ಮೆಟ್ಟು ಹೇಳಿದ ಕಥಾ ಪ್ರಸಂಗ ಒಂದು ನೀಳ್ಗಾವ್ಯ (ಭಾಗ 35 & 36): ಎಂ. ಜವರಾಜ್

-೩೫-

‘ದೊಡ್ಡವ್ವವ್..’
ಎದುರು ಮನ ಪಡ್ಸಾಲ್ಲಿ
ಕುಂತು ಎಲ ಅಡ್ಕ ಹಾಕತ
ಅಯ್ನೋರ್ ದನಿ.
ಆ ದನಿಗ,
‘ಕುಸೈ ಒಳ್ಳಿ ಕೆಲ್ಸ ಮಾಡ್ದ ಬುಡು
ಊರು ಸುಮ್ನಿದ್ದಾ..
ಈ ವಯ್ಸಲಿ ಇದ್ಯಾನ ಹಿಂಗಾ..
ನೀಲ ಒಳ್ಳೋಳೆ
ಆದ್ರ ಹಣಬರ ಇರ್ಬೇಕಲ್ಲ ಬುಡು
ಈಗೇನ ಶಂಕ್ರಿಲ್ವ..
ಸಾಕು ಬುಡು
ಹೆಂಗು ಅವ್ನುಗು ಗಂಡಾಗದ
ವಂಶ ಹೆಸರೇಳಕಾದ್ರು ಆಯ್ತಲ್ಲ ಬುಡು’
‘ದೊಡ್ಡವ್ವವ್ ಸುಮ್ನಿದ್ದಯ..
ಕುಲ್ಗೆಟ್ಟವೆಲ್ಲ ನನ್ ವಂಶನಾ..’
‘ಮೊಗ ಅವ ಕುಲ್ಗೆಟ್ಟ ಹೆಣ್ಣೇ ಇರಬೋದು
ನಿನ್ ರಕ್ತ ಕುಲ್ಗೆಟ್ಟೊಗಿದ್ದಾ..
ಶಂಕ್ರನ್ ಮೈಲಿ ಹರಿತಿರದು
ನಿನ್ ರಕ್ತ್ಯಲ್ವ..
ಅದು ನಿನ್ ರಕ್ತ ಆದ್ಮೇಲ
ಆ ಮಗಿನ್ ರಕ್ತ ನಿಂದೆ ಅಲ್ವ…
ಯಾವ್ದಾದ್ರು ದೂರ ಮಾಡ್ಬೇದು
ರಕ್ತ ದೂರ ಮಾಡಕಾದ್ದಾ…’

ಅಯ್ನೋರು ದೊಡ್ಡವ್ವ ಹೇಳುದ್ದಾ
ಕೇಳಕಾಗ್ದೆ ಸುಮ್ನಾದ್ರು.

‘ಕುಸೈ ಕೆಳ್ಗ ಇವತ್ತು
ಬೀದ್ಬೀದಿಲು
ರಕ್ತದ ಹೊಳೆ ಹರಿತುದ
ಗೊತ್ತಿಲ್ವ ನಿಂಗಾ..

ಚನೈನಬ್ಬ –

ಅದು
ನಿಂಗು ಗೊತ್ತು
ನಂಗು ಗೊತ್ತು
ಊರೂರ್ಗು ಗೊತ್ತು
ಕೇರ್ ಕೇರಿಗು ಗೊತ್ತು
ಈ ಭೂಮ್ತಾಯಿ ಜೊತ್ಗ
ಸಂಬಂಧ ಮಡಿಕಂಡಿರ
ಜೀವ್ ಜೀವ್ಕು ಗೊತ್ತು
ಜಗತ್ನೆ ಹೊತ್ಗ ಮನ್ಗಿ
ಪೂಜುಸ್ಕತಿರ
ಧರೆಗೆ ದೊಡ್ಡೋರಿಗೇ ಗೊತ್ತು.
ಇದು ಈಗುಂದಾ
ಕಾಲ್ದಿಂದೂ ಅದ
ಮುಂದುಕ್ಕು ಅದ
ಕಾಲ್ಕಾಲುಕ್ಕು ಅದ
ತಪ್ಸಗಿದ್ದಾ ಅದ

ಆಗಲ್ಲ
ಅಂದ್ಮೇಲ ಇದು
ಸಾಚಿತಾನೆ.

