪಾದ ಬೆಳ್ಸುದ್ರು
ಆ ಆಳು ಅಯ್ನೋರ್ ಜೊತ್ಗ
‘ಅಯ್ನೋರಾ ಮಗುಳ್ದು ಮದ್ವ’
ಅಂದ.
‘ಊ್ಞ.. ಅನ್ತು ನೀನೂ
ಅಳಿನ್ ಪಡಿತಿದೈ ಅನ್ನು
ಪಡಿ ಪಡಿ’
‘ಅಯ್ನೋರಾ ವಪ್ಪಚಾರ ಅನ್ತ
ಏನೇನಾ ಆಯ್ತು ಕೈಲಿ ಕಾಸಿಲ್ಲ’
‘ಕೈಲಿ ಕಾಸಿಲ್ದೆ ಮದ್ವ ಮಾಡಕ ನಿಂತ್ಯಾ’
‘ನೀವೇ ದಿಕ್ಕು ನಂಗ
ನೀವಿರಗ ನಂಗೇನ ಅನ್ನ ದೈರ್ಯದ್ ಮ್ಯಾಲ
ಎಲ್ಲನು ಒಪ್ದಿ ಅಯ್ನೋರಾ’
‘ಊ್ಞ ಬುಡು ನನ್ ನಂಬಿನಿ ಅಂದ್ಮೇಲ
ನಾ ಕೈಬುಟ್ಟಿನಾ…
ಎಲಕ್ಷನ್ಲಿ ನಿ ಇಲ್ದೆ ಇದ್ರ
ಈ ಚೇರ್ಮನ್ ಗಿರಿ ಸಿಕ್ತಿತ್ತಾ..
ರಾತ್ರುಕ ನಿನ್ನೆಡ್ತಿ ಕಳಿಸು ಅದೇನ ನೋಡ್ತಿನಿ’
ಅನ್ತ ಆ ಆಳುನ್ ಮೊಖನೇ ನೋಡ್ತ
‘ಸಂದನಾಗ ಇಲ್ಲಿಗೆ ಬಂದು ಹೋಯ್ತಿನಿ
ಬ್ಯಾಗ್ನೆ ಬತ್ತಿನಿ ತಂದು ಇಟ್ಟಿರು..
ಈಚ್ಗ,
ಒಂದಾ ಎರಡ ಬಾಟ್ಲಿ ಹಾಕ್ನಿಲ್ಲ ಅಂದ್ರ
ನಿದ್ದನೆ ಬರಲ್ಲ’
‘ಅಯ್ನೋರಾ ಯೋಚ್ನ ಮಾಡದ ಬುಡಿ
ಎಲ್ಲ ಕಳ್ಕಂಡ್ರಿ ಈಗ ನೆಮ್ದಿನು ಕಳ್ಕಬ್ಯಾಡಿ’
ಅನ್ತ ಆಳ್ನ ಮಾತು
ಅಯ್ನೋರ್ ಎದಗ ತಲುಪಿ,
‘ಅದು ಬುಡು’ ಅನ್ತ
ನನ್ನ ಬುಟ್ಟು ಕಪಲ ಬಾವಿಗಿಳ್ದು
ಈಜ್ತಾ ಈಜ್ತಾ ಸುಮ್ನ ಹಂಗೆ ತೇಲವ್ರು.
ಈಚೀಚ್ಗ ಕಪಲ ಬಾವಿನು ಪಾಚಿ ಕಟ್ತ
ಸೊಪ್ಪು ಸ್ಯದ ಬೆಳಿತಾ ಇತ್ತು
ಅದ ಸವುರ್ಸಿ ಸವುರ್ಸಿ
ಬಾಯ್ಲಿ ನೀರ ಮುಕ್ಕುಳ್ಸಿ ಉಗಿತಾ
ಮ್ಯಾಕ್ಕೆದ್ದು ಬಂದು
ಆ ಆಳುಂತವು ಪಂಚ ಈಸ್ಕಂಡು,
‘ನೋಡು ಪಾಚಿ ಜಾಸ್ತಿ ಆಗದ
ಸೊಪ್ಪು ಸ್ಯದನು ಬೆಳಿತಾ ಅದ
ನೋಡು ಸಟ್ಗ’ ಅಂದ್ರು
ಆ ಆಳು ಕೈಕಟ್ಟಿ ತಲೆ ಆಡುಸ್ತ
ಕಪಲ ಬಾವಿನ ಬಗ್ಗಿ ನೋಡ್ತಿದ್ದಾಗ
ಈ ಅಯ್ನೋರು ನನ್ನ ಮೆಟ್ಟಿ
ತೆವ್ರಿ ಮ್ಯಾಕ್ಕ ಕಾಲಿಟ್ಟು ನಡುದ್ರು..
