-೪೯-
ಬೆಚ್ಚಿದೆ
ಬೆಚ್ಚಿ ಅಂಗಾತ ಕೆಳಕ್ಕೆ ಬಿದ್ದೆ
ದಡದಡದಡಗುಟ್ಟೊ ಗುಡುಗಿಗೆ.
‘ಹ್ಹಹ್ಹಹ್ಹಹ್ಹ…
ಅನ್ನೊ ಗಹಗಹಿಸೊ ನಗುವೊಂದು.
ಅದುರಿದೆ ನಡುಗಿದೆ
ಸೊಂಯ್ಯನೆ ಎರಗಿದ ಮಿಂಚಿಗೆ
ಕಣ್ಣು ಕುಕ್ಕಿತು
ತಲೆ ಎತ್ತಿದೆ
ಎದುರಿಗೆ ಬೀದೀಲಿ
ಬೆಂಕಿಯ ಜ್ವಾಲೆ ಆಳೆತ್ತರಕೆ
‘ಹ್ಹಹ್ಹಹ್ಹ..’ ಮೆಟ್ಟಿನ ನಗು
ನನಗೆ ದಿಕ್ಕು ತೋಚದಾಯ್ತು
ಈ ಮೆಟ್ಟಿನ ಕತೆ
ಎಲ್ಲೊ ಆಗಿ ಎಲ್ಲೊ ಹೋಯ್ತಿದೆ
ಈ ಮೆಟ್ಟು
‘ಅಲ್ಲ
ಈ ಮಿಂಚ್ಗ
ಈ ಗುಡುಗ್ಗ
ಬೆಚ್ಚಿ ನಡ್ಗದೇನ’
ಅಂತ ಹಂಗಿಸೋ ಹಾಗೆ ಅಂತು
ನಾನು,
‘ನಿನ್ ಕತೆನೆ ಅರ್ಥ ಆಗ್ತಿಲ್ಲ
ಎಲ್ಲೊ ಹೋಗಿ ಎಲ್ಲೊ ಬಂದ
ನಾ ಬೆಚ್ಲುಬಾರ್ದು ಬೆದುರ್ಲುಬಾರ್ದು’
ಅಂತಂದೆ.
ಅದ್ಕ ಅದು
‘ನೀನು ಬೆಚ್ಚಿ ಬೆದ್ರದ ಆಡ್ನಿಲ್ಲ
ಇನ್ನು ಏನಿಲ್ಲ ಯತ್ತಿಲ್ಲ
ಈಗ್ಲೆ ಬೆಚ್ಚದ ಬೆದ್ರದಾ ಅಂದ್ರೇನಾ’
ಅಂತ ಮುಲಾಜಿಲ್ದೆ ಕಿಚಾಯ್ಸದಾ..
ಥೂ ಅನ್ಸಿ ನಾನೂ ನಿಂತೆ.
‘ಅಲ್ಲ ಮಾತೆತ್ತುದ್ರ
ನಿನ್ನ ವಂಶದ ಕರಾಮತ್ತು ಅಂತಿಯಲ್ಲ
ನೀ ಹೇಳ ಈ ಕತೆಯೊಳಗ
ನನ್ನ ವಂಶದ ಕರಾಮತ್ತೇ ಕಾಣ್ನಿಲ್ವಲ್ಲ
ತಲಬುಡ ಇಲ್ದೆದ್ ಕತೆ ನಿಂದು..
