ಅಮ್ಮ ಲಾಲಿ ಜೋ
ಅಮ್ಮ ನೀನೆ ಬಂದು ನೋಡು
ಬರೆದ ನಾನು ನಿನ್ನ ಮೊಗವ
ನಾ ನಿನಗೆ ತೋರುವ ಮುನ್ನಾ
ಯಾಕೆ ಅಮ್ಮ ದೂರವಾದೆ ಇನ್ನಾ
ಪುಟ್ಟ ಕಂಗಳು ಸುತ್ತ ನೋಡಿ
ಕೇಳುತಿಹವು ನನ್ನಾ …
ನೀ ಬಂದು ಲಾಲಿ ಹಾಡೆ ಅಮ್ಮ
ಲಾಲಿ ಲಾಲಿ ಜೋ ಲಾಲಿ ಹಾಡೆ ಅಮ್ಮ
ಲಾಲಿ ಲಾಲಿ ಜೋ ಲಾಲಿ ಹಾಡೆ ಅಮ್ಮ
ಕಣ್ಣೆ ಇರದ ಶಿವನೆ ನೋಡು
ಕರುಳ ಬಳ್ಳಿ ಕತ್ತರಿಸಿ ಕೊಟ್ಟ ಅವಳ
ಎದೆಯ ಹಾಲ ಕುಡಿವ ಮುನ್ನ
ಕೈ ಚಾಚಿ ಕಿತ್ತುಕೊಂಡೆ ಅವಳ
ಎಲ್ಲೇ ಇರದ ಅಮ್ಮನೊಲುಮೆ
ಕೂಡಿ ಕಳೆವ ಬಾಳ ಚಿಲುಮೆ
ಯಾಕೆ ಕಸಿದೆ ನೀನೆ …???
ದೂರ ಮಾಡಿದ ಆ ದೇವರು
ಪ್ರೀತಿ ಕೊಡುವ ಒಡಲ ಮೇಲೆ
ಪ್ರಳಯದಂತೆ ಎರಗಿ ಬಂದೆ
ಕೊಚ್ಚಿ ಅವಳ ಕರೆದು ಹೋದೆ
ನಾನು ಒಂಟಿ ಇಂದು ನಾಳೆ
ಕಳೆದುಕೊಂಡ ಲಾಲಿ ಮಿಡಿತ
ನೋಡಿ ನಲಿವೆ ನೀನು ನಗುತ
ಮೌನದಲ್ಲೇ ದಿನವು ಶಪಿಸುವೆ ನಾ ಸೋಲುತ
-ಅನುಪಮ ಎಸ್ ಗೌಡ
ಹೀಗೂ ಉಂಟೇ?!
ಮಿಡಿತ ತುಡಿತಗಳಿಗೂ ಗುತ್ತಿಗೆಯೇ?
ಅಂಥದ್ದೊಂದು ವರ್ಗಕಲ್ಲಿ ಪ್ರವೇಶವಿಲ್ಲ,
ಅದಕರಿವಿಲ್ಲ, ಆ ವರ್ಗ ಮಿಡಿಯದು..
ಇಂಥದ್ದೊಂದಕ್ಕೆ ಮುಕ್ತ ಅವಕಾಶ,
ನೋವನರಿವುದಿಲ್ಲಿ ರಕ್ತಗತ,
ಇದು ಮಾತ್ರ ಮಿಡಿದೀತು.
ಹೀಗೂ ಉಂಟೇ?
ಕಣ್ಣೀರಿಗೂ, ಎದೆಯ ಆರ್ದ್ರತೆಗೂ
ಒಪ್ಪಿಗೆ ಮುದ್ರೆಯ ಪ್ರಮಾಣ ಪತ್ರವೇ?!
ಅವು ತಮ್ಮ ಸಾಬೀತು ಪಡಿಸಬೇಕೇ?..
ಸ್ಪಂದನಕಿಲ್ಲಿ ಜಾತಿಯಗ್ನಿಪರೀಕ್ಷೆಯ ಪಾಡು
ನಿಜಭಾವಕೆ ಬಂಜೆಯ ಹೆರಿಗೆಬೇನೆಯ ಪಟ್ಟ
ರಕ್ತಮಾಂಸಗಳೊಂದೇ, ದೇಹಗೂಡೊಂದೇ
ವಾಸವಲ್ಲಿ ನೂರಾರು ಹಕ್ಕಿಯಂಥ ಭಾವಗಳಿಗೆ.
