ಮೆಟ್ಟು ಹೇಳಿದ ಕಥಾ ಪ್ರಸಂಗ ಒಂದು ನೀಳ್ಗಾವ್ಯ (ಭಾಗ 25 & 26): ಎಂ. ಜವರಾಜ್

-೨೫-
ಮ್ಯಾಲ ತಿಂಗ್ಳು ಬೆಳುಗ್ತಾ ಇತ್ತು
ಬೆಳ್ಕು ಹಾಲ್ ಚೆಲ್ಕಂಡಂಗೆ ಚೆಲ್ಕಂಡಿತ್ತು
ನಾ ಮೂಲ ಸೇರಿ ಬಾಳ ಹೊತ್ತಾಗಿತ್ತು
ಆಗ,
‘ಅಯ್ನೋರಾ ಇಳ್ಯ ಬಂದುದ ಕೆಳಗಿಂದ’
ಕುಲೊಸ್ತರ ಗುಂಪು ನೆರುದು ಹೇಳ್ತು.
‘ಊ್ಞ.. ಗೊತ್ತು’
‘ಗೊತ್ತು ಅಂದ್ರ ಏನಾ ಅಯ್ನೋರಾ..
ಎಮ್ಮ ದನ ಕುಯ್ಯ ಬೀದಿಗ ಎಂಗೆ’
‘ಊರಂದ್ಮೇಲ ಬ್ಯಲ ಕೊಡ್ಬೇಕು
ಇಳ್ಯ ಕೊಟ್ಮೇಲ ಕುಲ ಮೀರಗಿದ್ದಾ..
ಕಾಲ್ದಿಂದು ನಡಕಾ ಬಂದಿರದು ಅಲ್ವ..
ಸತ್ಗ ಕೊಡ್ಬೇಕು.
ಕೊಟ್ಟ ಸತ್ಗಗ ಹೂ ಸಿಂಗಾರ ಮಾಡಿ
ಕುರುಬನ ಕಟ್ಟೆ ಕಂಡಾಯ ಜೊತ್ಗ ನಿಲ್ಲುಸ್ಬೇಕು’
ಅಯ್ನೊರ್ ಮಾತು ಕಡ್ಡಿ ತುಂಡಾಗತರ ಇತ್ತು.
ಕುಲೊಸ್ತರ ಗುಂಪು ಗೊಣುಕ್ತು
ಅಯ್ನೋರ ಕಣ್ಣು ಕೆಂಪಗಾಗಿ ಜೋಬಲಿರ
ಬೀಡಿ ಕೈಗ ಬಂದು ತುಟಿಲಿ ಕಚ್ಚಿ ಆಡ್ಸಿ
ಕಡ್ಡಿ ಗೀರಿ ಹಚ್ಚಿ ದಮ್ಮು ಎಳಿತಾ
ಗೊಣಗಾ ಗುಂಪ ಗುರಾಯಿಸ್ತಾ,
‘ಮಾಡಿ ಹೋಗಿ.
ಅವತ್ತು ಆ ಬೀದಿ ಕುಲೊಸ್ತರ ಜೊತ್ಗ
ಬಂದೋರು ಯಾರ..
ಮುಂದಾಳ್ತನ ಅಂದೋರು ಯಾರ..
ಹೋಗಿ ಹೋಗಿ…
ಎಮ್ಮ ದನ ಕುಯ್ಯದು ಅವ್ರು
ಎಮ್ಮ ದನ ತಿನ್ನೋರು ಅವ್ರು
ನಾನೂ ನಾಕೆಮ್ಮ ಹರಕ ಕೊಡ್ತವ್ನಿ
ಕೂದು ತಿನ್ನಕ ನಾಕ್ದನು ಕೊಡ್ತಿನಿ
ಈ ಸೋಮಾರ ಸಂತಲಿ
ನಾಕ್ದನ ನಾಕೆಮ್ಮ ತಕ್ಕೊಡ್ತ ಅಂವ್ನಿ..
ನನ್ ವಂಶದ ಹರಕ ಆಗಿಂದ್ಲು..’ ಅಂತ
ಅಯ್ನೋರು ದಮ್ಮು ಎಳಿತಾನೆ
ಹೊಗೆ ಬಿಡ್ತಾನೆ ಹೇಳ್ತಾ
ಉರಿದು ಮುಗಿದ ಬೀಡಿ ಮೊನೆ ಬೆಂಕಿನ
ಕೆಳಕ್ಕೆ ಒಸಕಿ ಕುಲೊಸ್ತರ ಕಡೆ ಕಣ್ಣಾಯ್ಸೊ ಕಣ್ಲಿ
ಪಂಚಾಯ್ತಿ ಟೇಬಲ್ಲು ಕುರ್ಚಿ ಮಿಂಚ್ತಾ ಮಿರುಗ್ತಾ
ಹತ್ತತ್ರುಕ್ಕ ಸರ್ದಂಗಿತ್ತು

