ಮೆಟ್ಟು ಹೇಳಿದ ಕಥಾ ಪ್ರಸಂಗ ಒಂದು ನೀಳ್ಗಾವ್ಯ (ಭಾಗ 29 & 30): ಎಂ. ಜವರಾಜ್

-೨೯-
ಅವತ್ತೊಂದಿನ ಈ ಅಯ್ನೋರು
ಹೊಳಕರಲಿ
ಕೈಯಿ ಕಾಲು ತೊಳಕಂಡು
ನನ್ನೂ-
ಮರುಳ್ಗಾಕಂಡು ಉಜ್ಜಿ ತೊಳ್ದು
ನೀರಂಜಿ ಮರದ ಬುಡದಲ್ಲಿ
ನೀರ ಸೋರಕ ಬುಟ್ಟು
ಗರಕ ಮ್ಯಾಲ
ತಿಕ ಊರಿ ಕುಂತ್ಮೇಲ
ಅಕ್ಕ ಪಕ್ಕ ಊರೋರು ಅನ್ತ ಕಾಣುತ್ತ
ನೆಪ್ಪಿರ ಮುಂದಾಳು ಬಂದ್ರು.

ನಾನು ನೋಡ್ತನೆ ಇದ್ದಿ
ಗಗ್ಗೇಶ್ವರಿ ಆಣ್ಗುಂಟ
ಹೊಳ ದಾಟ್ಗಂಡು
ಚೆಂಗುಲಿ ಬತ್ತಿರದು ಕಾಣ್ತು
ಅವನ ಕಂಕುಳಲ್ಲಿ ಏನಾ ಇತ್ತು.
ಬಂದವ
ಸುತ್ತ ಕುಂತಿದವ್ರ ಮುಂದ ಟವಲ್ಲ ಹಾಸಿ
ಪುರಿ ಸುರುದು
ಕಾರಸ್ಯಾವ್ಗ ಕಳ್ಳ ಚೆಲ್ಲಿ ಬೆರುಸ್ದ
ಉಂಡಕಾಯಿನ ಒಡ್ದು ಚಚ್ಚಿ
ನಡ್ಮಧ್ಯ ಇಟ್ಟ.

ಅಯ್ನೋರು ಚೆಂಗುಲಿಗ ಸನ್ನ ಮಾಡುದ್ರು
ಅಂವ ಒಂದೇ ದಾಪ್ಗ ಓಡ್ದ.
ಅವನ ಓಡ್ದ ಓಟವ
ಕುಂತಿದ್ದ ಮುಂದಾಳ್ಗಳು ನೋಡ್ತ
ಅಯ್ನೋರ್ ಕಡ ತಿರುಗಿ,

‘ಅಯ್ನೋರಾ ಚಿಂತ ಬ್ಯಾಡ
ಆ ಕುರ್ಚಿ ನಿಮ್ದೆ
ಆದ್ರ ನಿಮ್ಕಡ ಕಂಟ್ಕ ಅದ
ಆ ಕಂಟ್ಕನ ಕಳ್ಕಳಿ’

‘ನೋಡಿ, ನನ್ದು ಭದ್ರ ಅದ
ನೀವು ಗೌಡ್ರೆಲ್ಲೆ ಇರದು
ಮುಂದುಕ್ಕ ನಾನು ನಿಮ್ಮ ಬುಡಲ’

ಚೆಂಗುಲಿ ಮುಕ್ಕರಿತ
ಹೆಂಡದ ಕಾನಿ ಹೊತ್ಕ ಬಂದ

‘ನೋಡಿ ಊರಲ್ಲಿ
ನಿಮ್ಗ ಗೊತ್ತಿರಗ ಎಲ್ಲ ಕೇರಿರು
ನಾಮ್ ನೇಮ್ದಲ್ಲಿ ಹಬ್ಬ ಮಾಡ್ತವ್ರ
ಸೊಗ್ಡುಪಗ್ಡು ಮಾಡಂಗಿಲ್ಲ
ಸದ್ಯಕ್ಕ ಇದ
ತಕ್ಕ ಏರ್ಸಿ..
ಏ ಚೆಂಗುಲಿ…’

