ಮೆಟ್ಟು ಹೇಳಿದ ಕಥಾ ಪ್ರಸಂಗ ಒಂದು ನೀಳ್ಗಾವ್ಯ (ಭಾಗ 19 & 20): ಎಂ. ಜವರಾಜ್

-೧೯-
ಸೂರ್ಯ ಕಣ್ಬುಟ್ಟು
ನಾನು ಕಪಿಲ ಬಾವಿ ಮೆಟ್ಲತ್ರ ಇದ್ದಿ

ಅಯ್ನೋರು
ಬಾವಿ ನೀರೊಳ್ಗ ಈಜ್ತಾ..
ಚೆಂಗುಲಿ
ಬಾವಿ ಕಟ್ಟ ಮ್ಯಾಲ ನಗ್ತಾ..

ಅರೆ,
ಮ್ಯಾಲಿಂದ ತಿಗುನ್ ತಳ್ಳು ಬೀಳ್ತಲ್ಲಾ..
ಚೆಂಗುಲಿ,
‘ಅಯ್ನೋರಾ ತಳ್ಳು ಉದುರ್ತಾ ಅವ
ಆದು ಗುಡ್ಯಾಕಕಿಲ್ವ.
ಶಂಕ್ರಪ್ಪೋರು ಈಚೀಚ್ಗ ಬರದೇ ಇಲ್ಲ’

‘ಅಂವ ನಿಗುರ್ತ ಅವ್ನ ನೀನೆ ಮಾಡ್ಲಾ
ಸಂತಗೋಗಿ ಹರಾಜಾಕ್ಲಾ
ನಿಂಗೇನ್ ಕೇಮಿ ಇದ್ದದು..’

‘ಆಯ್ತು ಅಯ್ನೋರಾ
ಆಗ ನನ್ನೇನಾರ ಶಂಕ್ರಪ್ಪೋರ್ ಕೇಳುದ್ರಾ..’
‘ಏಯ್, ಲೌಡೆ ಬಂಚೊತ್
ಅಂವ ಹಂಗೇನಾರ ಬಂದ್ರ
ತ್ವಾಟ್ಗ ಕಾಲಾಕ್ಬಾರ್ದು ಲೌಡೆ..’
‘ಅಯ್ನೋರಾ ಇಸ್ಟ್ ಸಾಕಲ್ವ ಮಾತ್ಗ
ಈಗ ಈ ತ್ವಾಟ ನಂದೇ ಬುಡಿ..’


ಸುಡು ಬಿಸುಲು
ಈ ಅಯ್ನೋರು ನನ್ನ ಬಿಸುಲ್ಲಿ ಬುಟ್ಟು
ಜಗುಲಿಲಿ ಗೊರಕ ಹೊಡಿತಾ ಇದ್ರು.

ನೀಲವ್ವೋರು,
ಒಣಾಕಿರ ಮೆಣಸಿ ಹಣ್ಣ ಕೈಯಾಡ ಹೊತ್ಲಿ
ಚೆಂಗುಲಿ,
ಬೆವರ ಸುರಿಸ್ಕಂಡು ದಾಪುಗಾಲಾಕಂಡು
ಅಯ್ನೋರ್ ಕಾಲ್ದೆಸೇಲಿ ಕುಂತ್ನ.

ನೀಲವ್ವೋರು ಮೆಣಸಿ ಕೈಯಾಡಿ
ನೆಳ್ಗ ಹೊಸಿಲ ಮ್ಯಾಲ ಕುಂತ್ರು.
ಚೆಂಗುಲಿ ಕಣ್ಣು
ನೀಲವ್ವೋರ ಕಾಲಲಿದ್ದ
ಬೆಳ್ಳಿ ಗೆಜ್ಜೆ ಮ್ಯಾಲ ಮೂಡ್ತು.
ಆಗ ದೊಡ್ಡೋರು ಬಂದ್ರು
ಊರಿಗೇ ಹಿರೀರು ಯಜಮಾನ್ರು.
ಚೆಂಗುಲಿ ಎದ್ನಿಂತು ಕೈಕಟ್ತು
ನೀಲವ್ವೋರೂ ಎದ್ನಿಂತು ‘ಬನ್ನಿ’ ಅಂದ್ರು.

ಹೀಗೆ ಕುಲೊಸ್ತರು ಒಬ್ಬೊಬ್ರೆ ಒಬ್ಬೊಬ್ರೆ
ಬಂದು ಬಂದು ಸೇರುದ್ರು.

