-೫೧-
ಕಣ್ಬುಟ್ಟಾಗ ತ್ವಾಟುದ್ತುಂಬ
ಜನ ಜಗನ್ಜಾತ್ರ್ಯಾಗಿ ಕಾಣ್ತು
ಬರೋರು ಬತ್ತನೇ ಅವ್ರ
ಇಡಿ ಊರೇ ಇತ್ತು
ಈ ಊರೇನು
ಅಕ್ಕಪಕ್ದ ಊರೋರ್ ಜನಾನು ಕಂಡ್ರು
ಆ ಆಳು
ಆ ಜನ್ಗಳ ಸಂದಿಲಿ
ಅತ್ತಗು ಇತ್ತಗು ಓಡಾಡ್ತ ಇದ್ನ
‘ಮಗ ಮಾಡ್ದ ತಪ್ಗ ಅಪ್ಪುನ್ಗ ಶಿಕ್ಷ..’
‘ಅಯ್ನೋರೇನ ಅನ್ತ ಈಗ್ಲಾರು
ಗೊತ್ತಿರ್ಬೇಕು ಪೋಲೀಸ್ರುಗ’
‘ಆದ್ರ ಊರಾಳ್ದಂವ್ರು ಅವ್ಮಾನ ಅಲ್ವ’
‘ಎಲ್ಯ ನಾ ವಸಿ ನೋಡ್ತಿನಿ ಅಯ್ನೋರಾ
ರಾತ್ರ್ಯಲ್ಲ ಟೇಸನಲ್ಲೆ ಇರುಸ್ಕಂಡಿದ್ರಂತ
ಅಂವ ಶಂಕ್ರ ಇನ್ನು ಸಿಕ್ಕಿಲ್ವಂತ
ನೋಡಕ ಮಂಗ್ಯಾಗಿದ್ನ
ನೋಡು ಎನ್ತ ಕೆಲ್ಸ ಮಾಡನ
ಹೋಗಿ ಹೋಗಿ ಕುಲ್ಗೆಟ್ಟವ್ಳ ಮದ್ವ ಆದ್ನ
ಆಗ್ಲು ಅಯ್ನೋರು ಸಯಿಸ್ಕಂಡ್ರು
ಕೇರಿನೇ ತಲ ತಗ್ಸ ತರ ಮಾಡುದ್ನ
ಆಗ ಅಯ್ನೋರು
ಹೆಂಗ್ ನ್ಯಡ್ಕಂಡ್ರು ಅನ್ತ ಲೋಕುಕ್ಕೇ ಗೊತ್ತು
ಅದೇನಾ ಆಯ್ತು ಬುಡು
ತಿಕ ಅಮಿಕಂಡು
ಗೆಯ್ಕ ಗೆತ್ಕಂಡು ಸೊಪ್ಪು ಸ್ಯದ ತಕ್ಕಂಡು
ಸಂಸಾರ ಮಾಡದ್ಬ್ಯಾಡ್ವ…
ಅದೂ ಅಲ್ದೆ ಅವತ್ತು
ಕುಲ ಸೇರ್ಸಿ ಬಾಗ ಕೇಳಿ
ಅಯ್ನೋರು ತಲ ತಗ್ಸತರ ಮಾಡುದ್ನ..
ಇಂವ ಚ್ವಾರ ಚ್ವಾರ್ ನನ್ಮಗ..’
ಹಿಂಗೆ
ಜನ ಮಾತಾಡ್ತ ಇದ್ರು
ಅಂದ್ರ ಗುಂಪುನ್ ಮಧ್ಯ ಅಯ್ನೋರು ಅವ್ರ
ಅಂದಂಗಾಯ್ತು.