ಚೆಂಗುಲಿ ಓಡಾಡ್ಕಂಡು
ಹೆಂಡದ ಬಾಟ್ಲಿಯ ಎಲ್ರಿಗೂ ಕೊಟ್ಟ
ಹಾಗೆ,
ಜೋಬೊಳ್ಗಿಂದ ನಾಕ್ಕಟ್ಟು ಬೀಡಿ ಎಸ್ದು
ಅಯ್ನೋರ್ ಕಡ ನೋಡ್ದ.
‘ನೋಡ್ರಪ್ಪ ಇಂವ ನನ್ಜೊತನೆ ಇರದು
ನೋಡ್ಕಳಿ’ ಅಂದ್ರು.
ಈಗ ಚೆಂಗುಲಿ ಅದೆ ಖುಷಿಲಿ
ಬಿಂದ್ಗ ಎತ್ಕಂಡು ಹೊಳಕರಗಿಳ್ದು
ನೀರ ತಂದು ಮಡ್ಗಿ ಓಡ್ದ.

ಅವನ ಓಟ ನೋಡ್ದ ಮುಂದಾಳು,
‘ಮಗ ಚುರುಕು ಅನ್ಸುತ್ತ
ಯಾವ್ ಕೇರಿನ ಅಯ್ನೊರಾ..’

‘ಅಗಸರ ಹೈದ.
ಅದೆ ಹೆಂಡ್ದಂಗ್ಡಿ ಮೀಸುನ್ ಜೊತ ಬುಟ್ಟಿನಿ
ಇನ್ನು ಮದ್ವ ಆಗಿಲ್ಲ.
ಚೆಂಗುಲಿ ಅಂದ್ರ ಚೆಂಗುಲಿನೆ’
ಅಯ್ನೋರು ಹೇಳಿ ಪುರಿ ಮುಕ್ತಾ ನಕ್ರು.

‘ಇರ್ಲಿ ಬುಡಿ.
ಅಯ್ನೋರಾ, ಆ ಕಾಲುನ್ ಗಂಡು
ಅದೆ ಮೆಟ್ ಹೊಲಿತನಲ್ಲ..
ಅವ್ನ ಈ ಚೆಂಗುಲಿ ಹೊಡುದ್ನಂತಲ್ಲ..
ಆ ಕಾಲುನ್ಗ ಒಂದೆಣ್ಣಿದ್ದಾ ಅಯ್ನೋರಾ..
ಅವತ್ತು ಸಂತ ಜಿನ ನೋಡ್ದಿ
ಹೊಳಿತಿತ್ತು.
ಆ ಕಾಲುನ್ಗು
ಆ ಚೆಲ್ವಿಗು
ಆ ಹೆಣ್ಗು
ಹೊಂದಾವಣಿನೆ ಇಲ್ಲ ಅಲ್ವ’
ಅನ್ತನ್ನೊ ಮುಂದಾಳು ಆಡ್ದ ಮಾತ್ಗ
ಅಯ್ನೋರ್ ಉಸುರ್ ಕಟ್ತು.

