–
೧೫-
ಇಲ್ಲಿ ಕತ್ಲು ಅಂದ್ರ ಕತ್ಲು
ಅಲ್ಲಿ ಕಾಣ್ತ ಮಾರ್ದೂದಲ್ಲಿರ
ಹೆಂಡದಂಗಡಿಲಿ ಲಾಟೀನ್ ಬೆಳಕು
ಇಲ್ಲಿ,
ಯಾರು ಹೋದ್ರು ಯಾರ್ ಬಂದ್ರು
ಗೊತ್ತಾಗದ ಹೊತ್ತು
ಈ ಅಯ್ನೋರು ಅತ್ತಿಂದಿತ್ತ ಇತ್ತಿಂದತ್ತ
ತಿರುಗಾಡ್ತ ಬೀಡಿ ಸೇದ್ತ
ಎಳೆಯೋ ದಮ್ಮು ದಮ್ಮಿಗೂ
ಬೀಡಿ ಮೊನೆಲಿ ಬೆಂಕಿನುಂಡೆ ಕಾಣ್ತಿತ್ತು
ಅರೆ ಹೆಂಡದಂಗಡಿಲಿ ಜಗಳ
ಅಯ್ನೋರು ದಿಟ್ಟಿಸಿ ನೋಡ್ದಾಗಾಯ್ತು
ನಂಗು ದಿಗಿಲು
ಯಾರ ಈ ಜಗಳ ಮಾಡ್ತ ಇರದು?
ಆ ದನಿಯ ಎಲ್ಲೊ ಕೇಳಿರ ನೆಪ್ಪು
ಆ ದನಿ ಜೋರಾಯ್ತು
ಅರೆ ಕಾಲ!
ಅಯ್ಯೊ ನನ್ನ ಕಾಲಯ್ಯನ ದನಿಯಲ್ವ
ಕಾಲಯ್ಯೋ ನನ್ನ ಕಾಲಯ್ಯೋ
ನನ್ ಕಾಲಯ್ಯನ ನೋಡ್ಬೇಕಲ್ಲ
ಈ ಅಯ್ನೋರು ಈ ಜಾಗ ಬುಟ್ಟು
ಕದಲಿ ಅಲ್ಲಿಗಂಟ ಹೋಗ್ಬಾರ್ದ
ಈ ಕತ್ಲಲಿ ಏನೂ ಕಾಣ್ದು
ಜಗಳದ ಸದ್ದು ಜೋರಾಗಿ
ಅಯ್ಯಯ್ಯಪ್ಪಾ ಅನ್ನೋ ಅಳೋ ಕೂಗು
ಚೆಂಗುಲಿ ಬಂದಂಗಾಯ್ತಲ್ಲ
ಆ ಕಾಲಯ್ಯನ ತಲೆಗೆ
ಏಟು ಬಿದ್ದು ರಕ್ತ ಸೋರ್ತ ಬಿದ್ದಿರ ಸುದ್ದಿ ಬಿತ್ತಿ
ಓಡೋಡಿ ಹೋದನಲ್ಲ…
ಅಯ್ಯೋ ನನ್ನ ಕಾಲಯ್ಯೋ
ನನ್ ಒಡಿಯಾ ಕಾಲಯ್ಯೋ
ನಿನ್ನ ಯಾರು ಹೊಡೆದರಯ್ಯೋ
ಯಾಕಾರು ಹೊಡೆದರಯ್ಯೋ
ಈ ಅಯ್ನೋರು ಇನ್ನೊಂದು ಬೀಡಿ ಕಚ್ಚಿ
ಬೆಂಕಿ ಕಡ್ಡಿ ಗೀರಿ ಹಸ್ಸಿ
ದಮ್ಮು ಎಳಿತಾ ಮರದ ಬುಡಕೆ
ತಿಕ ಊರಿದರಲ್ಲೊ..
