ಮೆಟ್ಟು ಹೇಳಿದ ಕಥಾ ಪ್ರಸಂಗ ಒಂದು ನೀಳ್ಗಾವ್ಯ (ಭಾಗ 23 & 24): ಎಂ. ಜವರಾಜ್

-೨೩-

‘ಏಯ್, ಕೇಳಿಲ್ಲಿ..’
ಆ ಮೋರಿ ಅಂಚಿಂದ
ಬೆಳಕಿನ ಜ್ವಾಲೆ ಎದ್ದು
ಆ ಜ್ವಾಲೆಯೊಳಗಿಂದ ಗದರಿದಂಥ ಮಾತು.

ಸಡನ್ ಎದ್ದೆ
ನನಗೆ ಮಂಪರು

ಆ ಬೆಳಕಿನ ಜ್ವಾಲೆ ಬೆಂಕಿ ತರ ಆಯ್ತು
ಆ ಬೆಂಕಿ ಜ್ವಾಲೆಗೆ ನನ್ನ ಮಂಪರು ಅಳಿದು
ಸೆಟೆದು ನಿಂತೆ.

ಮೇಲೆ
ಮಿಂಚು ಸೊಂಯ್ಯನೆ ಫಳಾರಂತ
ಸಿಡಿಲು ಸಿಡಿಸಿಡಿ ಸಿಡಿತಾ
ಗುಡುಗು ನಿಧಾನಕೆ ಗುಡುಗುಡುಗುಡುಕ್ತಾ
ಇತ್ತು

‘ನನ್ ಮಾತ ನೀ ತಲಗಾಕತಿಲ್ಲ
ಗಾಳಿ ಬೀಸ್ತ ಅದ
ಆ ಮೋರಿಯಿಂದ ಈ ಮೋರಿಲಿ ಬಿದ್ದಿನಿ’

‘ಅದೇನ ಹೇಳು ಕೇಳ್ತಾ ಇಲ್ವ’

‘ಏಯ್, ನನ್ನ ಬೀದಿಲ್ ಬುಟ್ಟು
ನಿ ಬೆಚ್ಗ ಕೇಳ್ತ ಇದ್ದಯ..
ಈ ಮನ ಒಂದ್ಕಾಲ್ದಲ್ಲಿ ಹೆಂಗಿತ್ತು
ಈಗ ಹೆಂಗಿದ್ದದು ನಿಂಗ್ ಗೊತ್ತಾ..
ನಾ ಹೇಳ ಕತಾ ಕಾಲ ಕಾಲಕ್ಕು ಸಮ
ನೀ ಓದ್ದಂವ ಅಂತ ಹೇಳ್ತ ಅಂವ್ನಿ..’

‘ನೋಡು, ನನಗೆ ಪುರಾಣ ಬೇಡ
ನಾ ನಿದ್ರ ಮಾಡ್ಬೇಕು ನನಗು ಸಾಕಾಗದ
ಬರೆಯೋದು ಓದೋದು ಸಾಕಷ್ಟಿದೆ
ಆದ್ರು ನೀ ಹೇಳೋ ಕತೆ ಕೇಳ್ತಾ ಇದಿನಿ ಅಂದ್ರ
ನೀನೆ ತಿಳ್ಕೊ..
ನಿ ದೆವ್ವನೊ ಭೂತನೋ
ದೇವರೋ ದಿಂಡನೊ ಗೊತ್ತಿಲ್ಲ..
ನೀ ಹೇಳೋದ ನಾನೂ ಹೇಳ್ತ ಕುಂತ್ರ
ಕೇಳ ಜನ ಹುಚ್ಚ ಅಂತಾರೆ ಗೊತ್ತ..’

‘ಏಯ್, ಮರ್ವಾದಿ ಇಲ್ದೆ ಮಾತಾಡ್ಬೇಡ
ತಿರಿಕ ಮಾತಾಡ್ತಿದೈ ನೀನು..
ಏನ ಓದಕ ಬರಿಯಾಕ ಬರಂವ ಅಂತ
ನಿಂಗ ಗೌರವ ಕೊಟ್ಗಂಡು ಹೇಳ್ತ ಇರದು..