ಮ್ಯಾಲ ತಿಂಗ್ಳು ಮ್ವಾಡ್ದೊಳಕ ನುಗ್ತಾ ಇರಾಗ
ಕುಲೊಸ್ತರು ಮೇಲೆದ್ದು ಪುರಪುರನೆ ನಡಿತಾ
ಕತ್ತಲಲ್ಲಿ ಕರಗಿದ್ದು ಆಯ್ತು.


ಸರೊತ್ತು.
ಕತ್ತಲು ಗವ್ವರಾಕಂಡು
ಊರ್ತುಂಬ ನಾಯ್ಗಳು ಗಳ್ಳಾಕ್ತಿದ್ದು
ಊರಬ್ಬದೊತ್ಲಿ ಈ ನಾಯ್ಗಳು ಗಳ್ಳಾಕದ್ಯಾಕ..
ಒಳಗ ನೀಲವ್ವೋರು ಮಾತಾಡ್ದಗಾಯ್ತು
ಈ ಸರೊತ್ಲಿ ನೀಲವ್ವೋರು ಮಾತಾಡದ್ಯಾಕ..
ಈ ಅಯ್ನೋರು ಮೊಖ ಕೊಟ್ಟು ಒಂಜಿನು
ಮಾತಾಡಿದ್ದ ಕಾಣಿ. ಈಗ ಅದ್ಯಾಗ್ಯಾ..

ನಂಗು ನಿದ್ರಾ ಎಳಿತಿತ್ತು
ಈ ಅಯ್ನೊರೊಂದ್ಗ ಸುತ್ತಿ ಸುತ್ತಿ ಸಾಕಾಗಿ
ಅಯ್ನೊರ್ ಪಾದದ ಬೆವ್ರು ಅಂಟಿ ರಟ್ಟಾಗಿ ಮೈಕೈ ನೊಯ್ತಾ ಬಿಗಿತಾ ಎಸ್ಟ್ ಹೊಳ್ಳಾಡುದ್ರು
ನಿದ್ರಾ ಬರದೆ ಸರೊತ್ತು ಇಳಿತಾ
ತಿಂಗ್ಳು ಬೆಳುಗ್ತಾ ಆ ಬೆಳಗಾ ಬೆಳುಕ್ಲಿ
ಅಯ್ನೋರಾ ಬತ್ತಾ ಇರದು…
ನಾ ನೋಡ್ತಾ ಇರದು ಏನಾ..

ಗಳ್ಳಾಕ ನಾಯ್ಗಳು ಗಳ್ಳಾಕ್ತನೆ ಅವ
ನಂಗ ಒಂದೂ ಅರ್ತ ಆಗ್ದೆ
ಅಯ್ನೊರ್ ಬರೋದ್ನೆ ನೋಡ್ತಾ ಇರಾಗ
ಹಿತ್ಲು ಬಾಗ್ಲು ಸದ್ದಾಗಿ
ಒಣಗಿರ ಆಲ್ದೆಲ ನೊರಕ ನೊರಕ ಅಂತಿತ್ತು.


