೪-
ನನ್ನ ಮೆಟ್ಟಿ ಗಿರಿಕ್ಕು ಗಿರಿಕ್ಕನೆ
ಆ ಸಂತ ಸಾಮ್ರಾಜ್ಯವ ಬುಟ್ಟು
ಅಯ್ನೋರ್ ಪಾದ ಹೋಗ್ತಾ ಹೋಗ್ತಾ
ಕತ್ತಲು ಆವರಿಸಿಕೊಳ್ತ ರಸ್ತೆ ಮಾರ್ಗ ಬುಟ್ಟು
ಕಿರು ದಾರಿ ಕಾಣ್ತಲ್ಲೊ…
ಆ ಕಿರು ದಾರೀಲಿ ಅಯ್ನೋರ್ ಮನೇನಾ?
ಅಂತಂದರೆ ಅದು ಸುಳ್ಳಾಗಿ ಹೋಯ್ತಲ್ಲೋ..
ಆ ಕತ್ತಲ ಸಾಮ್ರಾಜ್ಯದಲಿ
ಅಯ್ನೋರ್ ಉಟ್ಟ ಪಂಚೆ ಅಂಚು
ನನ್ನ ಸುತ್ತ ಸುತ್ಕಂಡು
ನಾಜೂಕಲ್ಲಿ
ನಗ್ತಾ ನಗ್ತಾ
‘ನನ್ ಒಡಿಯನ ವೈಭೋಗ
ನಿಂಗೊತ್ತಾ ಮೆಟ್ಟೇ..?
ನಿಂಗೇನ್ ಗೊತ್ತು..
ನೀ ಹೊಸಿಲಾಚೆ ಬುಟ್ಟು
ಒಂದಿಂಚು ಬರಗಿದ್ದುದಾ..?
ಹೂ ಚೆಲ್ಲಿದ ಮಂಚ ನಂದೇ..
ಅಂತಂತ ಹೇಳ್ತ ಹೇಳ್ತ ನಗಾಡ್ತಲ್ಲೊ..
ಆಗ ಅಯ್ನೋರು ಎಡಗೈಲಿ ಪಂಚೆ ಮೇಲೆತ್ತಿ
ಅರೆ, ಪಂಚೆಯ ಅಂಚು ನಗಾಡ್ತನೇ ಮೇಲೋಯ್ತಲ್ಲೊ..
ಕತ್ತಲು ಆವರಿಸಿ ಏನೂ ಕಾಣದ ಹೊತ್ತು
ಅಯ್ನೋರ್ ಇಟ್ಟ ಪಾದದ ಸಾಕ್ಷಿಗೆ
ನನ್ನ ಮೈಮಾರ ನೋಯ್ತ ನೋಯ್ತ
ಗಿರಿಕ್ಕು ಗಿರಿಕ್ಕು ಸದ್ದು ಜೋರಾಗ್ತಾ ಆಗ್ತಾ
ಆ ಕಿರು ದಾರಿಯ ಆವರಿಸಿತಲ್ಲೊ..
ಕಿರು ದಾರಿಯ ಸಂದಿಯಲಿ
ಇನ್ನೊಂದು ದಾರಿ ಕಾಣ್ತಲ್ಲೊ..
ಕೊಕ್ಕೊಕ್ಕೊಕ್ ಅಂತನ್ನೊ
ಹತ್ತಾರು ಮರಿ ಹಿಂಡು ಕೋಳಿ..
ಕೊಕ್ಕೊಕೋಕೋ.. ಅಂತನ್ನೊ
ಕೆಂಪುಂಜದ ಕೂಗು..
ಕಿಂವ್ಗುಟ್ಟುತ ಬಾಲ ಅಳ್ಳಾಡಿಸಿ
ಹಿಂದಿಂದೆ ಬಂದ ಕಜ್ಜಿ ನಾಯಿ
ಮೈಮಾರ ಕಡ್ಕತಾ ಕೆರ್ಕತಾ
ನನ್ನ ನೆಕ್ಕಲು ಬಂತಲ್ಲೊ..
ಅಯ್ನೋರ್ ದಾಪುಗಾಲಿಗೆ
ನಾ ಅದರ ನಾಲಿಗೆ ಮೊನೆಗೆ ಸಿಗದೆ
ಪಾರಾದ್ನಲೊ….
ಅರೆ ಆ ಸಂದಿ ದಾರಿಲಿ
ಬೆಳಕೊಂದು ಬೆಳಗಿ ಅಯ್ನೋರ್ನ
ನಗ್ತಾ ನಗ್ತಾ ಕರೀತಲ್ಲೊ..
ನನ್ನ ಮೆಟ್ಟಿ ದಾರಿಗುಂಟ
ಮಜಾ ಮಾಡ್ಕ ಬಂದ ಅಯ್ನೋರು
ನನ್ನ ಹೊಸಿಲಾಚೆ ಬುಡುವಾಗ
ಅವರುಟ್ಟ ಪಂಚೆ ಅಂಚು
ಮೆಲ್ಲನೆ ಕೆಳ ಜಾರಿ
ನನ್ನ ನೋಡಿ ನಗಾಡ್ತ
ಹಾಗೆ ಗೇಲಾಡ್ತ ಒಳಗೋಯ್ತಲ್ಲೊ…
ಅಯ್ಯೋ ಈ ಕತ್ತಲ ಸಾಮ್ರಾಜ್ಯದಲಿ
ಕಿರುದಾರಿ ಸಂದಿ ಮನೆ ಹೊಸಿಲಾಚೆ
ಮೂಲೆಯಲಿ ನಾ ಒಬ್ಬೊಂಟಿ ಆದ್ನಲ್ಲೊ..
ಕಿಂವ್ಗುಟ್ಟುವ ಕಜ್ಜಿ ನಾಯಿಯ ಸದ್ದು
ನನ್ನದೆಯ ಡವಗುಟ್ಟಿಸಿತಲ್ಲೊ..
ಬಂದ ರಭಸಕೆ ಬಾಲ ಅಲ್ಲಾಡಿಸಿ
ನಾಲಿಗೆಯ ಮೊನೆಯಲಿ
ನನ್ನ ನೆಕ್ಕಿ ನೆಕ್ಕಿ
ನನ್ನ ಮೈ ಕಚ್ಚಿ ಕಚ್ಚಿ
ನನ್ನ ಉರುಳಾಡಿಸಿ ಹೊರಳಾಡಿಸಿ
ನನ್ನ ಮಗ್ಗುಲಾಗಿ ಮಲಗಿಸಿ
ಕುಣಿತಾ ನಲಿತಾ ನುಲಿತಾ
ಚೆಂಗಂತ ಆ ಕತ್ತಲ ಸಾಮ್ರಾಜ್ಯದಲಿ
ಮಾಯವಾಯ್ತಲ್ಲೊ…
ಮುಂದುವರೆಯುವುದು….