ಮೆಟ್ಟು ಹೇಳಿದ ಕಥಾ ಪ್ರಸಂಗ ಒಂದು ನೀಳ್ಗಾವ್ಯ (ಭಾಗ 57 & 58): ಎಂ. ಜವರಾಜ್

-೫೭-
ತಿಥಿ ಆಗಿ ತಿಂಗ್ಳಾಯ್ತು
ಈ ಅಯ್ನೋರು ಅಂದ್ಕೊಂಡಂತೆ
ಪಂಚಾಯ್ತಿ ಚೇರ್ಮನ್ರು ಆದ್ರು
ಈ ನೆಪ ಮುಂದಿಟ್ಕಂಡು
ಸುತ್ಮುತ್ಲ ಮುಂದಾಳ್ನೆಲ್ಲ
ತ್ವಾಟ್ಗ ಬರೇಳ್ಕಂಡಿದ್ರು

ರಾತ್ರ ಆಗಿತ್ತು
ಆ ಆಳು ಎಲ್ಲ
ಯವಸ್ತಿ ಮಾಡಿದ್ನ
ಎತ್ತಗ ತಿರಿಕಂಡ್ರು ಬಾಡೆ
ಬಾಡುನ್ ಗಮಲೆ
ಯಾರ್ ಕೈಲ್ನೋಡು ಹೆಂಡುದ್ ಬಾಟ್ಲೆ
ಹೆಂಡುದ್ ವಾಸ್ನೆನೆ

ಈಗ ಪಂಚಾಯ್ತಿ ಆಳ್ತನ ಎಲ್ಲ
ಈ ಅಯ್ನೋರ್ ಕೈಲೆ

ಆಗ ಆ ಚೆಂಗುಲಿ
ಸೋದುರ್ ಮಾವ ಬಂದ ಅನ್ಸುತ್ತ
ಈ ಅಯ್ನೋರು
‘ಹ್ಞು ಏನಾ ಇಲ್ಲಿಗಂಟ ಬಂದಿದೈ’ ಅಂದ್ರು
‘ಅಯ್ನೋರಾ ಕೇಸು ಏನಾಯ್ತು’
‘ನೀನು ಮೈಸೂರ್ ಸಿಟಿಲಿರಂವ
ಕೋರ್ಟು ಲಾಯಿರಿ
ಕಾನೂನ್ ಗೊತ್ತಿರಂವ
ದುಡ್ಡುಕಾಸು ತುಂಬಿರಂವ
ನೀನ್ತಾನೆ ಕಂಪ್ಲೆಂಟ ಕೊಡ್ಸಿ
ಆ ಪರ್ಶುನ ಎಳಿಸ್ದಂವ
ಕಾಲ್ನು ಕಾಲ್ನೆಡ್ತಿನು ಗಲಾಟಿ ಮಾಡಕ
ರಂಪ ರಾದ್ದಾಂತುಕ್ಕ ಕಾರ್ಣ ಆದಂವ
ಈಗ ಕೇಸು ಏನಾಯ್ತು ಅಂದ್ರ..
ನನ್ನೂರ್ಗ ಬಂದು
ರಾಜ್ಕೀಯ ಮಾಡಕ
ನೀ ಯಾರಲೇ ಬಂಚೊತ್’ ಅನ್ತ ಉರುದ್ರು.
ಈ ಅಯ್ನೋರ್ ಮಾತ್ಗ
ಆ ಚೆಂಗುಲಿ ಸೋದುರ್ ಮಾವ
ಗಡಗಡ್ನ ನಡುಗ್ತ
ಬಾಯ ಮುಚ್ಕಂಡು ನಿತ್ಕಂಡ್ನ.
ಆಗ ಹುಣ್ಸೂರ್ ಮುಂದಾಳು
‘ಅಯ್ನೋರಾ ಸತ್ತೋರು ಬಂದರಾ
ಅದೇನ ತೀರ್ಮಾನ ಮಾಡ್ಸಿ’
‘ಮಾಡ್ತಿನಿ ಮಾಡ್ದೆ ಬುಟ್ಟನಾ‌..
ಒಂದ್ ಹುಲ್ಕಡ್ಡಿ ಅಳ್ಳಾಡಕು
ನನ್ನೇ ಕೇಳ್ಬೇಕು ಅಂತಾದ್ರಲ್ಲಿ
ಆ ನನ್ ಕಂತಕಟ್ಟ ಮಾಳನ
ಆ ಚೆಂಗುಲಿ ಎಗುರುಸ್ದ‌‌…
ಅದ್ಗೊತ್ತಾ ನಿಮ್ಗ…’
ಅಂದ ಅಯ್ನೋರ್ ಮಾತ್ಗ
‘ಅಯ್ನೋರಾ ಇದು ನಂಗ ಗೊತ್ತಿಲ್ಲ
ಎಲ್ಲ ಪತ್ರನು ಆ ಶೇಕ್ದಾರುನ್ತವೆ ಅವ
ಚೆಂಗುಲಿಗು ಅದ್ಕು ಸಂಬಂದ್ವೆ ಇಲ್ಲ
ಕೇಳಂವು ಅಂದ್ರ
ಅಂವ ಕೊಲ ಆಗನ’ ಅನ್ತ
ಆ ಸೋದುರ್ ಮಾವ ಪಟ್ಟಂತ ಅಂದ.