ನಿನ್ನ ವಂಶದ ಕರಾಮತ್ತು
ಅನ್ನೋಕು ಮುಂಚೆ
ನಾ ಯಾರ
ನಾ ಯಾಕ್ಬಂದಿ
ಅನ್ನೋದೇನಾರ ನಿಂಗೊತ್ತಾ…
ನಮ್ಮೊವ್ವ ಹೇಳ್ತಿದ್ದ
ಊರು ಮನೆ ಇದಾ
ಅಂತ ಯೋಚ್ನ ಮಾಡ್ತ ಅಂವ್ನಿ
ನೀ ಆಗ್ಲೆ ನನ್ ಬಗ್ಗೆ
ಏನೇನು ಗೊತ್ತಿಲ್ದೆ ರೇಗ್ದಾಗ
ಹಂಗೆ ಅಂವ ನಮ್ಮಂಯ್ಯನೆ
ಅಂತ ಮನಸ್ಲೆ ಅನ್ಕಂಡು
ನಿನ್ನ ಬೈಯ್ಕಂಡು ಸುಮ್ಮನಾದಿ
ರಗಳೆ ಯಾಕೆ ಅಂತ
ನೀನು ನನ್ನ ನೋಡ್ದ
ನೀನೆ ಎಲ್ಲನು ಅನ್ಬಾರ್ದ ಅಂದ
ಒಳಗಿರೋನ್ನು ನೀನೆ ಹೇಳ್ದ
ಈ ಮುರುದು ಬೀಳೊ ಮನೆ
ಈ ಮನೆಯೊಳಗೆ
ಕೆಮ್ಮಿ ಕ್ಯಾಕರಿಸೊ
ನರಳೊ ಮುದುಕ
ಅಂವ ನಮ್ಮಂಯ್ಯನೇ ಇದ್ರೂ
ಇರಬಹುದು ಸರಿ ಬುಡು
ಹೊರಗೆ ಇಲ್ಲಿ ನಿನ್ಮುಂದ ನಾನು..’
ಅಂತ ಒಂದೆ ಸಮ ಜಾಡ್ಸಿದೆ
ಅದು
‘ಏಯ್, ಬಂಚೊತ್ ಮರ್ವಾದಿ ಕೊಡು
ಏನ ಸಿಟಿಯಿಂದ ಬಂದ ಅನ್ತ
ಮರ್ವಾದಿ ಕೊಟ್ಟು ಹೇಳ್ತ ಅವ್ನಿ
ನಂಗೆಸ್ಟ್ ಸಂಕ್ಟ ಗೊತ್ತಾ..
ಎಸ್ಟ್ ವರ್ಸದಿಂದ ಇಲ್ಲಿಂಗ ಬಿದ್ದಿನಿ ಗೊತ್ತಾ..
ಇಂಗ ನಾ ಕಾಲ್ಮುರ್ದು ಕೈಮುರ್ದು ಬಿದ್ದಾಗೆಲ್ಲ
ಆ ನನ್ ಕಾಲಯ್ಯ
ಈ ಅಯ್ನೋರ್ ಸನ್ಗ
ನನ್ನ ಸರಿ ಮಾಡಿ ಪುಂಡೈಕ್ಳ್ ತರ ಮಾಡ್ತಿದ್ನ
ಆಗ ನಾನು ಪುಟಿತ ಪುಟಿತ ನಡಿತಿದ್ದಿ
ಆಗ ನನ್ ಮೆಟ್ಟಿ ಮೆರಿತಿದ್ದ
ಈ ಅಯ್ನೋರೂ
ಈಗ ನೆಲ ಕಚ್ಚಿ ಬಿದ್ದರಲ್ಲಾ..
ಈಗ ಆ ನನ್ ಕಾಲಯ್ನೂ ಇಲ್ಲ
ಈಗ ಆ ನನ್ ಚೆಲ್ವಮ್ನೂ ಇಲ್ಲ
ಈಗ ಆ ನನ್ ಪರ್ಶುನೂ ಇಲ್ಲ
ಈಗ ನಮ್ ಶಂಕ್ರಪ್ಪೋರೂ ಇಲ್ಲ
ಈಗ ನಮ್ ಸುನಿತವ್ವೋರೂ ಇಲ್ಲ
ಈಗ ನಮ್ ಶಂಕ್ರಪ್ಪೋರ ಕುಡಿನೂ ಇಲ್ಲ
ಈಗ ಆ ಸವ್ವಿ.. ಸವ್ವಿ.. ಸವ್ವಿ ಆ ಸವ್ಬಿನೂ ಇಲ್ಲ’
ಈತರ ಹೇಳ್ತ ಆಳೆತ್ತರಕೆ ನಿಂತ
ಆ ಬೆಂಕಿಯ ಜ್ವಾಲೆಯೊಳಗೆ
ಕಣ್ಣೀರು ಹರಿಯತೊಡಗಿತು.
