ಮೆಟ್ಟು ಹೇಳಿದ ಕಥಾ ಪ್ರಸಂಗ ಒಂದು ನೀಳ್ಗಾವ್ಯ (ಭಾಗ 37 & 38): ಎಂ. ಜವರಾಜ್

-೩೭-
ಬಾಗ್ಲು
‘ಕಿರ್..’ ಅನ್ತು
ನನ್ಗ ಮಂಪ್ರು
ನೋಡ್ಬೇಕು ಅಂದ್ರು ಆಯ್ತಿಲ್ಲ
ಹಂಗೆ ಕಣ್ಮುಚ್ದಿ

‘ಕಿರ್..’
ಅದೆ ಬಾಗ್ಲು ಸದ್ದು
ಇನ್ನೊಂದ್ಸಲ.

ಈ ಅಯ್ನೋರು
ನಾಟ್ಕ ನೋಡ್ತ ಎದ್ಬಂದಾಗ
ಬೆಳುಗ್ಗ ನಾಕತ್ರ ಆಗಿತ್ತು
ಈಗ್ತಾನೆ ನಿದ್ದ ಹತ್ತಿತ್ತು

ಅರಗಣ್ಣು ಬುಟ್ಟಿ
ನೀಲವ್ವೋರು ಕಂಡ್ರು

ಅದ್ಯಾಕಾ ಏನಾ
ಇವತ್ತು
ಸೀಗಕಡ್ಡಿ ಹಿಡಿದೆ
ಇಟ್ಗ ಗುಡ್ಡಲಿ
ತಿಕ ಊರಿ
ಮಂಡಿ ತಬ್ಕಂಡು
ಬಿಸುಲ್ಗ ಮುಖ ಕೊಟ್ಗಂಡು
ಕುಂತ್ರು.

ದೊಡ್ಡವ್ವ ಬಂದು
‘ಕುಸೈ ನೀಲ ಹೆಂಗಿದ್ದಯ್
ನೀ ಯೋಚ್ನ ಮಾಡ್ಬೇಡ
ಮೈಯಿಳಿಸ್ಕಂಡದು ಸರಿನೆ ಬುಡು
ಅಂವ ಮಾಡುದ್ದು
ನಿಂಗ ಸರಿ ಕಾಣ್ದೆ ಇರುಬೋದು
ಆದ್ರ
ಲೋಕುದ್ರುಷ್ಟಿಯಿಂದ
ಸರಿಯಾಗದ ಕುಸೈ’

ಈ ದೊಡ್ಡವ್ವ
ಮಾತಾಡ್ತನೇ ಅವ್ಳ
ಆದ್ರ
ಈ ನೀಲವ್ವ
ತುಟಿಕ್ ಪಿಟಿಕ್ ಅನ್ನಿಲ್ಲ

ಈ ದೊಡ್ಡವ್ವ,
‘ಕುಸೈ..’ ಅನ್ತ
ದನಿನ ತಗ್ಗುಸ್ತ
ಪಿಸ್ಗುಟ್ಟುದ್ಲು

ಈ ದೊಡ್ಡವ್ವುನ್ ಪಿಸ್ಮಾತ್ಲಿ
‘ನಂಗೊತ್ತು ಕುಸೈ
ನಿಂಗ ವಂಚ್ನ ಆಗಿರದು..

ದೇವಿಗ ತಾಳಿ ಕಟ್ಟಿ
ವಸ್ಗ ರಾತ್ರ
ದೇವಿ ತಂಗ ಚಂದ್ರಿ ಜೊತ್ಗ
ಆರ್ತಿಂಗ ವರ್ಸ ಪತ್ತಿಲ್ಲ..

ದೇವಿಗು ಕೂಸಾಯ್ತು
ಅದಾದ ವರ್ಸುಕ್ಕ
ಚಂದ್ರಿ ಯಣ
ಕಪಲ ಬಾವಿಲಿ ತೇಲ್ತು
ಆ ಚಂದ್ರಿಗ
ಒಂದು ಹೆಣ್ಗೂಸಿತ್ತಂತ
ಆದ್ರ
ಆ ಚಂದ್ರಿ ಕೂಸು
ಏನಾಯ್ತು ಅನ್ನದೆ ಈಗ್ಲೂ ತಿಳಿದು..’

