ಮೆಟ್ಟು ಹೇಳಿದ ಕಥಾ ಪ್ರಸಂಗ ಒಂದು ನೀಳ್ಗಾವ್ಯ (ಭಾಗ 21 & 22): ಎಂ. ಜವರಾಜ್

-೨೧-
ಅಯ್ಯಯ್ಯೋ ಅಯ್ಯಯ್ಯಪ್ಪಾ
ಅಂತಂತಾಗಿ ಮೈಕೈ ನೋವ ತಡಿದೆ
ಪಕ್ಕಂತ ಕಣ್ಬುಟ್ಟು ನೋಡುದ್ರಾ..
ಸೂರ್ಯ ಮೂಡಿ
ನಾ ಗಬ್ಬುನಾತ ಬೀರೋ
ಮೋರಿ ಬದಿಲಿ ಬಿದ್ದು
ನನ್ನ ಆಕಡ ಒಂದು ಈಕಡ ಒಂದು
ಹಾಲ್ಕುಡಿಯೋ ಸಣ್ಣ ನಾಯಿ ಮರಿಗಳು
ಎಳಿತಾ ಈಜಾಡ್ತ ಆಟ ಆಟ್ತ
ಪಣ್ಣ ಪಣ್ಣಾಂತ ಆಕಡ್ಕು ಈಕಡ್ಕು
ನೆಗೆದಾಡ್ತ ಗುರುಗುಡ್ತ ಇದ್ದು.
ಅಸ್ಟೊತ್ಗ ಬಾಗ್ಲು ಕಿರುಗುಟ್ತು
ನನ್ನ ದಿಗಿಲು ಅತ್ತಗೋಗಿ ನೋಡ್ತು..
ಸವ್ವಿ ಕಣ್ಣುಜ್ಕೊಂಡು
ತಲ ಕೆರಕೊಂಡು
ಲಂಗ ಮ್ಯಾಲಕ್ಕೆತ್ಕಂಡು
ಬಾಯಾನಿ ಆಕುಳಿಸ್ಕಂಡು
ಮೂಲಲಿರ ಸೀಗಕಡ್ಡಿ ತಕ್ಕಂಡು
ನನ್ನೆಳಿತಿದ್ದ ನಾಯ್ಗಳ್ಗ ಬೀಸುದ್ಲು
ಅವು ಬೀಸ್ದ ರಬುಸುಕ್ಕ ನನ್ನ ಬುಟ್ಟು
ಕಂಯ್ಞ್.. ಕಂಯ್ಞ್.. ಕಂಯ್ಞ್….
ಕುಂಯ್ಞೀ.. ಕುಂಯ್ಞೀ..ಕುಂಯ್ಞೀ…
ಅನ್ಕಂಡು ಓಟ ಕಿತ್ತು
ಓಡ್ದು ಓಡ್ದು ಓಡ್ದೂ….
ನಂಗ ಉಸುರ್ಬಂದಂಗಾಯ್ತು.

ಆ ಸವ್ವಿ ದಂಡುಕ್ಕ ಬಂದು
ಗಬ್ಬುನಾತ ಬೀರ್ತಾ ಇರ ಮೋರಿಗ
ಆಚಗೊಂದು ಈಚಗೊಂದು ಕಾಲಾಕಿ
ಮೂಗು ಮುಚ್ಕಂಡು ಎಡಗೈ ನೀಡಿ
ನನ್ನ ಒಂದೊಂದೆ ಕಾಲ
ಹಿಡ್ದು ಹಿಡ್ದು ಎತ್ತಿ ಮೇಲಿಟ್ಲಲ್ಲಾ..
ಆಗ ನನ್ ಒಡಿಯಾ ಕಾಲಯ್ಯ
ಅಯ್ಯೊ ಅಯ್ಯೊ ಅಯ್ಯೊ
ಅಯ್ನೋರ ಮೆಟ್ಟು ಕಣ ಅದು
ಇದ್ಯಾರ ಹಿಂಗ್ ಮಾಡಿಟ್ಟೋರು
ಅಯ್ನೋರು ನೋಡುದ್ರ ಬುಡ ಮಾತಾ
ಏ ಸವ್ವಿ ಏನಲೆ ಇದು
ಏ ಏನಾಯ್ತಲೆ ಇದು
ಏ ನೀರ್ ತಂದು ಹಾಕಲೆ
ಏ ಚೆಲ್ವಿ ಬಾರಲೆ
ಏ ಪರ್ಶು ಬಾರಲೆ
ಏ ಥೂ ಥೂ ಥೂ ಎಂತ ಕೆಲ್ಸ ಆಯ್ತು…

