ಕಾವ್ಯಧಾರೆ

ಮೂವರ ಕವಿತೆಗಳು: ಸಚಿನ್ ನಾಯ್ಕ್, ಪ್ರಶಾಂತ್ ಭಟ್, ಅನಂತ್ ಕಳಸಾಪುರ

ಕತ್ತಲೆಯೊಳಗೆ…

ಕಾದು ನಿಂತಿದ್ದಾಳೆ ಆಕೆ
ಇಳಿ ಸಂಜೆ ಜಾರಿ
ಕತ್ತಲೆ ಕವಿಯುವ
ಹೊತ್ತಲ್ಲಿ.,
ಬರಲೇಬೇಕು
ಯಾರಾದರೂ ಸರಿ
ತುಟಿಯ ಬಣ್ಣ
ಕರಗುವುದರೊಳಗೆ,
ಮುಡಿಯ ಮಲ್ಲಿಗೆ
ಬಾಡುವುದರೊಳಗೆ….
ಖಂಡಿತವಾಗಿಯೂ
ಅವನು ಅಪರಿಚಿತ;
ಪರಿಚಯದ ಹಂಗೇಕೆ
ವ್ಯವಹಾರದಲ್ಲಿ..!?
ಅವನ ಹಿಂದೆಯೇ?
ಹೊರಟವಳಿಗೆ
ಭರವಸೆಗಳೇನಿರಲಿಲ್ಲ..!
ಕತ್ತಲ ಕೋಣೆಯಲ್ಲಿ
ಇದ್ದರೇನು ಬಟ್ಟೆ
ಇರದಿದ್ದರೇನು…!?
ಅವನ ಬಿಚ್ಚುವ
ಹಂಬಲವಾದರೂ
ಇಡೇರಲಿ…
ಅವಳ ಮುಷ್ಠಿಯಲ್ಲಿ
ಒಡಳಾಳದ ನೋವೆಲ್ಲಾ
ಹಿಂಡಿ ಹಿಪ್ಪೆಯಾಗುವಷ್ಟು
ಬಿಗಿತ…!
ಹಾಸಿದ ಸೆರಗಿನಲ್ಲಿ
ಒಂದಿಷ್ಟು ಪುಡಿಗಾಸು
ಸಂತೃಪ್ತಿಯ ಆಧಾರದ
ಮೇಲೇನೋ ಎಂಬಂತಿದೆ…!!
ಹಣೆಯ ಬೊಟ್ಟು
ಕಾಣೆಯಾಗುವ ಹೊತ್ತಿಗೆ
ಎಲ್ಲವೂ ಮುಗಿದಂತಿತ್ತು..
ಬೆಳಕು ಮೂಡುವಷ್ಟರಲ್ಲಿ
ಎದೆಯ ಮೇಲಿನ ಗಾಯ
ಉಬ್ಬಳಿಸಿತ್ತು,
ಮುಟ್ಟಿಕೊಳ್ಳುವಷ್ಟು
ನೋವಾದರೂ
ಆಕೆ ಮುಟ್ಟದೇ
ಸುಮ್ಮನಿದ್ದುಬಿಟ್ಟಳು….!!

-ಸಚಿನ್ ನಾಯ್ಕ್


 

 

 

 

 

ಪ್ಯಾರನಾಯ್ಡ್

ಎಲ್ಲ ದಾರಗಳ ಬಿಗಿಯಾಗಿ
ಎಳೆದಿಟ್ಟೂಕೊಂಡು
ಆಡಿದರೂ,
ಎಲ್ಲೋ ಸಡಿಲವಾದಂತೆ,
ನನ್ನ ಕೈಯಂಚಿನ ಬೊಂಬೆಯೂ
ನನ್ನದಲ್ಲ:
ಈಗದ, ತಳಮಳದೊಳಗೆ
ಸೂತ್ರ ಜಾರುವ
ಆತಂಕ;
ಖುಶಿಯೊಳಗೂ
ನೋವಿನ ಭಯ,
ಇಲ್ಲ
ಆಗುವುದಿಲ್ಲ,
ಖಂಡಿತಕ್ಕೂ,
ಕಿಟಕಿಗಳಿಲ್ಲದ ರೂಮೇ
ನನಗಿಷ್ಟ;
ಮತ್ತೆ ನೀವು?
ದೋಣಿ ಮುಳುಗುವಾಗ
ಉಳಿದವರ ಲೆಕ್ಕ
ಇಡಬೇಕೆ?

ಪ್ರಶಾಂತ್ ಭಟ್

 

 

 

 

 


ಬಸ್ಸು ಕಾಯುವ ವೇಳೆ

ಬೆಳಗಿನ ಜಾವಕ್ಕೆ ಎದ್ದು ಹೊರಟೆ

ಬೆಳಗ್ಗೆ ನಾಲ್ಕಕ್ಕೆಲ್ಲಾ ಬೆ೦ಗಳೂರ ಬಸ್ಸು

ಕೂ ಎನ್ನುವ ಬಸ್ಟಾ೦ಡಿನಲ್ಲೂ

ಹುಡುಕಿದರೂ ಸಿಗಲಿಲ್ಲ ಒ೦ದೂ ನರಪಿಳ್ಳೆ

ಕತ್ತಲೆಯೇ ಸ೦ಗಾತಿ ನನಗಲ್ಲಿ ಆ ಹೊತ್ತಿನಲ್ಲಿ

ಮೈ ಕೊರೆವ ಚಳಿಗಾಳಿ ಕೆರೆಯ ಏರಿಯ ಮೇಲಿನ ನಿಶ್ಯಬ್ದ ಮೌನ

ದ೦ಡೆಯ ಮರದ ಕೊನೆಯರೆ೦ಬೆಯ ,ಗೀಜಗನ ಗೂಡು

ಹೇಳಲಾಗದ ಆ ಚಳಿಯ ತಾಳುವ ಮರಿಹಕ್ಕಿಗಳ ಪಾಡು

ಗೂಬೆಯೋ ಗೀಜಗವೊ ಆಗಾಗ ಕೂಗಿ

ಮುರಿಯುತ್ತಿದ್ದವು ನಿಶ್ಯಬ್ದವ ಗೂಡಿನಿ೦ದಲೇ ಬಾಗಿ

ಅಜ್ಜಿ ಹೇಳಿದ ದೆವ್ವದ ಕಥೆಗಳೆ ನೆನಪಾಗುತ್ತವಾಗ

ಬಸ್ಸು ಕಾಯುವ ಕಮ೯ದ ಕೆಲಸದಲ್ಲಿದ್ದಾಗ

ಬಾರದ ಬಸ್ಸು , ಗೀಜಗನ ಕೂಗು ನೀರವ ರಾತ್ರಿ, ನಮ್ಮೂರಿನ ಬಸ್ಟಾ೦ಡ್

ಅ೦ದು ಹೆದರಿದ್ದವನ ಮೇಲೆ ಕಪ್ಪೆ ಎಸೆದದ್ದು ಖಾತ್ರಿ

-ಅನ೦ತ್ ಕಳಸಾಪುರ


 

ಕನ್ನಡದ ಬರಹಗಳನ್ನು ಹಂಚಿ ಹರಡಿ

3 thoughts on “ಮೂವರ ಕವಿತೆಗಳು: ಸಚಿನ್ ನಾಯ್ಕ್, ಪ್ರಶಾಂತ್ ಭಟ್, ಅನಂತ್ ಕಳಸಾಪುರ

Leave a Reply

Your email address will not be published. Required fields are marked *