ಮೆಟ್ಟು ಹೇಳಿದ ಕಥಾ ಪ್ರಸಂಗ ಒಂದು ನೀಳ್ಗಾವ್ಯ (ಭಾಗ 31 & 32): ಎಂ. ಜವರಾಜ್

-೩೧-
ಬೀದಿ ದೀಪ್ಗಳು ಇಲ್ದೆ
ಊರು ಗವ್ವನ್ನದು
ಈ ಅಯ್ನೋರು ಗ್ಯಾನ ಇಲ್ದೆ ಬಿದ್ದಾಗ
ಅವ್ರ್ ಕಾಲು ದಿಕ್ಕಾ ಪಾಲಾಗಿ
ನಾನು ಮೋರಿ ಪಾಲಾದಿ
ಮೋರಿ ಬದಿ ನನ್ ಮೈಮಾರ ಮೆತ್ತಿ
ನಿಗುರಿ ನಿಗುರಿ ನೋಡ್ತಿದ್ದಾಗ
ನೀಲವ್ವೋರು
ಬಾಗುಲು ಸಂದಿಲಿ ಇಣ್ಕುದ್ರು.
ಚೆಂಗುಲಿ
ಅಯ್ನೋರ ಮೇಲುಕ್ಕೆತ್ತಿ ನಿಲ್ಸಿ
ಹೆಗುಲ್ಗ ಕೊಟ್ಗಂಡು ಯಳ್ಕಂಡು
ಒಳಕ ತಳ್ಳಾಗ ಒಂದ್ಕಾಲು ಸಿಗಕತ್ತು
ಒಳಗಿಂದ ನೀಲವ್ವೋರು ಎಳಿತಿದ್ರ
ಈಚ್ಲಿಂದ ಚೆಂಗುಲಿ ತಳ್ತಿದ್ದ
ನೀಲವ್ವೋರು ಎಳುದ್ರು
ಚೆಂಗುಲಿನು ತಳ್ದ
ಆ ದೆಸ್ಗ,
ಅಯ್ನೋರು ಒಳಕ್ಕೋದಂಗಾಯ್ತು
ಕತ್ಲು ಗವ್ವರಾಕಂಡು
ಕಣ್ಣು ಕತಿ ಕಾಣ್ದು.
ನಾಯ್ಗಳಂತು ಹಿಂಡಿಂಡೆ
ಗಳ್ಳಾಕ್ತ ಓಡ್ತ
ಓಡ ರಬ್ಸುಕ್ಕ ಬೀಳ್ತ ಇದ್ದು.
ಈ ಅಯ್ನೋರು
‘ಲೇ.. ಲೇ.. ಲೌಡಿ..
ನಂಗೊಸ್ಕರ ಏನ್ ಕೊಟ್ಟ..
ಬೇವರ್ಸಿ ಬಂಜೆ..
ಅವ್ಳೂ ಹೋದ
ಇವ್ಳೂ ಹೋದ
ನೀ ಯಾಕ್ಲೆ ಹೋಗ್ನಿಲ್ಲ…
ಆ ಶಂಕ್ರ ನಿನ್ ಮಿಂಡನಾ..
ಅವ್ವ್ಯಾಗಿರು ಅಂದ್ರ
ಮಿಂಡ್ಗಾತಿ ಆಗಿದಯ..’
ಅನ್ತ ಅರುಚ್ತ ಕಿರುಚ್ತ
ಒಳಗ ಗಲಗಲ ಅನ್ತಿತ್ತು.

ಈ ಅಯ್ನೋರು ಒಬ್ರೆ ಇನ್ನು ಏನೇನ
ಮಾತಾಡ್ತ
ನೀಲವ್ವೋರ್ ಸೊರವೂ ಇಲ್ದೆ
ಒಳಕ್ಕೋದ ಚೆಂಗುಲಿನು ಕಾಣ್ದೆ
ಉರಿತಿದ್ದ ದೀಪನು ಆರಿ
ಎಸ್ಟೊ ಹೊತ್ತಾಗಿತ್ತು.