ನನ್ ಒಡಿಯಾ
ನನ್ ಕಾಲಯ್ಯ
ನನ್ ಮ್ಯಾಲ ಇಸ್ಟ್ ಅಕ್ರಿ ನಿಂಗ
ನಿನ್ನ ಈಗಲೀಗ ಮೆಚ್ದಿ ಕಣ
ನಿನ್ನ ಈಗಲೀಗ ನಂಬ್ದಿ ಕಣ
ಅಯ್ಯಯ್ಯೋ ನೋಡ್ ನೋಡ್ತನೆ
ಈಗಲೀಗ ದಡದಡಾಂತ
ಎಲ್ರು ಓಡೋಡ್ ಬಂದ್ರಲ್ಲಾ..

ಸವ್ವಿ ಬೋರಿಂಗ್ಲಿ ನೀರ್ ತಂದ್ಲು
ಚೆಲ್ವಿ ಮನಲಿರ ಕೊಳದಪ್ಲ ತಂದ್ಲು
ಪರ್ಶು ಬೀದಿಲಿರ ಸೀಗಕಡ್ಡಿ ಎತ್ತಿಡ್ದು
ನೀರೂದು
ಉಜ್ಜಿ
ತೊಳ್ದು
ಫಳಾರ್ ಅನ್ಸಿ
ರವ್ಗುಟ್ಟೊ ಬಿಸುಲ್ಗ ಇಟ್ಟು
ನನ್ ಜೀವ್ನಾನ ಪಾವನ ಮಾಡುದ್ರಲ್ಲಾ..