ಆ ಆಳು
‘ಏ ನಡರಿ ಅತ್ತಗ
ಬನ್ನಿ ವಪ್ಪತ್ಗ’
ಅನ್ತ ಬೆದುರ್ಸಿ ಬೆದುರ್ಸಿ ಕಳಿಸಿ
‘ಅಯ್ನೋರ ನೇವೇಳಿ ಮನ ಒಳಕ’
ಅನ್ತ ಅಂದ
ಈ ಅಯ್ನೋರು ಮ್ಯಾಕ್ಕೆದ್ದು
ಕಲ್ಲಾಸ್ಮೇಲ ಕುಂತ್ರು
ಈಗ
ಗಾಳಿ ಬೀಸ್ತಿದ್ದಂಗೆ ತಣ್ಗಾಯ್ತು
ಈ ಅಯ್ನೋರು ಈ ಬಿಸಿ ಒಳ್ಗ
ಕಂಗೆಟ್ಟಿರ ತರ ಕಂಡ್ರು
ಜನ ಬತ್ತನೆ ಅವ್ರ
ಆಗ
‘ನೋಡಿ ಆದ್ದು ಆಯ್ತು
ಇದ್ಕೆಲ್ಲ ನಾ ತಲ ಕೆಡುಸ್ಕಳಲ್ಲ
ಎಲಕ್ಷನ್ ಟೇಮ್ಲಿ ಏನೂ ಹೇಳಕಾಗಲ್ಲ
ಪೋಲೀಸ್ರು ಬರ ಹೊತ್ತು
ಜನ ಕಂಡ್ರ ನಂಗೆ ತ್ವೊಂದ್ರಿ
ವಪ್ಪತ್ಗ ಬನ್ನಿ ಈಗ ಹೋಗಿ’
ಅನ್ತ ಅಯ್ನೋರು ಕೈಮುಗುದ್ರು.
ಈ ಅಯ್ನೋರ್ ಮಾತ್ಗ
ಜನ ತ್ವಾಟ ಬುಟ್ಟು ಹೋದ್ರು
ಈಗ ತ್ವಾಟ್ದಲ್ಲಿ ಜನ ಇಲ್ದೆ
ತ್ವಾಟ ಗಕುಂ ಅನ್ನ ತರ ಆಯ್ತು
ಆ ಆಳು
ಅಯ್ನೋರ್ ಮುಂದ
ಏನೂ ಮಾತಾಡ್ದೆ ನಿಂತಿರದ ನೋಡಿ
ಈ ಅಯ್ನೋರು,
‘ಏನಾಯ್ತು
ಎಲ್ಲ ಶಂಕ್ರ ಶಂಕ್ರ ಅಂತಿದ್ರ್ಯಲ್ಲ’
‘ಅಯ್ನೋರಾ ಶಂಕ್ರಪ್ಪೋರ
ಆ ಸ್ವಾಸ್ಲಿಯವ್ರು ಓಡುಸ್ಕ ಬಂದ್ರು
ಆ ಶಂಕ್ರಪ್ಪೋರು ಇಲ್ಲೆ ಒಳಕ ಓಡೋದ್ರು’
‘ಬುಟ್ಟರ..
ಅಂವ ತಪ್ಪುಸ್ಕ ಓಡಾಡ್ತ ಅವ್ನ
ನನ್ನ ಒಳಕಾಕಿ ತಲಗೊಂದೊಂದ್ ಮಾತು
ನಾ ಈಚ್ಗ ಬರ್ಬೇಕಾದ್ರ
ಮನಲಿರ ಪತ್ರನೆಲ್ಲ ಕೊಟ್ಟಿನಿ
ಅಂವ ಶರಣಾದ್ರ ಉಳ್ಕತನ
ಇಲ್ಲಾಂದ್ರ ಈಚ ಕೊಚ್ಚಿ ಸಾಯಿಸ್ತರ
ಈಗ ಎಲಕ್ಷನದ ನಾ ಏನ್ ಮಾಡಗಿದ್ದು..’
ಅಯ್ನೋರು ಆ ಆಳ್ಗ ಹೇಳ್ತಾ ಹೋದ್ರು.
