ಕಣ್ಣೀರಿಗೂ ಅರ್ಹಳಲ್ಲ
ನನ್ನ ಹೆಣದ ಮುಖದ ಮೇಲೆ
ನಿನ್ನ ಬಿಸಿ ಬಿಸಿ ಕಣ್ಣ ಹನಿ….
ಅಯ್ಯೋ ನೀನು ಅಳುತ್ತಿದ್ದೀಯಾ
ಬೇಡ ಗೆಳೆಯಾ
ನಿನ್ನ ಕಣ್ಣೀರು ನನ್ನನ್ನು
ಪಾಪ ಕೂಪಕ್ಕೆ ತಳ್ಳುತ್ತದೆ
ನರಕದ ಬಾಗಿಲಿನಲ್ಲಿ ನಿಲ್ಲಿಸುತ್ತದೆ
ನನಗೆ ಗೊತ್ತು
ನಿನ್ನ ಕಣ್ಣೀರಿಗೂ ನಾನು ಅರ್ಹಳಲ್ಲ
ಬದುಕಿದ್ದಷ್ಟು ದಿನವೂ ನಿನ್ನ ಕಣ್ಣಲ್ಲಿ
ನೀರೂರಿಸುತ್ತಲೇ ಇದ್ದೇನೆ
ನನ್ನ ಬಿರು ನುಡಿಗೆ ನೀನು
ನಡುಗುತ್ತಲೇ ಕಾಲಕಳೆದಿದ್ದೀಯಾ
ನನ್ನ ಪ್ರೇಮದ ಹಸಿವಿಗೆ
ಸ್ಪಂದಿಸಲಾಗದೇ ಕಂಗಾಲಾಗಿದ್ದೀಯಾ
ನನ್ನ ಪ್ರೇಮದ ಉತ್ಕಂಟತೆಗೆ
ಉತ್ತರಿಸಲಾಗದೇ ಮೌನತಾಳಿದ್ದೀಯಾ
ನಿನ್ನ ಅಕಾಲಿಕ ಮೌನದಿಂದಲೇ
ನಾನು ನಿಶ್ಚೇತಳಾಗಿದ್ದೇನೆ
ಮತ್ತೆ ಕಣ್ಣೀರಿಡ ಬೇಡ
ಆ ಕಣ್ಣೀರಿಂದ ನಾನು
ಮರುಹುಟ್ಟು ಪಡೆಯಲಾರೆ
ಆದರೆ ಆ ಕಣ್ಣೀರು ನನ್ನನ್ನು
ವಿವಶಳನ್ನಾಗಿಸುತ್ತದೆ; ಭ್ರಾಂತಳನ್ನಾಗಿಸುತ್ತದೆ
ಬದುಕಬೇಕಿತ್ತು ಎನ್ನುವ
ಹುಸಿ ಆಸೆಯೊಂದನ್ನು ಮೊಳೆಸುತ್ತದೆ
ಮತ್ತೆ ಮತ್ತೆ ಆತ್ಮ ತೊಳಲಾಡುತ್ತದೆ
-ಶ್ರೀದೇವಿ ಕೆರೆಮನೆ
ಓ ಸ೦ಗಾತಿಯೇ……….
ಬೆಳ್ಳಿ ಬಾನ೦ಚಿನಲ್ಲಿ
ಹರಿವ ಮ೦ಜ ಹನಿಯ೦ತಿದ್ದ ನಿನ್ನನ್ನು
ಕ೦ಡು……
ಬವದೀ ಚಲುವಿನ೦ಗಳದಲ್ಲಿ
ಕುಣಿದಾಡಬಯಸಿದವನು ನಾನು
ಇದೆ೦ಕೋ……….
ಅಸೂಹೆ ಮೂಡುತ್ತಿದೆ
ಕೊನೆಗಾಣದ ನೋವ ಕುಣಿತಕ್ಕೆ
ಹಸಿದ ಅ೦ಬಲಿಗೆ
ಉಸಿರು ಕಟ್ಟಿಯಾದರು ದುಡಿಯಬೇಕಿದೆ ನಾನು
ಸಿರಿತನದ ಸೊಗೆಯಲ್ಲಿ
ರತ್ನಗ೦ಬಳಿಯ ಮೇಲೆ ಕುಳಿತು
ರಾಜ್ಯವಾಳುತ್ತಿರುವೆ ನೀನು
ಬಡತನದ ಬಿಕ್ಕಳಿಕೆಗೆ
ನೀರಿರದ ತವಕದಲ್ಲೂ
ನಿನ್ನ ನೆನಪುಗಳು……….
ಕಾಣಬೇಡ……..
ಕೋಟೆ ಕಟ್ಟಿದ ಕತ್ತಲಲ್ಲಿ
ಮುಚ್ಚಿದ ಕಣ್ಣ ರೆಪ್ಪೆಗಳಲ್ಲಿ
ಬಾಸಿಸುತ ಬಣ್ಣದ ನಗುವ
ಹೋಳಿಯಾಡುತ್ತಿರುವೆಯಾ…….