ಊರೊಳಗ ತಮ್ಟ ಬಡಿತಾ
‘ಶುಕ್ರೋರ ಕಂಡಾಯ ಸ್ಯಾವ ಅದ
ಮನ ಕ್ವಾಣ ತೊಳ್ದು ಬಟ್ಟಬರಿ ವಕ್ಕರಯ್ಯಾವ್…’
ಅನ್ತ ಬೀದಿ ಬೀದಿಲಿ ಸಾರ ಸದ್ದು ಕೇಳ್ತಿತ್ತು
ಮದ್ಯಾನ ಬಿಸ್ಲು ಬುಟ್ಟು ಬುಟ್ಟು ಬತ್ತಿತ್ತು
ಕಲ್ಬುಟ್ರ ಓಣಿಲಿ ಅಂವ ಬಂದು ಕುಂತಿದ್ದ
ಈ ಅಯ್ನೋರ್ ಕಂಡು,
‘ಅಯ್ನೋರಾ ಅದೇನ ಊರ್ಲಿ ಗಲಾಟಿ
ಎಲ್ಲ ಊರ್ಲು ನಿಮ್ಮೂರ್ದೆ ಮಾತು
ಆ ಪರ್ಶು ಏನಾರ ಮಾಡ್ತ ಇದ್ದನಾ ಅನ್ತ..’
‘ಆದ್ರ ಏನ್ಮಾಡಗಿದ್ದದು ಮಾಡ್ಲಿ’
‘ನಾ ಹೇಳದು ಕೊನ್ಗ ನಿಮ್ ಬುಡ್ಕೆ ಬಂದ್ರಾ..’
ಅಂವ ಆತರ ಅನ್ತಂದ ಮಾತ್ಗ
ಈ ಅಯ್ನೋರು ತಲ ಆಡುಸ್ತ
ಬೀಡಿ ಕಚ್ಚಿ ಹೊಗ ಬುಡ್ತಾ
‘ಇರ್ಬೇದು, ಹಂಗಂತ ಹೆಂಗೇಳದು..
ಮೊದುಲ್ಗ ಕಂಡಾಯ ಸ್ಯಾವ ಮುಗಿಲಿ
ಆಮ್ಯಾಲ ಯೋಚ್ನ ಮಾಡಂವ್’
ಅನ್ತ ಜೋರಾಗಿ ದಮ್ಮೆಳೆದು ಹೊಗ ಬುಟ್ರು..
ಅಂವ ಈ ಅಯ್ನೋರ್ ಹೊಗ ಬುಟ್ಟದ್ನೆ ನೋಡ್ತ
‘ಅಯ್ನೋರಾ, ನಾ ಬತ್ತಿನಿ’ ಅನ್ತ ಮ್ಯಾಕ್ಕೆದ್ದ.
ಅಯ್ನೋರು ಅಂವ ಹೋಗದ್ನೆ ನೋಡ್ತ
ತ್ವಾಟುದ್ ಕಡ ನಡುದ್ರು
ಈ ಅಯ್ನೋರು ತ್ವಾಟುಕ್ ಬಂದಾಗ
ಸಂದ ಆಗಿತ್ತು.
ಆ ಆಳು ಕಳ್ಳಪುರಿ ಕಾರಸ್ಯಾವ್ಗ
ಜೊತ್ಗ ನಾಕ್ ಬಾಟ್ಲು ತಂದಿಟ್ಟಿದ್ದ
ಹಂಗೆ ಒಂದ್ ತಿಗುನ್ ಕಾಯಿ ಒಡ್ದು
ಪುರಿ ಜೊತ್ಗ ಬೆರ್ಸಿದ್ದ
ಈ ಅಯ್ನೋರು ಕುಡಿಯಾಕ ಶುರು ಮಾಡುದ್ರ
ಈ ಆಳು ಬಾಟ್ಲ ಕೊಟ್ಟು ಕೈಕಟ್ಟಿ ನಿಂತು
ಅದು ಇದು ಎತ್ತಿ ಎತ್ತಿ ಕೊಟ್ಟು ಹಂಗೆ ಕೈಕಟ್ತಿದ್ದ
ಎಂದೂ ಇಲ್ದೆದ್ದು ಇವತ್ಯಾಕೋ
ಆ ಆಳ ಹತ್ರುಕ್ಕ ಕರ್ದು ಕೈಕಟ್ಟಿರದ ಕಿತ್ತು
ಆ ಆಳ್ನ ಎಳ್ಕಂಡು
ಕುಂಡುರ್ಸ್ಕಂಡು ಬಾಟ್ಲಿಯ ಎತ್ತುದ್ರು
ಜೊತ್ಗ
‘ಏ ಏನಲೇ ಯಾಕ ಹಂಗೆ ಕುಂತಿದೈ ಊ್ಞ ಎತ್ತು’
ಅನ್ತ ಬಾಟ್ಲಿ ಕೊಟ್ಟು
‘ಹಾಕು ಕೈಯ’ ಅನ್ತ
ಕಳ್ಳಪುರಿ ಕಾರಸ್ಯಾವುಗ್ಗ ಕೈ ಹಾಕ್ಸುದ್ರು.