-೨೬-
ಸೋಮಾರ ಸಂತ ಒಳಗ
ಎಮ್ಮ ಕ್ವಾಣ ದನ ಗೂಳಿ ಕಡಸು ಒಂದ್ಕಡ
ಆಡು ವಾತ ಕುರಿ ಟಗರು ಒಂದ್ಕಡ
ಸೀಗ್ಡಿ ಕರ್ಮಿನು ಒಂದ್ಕಡ
ಕೋಳಿಹುಂಜ ಹ್ಯಾಟ ಒಂದ್ಕಡ
ಕಲ್ಲಗ್ಡಿ ಮಿಣ್ಕ ಸೌಂತಾ ಒಂದ್ಕಡ
ಕಳ್ಳಪುರಿ ಸ್ಯಾವ್ಗ ಉರ್ದುಳ್ಳಿ ಚಿರ್ಕುಳ್ಳಿ
ಕಳ್ಳಬೀಜ ಕಾರಬೋಂದಿ ಒಂದ್ಕಡ
ಇಡ್ಲಿ ದ್ವಾಸ ಚಿತ್ರಾನ್ನ ಹುಳ್ಯಾನ್ನ
ವಡ ಬೋಂಡ ಟೀ ಕಾಪಿ ಗುಳ್ಳೊಟ್ಲು ಒಂದ್ಕಡ
ಬ್ಯರ್ಕ ಸೊಪ್ಪು ದಂಟುನ್ ಸೊಪ್ಪು
ಕೀರ್ಕಿರ ಸೊಪ್ಪು ಅಗ್ಸ ಸೊಪ್ಪು
ಒನ್ಗೊನ ಸೊಪ್ಪು ಮಸ್ಸೊಪ್ಪು ಒಂದ್ಕಡ
ಸುಂಕ ಚೀಟಿ ಹಿಡ್ಕಂಡು
ವಸೂಲಿ ಮಾಡವ್ರು ಒಂದ್ಕಡ
ಇದರ ಸಂದಿಲಿ ಈ ಅಯ್ನೋರು
ದಿಕ್ಕಾಪಾಲಾಗಿ ರವ್ಗುಟ್ಟೊ ಬಿಸುಲ್ಲಿ
ನೋಡ್ತ ನಿಂತವ್ರು ಎತ್ತಗು ಜಗ್ದೆ ನಂಗ ತ್ರಾಸಾಯ್ತು.

ಈ ಸಾಮ್ರಾಜ್ಯನ ಕಣ್ಲಿ ತುಂಬ್ಕಂಡು
ನೋಡುದ್ಮೇಲ ನನ್ ಕಾಲಯ್ನ ನೋಡಂಗಾಯ್ತು
ಈ ಅಯ್ನೋರು ಈ ಸಂತಗ ಬಂದ್ಮೇಲ
ಕಾಲಯ್ನ ಕಂಡೇ ಕಾಣೋರು.
ಇಲ್ಲಿ ಈ ಬಿಸುಲ್ಲಿ ನಿಂತ್ಕಳ ಬದ್ಲು
ನನ್ ಕಾಲಯ್ನ ಮಾತಾಡ್ಕಂಡೇ
ಕಾಲ ತಳ್ಬೊದಿತ್ತು ಅನ್ನುಸ್ತು.

