ಕಾವ್ಯಧಾರೆ

ಮೂವರ ಕವಿತೆಗಳು: ರಾಶೇಕ್ರ, ಮಂಜುಳಾ ಬಬಲಾದಿ, ಲತೀಶ್.

 

 

 

 

 

 

ಬರೆಯಲೇ ಬೇಕೆಂದು ಕುಳಿತೆ 'ನಾ'?

ಬರೆಯಲೇ ಬೇಕೆಂದು ಕುಳಿತೆ 'ನಾ'
ಇರಲಾಗಲಿಲ್ಲ ನನ್ನಿಂದ ಬರೆಯದೆ ಇನ್ನೆಷ್ಟು ಕಾಲ,
ಕಾಲ ಕೆಳಗೆ ಹೊಸಕಿಸಿಕೊಳ್ಳುವುದು, ಇಲ್ಲವೇ
ಇದಕೆ ಇನ್ನೊಂದು ಪರ್ಯಾಯ ಪದ
ಹುಡುಕಿ ಬರೆಯುವುದು, 

ತುಳಿತಕ್ಕೊಳಗಾದೆ, ತುಳಿದವರ ಮೀಸೆಗೆ
ಅಂಟದಾದೆ, ಹಿಡಿದು ಜಗ್ಗಾಡಿ
ಆರೋಹಣಕಪವಾದವಾದೆ,
ತುಳಿಸಿಕೊಂಡ ಮೇಲೂ ಎದ್ದು ನಿಲ್ಲದಾದೆ,
ಹಿಂದೆ ಬಿದ್ದ ಇನ್ನೊಂದು ಕೆರ
ಹುಡುಕಿ ನಿಮ್ಮೆದುರು ಗೌಣವಾದೆ,

ಹೀಗೇ ಹಿಂದೆ ಬಿದ್ದೆ ಎದ್ದು ಎಡವಿ ಬಿದ್ದೆ,
ಹೆಣ್ಮನದ ಪ್ರೀತಿ ಸೆಳೆವಾಗ ತೊದಲಿದ್ದೆ,
ಮತ್ತವಳ ಒಲವು ಕಾಮದ್ದೆಂದಾಗ
ಅಪ್ಯಾಯಮಾನ ಜಾರಿದ್ದೆ, ಕಿರುಗೋಣೆ
ಕತ್ತಲೊಳಗೆ ಕಿಟಕಿಯ ತಾಳ ಸಿಗಿಸಿ
ಬಿಕ್ಕಿದ್ದೆ, ಬಿಕ್ಕಿ ಬಿಕ್ಕಿ ಅತ್ತಿದ್ದೆ,

ದಾರಿಗುಂಟ ಕಂಡದ್ದೇ ಗಮ್ಯ ಅದರೊಳಗಿದ್ದು
ಗೆದ್ದದ್ದು ತೃಣ, ಸ್ವಾಮ್ಯವಿರದ ಸ್ನೇಹಿತರೆಲ್ಲರ
ಮಾತುಗಳಲ್ಲಿ ಹಿಡಿಯಷ್ಟು ವಿಷವೂ ಲೀನ,
ಬೇರೂರಿ ಹೊಕ್ಕ ಭೂಮಿ ಹೊಕ್ಕುಳಲ್ಲಿ
ಗುಳಗುಳನೆದ್ದಿದ್ದು ಜಲ, ಅದರೊಳಗಿದ್ದದ್ದು ಥೇಟ್
ನನ್ನಂತೆಯೇ ಮಲಿನ,
ಕೊನೆಗೂ ಗೆಲ್ಲದಾದೆ'ನಾ'?

……..ರಾಶೇಕ್ರ

 

 

 

 

 

ಬಹು ಕ್ರೂರಿಗಳಪ್ಪ ಹೆಣ್ಣುಗಳು

ಹೆಚ್ಚುವರು

ಕೊಚ್ಚುವರು

ಕಾಯಿಸಿ-ಬೇಯಿಸಿ

ಸುಟ್ಟೇ ಬಿಡುವವರು

 

ಬಹು ಕ್ರೂರಿಗಳಪ್ಪ ಹೆಣ್ಣುಗಳು

ತುರಿಯುವರು

ಕರಿಯುವರು

ಲಟ್ಟಣಿಗೆಯಲ್ಲಿ ನಿತ್ಯ

ಆರಾಧಿಸುವವರು

 

ಬಹು ಕ್ರೂರಿಗಳಪ್ಪ ಹೆಣ್ಣುಗಳು

ಕುಟ್ಟುವರು

ತಟ್ಟುವರು

ಕಾದ ಹೆಂಚಿಗೆ ಹಾಕಿ

ಬಿಸಿ ಮುಟ್ಟಿಸುವವರು

 

ಬಹು ಕ್ರೂರಿಗಳಪ್ಪ ಹೆಣ್ಣುಗಳು

ರುಬ್ಬುವರು ಮನಬಂದಂತೆ

ಬೆಚ್ಚಗಾಗಿಸುವವರು

ಶೀಥಲೀಕರಿಸುವರು

ಕ್ರೌರ್ಯಕ್ಕೆ ಹೊಸ ರೂಪ

ಕೊಡುತಲೇ ಇರುವವರು

 

ಬಹು ಕ್ರೂರಿಗಳಪ್ಪ ಹೆಣ್ಣುಗಳು

ತಮ್ಮ ಕ್ರೌರ್ಯವನೆಲ್ಲ

ಅಡುಗೆಮನೆಯಲರಳಿಸುವರು

ನೂರು ರುಚಿಗಳ ಹಿಂದೆ

ಕ್ರೌರ್ಯವನ್ನಡಗಿಸುವವರು

 

ಪಾಕಶಾಲೆಯಲೆ

ಕ್ರೌರ್ಯವ ಪ್ರೀತಿಯಾಗಿಸುವವರು

ಪ್ರೀತಿ ಕೈಗಳ ಸವಿಯ

ಜಗಕೆಲ್ಲ ಹಂಚುವರು!