ಸೂರ್ಯ ಕಣ್ಬುಟ್ಟ.

ನೀಲವ್ವೋರು ಸೀಗಕಡ್ಡಿ ತಕ್ಕಂಡು
ಬಾಗ್ಲು ಕಸ ತಳ್ಳಗ
ನಾ ಮೋರಿ ಒಳಗ ಬಿದ್ದಿರದ ನೋಡಿ
ಎಡಗಾಲ ಬೆರುಳ್ಳಿ
ಒಂದೊಂದೆ ಒಂದೊಂದೆ
ಮೆಲಕ್ಕೆತ್ತಿ ನೀರೂದು
ಉಜ್ಜಿ ತೊಳ್ದು ಇಟಗ ಗುಡ್ಗ ಒರುಗ್ಸಿ
ಕಸ ತಳ್ಳಾಗ
ಅಯ್ನೋರು ಆಕುಳುಸ್ತ ಬಂದ್ರು
ಸುತ್ತಾ ನೋಡುದ್ರು, ಸುಮ್ನೆ ನಿಂತ್ರು
ಇನ್ನೊದಪ ಕಣ್ಣಾಡ್ಸುದ್ರು
ಕಸ ಗುಡುಸ್ತಿದ್ದ ನೀಲವ್ವೋರ ನೋಡಿ
‘ಏಯ್ ನನ್ ಮೆಟ್ಟೆಲ್ಯಾ..’ ಅಂದ್ರು.
ನೀಲವ್ವೋರು ಮಾತಾಡ್ದೆ
ನನ್ ಮುಂದ ನಿಂತ್ರು.
ಅಯ್ನೋರು ನೀಲವ್ವೋರ
ಮೇಲಿಂದ ಕೇಳಕ ನೋಡ್ತಾ ನೋಡ್ತಾ
ನಾ ಕಂಡೇಟ್ಗೆ
ಮೋರಿ ದಾಟಿ ಒಂದೇ ದಾಪ್ಗ
ನನ್ನ ಮೆಟ್ಟಿ ಬೀದಿಗುಂಟ ನಡುದ್ರು.

‘ನಿಂಗೊಂದು ಗೊತ್ತಾ..’
ಪಂಚ ಅಂಚು ಬೆಂಟ್ತು.
‘ಏನಾ..’
‘ನೀಲವ್ವೋರು ರಾತ್ರ ತಲ ತಿರುಗಿ ಬಿದ್ರು’
‘ಯಾಕ ಏನಾಯ್ತು’
‘ನೆನ್ನು ಬಿದ್ದಿದ್ರಂತ ಮೊನ್ನು ಬಿದ್ದಿದ್ರಂತ
ನೀಲವ್ವೋರು ಬಿದ್ದಾಗ
ಚೆಂಗುಲಿ ಅವ್ರ ಮೇಕ್ಕೆತ್ತಿ
ತಲ ಸವರಿ ನೀರ್ ಕುಡಿಸಿ
ಅಳ್ದೋಗಿರ ಸೀರನ ಸರಿ ಮಾಡಿ
ಕೈ ಹಿಡ್ಕಂಡು ಕುಂತಿದ್ನ
ಈ ಅಯ್ನೋರು ಏನೇನ ಪೇಚಾಡ್ತ ಬಿದ್ದಿದ್ರು
ಅಸ್ಟೊತ್ಗ ಗಾಳಿಗ ದೀಪ ಆರಿ
ನಂಗ ಏನೂ ಕಾಣ್ದಗಾಯ್ತು
ಆ ಕತ್ಲೊಳಗ ಏನೇನೋ ಮಾತಾಡ್ತ
ಕೊನ್ಗ ಅದೂ ನಿಂತೊಯ್ತು’
‘ನಿಜ್ವ,
ಈಗ ತಲತಿರಿಗಿದಾ ನೀಲವ್ವೋರ್ಗ
ಅಂಗೂ ಉಂಟಾ..
ಈ ಅಯ್ನೋರು ಮಾತ್ಮಾತ್ಗು ಮಾತ್ಮಾತ್ಗು
ಬಂಜ ಬಂಜ ಅನ್ತನ್ತಾರಲ್ಲ
ಬಂಜ್ಗ ತಲ ತಿರಿಗಿದಾ..’
‘ತಲ ತಿರಿಗಿ
ಬಂಜನಾದ್ರು ಹೋಗ್ಲಿ ಬುಡು’