ಕತ್ತಲ ಸೀಳಿ ದಾಪುಗಾಲಾಕಿ
ಬಂದ ಚೆಂಗುಲಿಯ ಕೈಲಿ ಹೆಂಡದ ಬಾಟ್ಲಿ
ಈ ಅಯ್ನೋರು ಬೀಡಿ ಮೋಟ ಎಸ್ದು
ಬಾಟ್ಲಿಯ ಬಾಯಿಗಾಕಿ
ಗಟಗಟಾಂತ ಹೀರಿ
ಟರ್ಕಿ ಟವಲ್ಲ ಬಡಿದು ಮೇಲೆದ್ದು
ಚೆಂಗುಲಿಯ ಹೆಗಲ ಮ್ಯಾಲೆ ಕೈಯಾಕಿ
ಗಿರಿಕ್ಕು ಗಿರಿಕ್ಕು ಸದ್ದು ಮಾಡುತ್ತ
ಕತ್ತಲೊಳಗೆ ಪಿಸು ಪಿಸು ಮಾತಾಡ್ತ
ಓಣಿ ದಾರಿ ಸವೆಸಿದರಲ್ಲೊ
ಈ ಅಯ್ನೋರ ಪಿಸುಮಾತು
ಆ ಚೆಂಗುಲಿಯ ಮರು ಮಾತು
ನನಗಂಟು ಮುಟ್ಟದೆ ಗುಟ್ಟಾಗಿ ಉಳಿತಲ್ಲಾ..
ಬೊವ್ವ್.. ಬೊವ್ ಬೊವ್ ಬೊವ್ವ್…
ನಾಯಿ ಬೊಗಳುತ್ತ
ಅದರೊಂದಿಗೆ ಹತ್ತಾರು ನಾಯಿ ಸೇರ್ತಾ
ಚೆಂಗುಲಿ ನಡುಗುತ್ತ
ಅತ್ತಗು ಇತ್ತಗು ನೆಗೆಯುತ್ತ
ಈ ಅಯ್ನೋರು ನಾಯ್ಗೊಳ್ಗ
ಜಾಡ್ಸಿ ಜಾಡ್ಸಿ ಒದಿತಾ
ಊರ ಬೀದಿ ಹೊಕ್ಕುವಾಗ
ಚೆಂಗುಲಿ ಕತ್ತಲಲಿ ಕರಗಿ ಕಾಣದಾದನೋ..
ಅಯ್ಯೋ ಇದೆನಾ ನೆಪ್ಪಿರಗದಲ
ಈ ಜಾಗ ನೋಡ್ದಗಿತ್ತಲ್ಲಾ
ನಾ ಯಾವತ್ತಾರ ಬಂದಿದ್ನಾ..
ಅಯ್ಯೋ ಶಿವ್ನೆ
ಇದು ನನ್ ಕಾಲಯ್ಯನ ಮನೆಯಲ್ವ
ಈ ಅಯ್ನೋರು ಇಲ್ಲಿಗ್ಯಾಕ ಬಂದ್ರು?
ನಾ ಇಲ್ಲೆ ತಿಂಗ್ಳು ವಪ್ಪತು ಇದ್ದ ಜಾಗ
ನೋಡಿದೇ ಜಾಗ ರೂಮು
ನಾನು ನನ್ ಜೊತಗಾರ್ರು ಇದ್ದುದು
ಆಮೇಲ ನನ್ನ ಒಡಿಯಾ ಮೂಟ ಕಟ್ಟಿ
ನಮ್ಮನ್ನೆಲ್ಲ ಸಂತಮಾಳ ಜಾಗುಕ್ಕ ಸಾಗುಸ್ದ
ಅಯ್ಯೋ ಎಸ್ಟ್ ಜಿನ ಆಗಿತ್ತು
ನನ್ ಒಡಿಯನ್ ಮನೆ ನೋಡಿ
ಪಾವ್ನ ಆಯ್ತು ಬುಡು
ಈ ಅಯ್ನೋರು ದೆಸೆಯಿಂದ
ನೋಡಿ ಕಣ್ ತುಂಬ್ಕಂಡಿ ಬುಡು..
ಏಯ್, ಏಯ್,
ಈ ಅಯ್ನೋರು ರಾಂಗಾಗಿ ಕೂಗುದ್ರು
ಬಾಗಿಲು ಕಿರ್ರ್ ಅಂತು
ಆ ಬಾಗಿಲ ಸಂದಿಲಿ
ಯಾರೋ ಇಣುಕಿದಂಗಾಯ್ತು
ಈ ಅಯ್ನೋರು ನೋಡ್ತಾ ಹಲ್ಲು ಕಿರಿತಾ
ಸವ್ವಿ.. ಸವ್ವಿ..