ಬಿಸ್ಲು ಏರ್ತಿತ್ತು
ಬೀದೀಲಿ ಒಂದು ಜನಾನು ಇಲ್ಲ
ಗಕುಂ ಅನ್ತಿತ್ತು
ಇದ್ಯಾಕ ಅಂದ್ರ
ಬೆಳಗಾನ ಆಡ್ತಿದ್ದ
ಕುರುಕ್ಷೇತ್ರ ನಾಟ್ಕ ಇನ್ನೂ ಮುಗ್ದಿಲ್ಲ..

ಈ ದೊಡ್ಡವ್ವ,
‘ಈಗ ಆಸ್ತಿ ಅನ್ತ ಏನಿಟ್ಟಿದನು..
ಎಲ್ಲ ಸೂಳ್ತನ್ಕೆ ಆಯ್ತು.
ಆ ಅಗ್ಸರಂವ ಬತ್ತನಲ್ಲ
ಆ ಚೆಂಗುಲಿ ಮೂದೇವಿಗ
ಕಂತಕಟ್ಟ ಮಾಳ್ದಲಿರದೆಲ್ಲ ಹೋಯ್ತು
ಮನಲಿರ ಕಾಸುಕರಿಮಣಿ ಈಗ್ಲೂ
ಹೊಯ್ತನೇ ಅದ
ನೀ ಕೇಳಲ ಅನ್ತ ಗೊತ್ತು..’

ಈ ದೊಡ್ಡವ್ವನ ಮಾತು
ನೀಲವ್ವೋರು ಕೇಳ್ತ ಇದ್ದಾರ
ಅನ್ನದೆ ನಂಗ ತಿಳಿದು.

ನಾಟ್ಕ ಮುಗಿತು ಅನ್ಸುತ್ತ
ಬೀದಿಗ ಜನ ಇಳಿಯದು ಕಾಣ್ತು
ಈ ದೊಡ್ಡವ್ವ
ಆಗಿಂದ ಒಂದೆ ಸಮ್ಕ
ಎಲ ಅಡ್ಕ ಅಗಿತ ಇದ್ದದ
ಪಿಚಕ್ಕನೆ ಉಗಿತಾ,
‘ನಮ್ ಶಂಕ್ರುನು
ಚಪ್ಲಿ ಕೆಲ್ಸ ಮಾಡ್ತನಲ್ಲ
ಆ ಕಾಲುನ್ ಗಂಡು ಪರ್ಶು
ಒಂದೆ ವಾರ್ಗ..’
ಅನ್ತ ಇನ್ನೊಂದ್ಸಾರಿ
ಪಿಚುಕ್ಕನೆ ಉಗುತ್ಲು.
ಆಗ
ಬಾಗ್ಲು
‘ಕಿರ್..’ ಅನ್ತು
ಈ ದೊಡ್ಡವ್ವ
‘ಬತ್ತಿನಿ ತಡಿ ಕುಸೈ’ ಅನ್ತ
ಎದ್ದೇಳಗ ಈ ಅಯ್ನೋರು
ಬಾಗ್ಲು ಬುಟ್ಟು
ನನ್ನ ಮೆಟ್ಟಿ
ಮೋರಿ ದಾಟಿ ಬೀದಿಗುಂಟ
ಅಂಗಿ ತೋಳ್ನ ಮಡುಸ್ತಾ ನಡುದ್ರು…


-೩೮-
ಈ ಅಯ್ನೋರು
ತೊಗರಿ ಹೊಲ್ದೊಳಕ
ಉಗ್ದಾಗ ಚೆಲ್ವಿ ಅಲ್ಲೆ ಇದ್ಲು
ಅವಳ ಕಣ್ಲಿ ನೀರಿತ್ತು
‘ಚೆಂಗುಲಿಗ ಎಲ್ಲ ಹೇಳಿನಿ’
‘ಅಯ್ನೋರಾ..’
‘ನೋಡು ಇವತ್ತ ದಾಳ ಅದ
ಜೊತ್ಗ ಓಕ್ಳಿನು ಅದ’
‘ಗೊತ್ತು ಅಯ್ನೊರಾ
ಚೆಂಗುಲಿ ಇಂಗೆಲ್ಲ ಮಾಡ್ತನ ಅನ್ತ ಗೊತ್ತಿತ್ತಾ’
‘ಮಾತ್ಬ್ಯಾಡ..
ಕಾಲುನ್ ಕಳ್ಸು
ದಾಳ್ಗು ಮುಂಚ
ತ್ವಾಟ್ದಲ್ಲೆ ಇರ್ತಿನಿ’