ಬಣ್ಣ, ಗಾತ್ರ, ಕೂಗಷ್ಟೇ ಬೇರೆಬೇರೆ,
ಹಾರಾಟ ಜನ್ಮಸಿದ್ಧಹಕ್ಕು ಹಕ್ಕಿ ಜನ್ಮಕೆ.
ನೀ-ನಾನೆಂಬ ನಿರ್ಬಂಧವಿಲ್ಲದ ಸ್ವಚ್ಛಂದ ಚಲನೆ.
ಶೋಷಣೆಗೆದುರು ನಿಂತವರೇ,
ಘೋಷಣೆ, ಬಾವುಟದಾಸರೆಯಿರದಲ್ಲೂ,
ಯಾವ ಜೀವ-ಬಂಧುವಿನದಾದರೂ,
ಹಸಿವೆ-ದಾರಿದ್ರ್ಯಕೆ, ದಮನ-ಅಸಮಾನತೆಗೆ
ಸಾವು-ನೋವಿಗೆ ಒಳಗಿಲ್ಲೆಡೆ ಕರಗುತದೆ..
ಅನ್ಯಾಯಕೆ ಒಳಗೆಲ್ಲೆಡೆ ಮರುಗುತದೆ,
ದಬ್ಬಾಳಿಕೆಗೆ ಒಳಗೆಲ್ಲೆಡೆ ಕೆರಳುತದೆ,
ಕರಗುವ, ಕೆರಳುವ, ಮರುಗುವ ಮಿಡಿತಕೆ
ಜಾತಿಯಿಲ್ಲ, ಬಣ್ಣವಿಲ್ಲ, ಹೆಸರೂ ಇಲ್ಲ….
ಭಾಗವಾಗದಿರಿ, ಮನದಿಂದ ಮನಕೆ ಸೇತುವಿದೆ,
ಮುರಿಯದಿರಿ, ಅಂತಃಕರಣವಿಲ್ಲದೆಡೆಯಿಲ್ಲ..
ನಿಜಸ್ಥಿತಿಯ ಆಪಾದನೆಯಡಿ ಹುಗಿಯದೆ,
ನಿನ್ನೆಯನೆಳತಂದು ಇಂದಿಗೆ ಗೂಬೆ ಕೂರಿಸದೆ
ಬನ್ನಿ ಕೈಯ್ಯೆತ್ತಿ ಜೈ ಎನ್ನುವಾ, ಧಿಕ್ಕಾರ ಬೇಡ
ಪ್ರೀತಿ ಮುನ್ನಡೆಸಲಿ, ಸಂಶಯ-ದ್ವೇಷ ಬೇಡ…
-ಅನುರಾಧ ಪಿ. ಸಾಮಗ
ಮತ್ತೆ ಮಳೆಯಾಗುತ್ತಿದೆ
ಮತ್ತೆ ಮಳೆಯಾಗುತ್ತಿದೆ ನಿನ್ನ ನೆನಪುಗಳ
ಒಲವ ಹನಿಹನಿ ಸವಿಯು ಎನ್ನೆದೆಯ ನೆನೆಸಿ
ಕಡಲಂಥ ಪ್ರೀತಿಯದು ತೊರೆದೆನ್ನ ಕನಸುಗಳ
ಒಂಟಿಯಾಗಿಸಿ ದೂರ ಬಾನಿನೆಡೆಗೆ
ಬೇಡಿದರೂ ಕಾಡಿದರೂ ಅಲೆಅಲೆಯ ಕರಚಾಚಿ
ಮೊರೆಯ ಕರೆಯನು ಮರೆತು ಬಾರದೆಡೆಗೆ
ನೀ ಬಾನು ನಾ ಭೂಮಿ ನೀ ಜೇನು ನಾ ಕಾಮಿ
ಹುಸಿಯಲ್ಲ ಸೇರುವೆವು ನಿಜ ನಂಬುಗೆ
ಸೃಷ್ಠಿಸಂಸಾರವಿದು ಹುಸಿಮುನಿಸು ತರವೇನು
ಜೀವದ್ಹಸಿರನು ಚೆಲ್ಲು ವಿರಹದೆದೆಗೆ
ಮತ್ತೆ ಮಳೆಯಾಗುತ್ತಿದೆ ನಿನ್ನ ನೆನಪುಗಳ
ಒಲವ ಹನಿಹನಿ ಸವಿಯು ಎನ್ನೆದೆಯ ನೆನೆಸಿ
-ಎನ್.ಕೃಷ್ಣಮೂರ್ತಿ, ಭದ್ರಾವತಿ