ಕಾವ್ಯಧಾರೆ

ಮೂವರ ಕವಿತೆಗಳು: ಹನುಮಂತ ಹಾಲಿಗೇರಿ, ನಾಗರಾಜ್ ಹರಪನಹಳ್ಳಿ, ಅಕ್ಷತಾ ಕೃಷ್ಣಮೂರ್ತಿ


ಮತ್ತೊಂದು ಗೋಮುಖ

ಓ ಜನರೆ ನನಗೂ ಬಯಕೆಗಳಿವೆ, ಬಯಕೆ ಬೆಂಕಿಯ ಬೇಗೆ ತಾಳಲಾರೆ, 

ಒಮ್ಮೆ ಅನುಭವಿಸಲು ಬಿಡಿ ನಿಮಗೆ ದಮ್ಮಯ್ಯ ಅಂತಿನಿ

 

ಅನ್ನದೆ ವಿಧಿಯಿಲ್ಲ, ಪ್ರತಿಭಟನೆಯ ದಾರಿ ಕಾಣದ, ಮತಿ ಇರದ ಮಾತು ಬಾರದ, ದನ ನಾನು

ಹುಟ್ಟಿದಾಗ ತಾಯಿ ಕೆಚ್ಚಲಿಗೆ ಬಾಯಿ ಹಾಕಿದರೆ ಜಗ್ಗಿ ಕಟ್ಟಿದಿರಿ

ತೊರೆ ಬಿಟ್ಟ  ತಾಯ ಕೆಚ್ಚಲ ಬಕೇಟಿಗೆ ಬಸಿದಿರಿ

ಮುಸು ಮುಸು ಮುಸುಗುಟ್ಟಿ ಮೌನವಾದಳು ನನ್ನ ಮೂಕ ತಾಯಿ

ನನ್ನ ಪಾಲದು ನನಗೆ ಕೊಡಿ ಎಂದು ಹಕ್ಕಿನ ಮಾತಾಡಿಲಿಲ್ಲ ನಾನು

ನೀವು ಕುಡಿಯಿರಿ, ನನಗಷ್ಟು ಕುಡಿಸಿರಿ ಅಂತ ದಮ್ಮಯ್ಯ ಅಂದೆ.

 

ನನ್ನ ಮಗನ ತೊಡ್ಡು ಬಡಿಸಿ ಬೀಜ ಒಡೆದು ನಿಮ್ಮ ಬೀಜ ಬೇಯಿಸಿ ಕೊಳ್ಳುತ್ತಿದ್ದಿರಿ. 

ಅವನ ಬದುಕು ಪೂರ್ತಿ ಹೆಗಲಿಗೆ ನೊಗ ಕಟ್ಟಿ ನಿಮ್ಮ ಬದುಕಿನ ಬಂಡಿ ಎಳೆಸಿಕೊಳ್ಳುತ್ತಿದ್ದಿರಿ

ಆತ ಹುಟ್ಟಿದ್ದು ತನ್ನ ಫಲ ಬಿತ್ತುವುದಕ್ಕೆ, ಆದರೆ ಬೀಜ ಒಡೆಸಿಕೊಂಡಾತನಲ್ಲಿ ಬೀಜವೆಲ್ಲಿ, 

ಅವನಿಗೆ ದಕ್ಕಬೇಕಾದ ಕ್ಷೇತ್ರದಲ್ಲಿ ನೀವು ಮೂಗು ತೂರಿಸುತ್ತಿದ್ದಿರಿ.

 

ಆಸೆ ಪಡುವ ಹರೆಯದ ಮಗಳಿಗೆ ಗುದದಲ್ಲಿ ಕೈ ಹಾಕಿ ಬಸಿರುಗಟ್ಟಿಸುತ್ತಿರಿ

ಪಾಪ, ಆಕೆ ತಾನು ಯಾವಾಗ, ಹೇಗೆ, ಬಸಿರಾದೆ, 

ತನ್ನ ಮಗುವಿಗೆ ತಂದೆಯಾರೆಂದು ತಿಳಿಯದ ನತದೃಷ್ಟೆ. 