ಬಿಸುಲು ಕಾವು ಇಳಿತಾ
ಮಲಗಿದ್ದ ಅಯ್ನೋರು ಎದ್ದು
ಕಾಲ್ದೆಸೆ ಕಣ್ಣಳ್ತೇಲಿ ಚೆಂಗುಲಿ ಗುರುತು.

‘ಅರೆ ಚೆಂಗುಲಿ ಆಯ್ತ ಹರಾಜು’
‘ಅಯ್ನೋರಾ ಅದಿರ್ಲಿ ದೊಡ್ಡೋರು..’
‘ಅರೆ,
ಇದೇನು..
ಇದೀಗ..
ನೀವೆಲ್ಲ..
ನನ್ ಕಿದ್ದಂಡಲಿ…’

ಕುಲೊಸ್ತರು ದಂಗಾದ್ರು.
ಜೀವ ಹಿಡ್ಕಂಡು ತೊದುಲ್ಕಂಡು
‘ಅಯ್ನೋರಾ,
ನಮ್ ಕೇರಿಲಿ ಮಾತಾಗದ
ಹಬ್ಬುದ್ದು.
ಮುಂಗಾರ್ ಕಳ್ದು ನಾಟಿ ಆದೇಟ್ಗೆ
ಅಂತಾಗದ.
ಕುರುಕ್ಷೇತ್ರ ನಾಟ್ಕನು ಆಡಕ
ಅಂತಾಗದ.
ಅಯ್ನೋರಾ, ನಿಮ್ತೇತ್ರುತ್ವದಲ್ಲೇ
ಅಂತಾಗದ’

ಅಯ್ನೋರು ಆಚೀಚೆ ನೋಡಿ
ಏನೇನೋ ಮಾತಾಯ್ತು
ನೀಲವ್ವೋರು ನೋಡ್ತಾ ಇದ್ರು
ಅಯ್ನೋರು ಬಾಗಿಲ್ದಿಕ್ಕ ನೋಡುದ್ರು
ನೀಲವ್ವೋರು ಒಳ ಹೋದ್ರು
ಚೆಂಗುಲಿ ಹಿಂದೆ ಸರ್ದು ನಿಂತ್ಗತು
ನೀಲವ್ವೋರ್ ವೀಳೆದೆಲೆ ತಂದು
ಅಯ್ನೋರ ಮುಂದೆ ಇಟ್ರು.
ಈ ಅಯ್ನೋರು
ಆ ವೀಳೆದೆಲೆ ಒಳಕ
ನಾಕಾಣಿ ಬಂದ ಹಾಕಿ
ಕುಲೊಸ್ತನ ಕೈಗಿಡಿಸಿ ಮೀಸ ತಿರುವುದ್ರು.

ಅಲಲಲೇ ಇದೇನ ಇದು
ಈ ಅಯ್ನೋರ ಮೀಸ ನಿಗುರಿ
ಕುಲೊಸ್ತರ ಸವರಿ ಬಿಸಾಡ್ತಲ್ಲಾ..

ನೀಲವ್ವೋರು
ಬೀದಿಲಿ ಬಿದ್ದು ಒದ್ದಾಡಾಗ
ಶಂಕ್ರಪ್ಪೋರ ಜೊತ್ಗ ಇದ್ರಲ್ಲಾ
ಆ ಶಂಕ್ರಪ್ಪೋರು ನೀಲವ್ವೋರಾ
‘ಅವ್ವೊ ಅವ್ವೊ’ ಅನ್ನಾಗ ಲೊಚಗುಟ್ಟಿದ್ರಲ್ಲಾ..


-೨೦-
ಮುಂಗಾರು ಬೀಸ್ತಿತ್ತು.
ಉಳೋರು ಉತ್ತು ಬಿತ್ತೋರು ಬಿತ್ತು
ವಾರ ವಪ್ಪತ್ತು ಗಂಟ ಗಳ್ಗ ಅದ್ರೀತಿಗ
ಸುರಿಯ ಮಳ್ಗ ಗೋಣಿ ಗೊಪ್ಪ ಹಾಕಂಡು
ಬರೋರು ಬರ್ತಾ
ಹೋಗೋರು ಹೋಗ್ತಾ
ಸಂದೇನು ಹಿಂಗೆ.