‘ನೋಡು ನಾ ಚೇರ್ಮನ್ನಾಗ್ಬೇಕಾದ್ರ ನೀನೆ
ನೀನಿಲ್ದೆ ನಾನು ಹಿಂಗಿರ್ತಿದ್ನ…
ನಿಂಗ ಏನ್ಬೇಕು ಕೇಳು..
ಮದ್ವ ಖರ್ಚೆಲ್ಲ ನಂದೆ..’
ಅನ್ತ ಜೋರಾದ್ರು
ಬಾಟ್ಲಿ ಎರಡಾಯ್ತು
ಮೂರ್ನೆದು ಎತ್ತಾಯ್ತು
ಬಾಯಿ ತೊದುಲ್ತ ತೊದುಲ್ತ
‘ಅಂವ ಚೆಂಗುಲಿ ಜೊತ್ಗಿದ್ದು
ಆ ಕಂತಕಟ್ಟ ಮಾಳನ ಹೊಡ್ಕಣ್ಣ
ಆ ಕಾಲ ಆ ಚೆಲ್ವಿ
ನನ್ ಚಂದ್ರಿ ಮಗಿನ ಗುಟ್ಟಾಗಿಟ್ನ
ಆ ಪರ್ಶು ನನ್ ನೀಲುನ್ ಮ್ಯಾಲ ಕಣ್ಮಡ್ಗಿದ್ನ
ಆದ್ರ ನೀನು ನಿಯತ್ತಾಗಿದೈ
ನಿಯತ್ತಾಗಿರ ನಿಂಗ ಇಲ್ಲ ಅನ್ನಕಾದ್ದ…
ತಕ್ಕ ನನ್ ಆಸ್ತಿನೇ ನಿಂದು…’ ಅನ್ತ
ಒಂದೇ ಸಮ ಹೇಳ್ತ ಬಾಟ್ಲ ಏರುಸ್ತ
ಮ್ಯಾಕ್ಕೆದ್ದಾಗ ಗಂಟ ಏಳಾಗಿತ್ತು..
ಈ ಅಯ್ನೋರು ಮನ ಬಾಗ್ಲು ಮುಟ್ದಾಗ
ಆ ಆಳ್ನ ಹೆಡ್ತಿ ಜಗ್ಲಿ ಮ್ಯಾಲ ಕುಂತಿದ್ಲು
ಬೀದಿ ಲೈಟು ಸಣ್ದಾಗಿ ಪಿಣಿಪಿಣಿ ಅನ್ತಿತ್ತು
ಆ ಪಿಣಿಪಿಣಿ ಬೆಳ್ಕು ಬಾಗುಲ್ಗ ಬೀಳ್ತ
ಆ ಆಳ್ನ ಮೊಖದ ಮ್ಯಾಲು ಬಿದ್ದು
ಹೊಳಿತ ಇದ್ಲು
ಈ ಅಯ್ನೋರು ಅವ್ಳ ನೋಡಿ
‘ಏ ಇವ್ಳ ಎಸ್ಟೊತ್ತಾಯ್ತು ಬಂದು..
ನಂಗ ಗೆಪ್ತಿನೆ ಆಗ್ನಿಲ್ಲ..
ಬಾಯ್ಲಿ ವಸಿ
ಬಾಗುಲ್ ತಗ್ದು ಲಾಟಿನಸ್ಸು’
ಅಂದೇಟ್ಗೆ
ಅವ ಬಾಗುಲ್ ತಗ್ದು ಒಳಕ್ಕೋದ್ಲು
ಈಗ ಲಾಟಿನ್ ಬೆಳ್ಕು ಈಚ್ಗ ಕಾಣ್ತು
ಈ ಅಯ್ನೋರು ನನ್ನ ಮೂಲೆಗ್ಬುಟ್ಟು
ಒಳಕ್ಕೋದ್ರು..