‘ನನ್ ಕಾಲಯ್ಯ ಅಂದ್ರ ಏನಂದ್ಕಂಡೆ
ನನ್ ಕಾಲಯ್ಯನ ಕೆಲ್ಸ ಅಂದ್ರ ಏನಂದ್ಕಂಡೆ
ನನ್ ಕಾಲಯ್ಯನ ನಿಯತ್ತು ಅಂದ್ರ ಏನಂದ್ಕಂಡೆ
ಕಾಲ ಕಾಲಕ್ಕು ನನ್ ಕಾಲಯ್ನೆ..

‘ನಿನ್ ವಂಶದ ಕರಾಮತ್ತು ಹಿಕ್ಮತ್ತು
ಬುಡ್ಸಿ ಬುಡ್ಸಿ ಹೇಳ್ತಾನೇ ಅವ್ನಿ
ಇಲ್ಲಿಗಂಟ ಹೇಳುದ್ದಾ ಕೇಳ್ನಿಲ್ವ..’

‘ಕೇಳ್ತ ಇದಿನಿ.
ಇಲ್ಲಿಗಂಟ ಹೇಳಿದ್ದಿಯಲ್ಲ
ನೀ ಹೇಳುದ್ದೆಲ್ಲ ಸತ್ಯನಾ’

‘ಇದು ಇದಪ್ಪ ಬುದ್ದೊಂತರ ಮಾತು..
ಲೇ ಸ್ಯಾಟ್ವೇ.. ನೋಡು ನಾ ಹೆಂಗಿದನು
ನೋಡಿದಯ ಕಣ್ಬುಟ್ಟು
ನನ್ನ ನೋಡವ್ರಿಲ್ಲ ಕೇಳವ್ರಿಲ್ಲ
ಈ ಕಿತ್ತೋಗಿರ ಜಾಗ್ದಲ್ಲಿ ಬುಟ್ಟು
ಅಂವ ಕೆಮ್ತಾ ಕ್ಯಾಕುರ್ಸ್ತ ಬಿದ್ದನ
ನಿಂಗೊತ್ತಾ ನನ್ ಬಾಳಾಟ..
ಬೀದಲೋಗೊ ನಾಯಿ ನರಿಗಳೆಲ್ಲ
ನನ್ನ ಅಟ್ಟಾಡ್ಸಿ ಗೋಳುಯ್ಕತವ..
ನಾ ಇಲ್ಲಿಗಂಟ ಗಟ್ಟಿಯಾಗಿ ಅಂವ್ನಿ ಅಂದ್ರ
ನನ್ ಕಾಲಯ್ಯ ನಂಕೊಟ್ಟಿರ ಶಕ್ತಿ
ಈ ಶಕ್ತಿನೇ ನಿನ್ ಕುಲೊಸ್ತನ ಪಾದ್ವ
ಕಾಪಾಡಿರದು ತಿಳ್ಕಾ..ಆದ್ರಾ ಆದ್ರಾ..
ಆ ಶಕ್ತಿ ಕೊಟ್ಟ ನನ್ ಕಾಲಯ್ನ.. ಕಾಲಯ್ನ..

‘ಅಯ್ಯೊ ನನ್ ಕಾಲಯ್ಯೋ
ನಾನೀಗ ಬೀದಿಲಿ ಬಿದ್ದು
ನಿನ್ ಕತಾ ಹೇಳಂಗಾಯ್ತಲ್ಲ
ನಾ ಹೇಳ್ತಿರ ಈ ವಂಶದ ಕರಾಮತ್ತ
ಗುಮಾನಿ ಪಡ್ತಾರಲ್ಲಾ…’

