ಮೆಟ್ಟು ಹೇಳಿದ ಕಥಾ ಪ್ರಸಂಗ ಒಂದು ನೀಳ್ಗಾವ್ಯ (ಭಾಗ 13 & 14): ಎಂ. ಜವರಾಜ್

೧೩-

ಬಿಸ್ಲು ಬಿಸ್ಲು ಏನಪ್ಪಾ ಬಿಸ್ಲು ಉಸ್ಸ್…

ಅಲಲಲಾ ಏಯ್, 
ಮಲ್ಗಿ ನಿದ್ರಾ ಮಾಡ್ತ ಇದ್ದಯ
ಎದ್ರು ಮ್ಯಾಕ್ಕೆ..

ಬೆಚ್ಚಿ ಬೆರಗಾಗಿ
ಒರಗಿದ ಕಂಬದಿಂದ ತಲೆ ಎತ್ತಿದೆ
ಮಂಪರಿಡಿದ ಕಣ್ಣು ತೆರೆಯುತ್ತ
ಎದುರು ದಿಟ್ಟಿಸಿದೆ ಫಳಾರ್ ಮಿಂಚಾಯ್ತಲ್ಲಾ..

ಅಯ್ನೋರ್ ಮಲ್ಗಿ ನಿದ್ರ ಮಾಡ್ತ ಒದ್ದಾಡ್ತ
ನಾ ಬೆಂಕಿ ಬಿಸುಲ್ಲಿ ನರಳಾಡ್ತ ಇದ್ರ
ನೀ ಸುಖವಾಗಿ ನಿದ್ರ ಮಾಡ್ತ ಇದ್ದಯ
ನಾನೇನು ದೆವ್ವುಕ್ಕು ಭೂತುಕ್ಕು 
ಹೇಳವ್ನು ಅನ್ಕಂಡಿದ್ದಯ..

ಇಲ್ಲ ಹೇಳು
ಚೂರು ಮಂಪ್ರಾಯ್ತು..
ಅದೆ ಅಯ್ನೋರು ಮರದ ಕೆಳಗೆ
ಟರ್ಕಿ ಟವಲ್ಲು ಹಾಕಿ ನಿದ್ರಕ್ಕ ಹೋದ್ರಲ್ಲಾ..
ನೀನು ಬಿಸುಲು ಅಂತಿದೆಲ್ಲ…

ಹ್ಞು ಅಂತು ಕೇಳ್ತ ಇದ್ದಯ್ ಅಂತಾಯ್ತು
ಮ್ಯಾಲ್ ನೋಡು ಮೋಡ ಗವ್ವರಾಕಂಡದ
ಗ್ಯಾನಗೀನ ಇದ್ದುದ
ಆಗ್ಲೆ ಹೇಳ್ದಿ ನಿಂಗ..
ನನ್ ಮಾತು ಅಂದ್ರ ಸದರ ಅಲ್ವ,
ಥೂ ನಿನ್ನ
ನೋಡು ಅನ್ಬಾರ್ದ ಅನ್ನಬೇಕು ಅನ್ಸುತ್ತ
ಆದ್ರ ನಾ ಆತರ ಅನ್ನದಿಲ್ಲ 

ಅಲ್ಲ ನೀ ಯಾಕ ಇನ್ನು 
ಮದ್ವ ಗಿದ್ವ ಮಾಡ್ಕಂಡಿಲ್ಲ?

ಅಂವ್ನು ಅಂಗೇ ಇದ್ದ
ಇಂವ್ನು ಅವ್ನಂಗೆ ಆದ
ಅಂವ್ನು ಅಂಗೇ ಇದ್ನಲ್ಲ ಅವ್ನಪ್ನು ಅಂಗೆ
ಅಂತಂತ ಕೇಳಿದ್ದಿ
ಇಂವ್ನು ಅವ್ನಂಗೆ ಆದ್ಮೇಲ
ನೀನು ಇವ್ನಂಗೇ ಅನ್ನಂಡಿದ್ದಿ
ಆದ್ರ ನಿಂದೂ ಒಂದೇನಾರ ಇದ್ದುದಾ
ನಾ ಕಾಣಿ
ಹಿಡಿತಿನಿ ಕಂಡಿಡಿದೇ ಹಿಡಿತಿನಿ
ನಿಮ್ಮಪ್ಪ ಅವರಪ್ಪ ಅವರಪ್ಪನವರಪ್ಪ
ಸಾಲ್ಸಾಲು ಬಂದ್ಮೇಲ ನೀ ಸಾಚಾನಾ..