ನನಗೆ ಆ ಮೆಟ್ಟಿನ ಅಳು
ನಮ್ಮೊವ್ವನ ಅಳು ತರಾನೆ ಅನ್ನಿಸಿ
ಸುಮ್ಮನಿರಿಸುತ್ತ,
‘ನೀ ಅಳ್ತ ಇರದು ನೋಡ್ತ
ನಮ್ಮೊವ್ವನೇ ಎದುರಿಗೆ ಬಂದಂಗ ಆಯ್ತ ಅದ
ನಮ್ಮೊವ್ವ ಬಂಗಾರದಂಗೆ ಇದ್ದವಳು
ಅಲ್ಲಿ ಇಲ್ಲಿ ಅಲ್ದು ಸಾಕಾದವ್ಳು
ಗಲ್ಲಿಗಟಾರ ಅನ್ನದ ರೀತಿಯಲ್ಲಿ
ಸಿಕ್ಕಿದ ಕೆಲ್ಸ ಮಾಡ್ದವ್ಳು
ಯಾರೋ ಪುಣ್ಯಾತ್ಮ
ಅವ್ವುನ್ಗೆ ಹಾಸ್ಟೆಲ್ಲಿ ಕೆಲ್ಸ ಕೊಡ್ಸುದ್ನಂತ
ಅವ್ವ ದೇವರ ಫೋಟೋ ಬದ್ಲು
ಆ ಪುಣ್ಯಾತ್ಮನ ಫೋಟೋ ಮಡಿಕಂಡು
ಪೂಜೆ ಮಾಡದ ನಾ ನೋಡಿದ್ದಿ
ಅವನಿದ್ದ ವಾಸದ ಮನೆಯೇ ನಮ್ಮನೆಯಾಯ್ತು
ಅವನಿದ್ದಾಗ ಅವ್ವ ಆಗಾಗ ಇಲ್ಲಿಗ ಬರವ್ಳು
ನನಗವನು ಒಳ್ಳೊಳ್ಳೆ ಬಟ್ಟೆ ಕೊಡುಸ್ತಿದ್ದ
ನಾನು ಡಬ್ಬಲ್ ಡಿಗ್ರಿನೂ
ಆ ಮನೇಲಿ ಇದ್ಕಂಡೆ ಮಾಡ್ದಿ
ಅವ್ವ ಆಗಾಗ ಈ ಊರೆಸ್ರು ಹೇಳ್ತ ಇದ್ಲು
ದೊಡ್ಡವ್ರು ಅವ್ರು ಊರಾಳವ್ರು ಅವ್ರು
ಅಂತಿದ್ಲು
ಅವ್ವ ಹೇಳ ಊರು ನಂಗ್ಯಾಕ..
ನಾನು ಚೆಲ್ಲು
ಅವ್ವನ ವರಾತ ಮಾಮೂಲಿ ಅನ್ಸಿ
ಸುಮ್ನಾಗಿದ್ದಿ
ಆಗ ನಂಗೊತ್ತಿದ್ದು
ಪಿಚ್ಚರ್ ನೋಡದು
ಆಟ ಆಡದು
ಅಲ್ಲಿ ಇಲ್ಲಿ ಪ್ರೋಗ್ರಾಂ ಇದ್ರ ಹೋಗದು
ಇದು ಬಿಟ್ರೆ
ಅವ್ವನ ಪುರಾಣ ಕಟ್ಕಂಡು ಏನಾಗ್ಬೇಕು…
ಅವ್ವ ಈತರ ಈ ಪುರಾಣ ಹೇಳ್ತಿದ್ದಾಗ
ಅಪ್ಪ ಎಲ್ಯಾ ಅಂತ ಕೇಳ್ತಿದ್ದಿ
ಅವ್ವ ಆ ಮಾತು ಈ ಮಾತು ಆಡಿ
ತನ್ನ ಪುರಾಣನೆ ನಿಲ್ಲುಸ್ತಿದ್ಲು
ಅವ್ವ ಸತ್ಮೇಲ