ಚೆಂಗುಲಿ
ಇನ್ನೊಂದು
ಹೆಂಡದ ಕಾನಿ ತಂದು ಕೆಳಗಿಟ್ಟು
ಎಲ್ರಿಗೂ
ಒಂದೊಂದು ಬಾಟ್ಲಿ ಕೊಟ್ಟ.
ಈಗ
ಅಂವ
ಒಂದು ಪೊಟ್ಣಲಿ
ಮಜ್ಗ ಮೆಣ್ಸಿಕಾಯಿ ಕೊಟ್ಟಾಗ
ಎಲ್ರು ಚೆಂಗುಲಿನ
‘ಬೇಸ್ ಬೇಸ್..
ಅಯ್ನೋರ ಒಳ್ಳೆ ಹೈದುನ್ನ ಮಡಿಕಂಡಿದ್ದರಿ’
ಅಂದ್ರು.
ಚೆಂಗುಲಿ ಉಬ್ಬಿ
‘ನಾನೆ ತಂದಿ ಕಾರ ಇರ್ಲಿ ಅನ್ತ’
ಅಂದ್ಬುಟ್ಟು ಕೈಕಟ್ದ.

ಅಯ್ನೋರು
ಒಂದು ಬೀಡಿ ಕಚ್ಕಂಡು
ಕಡ್ಡಿ ಗೀರಿ
ಮ್ಯಾಕ್ಕ ನೋಡುದ್ರು
ಸೂರ್ಯ ಮುಳುಗ್ತ ತಂಪಾಗ್ತ
ಮ್ಯಾಲೆಲ್ಲ ಕೆಂಪ್ಗ ಚೆಲ್ಕಂಡಿತ್ತು.

ಖಾಲಿ ಬಾಟಲಿ ಕಾನಿ
ಚೆಂಗುಲಿ ತಲೆ ಏರಿತ್ತು

ಅಯ್ನೋರು
ನನ್ನ ಮೆಟ್ಟಿ
ಎಲ್ಲ ಮುಂದಾಳ್ಗು
ಕೈ ಬೀಸೋ ಹೊತ್ಗ
ಕತ್ತಲು ಕವುಸ್ಕೊಂಡು
ಊರ್ದಿಕ್ಕ ಪಾದ ತಿರುಗ್ದಾಗ
ಅಯ್ನೋರ್ ತಲ ಗಿರ್ ಅಂತೇನೋ
ಆಗ ನಂಗ
ಆ ಗವ್ಗತ್ಲಲಿ ಹೆಗುಲ್ಕೊಟ್ಟಂವ
ಚೆಂಗುಲಿನೆ ಇರ್ಬೇಕು
ಅನ್ತನ್ನುಸ್ತು ….


-೩೦-
‘ಏಯ್, ಎದ್ರು ಇಲ್ಲಿ..’
ದಡಕ್ಕಂತ ಎದ್ದೆ.
ಕಣ್ಣು ಕುಕ್ಕೊ ಮಿಂಚಂತ ಬೆಳಕು.

ಗಾಳಿ,
ಎಂಥ ಗಾಳಿ
ಆ ಬೆಳಕೂ ತೂರಿ
ಓಲಾಡ್ತ ಹೋಗೋ ತರ.

ನಾ ಹೊದ್ದ ರಗ್ಗ ಎಸೆದು
ಕೆಳಗಿಳಿದು
ಆ ಬೆಳಕ ಹಿಡಿಬೇಕು
ಆ ಗಾಳಿ
ಆ ಬೆಳಕ
ದೂರ ಎಸೆದು ನಗಾಡಿತು.

‘ಏಯ್, ಕೊನ್ಗು ನನ್ನ
ಈ ಮಳ್ಗ
ಈ ಗಾಳ್ಗ
ಸಿಕ್ಸಿ ಮಜ ತಕ್ಕತಿದ್ದಯ..’

ಅಯ್ಯೊ ,
ನನಗ ನಿನ್ ಕಥಾ ಕೇಳ್ತಾ
ನೀ ಜಗುಲಿ ಕೆಳಗೆ ಇರೋದೆ
ಮರೆತೋಗಿತ್ತು.
ಇಲ್ಲಿ ಮಲಗೀದಾನಲ್ಲಾ
ನನಗ ನಿಜವಾಗಿ ಏನಾಕ್ಬೇಕು..