ಅವ್ರು ಒಳಕ್ಕೋದಾಗ
ಅವ್ಳು ಈಚ್ಗ ಬಂದ್ಲು
‘ಏ ಇವ್ಳ ಬಾ ಇಲ್ಲಿ ಯಾಕ ಆಚ್ಗೋದ’
ಅನ್ತ ಕರುದ್ರು
ಇವ್ಳು ಒಳಕ್ಕೋದ್ಲು.
ಇಲ್ಲಿ ಈಚ ಕರೆಂಟ್ ಹೋಗಿ
ಬೀದಿ ಲೈಟು ಕೆಡ್ತು
ಕತ್ಲು ಗವ್ವರಾಕಂಡು
ಕಣ್ಣು ಮಂಜಾದಗಾಯ್ತು
ಲಾಟೀನ್ ಬೆಳ್ಕಾದ್ರೂ ಕಾಣುತ್ತ ಅಂದ್ರ
ಅದೂ ಕಾಣ್ದು
ಮನ ಬಾಗ್ಲು ಜಡ್ಕಂಡಿತ್ತು
ಒಳ್ಗ ಗುಸುಗುಸು ಪಿಸಿಪಿಸಿ ಸದ್ದಾಯ್ತಿತ್ತು
‘ಅಯ್ನೋರಾ ನಾ ಆತರ ಅಲ್ಲ ಅಯ್ನೋರಾ..
ಬುಡಿ ಅಯ್ನೋರಾ’
ಅನ್ತ ಅಮಿಕಂಡು
ಮಾತಾಡ ತರ ಕೇಳ್ತು..
‘ನೋಡು ನಾ ಎಲ್ಲ ಹೇಳಿನಿ ನಿನ್ ಗಂಡುನ್ಗ
ನನ್ ಆಸ್ತಿನೆ ನಿಂಗ..
ನಂಗು ಯಾರಿದ್ದರು..
ಈ ಆಸ್ತಿ ಮಡಿಕಂಡು ನಾ ಏನ್ ಮಾಡ್ಲಿ..
ನಿನ್ ಅಂದುಕ್ಕ ಚಂದುಕ್ಕ ಬೆರ್ಗಾಗಿನಿ
ಇವತ್ತು ನಾಳ ಅನ್ತ
ಎರುಡ್ ವರ್ಸ್ದಿಂದ ಕಾದಿದ್ದಿ’
ಅನ್ತ ಗುಸುಗುಸು ಅನ್ನೋದು
ಅಯ್ನೋರ್ ಬಾಯಿಂದ ಬಂತು.
ಈ ಗುಸುಗುಸು ಅನ್ನ ಸಂದಿಲಿ
ಅವ್ಳೂ ಅಳ್ತಿರದು ಕೇಳ್ತಿತ್ತು
ಈ ಹೊತ್ಲೆ ಕರೆಂಟ್ ಬೇರೆ ಹೋಯ್ತು.
ಒಳ್ಗ ಏನಾ ಜೋರಾಗಿ ಸದ್ದಾದಂಗಾಯ್ತು
ಆ ಸದ್ದು ನಿಲ್ದೆ ಸದ್ದಾಯ್ತನೇ ಇತ್ತು.
-೬೦-
‘ಕುಸ್ತಿ ನಡ್ದುದಂತ
ನ್ಯನ್ನ ಮೊನ್ನೆಲ್ಲ ಇದೆ ಮಾತು
ಕೆಮ್ಮಣ್ ಲಾರಿ ಹೋಯ್ತಿತ್ತಂತ
ನಸ್ರುಲ್ಲುನ್ನುಂದು ಲಾರಿ..
ನಸ್ರುಲ್ಲುನ್ ಲಾರಿ ಅಂದ್ಮ್ಯಾಲ
ಕುಸ್ತಿನೆ ಬುಡು
ಅದು ಅನ್ತಿನ್ತ ಕುಸ್ತಿನಲ್ಲ
ಮೂಗ ಬತ್ತನ ಮೂಗ ರುದ್ರುಮೂಗ..
ಅವುನ್ನ ಸೋಲ್ಸ ಗಂಡ್ಸೇ ಇಂದ್ಗೂ ಹುಟ್ಟಿಲ್ಲ
ನೋಡ್ದೆ ಇರಕಾದ್ದ ನಡರಿ..’