ಅವ್ವ ಆಡ್ತಿದ್ದ ಒಂದೊಂದ್ ಮಾತೂ
ನೆನಪಾಯ್ತು
ಅವ್ವ ಸತ್ತ ರಾತ್ರಿ ನಿದ್ದೆ ಹತ್ತದೆ
ನಾ ಒಂಟಿ ಅನ್ನುಸ್ತು
ಎಷ್ಟೊ ದಿನ ಹೊಟ್ಟೆಗಿಲ್ಲದೆ
ಹೊಟ್ಟೆ ಹಿಡಿದು ಕಿವುಚಿ
ಮಲಗಿ ನಿದ್ರೆ ಹತ್ತದೆ
ಇರುವ
ರಾತ್ರಿಗಳೇ ಸಾಕ್ಷಿಗಿವೆ
ಹೋಟೆಲ್ಲು ಬಾರು
ಬಸ್ಟ್ಯಾಂಡು ಇನ್ನು ಎಲ್ಲೆಲ್ಲು
ನಾ ಕೆಲಸ ಮಾಡದ ಜಾಗವಿಲ್ಲ
ಆಗ ನೆನಪಾಗಿದ್ದು
ಅವ್ವ ಹೇಳ್ತಿದ್ದ ಆ ಊರು
ಅದು
ಮನಸ್ಸಿಗೆ ಬಂದು
‘ನಮ್ಮೊವ್ವ ಯಾಕೆ
ಪದೆ ಪದೆ ಊರೆಸ್ರ ಹೇಳ್ತಿದ್ಲು’
ಅನ್ನುಸ್ತು.
ಹಾಗೆ ಪದೆಪದೆ ಅನ್ಸಿ
ಆ ಊರ
ನನ್ನೊಳಗೇ ಇಳಿಸಿಕೊಂಡೆ
ಹಿಸ್ಟ್ರಿ ಓದ್ತಾ ಓದ್ತಾ
ಊರೂರು ನೋಡ್ಬೇಕು ಅನ್ನುಸ್ತು
ಪಾಳೆಗಾರಿಕೆ ಮಾಡೋರ ಬಗ್ಗೆ ತಿಳಿದು
ಪುಸ್ತಕ ಬರೀಬೇಕು ಅನ್ನುಸ್ತು
ಹಾಗೆ ಅವ್ವ ಹೇಳ್ತಿದ್ದ ಊರೂ ನನ್ನೊಳಗಿತ್ತು
ಇಲ್ಲಿ ಎಲ್ಲಾದ್ರು ಉಳ್ಕಳಕ ಜಾಗ ನೋಡ್ತಿದ್ದಿ
ನೋಡ್ತ ನೋಡ್ತ ಹಂಗೆ
ಗುಡುಗು ಸಿಡಿಲು ಬಂತು.
ಆಗ
ಊರು ಗಕುಂ ಅಂತಿತ್ತು
ಇಲ್ಲಿ
ಒಂದು ಜನಾನು ಇರಲಿಲ್ಲ
ಊರೊಳಕ ಕಾಲಿಟ್ಮೇಲ
ಈ ಮನೆ ಕಾಣ್ತು
ಮೋರಿ ದಾಟಿ ನಿಂತೆ
ಯಾರೋ ನರಳಾಡಗಾಯ್ತು
ನೋಡಿ ಈಚ್ಗ ಬಂದಾಗ್ಲೆ
ನೀ ಮಿಂಚತರ ಬಂದು ದಂಗ್ಮಾಡ್ದೆ’
ಅಂತ ಕಣ್ಣೀರಾದೆ.
ಅದ್ಯಾಕೋ ಏನೋ
ಬೆಂಕಿಯ ಜ್ವಾಲೆ ಇಳ್ದಂಗೆ ಆಯ್ತು
ಕತ್ತಲು ಅಡರಿಕೊಂಡು ಗುಡುಗೊಂದು
ಗುಡುಗಿ ಮಿಂಚು ರಿವ್ವನೆ ಬಂದೆರಗಿ
ನಾನು ಜಗುಲಿ ಏರಿ ನಿಂತೆ.