ಬಿಸ್ಲು ರವ್ಗುಟ್ತಿತ್ತು
ಈ ಅಯ್ನೋರು,
‘ಏ ಬಾ ಇಲ್ಲಿ ತಾನ ಮಾಡಿ ಏಡ್ದಿನ ಆಗದ
ಬಾವಿಲಿ ಈಚ್ಬತ್ತಿನಿ ಬಟ್ಟ ತತ್ತ’ ಅಂದ್ರು
ಆ ಆಳು
ಮನ ಒಳಕ್ಕೋಗಿ
ಪಂಚ ಟವಲ್ಲು ತಂದ್ಕೊಟ್ಟ
ಈ ಅಯ್ನೋರು ಕಪಲ ಬಾವಿಗ ಇಳ್ದು
ಬಿದ್ದ ರಬುಸುಕ್ಕ
ಬಾವಿ ನೀರು ದಡುಂ ಅನ್ತ ಸದ್ದಾಯ್ತು.
ಒಪ್ಪತ್ಗ ಮನ್ಗ ಬಂದೊತ್ಲಿ
ನೀಲವ್ವೋರ್ ಸ್ವಾಕ ನಿಂತಿರ್ನಿಲ್ಲ
ಅಕ್ಕಪಕ್ದೋರೆಲ್ಲ ಲೊಚ್ಗುಟ್ತಿದ್ರು
ನನ್ನ ಜಗ್ಲಿ ಮೂಲ್ಗ ಬುಟ್ಟು
ಒಳಕ್ಕೋಗಿ ಈಚ್ಗ ಬಂದ್ರು.
ಈ ದೊಡ್ಡವ್ವ ಏನೂ ಮಾತಡ್ನಿಲ್ಲ
ಅಯ್ನೋರು ಜಗುಲಿಲಿ ಕುಂತು
‘ಈತರ ಸ್ವಾಕ ಮಾಡ್ತ ಜನನ್ಯಾಕ ಸೇರ್ಸಿದೈ
ಎಲಕ್ಷನದ ಗೊತ್ತಿದ್ದ…
ಬತ್ತರ ಮಾವ್ದಿರು’ ಅನ್ತಂದ್ರು.
ಆಗ ಅಲ್ಲಿ ನಿಂತಿದ್ದವ್ರು ಕುಂತಿದ್ದವ್ರು
ಎದ್ದೋದ್ರು.
ಈ ದೊಡ್ಡವ್ವ,
‘ಕುಸೈ ಬಂದ್ರ ಬತ್ತರ ತಕ್ಕ’
‘ದೊಡ್ಡವ್ವ ನಿಂಗ ವಯ್ಸಾಗದ ಬುದ್ದಿ ಬಂದಿಲ್ಲ
ಅದಿರ್ಲಿ ಶಂಕ್ರ ಶಂಕ್ರ ಅಂತಿದ್ರ್ಯಲ್ಲ
ಏನ್ ಮಾಡ್ದ ಶಂಕ್ರ’
‘ಕುಸೈ ಅಂವ ಹಂಗ
ಮಾಡ ಮನುಸ್ಯ ಅಲ್ಲ ಕಣ
ನೀನು ಹಂಗೆ ಅಂದ್ರ
ಅವುನ್ಗತಿ ಏನಾ..
ಈ ಮನ ಗತಿ ಏನಾ..
ಈ ಮನ್ಗ ತ್ವಲ ಇದ್ದಂಗ ಅಂವ
ಇನ್ಯಾರ ಈ ಮನ್ಗ ನಿನ್ ಬುಟ್ರಾ..