‘ಆವತ್ತು ಹಿತ್ಲು ದಾರಿಲಿ
ಆಲ್ದೆಲ ನೊರಕ ನೊರಕ ಅನ್ತನ್ತ
ಸದ್ದಾಗಿತ್ತಲ್ವ..

ಗೆಜ್ಪೂಜ ನಾಟ್ಕಜಿನ ರಾತ್ರ
ಅಯ್ನೋರು ಚೆಂಗುಲಿನ
‘ಏನಲೇ ಬೀದ್ಬೀದಿ ಸುತ್ತಿದೈ’
ಅಂದಿದ್ರಲ್ವಾ….’


ಅಸ್ಟೊತ್ಗ ಅಯ್ನೋರು
ಹೊಳಕರ ಮುಟ್ಟಿ
ದಡ ಹತ್ತಿದ್ರು.


೩೨-
ಈ ಅಯ್ನೋರು
ಕಪಲ ಬಾವಿಲಿ
ಈಜಿ ಮೇಲುಕ್ಕ ಬಂದಾಗ
ಕುಲೊಸ್ತರು ಕಂಡ್ರು.

‘ಅಯ್ನೋರಾ ನಾಳ ಹಬ್ಬ
ನಿಮ್ಮ ನೋಡ್ಕಂಡು ಹೋಗದಾ ಅನ್ತ..’
‘ಬನ್ನಿ ಎಲ್ಲ ಆಯ್ತ’
‘ಅಯ್ನೋರಾ ಈ ರಾತ್ರ ಕಂಡಾಯ ಬತ್ತವ..
ಅವ್ರದು ಏನೇನಾ ಅದ
ಸರಂಜ್ ಮಾಡ್ಬೇಕು..
ದಾಳನು ಇಂದೇ ವಾಮಪಡಿಸ್ಬೇಕು..
ದೇವುಸ್ಥಾನ್ದೊಳ್ಗ ಬೇವುನ್ ಮರ ಅದ
ಅದ್ಕೂ ದಾಳ ಕಟ್ಟಕ
ಹಗ್ಗ ಬಿಗ್ದು ಕಂಕಣ ಕಟ್ಟಿ
ಕಪ್ಪು ದೂಳ್ತ ಇಡ್ಬೇಕು..’

‘ನಾಟ್ಕ ಯಾವತ್ತಾ
ಕುಲ್ದೂಟ ಯಾವತ್ತಾ
ದಾಳ ಯಾವತ್ತಾ’

‘ಅಯ್ನೋರಾ
ನಾಳ ಕಂಡಾಯ ಪೂಜ
ನಾಳಿದ್ದು ಅಸ್ಟೊತ್ಗೆ
ಮರಿಗ ತೇರ್ಥ ಹಾಕ್ಸಿ
ಬುಟ್ಟಿರ
ಹತ್ತಿಪ್ಪತ್ತು ಹರಕ ಮರಿನು
ಕಂಡಾಯ್ಕ ಒಪ್ಸದು
ಏಡ್ಮೂರ್ ಗಂಟ್ಗೆಲ್ಲ
ಊಟುದ್ ಸ್ಯಾವನು ಮುಗಿಯುತ್ತಾ..
ಅದು ಮುಗ್ದ ಮ್ಯಾಕ
ಸಂದನಾಗಿ
ನಾಟ್ಕಪಾಟ್ಕ ಆಡವ್ರು ಆಡ್ತರ
ಆಚ ನಾಳ
ಓಕ್ಳಿ ಜೊತ್ಗ
ದಾಳ
ಮೆರಿಸದು’


ಅರ್ಧರಾತ್ರ ಆಗಿತ್ತು.