ಅನ್ತ ಊರ್ಲಿ ಜನ ಗುಲ್ಲೆಬ್ತು
ಈ ಅಯ್ನೋರು ಆ ಆಳ್ನ ಕಳಿಸಿ
ಅದೇನ ಅನ್ತ ನೋಡು ಅಂದ್ರು
ಆ ಆಳು
ಈ ಅಯ್ನೋರ್ ಮಾತ ಹಿಡ್ಕಂಡು
ಅದೇನ ಗುಲ್ಲೆಬ್ಬಿರದು ಅನ್ತ
ನೋಡಕ ಹೋದಂಗಾಯ್ತು..
ಬಿಸ್ಲು ಹೋಗಿ ಬಂದು ಮಾಡ್ತಿತ್ತು
ಮಳ ಬರಂಗಿತ್ತು
ಆದ್ರ ಇದು ಬರದಿಲ್ಲ ಬುಡು
ಏನಾ ಜನಾ..
ಚ್ಚು ಚ್ಚು ಚ್ಚು ಚ್ಚು..
ಜಗನ್ ಜಾತ್ರ್ಯಾಗಿ ನ್ಯರ್ದಿತ್ತು.
ನಸ್ರುಲ್ಲ ಸಾಹೇಬ್ರ ರೈಸ್ ಮಿಲ್ನ
ಆಚ ಈಚ ತುಂಬಿ ತುಳುಕ್ತಿತ್ತು
ಅಕ್ಕಿ ಮೂಟ ತುಂಬಿರ ಲಾರಿ
ಬತ್ತುದ್ ಮೂಟ ತುಂಬಿರ ಲಾರಿ
ಆಚ್ಗ ಹೋಗವು ಹೋಯ್ತಿದ್ದು
ಈಚ್ಗ ಬರವು ಬತ್ತಿದ್ದು
ಈ ಅಯ್ನೋರು ಕುಸ್ತಿ ನೋಡಕ
ಊರ್ನೇ ಕರ್ಕ ಬಂದು
ರೈಸ್ ಮಿಲ್ನ ಈಚ
ಟಿಕಿಟ್ ತಕ್ಕಳಕ ಅನ್ತ ಆ ಆಳ್ಗ ಹೇಳ್ತಿದ್ರು
ಆಗ ನಸ್ರುಲ್ಲ ಸಾಹೇಬ್ರು ಸ್ಕೂಟ್ರಿಂದ ಇಳ್ದು
‘ಅಯ್ನೋರಾ, ನಮ್ ಚೇರ್ಮೆನ್ರೂ ನೀವೂ
ಇದ್ಯಾಕ ಇಲ್ಲಿದ್ದರಿ.. ಟಿಕಿಟ್ಯಾಕ..
ಬನ್ನಿ ಬನ್ನಿ.. ಎಸ್ಟ್ ಜನಿದ್ದರಿ ಬನ್ನಿ’
ಅಂದ್ರು.
ಈ ಅಯ್ನೋರು ಟರ್ಕಿ ಟವಲ್ಲ ಬಡಿತಾ
ನಸ್ರುಲ್ಲಾ ಸಾಹೇಬ್ರ ಹಿಂದ ನಡಿತಿದ್ರ
ಜೊತುಗ್ ಬಂದಿದ್ದ ಊರುನ್ ಜನ
ಅಯ್ನೋರ್ ಹಿಂದ ದಿದುಗುಟ್ಕ ಬಂದ್ರು
ಮಿಲ್ಲು ಎರಡೆಕ್ರಗಂಟ ಇತ್ತು
ಅಚರಿ ಪಾಸ ಇಚರಿ ಪಾಸ
ಬತ್ತ ಅಕ್ಕಿ ಒಣಾಕಿದ್ರು
ಈ ಅಯ್ನೋರ ನೋಡ್ದೊರು
ನಮಸ್ಕಾರ ಮಾಡಿ ಕುರ್ಚಿ ಹಾಕುದ್ರು
ಕೆಮ್ಮಣ್ಣು ಕೆಂಪ್ ಕೆಂಪ್ಗ ಕಾಣದು
ಅಖಾಡ ನೋಡಕೆ ಒಂದ್ ಚೆಂದಾಗಿತ್ತು
ಅಸ್ಟಗ್ಲುಕ್ಕು ಕೆಂಪ್ಗ ರಂಗುಳುಸ್ತ ಇತ್ತು
ಜನ ಕೂಗವ್ರು ಕೂಗ್ತ ಶಿಳ್ಳ ಹೊಡೆವು ಹೊಡಿತಾ
ಒಂದೊಂದೆ ಜೋಡಿ ಬಂದು ಬಂದು ಹೋಗವು
ಈ ಮದ್ಯ ಕುಂತವು ನಿಂತವು
ರುದ್ರಮೂಗ ರುದ್ರಮೂಗ ರುದ್ರಮೂಗ
ಅನ್ತ ಕುಣಿತಾ ಮೆರಿತಾ
ಕಾಂಪೊಂಡ್ ಏರ್ಕಂಡು ಗಲಕಾಕವು.