ನನ್ ಒಡಿಯಾ ಕಾಲಯ್ಯ
ರಂಪಿ ಕೈಲಿಡ್ದು
ದಾರುಕ್ಕ ಮ್ಯಾಣ ಮೆತ್ತಿ
ಎಮ್ಮ ಚರ್ಮ ತಂದು ಅಳತ ಮಾಡಿ
ಕೂದು ಕೊರದು ಅಂಟ್ಸಿ
ಮ್ಯಾಣ ಮೆತ್ತಿದ ದಾರದಲ್ಲಿ ಹೊಲ್ದು
ಗುದ್ದಲ್ಲಿ ಗುದ್ದಿ ಗುದ್ದಿ
ಅಂದ ಮಾಡಿ ರವ್ಗುಟ್ಟೊ ಬಿಸುಲ್ಗ ಇಟ್ಟು
ಬೀಡಿ ತಗ್ದು ಬಾಯ್ಗಿಟ್ಟು
ಕಡ್ಡಿಗೀರಿ ಹಚ್ಚಿ ದಮ್ಮು ಎಳಿತಾ
ರಟ್ಟಗಾತ್ರ ಹೊಗೆ ಬುಡ್ತಾ ಕುಂತದ್ದ
ಕಣ್ಣಾರ ಕಾಣ ಹೊತ್ಗ
ಚೆಂಗುಲಿ ಕುಣಿತಾ ಪದ ಹೇಳ್ತ
ಕಾಲಯ್ನ ಟವಲ್ಲ ಎಳ್ದು ಬೀಳ್ಸಿ
‘ಮೆಟ್ ಕೊಡ್ಬೇಕಂತ ಮೆಟ್ಟಾ
ಅಯ್ನೋರ್ ಕೊಟ್ಟಿದ್ ಮೆಟ್ಟು’
ಅಂತ ಕೇಳ್ತ ಬಿಸುಲ್ ಕಾಯ್ತ ಇರ
ಸವ್ವಿ ಕಡ ಕಣ್ಣಾಯ್ಸಿದ್ದು ಕಾಣ್ದ
ನನ್ ಕಾಲಯ್ಯ,
‘ಈಗ್ತಾನೆ ಆಯ್ತು ಕಣ
ಇನ್ನೊಸಿ ಕೆಲ್ಸ ಅದ
ಸಂದನಾಗ ನಾನೆ ಬತ್ತಿನಿ’
ಅಂತೇಳಿ ಎದ್ದು ಒಳಕ್ಕೋದ ಮ್ಯಾಲ
ಚೆಂಗುಲಿ ಕಣ್ಣು ಸವ್ವಿ ಕಡೆನೆ ಓಡ್ತಾ
ಆ ಸವ್ವಿನೂ
ಚೆಂಗುಲಿಗ ಕ್ಯಾಕರಿಸಿ ಉಗಿನಿಲ್ವಲ್ಲಾ..
ಆ ಪರಶು ನೋಡ್ತಾ ಗುರಾಯಿಸ್ತಾ
ಆ ಚೆಲುವಿ ಅದ ನೋಡ್ತಾ
ಆ ಚೆಂಗುಲಿಗ ಅದ ಸನ್ನ ಮಾಡ್ತಾ
ಆ ಚೆಂಗುಲಿಯೂ
ಆ ಚೆಲುವಿ ಸನ್ನ ಕಂಡು ಪದವಾಡ್ತ
ಬೀದಿಗುಂಟ ಹೆಜ್ಜೆ ಹಾಕ್ದಾಗ
ಬಿಸುಲು ಚುರುಗುಟ್ತಾ
ನಾ ಕಾದು ಬೆಂಕ್ಯಾಗಿ
ನನ್ ಕಾಲಯ್ನ ಕಾಯ್ತ
ನಾನೂ ಕಾಯ್ತ ಸುಸ್ತಾದನಲ್ಲೊ….


-೨೨-
ನೆನ್ನ ಆ ಗಾತ್ರ ಮಳ ಬಿದ್ದು
ಇದೇನ ಇಂದಿಂಗ ರವ್ಗುಟ್ಟ ಬಿಸ್ಲು..
ಇದೇನ ಈ ಹೆಣ್ಣು ಸವ್ವಿ
ವಯ್ಯಾರ ಮಾಡ್ಕಂಡು ಹಿಂಗಾ…

ಅಂತೂ ನನ್ ಕಾಲಯ್ಯ ಕಂಡ.

ಹೆಗುಲ್ಗ ಚೀಲ ಹೇರ್ಕಂಡು
ಆ ಚೀಲ ತುದಿನ ಬಲಗೈಲಿ ಹಿಂಡ್ಕಂಡು
ನನ್ನ ಎಡಗೈಲಿ ಎತ್ಕಂಡು
ಬಿಸುಲ್ಗ ಮುಖ ಮಾಡ್ಕಂಡು
ಹೆಜ್ಜೆ ಹಾಕ್ತಿದ್ರ
ಪರ್ಶು ದುಮುಗುಟ್ಕಂಡು ಬಂದಾ..
‘ಏಯ್,‌ ಏನಾ..’
ಕಾಲಯ್ಯನ ಮಾತು ರವ್ಗುಟ್ಟ ಬಿಸುಲ್ಗ
ಒಣಗಿ ಬೆಂಡಾಯ್ತು.

ಪರಶು ಕಣ್ಣು ಬೆಂಕಿ ಕೆಂಡ ತರ ಇತ್ತು
ಆ ಬೆಂಕಿ ಕೆಂಡವ ಹೊತ್ತುಕೊಂಡು
ಹೋಗ ಬೆನ್ನಿಗೆ ಇನ್ನಾಕಾರು ಜನ
ದುಮುಗುಡುತಾ ಬಂದ್ರು.