ಈ ಅಯ್ನೋರು ತ್ವಾಟ ಬುಟ್ಟು
ಗವ್ವರಾಕಂಡಿರ ಮ್ವಾಡ್ದಲ್ಲಿ
ಛತ್ರಿ ಹಿಡ್ಕಂಡು ತಿರುಗುಸ್ತಾ
ಕಾಲ್ಕಿತ್ತು ಅಳ್ಳಾಡ್ತಿದ್ದ ನನ್ನ ಮೆಟ್ಟಿ
ಹೊಲದ ಮಾಳ್ದಲ್ಲಿ ಯಳದಾಡ್ಕಂಡು
ಕಲ್ಲು ಮುಳ್ಳು ದಾಟ್ಗಂಡು
ಸಂತಮಾಳತವು ಬಂದ್ರು.

ಸಂತಮಾಳ ಹುಣಸೇ ಮರದತ್ರ
ನನ್ ಒಡಿಯಾ ಕಾಲಯ್ಯ ಕಂಡನಲ್ಲೊ
ಅಲ್ಲೆ ನನ್ ಜೊತಗಾರರು ಬಿಕರಿಯಾಗ್ದೆ
ಸಪ್ಪ ಮುಸ್ಡಿ ಹಾಕಂಡು ಮೂಲ ಸೇರ್ಕಂಡು
ಸ್ವಾಕಾಡ್ತ ಗೋಳಾಡ್ತ
ನನ್ ಕಂಡು ಹಿಗ್ಗುದ್ರಲ್ಲಾ..

ಈ ಅಯ್ನೋರ ನಿಂತ ಭಂಗಿಯ ನೋಡಿ
ಕಾಲಯ್ಯ ಬೆಚ್ಚಿ ಬೆರಗಾಗಿ
‘ಅಯ್ನೋರಾ ಇದೇನ ಈ ಮಳ ಒಳ್ಗ’
‘ಏಯ್, ನೋಡ್ಲಾ ಇಲ್ಲಿ ಕಾಲು ಕಿತ್ತೋಗವ’
‘ಅಯ್ನೋರಾ ಬುಡಿ ಇಲ್ಲಿ’

ಒಡಿಯಾ ಕಾಲಯ್ಯ ನನ್ನ ಎತ್ಕಂಡು
ಉರುಗ್ಸಿ ತಿರುಗ್ಸಿ ನೋಡ್ತ
ನನ್ ಜೊತಗಾರ ಸಂದಿಗ ಕೈ ಹಾಕ್ತ
ನೋಡುದ್ದೇ ನೋಡುದ್ದು.
ನಂಗ ನನ್ ಮೈಗ ಅಳತ ಹಾಕ್ತ
ಹೊಂದಾವಣಿ ಆಗ್ದೆ,
‘ಅಯ್ನೋರಾ ನಾಳ ಕೊಟ್ರಾಗಲ್ವ
ಇಂಜಕ ಬಂದ್ಬುಡಿ
ಒಳ್ಳೆ ಚರ್ಮ ಅದ ಮನಲಿ’

ಈ ಅಯ್ನೋರು ಪಂಚ ಎತ್ತಿ
ಚಡ್ಡಿ ಜೋಬ್ಗ ಕೈಯಾಕ್ದಾಗ
ಒಡಿಯಾ ಕಾಲಯ್ಯ ಕೈಯೊಡ್ಡಿದೇಟ್ಗೆ
ನಾಕಾಣಿ ಎಂಟಾಣಿ ಐದ್ಪೈಸ ಹತ್ಪೈಸ
ಉದುರಿ ಚೆಲ್ತಾ ಬಿದ್ವಲ್ಲಾ…
ಉದುರಿ ಬಿದ್ದ ಕಾಸ ಒಡಿಯಾ ಆಯ್ಕತಾ
ಅಯ್ನೋರು ಆ ಬೀಳ ಮಳಲಿ
ಬರಿಗಾಲ್ಲಿ ನಡಿತಾ ಹೋದ್ರಲ್ಲೊ..

ನಾ ನನ್ ಒಡಿಯನ ಕಿದ್ದಂಡ ಸೇರಿ
ನನ್ ಜೊತಗಾರ ನೋಡಿ ಹಿಗ್ತಾ
ಇತ್ತ ಕತ್ಲೂ ಕವುಸ್ಕೊಂಡು
ಬೀಳ ಮಳವೂ ಜೋರಾಗಿ
ಮಿಂಚು ಫಳಾರಂತು.