ನಾ
ಹುಟ್ದಾಗಿಂದ
ಈ ಊರು
ಈ ಮನೆ
ಈ ಜನ
ಒಂದೂ ಗೊತ್ತಿಲ್ಲ..

‘ಗೊತ್ತಿಲ್ಲ
ನಿಜ ನಿಂಗೇನು ಗೊತ್ತಿಲ್ಲ
ಅದೆಂಗೊತ್ತು..

‘ನಾ
ನಿನ್ನ ವಂಶನ
ಅರುದು ಕುಡ್ದು ಎಲ್ಲ ಬಚ್ಚಿಟ್ಟಿನಿ
ಸಿಟಿಲಿ ನಿ ಹೆಂಗಿದ್ದಯ ಅನ್ನದು
ನಂಗ್ಯಾಗ…

‘ಊರುಕೇರಿ
ನಂದು ತಂದು
ಅನ್ತ ಬಂದಿದಯಲ್ಲ ಅದು ಸಾಕು..

‘ನೋಡು,
ಈಗ ಗಾಳಿ ನಿಲ್ತು
ಮಳನು ನಿಲ್ತು
ನಾನೀಗ ದೂರ ಬಂದಿನಿ
ಈ ಗಾಳಿ ದೆಸ್ಗ.
ಪದ ಪದ ನಿನ್ನ ಕೇಳ್ನಾರಿ
ನಾ ಇಲ್ಲಿದ್ಕಂಡೆ ಹೇಳ್ತಿನಿ.
ಆದ್ರ ಈ ರಾತ್ರ ಕಳ್ದು
ಬೆಳ್ಕು ಕಣ್ಬುಡದ್ರಲ್ಲಿ
ನಿಂಗ ಬೆಳ್ಕ ತೋರುಸ್ತುನಿ

‘ನಿನ್ನುಟ್ಟು ನಿಂಗೊತ್ತಾ..
ಈಗ
ಈ ಮನ
ಬೀಳ ಮಳ್ಗ ಸೋರ್ತಾ ಅದ
ಹಿತ್ಲಲಿ
ಆ ಮಲ್ಗ ಮೆಳ
ಹಾಗೆ ಅದ
ಆ ತ್ವಾಟ್ದಲ್ಲಿ ಕಪಲ ಬಾವಿ
ಹಾಗೆ ಅದ
ಎಲ್ಲ ಎಲ್ಲ
ಹಾಗೆ ಅದ

‘ಆದ್ರ ಆದ್ರ ಆದ್ರ
ನನ್ ಚೆಲ್ವಿ ಇಲ್ವಲ್ಲೊ
ನನ್ ಸವ್ವಿ ಇಲ್ವಲ್ಲೊ
ನನ್ ಪರಶು ಇಲ್ವಲ್ಲೊ
ನನ್ ಕಾಲಯ್ಯ ಇಲ್ವಲ್ಲೊ..’

ಆ ಮೆಟ್ಟು ಅಳೋದ ನೋಡಿ
ನನಗೂ ಅಳು ಬಂತು

ಈಗ ಆ ಮೆಟ್ಟು
ದಿಗ್ಗನೆದ್ದು ಉರಿತಾ
‘ನಂಗೊತ್ತು ನಿಂದು ಹೆಂಗರ್ಳು ಅನ್ತ
ಅಳಬ್ಯಾಡ..
ನೀನು ನಾ ಹೇಳ ಕತ ಕೇಳೇ ಅಳ್ತಿದ್ದಯಲ್ಲ
ನಾ ಎಸ್ಟ್ ಅಳ್ಬೇಕು..

ಕೇಳು ಹೇಳ್ತಿನಿ
ಅದೇನಾಯ್ತು ಅಂದ್ರಾ….’

ಎಂ.ಜವರಾಜ್


ಮುಂದುವರಿಯುವುದು…

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Oldest
Newest Most Voted
Inline Feedbacks
View all comments
0
Would love your thoughts, please comment.x
()
x