ಎಮ್ಮೆದು ಕ್ವಾಣುದ್ದು ದನಿದ್ದು
ಆಡು ಕುರಿ ವಾತುದ್ದು
ನಾನು ನೀನು ತಿಂದೇ ಇರಬೋದು
ಹಂಗಂತ ತಿನ್ನೋರ
ಮಾತಾಡುಸ್ದೆ
ನೋಡ್ದೆ ಇರಕಾದ್ದಾ..
ನೀನು ನಿನ್ ತ್ವಾಟಲಿ
ಕೆಲ್ಸ ಮಾಡುಸ್ದೆ ಇರಕಾದ್ದ..
ಹಂಗೇನಾರ ಆದ್ರ
ನಿ ಉದ್ದಾರ ಆಗಕಾದ್ದ..
ಹಂಗ,
ನಿನ್ ಪಾಡು ನಿಂದು
ಶಂಕ್ರುನ್ ಪಾಡು ಶಂಕ್ರುನ್ದು
ಬುಟ್ಟಾಕು
ಇಲ್ಲಿ
ಯಾರೂ
ಸಾಚಾನು ಅಲ್ಲ
ಸಾಚಿತಾನು ಅಲ್ಲ ಅಲ್ವ….
ಆ ಸುನಿತೇನು
ಜಲಗಾರನ ಮಗಳೇ ಇರಬೋದು
ಆದ್ರ,
ಅವ್ಳ ನೋಡ್ತಿದ್ರ
ಜಲಗಾರನ
ರಕ್ತ ಹರಿತಿರವ್ಳ್ ತರ ಕಂಡುದಾ..
ಕಣ್ಣು ಮೂಗು ಬಾಯಿ
ಎಲ್ಲ ನನ್ತರ ನಿನ್ತರಾನೆ ಅಲ್ವ….
ಕುಸೈ,
ಮನುಸ್ರು ಅನ್ತ ಒಂದು
ಪ್ರಾಣಿ ಅನ್ತ ಒಂದು
ಹಂಗಾಗಿ,
ಮನುಸ್ರು ಜೀವ ರಕ್ತ ಒಂದು
ಮೂಗ್ಪ್ರಾಣಿ ಜೀವ ರಕ್ತ ಒಂದು
ಈಗ
ನಾನೇಳದು
ಬಯಿರಂಗ್ದಲ್ಲಿ

ಮೂಗ್ಪ್ರಾಣಿ ಕೊಲ್ಲ ತರ
ಮನುಸ್ರ ಕೊಲ್ಲಕಾದ್ದಾ..
ಕುಸೈ
ಆದ್ದು ಆಯ್ತು
ನಿನ್ ವಂಶ್ದ ಕುಡಿನ
ಜೋಪಾನ ಮಾಡ್ಕ’

ಈಗ ಅಯ್ನೋರು
‘ದೊಡ್ಡವ್ವವ್ ಬಾಯ್ಮುಚ್ಗ ಕುಂತ್ಗ’
ಅನ್ತ ಸಿಡುಕಿ ಮ್ಯಾಲೆದ್ರು.

ಈ ಅಯ್ನೋರು
ಅದ್ಯಾಕ ಸಿಡುಕಿ ಮ್ಯಾಲೆದ್ರು..
ಆಗಾರ
ಆ ಸುನೀತವ್ವೋರು
ನನ್ ಒಡಿಯ
ಕಾಲಯ್ಯನ ವಂಶನಾ…

ಈ ಅಯ್ನೋರು
ಪಡ್ಸಾಲಿ ಬುಟ್ಟು ಏಳಕು
ಅಲ್ಲಿ
ಕೆಳಗಲ ಬೀದ್ಬೀದಿಲಿ
‘ಕುಲ್ದೂಟ ಅದ
ಎಲ್ರು ಬನ್ರಯ್ಯವ್’ ಅನ್ತ
ತಮ್ಟ ಬಡಿತಾ ಸಾರ್ತ ಇರದು ಕೇಳ್ತ
ಇದ ಕೇಳ್ದ
ಕೆಳಗಲ ಬೀದಿ ಜನ
ಗೊಳ್ಳಾಕ್ತ ಇರದು ಕೇಳ ಹೊತ್ಲಿ
ಚುರುಗುಟ್ಟೊ ಬಿಸ್ಲು


-೩೬-
ಇನ್ನೇನ ನಾಟ್ಕ
ಆಡ ಹೊತ್ತಾಯ್ತು
ಕುಲೊಸ್ತರು ಬಂದಿದ್ರು
ಅದ್ಕು ಮುಂಚ
ಅಕ್ಕ ಪಕ್ಕ ಊರವ್ರು
ಗೌಡ್ರುಗಳು
ತ್ವಾಟದ ಮನಲಿ ಬಂದು ಇದ್ರು
ಅಯ್ನೋರ ದೆಸೆಯಿಂದ
ಈ ಕುಲೊಸ್ತರು
ಊ್ಞ ಅನ್ತ ಸರಂಜ್ ಮಾಡಿದ್ರು
ಚೆಂಗುಲಿ
ಈ ಸರಂಜ್ ಉಸ್ತುವಾರಿನ
ಹೊತ್ಗಂಡು ಮೆರಿತಾ
ಓಡಾಡಿದ್ದೇ‌ ಓಡಾಡಿದ್ದು
ಅಯ್ನೋರ್ ಜೊತ್ಗ
ಬಂದಿರ ಗೌಡ್ರಿಗೆಲ್ಲ ಹೂವಾರ ಹಾಕಿ
ಮರ್ವಾದಿ ಮಾಡಂಗು ಆಗಿತ್ತು.

