ಮೂವರ ಕವಿತೆಗಳು: ವಿಲ್ಸನ್ ಕಟೀಲ್, ವಾಮನ ಕುಲಕರ್ಣಿ, ಅಕ್ಷಯ ಕಾಂತಬೈಲು

ಅಸ್ಪೃಶ್ಯರು

ಎಲೆಗಳುದುರಿದ ಒಣ ಕೊಂಬೆಗೆ
ಜೋಡಿ ಬಾವಲಿ ಜೋತು ಬಿದ್ದಂತೆ
ಎದ್ದು ಕಾಣುವ ನಿನ್ನ ಪಕ್ಕೆಲುಬುಗಳಿಗೆ
ಬತ್ತಿ ಹೋದ ಸ್ಥನಗಳು

ನನ್ನ ಬೆರಳುಗಳೂ ಅಂತೆಯೇ
ಎಲುಬಿನ ಚೂರುಗಳಿಗೆ ತೊಗಲುಡಿಸಿದಂತೆ 
ಮಾಂಸಲವೇನಲ್ಲ

ನಮ್ಮಿಬ್ಬರ ಮಿಲನ ರಮ್ಯವಲ್ಲ; ನವ್ಯ
ಮಾಂಸಖಂಡಗಳ ಪ್ರಣಯದಾಟವಲ್ಲ
ಅದು, ಮೂಳೆ-ತೊಗಲಿನ ಸಂಘರ್ಷ!
***
ವಿದ್ಯುತ್ತಂತಿ ಸ್ಪರ್ಶಿಸಿ ಸತ್ತ 
ಬಾವಲಿಯ ರೆಕ್ಕೆಯನ್ನು
ತೆಂಗಿನ ಚಿಪ್ಪಿಗೆ ಬಿಗಿದು ಕಟ್ಟಿ
ರಚಿಸಿದ ಪುಟ್ಟ ಡೋಲು
ಬಾರಿಸುತ್ತಿದ್ದಾನೆ ನನ್ನ ಮುದ್ದು ಮಗ

ಸವೆದ ಪಕ್ಕೆಲುಬುಗಳಂತಿರುವ
ಚೋಟುದ್ದ ಬೆತ್ತಗಳಿಂದ
ಬಾವಲಿಯ ರೆಕ್ಕೆಗೆ ಬಡಿಯುವಾಗ
ಅಬ್ಬಾ! ಎಂತಹ ಅದ್ಭುತ ಶಬ್ದ!
ಶೋಷಿತರ ಎದೆಬಡಿತದಂತೆ!
ಬಡಿದೆಬ್ಬಿಸಿದ ಬಂಡಾಯದ ಸಿಡಿಲಬ್ಬರದಂತೆ!
***
ನಮ್ಮನ್ನಿಲ್ಲಿ ಯಾರೂ ಮುಟ್ಟೋದಿಲ್ಲ
ಅಂತೆಯೇ, ಯಾರೂ ಮುಟ್ಟಿಸಿಕೊಳ್ಳೋದಿಲ್ಲ
ಅಪ್ಪಿತಪ್ಪಿ ಬೆರಳು ತಾಗಿದರೂ
ಬೆನ್ನಮೇಲೆ ಬಾರುಕೋಲಿನ ರುದ್ರ ನರ್ತನ!

ನಮ್ಮದು ಗಲೀಜು ತೊಗಲು
ಅವರದ್ದು ಪವಿತ್ರ ತ್ವಚೆ
ತೊಗಲಿಗೆ ತ್ವಚೆ ಸಮಾನ ಶಬ್ದ
ಡಿಕ್ಶನರಿಗಳಲ್ಲಷ್ಟೆ!
***
ಅದೇ ಸಿಟ್ಟನ್ನು ಬಹುಶ
ನಿನ್ನ ಚರ್ಮದ ಮೇಲೆ 
ತೀರಿಸುತ್ತಿದ್ದಾನೆ ನನ್ನ ಮಗ
ಬಾವಲಿಯ ರೆಕ್ಕೆಯೇ…
ನೋವಾದರೆ ಕ್ಷಮಿಸು ಅವನನ್ನು

ಅಂತೆಯೇ,

ಅವನ ಅಭಿವ್ಯಕ್ತಿಗೆ ಅಡ್ಡಿಪಡಿಸದ
ನನ್ನನ್ನೂ…!

-ವಿಲ್ಸನ್, ಕಟೀಲ್

 

 

 

 

 


ತಾತಯ್ಯ
ಎಂಭತ್ತರ ಮೇಲೊಂಭತ್ ತುಂಬಿದ್ 
ನಮ್ಮೂರ್ ತಾತಯ್ಯ 
ಒಂದೊಂದ್ ಹಲ್ಲೂ ಬಾಯೊಳಗಿಲ್ಲದ 
ಮೋಜಿನ್ ತಾತಯ್ಯ 

ಕತೆಗಳ್ನ್ ಹೇಳೋ ತಾತಯ್ಯಾಂದ್ರೆ 
ಮಕ್ಕಳ್ಗೆ ಬಲು ಇಷ್ಟ 
ಓದೋಕ್ ಅವ್ರನ್ ಮನೆಯೊಳಗೇ ಕೂಡ್ 
ಹಾಕೋದ್ ಬಲು ಕಷ್ಟ 