ಆಗ ಅದೆ ಬೀದೀಲಿ
ಅದೆ ಮೆಟ್ಟು
ಬೆಂಕಿಯ ಜ್ವಾಲೆಯಂತೆ ಎದ್ದು
ಉರಿತಾ ಕಣ್ಣೀರಿಡ್ತಾ
‘ನಿನ್ನೊಳ್ಗು ಇಸ್ಟಿದ್ದಾ..’ ಅಂತು
‘ಎಲ್ರೊಳ್ಗು ಇರುತ್ತಾ
ಈಗ ಮುಂದುಕ್ಕ ಹೇಳ್ದಯ ಇಲ್ವ
ಮಳೆ ಬರೊಗಾಯ್ತು
ನೋಡು ಮೇಲ ಕಪ್ಗ
ಗವ್ವರಾಕಂಡದ ನೋಡು’ ಅಂತಂದೆ
‘ಅಯ್ ತಗಿ ಆಗ್ಗಿಂದು ಹಿಂಗೆ
ಗುಡುಗುತ್ತ ಮಿಂಚುತ್ತ
ಗಾಳ್ಬೀಸುತ್ತ ಬರಿ ಇದೆ ಆಯ್ತು
ಇದು ಬರದ ನಾ ಕಾಣ್ನಾ..
‘ಸರಿ ನಾ ಎಲ್ಲಿದ್ದೀ…
ತ್ವಾಟ್ದಲ್ಲಿ
ತಡಿ ಸದ್ದಾದಗಾಯ್ತಲ್ಲ..
ಆ ಆಳೂ
ಆ ನನ್ ಒಡಿಯ ಕಾಲಯ್ನು
ತೆವ್ರಿ ಮ್ಯಾಲ
ಆ ಇಬ್ರೂ ಬ್ಯಾಟ್ರಿ ಬುಡ್ತ ಹೋಯ್ತಿದ್ರಲ್ಲಾ
ಆಗ…
೫೦-
ಬ್ಯಾಟ್ರಿ ಹಿಡ್ಕಂಡು ಹೋದವ್ರು
ಬರ್ನೇ ಇಲ್ವಲ್ಲ..
ತಡಿ ಸದ್ದಾದಗಾಯ್ತಲ್ಲ ಆಗ್ಲೆ
ಆಗಾದ್ರ ಈಗ ಬಂದೋರ್ಯಾರಾ..
ಅನ್ತ ನಂಗ ಯೋಚ್ನ ಆಯ್ತು
ಅಂವ ನನ್ನಂಗೆ ಇರಂವ
ಕೂಗ್ತ ಅಂವ್ನ
ಆ ಆಳು ಎಲ್ಕೋಟ್ಲಿ
ನನ್ಜೊತ್ಗೇ ಅಂವ್ನೂ ಸೇರ್ಸಿ
ಮಣ್ಣಾಕಿದ್ದ
ನನ್ನೇನೋ
ಅಯ್ನೋರು ಉಗಿತರ ಅನ್ತ
ತೊಳ್ದು ಇತ್ತಗ ಒರುಗ್ಸುದ್ರು
ಪಾಪ ಅಂವ..
ಅಂವ ಕೂಗ್ತ ಇರದ ಕೇಳಕಾಯ್ತಿಲ್ಲ..
ಇತ್ತಗ ಅದೇನ ಸದ್ದಾಯ್ತು
ತ್ವಾಟ್ದ ಒಳ್ಗಿಂದ
ಓಡಿ ಬಂದಗಾಯ್ತು
ನನ್ ಮುಂದನೆ ಬಂದಗಾಯ್ತು
ಕಡ್ಡಿ ಕೀರ್ದ ಬೆಳ್ಕು
ಆ ಕಡ್ಡಿ ಬೆಳ್ಕು ಸುತ್ತ ಕಾಣ್ತು
ಅದೂ ಕೆಡ್ತು
ಈಗ ಇನ್ನೊದ್ಸಲ,
ಒಂದ್ಕಡ್ಡಿ
ಎರಡ್ಕಡ್ಡಿ
ಮೂರ್ಕಡ್ಡಿ
ನಾಕ್ಕಡ್ಡಿ
ಗೀರಿ ಗೀರಿ ಉರಿತ ಕೆಡ್ತ
ಕೊನ್ಗು
ಅಂವ ಇದ್ನಲ್ಲ ನನ್ನಂಗೆ ಅಲ್ಲಿಗ ನಿಲ್ತು
ಅಂವ ಕತ್ಲೊಳ್ಗ
‘ಬಂದ್ನ
ನನ್ ಮೆಟ್ಟಂವ ಬಂದ್ನ
ಈಗ ಮೆಟ್ಗಂಡ್ನ
ಈಗ ನೀರ್ಲಿ ತೊಳಿತವ್ನ
ಬಿಗಿತಿರ ಮೈಯಿ ಹಗರಾಯ್ತು
ಬತ್ತಿನಿ ನಾನು
ತ್ವಾಟ್ದೊಳಗಿಂದೇ ಹೋಯ್ತ ಅಂವ್ನಿ’
ಅನ್ತನ್ತ ಕೂಗಿ ಹೇಳುದ್ದು ಗೊತ್ತಾಯ್ತು.