ಆದ್ರ ಆ ರುದ್ರುಮೂಗ್ನೇ ಕಾಣಿ
ಈ ಅಯ್ನೋರು ಅತ್ತಗು ಇತ್ತಗು ನೋಡ್ತಿದ್ರು
ರುದ್ರುಮೂಗುನ್ ಪಟ್ಟು ಕಾಣ್ದೆ
ಜನ ಹೊಹೊಹೋ ಅನ್ತಿದ್ರು
ಕಂಬ್ದಲ್ಲಿ ಲೈಟ್ಗಳು ಹತ್ಕಂಡು
ರೊಚ್ಗೆದ್ದ ಜನ ತಳ್ಳಾಡಕ ಶುರು ಮಾಡುದ್ರು
ಹಿಂಗೆ ಆಡ್ತ ಆಡ್ತ
ಕಲ್ಲು ಬೀಳಕ ಶುರು ಮಾಡ್ದು
ಈ ಅಯ್ನೋರು ಮ್ಯಾಕ್ಕೆದ್ದು
ಊರ್ ಜನನೆಲ್ಲ ಒಂದ್ಕಡ ನಿಲ್ಲುಸ್ಕಂಡ್ರು
ಅಲ್ಲಿ ಒಂದ್ಕಡ ಕತ್ಲು ಒಂದ್ಕಡ ಲೈಟ್ಬೆಳ್ಕು
ಆಗ ಒಂದು ಕಾರ್ ಬಂತು
ಆಗ ಜನ ‘ರುದ್ರುಮೂಗುನ್ಗೆ ಜೈ’ ಅಂದ್ರು
ಈ ಅಯ್ನೋರು ಅತ್ತ ಕಡ ದಿಗುಲ್ ಮಾಡುದ್ರು
ಅಲ್ಲಿ ಆ ರುದ್ರುಮೂಗುನ್ ನೋಡಕ
ಕೈ ಹಿಡ್ದು ಕುಲ್ಕಕ ಕಾರ್ ಸುತ್ತ
ಜನ ಮುಲುಮುಲ್ನ ಮುತ್ಕಂಡ್ರು
ಈ ಅಯ್ನೋರು ಹೋಗಿ
ಅದೆ ಜಾಗ್ದಲ್ಲಿ ಕುಂತ್ರು.
ಆಗ ರುದ್ರುಮೂಗ ಕೆಮ್ಮಣ್ಗ ಇಳ್ದ ನೋಡು
ಕೆಮ್ಮಣ್ಗ ಕೈಮುಟ್ಟಿ ಸಣ್ಮಾಡಿ ಸುತ್ತ ನೋಡ್ದ
ಜನ ‘ಹೊಹೊಹೋಯ್’ ಅನ್ತ ಕೂಗುದ್ರು
‘ಆಹಾ ಏನಲ ಮೈಕಟ್ಟು..
ಆಹಾ ಇದ್ರ ಹಿಂಗಿರ್ಬೇಕು ಕಣ..
ಇಂಥ ಗಂಡ ಹೊಡಿಯಕಾದ್ದಾ..
ರುದ್ರುಮೂಗ ಅಂದ್ರ ರುದ್ರುಮೂಗನೇ’
ಅನ್ತ ಜನ ಮಾತಾಡ್ತ
ಕೂಗ್ತ ಶಿಳ್ಳ ಹೊಡಿತಾ
ಚಪ್ಪಾಳ ತಟ್ತ ಗಳ್ಳಾಕ್ತು.