ಈ ಅಯ್ನೋರು ಆ ಮಾತ್ಗ ರೊಚ್ಗೆದ್ದು
‘ಅಂವ ಕೊಲ ಆಗನ ಅನ್ತ
ನಿಂಗ್ಯಂಗ್ ಗೊತ್ತು..
ನೀ ನೋಡಿದಯ…
ಏನ ಆಡ ಮಾತು…
ನೀನೆ ಏನ ಮಾಡಿ
ಆ ಪರ್ಶು ಮ್ಯಾಲ
ಬರತರ ಮಾಡಿರಂಗದ..’
ಅನ್ತ ಕೆಕ್ಕುರ್ಸ್ಕಂಡು ನೋಡ್ತ ಅಂದ್ರು.

ಈ ಅಯ್ನೋರ ಮಾತು ಕೇಳಿ
ಆ ಚೆಂಗುಲಿ ಸೋದುರ್ ಮಾವ
ನಡುಗ್ತ ತೊದುಲ್ತ ನಿಂತ್ಕಂಡದ
ಆ ರಾತ್ರ ಕುಡಿತಾ ತಿಂತಾ
ನಿಂತಿರೊರೆಲ್ಲರ್ಗು ನಶ ಇಳ್ದಂಗಾಗಿ
ನೋಡ್ ನೋಡ್ತಿದ್ದಂಗೆ
ಆ ಚೆಂಗುಲಿ ಸೋದುರ್ ಮಾವ
ಆ ಕತ್ಲೊಳಗ ನಿಧಾನುಕ್ಕ ಕಾಲೂರ್ತ
ತೆವ್ರಿ ಮ್ಯಾಲ ನಡಿತಾ ಮರೆಯಾದ್ದ
ಈ ಅಯ್ನೋರು ವಾರ್ಗಣ್ಲಿ ನೋಡ್ತ
ಆ ಆಳ್ ಕೈಲಿದ್ದ ಹೆಂಡುದ್ ಬಾಟ್ಲ
ಕಿತ್ಕಂಡು ಗಟಗಟನೆ ಕುಡಿತಾ
ಎಲ್ರುನು ನೋಡ್ತಾ,
‘ಕೇಸನ್ತ ಕೇಸು ಲೌಡೆ ಬಂಚೊತ್’
ಅನ್ತ ಇನ್ನೊಂದ್ ಬಾಟ್ಲಿ ಎತ್ಕಂಡ್ರು.


