ಕಾವ್ಯಧಾರೆ

ಮೂವರ ಕವಿತೆಗಳು: ಲಕ್ಷ್ಮೀಶ ಜೆ.ಹೆಗಡೆ, ನವೀನ್ ಮಧುಗಿರಿ, ಅಕುವ

ಆತ್ಮ ಸೌಂದರ್ಯ

ಕಣ್ಣು ಮಾತ್ರ ಕಂಡರೆ ಸಾಕೇ
ಆತ್ಮಕ್ಕೂ ಕಾಣಬೇಡವೇ ಸೌಂದರ್ಯ
ರಸಾನುಭೂತಿಯಲಿ ದೇಹ ತೇಲುವುದು
ಆತ್ಮ ಪರಿತಪಿಸಿ ನರಳುವುದು
ಹಲವು ರೀತಿಯ ನೂರಾರು ಲಹರಿ
ಅನಂತಾನಂತ ಈ ಸೌಂದರ್ಯದ ಪರಿ
ಕಣ್ಣಿಗೆ ಕಾಣುವುದು ಸಹಸ್ರ ರೀತಿ
ಆತ್ಮಾನುಭವದಲಿರುವುದು ಒಂದೇ ಲಹರಿ
ದೇಹ ಸೌಂದರ್ಯಕೆ ಮರುಳಾಗುವರು
ಆತ್ಮೋನ್ನತಿಯಿಲ್ಲದೆ ನರಳುವರು
ನಯನ ನೋಡುವುದು ಲೌಕಿಕ ಸೌಂದರ್ಯ
ಆತ್ಮಕ್ಕೆ ಕಾಣುವುದು ಭವ ಮೀರಿದ್ದು ಮಾತ್ರ
ಆತ್ಮ ಸಿಕ್ಕಿದ್ದು ವಿಶ್ವತೋಮುಖನಿಂದ
ದೇಹ ಲಭಿಸಿದ್ದು ಪ್ರಕೃತಿ ಪುರುಷರಿಂದ
ದೇವನೊಬ್ಬ ಆತ್ಮರೂಪಿ
ಹಲವು ನಾಮಗಳಿಂದಾತ ಸೌಂದರ್ಯರೂಪಿ
ಸೌಂದರ್ಯವನೇ ಪೂಜಿಸುವರೆಲ್ಲ
ಆತ್ಮಕ್ಕೆ ಹವಿಸ್ಸು ನೀಡುವವರಿಲ್ಲ
ದೇಹ ಸೌಂದರ್ಯದಿಂದ ವಿರಕ್ತಿ
ಆತ್ಮಾನಂದದಿಂದ ಮುಕ್ತಿ
ಅಲೌಕಿಕದ ಕಣ್ಣು ತೆರೆಯಲಿ
ಆತ್ಮ ಸೌಂದರ್ಯವ ಆರಾಧಿಸಲಿ
ದೇಹ ಸೌಂದರ್ಯಕ್ಕಿದೆ ಮೃತ್ಯು
ಆತ್ಮ ಸೌಂದರ್ಯವೆಂದೂ ಅಜಾತಶತ್ರು
-ಲಕ್ಷ್ಮೀಶ ಜೆ.ಹೆಗಡೆ

 

 

 

 

 

 

 

ಚುಟುಕಗಳು

ಬಾಡುತ್ತಿದೆ
ದೇವರ ಮೇಲಿಟ್ಟ
ಹೂ
ದುಂಬಿಗೆ ಹಸಿವು

ಬೋದಿಲೆರ್ ನ ಕವಿತೆಗಳ ಓದಿದ
ಯುವ ಕವಿಯೊಬ್ಬ
ಬೆತ್ತಲೆ ಮತ್ತು ಚರ್ಮದ ಕುರಿತು
ಕವಿತೆ ಬರೆದಾಗ
ಬೇಲೂರ ಶಿಲಾ ಬಾಲೆಯೊಬ್ಬಳು
ನಾಚಿ
ಕಾಣುವ ಜಾಗದ ಮೇಲೆ
ಅಂಗೈ ಮುಚ್ಚಿಕೊಂಡಳು.

ಜಿಂಕೆಯ ವೇಗವನ್ನು
ಸೋಲಿಸಿತು
ಚಿರತೆಯ
ಹಸಿವು

ರಾಧೇ, ಈ ಮನಸಿಗೆ
ಗೋಡೆ, ಕಿಟಕಿ
ಪರದೆಗಳಿರುವ ಸತ್ಯ
ಎಲ್ಲರಿಗೂ
ಗೊತ್ತಿದ್ದರೂ
ಗೊತ್ತಿಲ್ಲದಂತೆ ನಟಿಸುತ್ತಾರೆ
ಯಾಕೆ?