….ಮಂಜುಳಾ ಬಬಲಾದಿ

 

 

 

 

 

ಒಂದು ಕೊಲೆಯ ಸುತ್ತ…

ನಾಳೆ ಹುಟ್ಟಬೇಕಾಗಿದ್ದವನು,
ನಿನ್ನೆ ತಾನೇ ಸತ್ತಿದ್ದಾನೆ,
ಇಂದು ಅವನ ಅಂತ್ಯಸಂಸ್ಕಾರ;
ನಡುಹಗಲು, ನಡುದಾರಿ,
ಯಾರೊ ಅವನನ್ನು,
ಕೊಚ್ಚಿ ಕೊಚ್ಚಿ ಕೊಂದು ಹಾಕಿದ್ದಾರೆ;

ಅಲ್ಲಿ ದೂರದಲ್ಲೆಲ್ಲೋ ಕಾದಿವೆ
ಬಣ್ಣ ಬಳಿದ ಕನಸುಗಳು,
ಇವನ ಬರುವಿಕೆಗಾಗಿ;
ಇವನು ಮಾತ್ರ ಇಲ್ಲಿ,
ಗೊತ್ತು ಗುರಿಯಿಲ್ಲದೆಯೇ
ಸತ್ತು ಬಿದ್ದಿದ್ದಾನೆ;
ಕಿವಿ ಚುಚ್ಚುವ ಮೌನ;

ಇರುವೆ ಸತ್ತರೂ,
ಬೊಬ್ಬಿಡುತ್ತಿದ್ದ ಸುದ್ದಿಮನೆ,
ಇವನಿರುವಿಕೆಯೇ ಅರಿವಿಲ್ಲವೆಂಬಂತೆ,
ಇಂದೇಕೋ ತಣ್ಣಗಾಗಿದೆ;
ಇದೊಂದು ಅಪಘಾತವೆಂದು,
ಪೋಲಿಸರು ಅದಾಗಲೇ ಬರೆದಾಗಿದೆ!

ಅನಾಥ ಶವ ದರ್ಶನಕ್ಕೆ ಬಂದ ಪುಢಾರಿ
ನಾಲ್ಕು ಹನಿ ಕಣ್ಣೀರು ಸುರಿಸಿದ್ದ;
ಅವ ಮೆಲ್ಲಗೆ ನಕ್ಕಿದ್ದು ಮಾತ್ರ,
ಯಾರಿಗೂ ಕಂಡಿರಲಿಲ್ಲ,
ದೂರದಲ್ಲೆಲ್ಲೋ ಇದ್ದ,
ಹಸಿದ ಬಾಲಕನ ಹೊರತು

ಹೆಣ ಬಿದ್ದ ದಾರಿಯಲ್ಲಿ,
ಅರಘಳಿಗೆ ನೀರವತೆ;
ತದ ನಂತರ ಶುರು;
ಸದ್ದುಗದ್ದಲ ತುಂಬಿದ
ಎಂದಿನ ವ್ಯಾಪಾರ ವ್ಯವಹಾರ;
ಮತ್ತದೇ ಹೊಲಸು ಹಾದಿ;

ಇವನ ಹೆಸರ ಕೂಗಿ,
ಜೈಕಾರ ಹಾಕಿದ್ದರಾ ಮಂದಿ;
ಈ ಕ್ಷಣ ಮತ್ತೊಂದು ಗಲ್ಲಿಯಲ್ಲಿ,
ಭಿಕ್ಷೆ ಬೇಡತ್ತಿದ್ದಾರೆ;
ಎಂದಿನಂತೆಯೇ ಇಂದು;
ಸತ್ತವನ ಮುಖದಲ್ಲಿ ಕಿರುನಗೆ;

ಇಷ್ಟೆಲ್ಲಾ ನಡೆದರೂ,
ಅಲ್ಲೊಂದು ಖೋಲಿಯಲಿ,
ಬೆಳಕು ತಲುಪದ ಮೂಲೆಯಲಿ,
ಕವಿತೆ ಬರೆಯುತ್ತಿದ್ದಾನೆ ಕವಿ,
ಸತ್ತವನ ನೆತ್ತರಿನಲ್ಲಿ,
ಒತ್ತರಿಸುವ ಭಾವಗಳ ಅಮುಕಿ;

… ಲತೀಶ್
ಕನ್ನಡದ ಬರಹಗಳನ್ನು ಹಂಚಿ ಹರಡಿ

4 thoughts on “ಮೂವರ ಕವಿತೆಗಳು: ರಾಶೇಕ್ರ, ಮಂಜುಳಾ ಬಬಲಾದಿ, ಲತೀಶ್.

  1.  ಎಲ್ಲಾ ಕವನಗಳು ಚೆನ್ನಾಗಿವೆ
    -ಸುಗುಣ ಮಹೇಶ್

Leave a Reply

Your email address will not be published. Required fields are marked *