ಜವರಾಜ್‌ ಎಂ ನೀಳ್ಗಾವ್ಯ

ಮೆಟ್ಟು ಹೇಳಿದ ಕಥಾ ಪ್ರಸಂಗ ಒಂದು ನೀಳ್ಗಾವ್ಯ (ಭಾಗ ೩): ಎಂ. ಜವರಾಜ್

ಇಲ್ಲಿಯವರೆಗೆ

-೩-
“ಏಯ್, ನಾನ್ ಹೇಳ ಕತ ಕೇಳ್ತ ಇದ್ದಯ
ಕೇಳ್ತ ಇಲ್ವ.. ನಿದ್ಗಿದ್ದ ಮಾಡ್ತ ಕಾಟಾಚಾರ್ಕ ಕುಂತ್ಕಂಡು ಆಟ ಆಡ್ತ ಇದ್ದಯ ಬಂಚೊತ್”
ಏರಿಸಿದ ದನಿಯಲ್ಲಿ ಮೆಟ್ಟು ಬೆದರಿಸಿತಲ್ಲಾ..
ನಾನು ಬೆಚ್ಚಿ ಬೆರಗಾಗಿ ದಡಕ್ಕನೆ ಮೇಲೆದ್ನಲ್ಲಾ..
“ಹೇಳ್ತ ಹೇಳ್ತ ನಿಂಗ್ಯಾಕ್ ಅನುಮಾನ ಬಂತೋ..
ನಾ ಕೇಳ್ತ ಕೇಳ್ತ ವಸಿ ತೂಕುಡ್ಕ ಬಂತಲ್ಲಾ..
ನೀ ಹೇಳ ಕತಾ ಇಂಟ್ರೆಸ್ಟಾಗಿದೆಯಲ್ಲಾ..
ನನ್ ವಂಶದ ಕರಾಮತ್ತು ಅಂದೆಲ್ಲಾ..
ಅದಕ್ಕಾದ್ರು ನೀ ಹೇಳ ಕತಾ ನಾ ಕೇಳ್ಬೇಕಲ್ಲಾ…”

“ಏಯ್ ತಿರಿಕ ಮಾತಾಡ್ಬೇಡ..”
ಅಂತಂತ ಏರಿಸೇರಿಸಿ ಕುದಿತಾ ಮಾತಾಡ್ತ
ಅಳುತಳುತ ಭಂಗನೆ ಬೆಂಕಿ ಕೆಂಡದುಂಡೆ ತರದಲಿ ಬೆಳಕು ಬೀರಿ ಅರರೆ ತನ್ನ ನಿಜ ರೂಪ ತೋರಿ
ಗುಕ್ಕಂತ ಆ ಕೆಂಡದುಂಡೆ ತರದ ಬೆಳಕು
ಆರಿ ಮಾಯವಾಯ್ತಲ್ಲೋ…
ಮನೆಯೊಳಗಿಂದ ಗುಕ್ಕಗುಕ್ಕನೆ ಕೆಮ್ಮೊ ಸದ್ದು ಬಾಗಿಲು ಸೀಳಿ ಬಂತಲ್ಲೊ…

“ಏಯ್, ಅಂವ ಕೆಮ್ತಾ ಇದಾನ..
ಅಂವ ಕೆಮ್ಮಿ ಕೆಮ್ಮಿ ಸಾಯ್ಲಿ
ಅವ್ನ ಸಾವ ನೋಡಕೆ ಅಂತ ಕಾಯ್ತ ಇರದು..”
ಅಂತಂತ ಎಗರಿ ಎಗರಿ ಮಾತಾಡ್ತ
ನನ್ ವಂಶದ ಕರಾಮತ್ತು ಏನಿದ್ದದು
ನಮ್ಮಂಯ್ಯಂಗೂ ಈ ಮೆಟ್ಗು ಏನ್ ನಂಟು
ಅಂತನ್ನಿಸಿ ನಾ ಮೆತ್ತಗಾಗುವಾಗ
ಅರರೇ ಪುನ ಗಾಳಿ ತಿಸ್ಸನೆ ಬೀಸಿತಲ್ಲಾ..

“ಏಯ್, ಏನ್ ಯೋಚ್ನ ಮಾಡ್ತ ಇದ್ದಯ್
ಬೆಳಕರಿತಂಕ ನನ್ ಕತ ಮುಗಿಸ್ಬೇಕು
ಅಲ್ನೋಡು ಕೆಮ್ತ ಮನ್ಗವ್ನಲ್ಲ..
ಅಂವ್ನಿಯಾ ಅಂವ್ನಿಯಾ ನೋಡು..
ನನ್ ಮೆಟ್ತ ಇದ್ದಂವ..”
ಅಂತಂದ ಮಾತಿಗೆ ದಿಗಿಲಾಗಿ..
ಆ ದಿಗಿಲಿಂದ ದಿಕ್ದಿಕ್ಕಿಗೆ ಕಣ್ಣಾಡಿಸಿ..
ಕಣ್ಣಾಡಿಸಿದ ಆ ದಿಕ್ದಿಕ್ಕೆಲ್ಲ ಕತ್ತಲು ಕಗ್ಗತ್ತಲೇ
ತುಂತ್ಕೊಂಡು ಜರುಗಿ ಜಗ್ಗಿ ಜಗುಲಿ ಕಂಬಕೆ ಒರಗಿ
ಆ ಕತ್ತಲ ಸಾಮ್ರಾಜ್ಯದ ಬೀದಿಯಲಿ ಬಿದ್ದು ಸದ್ದು ಸೊರ ಮಾಡ್ತಿದ್ದ ಮೆಟ್ಟಿನ ಕಡೆ ನೋಡ್ತ..
ಅದು ಮುಂದೇಳೋ ಕತ‌್ಗ ಕಾಯ್ದೆನಲ್ಲೊ..

“ಏಯ್, ಈ ಕತ್ಲ ಸಾಮ್ರಾಜ್ಯದಲಿ ನಾವಿಬ್ರೆ
ನೀನು ಕೂಸು ಕಲ ಕೂಸು ಮರ್ಗೂಸು..
ನಾನು ಕಾಲ ಕಾಲಯ್ಯನ ಕಾಲ್ ಕಾಲ್ದೋನು
ನನ್ನ ಹುಟ್ಟುಸ್ದೋನು ನನ್ ಒಡಿಯ ಅವ್ನು
ನನ್ ಒಡಿಯನೇ ಅಲ್ಲ ಲೋಕ್ ಲೋಕುಕ್ಕು
ಕಾಲ್ ಕಾಲುಕ್ಕು ಒಡಿಯ ಆ ನನ್ ಕಾಲಯ್ಯ
ಕೇಳು ಹೇಳ್ತಿನಿ ಕೂಸೇ ಕೇಳು…

ಎಂ. ಜವರಾಜ್


ಮುಂದುವರೆಯುವುದು…

ಕನ್ನಡದ ಬರಹಗಳನ್ನು ಹಂಚಿ ಹರಡಿ

Leave a Reply

Your email address will not be published. Required fields are marked *