ಈಗ ಕೆಳಗಲ ಬೀದಿ ಕುಲೊಸ್ತರು ಬಂದು
ಅಯ್ನೋರ ಮುಂದ ಕೈಕಟ್ತು.
ಅಯ್ನೋರು ಗಿರಿಕ್ಕು ಗಿರಿಕ್ಕು ಅನ್ಕಂಡು
ಜನಗಳ ಸಂದಿಲಿ ಬೆರಿತಾ ಗುಂಪಲ್ಲಿ ಸೇರಿ
ನಾಕ್ದನ ನಾಕೆಮ್ಮ ಎಳ್ಕಂಡು
ಅಲ್ಲೆ ಹರಿತಿರ ಕಾಲ್ವೆನಲ್ಲಿ ನೀರ್ಕುಡಿಸಿ
ಬಸಿರಿ ಮರುಕ್ಕೆ ಕಟ್ಟಾಕಿ
ಅಯ್ನೋರ್ ಸನ್ನೆಗೆ
ಮಿಣ್ಕ ಕಲ್ಲಂಗಡಿ ಪೀಸ್ಗಳು ಎಲ್ರ ಕೈಗ ಸೇರಿ
ದಾವ ನೀಗುಸ್ಕತಾ ಊರಬ್ಬದ ಮಾತೊಂದ್ಗ
ಪಂಚಾಯ್ತಿ ಎಲೆಕ್ಷನ್ನು ಚೇರ್ಮನ್ ಸೀಟು
ಕೂಡ್ಕಂಡು ಸುತ್ಕಂಡು ಬಿಸುಲ್ಗ ಬೆವ್ರು ಸುರ್ಕತು.

ಬಿಸುಲು ನತ್ತಿ ಇಳಿತಾ
ಅಯ್ನೋರು ಗುಳ್ಳೊಟ್ಲು ಒಳಕ ಹೋಗವತ್ಲಿ ಕಾಲಯ್ಯ ತಲ ಕೆರಿತಾ ನಿಂತಿದ್ದ.
ಅಯ್ನೋರ್ ಟೇಬಲ್ಗ ಹುಳ್ಯಾನ್ನ ಬೊಂಡ ಬಂತು
ನನ್ ಕಾಲಯ್ನ ಕೈಗ ಇಸ್ತ್ರಿ ಎಲಲಿ ಇಡ್ಲಿ ಬಂತು.
ಕಾಲಯ್ಯ ಗುಳ್ಳೊಟ್ಲ ಈಚ ಮೂಲಲಿ
ಗವ್ಕ ಗವ್ಕಾಂತ ಇಡ್ಲಿ ತಿಂತಾ ನೀರ್ಕುಡಿತಾ
ಬೀಡಿ ಹಚ್ಕಳಕು
ಅಯ್ನೋರು ಬಲ ಇಲ್ಲಿ ಅನ್ನಾಕು,
ನನ್ ಕಾಲಯ್ಯ ‘ಅಯ್ನೋರಾ…’
ಹೆಗಲಲ್ಲಿದ್ದ ಟವಲ್ಲ ಎತ್ತಿ ಕೈಲಿಡಿದು
ಪುರಪುರನೆ ಬತ್ತಾ …
ನಾ ಅಂದ್ನೊಂಡ್ ಜಾಗುಕ್ಕ
ಬಂದು ಕುಂತು ಬೀಡಿ ಹಚ್ದ ಅಯ್ನೋರು
ನನ್ ಕಾಲಯ್ನ ದುರದುರನೆ ನೋಡ್ತ
‘ಏಯ್, ಕಾಲ ಏನ್ಲ ಚೆಲ್ವಿದು..
ಗ್ಯಾನಗೀನ ನ್ಯಟ್ಗಿದ್ದಲಾ…’
ಅಂದ ಮಾತ್ಗ ನನ್ ಕಾಲಯ್ಯ
ಬೆಚ್ಚಿ ಬೆರಗಾಗಿ ಕಣ್ಕಣ್ ಬುಡ್ತ
‘ಅಯ್ನೋರಾ.. ಏನಳಿ ಚೆಲ್ವಿದು..’
ಅಂತಂದು ಅಯ್ನೋರ್ ಉತ್ರುಕ್ಕ ಕಾದೊತ್ತು
ಸಂತ ಅಳೀತಿತ್ತು.

ಎಂ.ಜವರಾಜ್


ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x