ಕಾಲಯ್ಯ,
‘ಏಯ್, ಅಪ್ಪೊ ಏನಾ.. ಏಯ್..’
ಅಂದದ್ದು ಯಾರಿಕ್ಕೇಳ್ತೂ..

ಕಾಲಯ್ಯನ ಬಲಗೈ
ಹೆಗಲೇರ್ಕಂಡ ಚೀಲದ ಮೊನೆ ಹಿಡ್ತಿತ್ತು
ಕಾಲಯ್ಯನ ಎಡಗೈಲಿ
ನನ್ನ ಭದ್ರವಾಗಿ ಹಿಡ್ತಿತ್ತು
ಆಗ ಅವನ ಕೈ ಒದುರ್ತಾ
ಆಗ ಅವನ ಮೈ ಅದುರ್ತಾ
ಆಗ ಅವನ ಯದ ವಡ್ಕತಾ ಇತ್ತು.

ಕೆಳಗೆ ನೋಡ್ದಾ
ಕಣ್ಲಿ ನೀರಾಡ್ತಿತ್ತು.

ಹಾಗೆ ತಿರುಗ್ದಾ

ಆ ನಾಕಾರು ಜನ ಹಿಡ್ಕಂಡು
ಕೆಳಕ ಕೆಡಿಕಂಡು ಒದ್ದು
ಹೊಡಿತಾ ಬಡಿತಾ
ಈ ಕಾಲಯ್ಯ ನೋಡ್ತಾ..
ಆ ಪರಶೂನ
ಆ ನಾಕಾರು ಜನಿಂದ
ಪಾರು ಮಾಡಕೆ
ಕಾಲ್ಕಿತ್ತು ಓಡಿ
‘ಅಪ್ಪೊಯ್ ಬಿಡ್ರಪ್ಪಾ ಏನಪ್ಪಾ
ಇದ್ಯಾಕ್ರಪ್ಪಾ ಇದೇನ್ರಪ್ಪಾ’
ಅಂತ ನನ್ನುವ ಆ ಚೀಲನುವ
ಕೆಳಕ ಇಳಿಸಿ ಕೇಳ್ತ ಎಲ್ಲರ ಕಾಲ ಹಿಡಿತಾ
ಹಿಡಿದ ಆ ಕಾಲ್ಗಗಳು
ಕಾಲಯ್ಯನ ಜಾಡ್ಸಿ ಒದ್ದ ರಭಸಕ್ಕೆ
ಕೆಳೊಟ್ಟ ಹಿಡ್ಕಂಡು ಮೋರಿಗ ಬಿದ್ನಲ್ಲಾ..

‘ಅಪ್ಪೊ.. ಪರ್ಶೋ..’
ಸವ್ವಿ ಓಡೋಡಿ ಬಂದು ಅಳ್ತ ನಿಂತ್ಲು
‘ಲೇ ಚಿನಾಲಿ ನೀನಾ ರಾಣಿ
ಇಂವ ನಮ್ ಚೆಂಗುಲಿ ಕೈ ಮುರ್ದುನಾ..’
ಅವರು ಹೇಳ್ತ ಒದಿತಾನೆ ಇದ್ರು.
ಸವ್ವಿ ಯಾಕಾ ಏನಾ ಅಂದ್ಲು
ಕಾಲಯ್ಯ ಯಾಕಾ ಏನಾ ಅಂದ
ಪರಶು ಇಲ್ಲ ಕನಪ್ಪೋ ಅಂದ.


ಕಾಲಯ್ಯ ದಂಗಾಗಿ ಕುಂತಿದ್ದ
ನಾನು ಮಿರಮಿರ ಮಿಂಚ್ತಾ
ಮೂಲೇಲಿರ ಟೈರ್ ಮೇಲಿದ್ದಿ
ಕೆಳ ಮೂಲೇಲಿ ನನ್ ಜೊತಗಾರರು
ಗುಡ್ಡ ಹಿಡ್ದು ಬಿದ್ದಿದ್ರು.