ದಾಳ ಎತ್ತುದ್ರು
ಊರು ಓಕ್ಳಿಲಿ ಮುಳ್ಗಿತ್ತು
ಚಡಿಚಡಿಚಡಿ
ಚಡ್ಚಡಿ ಚಡ್ಚಡಿ ಚಡ್ಚಡಿ
ಚಡ್ಕುಣಕು ಚಡ್ಕುಣಕು
ಣಕುಣ ಣಕುಣ ಣಕುಣ
ಚಡ್ಚಡ್ಡಿ ಚಡ್ಚಡ್ಡಿ ಚಡ್ಚಡ್ಡಿ
ಚಡಿಚಡಿಚಡಿಚಡಿ…
ತಮ್ಟ ಏಟ್ಗ ಊರು ಕುಣಿತಿತ್ತು.

ಈ ಅಯ್ನೋರು
ದಾರಿಲೆ ನಿಂತು
ನೋಡುದ್ದೇ ನೋಡುದ್ದು
ಕಾಲ ಎಲ್ಯಾ..
ದಾಳುಕ್ಕು ಮುಂಚ
ಕಾಲ ಬರ್ಬೇಕಿತ್ತಲ್ವ…

ಕುಲೊಸ್ತರು ಓಡ್ಬಂದ್ರು
‘ಅಯ್ನೋರಾ ಬನ್ನಿ’
‘ಲೇ ಹೋಗ್ರ ಲೆಯ್
ನಾ ಬಂದು ಏನ್ಮಾಡ್ಲಿ
ಕುಣ್ಯಾ ಐಕ್ಳು ಮುಂದ
ನಾ ಕುಣ್ಯಾಗಿದ್ದಾ…
ನೋಡ್ತ ಅಂವ್ನಿ
ಹೋಗಿ ಮಾಡಿ
ಬತ್ತಿನಿ ಪೂಜ ಹೊತ್ಗ..

ಅಲ್ಲಿ ದಾಳ ವಾಲಾಡ್ತಿತ್ತು
ಊರ ಕಾಯಾಳ್ಗಳು
ದಾಳ
ಹಿಡ್ಕಂಡು ವಾಲಾಡ್ತಿದ್ದು
ಎಣ್ಣ ತುಂಬಿರ ದಾಳನ
ಹಿಡ್ದು ನಿಲ್ಸದೇ ಸಾಸ ಕಣ
ಮನ ಮನ ಹೆಂಗುಸ್ರು
ದಾಳುಕ್ಕ ಪೂಜಾ ಮಾಡಿ

ಹಿಡ್ದೋರ ಮೈಗ
ದಾಳ ಸಯಿತ
ಕೆಂಪ್ ನೀರು
ಅರ್ಸ್ಣುದ್ ನೀರು
ಕುಟ್ತಿದ್ರ ಹಿಡ್ದೋರು
ತಮ್ಟ ಏಟ್ಗ ಲಕ್ಕಲಕ್ಕನೆ
ಕುಣ್ತ ಕುಣ್ತ ಕುಣ್ತ
ಎನ್ತ ಕುಣ್ತ
ಆ ಕುಣ್ತುಕ್ಕ ಊರೇ ಕುಣಿತಿತ್ತು.


ಈ ಅಯ್ನೋರು
ತ್ವಾಟದ ಮನಲಿ
ಕಲ್ಲಾಸಿನ ಮ್ಯಾಲ ಕುಂತು
ಬೀಡಿ ಹಚ್ಚುದ್ರು

ಬಿಸ್ಲು ರವ್ಗುಟ್ತಿತ್ತು
ತಮ್ಟ ಸದ್ದು ಕೇಳ್ತಿತ್ತು
ಧರೆಗೆ ದೊಡ್ಡೋರ್ಗ ಜೈ ಹಾಕ್ತ
ಊರು ಗಳ್ಳಾಕ್ತಿತ್ತು.

