ಭಿತ್ತಿ ಚಿ(ಪ)ತ್ರ ಹಚ್ಚುವವರು
ರಾತ್ರಿಯಿಡಿ ಕೈಯಲ್ಲಿ ಮೈದಾ ಅಂಟು
ಎಳೆದೆಳೆದು ಕಿತ್ತೆಸೆವ ಭಿತ್ತಿಯ ನಂಟು
ಗಂಟು ಕಟ್ಟುವ ಸಾಮ್ರಾಜ್ಯ ದೊಳಗೆ
ತೇಪೆ ಹಚ್ಚಿ ಹಳತಿನ ಎದುರಲಿ
ಹೊಸ ತೇಪೆಯ ತೆರೆಯೊಳಗೆ
ದ್ವಿಚಕ್ರ ಕಾಲ ಋತುಮಾನ
ಕಾಲಿನಲಿ ತುಳಿದು ತರುವ ಹೊಸತನ
ಭಿತ್ತಿ ಚಿ(ಪ)ತ್ರ ಹಚ್ಚುವವರು
ಮಾಸಿದ ಭಿತ್ತಿಗೆ ಬಣ್ಣದ ಕಾಗದ ಹಚ್ಚುವವರು
ಕಿತ್ತೆಸೆಯಲಾಗದು ಕೆಲವರಂಟಿಸಿದ ಕಾಗದ
ಕಣ್ಣೀರಿನಲಿ ಅದ್ದರೂ ಬಿಡದ ಅಂಟು
ಈ ವರೆಗೆ ತಿಳಿದಿಲ್ಲ ದೂರವಾದರೂ
ಉಳಿದಿದೆ ಸ್ಮೃತಿ ಪಟಲದಲಿ ನೆಂಪು
ಹಲವಾರು ಕಾಗದಗಳಂಟಿದೆ ಮನದ ಭಿತ್ತಿಗೆ
ಕೆಲವು ವರ್ಣಮಯ, ಕೆಲವು ಕಪ್ಪು ಬಿಳುಪು
ಕೆಲವು ಬರೇ ಕಪ್ಪು ಚ್ಯುತಿಗೆ
ಅನಿಸಿದುಂಟು ಕೆಲವು ಬೇಕು, ಕೆಲವು ಬೇಡ
ಸಾಧ್ಯವಿಲ್ಲ ಆದರೂ ಸಾಗುತಿದೆ
ಇಲ್ಲವನ್ನೂ ತುಂಬಿ ಮನದ ಬುತ್ತಿಗೆ….
-ವೆಂಕಟೇಶ ನಾಯಕ್
ಗಣ ಭಾರತ
ತಲೆಗಂಟಿದೆ ಕಳಂಕ:
ಅತೀದೊಡ್ಡ ಸ್ವತಂತ್ರ, ಪ್ರಜಾತಂತ್ರ!!!
ಪದಗಳೆಲ್ದ್ನಾ ಅರ್ಥಹೀನ
ಸುಳ್ಳೇಸುಳ್ಳು ಭಾಷಣ
ಸೋಗಲಾಡಿ ರಾಜಕೀಯ ಪರ್ವದ ನಿರಂಕುಶ ಪ್ರವರ್ತಕರು
ಅರಸೊತ್ತಿಗೆ ಚಹರೆ ಬದಲಿಸಿ ಗಹಗಹಿಸಿದೆ
ಭರವಸೆಯ ಮಹಾಪೂರದಲ್ಲಿ ಮತದಾರ ವಿಹ್ವಲ
ಕಾಡುಕೋಳಿ ಕಾಡಿನಲ್ಲೆ ದಾರಿತಪ್ಪಿದೆ
ಬಲಾಡ್ಯ ಕೆನ್ನಾಯಿ ಹಿಂಡು ಇಲ್ಲೇಲ್ಲೋ ಊಳಿಡುತ್ತಿದೆ
ಮಾರಿಕೊಂಡವರು ನೆಲದ ಮಕ್ಕಳನ್ನೇ ಆಧಾರ ಕೇಳುತ್ತಿದ್ದಾರೆ
ಮಣ್ಣುಗೂಡಿದ ಶಾಸನಗಳಲ್ಲಿ ಭವ್ಯ ಭಾರತದ ಕನವರಿಕೆ
ಭವ್ಯತೆಯ ಭಸ್ಮ ಕಣ್ಣು ಮಂಜಾಗಿಸಿದೆ
ಕಣ್ಣೇದುರಿನ ಅನ್ಯಾಯಕ್ಕೆ ಅಪೂರ್ವ ಕರತಾಡನ
ಧರೆ ಹತ್ತಿ ಉರಿಯುತ್ತಿದೆ..