ಜನ ಬರೋರು ಹೋಗೋರು
ಕೆಲೂರು ಆಡೋ ಕೊಂಕಿಂದ
ಕಾಲನಿಗೆ ಮಂಕಿಡಿದಿತ್ತು.

ಚೆಲುವಿ ಬಂದಳು
ಎಲೆ ಅಡಿಕೆ ಅಗುದು ಉಗುದು
‘ತತ್ತಾ ಇಲ್ಲಿ’ ಅಂದ್ಲು.
ಒಂದೊಂದು ರೂಪಾಯ್ನ
ಹತ್ನೋಟು ಕಾಲನ ಕೈಯಿಂದ ಜಾರ್ತು.

ನೆತ್ತಿ ಸೂರ್ಯ ಇಳಿತಾ ಮಂಕಾಯ್ತ
ಮ್ಯಾಲ ಮ್ವಾಡ ಗವ್ವರಾಕತ
ಅಯ್ನೋರು ಬಂದಂಗಾಯ್ತು.

ಕಾಲಯ್ಯ ಚಿಂತಾಕ್ರಾಂತನಾಗಿ
ಅಯ್ನೋರು ಟರ್ಕಿ ಟವಲ್ಲ ಬಡಿದು
‘ಏಯ್, ಬಂಚೊತ್
ಬಂದಿ ನಿಂತಿನಿ ಕುಂತಿದ್ದಯ
ಲೌಡೆ ಬಂಚೊತ್..
ಚೆಂಗುಲಿ ಕಳಿಸಿದ್ದಿ ಮೆಟ್ ಕೊಡ್ದೆ
ಕೈ ಮುರುದು ಕಳಿಸಿದ್ದಯ ಲೌಡೆ..’

‘ಅಯ್ನೋರಾ ಇನ್ನು ವಸಿ ಕೆಲ್ಸ ಇತ್ತು
ವಪ್ಪತ್ಗ ಕೊಡ್ತಿನಿ ಅಂದಿ ಅಯ್ನೋರಾ..’
‘ಏಯ್, ಲೌಡೆ ಕೈ ಮುರುದ್ದು ಯಾಕಲೆ..’
‘ನಂಗೇನ್ ಗೊತ್ತು ಅಯ್ನೋರಾ
ಎಲ್ಲ ಸೇರ್ಕಂಡು
ನನ್ ಪರ್ಶುಗೆ ಒದ್ರು
ನಂಗು ಒದ್ರು
ಕೆಳೊಟ್ಟ ಕಿಬ್ಬೊಟ್ಟ ಹಿಡ್ಕಂಡದ’

”ಏಯ್ ತತ್ತಲ ಇಲ್ಲಿ
ಚೆಂಗುಲಿ ಅಂದ್ರ ಏನಂತ ತಿಳ್ಕಂಡೆ’
ಅಂತ ಒಳಕ ನುಗ್ಗಿ
ಟೈರ್ ಮ್ಯಾಲ ಇರ ನನ್ನ
ಎತ್ಕಂಡು ಮೆಟ್ಕಂಡು
ಗಿರಿಕ್ಕು ಗಿರಿಕ್ಕು
ಸದ್ದು ಮಾಡುತ್ತಾ ಛತ್ರಿ ಹಿಡಿದು
ಬೀಳೋ ಮಳೆಲೆ ಹೆಜ್ಜೆ ಹಾಕಿದರಲ್ಲೊ..

ಕಾಲಯ್ಯೋ,
ನಿನ್ ಕೆಳೊಟ್ಟ ನೋವು
ನಿನ್ ಕಿಬ್ಬೊಟ್ಟ ನೋವು
ಆ ಬೀಳೋ ಮಳೆಲಿ
ಕೊಚ್ಕೊಂಡು ಹೋಯ್ತಲ್ಲೊ….

ಎಂ. ಜವರಾಜ್

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Oldest
Newest Most Voted
Inline Feedbacks
View all comments
0
Would love your thoughts, please comment.x
()
x