ರಾತ್ರಿ ಕತ್ತಲು.
ನಾಟಕದ ಸೀನ್ಸ್ ತುಂಬ
ತರಾವರಿ ಲೈಟ್
ಉರಿತಾ ಮಿನುಗ್ತಾ
ಕಣ್ಣು ಕುಕ್ಕದು ಇಲ್ಲಿಗಂಟ ಕಾಣ್ತಿತ್ತು

‘ಅಲೊ ಅಲೊ
ಯಾಕ್ರಪ್ಪಾ ..
ಏ ಆಕಡ ಹೋಗಿ
ಏ ನೀ ಈಕಡ ಬಾ
ಬನ್ನಿ ಎಲ್ಲ ಬನ್ನಿ ಕುಂತ್ಕಳಿ
ಇನ್ನೇನ ನಾಟ್ಕ ಸುರು ಮಾಡ್ತರ
ಕುರುಕ್ಷೇತ್ರ ಅತ್ವಾ ಬೀಮಾರ್ಜುನ ಇಜಯ
ನಾಟುಕ್ದಲ್ಲಿ
ಅರ್ಜುನ ದುರ್ಯೋದನ ಬೀಮ
ಕ್ರಿಸ್ಣ ನಕುಲ ಸಹದೇವ ದರ್ಮರಾಯ
ಕುಂತಿ ದ್ರೌಪತಿ
ಎಲ್ಲ ರಡಿ ಮಾಡ್ಕಂಡು
ನಿಮ್ಮುಂದ ಬತ್ತರ
ಗಲಾಟಿ ಮಾಡ್ಬೇಡಿ ಸುಮ್ನಿರಿ’
ಅನ್ತ
ಮೈಕ್ ಹಿಡ್ದೋರು ಮಾತಾಡ್ತ ಇದ್ರ
ಇನ್ನೊಬ್ಬ
‘ಲೇ ಕೊಡಲಯ್ ನಾಯಿ ಬಡ್ಡೆತದ’ ಅನ್ತ
ಮೊದಲಿನವನಿಂದ ಮೈಕ ಕಿತ್ಕಂಡು
‘ನೋಡಿ ಈ ನಾಟ್ಕ ಮಾಡ್ಬೇಕಾರ
ನಮ್ಮೂರಿನ ಮೇಗಲಕೇರಿ ಅಯ್ನೋರು ಕಾರಣ
ಅವ್ರು ಇನ್ನೇನ ಬತ್ತರ
ಹಂಗೆ ನಮ್ಮೂರ್ನ ಇಸ್ವಾಸುಕ್ಕ
ಅಕ್ಕಪಕ್ಕ ಊರಿನ ಮುಖಂಡ್ರು ಬಂದರ
ನಾವು ಕರದೇಟ್ಗೆ ಬತ್ತಿಂವಿ ಅನ್ತ
ಕೆಲ್ಸ ಕಾರ್ಯ ಬುಟ್ಟು
ನಮಗೋಸ್ಕರ ಬಂದರ..’
ಅನ್ತ ಹೇಳ್ತಿದ್ರ ಅಯ್ನೋರು
ಮೀಸ ತಿರಿತಾ ಕುಂತಿದ್ರು.


ಖಾಲಿ ಮಾಡಿರ
ಹೆಂಡದ ಕಾನಿ ಹೊತ್ಕಂಡು
ನಿಂತಿದ್ದ ಚೆಂಗುಲಿನ
‘ಏಯ್ ಇಡು ಅಲ್ಲಿ’
ಅನ್ತ
ತ್ವಾಟ್ದ ಒಳಕ
ಕರಕ್ಕೊಂಡು ಬಂದ್ರು
ಅಲ್ಲಿ
ತಿಗುನು ಗರಿ ಕವುಸ್ಕಂಡು
ಗವ್ವನ್ನದು
ಆ ಗವ್ವನ್ನ ಜಾಗ್ದಲ್ಲಿ
ಇಬ್ರು
ಏನೇನ ಪಿಸಿಪಿಸಿ ಮಾತು.