ಆ ಮೆಟ್ಟಿನ ಮಾತು ನಿಜಾನ..
ಕೆಳಗಿಳಿದೆ. ಮೋರಿ ದಾಟಿದೆ.
ಗಾಳಿ. ಬಿರುಗಾಳಿ ಬಂದಂಗಾಯ್ತು.
ಒಳಗೆ ಗುಕ್ಕಗುಕ್ಕನೆ ಕೆಮ್ಮುವ ಸದ್ದು.
ಯಾರೋ ಕೂಗಿದ ಹಾಗಾಯ್ತು.
ಇರಲಿ,
ಹತ್ತಿರ ಹೋದೆ.
ಆ ಮೆಟ್ಟ ಕಾಲಲ್ಲಿ ತಳ್ಳಿಕೊಂಡು ಬಂದೆ.
ಕಾಲ ಬೆರಳಲ್ಲಿ ಎತ್ತಿ ಮೋರಿ ದಾಟಿಸಿ
ಅಂಚಿಗೆ ಬಿಟ್ಟು
ನಾನು ಜಗುಲಿ ಮೇಲೇರಿ ಗೋಡೆ ಒರಗಿದೆ.

‘ಈಗ ಈಗ ಒಪ್ದಿ ನಿನ್ನ
ಮಳ ಹನಿ ಉದುರಾ ತರ ಆಯ್ತು
ಕಾಗ ಕಾಕಾ ಅನ್ನೊದ್ರೊಳಗ
ಕೋಳಿ ಕೊಕ್ಕೊಕೋಕೋ ಅನ್ನೊದ್ರೊಳಗ
ಹೇಳಿ ಮುಗಿಸ್ತಿನಿ ಕೇಳ್ಕ..’

-೨೪-

ಈ ಅಯ್ನೋರ್ ಪಾದ
ಮೇಗಲ ಬೀದಿಯಿಂದ
ಕೆಳಗಲ ಬೀದಿಗ ಬಂತು
ಈ ಕೆಳಗಲ ಬೀದಿ ಸುಣ್ಣ ಬಣ್ಣ ಬಳ್ಕತಿತ್ತು
ಬೀದ್ಬೀದಿ ಹೈಕ ಕುಣಿತಾ ನಲಿತಾ ಇದ್ದು
ಕುಲೊಸ್ತರು ಓಡೋಡಿ ಬಂದ್ರು.

ರಾಮಂದ್ರ ಪಡಸಾಲೆಲಿ
ಕುರುಕ್ಷೇತ್ರ ನಾಟ್ಕ ತಯಾರಿ ಪದ ಕೇಳ್ತಿತ್ತು
ಕುರುಬನ ಕಟ್ಟೆ ಕಂಡಾಯ್ಕ
ಇಳ್ಯ ಕೊಟ್ಟು ಬಂದಾಗಿತ್ತು
ಮೇಗಲ ಬೀದಿ ಕುಲೊಸ್ತರ
ಕಾಣ್ಕನು ಸಂದಾಯ ಆದಂಗಿತ್ತು.

ಅಲ್ಲೆ ಚೆಂಗುಲಿನ ಕಂಡ ಅಯ್ನೋರು
ಸೀದಾ ದೇವಸ್ಥಾನದ ಬಾಗಿಲಲ್ಲಿ ನಿಂತ್ರು.
ಕುಲೊಸ್ತರು ಇನ್ನು ಏನೇನೋ ಮಾತಾಡುದ್ರು
ಈ ಅಯ್ನೋರ ಪಾದ ಮತ್ತೂ
ಕೆಳ ಬೀದಿ ಕಡ ಸಾಗ್ತು
ಆ ಕೆಳ ಬೀದಿಯೂ ಸಾಗ್ತ ಸಾಗ್ತ
ಕಾಲುವೆ ಏರಿ ಸಿಕ್ತು
ಆ ಕಾಲುವೆ ಏರಿಯೂ ಸಾಗಿ
ಹುಣಸೇ ಮರ ಸಿಕ್ತು.

ಚೆಂಗುಲಿ,
‘ಅಯ್ನೋರಾ..’ ಅಂತ ಕೂಗ್ದಾಗಾಯ್ತು
ಅಯ್ನೋರು ತಿರುಗಿದ್ರು
ಸವ್ವಿ ಬಾವಿಲಿ ನೀರ್ ಸೇತ್ತಾ
ಉಂಟಾಡಿಕೊಂಡು ಹೋಯ್ತು

ಚೆಲ್ವಿಯೂ ಕಂಡ್ಲು
ಪರಶುನೂ ಕಂಡ.