ಕುಸ್ತಿ ಗಂಟ್ಗಟ್ಲ ನಡಿತಾ
ಕುಂತಿರವ್ರು ನಿಂತಿರವ್ರು
ದಿಗ್ಲೆ ಇಲ್ದೆ ನೋಡ್ತ ನೋಡ್ತ
ರುದ್ರುಮೂಗುನ್ ಕೈಯೇ ಮೇಲಾಯ್ತು
ಜನ ಕೂಗ್ತ
ರುದ್ರುಮೂಗುನ್ನ ಮ್ಯಾಕ್ಕೆತ್ತಿ
‘ರುದ್ರುಮೂಗುನ್ಗ ಜೈ’
ಅನ್ನೋ ಗದ್ದಲದಲ್ಲಿ
‘ಅಯ್ಯಯ್ಯಯೋ..ಅಯ್ಯಪ್ಪಾ’
ಅನ್ತ ಈ ಅಯ್ನೋರು ಕಿರುಚ್ತ
ಕುರ್ಚಿಯಿಂದ ಬಿದ್ರು
ಆ ರುದ್ರುಮೂಗುನ್ ಜೈಕಾರ್ದಲ್ಲಿ
ಈ ಅಯ್ನೋರ್ ಕಿರ್ಚಾಟ
ಕೇಳ್ದಾಗಾಗಿ
ಬೆಳ್ಕು ಕತ್ಲೊಳ್ಗ
ಜನ ದಿಕ್ಕಾಪಾಲು ಓಡಾಡ್ತ
ಆ ಓಡಾಡ ಜನ್ಗಳ ಪಾದ್ಗಳು
ಈ ಅಯ್ನೋರ್ ಎದಮ್ಯಾಲೂ
ತುಳಿತಾ ಓಡ್ತಾ ಹೋದಂಗಾಯ್ತು
ಆಗ
ಆ ಆಳು ಓಡೋಡ್ ಬಂದು
ಇತ್ತಗ ಈ ಅಯ್ನೋರಾ ಯಳ್ಕಂಡು
‘ಅಯ್ನೋರಾ ಅಯ್ನೋರಾ ಇದೇನಾಯ್ತು
ಈ ಕತ್ಲೊಳ್ಗ ಎನ್ತ ಕೆಲ್ಸ ಆಯ್ತು’
ಅನ್ತ ಆ ಆಳು
ಅಯ್ನೋರಾ ಈಚ್ಗ ಕರ್ಕ ಬಂದು
‘ಅಯ್ನೋರಾ ಆ ಪರ್ಶುನೇ
ಇಂಗ ಮಾಡುದ್ದು
ಅಂವ ಬಂದಿರದ
ನಿಮ್ಗ ಹೇಳಂವ ಅನ್ನಗಂಟ
ಈ ಕತ್ಲಲಿ ಹಿಂಗ ಮಾಡನ’
ಅನ್ತ ಹೇಳ್ದಾಗ
ಅಯ್ನೋರು ದಂಗಿಡ್ದು ಕುಂತ್ರು…
ಈ ಅಯ್ನೋರು ಇನ್ನೂ ಎದ್ದಿರ್ನಿಲ್ಲ
ಆ ಆಳು ಅಸ್ಟೊತ್ಗೆ ಬಂದು
ಜಗುಲಿ ಮ್ಯಾಲ ಕುಂತಿದ್ನ
ರಾತ್ರ ಏಟು ಬಿದ್ದಿರವತ್ಗ
ತಲಲಿ ರಕ್ತ ಸೋರಿ
ಅಂಗಿ ಪಂಚ ಓಕ್ಳಿ ಆಡ್ದಂಗಿತ್ತು
ಬಲವಾದ ಏಟು
ಈ ಅಯ್ನೋರು ಇನ್ತ ಏಟ
ಇಲ್ಲಿಗಂಟ ಕಂಡಿದ್ರಾ ಏನಾ…
ನಂಗು ಈಚೀಚ್ಗ ನೆಮ್ದಿನೆ ಇರ್ನಿಲ್ಲ
ಮೈಕೈ ಕಿತ್ತು ಈಜ್ಕಂಡಿದ್ದು
ಈ ಅಯ್ನೋರು
ನನ್ನ ಮೆಟ್ಟಿ ಮೆಟ್ಟಿ
ಮೆಟ್ಗ ತಿರ್ಗಾಡ ಮ್ಯಾಲ
ಗ್ಯಾನ್ವಾಗಿದ್ರೆ ಹೊರ್ತು
ನನ್ ಮೈಕೈ ಕಡ
ಗ್ಯಾನನೇ ಮಡುಗ್ದೆ
ಸಿಕ್ ಸಿಕ್ಕುತವ್ ತಿರ್ಗಾಡಿ
ಹಿಂಗ್ಮಾಡುದ್ರು.