ವಂಶ ಬೆಳ್ಯಾದ್ಯಾಗ್ಯಾ’
ಅನ್ತ ದೊಡ್ಡವ್ವ ಅಯ್ನೋರ ಪ್ರಶ್ನ ಮಾಡುದ್ಲು
ಈ ಅಯ್ನೋರು,
‘ನೋಡು ಅಂವ ನನ್ ಪಾಲ್ಗ ಸತ್ಕೂಟ
ಅಂವ ನಂಗುಟ್ಟಿದ್ರ ಎದ ಕೊಟ್ಟು ನಿಂತ್ಕತಿದ್ನ
ಇಂಗ ಓಡೋಯ್ತ ಇರ್ನಿಲ್ಲ’
‘ಕುಸೈ ಚೆಂದುಳ್ಳಿ ಮಾತಾಡು
ಈ ಮನ್ಗ ದೇವಿ ದೇವ್ತಿ ತರ ಇದ್ದ
ಅದ್ಕ ಈ ಮನಲಿ ನಿಂಜೊತಲಿ
ಬಾಳದು ಹಣಲಿ ಬರ್ದಿನಿಲ್ಲ ಅನ್ಸುತ್ತ
ಈ ನೀಲುಗ್ಯಾರ ಒಂದಾಗಿದ್ರ
ಬ್ಯಾಡ ಬುಡು ಅನ್ಬೇದಿತ್ತು
ಅದೂ ದೇವ್ರು ಬಂದಾಗ ಬಂದಿತ್ತು
ಅದ್ನೂ ಎಳೂರುಂಡಿ ಓಣಿಗ ಚೆಲ್ಲುದ್ದಾಯ್ತು’
ಅನ್ತ ದೊಡ್ಡವ್ವನ ಮಾತ್ಗ
‘ದೊಡ್ಡವ್ವ ನೀ ಈಗ ಮಾತ್ನಿಲ್ಸು ಸಾಕು
ಇಂತ ಕುಲ್ಗೆಟ್ ಮಾತ ಕೇಳಿ ಕೇಳಿ ಸಾಕಾಗದ ಥೂ..’
ಅನ್ತ ದಡಕ್ಕನೆ ಮ್ಯಾಕ್ಕೆದ್ದು
ನನ್ನ ಮೆಟ್ಟಿ ಮೋರಿ ದಾಟಿ
ಕಣ್ಣ ಕೆಂಪ್ಗ ಮಾಡ್ಕಂಡು
ಜಿರಿಕ್ಕು ಜಿರಿಕ್ಕು ಅನ್ನಿಸಿ
ಪುರಪುರನೆ ಬೀದಿಲಿ ನಡುದ್ರಲ್ಲೊ..
-೫೨-
ಆ ಆಳು
ನೀರಂಜಿ ಬುಡುದ್ಮ್ಯಾಲ ಕುಂತಿದ್ನ
ಈ ಅಯ್ನೋರ ನೋಡಿ ಎದ್ನಿಂತು ಕೈಕಟ್ದ
ಈ ಅಯ್ನೋರು
‘ಈ ಗ್ರೂಪ್ ಎಲಕ್ಷನ್ಲಿ
ಶಿವ್ಲಿಂಗು ಕಡೆವ್ರು ಗೆಲ್ಲದೆಸ್ಟ’
‘ಅಯ್ನೋರಾ ಶಿವ್ಲಿಂಗುನೆ ಗೆಲ್ಲದ್ಕಾಣಿ’
‘ನೀನು ದೊಡ್ಮನ್ಸ ಹೇಳುದ್ದೇನ..
ಶಿವ್ಲಿಂಗು ನಿಲ್ಲದೆ ಇಲ್ಲ ಅನ್ತ ಅಲ್ವ’
‘ಊ್ಞ ಹೇಳಿದ್ದಿ ಅಯ್ನೋರಾ,
ಆದ್ರ
ಅವ್ರ್ ಕಡ ನಿಂತರಲ್ಲ ಹತ್ಜನ
ಆ ಹತ್ಜಜನಾನು ಪುಸ್ಲಾಯ್ಸಿ ನಿಲ್ಸರ..
ಈಗ ಇಂಬು ಏನ್ಸಿಕ್ಕದ ಅಂದ್ರ
ಶಂಕ್ರಪ್ಪೋರು ಮಾಡಿರ ತಪ್ನೇ
ಮುಂದ್ಮಾಡ್ಕಂಡು ನಿಮ್ಮ ಹಳಿಬೇಕು ಅನ್ತ..