ಬೊವ್ವ್..ಬೊವ್ ಬೊವ್ ಬೊವ್ವ್…
ನಾಯಿಗಳು ಬೊಗಳುವ ಸದ್ದು
ಗಕುಂ ಎನುವ ಕತ್ತಲು
ಮೇಲೆ ಆಕಾಶ ಮಾರ್ಗದಲ್ಲಿ
ಮಿಂಚು ರಿವ್ವನೆ ಬಂದು ಹೋಯ್ತು
ಗುಡುಗೊಂದು ಸದ್ದು ಮಾಡುತ್ತ
ಚಟಿಚಟಿ ಚಟಾರ್ ಅಂತು..

ನಾ ಕಂಬ ಬಿಟ್ಟು 
ಜಗುಲಿ ಗೋಡೆಗೆ ಒರಗಿದೆ
ಅಲ್ಲೆ ರೂಮಿನ ಕಿರು ಬಾಗಿಲಲಿ ಮಚ್ಚಿತ್ತು
ಹರಿತವಾದ ಮಚ್ಚದು
ಎತ್ತಿ ಕೆಳ ಕಲ್ಲಂತಕ್ಕೆ ಎಸೆದೆ
ತಣೀರನೆ ಸದ್ದು ಮಾಡ್ತು

ಏಯ್ ಏನ ತಣೀರನ್ಸದು
ನಾ ಇಲ್ಲಿ ಬೀದೀಲಿ ಬಿದ್ದಿನಿ
ನಂಗೇನಾರ ಆದ್ರ ಅನ್ನ ಗ್ಯಾನ ಬ್ಯಾಡ್ವ..
ಅಂತ
ಆಳುದ್ದಕೆ ನಿಂತು ಭಗಭಗನೆ ಉರಿಯುತ್ತ
ಬೆಂಕಿಯ ಬೆಳಕು ಬೀದಿ ತುಂಬ ಹಡರುತ್ತ
ಕೈತೋರಿ ಕುಣಿಯುತ್ತ 
ಎತ್ಕ… 
ಎತ್ಕ ಮೇಲಿಡು
ನೀನೀಗ ನನ್ನ ಮೇಲಿಡ್ದೆ ಇದ್ರ 
ನನ್ ಬ್ಯಲ್ಗ ಬೆಲ ಕಟ್ತಿದ್ದಯ್..

ನನಗೆ ಮಂಪರು
ನಿದ್ರಾ ಮಂಪರು
ಗಾಳಿ ತಿಸ್ಸಂತ ಬೀಸ್ತು
ಜೋರಾಗೇ ಬೀಸ್ತಾ ಬೀಸ್ತಾ
ನಾ ಕೈಯೊಡ್ಡಿ ಕಣ್ಮುಚ್ಚಿ ಬಿಟ್ಟೆ

ಅರೆ ಮೆಟ್ಟು ತೂರಿ
ಈ ಮೋರಿಯಿಂದ 
ಆ ಮೋರಿ ಅಂಚಲ್ಲಿ ಫಳಾರನೆ ಮಿಂಚ್ತು
ನಾ ಎದ್ದು ಜಗುಲಿ ಅಂಚಿಗೆ ಬಂದು 
ಕಂಬ ಒರಗಿದೆ

ನನ್ನ ಮುಟ್ಟದಿಲ್ವ ನೀನು
ನಂಗೊತ್ತು ಕಣ ಬುಡು
ನೀ 
ಅವ್ನಂಗೆ ಅನ್ನ ಸತ್ಯ ಕಾಣ್ತ ಅದ
ನಂಗೇನ್ ಇದು ಹೊಸ್ದಾ
ಕಾಲ್ದಿಂದು ಕಾಣ್ತ ಅಂವ್ನಿ
ಕಾಲ್ ಕಾಲುಕ್ಕು ಸತ್ಯ ಅಂತ ತಿಳಿತಾವ್ನಿ

ಕಾಲಯ್ಯೋ ನನ್ ಕಾಲಯ್ಯೋ
ನನ್ ಮುಟ್ಟೊಲ್ರಯ್ಯೋ
ಅವ್ರು ಮುಟ್ಟಲ್ಲ ಅಂತ ಗೊತ್ತಯ್ಯೋ
ಈ ಲೋಕುಕ್ಕ ಸತ್ಯ ಹೇಳಕಾದ್ರು
ಎಲ್ಲ ಸಹಿಸ್ಕಂಡು ಹೇಳೋ ಕಾಲ ಅಂತ
ಹೇಳ್ತ ಅಂವ್ನಿ ನನ್ ಕಾಲಯ್ಯೋ..