ಸುಖದ ನರಳಿಕೆಯೂ ಇಲ್ಲದೆ ಗರ್ಭಗಟ್ಟಿ ಅದನ್ನು ನಿಮಗೆ ಬೇಕಾದ ಉತ್ಪನ್ನ ನೀಡುವ ಯಂತ್ರ

 

ಹಸಿರು ಕಂಡಲ್ಲಿ ಬಾಯಾಕಿದರೆ ಕಲ್ಲು ಬೀಸುತ್ತಿರಿ.

ಹಸಿರು ಬಯಲಿನ ನಡುವೆ ಒಡ್ಡು ಬೇಲಿ ಹಾಕಿ ನಂದು ನಿಂದೆಂದೂ ಜಗಳವಾಡುವಿರಿ,

ಹಾಗಾದರೆ ಇನ್ನುಳಿದ ನಮ್ಮಂಥ 84ಕೋಟಿ ಜೀವರಾಶಿಯ ನಮ್ಮ ಪಾಲೆಲ್ಲಿ. 

ಹಳ್ಳ ಹಸಿರು, ಕೆರೆ ಬಾವಿ ಬಯಲುಗಳೆಲ್ಲ ನಿಮ್ಮದಾದರೆ ನಮ್ಮ ಪಾಡೇನು. 

 

ನೀವಾದರೋ ನಿಮ್ಮ ವಂಶದ್ಧಾರಕರನ್ನು ಕಣ್ಣಲ್ಲಿ ಕಣ್ಣೀಟ್ಟು ಒಪ್ಪಮಾಡಿ ಸಾವಿರಗೊಳಿಸುತ್ತಿದ್ದಿರಿ 

ನಾನು ಹೆಚ್ಚಿನದೇನನ್ನು ಕೇಳುವುದಿಲ್ಲ, ಹಸಿರು ಮೇಯಲು, ಪ್ರೀತಿಯ ಹೋರಿಯೊಂದಿಗೆ ಕೂಡಲು 

ಎಳೆ ಮಕ್ಕಳಿಗೆ ಮೊಲೆ ಕುಡಿಸಲು, ಅವಕಾಶ ಕೊಡಿ ಸಾಕು, 

ಇಲ್ಲವಾದರೆ,  ಮುಂದೆ ಭೂಲೋಕದಲ್ಲೆಲ್ಲ ನೀವೇ ಅವರಿಸಿರುತ್ತಿರಿ, 

ನಾವು ಡೈನೋಸಾರ್‍ನ ಹಾದಿ ಹಾದಿಹಿಡಿಯಬೇಕಾಗುತ್ತದೆ. 

ಹೋಗಿ ಬರುತ್ತೇವೆ. ಅಲ್ಲಲ್ಲ, ಹೋಗುತ್ತಿದ್ದೇವೆ.  

-ಹನುಮಂತ ಹಾಲಿಗೇರಿ 


 

ಹಣತೆ ನಕ್ಕಿತು

ಶತಮಾನಗಳು ಉರುಳಿದರೂ

ತೀರದ ಚಿರಂತನ ಹಸಿವು

 

ಸೂರ್ಯ ಸೂತಕವಿಲ್ಲದ ಮನೆಯ 

ದಿನವೂ ಹಾದು ಹೋದ

 

ಚಂದ್ರ ತಾರೆಯರು ಭೂಮಂಡಲದ 

ಕ್ಷುದ್ರರಿಗೆ ಸಾಂತ್ವಾನ ಹೇಳಿದರೂ

 

ಪ್ರೀತಿ ಸಾರಲು ನದಿ

ದಣಿವಿಲ್ಲದೆ ಹರಿಯಿತು

 

ಮನುಷ್ಯ ಮಾತ್ರ ಸೂತಕದ

ಮನೆಯಲ್ಲಿ ತೂಕಡಿಸಿರಲು 

 

ದಕ್ಕದ ಪ್ರೀತಿಗೆ ಸೋತಿರಲು

ನಿಲ್ಲದ ಮುಪ್ಪ ಅಣೆಕಟ್ಟಿನಲ್ಲಿ ಬಂಧಿಸಿರಲು

ಅರಮನೆಯ ಮುಂದೆ

ಬದುಕ ಕಿರುಹಣತೆ ನಕ್ಕಿತು

-ನಾಗರಾಜ್ ಹರಪನಹಳ್ಳಿ. ಕಾರವಾರ.