ಮಾವಿನ ಕಾಯಿಯೂ
ಕೂಡ
ಉದುರದ ಮಂತ್ರಕೆ
ಮಹಾಭಾರತದಲ್ಲಿ
ಮಕ್ಕಳು
_

ಸುಗಂಧ ದ್ರವ್ಯವನ್ನು
ಪೂಸಿಕೊಂಡ
ಸುಂದರ ತರುಣಿ
ಮಾವಿನ ಮರದ ಕೆಳಗೆ
ನಡೆಯುವಾಗ
ಮಾವಿನ ಎಲೆ ಮತ್ತು ಚಿಗುರಿಗೆ
ವಾಕರಿಕೆ
_

ರೈಲು ಹಳಿಯ ಮೇಲೆ
ಗಾಢ ನಿದ್ದೆಯ
ಕಿವುಡು ನಾಯಿ
ಕ್ಷಣ ಕ್ಷಣಕೂ
ರೈಲಿನ ವೇಗ ಹೆಚ್ಚುತ್ತಿದೆ
_

ಶವದ ಮುಂದೆ
ಹಚ್ಚಿಟ್ಟು
ಘಮ ಘಮಿಸುವ
ಊದಿನಕಡ್ಡಿ
ವ್ಯರ್ಥ
_

ನಿಮ್ಮೂರಲ್ಲಿ ಮಳೆ
ನಮ್ಮೂರಲ್ಲೂ
ಬಾರೇ ಹುಡುಗಿ
ನೆನೆಯೋಣ
ನೆನಪುಗಳ ಕೈಯಿಡಿದು
_

– ನವೀನ್ ಮಧುಗಿರಿ

 

 

 

 

 

 

ಆತ್ಮ ನಿವೇದನೆ 

ಅಲ್ಲಿ ನಾನಿರಲಿಲ್ಲ
ನನ್ನೊಳಗೆ ನನ್ನ ಹುಡುಕಾಟ
ನಾನು ದಕ್ಕಲಿಲ್ಲ
ಮಿಕ್ಕವರಿಗೆ ಸಿಕ್ಕಿದ್ದು ನನ್ನ ಕಳೇಬರ !!
ನನ್ನದಲ್ಲದ ಹಣೆಬರಹ !

ಕೊಂಡೊಯ್ದರೋ? ಕದ್ದೊಯ್ದರೋ?
ಮತ್ತಿನ್ನೇನೂ ನೆನಪಿಲ್ಲ!
ದೇಹ ಒದ್ದಾಡಿತ್ತು 
ಆತ್ಮ ಕೈ ಬಿಟ್ಟಿತ್ತು !

ಅಮ್ಮನ ನೆನಪು ಅಪ್ಪನ ಅಪ್ಪುಗೆ 
ದೇಹಕ್ಕೆ ಜರೂರಿತ್ತು !
ಶಾಲೆಯ ದಾರಿಯೇ ಕೊನೆಯಾಗಿತ್ತು
ತಿಳಿಯದ ಹಾದಿ ಸುಡುಗಾಡಿಗೆ !

ಆಗಲೇ ನನ್ನಾತ್ಮ ನಿವೇದಿಸಿದೆ..
"ಅಮ್ಮಗಳಿರಾ..ನಮ್ಮನ್ಯಾಕೆ
ಮುದ್ದು ಗೊಂಬೆಗಳಾಗಿಸಿದಿರಿ?
ಪ್ರತಿಭಟಿಸುವ ಸಿಡಿಗುಂಡುಗಳಾಗಿಸಲಿಲ್ಲ ?

– ಅಶೋಕ ಕುಮಾರ್ ವಳದೂರು (ಅಕುವ)  
೦೬/೧೨/೨೦೧೪

 

 

 

 

 

*****

ಕನ್ನಡದ ಬರಹಗಳನ್ನು ಹಂಚಿ ಹರಡಿ

2 thoughts on “ಮೂವರ ಕವಿತೆಗಳು: ಲಕ್ಷ್ಮೀಶ ಜೆ.ಹೆಗಡೆ, ನವೀನ್ ಮಧುಗಿರಿ, ಅಕುವ

Leave a Reply

Your email address will not be published.