ಆದ್ರ
ಆ ಶಿವ್ಲಿಂಗವ್ರು ನಿಮ್ ದುಡ್ಡ ಕರ್ಗುಸ್ಬೇಕು
ಅನ್ತ ಅನ್ಕಂಡವ್ರು ಆ ಹತ್ಜನ್ಕು ದುಡ್ಡಾಕಿ ಗೆಲ್ಲುಸ್ಬೇಕು
ಹಂಗೇನಾರ ಆದ್ರ ನಿಮ್ಮ ಕರುಗ್ಸೋಕ್ಕೋಗಿ
ಅವ್ರೇ ಕರ್ಗವತ್ತಾಗುತ್ತ
ಆಗ ಅವ್ರೇ ಬರ್ದಾಗಿ ಬರ್ಗೈಲಿ ನಿಂತ್ಕಂಡ್ರ ಚೇರ್ಮನ್ ಆಗಕಾದ್ದ ಅಯ್ನೋರಾ…
ಅದ್ಕ ಅಯ್ನೋರಾ,
ಅವ್ರು ಮಾಡ್ಲಿ ನೀವು ತಲ ಕೆಡುಸ್ಕಬ್ಯಾಡಿ..’
ಅನ್ತ ಆ ಆಳು ರಾಜ್ಕೀಯ ಬಾಷ್ಣನೇ ಮಾಡ್ದಂಗಿತ್ತು
ಆ ರಾಜ್ಕೀಯ ಬಾಷ್ಣ ಕೇಳ್ತ
ಈ ಅಯ್ನೋರ್ಗ ಮಾತೇ ಬರದಂಗಾಯ್ತು.
ಆಗ ಅಯ್ನೋರು ಅತ್ತಗು ಇತ್ತಗು ತಿರ್ಗಾಡ್ತ
‘ನೀನು ಇಸ್ಟು ಬಾಳ ಚಾಲಾಕಿ ಅನ್ತ ಗೊತ್ತಿರ್ನಿಲ್ಲ
ನಾ ತಪ್ಮಾಡ್ದಿ ಅನ್ಸುತ್ತ
ನಿನ್ನು ಎಲ್ಲಿಗ್ಯಾರ ನಿಲ್ಸಿದ್ರ ಚೆನ್ನಗಿರದು
ನಿಲ್ಲಿಸ್ದೆ ತಪ್ಮಾಡ್ದಿ ಅನ್ಸುತ್ತ’
‘ಅಯ್ನೋರಾ ಆ ಬಗ್ಗ ಚಿಂತ ಬುಡಿ
ನೀವು ಈ ಸಲ ಚೇರ್ಮನ್ನು ಗ್ಯಾರಂಟಿ’
‘ಅದ್ಸರಿ ಎಲಕ್ಷನು ಮೂರ್ಜಿನ ಅದ
ಈಗ ಜನ ದಿಕ್ಕಾಪಾಲಾಗಕು ಮುಂಚ
ಏನಾರಾ ಮಾಡ್ಬೇಕು ಕರಸು ವಪ್ಪತ್ಗ’
‘ಆಯ್ತು ಅಯ್ನೋರಾ’
ಅನ್ತ ಇಬ್ರೂ ನಡ್ದಾಗ
ಅಲ್ಲೆ ಸ್ವಾಸ್ಲಿ ಜನ ನಿಂತಿದ್ರು
ಈ ಅಯ್ನೊರು ಆ ಆಳು ಇಬ್ರೂ
ನೋಡುದ್ರು ನೋಡ್ದೆ ಇರವ್ರ್ ತರ
ತಿಟ್ಟತ್ತಿ ತಿರುಗಿ ತ್ವಾಟುದ್ ಕಡ ನಡುದ್ರು.