ಆದ್ರ…
ಆ ನನ್ ಒಡಿಯ ಕಾಲಯ್ಯ ಇದ್ದಿದ್ರ
ನನ್ನ ತಕ್ಕಂಡೋಗಿ
ಕಿತ್ತೋಗಿರ ನನ್ ಮೈಕೈಗ
ಹದ್ವಾಗಿರ ಚರ್ಮ ಸೇರ್ಸಿ
ಹೊಲ್ಗ ಹಾಕಿ
ಮ್ಯಾಣ ಹಾಕಿ ಅಂಟ್ಸಿ
ಗುದ್ದಿ ಗುದ್ದಿ ಬಣ್ಣ ಕಟ್ಟಿ
ತುಂಡೈಕ್ಳ ತರ ಮಾಡಿ
ಅಯ್ನೋರ್ ಪಾದುಕ್ಕ ಮೆಟ್ಟುಸ್ತಿದ್ರು
ಈಗ ನಾನೇನ್ ಮಾಡ್ಲಿ
ಆ ನನ್ ಒಡಿಯ ಕಾಲಯ್ಯ ಇಲ್ವಲ್ಲೊ
ಮನ್ಗ ಬಿಂಕಿ ಕೊಟ್ಟು ಬೇಯ್ಸುದ್ರಲ್ಲೊ
ಕಿತ್ತೊಗಿರ ನನ್ ಮೈಕೈ ನೋಡವ್ರು ಇಲ್ವಲ್ಲೊ..
ಬಾಗ್ಲು ಕಿರುಗುಟ್ಟ ಸದ್ದು ಕೇಳ್ತು
ಈ ಅಯ್ನೋರು ತಲ ಹಿಂದುಕ್ಕ
ಕೈ ಇಟ್ಗಂಡು ಈಚ್ಗ ಬಂದು
ಕಂಬ ಒರಿಂಡು ಕುಂತ್ಕಂಡ್ರು
ಆ ಆಳು ಮ್ಯಾಕ್ಕೆದ್ದು ಕೈಕಟ್ಟಿ
‘ಅಯ್ನೋರಾ ಹೆಂಗಿದ್ದರಿ..’
‘ನಾ ಹಂಗಿರ್ಲಿ ನೀ ಕೈಬುಟ್ಟು ನಿಂತ್ಗ’
ಅನ್ತ ಅಂದ್ಬುಟ್ಟು
‘ಏನೂ ಇಲ್ಲ ನಂಗೇನಾಗಿದ್ದು
ಒಂದೇಡಾಳ್ ಕರ್ಕ ಬಂದು
ಈ ಸಂದಿಗ್ವಾಡ ಹಾಕ್ಸು
ಹಂಗೆ ತೊಲ ಕಂಬನು ಎತ್ರುಸಿ ಕುಂಡ್ಸು
ಲೈಟಾಪಿಸ್ಗ ಹೋಗ್ಬತ್ತಿನಿ
ಕರೆಂಟ್ ಹಾಕ್ಸವ ಅನ್ತ’ ಅಂದ್ರು.
ಅದ್ಕ ಆ ಆಳು ನಗ್ತಾ
‘ಇದೇನ ಅಯ್ನೋರಾ
ಎಲ್ಲ ಇದ್ದಾಗ ಬುಟ್ಟು ಈಗ ಲೈಟು..’
‘ಏಯ್ ಬಂಚೊತ್ ಈಗೇನಾ..
ನಾನು ಈಗ ಚೇಮೇನು..
ಚೇರ್ಮೇನ್ ಮನಲಿ ಲೈಟಿಲ್ಲ ಅಂದ್ರ
ನೋಡವ್ರು ನಗಲ್ವ ಸುವ್ವರ್..ಬಂಚೊತ್’
ಅನ್ತ ರೇಗುದ್ರು
ಆದ್ರ ಆ ಆಳು
ಅಯ್ನೋರ್ ಮಾತ ಆಕಡ ಬಿಸಾಡಿ
ಇನ್ನು ನಗ್ತಾನೆ ಇದ್ದ.
ಈ ಅಯ್ನೋರು
‘ಹೋಗಲೇ ಬಂಚೊತ್’ ಅನ್ತ ಉಗುತ್ರು
ಆದ್ರು ಆ ಆಳು
‘ಆಯ್ತು ಅಯ್ನೋರಾ’ ಅನ್ತಾನೇ
ನಗ್ತ ನಗ್ತ ಮೋರಿ ದಾಟಿ
ಬೀದಿಗುಂಟ ನಡಿತಾ ಹೋಗ್ತ ಇರದ
ಈ ಅಯ್ನೋರು ನೋಡ್ತ
ಹಂಗೆ ನನ್ ಕಡ ಮೊಖ ಮಾಡುದ್ರು..
–ಎಂ.ಜವರಾಜ್
ಮುಂದುವರಿಯುವುದು..