ಅಯ್ನೋರು ತ್ವಾಟ ಬುಟ್ಟು
ಎತ್ತಗು ಹೋಗ್ನಿಲ್ಲ

ಕುಲೊಸ್ತರು ಬಂದು ಹೋದ್ಮೇಲ
ಚೆಂಗುಲಿ ಐದಾರ್ ಸಲ ಹೋಗ್ಬಂದ.
ಜೊತ್ಗ
ಐದಾರು ಬಾಟ್ಳೂ ಖಾಲಿ ಆಗಿದ್ದು

ನಿಶ್ಯ ಇಳ್ದಂಗಿಲ್ಲ
ತ್ವಾಟದ ಮನ
ಈಚ
ಕಲ್ಲಾಸಿನ ಮ್ಯಾಲ
ಒರಗಿದ್ದಾಯ್ತು.


ಕೋಳಿ ಕೂಗ್ತು
ಊರೊಳ್ಗ ತಮ್ಟ ಸದ್ದು
ಅಯ್ನೋರು ಕಲ್ಲಾಸ ಬುಟ್ಟು
ಒಳಿಕೋದ್ರು
ತ್ವಾಟದ ತಡಿ ತಗ್ದ ಸದ್ದು.
ನನ್ ದಿಗಿಲು ಅತ್ತಗೋಯ್ತು
ಹಬ್ಬದ ಕುಲೊಸ್ತರು ಅನ್ಸುತ್ತ
ಈ ಅಯ್ನೋರ್ನ ನೋಡಕ ಬಂದಿರ್ಬೇಕು…

ಅರೆ,
ಬಂದೋರು ಕುಲೊಸ್ತರಲ್ಲ
ಶಂಕ್ರಪ್ಪೋರು..

ಈ ಶಂಕ್ರಪ್ಪೋರು
ನೆನ್ನ ತಾನೆ ಅಪ್ಪ ಆದ್ರು.
ಸುನೀತವ್ವೋರು ಚೆಂದಗಾಂದವ್ರು

ನೆನ್ನ ಬಂದು
‘ಗಂಡಾಯ್ತು’ ಅಂದ್ರು
ಈ ಅಯ್ನೋರು,
‘ನಾನೇನ್ ಮಾಡ್ಲಿ’
‘ಏನು ಇಲ್ಲ ಹೇಳುದ್ದು ತಪ್ಪಾ..’
‘ಹೇಳುದ್ದು ತಪ್ಪಲ್ಲ
ನಾ ಬ್ಯಾಡ ಅಂದ್ರು
ಆ ಕುಲ್ಗೆಟ್ಟ ನಾಯಿ ಕಟ್ಕಂಡುದ್ದು’
‘ನೋಡು ಯಾವ್ ಕುಲ್ವು ಇಲ್ಲ
ಆದಿ.
ಮನ ಬುಟ್ಟು ಹೋಗು ಅಂದ್ಮೇಲ
ಹೋದಿ.
ಅಮ್ನು ಇಲ್ಲ
ಅವ್ನು ಇಲ್ಲ
ನೀ ಇದ್ದೂ ಇಲ್ಲ..
ನಾ ತಬ್ಲಿ ಅನ್ತ
ನೀ ಮದ್ವ ಆದ
ನಾ ಏನಾರ ಅವ್ವುನ್ ಕೇಳಿದ್ನಾ..
ಸರಿ, ಅವ್ವುನ್ ತಂದ
ಆ ನೀಲವ್ವ್ಯಾನಾರ ಹೆಂಗ್ ನೋಡ್ಕಂಡಿದೈ..
ನಿನ್ನಾಟ ಗೊತ್ತಿಲ್ವ..’