ತಾಲ್ಲೊಕ್ಕಚೇರಿ ಕಾಂಪೋಡ್ ಗೇಟ್ತವ
ಶೇಕ್ದಾರ್ ನಿಂತಿದ್ರು
ಈ ಅಯ್ನೋರು ಆ ಶೇಕ್ದಾರ್ ನೋಡಿ
ಅಲ್ಲಿಗೇ ಪಾದ ಬೆಳ್ಸುದ್ರು
ಆ ಶೇಕ್ದಾರ ಈ ಅಯ್ನೋರ್ ನೋಡ್ತಿದ್ದಂಗೆ
‘ಅಯ್ನೋರಾ ಚೇರ್ಮನಾದ್ರ್ಯನ್ತ
ನಮ್ಕಡನು ನೋಡಿ ಕಣ್ಬುಟ್ಟು’ ಅಂದ್ರು.
‘ಸಾಯೇಬ್ರ ನಿಮ್ಗಿನ್ತ ಹೆಚ್ಚಾ ಬನ್ನಿ’ ಅನ್ತ
ಸಾಬ್ರೊಟುಲ್ಕಡ ನಡಿತಾ
ಕಂತಕಟ್ಟ ಮಾಳುದ್ ಸುದ್ದಿನ ತಗುದ್ರು…


ಈ ಅಯ್ನೋರು
ಸಾಬ್ರೋಟುಲ್ಗ ಬಂದು ಗಂಟ್ಯಾಯ್ತು.
ಆ ಶೇಕ್ದಾರು
‘ಸೈಕಲ್ ಪಂಚರ್ ಹಾಕುಸ್ಕ ಬತ್ತಿನಿ’
ಅನ್ತ ಹೋದವ್ರು ಪತ್ತೆನೆ ಇಲ್ಲ
‘ಕರೀಂ ಸಾಯೇಬ್ರಾ ಈ ಶೇಕ್ದಾರ ಹಿಂಗೆನಾ’
ಅನ್ತ ಅಯ್ನೋರ್ ಕೇಳ್ದ ಮಾತ್ಗ
‘ಅಯ್ನೋರಾ ಅಂವ ಸುವ್ವರ್
ಅಂವ ನಂಬಿ ನೀವೇನು ಯವರ ಮಾಡ್ಬೇಡಿ
ನಂಬ್ದೋರ್ ಕತ್ಕುಯ್ಯ ಜನ ಅಂವ’ ಅನ್ತ ಅಂದ.

ಈ ಅಯ್ನೋರು ಚಿಂತ ಮಾಡ್ತ
ಟಿ ಕುಡಿತಾ ಬೀಡಿ ಹಚ್ಚಿ
ದಮ್ಮೆಳಿತಾ ಹೊಗ ಬುಡ್ತ ಕುಂತ್ರು.


ಈ ಅಯ್ನೋರು
ರಾತ್ರ ಮನ ಹೊಸ್ಲು ಮೆಟ್ದಾಗ
ಈ ದೊಡ್ಡವ್ವ ಎಲ ಅಡ್ಕ ಹಾಕತ
ಕಂಬ ಒರಿಕ ಕುಂತಿದ್ದ.
ಈ ಅಯ್ನೋರ್ ನೋಡ್ತಿದ್ದಂಗೆ
‘ಕುಸೈ ಯಾಕ ಇಸ್ಟೊತ್ತು
ಹೊಟ್ಗ ಏನಾರ ತಿಂದ್ಯ’
‘ಯಾಕ ದೊಡ್ಡವ್ವ’
ಕೇಳ್ದಿ ಕುಂತ್ಕ..’
ಅನ್ತ ಕುಂಡುಸ್ಬುಟ್ಟು
‘ಈಗ ಈ ಮನ್ಗ ದಿಕ್ಕಿಲ್ಲ
ನೀನು ಏನ್ ಮಾಡುದ್ರ ಏನ್ ಸುಕ
ಇರಗಂಟ ತಿನ್ಕ ಉಣ್ಬೇದ ಹೊರ್ತು
ಇನ್ನೇನ್ ಮಾಡಗಿದ್ದೂ…
ಅದ್ಕ ನಾ ಮಾತಾಡಿನಿ
ಆ ನೀಲುನ್ ತಂಗ ಅವ್ಳಲ್ಲ
ಅವ್ಳ್ ಮಾತು ಅಸ್ಟೆ..
ವರ್ಸ ತುಂಬದ್ರೊಳ್ಗ
ಮನ ತುಂಬುಸ್ಕ’ ಅನ್ತ ಅಂದ್ಲು