ಏಯ್, ನನ್ ಕಾಲಯ್ನ ಆದೇಶ ಆಗದ
ನಿ ನನ್ನ ಮುಟ್ದೆ ಇದ್ರು ಸರಿ 
ನೀ ಮುಂದ ಬಂದು ಕುಂತಿರ ತರ
ನೋಡಿ ಹೇಳ್ಬೇಕು ಅನ್ಸದ
ಹೇಳ್ತಿನಿ ಕೇಳ್ಕೊ..


-೧೪-

ಆ ಬಿಸ್ಲು ಕೆಳಗಿಳಿತಾ
ಈ ಅಯ್ನೋರ್ ಗೊರಕ ಹೊಡಿತಾ
ದಿಕ್ಕಾಪಾಲಾಗಿ ಒದ್ದಾಡ್ತ
ಆ ಒದ್ದಾಟ್ದಲ್ಲಿ ನನ್ನ ಜಾಡ್ಸಿ ಒದಿತಾ
ಆ ಒದೆತಕ್ಕೆ 
ನಾನೂ ದಿಕ್ಕಾಪಾಲಾಗಿ ಒಣುಗ್ತಾ
ಇರೊ ಹೊತ್ತಲ್ಲಿ
ಅಲ್ಲೀ.. ಕಾಲ್ದಾರಿ ಓಣೀಲಿ
ಚಡ್ಕುಣಕುಣ ಚಡ್ಕುಣಕುಣ
ಚಡ್ಚಡಿ ಚಡ್ಚಡಿ ಚಡ್ಕುಣಕು ಚಡ್ಕುಣಕು
ಟಣಕುಣಕು ಟಣಕುಣಕು ಚಡ್ಕುಣಕು..
ತಮಟ ಸದ್ದು ಕೇಳ್ತಲ್ಲೊ..

ಅರೆ, ಅಲ್ನೋಡು ಅಯ್ನೋರಾ..
ಗೊರಕ ಹೊಡತಿದ್ದ
ನೋಡು ನೋಡು ನೋಡ್ ನೋಡ್ತಾನೆ
ಸರಕ್ಕನೇ ಎದ್ದು 
ಟರ್ಕಿ ಟವಲ್ಲ ಬಡ್ದು
ಅದೆ ಟವಲ್ಲಿ ಮುಖ ಒರುಸ್ಕಂಡು
ಪಿಲ್ಲ ಪಂಚ ನರ್ಗ ಸರ್ಮಾಡ್ಕಂಡು
ನನ್ನ ಮೆಟ್ಟಿ ಮರದ ಬುಡುಕ್ಕ ಬುಟ್ಟು
ಕೈಮುಗಿತಾ ನಿಂತ್ರಲ್ಲಾ..

ಆ ತಮಟ ಸದ್ದು ಜೋರಾಗ್ತ
ಹಿಂದೊಸಿ ಜನ ಮುಂದೊಸಿ ಜನ
ದಾಪುಗಾಲಾಕ್ತ  ಬತ್ತಿದ್ರ
ಎತ್ತಿನಗಾಡಿ ಮ್ಯಾಲ 
ಬೊಪ್ಪಣಪುರ್ದ ಬುದ್ದಿಯವ್ರು ಕೈಮುಗಿತಾ 
ಅತ್ತಿತ್ತಾ ನೋಡ್ತ
ಈ ಅಯ್ನೋರ ನೋಡ್ದೇಟ್ಗೆ ಗಾಡಿ ನಿಲ್ಸಿ
ಮತ್ತೂ ಬಾಗಿ ಕೈಮುಗಿತಾ
ಈ ಅಯ್ನೋರು ತಲೆಬಾಗಿ  
ಬುದ್ದಿಯವ್ರ ಕಾಲ್ಗ ಬಿದ್ದು 
ಅವರ ಪಾದವ ಸವರಿ ಕಣ್ಣಿಗೊತ್ತುವಾಗ
ಚಡಿಚಡಿಚಡಿಚಡಿಚಡಿ
ಚಡ್ಕುಣಕು ಚಡ್ಕುಣಕು ಚಡ್ಕುಣಕು
ಟಣಕುಣಕು ಟಣಕುಣಕು ಟಣಕುಣಕು
ಚಡಿಚಡಿಚಡಿ ಚಡ್ಡಿಚಡ್ಡಿ ಚಡ್ಚಡಿ ಚಡ್ಚಡಿ