ಅಯ್ನೋರಾ ಪಾದ ಎಡಕ್ಕೆ ತಿರುಗಿ
ಚೆಂಗುಲಿ ಬಲಕ್ಕೆ ತಿರುಗಿದ.

ಅಯ್ನೋರ ಕಂಡ ಚೆಲ್ವಿ
ಎಲೆಅಡ್ಕೆ ಅಗಿತಾ ಉಗಿತಾ
ಓಡೋಡಿ ಬಂದು,
‘ಚೆಂಗುಲಿ ಒಪ್ಸಿ ಇಲ್ಲಾಂದ್ರ
ಪ್ರಾಣ ಹೋಯ್ತುದಾ’
‘ಏಯ್, ಚೆಂಗುಲಿಗು ಅದ್ಕು
ಏನಾ ಸಂಬಂಧ..’
‘ಅಯ್ನೋರಾ, ಸವ್ವಿ ಬೆಮ್ಮನ್ಸಿ
ಚೆಂಗುಲಿಯೆ.. ಅವನ್ನ ಕೇಳಿ
ನಾ ಪ್ರಾಣ ಕಳ್ಕತಿನಿ ಅವ್ಳು ಕಳ್ಕತಳ’

‘ನೋಡು ಹಬ್ಬ ಅದ ಈಗ ಸುಮ್ಕಿರು’

ಚೆಲ್ವಿ ನಿಂತಲ್ಲೆ ನಿಂತಿರಗ
ಅಯ್ನೋರ ಪಾದ ಅದೇ ಬಲ ಮುಖದಾಗೆ
ಸಾಗ್ತ ಸಾಗ್ತ ಎಲಿಚಿ ಗಿಡದತ್ರ ನಿಲ್ತು.
ಚೆಂಗುಲಿ ಎಲಿಚಿ ಗಿಡದ ಸಂದಿಲಿ
ಇಣ್ಕಿ ನೋಡ್ತಾ
ಅಯ್ನೋರ್ ಪಾದ ಜೊತ್ಗ ಸೇರ್ತು.

ಬಿಸುಲು ರವ್ಗುಟ್ತಿತ್ತು
ಅಯ್ನೋರ ಪಾದದ ಬೆವರು ಸುರಿತಾ
ಬೀದಿಲಿರ ಧೂಳು ಮೆತ್ಕಂಡು ಬಿಗಿತಿತ್ತು

ಈಗ ಅವರು ಏನೇನು ಮಾತಾಡ್ತಿಲ್ಲ
ಬಿಗಿತಿರ ಪಾದಗಳು ಸುಮ್ನೆ ಸಾಗ್ತ ಹೋಗ್ತಾ
ಹೊಳೆ ಅಂಚಿನ ನೀರಂಜಿ ಮರದತ್ರ ನಿಂತ್ಕಂಡು

ನೀರಂಜಿ ಮರದ ನೆಳ್ಳು ತಣ್ಣಗಿತ್ತು
ನನ್ನ ಅಲ್ಲೆ ಬುಟ್ಟ ಅಯ್ನೋರು
ಮರದ ಬುಡುಕ್ಕೆ ಟರ್ಕಿ ಟವಲ್ಲು ಎಸ್ದು
ತಲೆ ಕೊಟ್ರು.
ಚೆಂಗುಲಿ ಅಲ್ಲೆ ಬಿದ್ಕೊಂಡ.

ಅರೆ ಅಯ್ನೋರು ಮೇಲಕ್ಕೆದ್ದು,
‘ಏಯ್ ಚೆಂಗುಲಿ ಚೆಲ್ವಿ ಏನಾ ಹೇಳ್ದ..’
‘ಅಯ್ನೋರಾ, ನಿಮ್ಮಾಣೆ ಪಾದ್ದಾಣೆ
ಹಂಗೇನು ಇಲ್ಲ ಅಯ್ನೋರ..’

ಎಂ.ಜವರಾಜ್


ಮುಂದುವರಿಯುವುದು….

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x