ಈ ಅಯ್ನೋರು ಈ ದೊಡ್ಡವ್ವನ ಮಾತ್ಗ
ಏನೂ ಮಾತಾಡ್ದೆ ಕಾಲ ಒದುರಿ ಒಳಕ್ಕೊದ್ರು
ಅವ್ರು ಒದುರುದ್ ರಬುಸುಕ್ಕ
ನಾ ಮೂಲ ಸೇರ್ದಿ
ಈ ದೊಡ್ಡವ್ವ ಕ್ಯಾಣಾಡ್ಕಂಡು
ಗೊಣಗುಟ್ತ ಸಂದಿದಿಕ್ಕ ಹೋದಾಗ
ಹಿಂಡು ನಾಯ್ಗಳು ಬೊಗುಳ್ತ
ಗಳ್ಳಾಕ್ತ ದಿದುಗುಟ್ಕಂಡು ಓಡ್ದು ಓಡ್ದು ಓಡ್ದು
ಬೀದಿ ದೂಳು ಮ್ಯಾಕ್ಕೆದ್ದು ತುಂಬತರ ಓಡ್ದು


-೫೮-
ಈಚೀಚ್ಗ ಕುಡ್ತ ಕುಡ್ತ ಕುಡ್ತ
ಬರೀ ಕುಡ್ತ ಈ ಅಯ್ನೋರ್ದು

ಈಗ್ಗ ಆರೇಳ್ ತಿಂಗ್ಳಿಂದ
ಪೋಲೀಸ್ರು ಊರ್ಗ ಬರದು
ಮಾಮೂಲಾಗಿತ್ತು
ಈ ಪರ್ಶು ಜೈಲಿಂದ ತಪ್ಪುಸ್ಕಂಡು
ಆ ಪೋಲೀಸ್ರಿಗೆ
ದಾರಿ ತಪ್ಪಸ್ತ ಇರದು ನಡ್ದಿತ್ತು

ಈ ದೊಡ್ಡವ್ವ ಸಾಯಗಂಟ
ಈ ಅಯ್ನೋರ್ಗ ಒಂದ್ಬಲ ಇತ್ತು
ಈ ದೊಡ್ಡವ್ವ ಮೊಬ್ಗೆ ಎದ್ದು
ಮೂತ್ರುಸಕ ಅನ್ತ ಹೋಗಿ
ಸಂದಿತವು ಇರ ಕಲ್ಲು ಎಡ್ರಿ ಬಿದ್ದದೆ ತಡ
ಮಾತ ಆಡ್ನೇ ಇಲ್ಲ
ಆ ಮಾತ್ ನಿಂತು
ಇಂದ್ಗ ವರುಸ್ವೆ ಆಯ್ತು

ಈಗ
ಆ ದೊಡ್ಡವ್ವುನ್ ನೆನ್ಕಂಡು
ಕುಡುದ್ದೇ ಕುಡುದ್ದು ಬರೀ ಕುಡ್ತ
ಆ ಆಳ್ ಮುಂದ
ಆ ದೊಡ್ಡವ್ವುನ್ ಗುಣ್ಗಾನ
ಮಾಡದೇ ಆಯ್ತು ಈ ಅಯ್ನೋರ್ಗ

ಆ ಆಳು
‘ಅಯ್ನೋರ ಸಂದಿಗ್ವಾಡ ಬಿದ್ಕಂಡದ
ಹಂಗೆ ಇನ್ನೇಡ್ಸರಿ ಮಳ ಬಿದ್ರ
ಹಂಗೆ ಬೀಳ್ತ ಬೀಳ್ತ
ಆ ತೊಲ ಕಂಬನು ಜರ್ಗುತ್ತ’
ಅನ್ತ ಅಂದ ಮಾತ್ಗ
ಅಯ್ನೋರ್ತವು ಮಾತಿಲ್ಲ


ನಡ್ಮದ್ಯಾನ ಆಗಿತ್ತು

ಕಲ್ಬುಟ್ರ ಓಣಿ ಉದ್ದುಕ್ಕು
ನೀರು ಹರಿತಿತ್ತು
ಓಣಿ ಉದ್ದುಕ್ಕು
ಆಕಡ ಈಕಡ
ಬೇಲಿ ಬ್ಯಳ್ದು ಗವ್ವರಾಕಂಡು
ಹೋಗವ್ರು ಬರವ್ರು ಕಾಣ್ರು