ಜಲವೆಲ್ಲಾ ಬತ್ತಿ ಭಾರತದ ಮಾತೆಯರಿಗೆ ಇಂಗದ ನೀರಡಿಕೆ
ಗಾಂಧಿ ಎಂಬುದು ಹೆಸರೇ?
ಬರಿಯ ಪದವೇ? ಧರ್ಮವೇ?
ನಮ್ಮ ಪೊರೆವ ಚಾದರವೇ? ಅಡಗುದಾಣವೇ????
ಕಸಿವಿಸಿಗೊಂಡಿದೆ ಭಾರತ…
ಇರಳು ಹುಟ್ಟಿಸುವ ದುರ್ಮುಖಗಳಿಗೆ ಮರೆವು ಹಾರೈಸುತ್ತೇನೆ.
ಬೆಳಕು ಬೀರುವ ಹಣತೆಗಳಿಗೆ ಬತ್ತಿ ಹೊಸಯುತ್ತಿದ್ದೇನೆ………..
-ಜಯಾ ನಾಣಯ್ಯ
ಬಂಡಾಯ
ಸಂಪ್ರದಾಯ
ಹಳೆಯ ಪುಷ್ಪಕ ವಿಮಾನ
ಬಂಡಾಯ
ಆಧುನಿಕ ಅಂತರಿಕ್ಷಯಾನ
ಅದು ಮರ ಇದು ಮೊಳಕೆ
ಬಿದ್ದು ಮಾಯಾವಾಗುವುದು
ಅದರ ಜಾಯಮಾನ
ಚಿಗಿದು ಬೆಳೆಯುವುದು
ಇದರ ಚಿರಂತನ ಗುಣ
ನಾರು ಮುಡಿ ಸಂಪ್ರದಾಯ
ಹತ್ತಿ ಉಟ್ಟದ್ದು ಬಂಡಾಯ
ಗವಿ ಪೊಟರೆಗಳು ಸಂಪ್ರದಾಯ
ಆದುನಿಕ ಮನೆಗಳು ಬಂಡಾಯ
ಅದು ತಾಯಿ ಇದು ಶಿಶು
ಅದು ತೊಟ್ಟಿಲು ತೂಗಿತು
ಇದು ಅಂಬೆಗಾಲಿಕ್ಕಿತು
ಸಿಂಧೂ ಟೈಗ್ರಿಸ್ ಹೋ ಆಂಗ್ ಹೋಗಳ
ಮೂಳೆ ಮಾಂಸ ರಕ್ತಗಳಲ್ಲಿ
ಬಂಡಾಯ ಮೊಳಗುತ್ತಿತ್ತು
ವಿಶ್ವ ಸಂಸ್ಕೃತಿ ಕಾವಲು ಬೇಲಿಯಾಗಿತ್ತು
ಮೊನ್ನಿನ ಅಜ್ಜ ಅಜ್ಜಿಯರು
ನಿನ್ನಿನ ಅಪ್ಪ ಅವ್ವಗಳು
ಇಂದಿನ ವಧೂವರರು
ನಾಳಿನ ಬಂಡಾಯಕ್ಕೆ
ಜೋಗುಳ ಹಾಡುತ್ತಿಹರು.
– ದೇಶಾಂಶ ಹುಡಗಿ
ಜಯಾ ನಾಣಯ್ಯ ಸರ್ ಉತ್ತಮ ಕವನ ಬರೆದಿದ್ದೀರಿ.. ಕೀಪ್ ಇಟ್ ಅಪ್.. ಇನ್ನಷ್ಟು ಬರೀರಿ. ಓದುವ ಸೌಭಾಗ್ಯ ನಮ್ಮದು..