ಅಂವ ಅಂವ್ನೆ ಬಂದ್ನಲ್ನ
ಅಂದಂಗಾಯ್ತು ಆದ್ರಾ
ಈ ಅಯ್ನೋರು ಎಲ್ಯಾ..
ಈಗ
ಆ ಆಳು
ಆ ನನ್ ಕಾಲಯ್ನ ಮಾತು
ವಸಿ ಕೇಳ್ತು
ಅತ್ತಗೆ ದಿಗಿಲಾಗಿ ನೋಡ್ದಿ
ಬ್ಯಾಟ್ರಿ ಬೆಳ್ಕು
ನಿಗ್ರಿ ನಿಗ್ರಿ ಬತ್ತಿತ್ತು
ಆ ಆಳು
‘ಕಾಲ, ಈ ಅಯ್ನೋರ್ನ
ಆ ಪೋಲೀಸ್ರು ಏನ್ಮಾಡಿರು..’
‘ಏನ್ಮಾಡಿರು..’
ಈ ಕಾಲಯ್ಯ ಆ ಆಳ್ಗೇ ಪ್ರಶ್ನೆ ಹಾಕ್ದ
ಆ ಆಳು
‘ನಿನ್ ಕೇಳದು ಒಂದೆ
ಇರದು ಒಂದೆ
ನಿಂಗ ಜೋಡೊಲೆದ್ ಬುಟ್ರ
ಇನ್ನೇನ್ ಗೊತ್ತು’
ಅನ್ತ ಹಂಗ್ಸಿ ಹಂಗ್ಸಿ ಮಾತಾಡ್ತ
ಅದೆ ಕಟ್ಟ ಮ್ಯಾಲ ಕುಂತ್ಕಂಡು
ಬೀಡಿ ತಗ್ದು ಕಚ್ಕಂಡು ಸೇದ್ತ
ಆ ಆಳು
‘ಕಾಲ ನಿನೈದ ಪರ್ಶು
ಆ ಶಿವ್ಲಿಂಗು ಜೊತ್ಗ ನೋಡ್ದಿ
ಯಾಕ…
ಈ ರಾಜ್ಕೀಯ ಬೇಕಾ..’
‘ಅಪ್ಪೋಯ್
ನನೈದ ಹಂಗಿಲ್ಲ ಕನಪ್ಪೋ
ಜ್ವಾಳುದ್ ತ್ಯನ ಬುಡ್ಸಕ ಅನ್ತ
ಕರ್ದೊಗಿದ್ರು ಕನಪ್ಪೊ
ಜ್ವಾಳ ಕೊಟ್ರು ಇಸ್ಕ ಬಂದ್ನ
ಮೂರೊತ್ತಾಯ್ತು’
‘ಆದ್ರ ನಿ ಇಲ್ಲಿದೈ
ಅಂವ ಅಲ್ಲವ್ನ
ಈಗ ಎಲಕ್ಷನು ಗೊತ್ತಾ’
ಅನ್ತ ಇಬ್ರಲ್ಲು ಮಾತಾಯ್ತು
ಹಿಂಗೆ ಮಾತಾಗ್ತ ಆಗ್ತ
ಇನ್ನೇಡು ಮೂರು ಬಾಟ್ಲು ಇದ್ದು
ಅವ್ನೂ ಎತ್ಗ ಬಂದು
ಗಟಗಟನೆ ಕುಡಿತಾ ಕುಡಿತಾ
ಆ ಮಾತು ಈ ಮಾತು ಆಡ್ತಾ
ಆ ಮಾತುಕತಲಿ
ಏನೇನ ಬಂದು ಹೋಗಿ ಮಾಡ್ತ
‘ಏ ಕಾಲ ನಿಂಗೊತ್ತಾ..’