ಓ ಸ೦ಗಾತಿಯೇ॒
ಬಿಟ್ಟು ಬಿಡು
ನಿನ್ನ ಚಲುವಿನ೦ಗಳದಿ೦ದ ನನ್ನನ್ನು
ರೆಕ್ಕೆ ನಿನ್ನದಾದರೂ
ಕು೦ಟುತ್ತಾ ದಾರಿ ಸವೆಸುವೆ
ಬಲ್ಲಿದಳಾದರೇನು ನೀನು
ಚ೦ದದ ಆಸೆಗಳು ಕುಣಿದಾಡುತ್ತಿವೆ
ನಿನ್ನ ಕೋಲ್ಮಿ೦ಚ ಕಣ್ಣುಗಳಲ್ಲಿ
ಮಾತಿಗೊಮ್ಮೆಮ್ಮೆ ನಕ್ಕು ಹೂವಾಗುವ
ತುಟಿಗಳೇ ಎಸಳುತ್ತಿವೆ
ಮನದಾಳದ ಅತೀವಗಳನ್ನು
ಹೀಗೆ ಇದ್ದುಬೀಡು ದೂರಾಗಿ
ಆಗಲಾದರೂ……..
ಆಸೆಗಳೆಲ್ಲವೂ ಮಿಡಿಯಬಹುದು
ಪುಟ್ಟ ಕವನಗಳಾಗಿ……..
-ಶಿವಕುಮಾರ್ ಸಿ.
ನಿನಗೆಂದೆ ಬರೆದ ಸಾಲುಗಳು
ಇಳಿ ಸಂಜೆಯಲಿ ನಿನಗಾಗಿ ಕಾದಿರಲೆ ಹುಡುಗಿ
ತಂಗಾಳಿ ಬೀಸಲು ಅಲೆಗಳು ನಗುತಿರಲು
ನಿನ್ನೀ ಮೌನ ಎದೆಯನು ಸುಡುತಿಹುದು ನಡುಗಿ
ಅರೆ ಘಳಿಗೆ ನೀ ನಿರದ ಈ ಘಳಿಗೆ
ಎದೆಯೊಂದು ಬರಿದಾದ ಮಳಿಗೆ
ಬಿಗಿದಿಟ್ಟ ಉಸಿರಲಿ ನಿನ್ನುಸಿರ ಹಂಬಲಿಸಿ ಕಾದಿರಲೇ ಹುಡುಗಿ
ಮರಳಿ ಮರಳಿ ನೆನೆದು ಇನ್ನೆಷ್ಟು ಕಾಯೋದು ಹುಡುಗಿ
ಬಾ ಮೆಲ್ಲ ಕರಗಿ,ಸದ್ದಿಲ್ಲದೇ ಕದ್ದ ಹೃದಯ ಇದೆ ನನ್ನಲಿ
ಬಾ ನಿಲ್ಲು ಒರಗಿ,ತುಸುದೂರ ನಡೆವ ಜೊತೆಯಲಿ
ಉಳಿಯದಿರು ನೆನಪುಗಳ ಮರೆಯಲಿ
ಆ ಪುಟ್ಟ ಕಂಗಳಲಿ ಕನಸಾಗಿ ಒಮ್ಮೆ ನಾ ಬರಲೆ
ಕನವರಿಕೆಯ ನೆಪದಲಿ ಚೆಂದುಟಿಯ ನಗು ನಾನಾಗಲೆ
ನಾ ಕಾಣೋ ಕನಸುಗಳು ನಿನಗಾಗಿ ಮಿಸಲಿಡಲೆ
ನಿನ್ನ ಹೆಜ್ಜೆಗೆ ನೆರಳಾಗಿ ನಾನಿರಲೆ ಬಳಿಯಲೆ
ಇದಾವುದು ಹೇಳದೆ ಈ ಕನಸು ನನ್ನಲೇ ಉಳಿದಿರಲೆ
-ಸ್ವರೂಪ್ ಕೆ.
ಶ್ರೀದೆವಿ ಅವರೇ, ನಿಮ್ಮ ಕವನ ತಂಬಾ ತಂಬಾ ಇಷ್ಟವಾಯಿತು. ನಿಮ್ಮ ಕವನದಲ್ಲಿ ಪ್ರತಿ ಸಾಲು, ಪ್ರತಿ ಪದಗಳನ್ನ, ಮನಮುಟ್ಟುವಂತೆ ವರ್ಣಿಸಿದ್ದಿರಿ. ಮುಂಬರುವ ನಿಮ್ಮ ಎಲ್ಲಾ ಬರಹಗಳಿಗೆ ನನ್ನ ಅಭಿನಂದನೆಗಳು.
ಚೆನ್ನಾಗಿವೆ.
nimma aella kaviteglu chennagiruthave. nimma vilaasa tilisi
sangeetha
sridevi keremaneyave nimma addres kodtira