ಅಂತಂತ ಮೇಲೆದ್ದು
ನನ್ನ ಮೂಲೇಲಿ ಬುಟ್ಟು
ಬಾಗಿಲು ತಳ್ಳಿ ಒಳ ಹೋದರಲ್ಲೊ..
೧೬-
ನನಗೆ ಬೆರಗೆಂದರೆ ಬೆರಗು
ಮೂಲೇಲಿ ಕಣ್ ಕಣ್ ಬುಡ್ತ
ಹಿಂದಕ್ಕು ಮುಂದಕ್ಕು ಏದುಸಿರು ಬುಡ್ತಾ
ಈ ಅಯ್ನೋರ್ ಯಾಕ್ ಒಳಗೋದ್ರೋ..
‘ಅಯ್ನೋರಾ.. ಅಯ್ನೋರಾ..
ಬ್ಯಾಡ ಬುಡಿ.. ಬ್ಯಾಡ ಬುಡಿ..’
ಸವ್ವಿ ಉಸಿರುಗಟ್ಟಿ ಮಾತಾಡಿದಂಗಾಗಿ
ಇನ್ನಿಂಕ್ರ ಕಿವಿಗೊಟ್ಟೆ,
‘ಏಯ್.. ಸುಮ್ನಿರು
ಸುಮ್ನಿರಲೇಯ್ ಲೌಡಿ
ಅವತ್ತು ಏನಂದೆ ಹೇಳು
ಇನ್ನೊಂದಪ ಬನ್ನಿ ಅಯ್ನೋರೆ ಅಂದೆಲ್ವ..
ನಿನ್ನಿಂದ ನಂಗ
ತಲ ಕೆಟ್ಟದಾ..
ಮೈ ಕೆಟ್ಟದಾ..
ಮನಸ್ ಕೆಟ್ಟದಾ..
ನಿನ್ನ ಬುಟ್ಟಿನಾ, ಅದಾಗ ಮಾತಾ..
ನಿನ್ನಂಥ ಚೆಲ್ವಿ ಈ ಕೇರಿಲಿ ಹುಟ್ದೆ
ನಮ್ ಕೇರಿಲಿ ಹುಟ್ಟಿದ್ರ ಆ ಕತಾನೆ ಬೇರೆ..
ನಿಮ್ಮಪ್ನು ಕರಿ ಇಜ್ಜುಲ್ತರ ಅವ್ನ
ನಿಮ್ಮೊವ್ಳು ಕರಿ ಇಜ್ಜುಲ್ತರ ಅವ್ಳ
ನಿನ್ನೊಂದ್ಗ ಹುಟ್ದ ತಮ್ಮಯ್ನು ಕರಿ ಇಜ್ಲು
ನೀ ಅದೆಂಗೆ ಫಳಾರ್ ಅಂತ ಹೊಳಿತಿದೈ..
‘ಅದಿರ್ಲಿ ಕನಾ..
ನಂಗು ಬೇಕಿಲ್ಲ ನಿಂಗು ಬೇಕಿಲ್ಲ
ಈಗ್ಲು ಕಾಲ ಮಿಂಚಿಲ್ಲ
ನಿನ್ನ ಉಂಡುಂಡೆ ಮಲುಗ್ಸಿ
ನನ್ ಮನಲಿರ ಬಂಗಾರನೆಲ್ಲ
ನಿನ್ ಮೈಮೇಲ ಸುರುದು ಉಳ್ಳಾಡ್ತಿನಿ..’
‘ಅಯ್ನೋರಾ ಇದೇನ ಇದು
ನೀಲವ್ವ ಬುಟ್ಟರಾ
ಶಂಕ್ರಪ್ಪ ಬುಟ್ಟರಾ
ಸತ್ತು ಸ್ವರ್ಗದಲ್ಲಿರೋ
ಆ ಶಂಕ್ರವ್ವೋರು ಆ ದೇವಮ್ಮನೋರು
ಶಾಪ ಹಾಕ್ದೆ ಬುಟ್ಟರಾ..
ಅಯ್ನೋರಾ ಬುಡಿ ಬ್ಯಾಡ
ಬ್ಯಾಡ ಬುಡಿ ಅಯ್ನೋರಾ
ಅಪ್ಪ ಬರೋ ಹೊತ್ತಾಯ್ತು
ತಮ್ಮ ಬರೋ ಹೊತ್ತಾಯ್ತು
ನಿಮ್ ಪಾದ ಮುಟ್ತಿನಿ ಬ್ಯಾಡಿ..’