‘ಏನಪ್ಪೊ..’
‘ಈ ಅಯ್ನೋರೆಡ್ತಿ ನೀಲವ್ವೋರು
ಎಡಾಂತ್ರಲಿ ಬಸ್ರಾಗಿದ್ದು..’
‘ಅಪ್ಪೊಯ್ ಎನ್ತ ಮಾತ’
‘ಅದ್ಕೆ ನೀನು ಎಕ್ಡ ಹೊಲಿಯಾಕೆ ಸರಿ ಅನ್ನದು’
‘ಯಾಕ ಇಂಗಾಡಿಯಪ್ಪೊ..’
‘ಏ ಕಾಲ..’ ಅನ್ತ ತೊದುಲ್ತ
ಆ ಆಳು ಕೆಳಕ ಬಿದ್ದ
ಈ ನನ್ ಒಡಿಯ ಕಾಲಯ್ಯ
ಆ ಆಳ್ನ ಮ್ಯಾಕ್ಕೇಳ್ಸಿ ಕುಂಡುಸ್ದ
ಆ ಆಳು ಕೈಕಿತ್ತು ಒದರಿ
‘ಏ ಕಾಲ..ಈ ಅಯ್ನೋರೆಡ್ತಿನ
ನಿನೈದ ಮಡಿಕಂಡನ ಗೊತ್ತಾ..’
‘ಅಪ್ಪೊಯ್ ಎನ್ತ ಮಾತ ತಗರಿ’
‘ಏ ಕಾಲ ಎಲ್ಲಿಗ್ಯ ತಗ್ಯದು
ಈ ಅಯ್ನೋರು ಕಿಸ್ದಿದ್ರ
ಆ ನೀಲವ್ವ ನಿನೈದುನ್ ಜೊತ್ಗ ಯಾಕ ಕಿಸಿತಿದ್ದ
ಈ ಎಡಾಂತ್ರಲಿ ಯಾಕ ಬಸ್ರಾಯ್ತಿದ್ದ..’
ಅನ್ತ ತ್ವಾಟ್ಗ ಕೇಳತರ
ಆ ಆಳು ಮಾತಾಡ್ತಿದ್ರ
ಈ ನನ್ ಒಡಿಯ ಕಾಲಯ್ಯ
‘ಅಪ್ಪೊ ಅಪ್ಪೊ ಸುಮ್ಕಿರಪ್ಪ’
ಅನ್ತ ಎದ್ದು ಆ ಕತ್ಲೊಳ್ಗ
ತೆವ್ರಿ ಮ್ಯಾಲ ನಡಿತಾ ಹೋಯ್ತ ಇದ್ರ
ಆ ಆಳು
‘ಹೋಗು ಹೋಗಲೆಯ್
ನೀ ಹೋದ್ರ ನನ್ ಸ್ಯಾಟ..’
ಅನ್ತ ಎದ್ದು ತೂರಾಡ್ತ ಕಲ್ಲಾಸ್ಮೇಲ
ಬಿದ್ಕಂಡ್ನಲ್ಲೊ..
ಆ ಆಳು ಬಿದ್ದ ರಬುಸುಕ್ಕ
ಅಲ್ಲಿ ಅವತ್ತು
ಹಿತ್ಲು ಸಂದಿಲಿ
ಲಾಟೀನ್ ಬೆಳ್ಕು
ಮೂಡ್ತಿತಲ್ಲಾ..
ಅದ್ಕು ಮುಂಚ
ಆಗಾಗ ರಾತ್ರನಾಗ
ಆಲ್ದೆಲ ನೊರಕ ನೊರಕ
ಅನ್ತಿದ್ದ ಸದ್ದು ಕೇಳ್ತಿತ್ತಲ್ಲಾ..
-ಎಂ.ಜವರಾಜ್
ಮುಂದುವರಿಯುವುದು..