ತಮಟ ಸದ್ದು ಜೋರಾಗ್ತ ಆಗ್ತ
ಅಯ್ನೋರು ಆ ತಮಟ ಸದ್ಗ
ನಗ್ತಾ ನಿಂತ್ರಲ್ಲಾ
ಬುದ್ದಿಯವ್ರು ಕೈಮುಗಿತಾ 
ಅವರೊತ್ತ ಎತ್ತಿನಗಾಡಿ
ಊರ ಕಡೆ ಹೊಯ್ತಲ್ಲಾ…

ಈ ಅಯ್ನೋರು 
ಪಿಲ್ಲ ಪಂಚ ಎಡಗೈಲಿ ಎತ್ತಿ ಹಿಡ್ಕಂಡು
ನನ್ನ ಕಾಲಲಿ ತಳ್ಕಂಡು
ನನ್ಮೇಲಿದ್ದ ಧೂಳ ಕಾಲಲೆ ಬಡ್ಕಂಡು
ಕಾಲ್ಗ ಮೆಟ್ಟಿ ನೆಲಕೆ ಕುಟ್ಟಿ
ನೊರಕ ನೊರಕ ಅನ್ನುಸ್ಕಂಡು
ಬುದ್ದಿಯವ್ರು ಬಂದ ಓಣಿ ದಾರೀಲೆ
ನಡೆದರಲ್ಲೊ..

ಕೆಂಡದಂಗೆ ಸುಡ್ತಿದ್ದ ಸೂರ್ಯನು
ಜಾರ್ತ ಜಾರ್ತ 
ಆ ಕಾವೂ ಕಮ್ಮಿಯಾಗ್ತ
ಗುಂಡಕ್ಕೆ ರಕ್ತದುಂಡೆತರ ಕೆಂಪಗೆ

ಓಣಿ ದಾರಿ ಮುಗ್ದು
ಹುಣಸೇ ಮರದ ತೋಪು
ಹೆಂಡದಂಗ್ಡಿ ಗುಳ್ಳು

ಓಡೋಡ್ ಬಂದ ಚೆಂಗುಲಿ
‘ಅಯ್ನೋರಾ ನೀವಿಲ್ಲೆ ಇರಿ’
ಅಂತ ಹಿಂತಿರುಗಿ ಓಡಿ
ಒಂದು ಬಿಳಿ ಬಾಟ್ಲು ತಂದು ಇಟ್ಟು
ಅದಂಗೆ ದಡದಡನೆ ಓಡಿದನಲ್ಲೊ
ಈ ಅಯ್ನೋರು
ಆ ಬಾಟ್ಲ ಎತ್ತಿ 
ಬಾಟ್ಲ ಮೇಲಿದ್ದ ನೊರನ ಚಿಮಿಕ್ಸಿ
ಬಾಯೊಳಗಾಕಿ
ಗಟಗಟಗಟಾಂತ ಅರ್ಧ ಹೀರಿದರಲ್ಲೊ
ಆ ಅರ್ಧ ಹೀರಿದ ಗಳುಗ್ಗ
ಓಡಿ ಬಂದ ಚೆಂಗುಲಿ 
ಉರಿದ ಕಾಳು ತಂದಿಟ್ಟು 
ಕೈಕಟ್ಟಿ ನಿಂತವನ ಕೈಗೆ 
ಅಯ್ನೋರು ಬಂದ ಬಂದ ಕಾಸು ಉದುರಿಸಿ
ಉಳಿದಿರೊ ಅರ್ಧ ಬಾಟ್ಲಿನ ಎತ್ತಿ
ಗಟಗಟಾಂತ ಹೀರಿ ಕಾಳು ಮುಕ್ಕಿ
ದಿಕ್ ದಿಕ್ದಿಗೆ ನೋಡ್ತಾ ಇದ್ದಾಗ
ಆ ಚೆಂಗುಲಿ
ಬೀಡಿ ಕಟ್ಟಾ ತಂದು 
ಅಯ್ನೋರ್ ಕೈಗ ಕೊಟ್ಟು
ಅದಂಗೆ ಕೈಕಟ್ಟಿ ನಿಂತದ್ದ
ಕತ್ತಲು ಕಾಯ್ತ 
ಅಯ್ನೋರ್ ಮಾತು
ಚೆಂಗುಲಿ ಕಿವಿಗ ಹೋಗಿ ಕೂರ್ತಲ್ಲಾ..

ಎಂ. ಜವರಾಜು


ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x