‘ಏಯ್, ನಾ ಹೇಳ್ತನೆ ಅವ್ನಿ
ನಿಮ್ಮಪ್ಪನು ಬರಲ್ಲ ತಮ್ಮನು ಬರಲ್ಲ
ಮೈಸೂರ್ಗ ಹೋಗರ ಮೆಟ್ ತಕ್ಕಂಡು
ಬರದು ನಾಳನೆ ನೀ ಬಿಚ್ಚು ಲೌಡಿ..’
ಅಯ್ಯೋ ಶಿವ್ನೆ
ಬಂಗಾರದಂತ ಹೆಡ್ತಿ ಮಡಿಕಂಡು
ಈ ಸವ್ವಿ ಮ್ಯಾಲ್ಯಾಕ ಕಣ್ ಬಿತ್ತು
ಈ ಸವ್ವಿಯಾದ್ರು ಇನ್ನೊಂದಪ ಅಂತ
ಯಾಕಾರು ಹೇಳುದ್ಲು..
ಯಾರ್ಯಾರು ಇದ್ರ ಬಂದ್ರಪ್ಪಾ
ಕಾಲಯ್ಯೋ ನನ್ ಕಾಲಯ್ಯೋ..
ಅಯ್ಯೋ ಶಿವ್ನೆ
ಆ ಹೆಂಡದ ಗುಳ್ಳಿ ರಕ್ತ ಕಾರ್ಕಂಡು
ಆ ಕತ್ಲಲೂ ಯಾರಂತನೂ ಕಾಣ್ದೆ
ಅರುಚ್ತ ಕಿರುಚ್ತ ಹೋದ್ಯಲ್ಲೊ
ಕಾಲಯ್ಯೋ ನನ್ ಕಾಲಯ್ಯೋ
ನಿಂಗ ಅದ್ಯಾರು ಏನ್ ಮಾಡುದ್ರೋ
ಇಲ್ಲಿ ನಿನ್ ಸವ್ವಿ ಅಯ್ನೋರ್ ಮಗ್ಗುಲ್ಲಿ
ಥೂ ಥೂ
ಹೇಳಕ ಬಾಯಿ ಬತ್ತಾ ಇಲ್ವಲ್ಲಾ..
ಸವ್ವಿ ಸವ್ವಿ..
ಅಯ್ಯೋ ನನ್ ಮಾತು ಕೇಳಿದಾ..
ಒಳಗ ಅದೇನೋ ಸದ್ದು,
‘ಆಯ್ತು ಇನ್ನೊಂದ್ಚೂರು..’
‘ಅಯ್ನೋರಾ.. ಅಯ್ನೋರಾ..’
‘ಏಯ್ ಲೌಡಿ ಅದ್ಯಾಕ ಹಂಗ್ ಆಡಿಯೇ
ನೀ ಲಂಗನೇ ಹಾಕ್ಬೇಡ ನಾಳಿಂದೊತ್ತು
ಬಂಗಾರನೇ ಉಟ್ಕ ತಿರ್ಗು..’
‘ಬ್ಯಾಡ ಬುಡಿ ಅಯ್ಯೋರಾ..
ಅಯ್ನೋರಾ ಬುಡಿ ಬ್ಯಾಡ…’
‘ಆ….
ಅಯ್ಯಪ್ಪಾ..
ಆ….’
ದೂರದಲ್ಲೆಲ್ಲೊ ಇರಬಹುದು
ಅದೆ ಆಸು ಪಾಸು ಬೀದಿಗಳಲ್ಲೊ
ಗಳ್ಳಾಕುವ ನಾಯಿಗಳು
ಬೊಗಳುತ್ತಾ ಕಿರುಗುಟ್ಟುತ್ತಾ
ದಿಕ್ಕಾಪಾಲಾಗಿ ಓಡುವ ಸದ್ದು.
ನನಗೊ ತಲೆ ಚಿಟ್ಟು ಹಿಡಿದು
ದಿಕ್ಕೆಟ್ಟವರಂತೆ ದಿಕ್ ದಿಕ್ದಿಗೆ ಕಣ್ಣಾಡಿಸುತ್ತಿದ್ದೆ.
–ಎಂ. ಜವರಾಜ್
ಮುಂದುವರೆಯುವುದು…