ರಾತ್ರ ಎಂಟ್ಗಂಟ ಟೇಮಾಗಿತ್ತು
ತ್ವಾಟುದ್ ತುಂಬ ಜನ್ವಿದ್ರು
ಆ ಅಯ್ನೋರು ಆ ಆಳು ಬುಟ್ರ
ರಪ್ಣೂ ಸದ್ದಿಲ್ಲ
ಹಂಗಿತ್ತು
ತ್ವಾಟುದ್ ಮಧ್ಯ
ಕುಡೆದು ತಿನ್ನದು ಇದ್ದೆ ಇತ್ತು
ಬಾಡ್ನೆಸ್ರು ಗಮ್ಗುಟ್ಟದು
ಈಗ
ಇಬ್ರು ಪೋಲಿಸ್ರು ಬಂದಂಗಾಯ್ತು
ಅವ್ರು ಅಯ್ನೋರ್ನ ನೋಡಿ ನಗುದ್ರು
ಈ ಅಯ್ನೋರೂ ಅವ್ರ ನೋಡಿ ನಗುದ್ರು
ನಗ್ತಾ ನಗ್ತಾ ಅವ್ರ ಕರ್ದು ಕೂರ್ಸಿ
ಆ ಆಳ್ಗ ಸನ್ನ ಮಾಡುದ್ರು
ಆ ಆಳು
ಆ ಪೋಲಿಸ್ರ ಮನ ಒಳಕ ಕರ್ಕ ಹೋದ
ಈ ಅಯ್ನೋರು ಇನ್ನೊಂದಿಬ್ರುಗ ಸನ್ನ ಮಾಡುದ್ರು
ಆ ಇನ್ನೊಂದಿಬ್ರು ಓಡ್ಬಂದು ತಲ ಆಡ್ಸುದ್ರು
ಆ ಆಳು
ಆ ಪೋಲಿಸ್ರ ಕುಂಡುಸ್ಬುಟ್ಟು ಓಡ್ಬಂದು
ಆ ಇನ್ನೊಂದಿಬ್ರು ತಂದ ಹೆಂಡುದ್ ಬಾಟ್ಲುನೂ
ಆ ಇಸ್ತ್ರಿಲಿ ತುಂಬ್ಕ ಬಂದಿದ್ದ ಬಾಡ್ನೂ ಕೊಟ್ಬುಟ್ಟು
ಆ ಕೊಟ್ಟ ರಬ್ಸುಕ್ಕ ಓಡ್ಬಂದು
ಈ ಅಯ್ನೋರ್ ಮುಂದ ಕುಂತ್ನ.
ತ್ವಾಟ ಗಕುಂ ಅನ್ತಿತ್ತು
ಸರೊತ್ತು
ತ್ವಾಟ್ಯಾಗಿದ್ ತ್ವಾಟೆಲ್ಲ
ಬಾಡ್ನಸ್ರುನ್ ವಾಸ್ಣನೆ
ಆ ಆಳು
‘ಅಯ್ನೋರಾ ನಾಳ ಒಂಜಿನ ಅದ
ಹೆಚ್ಚುಕಮ್ಮಿ ನಮ್ಮವ್ರೆ ಗೆಲ್ಲದು
ಹುಣ್ಸೂರು ಕಿರುಗ್ಸೂರು ಆಲ್ಗೂಡು
ಎಲ ಕಡನು ಅಲ್ಯವ್ರು ನಿಬವಣಿ ಮಾಡ್ತವ್ರ
ಇಲ್ಲಿ ನಮ್ದೆ ಬುಡಿ ನೀವು ನೆಮ್ದಿ ಕಳ್ಕಬ್ಯಾಡಿ’
‘ನಂಗೇನ ಆಗಿದ್ದು ನೆಮ್ದಿ ಕಳ್ಕಳಕ..
ನಿ ನಡ ಈಗ ಉಸಾರು..
ವತ್ನಂತೆ ಜಲ್ದಿ ಬಾ’ ಅನ್ತ ಅಂದ್ರು
ಆ ಆಳು ‘ಸರಿ ಅಯ್ನೋರಾ’ ಅನ್ತ
ಬ್ಯಾಟ್ರಿ ಬುಟ್ಗಂಡು ತೆವ್ರಿ ಮ್ಯಾಲ ನಡ್ದ.
ಬಿಸ್ಲು ರವ್ಗುಟ್ತಿತ್ತು
ಈ ಅಯ್ನೋರು ಆ ಆಳ್ಗ
ವತ್ನಂತೆ ಜಲ್ದಿ ಬಾ ಅಂದ್ಬುಟ್ಟು
ಇವ್ರೂ ಎದ್ದಿಲ್ಲ
ಆ ಆಳೂ ಬರ್ನಿಲ್ಲ
ಆ ತಡಿತವು
ಕಂಡು ಕಾಣ್ದೊರೆಲ್ಲ ಬಂದು
ಇಣ್ಕಿ ಇಣ್ಕಿ ನೋಡ್ಕಂಡು ಹೋಯ್ತ ಅವ್ರ.