ಆಗ ಒಡಿಯ ಕಾಲಯ್ಯ
ಗೋಣಿ ಗೊಪ್ಪ ಮಾಡ್ಕಂಡು
ಮೂಲಲಿರ ಚೀಲ ಎತ್ತಿ
ಹೆಗುಲ್ಗ ಹೇರ್ಕಂಡು
ನನ್ನ ಬಲಗೈಲಿ ಹಿಡ್ದು
ಗವ್ವರಾಕಂಡಿರ ಮ್ವಾಡ್ದ ಕತ್ಲಲಿ
ನಡಿತಾ ಮಣುಮಣು ಮಾತಾಡ್ತ
ದಾರಿ ಸಾಗ್ಸಿ ಹೆಂಡದ ಗುಳ್ಳು ಮುಟ್ಟುದ್ದ
ಚೆಂಗುಲಿ ನೋಡಿ ನಗಾಡ್ತಲ್ಲಾ…


ನನ್ ಒಡಿಯಾ ಕಾಲಯ್ಯ
ಕುಡ್ದು ವಾಲಾಡ್ತ ಬೀದಿಲಿ ನಡಿತಾ
ಆ ಕತ್ತಲ ಸಾಮ್ರಾಜ್ಯದಲಿ
ಮನ ಮೋರಿ ದಾಟ್ತ
ನನ್ಸಯ್ತ ಮುಗ್ಗುರ್ಸಿ ಬಿದ್ದೊತ್ಲಿ
ಸವ್ವಿ ಇಣುಕಿ ನೋಡ್ತು.
‘ಅಯ್ ಅಪ್ಪೋಯ್..’ ಅಂತ
ಕೈ ಹಿಡ್ದೆತ್ತಿ ಒಳಕ್ಕೆಳೆವತ್ಲಿ
ಸುರಿದಿರ ಮಳ ನೀರ್ಗ
ನಾ ಬಿದ್ದು ಒದ್ದಾಡ ತರ ಆಯ್ತಲ್ಲ ಶಿವ್ನೇ..

‘ಏಯ್, ಲೌಡಿ ಲುಚ್ಚೆ ಬುಡೆಲೆಯ್..
ಇವತ್ತು ಯಾರ್ಯಾರ್ ಬಂದಿದ್ರು..
ನಿನ್ನ ಸಾಕಿ ಬೆಳ್ಸಿನಿಕಲೈ ಲೌಡಿ
ನಿಮ್ಮೊವ್ ಮುಂಡ ಎಲ್ಯಾ
ಪರ್ಶು ಒಬ್ನೆ ನನೈದ
ಅವ್ನೆ ನಿಯತ್ತು. ಕುಲ್ಪುತ್ರ.
ನೀ ನಂಗುಟ್ಟಿದ್ದಯಾ ನಿಯತ್ತಾಗಿರಕ..
ನೀಯಾರ ನಾಯಾರ ನಿಮ್ಮಪ್ಪ್ಯಾರ…
ಥೂ.. ಲೌಡಿ ಮುಂಡೆ’

ಅಯ್ಯೊ,
ನನ್ ಒಡಿಯನೇ
ನನ್ ಕಾಲಯ್ಯನೇ
ಇದೇನ ಇದು
ಇದೆಂಥ ಮಾತ ಇದು
ಹಾಗಾದ್ರ ಹಾಗಾದ್ರ
ಈ ಸವ್ವಿ ಯಾರ ಒಡಿಯಾ..
ಹಾಗಾದ್ರ ಹಾಗಾದ್ರ
ಆ ಪಂಚ ಅಂಚೇಳಿದ್ದೇ ಸರಿನಾ..

ನಾ ಯಾಕಾರು ಬಂದಿ
ಈ ಮಾತ ಕೇಳಕ್ಯಾ
ಬೆಳಗಾನ ಈ ಕತ್ಲೊಳಗ
ಈ ಮಳ ನೀರೊಳ್ಗ
ನೆಂದು ಮೆತ್ತಗಾಗಿ ಸಾಯಕ್ಯಾ
ಥೂ ಜನ್ಮುವೇ ಥೂ ಥೂ..

ಎಂ. ಜವರಾಜ್


ಮುಂದುವರೆಯುವುದು…

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Oldest
Newest Most Voted
Inline Feedbacks
View all comments
0
Would love your thoughts, please comment.x
()
x