ಉದ್ದಿ ತೆವರಿ ಮ್ಯಾಲಿಂದ
ಕೆಳ ಪಾತಿಗ ನೀರು
ದೊದಗುಟ್ಗ ಹರಿತಿತ್ತಲ್ಲ

ಪಿಸಿಪಿಸಿ ಮಾತು
ಏನೂ ಕೇಳ್ದೆ
ಅದರೊಂದ್ಗೇ ಹರಿತಾ ಹೋಯ್ತು.


ಅರ್ಧರಾತ್ರ

ನಾಟ್ಕ ಅರ್ಧಭಾಗನು ಆಗಿಲ್ಲ
ಹಿಂಗಾದ್ರ
ಬೆಳ್ಕರುದು ಹತ್ತಾದ್ರು
ನಾಟ್ಕ ಮುಗ್ಯಾದಿಲ್ಲ

ಕೃಷ್ಣ ತಲಮ್ಯಾಲ
ಕಿರಿಟ ಹಾಕಂಡು
ಕೈಲಿ ಚಕ್ರ ಹಿಡ್ಕಂಡು
ನಗ್ತ ನಿಂತಿರ್ತನ

ಹಿಂಚರಿ ಸೀನ್ಸೊಳಗಿಂದ
ಅರ್ಜುನ
ಎಡ್ಗಡ ಹೆಗುಲ್ಲಿ ಬಿಲ್ಲೊತ್ಗಂಡು
ಬಲ್ಚರಿ ಕೈಲಿ
ಬಾಣ ಹಿಡ್ಕಂಡು-

‘ದೇವ ದೇವ ದಿವ್ಯ ಬಾವ
ಇದ್ಯ ನಿಲ್ಲಿಸು ವಾಸುದೇವ
ದೇವ ದೇವ ದಿವ್ಯ ಬಾವ…
ಕೊಲಲಾರೆನು
ನಾ ಬಂದು ಬಾಂದವರ..
ಕೊಲಲಾರೆನು
ನಾ ಅಣ್ಣ ತಮ್ಮಂದಿರಾ…’
ಅನ್ತ ಪದ ಹೇಳ್ಕಂಡು
ಬತ್ತಿದಂಗೆ
ಜನ ಲೊಚಗುಟ್ತ ಚಪ್ಪಾಳ ತಟ್ತರ

ಆಗ ಕೃಷ್ಣ
ಅರ್ಜುನ ಆಡ ಪದನ ಕೇಳ್ಬುಟ್ಟು
‘ಬಿಡು ಬಿಡು ಚಿಂತೆಯನು
ಓ ಪಾರ್ಥ..
ಬಿಡು ಬಿಡು ಚಿಂತೆಯನು’
ಅನ್ತ ಅಂದಾಗ

ಅರ್ಜುನ-
‘ದೇವ ಈಗಲೀಗ ನಾ ದನ್ಯ
ನಿನಗೆ ಗೊತ್ತಿಲ್ಲದ್ದು ಏನಿದೆ ದೇವ
ಆಡಿಸುವಾತ ನೀನು
ನಾವು ತೃಣ ಮಾತ್ರರು ದೇವ’

ಕೃಷ್ಣ-
‘ಪಾರ್ಥ ನಾನಿಲ್ಲಿ ನೆಪ ಮಾತ್ರ
ನಡೆಯಬೇಕಾದ್ದು ನಡೆಯಲೇಬೇಕು
ನಿನ್ನಿಚ್ಚೆ ನನ್ನಿಚ್ಚೆ
ಕೌರವನಿಚ್ಚೆ ಪಾಂಡವನಿಚ್ಚೆ
ಯಾವುದಿದೆ ಪಾರ್ಥ
ನಡೆ ನಿನ್ನ ಕರ್ತವ್ಯ ಪೂರೈಸು’

ಅರ್ಜುನ-
‘ಆಗಲಿ ದೇವ ನಿನ್ನ ಮಾತನ್ನು
ಶಿರಸ್ಸಾವಹಿಸಿ ಮಾಡುವೆನು’
ಅನ್ತ ಹೇಳ್ತ
ಅರ್ಜುನ ಎಡುಕ್ಕ
ಕೃಷ್ಣ ಬಲುಕ್ಕ
ಹಿಂಗ ಇಬ್ರು ಅತ್ತಗೊಬ್ಬ ಇತ್ತಗೊಬ್ಬ
ಸೀನ್ಸಿಂದುಕ್ಕ ಹೋಗ್ತ ಇದ್ರ
ಲೈಟು ಆಪಾಗುತ್ತ.

-ಎಂ.ಜವರಾಜ್


ಮುಂದುವರಿಯುವುದು…

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Oldest
Newest Most Voted
Inline Feedbacks
View all comments
0
Would love your thoughts, please comment.x
()
x