 

ವಿಳಾಸವಿಲ್ಲದವರು

ನೀವು ಬಯಸಿದ ಮನೆ

ಇಲ್ಲಿದೆ ಬನ್ನಿ

ಉಳಿಯಬಹುದು ನೀವು

ಬಯಸಿದಷ್ಟು ದಿನ

ಬಾಡಿಗೆ ಹೆಚ್ಚೇನಿಲ್ಲ

ಎಂದವರು ಬಿಡಿ ಮನೆಯ

ಉಳಿದದ್ದು ಸಾಕು ವಿಳಾಸ

ಬದಲಾಗಿದೆ ಎಂದು ಹೇಳುತ್ತಿದ್ದಾರೆ

ಮೊದಲಿದ್ದ ಮನೆ ಬಿಟ್ಟು

ಹೊಸ ಮನೆಗೆ ಬಂದವರು

ಮತ್ತೆ ಕಳೆದುಕೊಂಡರು

ತಮ್ಮ ವಿಳಾಸ 

ಮನೆಗೆ ಮರಳುವಂತಿಲ್ಲ

ತೊರೆದ ಮನೆ ಈಗ

ಮೊದಲಿನಂತಿದೆ ಎಂದು

ನಂಬುವುದಾದರೂ ಹೇಗೆ?

ಜೇಡ ವಾಸದ ಮನೆಯ

ಮತ್ತೆ ಹೊಕ್ಕುವುದು ಕಷ್ಟ

ಹುಡುಕುತ್ತಿದ್ದಾರೆ ಹೊಸ ಮನೆಯ

ನಿರ್ಜನ ಬೀದಿಯಲ್ಲಿ ಹೀಗೆ

ರಾತ್ರಿ ಬಂದಿಳಿಯಲು

ಇರಬಹುದೇ ಯಾವ ಕಾರಣ?

-ಅಕ್ಷತಾ ಕೃಷ್ಣಮೂರ್ತಿ

ಕನ್ನಡದ ಬರಹಗಳನ್ನು ಹಂಚಿ ಹರಡಿ

5 thoughts on “ಮೂವರ ಕವಿತೆಗಳು: ಹನುಮಂತ ಹಾಲಿಗೇರಿ, ನಾಗರಾಜ್ ಹರಪನಹಳ್ಳಿ, ಅಕ್ಷತಾ ಕೃಷ್ಣಮೂರ್ತಿ

  1. ಕಾವ್ಯಧಾರೆಯಲ್ಲಿರುವ ಎಲ್ಲಾ ಕನವಗಳಲ್ಲಿ ಎನೋ ಹೊಸತನದ ಮಿಂಚಿದೆ….ಕವಿಮಿತ್ರರಿಗೆ ಶುಭಾಶಯಗಳು…

  2. ಕಾವ್ಯಧಾರೆಯಲ್ಲಿರುವ ಎಲ್ಲಾ ಕವನಗಳಲ್ಲಿ ಎನೋ ಹೊಸತನದ ಮಿಂಚಿದೆ….ಕವಿಮಿತ್ರರಿಗೆ ಶುಭಾಶಯಗಳು…

  3. ಎಲ್ಲಾ ಕವಿತೆಗಳು ಚೆನ್ನಾಗಿವೆ. ಯಾವಾಗಲೂ ಕಥೆ, ಲೇಖನಗಳೆ ಬರೆಯುತ್ತಿದ್ದ  ಹನುಮಂತ ಹಾಲಿಗೇರಿ ಅವರು ಕವಿತೆ ಬರೆದಿರುವುದು ನೋಡಿ ಖುಷಿಯಾಯಿತು.

  4. ಮೂರೂ ಕವನಗಳೂ ಚೆನ್ನಾಗಿವೆ.
    ಗೋವು ತನ್ನ ನೋವನ್ನು ತೋಡಿಕೊಳ್ಳುವ ಕವನ ಚಿಂತನೆಗೆ ಹಚ್ಚುತ್ತದೆ.

Leave a Reply

Your email address will not be published. Required fields are marked *