ಈ ಅಯ್ನೋರು
ಈ ಮಳ ಗಾಳಿಲಿ
ಮಡ್ಡಿ ಮರದ ಕೆಳ್ಗ
ಬುಡ ವತ್ತುರ್ಸ್ಕಂಡು
ಬೀಡಿ ಸೇದ್ತಾ ನಿಂತಿದ್ರು

ಅಂವ ಬಂದು
ಅಯ್ನೋರ ಸೇರ್ಕಂಡು
ಅವ್ನೂ ಬೀಡಿ ತಗ್ದು ಕಚ್ದ

‘ಅಯ್ನೋರಾ ತ್ವಾಟುಕ್ಕೆ
ಬರಂವ ಅನ್ಕಂಡಿ’
‘ಸದ್ಯಕ್ಕ ತ್ವಾಟುಕ್ ಬ್ಯಾಡ
ಪೋಲೀಸ್ರು ಬುಡ್ತಿ ಕೊಡ್ದೆ ಬತ್ತವ್ರ’
‘ಆಯ್ತು ಬುಡಿ ನಂಗೊತ್ತು’
‘ನೋಡು ಗ್ಯಾನ್ವಾಗಿ
ನಿನ್ ಬುದ್ದಿ ನಿನ್ ಕೈಲಿ ಇರ್ಲಿ’
‘ಅಯ್ನೋರಾ ಎಂತೆಂತ ಆಟ ಆಡಿಲ್ಲ ನಾನು
ನಿಮ್ಗ ಗೊತ್ತಿಲ್ದೆ ಏನ’
‘ಆದ್ರ ಆ ಪರ್ಶು
ಆ ಚೆಂಗುಲಿ ಸ್ವಾದುರ್ ಮಾವುನ್ನೆ
ಹೆಂಗ್ ಸಾಯಿಸ್ದ..
ಅದು ಗೊತ್ತಿರ್ಲಿ.
ಅವುರೊವ್ವ ಹೊಳಕರಲಿ
ಹೆಂಗ್ ನಿಗುರ್ಕ ಬಿದ್ದಿದ್ದ..
ಅದ್ಕ ನಾ ಹೇಳದು,
ಈ ಪೋಲೀಸ್ರು ಸರಿ ಇಲ್ಲ
ಒಂದ್ ಮಾಡಕ್ಕೋಗಿ
ಇನ್ನೊಂದ್ ಮಾಡ್ತರ
ಅಂವ
ನಿಂಗಿಂತ ತಾಕತ್ತಗವ್ನ
ಅನ್ನದ ಮರಿಬ್ಯಾಡ’
ಅನ್ತನ್ತ ಮಾತಾಡಿದ್ದು
ಆ ಮಳ
ಆ ಗಾಳಿ
ಆ ನೀರು
ಬೀಳ್ತ ಬೀಸ್ತ ಹರಿತಾ
ಒಳಗೇ ಅದುಮ್ಕಂಡು ಕೇಳ್ತಿದ್ದಾಗ
ಮಿಂಚ್ತ ಗುಡುಕ್ತ
ಆ ಮಿಂಚು ಗುಡುಗು
ಎದ್ಬಂದ್ ಎದ್ಗ ಹೊಡ್ದಂಗಿತ್ತು