ಆಗ ಬಂದ ನೋಡು
ನನ್ನೊಡಿಯ ಕಾಲಯ್ಯ
ನಂಗಂತು ನನ್ನೊಡಿನ್ನ
ನೋಡ್ತಿದ್ರ ಒಂಥರ ಚೆಂದ

‘ಅಯ್ನೋರಾ, ಚೆಲ್ವಿ ಹೇಳ್ದ’
‘ನೀ ಯೋಚ್ನ ಮಾಡ್ಬೇಡ
ಎತ್ಗ ಅಲ್ಲಿ ಕಾನಿನ
ಅದ್ರಲ್ಲಿ ನಾಕವ’
‘ಆಯ್ತು ಅಯ್ನೋರಾ..’


ಸೂರ್ಯ ನತ್ತಿ ಬುಟ್ಟು ಇಳ್ದ
‘ಅಯ್ನೋರಾ..’
ಅಂವ ಕೂಗ್ತಾ ಬಂದ.

ಅಂವ ಅಂದ್ರ ಯಾರಾ..

ನಂಗು ಗೊತ್ತಿಲ್ಲ.

ಈ ಅಯ್ನೋರು
ಅಂವನ್ನ ಎಂದ್ಗೂ
ಹೆಸ್ರಿಡ್ದು ಕರಿನಿಲ್ಲ
‘ಅಂವ’
‘ಇಂವ’
‘ಇವ್ನೆ’
ಅನ್ನೋರು.

ಹಾಗಾಗಿ ಅವ್ನ ಹೆಸ್ರು ನಂಗ ತಿಳಿದು.

ಸರಿ ಅಂವನ್ನ ನೋಡಿ
‘ಓಹ್ ಇವ್ನೆ ಬಾ’
‘ಅಯ್ನೋರಾ
ಕಣ್ತಪ್ಸಿ ಬರದೇ ಆಯ್ತು’
‘ಇರ್ಲಿ ಇರ್ಲಿ
ಹೆಂಗಿದ್ದದು ಓಟುನ್ ಮಟ್ಟು’
‘ಅಯ್ನೋರಾ
ಇನ್ನಾರ್ ತಿಂಗ್ಳು ಅಷ್ಟೆ
ನೀವೆ ಚೇರ್ಮನ್ನು..’
‘ಎಸ್ಟ್ ಮೆದ ಹಾರಿ ಹಾರಿ ಬಂದ’
‘ಈ ಸಲ ಯಾಕೊ
ಮಂಕಾಯ್ತು ಅಯ್ನೋರಾ’

ಈ ಅಯ್ನೋರು ನನ್ನ ಬುಟ್ಟು
ತ್ವಾಟ್ದೊಳಕ ಹೋದ್ರು
ಜೊತ್ಗ ಅವ್ನು ಹೋದ್ನ

ಸುಮಾರೊತ್ತು ಕಳಿತು
ಈಚ್ಗ ಬರ್ನೇ ಇಲ್ಲ
ಏನೇನೋ ಮಾತಾಡೋರು

ಕತ್ಲು ಕವುಸ್ಗತ್ತು

ಇಬ್ರು
ಬೀಡಿ ಕಚ್ಕಂಡು
ಬುಸ್ಸ ಬುಸ್ನ
ಹೊಗ ಬುಡ್ತ
ಈಚುಗ್ಬಂದ್ರು

ಅಂವ ಹಂಗೇ
ಕತ್ಲಲ್ಲಿ ಹೆಜ್ಜೆ ಹಾಕ್ದ
ಈ ಅಯ್ನೋರು
ಅವ್ನು ಹೋಗದ್ನೆ ನೋಡ್ತ
ಕಲ್ಲಾಸ್ಮೇಲ ತಿಕ ಊರುದ್ರು.

-ಎಂ.ಜವರಾಜ್


ಮುಂದುವರಿಯುವುದು….

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x