ಶಂಕ್ರಪ್ಪೋರು
ಇನ್ನು ಏನೇನಾ ಆಡುದ್ರು.

ಈ ಅಯ್ನೋರು ನೋಡಗಂಟ ನೋಡಿ
‘ಏಯ್ ಬಂಚೊತ್
ನಂಗೆ ಎದುರ್ ನಿಂತು ಮಾತಾಡಿಯಾ
ಹಲ್ಕ ಬಡ್ಡಿ ಮಗನೆ
ನೀ ನಂಗ
ಹುಟ್ಟೇ ಇಲ್ಲ
ನೀ ನನ್ಗ
ಮಗನೇ ಅಲ್ಲ
ನಿಮ್ಮೊವ್ವ ಮದ್ವಿ ಆದಿ
ನಿಜ.
ಆದ್ರ,
ನಿಮ್ಮೊವ್ವ ಮುಖ
ನೋಡುದ್ದು
ಆರ್ತಿಂಗ್ಳು ವರ್ಷ ಕಳುದ್ಮೇಲ ಕಣಲೇ
ಬಂಚೊತ್..’

ಆಗ
ಶಂಕ್ರಪ್ಪೋರು ದುಕ್ಕುಳುಸ್ತ
ಕೆಂಗಣ್ ಬೀರ್ತಾ
ಬಾಗ್ಲ ಒದ್ದು
ಪುರಪುರನೆ ನಡುದ್ರು.

ನೀಲವ್ವೋರು ಒಳಗಿದ್ರೇನೋ
ಓಡೋಡ್ ಬಂದ್ರು
‘ಶಂಕ್ರಾ.. ಶಂಕ್ರಾ..’
ಕೂಗುದ್ರು.
ಈ ಅಯ್ನೋರು ನಿಂತಿದ್ದವ್ರು,
‘ಏಯ್, ಲೌಡಿ ಮುಂಡೆ
ನೀ ನನ್ನೆಡ್ತಿನಾ ಅವ್ನೆಡ್ತಿನಾ..
ಒಳಗೋಗಲೇ ಲೌಡಿ..’
ಅನ್ತ ಅಂದೇಟ್ಗೆ
ನೀಲವ್ವೋರು ಕಣ್ಲಿ ನೀರ ತುಂಬ್ಕಂಡು
ಜಗುಲಿ ಕಂಬ ಒರಿಕಂಡ್ರು.

ಈಗ
ಕೋಳಿ ಕೂಗವತ್ಲಿ ಯಾಕ್ಬಂದ್ರು..

ಎಂ.ಜವರಾಜ್


ಮುಂದುವರೆಯುವುದು..


ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

1 Comment
Oldest
Newest Most Voted
Inline Feedbacks
View all comments
ಚಿನ್ನು ಪ್ರಕಾಶ್ ಶ್ರೀರಾಮನಹಳ್ಳಿ
ಚಿನ್ನು ಪ್ರಕಾಶ್ ಶ್ರೀರಾಮನಹಳ್ಳಿ
4 years ago

ನಿಮ್ಮ ಈ ನೀಳ್ಗವಿತೆ ಮೊದಲ ಬಾರಿ ಒದಿದೆ ತುಂಬಾ ಮನಸ್ಸನ್ನು ಮುದಗೊಳಿಸುವ ಕಾವ್ಯ ,ನಿರೂಪಣಾ ಶೈಲಿ ಆಕರ್ಷಕ ನಿಮಗೆ ಧನ್ಯವಾದಗಳು ‌ಹಾಗೂ ಶುಭಾಶಯಗಳು

1
0
Would love your thoughts, please comment.x
()
x