ಬೆಳ್ಕು ಕಣ್ಬುಟ್ಟಾಗ
ಜಗುಲಿ ಮ್ಯಾಲ
ಯಾವ್ದ ಗಂಡು ಕುಂತಿತ್ತು

ಆಗ ಬಾಗ್ಲು ಸದ್ದಾಗಿ
ಈ ಅಯ್ನೋರು ಇಣ್ಕುದ್ರು
ಜಗ್ಲುಲಿ ಕುಂತಿದ್ದ ಆ ಗಂಡು ಮ್ಯಾಕ್ಕೆದ್ದು
‘ಬಾವ..’ಅನ್ತು
ಈ ಅಯ್ನೋರು ಕಣ್ಣೊಸಿಕತ
‘ಓ ಏನಾ ಇಸ್ಟೊತ್ಗೆ..’ ಅನ್ತ
ಜಗ್ಲುಲಿ ಕುಂತು
‘ನಿಮ್ಮಕ್ಕುನ್ ತಿಥಿಲಿ ನೋಡಿದ್ದು
ಗೊತ್ತಾಯ್ತು ಮೈಸೂರ್ಲಿ ಕೆಲ್ಸ ಆಯ್ತು ಅನ್ತ’
ಅಂದ್ಮೇಲ ಗೊತ್ತಾಯ್ತು ಆ ಗಂಡು
ನೀಲವ್ವೋರ ತಮ್ಮ ಅನ್ತ.

‘ನೀ ಎತ್ತಗ್ಯಾರ ಹೊಂಟೊಯ್ತಿದೈ ಅನ್ತ
ಬ್ಯಾಗ್ನೆ ಬಂದಿ’
‘ಅದೇನಪ್ಪ ಇಸ್ಟ್ ಅರ್ಜೆಂಟು..
ತಾಳು ಇಲ್ಲಿ ಟಿ ಗಿ ಕುಡ್ದಯ..
ಲೇ ಇವ್ಳ ಬಾ ಇಲ್ಲಿ’
ಅನ್ತ ಆ ದೊಡ್ಡವ್ವುನ್ ಮೊಮ್ಮೆಣ್ಣ ಕರ್ದು
ಹಾಲ್ ತರ್ಸಿ ಟಿ ಕಾಯ್ಸಿ
ಆಮೇಲ ಮೊಖ ತೊಳಿಸಿ
ಆ ಮೊಮ್ಮೆಣ್ ಕೈಲೆ
ಚಿತ್ರಾನ್ನ ಮಾಡ್ಸಿ ಉಣ್ಸಿ
ತ್ವಾಟುಕ್ಕ ಕರ್ಕ ಹೋದ್ರು.

ತ್ವಾಟ ನೋಡ್ತ ನೋಡ್ತ
‘ಈಗ ಕೆಲ್ಸ ನಿಂತುದ
ಆಳುಪಾಳು ಸರಿಯಾಗಿ ಬತ್ತಿಲ್ಲ
ನಂಗು ಪಂಚಾಯ್ತಿ ಕೆಲ್ಸ ಜಾಸ್ತಿ
ಇತ್ತಗ ಬರಕ ಆಯ್ತಿಲ್ಲ
ಆಳ್ನ ನಂಬಿ ಕೆಲ್ಸ ಆದ್ದ’
ಅನ್ತ ಎಲ್ಲನು ತೋರುಸ್ತ ಇದ್ದಾಗ್ಲೆ
‘ಬಾವವ್ ಮದ್ವಗ ಬರದ ಮರ್ತ್ಬುಟ್ಟಯ್ ಕೊಳ್ಳಗಾಲ್ದಲ್ಲಿ ಇರದು ಹೆಣ್ಣುನ್ ಮನಲಿ’
‘ಆಯ್ತು ಬುಡು’ ಅನ್ತ
ಬ್ಯಾಡ ಕ ಬಾವ ಅಂದ್ರು
ಜೋಬ್ಗ ದುಡ್ಡ ತುರ್ಕಿ
ಆ ಆಳ್ನ ಕರ್ದು
ನೂರಿನ್ನೂರ್ ತಿಗುನ್ ಕಾಯಿ
ಎರಡ್ ಗಾಡಿ ಗೊಬ್ಳಿ ಸೌದ ತುಂಬಿ
ಆ ಆಳುನ್ ಜೊತ್ಗೆ ಕಳಿಸಿ
ಬೀಡಿ ಹಚ್ಕಂಡು
ಸೇದ್ತಾ ದಮ್ಮೆಳಿತಾ
ಹೊಗ ಬುಡ್ತ ಇದ್ದಾಗ
ಸೀಪರು ಸೀಪರು ಹನಿ ಉದುರ್ತಾ ಇತ್ತು

ಎಂ.ಜವರಾಜ್


ಮುಂದುವರಿಯುವುದು…

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x