ಈ ಅಯ್ನೋರು
ಈಗ ಮೈಮುರಿತಾ
ಈಚ್ಗ ಬರಕು
ಆ ಆಳು
ತಡಿ ತಳ್ಳಿ ಬರಕು ಒಂದಾಯ್ತು
ಬರಂವ ಸುಮ್ನ ಬರಬಾರ್ದ
ಧಾಕುಧೀಕಂತ ತೆವ್ರಿ ಮ್ಯಾಲ ಓಡ್ಬಂದ
ಈ ಅಯ್ನೋರು,
‘ಏ ನಿನ್ಗ ಏನೇಳಿದ್ದಿ..
ವತ್ನಂತೆ ಜಲ್ದಿ ಬರೆಳಿದ್ದಿ
ನಿ ಬತ್ತಿರದೆಸ್ಟೊತ್ತಾ..
ಬಂದು ಏಳ್ಸಿ ಯವರ ನೋಡ್ಬಾರ್ದ’
ಅನ್ತ ರೇಗ್ತ ಹೋದ್ರು.
ಆ ಆಳು
‘ಅಯ್ನೋರಾ ನಾ ಬರಕೆ ಅನ್ತ
ಮೊಬ್ಗೆ ಹೊಳ್ಗೋಗಿ
ನೀರ್ಮುಳಿಕಂಡು ಬತ್ತಿದ್ದಿ
ಅಸ್ಟೊತ್ಗ ಪೋಲಿಸ್ಜೀಪು ಬಂದು
ಆ ಕಾಲುನ್ ಮನತವು ನಿಂತ್ಕಂಡು
ಮನ ಒಳಗ ಮನ್ಗಿ ನಿದ್ದ ಮಾಡ್ತಿದ್ದ ಪರ್ಶುನ
ನಿದ್ರಗಣ್ಲೆ ದರದರ ಅನ್ತ ಎಳ್ಕ ಬಂದು
ಬೀದಿಲೆ ನಿಲ್ಲುಸ್ಕಂಡು ಹೊಡ್ದು
ಜೀಪ್ಲಿ ಎತ್ಗ ಹೋದ್ರು’
ಅನ್ತ ಉಸ್ರು ಬುಡ್ದೆದ್ತರ ಹೇಳ್ದ
ಈ ಅಯ್ನೋರು
‘ಅದೇನ್ ಮಾಡಿದ್ನ..
ಜೀಪ್ ತಕ್ಕ ಬಂದು
ಯಳ್ಕಂಡೋಗ ತಪ್ಪ ಏನ್ಮಾಡಿದ್ನಾ..’ ಅಂದ್ರು.
‘ಅದೇನ ಗೊತ್ತಿಲ್ಲ ಅಯ್ನೋರಾ
ಜನ ನಿಂತ್ಕ ನೋಡ್ತ ಇದ್ರು
ನಾಳ ಎಲಕ್ಷನು ಏನನ್ತ ಕೇಳದು..
ಎಲ್ರುನು ಬೆದುರ್ಸಿ ಜೀಪ್ ಬುಟ್ಗ ಹೋದ್ರು’
ಅನ್ತ ಅಯ್ನೋರ್ನೆ ನೋಡ್ತ ಮನ ಒಳಕ್ಕೋದ
ಈ ಅಯ್ನೋರು ಆಕುಳುಸ್ತ ಹಂಗೆ ಮೈಮುರಿತಾ
‘ಏ ಅದಿರ್ಲಿ ಬಟ್ಟ ಎತ್ಕ ಬಂದು
ಬಾವಿ ಮ್ಯಾಲ ಮಡ್ಗು
ನಾನೂ ಮುಳ್ಗಿ ಎದ್ಬತ್ತಿನಿ’
ಅನ್ತ ತ್ವಾಟ್ದೊಳಕ ಹೋದ್ರು.
-ಎಂ.ಜವರಾಜ್
ಮುಂದುವರಿಯುವುದು…