ಚಾವ್ ಡೀ ಪಕ್ಕದ್ ಗುಡಸಲ್ ದಲ್ಲಿ 
ಹಗಲೂ ರಾತ್ರಿ ಕೂತಿರ್ತಾನೆ 
ಮಕ್ಕಳ್ನೆಲ್ಲಾ ಕೂಡಿಸ್ಕೊಂಡು 
ತಾತಾ ಕತೆಗಳ್ನ್ ಹೇಳ್ತಿರ್ತಾನೆ 

ಹತ್ತೂ ಊರಿನ್ ಎಲ್ಲಾ ಮಕ್ಳು 
ಚಾವ್ ಡೀಗ್ ಬರ್ತಾರೆ 
ಸುತ್ತಾ ಕೂತ್ಕೊಂಡ್ ಎಲ್ರೂ ತಾತನ್ 
ಕತೆಗಳ್ನ್ ಕೆಳ್ತಾರೆ 

ರಾಣಿ ರಾಜರ್ ಕತೆಗಳ್ನ್ ತಾತ 
ಹೇಳ್ತಾ ಕೂತಿದ್ರೆ 
ಕೆಳ್ಸೋದ್ ತೋಪಿನ್ ಸದ್ದಿನ್ ಹಾಗೆ 
ಸೂಜಿ ಬಿದ್ದಿದ್ರೆ 

ಕತೆಯೊಳಗಿನ್ ಫಿರಂಗಿ ಸದ್ದು 
ಪಕ್ದಲ್ ಕೇಳ್ದಂಗೆ 
ಸಾವ್ರಾರ್ ವರ್ಷದ್ ಹಿಂದಿನ್ ಕತೆಯೂ 
ಇಂದೇ ನಡದಂಗೆ 

ತಾತನ್ ಕತೆಗಳ್ನ್ ಮಕ್ಕಳ್ಗೆಲ್ಲಾ 
ಕೇಳೊಕ್ ಬಲು ಆಸೆ 
ತಾತಯ್ಯಂಗೋ ಕತೆಗಳ್ನ್ ಹೇಳೋಕ್ 
ಅವನ್ ದೇ ಒಂದ್ ಭಾಷೆ 

ನೋಡ್ತಾ ಇರಿ ತಾತಯ್ಯನ್ ’ಲಕ್’ ನ
ಚಾವ್ಡಿ ಎದುರೇನೇ 
ನಿಲ್ಲಸ್ತಾರೆ ಹಾಲ್ಗಲ್ ನಲ್ಲಿ 
ಆತನ್ ಮೂರ್ತೀನೇ 

ಊರಿನ್ ಸಣ್ಣೋರ್ ದೊಡ್ಡೋರೆಲ್ಲ 
ಮೂರ್ತೀನ್ ನೋಡ್ತಾರೆ 
’ಕತೆಗಳ್ನ್ ಹೇಳ್ತಿದ್ ತಾತಯ್ಯಂದ್ರೆ 
ಇವ್ನೇ’ ಅಂತಾರೆ 

ಮತ್ ಅಂತಾರೆ – ’ಚಾವ್ ಡೀ ಪಕ್ಕದ್ 
ಗುಡಸಲ್ ದಲ್ಲಿ ಕೂತಿರ್ತಿದ್ದ 
ಮಕ್ಕಳ್ನೆಲ್ಲಾ ಕೂಡಿಸ್ಕೊಂಡು 
ತಾತಾ ಕತೆಗಳ್ನ್ ಹೇಳ್ತಿರ್ತಿದ್ದ 
-ವಾಮನ ಕುಲಕರ್ಣಿ

 

 

 

 

                            
ದಾರಿನೆನಪುಗಳ ಹನಿ      

ಈ ಸೋರುವ ದಾರಿಯು
ತಾನಾಗಿಯೇ ಬಿರಿದು
ನಿನ್ನ ನೆನಪಲ್ಲಿ ಹರಿದು
ನಾ ಸಾಗಿಹೆನು ಬಹುದೂರ ಸರಿದು

***

ದೂರ ಸಾಗುವೆ ನಾ
ನಡುರೋಡ ಆಸೆಯಲಿ
ಮಾಡಿದ ಪ್ರೀತಿಗೆ ಕೈಕೊಟ್ಟು
ಕಾಣಿಸೆನು ನಿನ್ನ ನೆನಪಲ್ಲಿ ಹೂತು

***

ಹಾದಿ ತಪ್ಪಿದೆ, ಕಾಲು ನಡೆದಿದೆ
ನೆನಪುಗಳ ಸಾಲು ಸಾಲೇ ಒತ್ತರಿಸಿದೆ
ಒನಪು ವೈಯಾರ ಇನ್ನೆಂದೂ ಕಾಣದೆ
ನೀ ನನಗಾಗಿ ಮುಂದೆದೂ ಬಾರದೆ

***
  
ಅವೆಷ್ಟು ವಾಹನಗಳು ಸಾಗಿವೆ
ದಾರಿಯಲಿ ಪ್ರೀತಿಯು ಅಡಿಗಡಿಗೆ
ನಡುಗಿ ನೆನಪು ಬಾಡಿ ಬಳ್ಳಿಯಾಗಿದೆ
ಸಿಗಲಾರೆಯಾ ಇನ್ನೊಮ್ಮೆ ಈ ಹಾದಿಯಾಗೆ

-ಅಕ್ಷಯ ಕಾಂತಬೈಲು

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x